ಎತ್ತಿನ ಭುಜಕ್ಕೆ ಚಾರಣ(11/12-06-2005)

ಎತ್ತಿನ ಭುಜಕ್ಕೆ ಚಾರಣ(11/12-06-2005)

ಚಾರಣಕ್ಕೆ ನಿರಂತರವಾಗಿ ಹೊಸ ಹೊಸ ಜಾಗಗಳನ್ನು ಹುಡುಕುವ ನಮಗೆ ಈ ಬಾರಿಯ ಚಾರಣಕ್ಕೆ ವಿವಿಧ ಸ್ಥಳಗಳ ಬಗ್ಗೆ ಚರ್ಚಿಸುತ್ತಿರುವಾಗ ಕಳೆದ ವರುಷ (೨೦೦೪) ಎಪ್ರಿಲ್ ತಿಂಗಳಿನಲ್ಲಿ ಪ್ರಜಾವಾಣಿಯ ಕರ್ಣಾಟಕ ದರ್ಶನದಲ್ಲಿ ಬಂದ ಲೇಖನದ ಬಗ್ಗೆ ನೆನಪಾತು. ಆ ಲೇಖನದಲ್ಲಿ ಶ್ರೀ ದಿನೇಶ್ ಹೊಳ್ಳ ಅವರು ತಮ್ಮ ಎತ್ತಿನಭುಜ ಚಾರಣದ ಅನುಭವಗಳನ್ನು ವಿವರಿಸಿದ್ದರು.

ಆ ಲೇಖನವನ್ನೇ ಆಧಾರವಾಗಿಟ್ಟು ಕೊಂಡು ಶಿಶಿಲದ ಬಳಿರುವ ಎತ್ತಿನಭುಜಕ್ಕೆ ಹೋಗಲು ನಿರ್ಧರಿಸಿದೆವು. ನಮ್ಮ ತಂಡ ಐವರಿಂದ ಕೂಡಿತ್ತು; ನಾನು, ಶ್ರೀರಾಮ, ವಸಂತ, ಮನೋಜ ಹಾಗೂ ನಂದ. ಕಾರ್ಯಾಲಯದಲ್ಲಿ ತುರ್ತು ಕೆಲಸವಿದ್ದ ಕಾರಣ ಕೊನೆಯ ಘಳಿಗೆಯಲ್ಲಿ ನಂದ ನಮ್ಮ ತಂಡವನ್ನು ತೊರೆಯುವಂತಾದರೂ, ನಮಗಾಗಿ ಧರ್ಮಸ್ಥಳಕ್ಕೆ ೧೦ ಗಂಟೆಯ ಬಸ್ಸಿಗೆ ೪ ಟಿಕೆಟುಗಳನ್ನು ಕಾರಿಸಿದ. ಎಲ್ಲರೂ ವಿಜಯನಗರದ ದೂರವಾಣಿ ಕಛೇರಿಯ ಬಳಿರುವ ಬಸ್ ನಿಲ್ದಾಣದ ಬಳಿ ರಾತ್ರಿ ೯:೩೦ ಗಂಟೆಗೆ ಸೇರುವುದಾಗಿ ನಿರ್ಧರಿಸಿದೆವು. ಒಂದೆಡೆ ಬಸ್ ಬರುವುದೇ ತಡವಾದರೆ, ಇನ್ನೊಂದೆಡೆ ನಮ್ಮ ಹೀರೊ ವಸಂತ ಮಲಗುವ ಚೀಲಗಳನ್ನು ಇನ್ಫೋಸಿಸ್ ಬಸ್‌ನಲ್ಲಿ ಮರೆತು(ನಿದ್ರಾದೇವಿಯ ಕೃಪೆಯಿಂದ), ಬಸ್ಸನ್ನು ತನ್ನ ಬೈಕ್‌ನಲ್ಲಿ ಹಿಂಬಾಲಿಸಿ ಮಲಗುವ ಚೀಲ ಪಡೆದು, ಕೊನೆಗೂ ೧೦:೩೦ ಗೆ ಸರಿಯಾಗಿ ನಮ್ಮ ಬಸ್ಸನ್ನು ನವರಂಗ್ ಚಿತ್ರಮಂದಿರದ ಬಳಿ ಹಿಡಿದ. ಹೀಗೆ ಬಸ್ ಹತ್ತಿದ ನಾಲ್ವರೂ ಸುಖನಿದ್ರೆಗೆ ಶರಣಾಗಿ ಧರ್ಮಸ್ಥಳ ತಲುಪುವ ವೇಳೆಗೆ ಪ್ರಾತ:ಕಾಲ ೪:೪೫ ಆಗಿತ್ತು. ದೇವಸ್ಥಾನದ ಯಾತ್ರಿಗೃಹದಲ್ಲಿ ನಮ್ಮೆಲ್ಲರ ಸ್ನಾನ ಇತ್ಯಾದಿಗಳನ್ನು ಮುಗಿಸಿ, ಮಂಜುನಾಥೇಶ್ವರನ ದರ್ಶನ ಮಾಡಿ, ಸುಮಾರು ೮ ಗಂಟೆಗೆ ಶಿಶಿಲಕ್ಕೆ ಹೊರಡಲು ಸಿದ್ಧರಾದೆವು. ಶಿಶಿಲಕ್ಕೆ ತಲುಪುವುದೇ ನಮಗೆದುರಾದ ಮೊದಲ ಸವಾಲಾಗಿತ್ತು. ಕಾರಣ, ಅಲ್ಲಿಗೆ ತಲುಪಲು ಸರಿಯಾದ ಬಸ್ ಸೌಕರ್ಯವಿಲ್ಲದಿರುವುದು.

