ಋತು ಸಂಹಾರ

ಋತು ಸಂಹಾರ

ಚಿತ್ರ

ಸಂಸ್ಕೃತದ ಮಹಾನ್ ಕವಿ ಕಾಳಿದಾಸ ಯಾರಿಗೆ ತಾನೇ ಗೊತ್ತಿಲ್ಲ? ಋತು ಸಂಹಾರ ಕಾಳಿದಾಸನ ಒಂದು ಕಿರು ಕಾವ್ಯ. ವರುಷ ವರುಷವೂ ಮರಳಿ ಮರಳಿ ಬರುವ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಮತ್ತು ವಸಂತಗಳೆಂಬ ಆರು ಕಾಲಗಳನ್ನು ವರ್ಣಿಸುವ ಈ ಖಂಡ ಕಾವ್ಯವನ್ನು ಕಾಳಿದಾಸನ ಮೊದಲ ಕೃತಿಯೆಂದು ವಿದ್ವಾಂಸರು ಪರಿಗಣಿಸುತ್ತಾರೆ.ಇಲ್ಲಿ ಬಳಸಿರುವ “ಸಂಹಾರ” ಎಂಬ ಪದವು ವಿವಿಧ ಕಾಲಗಳ ಒಟ್ಟುಗೂಡುವಿಕೆಯನ್ನು ಸೂಚಿಸುತ್ತಿದೆ.

ಈ ಕಾವ್ಯದ ಮೊದಲ ಸರ್ಗವು ಬೇಸಿಗೆ ಗ್ರೀಷ್ಮ (ಬೇಸಿಗೆ) ದಿಂದ ಆರಂಭವಾಗಿ, ಕೊನೆಯ ಆರನೇ ಸರ್ಗವು ವಸಂತ ಋತುವನ್ನು ವರ್ಣಿಸುತ್ತದೆ.  ಈ ಕಾವ್ಯದಿಂದ ಆಯ್ದ, ನನ್ನ ಮನಸ್ಸಿಗೆ ಹಿಡಿಸಿದ, ನನ್ನ ಅನುವಾದದ ಅಳವಿಗೆ ದಕ್ಕಿದ ಒಟ್ಟು ಹದಿನೈದು ಪದ್ಯಗಳನ್ನು ಇಲ್ಲಿ ನಾನು ಕನ್ನಡಕ್ಕೆ ತಂದಿರುವೆ. ಅನುವಾದವು ಕನ್ನಡಿಗರಿಗೆ ಬಹು ಪರಿಚಿತವಾದ ಚೌಪದಿ ಧಾಟಿಯಲ್ಲಿದೆ. ಆದರೆ ಪ್ರಾಸವನ್ನು ಕಟ್ಟುನಿಟ್ಟಾಗಿ ಪಾಲಿಸಿಲ್ಲ. ಎಲ್ಲ ಅನುವಾದಿತ ಪದ್ಯಗಳಿಗೂ ಮೂಲದ ಸರ್ಗ ಹಾಗೂ ಪದ್ಯದ ಕ್ರಮಾಂಕವನ್ನು ಕಂಸದಲ್ಲಿ ಸೂಚಿಸಿದ್ದೇನೆ.

ಈ ಹದಿನೈದು ಪದ್ಯಾನುವಾದಗಳ ಗುಚ್ಛವು, ಇತ್ತೀಚಿಗೆ ಸೆಯಿಂಟ್ ಲೂಯಿಸಿ, ಮಿಸ್ಸೌರಿ ಯಲ್ಲಿ ನಡೆದ ಕನ್ನಡ ಸಾಹಿತ್ಯ ರಂಗ ದ ವಸಂತ ಸಾಹಿತ್ಯೋತ್ಸವ-೨೦೧೫ರಲ್ಲಿ ಬಿಡುಗಡೆಯಾದ "ಅನುವಾದ ಸಂವಾದ" ಎಂಬ ಅನುವಾದಿತ ಕೃತಿಗಳ ಪುಸ್ತಕದಲ್ಲಿ ಸೇರಿದೆ. ಆಸಕ್ತರು, ಈ ಪುಸ್ತಕವನ್ನು ಈ ಕೊಂಡಿಯಲ್ಲಿ ಕೊಳ್ಳಬಹುದು:

