'ಎಂಥೆಂಥ ದೊಡ್ಡ ಜನರನ್ನೂ ಕಡೆಗಣಿಸಿದ್ದೇನೆ!' ಅಥವಾ 'ನನಗೆಷ್ಟು ಕನ್ನಡ ಗೊತ್ತಿದೆ?' ಅಥವಾ 'ಕನ್ನಡ ಪದಪರೀಕ್ಷಕದಲ್ಲಿ ಒಂದು ಲಕ್ಷ ಶಬ್ದಗಳು!'
ಇದೇನಿದು ಮೂರುಮೂರು ತಲೆಬರಹ ಎನ್ನುತ್ತೀರಾ ? ನಿಮಗೆ ಗೊತ್ತಿರಲಿಕ್ಕಿಲ್ಲ . ಮೊದಲಿಗೆ ಕಾದಂಬರಿಗಳು ಕನ್ನಡದಲ್ಲಿ ಪ್ರಾರಂಭವಾದಾಗ ಈ ರೀತಿಯೇ ಹೆಸರುಗಳನ್ನು ಕೊಡುತ್ತಿದ್ದರು ! ಇರಲಿ. ಈಗ ವಿಷಯಕ್ಕೆ ಬರೋಣ .
'ನುಡಿ' ತಂತ್ರಾಂಶದೊಂದಿಗೆ ಬರುವ ಶಬ್ದ ಸಂಗ್ರಹದಲ್ಲಿ ಸುಮಾರು ನಲವತ್ತು ಸಾವಿರ ಶಬ್ದಗಳಿವೆ. ಜತೆಗೆ ಬಳಕೆದಾರನು ತನ್ನದೇ ಆದ ಇನ್ನೊಂದು ಶಬ್ದಸಂಗ್ರಹವನ್ನೂ ಹೊಂದಬಹುದಾಗಿದೆ .
ನಾನು ಈಗಾಗಲೇ ಇಲ್ಲಿ ಬರೆದಿರುವಂತೆ ಕನ್ನಡಸಾಹಿತ್ಯ.ಕಾಂ ನಲ್ಲಿರುವ ಕಥೆಗಳು ಮತ್ತು ವೈಚಾರಿಕ ಲೇಖನಗಳನ್ನು ಕಳೆದ ಕೆಲವು ದಿನಗಳಿಂದ 'ಬರಹ' , 'ನುಡಿ' ತಂತ್ರಾಂಶಗಳನ್ನು ಉಪಯೋಗಿಸಿ ತಿದ್ದುತ್ತಿದ್ದೇನೆ. ಜತೆಜತೆಗೆ ಮೇಲೆ ಹೇಳಿದ ಎರಡನೇ ( ಅಂದರೆ ಬಳಕೆದಾರನ) ಶಬ್ದಸಂಗ್ರಹವೂ ಬೆಳೆಯುತ್ತಿದೆ. ಈಗ ಅದು ಸುಮಾರು ಒಂದು ಲಕ್ಷ ಶಬ್ದಗಳನ್ನು ಹೊಂದಿದೆ .
ಇಂಗ್ಲೀಷಿನಂತಲ್ಲದೆ ಕನ್ನಡದಲ್ಲಿ ವಿಭಕ್ತಿ ಮತ್ತಿತರ ಪ್ರತ್ಯಯಗಳು ಶಬ್ದದೊಡನೆ ತಗುಲಿಕೊಳ್ಳುವುದರಿಂದ ( ಕಂಪ್ಯೂಟರ್ ಎರಡು ಖಾಲಿ ಸ್ಥಳಗಳ ನಡುವಿನ ಅಕ್ಷರ ಸಮೂಹವನ್ನು ಒಂದು ಪದ ಎಂದು ಪರಿಗಣಿಸುವದರಿಂದ ) ಶಬ್ದಗಳ ಸಂಖ್ಯೆ ಬಹಳಷ್ಟು ಹೆಚ್ಚುತ್ತದೆ. ಸಂಧಿಸಮಾಸಗಳು ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಪ್ರಮಾಣಿತ ಗ್ರಂಥಭಾಷೆಗೇ ಈ ಗತಿಯಾದರೆ ಇನ್ನು ಆಡುನುಡಿ , ಪ್ರಾದೇಶಿಕ ಪ್ರಭೇದಗಳನ್ನು ಸೇರಿಸಿಕೊಂಡರೆ ? ಬರಹಗಾರರು ಕೆಲವು ಸಲ ತಮ್ಮದೇ ಶಬ್ದಗಳನ್ನು ಸೃಷ್ಟಿಸುವದೂ ಉಂಟು. ಇನ್ನು ವ್ಯಕ್ತಿ/ಸ್ಥಳಗಳ ಹೆಸರು( ಅಂಕಿತನಾಮ ಎನ್ನುತ್ತಾರೆ ಅಂತ ಕಾಣುತ್ತದೆ) ಗಳೂ ಅವುಗಳ ಸಕಲರೂಪಗಳೂ ಅಸಂಖ್ಯಾತ. ಅವುಗಳನ್ನು ಸದ್ಯಕ್ಕೆ ನಾನು ಪರಿಗಣಿಸಿಲ್ಲ . ಹೀಗಾಗಿ ಎಂಥೆಂಥ ದೊಡ್ಡ ಜನರನ್ನೂ ನಾನು ಕಡೆಗಣಿಸಿದ್ದೇನೆ! . ಹೀಗೆ ಕನಿಷ್ಠ ಪಕ್ಷ ಪದಪರೀಕ್ಷಕ ತಂತ್ರಾಂಶ ಉಪಯೋಗಿಸಿ ಸ್ಪೆಲ್ ಚೆಕ್ ಮಾಡುವಾಗಲಾದರೂ ಮಹಾ ಮಹಾ ಪಂಡಿತರನ್ನೂ , ಕವಿಗಳನ್ನೂ , ಪ್ರಸಿದ್ಧಪುರುಷರನ್ನು ಕಡೆಗಣಿಸಿದ ಬಗ್ಗೆ ನನಗೆ ಒಂದು ತರಹದ ಸಂತೋಷವಿದೆ!! ಇಂಥ ಭಾಗ್ಯ ಯಾರಿಗುಂಟು ? ಯಾರಿಗಿಲ್ಲ ? ಇರಲಿ .
ಈ ಎರಡು ತಿಂಗಳ ಕೊನೆಗೆ ನಾನು ಸುಮಾರು ೧೪೦ ಕಥೆಗಳು ಮತ್ತು ಲೇಖನಗಳನ್ನು ತಿದ್ದಿದ್ದಾಗಿತ್ತು . ತೆಗೆದುಕೊಂಡ ಸಮಯ ಸುಮಾರು ೫೦ ಘಂಟೆಗಳು . ಈಗ ನನ್ನ ಒಂದು ಅಂದಾಜಿನ ಪ್ರಕಾರ ಒಂದು ಸಾಮಾನ್ಯ ಲೇಖನವನ್ನು ಪದಪರೀಕ್ಷೆಗೆ ಒಳಪಡಿಸಿದರೆ ಅದರಲ್ಲಿನ ೮೫% ( ಅಂದರೆ ಪ್ರತಿ ಆರು ಶಬ್ದಗಳಲ್ಲಿ ಐದು ) ಶಬ್ದಗಳು ಪಾಸಾಗುತ್ತವೆ . ಉಳಿದ ಶಬ್ದಗಳು ( ಆರರಲ್ಲಿ ಒಂದು) ತಪ್ಪಾಗಿ ಬರೆದಿರಬಹುದು ಅಥವಾ ಶಬ್ದಕೋಶ / ನಿಘಂಟಿನಲ್ಲಿಲ್ಲದ ಶಬ್ದಗಳಾಗಿರಬಹುದು.
ವಿಂಡೋಸ್ ೨೦೦೦ ವ್ಯವಸ್ಥೆಯ ಮತ್ತು ೨೫೬ ಮೆಗಾಬೈಟ್ ಮೆಮೊರಿಯ ನನ್ನ ಕಂಪ್ಯೂಟರ್ ಒಂದು ಲಕ್ಷ ನಲವತ್ತು ಸಾವಿರ ಶಬ್ದಗಳ ಭಾರಕ್ಕೆ ಸ್ವಲ್ಪ ನಿಧಾನವಾಗಿದೆ ಅಷ್ಟೆ . ಬಹುಶ: ಐದು ಲಕ್ಷದ ಶಬ್ದಕೋಶವೇ ಕನ್ನಡಕ್ಕೆ ಬೇಕೆಂದು ತೋರುತ್ತದೆ . ಹೊಸ ಹೊಸ ಕಂಪ್ಯೂಟರಗಳಿಗೆ ಅದು ಏನೂ ಅಷ್ಟೊಂದು ಹೊರೆಯಾಗಲಿಕ್ಕಿಲ್ಲ . ಅಲ್ಲವೇ?