ಧರ್ಮಸ್ಥಳದಿಂದ ಕೊಕ್ಕಡ ಎಂಬಲ್ಲಿಗೆ ಬಸ್ ನಲ್ಲಿ ಹೋಗಿ, ಅಲ್ಲಿಂದ ಮುಂದೆ ಶಿಶಿಲಕ್ಕೆ ಜೀಪ್ ನಲ್ಲಿ ಪ್ರಯಾಣ ಬೆಳೆಸಿದೆವು. ಸುಮಾರು ೧೫ ಜನರಿಂದ ತುಂಬಿದ್ದ ಆ ಜೀಪ್‌ನ ಚಾಲನೆ ಮಾಡುತ್ತಿದ್ದ ಚಾಲಕನ ನೈಪುಣ್ಯ ಮೆಚ್ಚುವಂತಹದ್ದಾಗಿತ್ತು. ಆತನ ಅರ್ಧ ದೇಹ ಜೀಪ್‌ನ ಹೊರಗಿದ್ದರೂ ಆತ ಇಬ್ಬರನ್ನು ದಾಟಿ ಗೇರ್ ಬದಲಾಯಿಸುತ್ತಿದ್ದ. ನಮ್ಮ ಜೀವವನ್ನೂ, ಜೀಪನ್ನೂ ಗಟ್ಟಿಯಾಗಿ ಹಿಡಿದು ಶಿಶಿಲ ತಲುಪುವಾಗ ಸುಮಾರು ೧೦:೩೦ ಗಂಟೆ. ಹಸಿರು ಹೊದ್ದ ಮಲೆಗಳ ನಡುವೆ ಪ್ರಶಾಂತವಾಗಿ ಹರಿಯುವ ಕಪಿಲೆಯ ದಡದಲ್ಲಿರುವ ಶಿಶಿಲೇಶ್ವರ ದೇವಸ್ಥಾನ ಹಾಗೂ ಮತ್ಸ್ಯ ಕ್ಷೇತ್ರದ ದರ್ಶನ ನಮ್ಮ ದಣಿವನ್ನು ಮರೆಮಾಡಿತು. ಶಿಶಿಲೇಶ್ವರ ದೇವಸ್ಥಾನದಿಂದ ನಮ್ಮ ಚಾರಣ ಶುರು ಆಗುವ ವೇಳೆಗಾಗಲೇ ಭಾಸ್ಕರನು ಪ್ರಖರವಾಗಿ ಹೊಳೆಯುತ್ತಿದ್ದ. ಅದು ಸಾಲದೆಂಬಂತೆ ದಕ್ಷಿಣ ಕನ್ನಡದ ತೇವಾಂಶದಿಂದ ಕೂಡಿದ ವಾತಾವರಣ. ಆದರೆ ಇವೆಲ್ಲವನ್ನೂ ಮೀರಿತ್ತು ದೂರದಲ್ಲಿ ಕಾಣುತ್ತಿದ್ದ ನಮ್ಮ ಗುರಿಯನ್ನು ಸೇರುವ ಹುಮ್ಮಸ್ಸು. ಸೊದೆಗುಂಡಿಯ ಮಾರ್ಗದಲ್ಲಿ ದಟ್ಟ ಕಾಡನ್ನು ಹೊಕ್ಕುವವರೆಗೂ ಪದೇ ಪದೇ ದರ್ಶನವನ್ನು ನೀಡುತ್ತಾ ನಮ್ಮನ್ನು ಹುರಿದುಂಬಿಸುತ್ತಿದ್ದ ಎತ್ತಿನಭುಜ ಒಂದೆಡೆಯಾದರೆ, ಇನ್ನೊಂದೆಡೆ ಮೋಡಗಳೊಡನೆ ಕಣ್ಣಾಮುಚ್ಚಾಲೆಯಾಡುತ್ತಿದ್ದ ಅಮೇದಿ ಕಲ್ಲು ಬೆಟ್ಟ. ಕಾಡು ಹಾಗೂ ತೋಟಗಳಿಂದ ಕೂಡಿದ ಮೊದಲ ೫-೬ ಕಿ.