ಹೊಮ್ಮಿರುವ ಮಾಂದಳಿರ ಮೊನಚು ಬಾಣಗಳನ್ನು
ಚಿಮ್ಮಿಸಲು ದುಂಬಿಸಾಲಿನ ಬಿಲ್ಲ ಹೆದೆಯ
ಹಮ್ಮುಗೊಳಿಸುತ ಯೋಧ ಬಂದಿಹ ವಸಂತನಿವ-
ನೊಮ್ಮೆಗೇ ಪ್ರಣಯಿಗಳ ಮನವ ಪೀಡಿಸಲು ||                 
(ಋತುಸಂಹಾರ: ವಸಂತ:೧)

ಕುಸುಮಿಸಿಹ ವೃಕ್ಷಗಳು ಕೊಳದಲ್ಲಿ ಕಮಲಗಳು
ನಸುಗಂಪು ಗಾಳಿ; ಜೊತೆ ಬಯಸುವೆಣ್ಣುಗಳು
ಮಸುಕು ಸಂಜೆಯ ನಲಿವು ಹಾಯಾದ ಹಗಲುಗಳು
ಎಸೆದಾವು ಮಿಗೆ ಗೆಳತಿ ಹಿತ ವಸಂತದಲಿ!                          
(ಋತುಸಂಹಾರ; ವಸಂತ:೨)

ಕೆಂಬಣ್ಣದಾ ಚಿಗುರ ಹೊತ್ತು ತಲೆಬಾಗಿರುವ
ಕೊಂಬೆಕೊಂಬೆಗೆ ಹೂತ ಮಾಮರಗಳೀಗ
ತಂಬೆಲರಿನಲಿ ತೂಗಿ ಹುಟ್ಟಿಸಿದ್ದಾವು ಬಲು
ಹಂಬಲವ ಹೆಣ್ಣುಗಳ ಮನದಿ ತವಕದಲಿ                        
(ಋತುಸಂಹಾರ; ವಸಂತ: ೧೫)  
  
ಅಚ್ಚ ಕೆಂಪಿನ ಗೋರಟೆಯ ಬಣ್ಣ ಬಳಿದ
ಗೆಜ್ಜೆ ಧರಿಸಿದ ಪಾದಗಳಲಿ ಸೊಬಗಿಯರು
ಹೆಜ್ಜೆಗಳ ಹಾಕಿರಲು ಹಂಸಗಳ ಹೋಲುತ್ತ
ಹುಚ್ಚೆಬ್ಬಿಸರೆ ಮನವ ಬಯಕೆಯನು ತುಂಬಿ                           
(ಋತುಸಂಹಾರ: ಗ್ರೀಷ್ಮ:೫)

ಪರಿಮಳದ ತುಂತುರಿನ ಬೀಸಣಿಗೆ ಗಾಳಿ ಜೊತೆ
ಪೆಣ್ಗಳೆದೆ ಮೇಲುಗಡೆಯಾಡುತಿಹ ಸರವು
ಇನಿದನಿಯ ವಲ್ಲಕೀ ವೀಣಾ ನಿನಾದಗಳು
ಮಲಗಿದ್ದ ಬಯಕೆಗಳ ತಾವೆಬ್ಬಿಸುತಿವೆ                                 
(ಋತುಸಂಹಾರ ಗ್ರೀಷ್ಮ:೮)

ನಲ್ಲನೂರಲ್ಲಿರದೆ ಖಿನ್ನ ಯುವತಿಯರು
ಬಿಟ್ಟು ನಿಂದಿಹರೊಡವೆ ಲೇಪಗಳನೆಲ್ಲ
ಕಣ್ಣಕಮಲಗಳಲ್ಲಿ ನೀರಿಳಿಸಿ ತೋಯಿಸುತ
ಹಣ್ಣು ತೊಂಡೆಯ ಹೋಲ್ವ ಕೆಂದುಟಿಗಳನ್ನು                       
(ಋತುಸಂಹಾರ: ವರ್ಷ-೧೨ ಅಡಿಟಿಪ್ಪಣಿಗಳನ್ನು ನೋಡಿ )

ಹೊಳೆವ ಬೆಳ್ದಾವರೆಗಳನು ಹೋಲ್ವ ಮೋಡಗಳು
ಮುತ್ತಿಡುತ ಬೆಟ್ಟಗಳ ಮೆರೆಯುತಿರೆ ಸುತ್ತ
ಕುಣಿಯುತಿಹ ನವಿಲುಗಳು  ಹರಿವ ಜಲಧಾರೆಗಳು
ಹಬ್ಬವನು ತಂದಿಹವು ದಿಟದಿ ಮನದೊಳಗೆ                    
(ಋತುಸಂಹಾರ:ವರ್ಷ-೧೬)

ತಂಗಾಳಿಗಾಡುತಿಹ ಮರದ ತುದಿ ಕೊಂಬೆಗಳು
ಹೂ ತಳೆದು ಮೆರೆಯುತಿಹ  ನವಿರು ಕುಡಿಗಳಿವು
ಕುಡಿದ ಮಕರಂದದಮಲೇರಿರುವ ದುಂಬಿಗಳು
ಯಾರ ಮನವನು ತಾನೆ ಸೂರೆಗೊಳ್ಳವಿವು?                       
(ಋತುಸಂಹಾರ, ಶರತ್:೬)

ಹಬ್ಬವಿವು ಕಂಗಳಿಗೆ ಮನಕಸಿವ ಚಂದಿರನ
ಉಲ್ಲಾಸ ತಂದೀವ ಕಿರಣಗಳ ಮಾಲೆ
ನಲ್ಲನಗಲಿಕೆಯೆಂಬ ವಿಷಬಾಣಕೀಡಾದ
ಪೆಣ್ಗಳೊಡಲನು ಸುಟ್ಟು ಬಹಳ ಕಾಡಿಪುದೆ!                  
(ಋತುಸಂಹಾರ; ಶರತ್: ೯)

ಹಂಸಗಳು ಹೆಣ್ಣುಗಳ ನಡಿಗೆಯನು ಗಳಿಸಿಹವು
ಬಿರಿದ ತಾವರೆ ಮೊಗದ ಚಂದಿರನ ಹೊಳಪು
ಓರೆ ನೋಟಗಳನ್ನು ನೈದಿಲೆಯು  ಹಿತವಾದ
ಹುಬ್ಬು ಹಾರಿಕೆಯನ್ನು  ನೀರಲೆಗಳು                         
(ಋತುಸಂಹಾರ, ಶರತ್: ೧೭ ಅಡಿಟಿಪ್ಪಣಿ ಗಳನ್ನು ನೋಡಿ)

ಬತ್ತದಾ ಗದ್ದೆಯಲಿ ತೊನೆವ ತೆನೆ ಪಯಿರು
ಸುತ್ತ ಸುಳಿದಾಡುತಿಹ ಹರಿಣಗಳ ಹಿಂಡು
ಅತ್ತ ಮರುದನಿಸುತಿಹ ಬೆಳ್ಳಕ್ಕಿಗಳ ಕೂಗು
ಮತ್ತೆ ತಂದೀವುದೈ ಮನಕೆ ಹೊಸ ಹುರುಪು                
(ಋತುಸಂಹಾರ; ಹೇಮಂತ:೮)

ಅರಳಿರುವ ಕನ್ನೈದಿಲೆ ಹೂವ ಸಾಲಿಂದ
ಕೇಕೆಹಾಕುವ ಬಾತುಕೋಳಿ ಗುಂಪಿಂದ
ತಂಪು ತಿಳಿ ನೀರಿಂದ  ಕೂಡಿರುವ ಕೊಳಗಳಿವು
ಜನರ ಮನವನ್ನೆಲ್ಲ ಸೆಳೆದಿಹವು ನೋಡಾ!                    
(ಋತುಸಂಹಾರ: ಹೇಮಂತ: ೯)