ಈ ಕೆಲಸದಲ್ಲಿ ಕೆಲವು ಸಂದಿಗ್ಧಗಳೊದಗಿದವು.
೧. ಅಂಕಿತನಾಮಗಳ ಕುರಿತು ಅವನ್ನು ಕಡೆಗಣಿಸಬೇಕೇ / ಶಬ್ದಕೋಶಕ್ಕೆ ಸೇರಿಸಬೇಕೇ ಎಂಬುದು . ಸಾಮಾನ್ಯವಾಗಿ ಸೇರಿಸಿಲ್ಲ ಆದರೆ ಕೊನೆಕೊನೆಗೆ ಕೆಲವು ಪ್ರಸಿದ್ಧ ಹೆಸರುಗಳನ್ನು ಸೇರಿಸಿದ್ದೇನೆ- ಏಕೆಂದರೆ ಮತ್ತೆ ಮತ್ತೆ ಉಪಯೋಗವಾಗುವದರಿಂದ ಆ ಮಟ್ಟಿಗೆ ಪದಪರೀಕ್ಷಕದ ಕ್ಷಮತೆ ಹೆಚ್ಚಲಿ ಎಂದು ಸೇರಿಸಿದ್ದೇನೆ.
೨. ಕನ್ನಡ ಬರವಣಿಗೆಯಲ್ಲಿ / ಮಾತಿನಲ್ಲಿ ಇಂಗ್ಲೀಷ್ ಶಬ್ದಗಳು ಯಥೇಚ್ಛವಾಗಿ ಬಳಕೆಯಾಗುತ್ತಿವೆ . ಅವುಗಳನ್ನು ಸೇರಿಸಬೇಕೇ ? ಬೇಡವೆ ? ಕನ್ನಡ ಬೆಳೆಯುತ್ತಿದೆ . ಜನ ಉಪಯೋಗಿಸಲಾರಂಭಿಸಿದ ಮೇಲೆ ಸೇರ್ಪಡೆಯಾಗತಕ್ಕದ್ದೇ ಎಂದು ಕನ್ನಡ ಲಿಪಿಯಲ್ಲಿ ಎದುರಾದ ಎಲ್ಲ ಶಬ್ದಗಳನ್ನು ಸೇರಿಸುವ ಮಹತ್ವದ (!) ನಿರ್ಣಯ ವೈಯುಕ್ತಿಕವಾಗಿ ( ವೈಯಕ್ತಿಕವಾಗಿ ?- ಮುಂದೆ ನೋಡಿ!) ತೆಗೆದುಕೊಂಡುಬಿಟ್ಟೆ . ಇಷ್ಟಕ್ಕೂ ಭಾಷೆಯನ್ನು ಉಪಯೋಗಿಸುವವರೂ ಕೂಡ ವೈಯುಕ್ತಿಕ ನಿರ್ಣಯಗಳನ್ನು ತಾನೇ ತೆಗೆದುಕೊಳ್ಳುವದು?
೩. ನಾವು ಸಾಮಾನ್ಯವಾಗಿ ಬಳಸುವ ಶಬ್ದಗಳ ಬಗ್ಗೆಯೇ ಸಂದೇಹ ಒದಗಿತು . ಆಗ ಕನ್ನಡ ರತ್ನಕೋಶವನ್ನು ಬಳಿ ಇಟ್ಟುಕೊಂಡು ಅದನ್ನು ನೋಡಬೇಕಾಯಿತು .
ಉದಾಹರಣೆಗೆ ಈ ಶಬ್ದಗಳನ್ನು ನೋಡಿ
ಉಚ್ಚಾರ ? ಉಚ್ಚಾರ ? - ಉಚ್ಚಾರ ಸರಿ
ಸದ್ಯ ? ಸಧ್ಯ ? - ಸದ್ಯ ಸರಿ
ಸ್ತಿಮಿತ ? ಸ್ಥಿಮಿತ ? - ಸ್ತಿಮಿತ ಸರಿ
ಅಣೆಕಟ್ಟು ? ಆಣೆಕಟ್ಟು ?- ಅಣೆಕಟ್ಟು ಸರಿ
ವ್ರತ ? ವೃತ ? - ವ್ರತ ಸರಿ
ಗೌರವಸ್ತ ? ಗೌರವಸ್ಥ ?