ಮೀ ದಾರಿ ಅಗಲವಾದ ಕಚ್ಚಾ ರಸ್ತೆಯಿಂದ ಕೂಡಿದೆ. ಆನಂತರದ ತೆಳುವಾದ ಕಾಲುದಾರಿ ದಟ್ಟ ಕಾಡಿನ ನಡುವೆ ಕಪಿಲೆಯ ದಡದಲ್ಲೇ ಸಾಗುತ್ತದೆ. ದಾರಿಯಲ್ಲಿ ನಡು ನಡುವೆ ಎಲ್ಲೋ ಒಮ್ಮೊಮ್ಮೆ ಎತ್ತಿನಭುಜ ಕಾಣಿಸುತ್ತಿತ್ತು. ಅಂಕು ಡೊಂಕಾದ ದಾರಿಯಾಗಿದ್ದ ಕಾರಣ, ಕೆಲವೊಮ್ಮೆ ನಾವು ಎತ್ತಿನಭುಜದಿಂದ ದೂರ ಹೋಗುತ್ತಿರುವಂತೆ ಮತ್ತೆ ಕೆಲವೊಮ್ಮೆ ಹತ್ತಿರಹೋಗುತ್ತಿರುವಂತೆ ಭಾಸವಾಗುತ್ತಿತ್ತು. ಸುಮಾರು ೨ ಗಂಟೆಯಾಗುತ್ತಿದ್ದಂತೆ, ಸೂರ್ಯನ ತಾಪದೊಂದಿಗೇ ನಮ್ಮ ಜಠರಾಗ್ನಿಯ ತಾಪವೂ ಹೆಚ್ಚಾಗಿತ್ತು. ಶತಶತಮಾನಗಳಿಂದ ಕಪಿಲೆಯ ನರ್ತನವನ್ನು ಸಹಿಸುತ್ತಾ ನುಣುಪಾಗಿ ಹೋಗಿದ್ದ ಒಂದು ಬಂಡೆಯ ಮೇಲೆ ಕುಳಿತು, ನಾವು ಕಟ್ಟಿಸಿಕೊಂಡು ಬಂದಿದ್ದ ಪುಳಿಯೋಗೆರೆ ಹಾಗೂ ಚಪಾತಿಗಳನ್ನು ಮೆದ್ದೆವು. ಈ ಪ್ರದೇಶದಲ್ಲಿ ಕೆಲವು ವಾರಗಳಿಂದ ಮಳೆಯಾಗುತ್ತಿದ್ದ ಕಾರಣ, ಕಾಡಿನ ನೆಲವೆಲ್ಲಾ ಒದ್ದೆಯಾಗಿ, ಜಿಗಣೆಗಳಿಗೆ ಒಳ್ಳೆಯ ಆಶ್ರಯ ತಾಣವಾಗಿತ್ತು. ಅವೂ ಕೂಡಾ ಸಿಕ್ಕ ಅವಕಾಶವನ್ನು ಹೋಗಗೊಡದೇ, ನಮ್ಮ ನೆತ್ತರನ್ನು ಚೆನ್ನಾಗಿ ಆಸ್ವಾದಿಸಿದವು. ನಾವು ಸಾಗುತ್ತಿದ್ದ ಕಾಲುದಾರಿಯಲ್ಲಿ ೨ ಸಲ ಕಪಿಲಾ ನದಿಯನ್ನು ದಾಟಿದ ಮೇಲೆ, ಸುಮಾರು ೪:೧೫ ರ ಹೊತ್ತಿಗೆ ನಮಗೆ ದಾರಿಯಲ್ಲಿ ಇಬ್ಬರು ಸ್ಥಳೀಯರು ಸಿಕ್ಕರು. ಅವರು, ನಾವು ಹಿಂದೆಯೇ ಒಂದು ಕವಲುದಾರಿಯನ್ನು ಹಿಡಿದಿದ್ದರೆ ಸುಲಭವಾಗಿ ಎತ್ತಿನಭುಜಕ್ಕೆ ಹೋಗಬಹುದಾಗಿತ್ತೆಂದೂ, ಮುಂದೆ ಇದ್ದ ದಾರಿಯಲ್ಲಿ ಹೋದರೆ, ಅದು ಕಷ್ಟಕರವಾಗಿರುವುದಾಗಿಯೂ ತಿಳಿಸಿದರು. ದಾರಿ ತಪ್ಪಿ ಬಂದದ್ದಾಗಿತ್ತು, ದಟ್ಟ ಕಾಡಿನಲ್ಲಿ ಈಗಾಗಲೇ ಕತ್ತಲಾವರಿಸಲು ಪ್ರಾರಂಭವಾಗಿತ್ತು. ಇನ್ನು ಹಿಂತಿರುಗಿವುದಕ್ಕಿಂತಾ ಮುಂದೆ ಇರುವ ದಾರಿಯನ್ನು ಹಿಡಿಯುವುದೇ ಲೇಸೆಂದು ಭಾವಿಸಿದೆವು. ಆ ಸ್ಥಳೀಯರು, ಮುಂದೆ ನಾವು ಹೋಗುತ್ತಿದ್ದ ಕಾಲುದಾರಿಯ ಬಲಕ್ಕೆ ಒಂದು ಸಣ್ಣದಾದ ದಾರಿ ಇರುವುದಾಗಿಯೂ, ಆ ದಾರಿಯಲ್ಲಿ ಸಾಗಿದರೆ ಎತ್ತಿನಭುಜ ಸಿಗುವುದಾಗಿಯೂ ತಿಳಿಸಿದರು. ಅವರ ಮಾರ್ಗದರ್ಶನ ಪಡೆದ ನಾವು, ಸಾಗುತ್ತಿದ್ದಾಗ ಬಲಕ್ಕೆ ಕನಿಷ್ಟ ೨-೩ ಕವಲು ದಾರಿಗಳು ಸಿಕ್ಕವು. ಅವೆಲ್ಲವೂ ಸ್ವಲ್ಪ ದೂರ ಸಾಗಿ ಮರೆಯಾಗುತ್ತಿದ್ದವು. ಮುಖ್ಯವಾದ ಕಾಲುದಾರಿಯೂ ಕೂಡ ಕಣ್ಣಾಮುಚ್ಚಾಲೆಯಾಡುತ್ತಿತ್ತು. ಮಳೆ ಬಂದು ಕಾಲುದಾರಿಯ ಮೇಲೆಲ್ಲಾ ಹುಲ್ಲು/ಗಿಡ-ಗಂಟಿಗಳು ಬೆಳೆದು, ದಾರಿಯು ಬಹಳ ಅಸ್ಪಷ್ಟವಾಗಿತ್ತು. ದಿಕ್ಕನ್ನು ಆಧಾರವಾಗಿಟ್ಟು ಕಾಡಿನೊಳಗೆ ಹೋಗೋಣವೆಂದರೆ, ಕಾಡು ಬಹಳ ಘನವಾಗಿತ್ತು. ಈ ಅಲೆದಾಟದ ನಡುವೆ ಸಮಯ ಬೇಗನೆ ಜಾರುತ್ತಿತ್ತು. ಕತ್ತಲು ಆವರಿಸುತ್ತಿತ್ತು. ದಟ್ಟ ಕಾಡಿನಲ್ಲೆ ಠಿಕಾಣಿ ಹೂಡಬೇಕಾದ ಅನಿವಾರ್ಯತೆ ಎದ್ದು ಕಾಣುತ್ತಿತ್ತು, ಅದರೊಂದಿಗೇ ಸ್ಥಳೀಯರು ಕೊಟ್ಟ ಕಾಡಿನಲ್ಲಿ ರಾತ್ರಿ ಉಳಿಯಬೇಡಿರೆಂಬ ಎಚ್ಚರಿಕೆ. ಕಾಡಿನಲ್ಲಿ ಕರಡಿ ಹಾಗೂ ಆನೆಗಳ ಸಂಖ್ಯೆ ಹೇರಳವಾಗಿದೆಯಂತೆ. ಇದೇ ರೀತಿ ದಿಗಿಲಿನಲ್ಲಿ ನಡೆಯುತ್ತಿರುವಾಗ ಬಲಕ್ಕೆ ಇನ್ನೊಂದು ದಾರಿ ಕಂಡಿತು. ಪುಣ್ಯಕ್ಕೆ ಈ ದಾರಿ ಮಧ್ಯದಲ್ಲಿ ಕೊನೆಯಾಗದೆ ನೇರವಾಗಿ ನಮ್ಮನ್ನೊಂದು ಬೆಟ್ಟದ ಮೇಲೆ ಕೊಂಡೊಯ್ದಿತು. ಮೇಲೇರಿದಂತೆ ಆ ಗುಡ್ಡವು