ಹೂವೆಸಳ ಪನ್ನೀರ ಕಂಪು ಬಾಯಲಿರೆ
ಉಸಿರಾಟದಿಂದಲೇ ಒಡಲು ಪರಿಮಳಿಸಿ
ಬಿಗಿದಿರುವ ಅಪ್ಪುಗೆಯ  ಜೋಡಿಗಳು  ಪವಡಿಸಿವೆ
ಪ್ರೀತಿಯೆನ್ನುವ ರಸವ ಒಡನೆ ಸವಿಸವಿದು                     
(ಋತುಸಂಹಾರ; ಹೇಮಂತ: ೧೧)

ಮುಚ್ಚಿರುವ ಕಿಟಕಿಗಳ ಮನೆಗಳೊಡಲನ್ನು
ಹಚ್ಚಿರುವ ಬೆಂಕಿಯನು ಬಿಸಿಲ ಝಳವನ್ನು 
ಬೆಚ್ಚಗಿಹ ಬಟ್ಟೆಗಳ ಹರೆಯದಾ ಹೆಣ್ಣುಗಳ
ಮೆಚ್ಚುವರು ಜನರೀಗ ಚಳಿಯನೋಡಿಸಲು                           
(ಋತುಸಂಹಾರ; ಶಿಶಿರ:೨)

ಬಿದ್ದ ಇಬ್ಬನಿಯಿಂದ ಕೊರೆಯುತಿಹ ಚಳಿಯೀಗ
ಮತ್ತೆ ಹೆಚ್ಚಿರೆ ತಂಪು ಚಂದ್ರ ಕಿರಣದಲಿ
ಮೆಚ್ಚರೈ ಜನರೀಗ ಅಚ್ಚ ಬಿಳಿ ಬಣ್ಣದಲಿ
ಚುಕ್ಕಿಗಳು ಹೊಳೆವುದನು ಕುಳಿರಿನಿರುಳಲ್ಲಿ                    
(ಋತುಸಂಹಾರ; ಶಿಶಿರ:೪)

-ಹಂಸಾನಂದಿ

ಕೊ:  ಪದಕ್ಕೆ ಪದವಿಟ್ಟು ಮಾಡಿದ ಅನುವಾದವಲ್ಲದಿದ್ದರೂ ಮೂಲಕ್ಕೆ ಹತ್ತಿರವಾಗಿರಬೇಕೆಂದು ಮಾಡಿರುವ ಅನುವಾದವಿದಿ. ಹಾಗಿದ್ದರೂ  ಮೂಲದಲ್ಲಿ ಇರದ ಭಾವಗಳನ್ನು ಅನುವಾದದಲ್ಲಿ ತಂದಿಲ್ಲ, ಹಾಗೂ ಆದಷ್ಟೂ ಮೂಲದಲ್ಲಿರುವ ಆಶಯ ತಪ್ಪಿ ಹೋಗದ ಹಾಗೆ ಅನುವಾದಿಸಲು ಪ್ರಯತ್ನ ಮಾಡಿದ್ದೇನೆ.

