ಎಂದೂ ಮರೆಯಲಾಗದ ವ್ಯಕ್ತಿ

ಎಂದೂ ಮರೆಯಲಾಗದ ವ್ಯಕ್ತಿ

ನಿವೃತ್ತಿಯ ನಂತರ ಹುಟ್ಟಿದೂರಿನಲ್ಲಿ ಬಂದು ನೆಲೆಸಿದಾಗಾಲಾಯ್ತಿನಿಂದ ಪ್ರತಿದಿನ ಸಂಜೆ ೬ ಗಂಟೆಗೆ ದೇವಳಕ್ಕೆ ಭೇಟಿಕೊಡುವುದು ರೂಢಿಯಾಗಿತ್ತು. ಹಲವು ವರುಷಗಳ ನಂತರ ಹುಟ್ಟಿದೂರಿಗೆ ಬಂದು ನೆಲೆಸಿದ ಮತ್ತು ಯಾರೊಡನೆಯೂ ಬೆರೆತು ಹೆಚ್ಚು ಮಾತನಾಡದ ಕಾರಣ ಸುರುವಿಗೆ ಸಂಬಂಧಿಕರಲ್ಲಿ ಮತ್ತು ಪರಿಚಯದವರಲ್ಲಿ ಹರಟೆ ಹೊಡೆಯಲು ತುಸು ಸಮಯ ತೆಗೆದುಕೊಂಡಿತು. ಕ್ರಮೇಣ ಹಲವರೊಡನೆ ಬೆರೆಯಲು ಸುರುವಾಯಿತು. ಅವರಲ್ಲಿ ಕೆಲವರು ಬಹಳ ಸಲಿಗೆಯಿಂದ ಮಾತನಾಡಿಸಿ ಸುಖ-ದುಃಖ ವಿಚಾರಿಸಿ ಕಾಲಹರಣ ಮಾಡುವವರು ಇದ್ದರು. ಅಂತವರಲ್ಲಿ ಒಬ್ಬರು ದಿವಸಾಗಲೂ ದೇವಳಕ್ಕೆ ಹೋಗುವ ದಾರಿಯಲ್ಲಿ ಭೇಟಿಯಾಗಿ ಸುರುಸುರುವಿಗೆ ಕಾಟಾಚಾರಕ್ಕೆ ಸ್ವಲ್ಪ ಮಾತನಾಡಿ ಮುಂದುವರಿಯುತ್ತಿದ್ದೆ. ನಂತರ ನನಗೆ ಬೇಕಾದ ಉಪಯುಕ್ತ ಮಾಹಿತಿಗಳನ್ನು ಒದಗಿಸುವವರಾದರು. ಮೊನ್ನೆ ಅಂದರೆ ೧೪ನೇ ತಾರೀಕಿಗೆ ನನಗೆ ಒಬ್ಬ ವ್ಯಕ್ತಿಯ ವಿಷಯವಾಗಿ ಮಾಹಿತಿ ಬೇಕಾಗಿತ್ತು. ಅವರ ಹತ್ತಿರದ ಸಂಬಂಧಿಕರಲ್ಲಿ ವಿಚಾರಿಸಿದರೆ ನನಗೆ ಬೇಕಾದ ಮಾಹಿತಿ ಸಿಗಲಿಲ್ಲಾ. ಪ್ರತಿದಿನದಂತೆ ಅವರಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದೆ. ಕೂಡಲೇ ಅವರು ಪ್ರತಿಕ್ರಿಯಿಸಿ ಬೇಕಾದ ವಿವರಗಳನ್ನು ತಿಳಿಸಿದಲ್ಲದೆ ಅವರು ಇರಬಹುದಾದ ಊರನ್ನು ತಿಳಿಸಿದರು. ಬೇಕಾದರೆ ನಾಳೆ ನಿಖರವಾಗಿ ತಿಳಿಸುತ್ತೇನೆಂದು ಭರವಸೆ ಕೊಟ್ಟು ಸ್ವಲ್ಪ ಹೊತ್ತು ಲೋಕಾಭಿರಾಮವಾಗಿ ಮಾತನಾಡಿ ಬೀಳ್ಕೊಟ್ಟೆವು. ಮರುದಿನ ಸಂಜೆ ಅಂದರೆ ೧೫ನೇ ತಾರೀಕಿಗೆ ಎಂದಿನಂತೆ ದೇವಳಕ್ಕೆ ಹೊರಟ ನಾನು ಪ್ರತಿನಿತ್ಯ ಅವರನ್ನು ಮಾತನಾಡಿಸಿ ವಿಶ್ ಮಾಡಿ ಹೋಗುವವ ಯಾಕೋ ಏನೋ ಆ ದಿನ ಸೀದಾ ಹೋದೆ. ನಂತರ ವಾಪಾಸು ಬರುವಾಗ ವಿದ್ಯುತ್ ಕೈಕೊಟ್ಟು ಕತ್ತಲಾವರಿಸಿದ ಕಾರಣ ಮನೆಗೆ ಬಂದೆ. ಅದರೆ ಮರುದಿನ ಬೆಳಗೆ ಕೇಳಿದ ಸುದ್ಧಿ ಮಾತ್ರ ನನ್ನನ್ನು ಬೆರಗಾಗಿಸಿತು. ಯಾಕೆಂದರೆ ಅವರು ನಮ್ಮನೆಲ್ಲಾ ಅಗಲಿ ಎಂದೂ ಬಾರದ ಊರಿಗೆ ನಿನ್ನೆ ರಾತ್ರೆ ೯.೦೦ಕ್ಕೆ ಹೋಗಿಯಾಗಿತ್ತು. ಒಳ್ಳೆಯ ಆರೋಗ್ಯವಂತರಾಗಿದ್ದ ಆ ವ್ಯಕ್ತಿ ತನ್ನ ೭೮ನೇ ವರುಷದ ಸಾರ್ಥಕ ಜೀವನವನ್ನು ಪೂರೈಸಿ ಹೋದರು ಎಂದು ತುಂಬಾ ದುಃಖವಾಯಿತು. ಅಂತಿಮ ದರುಶನ ಪಡೆಯಲು ಹೋಗಿ ಬಾಯಿಗೆ ಭಾಗೀರಥಿ ಹಾಕಿ ನಮಿಸಿ ಮನೆಗೆ ಬಂದೆ.
ಇನ್ನು ನನಗೆ ಬೇಕಾದ ಮಾಹಿತಿಗಳನ್ನು ತಿಳಿದುಕೊಳ್ಳಲು ಅವರಂತಹ ಹಿರಿಯರನ್ನು ಹುಡುಕಬೇಕಾಗುವುದು. ಯಾಕೆಂದರೆ ಅವರ ಪ್ರಾಯ ೭೮ ಆಗಿದ್ದರೂ ೫೦-೬೦ ವರುಷಗಳ ಹಿಂದಿನ ಮಾಹಿತಿಗಳನ್ನು ನಿಖರವಾಗಿ ತಿಳಿಸುತ್ತಿದ್ದರು. ೬೦-೭೦ರ ನಂತರ ಅರಳು ಮರುಳು ಎಂಬ ಗಾದೆ ಇದೆಯಲ್ಲಾ. ಇವರಿಗೆ ಮಾತ್ರ ಅರಳು ಮರುಳಾಗಿರಲಿಲ್ಲಾ.
ಈ ವ್ಯಕ್ತಿಯನ್ನು ನಾನು ಎಂದೂ ಮರೆಯಲಾರೆ!

ಬಿ.ವೆಂಕಟ್ರಾಯ

Rating
No votes yet