ಹುಲ್ಲುಗಾವಲಾಗಿ ಪರಿವರ್ತಿತವಾತು. ಕಾಡು ತಿಳಿಯಾದಂತೆ ರಮಣೀಯ ದೃಶ್ಯಗಳು ಕಂಡವು. ಏದುಸಿರು ಬಿಡುತ್ತಾ ಮೇಲೇರುತ್ತಿದ್ದಂತೆ ಕತ್ತಲ ಹೊದಿಕೆಯೊಂದಿಗೆ ಮೋಡದ ಮುಸುಕೂ ದಟ್ಟವಾತು. ದೂರದಲ್ಲಿ ಎತ್ತಿನ ಭುಜದ ತುದಿಯು ಕಣ್ಣಾಮುಚ್ಚಾಲೆಯಾಡಲು ಶುರುಮಾಡಿತ್ತು. ಅಲ್ಲೇ ಒಳ್ಳೆಯ ಜಾಗ ನೋಡಿ, ನಮ್ಮ ಮಾರುತಿ ವ್ಯಾನ್ ಹೊದಿಕೆಯಿಂದ ಟೆಂಟ್ ಮಾಡಿ, ಒಳಗೆ ಮೇಣದ ಬತ್ತಿಯ ಬೆಳಕಿನಲ್ಲಿ ಊಟ ಮಾಡಿ ಮಲಗಿದೆವು. ರಾತ್ರಿ ಒಳ್ಳೆ ಮಳೆ ಕೂಡಾ ಬಂತು. ಒದ್ದೆ ಹುಲ್ಲಿನ ಮೇಲೆ ಜಾರುತ್ತಾ ನಾವು ಮಲಗಿದ್ದೆಲ್ಲೋ ಎದ್ದಿದ್ದೆಲ್ಲೋ. ಇಡೀ ಪ್ರದೇಶ ಮಂಜಿನಿಂದ ಆವೃತವಾಗಿದ್ದರಿಂದ ಪ್ರಾತ:ಕಾಲವೂ ಕೂಡ ಎತ್ತಿನಭುಜ ನಮಗೆ ಕಾಣಿಸುತ್ತಿರಲಿಲ್ಲ. ದಿಕ್ಕನ್ನು ಹಿಡಿದು, ರುದ್ರ ರಮಣೀಯ ಕಣಿವೆಗಳ ದೃಶ್ಯಗಳನ್ನು ಆಸ್ವಾದಿಸುತ್ತಾ ನಡೆದೆವು. ೯ ಗಂಟೆಯಾದರೂ ಸೂರ್ಯನ ದರ್ಶನವಿಲ್ಲ, ಎತ್ತಿನಭುಜವೂ ಕಾಣಿಸುತ್ತಿಲ್ಲ. ಆಗ ನಾವು ಮಂಜು ಸರಿಯುವವರೆಗೆ ಕಾಯುವುದು ಒಳಿತೆಂದು ಭಾವಿಸಿ ತಿಂಡಿ ತಿನ್ನುತ್ತಾ ಕಾಯುತ್ತಿರುವಾಗಲೊಮ್ಮೆ ಸ್ವಲ್ಪ ತಿಳಿಗಾಳಿ ಬಂದು ಮಂಜು ಸರಿತು. ಆಗ ಕಂಡ ದೃಶ್ಯ ನಮ್ಮ ಎದೆ ಝಲ್ಲೆನಿಸಿತು. ನಾವು ಎತ್ತಿನಭುಜದ ಮೇಲೆಯೇ, ತುದಿಯಿಂದ ಸ್ವಲ್ಪ ಕೆಳಗಿದ್ದೆವು. ತವಕದಿಂದ ಭುಜ ಹತ್ತಿದೆವು. ಮೋಡಗಳು ದೂರದಿಂದ ಓಡಿ ಬಂದು ಎತ್ತಿನಭುಜಕ್ಕೆ ಢಿಕ್ಕಿ ಹೊಡೆದು ಪುಟಿದೇಳುತ್ತಿದ್ದವು. ಮಳೆ ಬರುತ್ತಿರಲಿಲ್ಲವಾದರೂ ಮೋಡಗಳ ಸ್ಪರ್ಶ ನಮ್ಮನ್ನು ಪೂರ್ತಿ ಒದ್ದೆ ಮಾಡಿತ್ತು.