ಕೊ.ಕೊ: ಹಿಂದಿನ ಕಾಲದಲ್ಲಿ ವ್ಯಾಪಾರಕ್ಕೆ ದೂರದೂರಿಗೆ ಹೋದವರು ಮಳೆಗಾಲದ ಒಳಗೇ ಮರಳಿ ಬರಬೇಕಾಗುತ್ತಿತ್ತು. ಇಲ್ಲದೇ ಹೋದರೆ, ಮಳೆಗಾಲ ಕಳೆಯುವವರೆಗೆ ಮರಳಲು ಆಗುತ್ತಿರಲಿಲ್ಲ. ಎಲ್ಲಕಡೆ ನದಿಗಳು ಉಕ್ಕಿಹರಿಯುವಾಗ ಸಂಚಾರಕ್ಕೆ ತೊಂದರೆಯಿರುತ್ತಿದ್ದುದೇ ಇದಕ್ಕೆ ಕಾರಣ. ಹಾಗೆ ಮಳೆಗಾಲದಲ್ಲಿ ಪತಿಯಿಂದ ದೂರವಿರುವಾಗ ಆತ ಕೂಡಲೇ ಬರುವುದಿಲ್ಲ ಎಂಬ ದುಃಖದಲ್ಲಿರುವ ಹೆಣ್ಣಿನ ಚಿತ್ರಣವನ್ನೇ ಇಲ್ಲಿ ಕವಿ ಮಳೆಗಾಲದ ಚಿತ್ರಣವನ್ನಾಗಿಸಿದ್ದಾನೆ. ಈ ರೀತಿ ವ್ಯಾಪಾರ ವ್ಯವಹಾರಗಳಿಗೆಂದು ದೂರದೇಶಗಳಿಗೆ ಹೋದ ಚಿತ್ರಣವು ಸಂಸ್ಕೃತ ಕಾವ್ಯಗಳಲ್ಲಿ ಬಹಳ ಕಂಡುಬರುತ್ತದೆ. ಇದರಿಂದಲೇ ನಮ್ಮ ದೇಶದಲ್ಲಿ ವ್ಯಾಪಾರ ವಹಿವಾಟುಗಳು ಹೇಗೆ ಜನ ಜೀವನದಲ್ಲ್ಲಿ ಮುಖ್ಯ ಪಾತ್ರ ವಹಿಸಿದ್ದವು ಎಂದು ತಿಳಿಯಬರುತ್ತದೆ. ಎಸ್.ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯನ್ನು ಓದಿದ್ದವರಿಗೆ ಈ ವಿಷಯ ನೆನಪಾಗಬಹುದು. 

ಕೊ.ಕೊ.ಕೊ. ಶರತ್ಕಾಲದಲ್ಲಿ ಚೆಲುವೆಯರ ಗುಣಗಳನ್ನೆಲ್ಲಾ ಕೊಳ ಕೆರೆಗಳೇ ಪಡೆದುಬಿಟ್ಟವೆಂದು ಕವಿಯ ಭಾವ. ಕೊಳದಲ್ಲಾಡುವ ಹಂಸಗಳು ಹೆಣ್ಣಿನ ಸ್ವಭಾವವಾದ ಸೊಗಸಾದ ನಡಿಗೆಯನ್ನೂ, ಮುಖ  ಕಾಂತಿಯನ್ನು ಕಮಲದ ಹೂಗಳೂ, ಓರೆನೋಟಗಳನ್ನು ನೈದಿಲೆಹೂಗಳೂ, ಹುಬ್ಬೇರಿಕೆಯನ್ನು ನೀರಿನಲೆಗಳೂ ತೆಗೆದುಕೊಂಡಿರುವುದರಿಂದ, ಶರತ್ಕಾಲದ ಸರೋವರಗಳು ಹೆಣ್ಣನ್ನು ಹೋಲುತ್ತಿವೆಯೆಂದು ಕಾಳಿದಾಸ ಹೇಳುತ್ತಿದ್ದಾನೆ. ಸಾಮಾನ್ಯವಾಗಿ ಹೆಣ್ಣಿನ ನಡಿಗೆಯನ್ನು ಹಂಸದ ನಡಿಗೆಗೆ ಹೋಲಿಸುವುದು ರೂಢಿ. ಇಲ್ಲಿ ಕವಿ ಅದನ್ನು ಅದಲು ಬದಲಾಗಿ ಹೇಳುವುದೊಂದು ನನಗೆ ವಿಶೇಷವಾಗಿ ಕಂಡಿತು.

Rating
Average: 3.5 (2 votes)

Comments

Submitted by kavinagaraj Thu, 06/04/2015 - 14:59

ಅನುವಾದವೆನ್ನಿಸದ ರೀತಿಯಲ್ಲಿ ಸೊಗಡನ್ನುಳಿಸಿ ಒಡಮೂಡಿಸಿರುವಿರಿ, ಅಭಿನಂದನೆಗಳು.