ಗಾಬರಿ ? ಗಾಭರಿ?
ರೇಶ್ಮೆ ? ರೇಷ್ಮೆ?
ಸ್ತರ ? ಸ್ಥರ ?
ಒಂಬತ್ತು ? ಒಂಭತ್ತು ?
ಸ್ಪರ್ಷ ? ಸ್ಪರ್ಶ?
ಆಶಿರ್ವಾದ ? ಆಶೀರ್ವಾದ ?
ಅಹ್ಲಾದ ? ಆಹ್ಲಾದ ?
ದೃಢ ? ಧೃಡ ?
ಜಾಗೃತಿ ? ಜಾಗ್ರತಿ ?
ಎಂಬತ್ತು ? ಎಂಭತ್ತು ?
ಸಂದಿಗ್ದ ? ಸಂದಿಗ್ಧ?
ಬಾಧೆ ? ಭಾದೆ? ಭಾಧೆ?
ಅತ್ಯುತ್ತಮ ? ಅತ್ತುತ್ತಮ?
ವ್ರಣ ? ವೃಣ? - ವ್ರಣ ಸರಿ
ಗರ್ಜನೆ ? ಘರ್ಜನೆ?
ತತ್ವ ? ತತ್ತ್ವ?
ತಾತ್ವಿಕ ? ತಾತ್ತ್ವಿಕ
ಶ್ರದ್ಧೆ ? ಶೃದ್ಧೆ?
ದಾಳಿ ? ಧಾಳಿ?
ಅಂಗಸೌಷ್ಟವ? ಅಂಗಸೌಷ್ಠವ ?
ರಾಹುತ ? ರಾವುತ ?
ಅವಕುಂಠನ ? ಅವಗುಂಠನ ?
ಸಂಬೋಧನೆ ? ಸಂಭೋದನೆ?
ಬರ್ಚಿ ? ಭರ್ಚಿ?
ವೈಢೂರ್ಯ ? ವೈಡೂರ್ಯ ?
ಭಂಡಾರಿ ? ಭಾಂಡಾರಿ?
ವರಹ ? ವರಾಹ?
ವಸಿಷ್ಠ ? ವಶಿಷ್ಠ ?
ದಾಂಡಿಗ ? ಧಾಂಡಿಗ ?
ಹಟ ? ಹಠ ?
ಮಗ್ಗಲು ? ಮಗ್ಗುಲು ?
ರೂಪುರೇಶೆ ? ರೂಪುರೇಷೆ ?
ವೈಶಿಷ್ಟ್ಯ ವೈಶಿಷ್ಠ್ಯ ?
ಪ್ರಬುದ್ಧ ? ಪ್ರಭುದ್ಧ?
ಬೋಧನೆ ? ಭೋದನೆ?
ಅಧ್ಯಾತ್ಮ - ಅಧ್ಯಾತ್ಮ
ಅಧ್ಯಾತ್ಮಿಕ - ಅಧ್ಯಾತ್ಮಿಕ
ವೈಯಕ್ತಿಕ ? ವೈಯುಕ್ತಿಕ ?
ರೋಗಿಷ್ಟ ? ರೋಗಿಷ್ಠ ? ಇತ್ಯಾದಿ .
ಒಟ್ಟಿನಲ್ಲಿ ಕನ್ನಡ ನನಗೆಷ್ಟು ಗೊತ್ತು ? ಎಂಬುದು ನನಗೆ ಗೊತ್ತಾಯಿತು! ನಾನು ನೋಡಿದ ಶಬ್ದಕೋಶ - ಕನ್ನಡರತ್ನಕೋಶ ಶಾಲಾವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿದ್ದು . ನಾನು ಇನ್ನೂ ವಿದ್ಯಾರ್ಥಿ ಮಟ್ಟದಲ್ಲಿ ಇದ್ದೇನೆ ಎಂದು ಖಾತರಿ ಮಾಡಿತು.
Comments
ಅಭಿನಂದನೆಗಳು ಮತ್ತು ಕೆಲವು ವಿವರಣೆಗಳು
In reply to ಅಭಿನಂದನೆಗಳು ಮತ್ತು ಕೆಲವು ವಿವರಣೆಗಳು by olnswamy
ಧನ್ಯವಾದಗಳು-
ಕನ್ನಡ ನನಗೆಷ್ಟು ಗೊತ್ತು !
ಒಳ್ಳೆಯ ಕೆಲಸ