ಎತ್ತಿನಭುಜದ ತುದಿಯಲ್ಲಿ ಸುಮೂರು ಒಂದು ಘಂಟೆ ಕಳೆದನಂತರ ಒಲ್ಲದ ಮನಸ್ಸಿನಿಂದ ದೂರದಲ್ಲಿ ಕಾಣುತ್ತಿದ್ದ ಭೈರಾಪುರದ ರಸ್ತೆಯ ಕಡೆಗೆ ನಡೆದೆವು. ರಸ್ತೆ ಅಗಲವಾಗಿತ್ತು. ಭೈರಾಪುರ ಸುಮಾರು ೪೫ ನಿಮಿಷದ ದಾರಿಯಷ್ಟೇ ಆಗಿತ್ತು. ಊರು ತಲುಪುತ್ತಿದ್ದಂತೆಯೇ(೧೧ ಗಂಟೆಗೆ) ನಮಗೆ ತಿಳಿಯಿತು, ಅಲ್ಲಿಗೆ ಇದ್ದ ಒಂದೇ ಬಸ್ಸು ಆಗಷ್ಟೇ ಹೋಗಿತ್ತು. ಮುಂದಿನ ನಿಲ್ದಾಣದಲ್ಲಿ ಬಸ್ಸು ಇರುವ ಸಾಧ್ಯತೆ ಇದ್ದುದರಿಂದ, ಅಲ್ಲಿದ್ದ ಸ್ನೇಹಪರ ಜನರು ನಮಗೆ ಬೇಗನೆ ಓಡುವಂತೆ ತಿಳಿಸಿದರು. ಅವರೂ ಕೂಡ ನಮ್ಮೊಂದಿಗೆ ಓಡುತ್ತಾ, ಶಿಳ್ಳೆ ಹಾಕುತ್ತಾ ಬಂದರೂ ವ್ಯರ್ಥವಾಯಿತು. ಬಸ್ಸು ನಿಲ್ಲಿಸದೇ ಹೋಯಿತು. ಅಲ್ಲಿಂದ ಬೇರೆ ಸಂಚಾರ ವ್ಯವಸ್ಥೆ ಇಲ್ಲದಿದ್ದ ಕಾರಣ, ನಾವು ಗೌಡರಹಳ್ಳಿಯವರೆಗೆ ನಡೆದು, ಅಲ್ಲಿಂದ ಬಸ್ ಹಿಡಿಯುವುದು ಒಳಿತೆಂದು ನಡೆಯುತ್ತಿರುವಾಗ ನಮಗೆ ನಮ್ಮ ದಾರಿಯಲ್ಲೆ ಹೊಗುತ್ತಿದ್ದ ಟ್ರಾಕ್ಟರೊಂದು ಸಿಕ್ಕಿತು. ಆತ ನನ್ನನ್ನು ಗುರುತಿಸಿದ!!!. ನಾವು ಒಂಬತ್ತು ಗುಡ್ಡ ಚಾರಣ ಮುಗಿಸಿ ಹೊಸಕೆರೆಗೆ ಬಂದಾಗ ಆತನೂ ಅಲ್ಲಿದ್ದನಂತೆ !!! ಆಮೇಲೆ ತಿಳಿಯಿತು, ಹೊಸಕೆರೆ ಭೈರಾಪುರದಿಂದ ಕೇವಲ ೫ ಕಿ.ಮೀ. ಸ್ವಲ್ಪ ದೂರದವರೆಗೆ ಟ್ರಾಕ್ಟರ್, ಆಮೇಲೆ ಕಾಲ್ನಡಿಗೆಯಲ್ಲಿ ಗೌಡರಹಳ್ಳಿ ತಲುಪಿ, ಅಲ್ಲಿಂದ ಮೂಡಿಗೆರೆಗೆ ಬಸ್ನಲ್ಲಿ ಹೋಗಿ, ರಾತ್ರಿಗೆಲ್ಲಾ ಬೆಂಗಳೂರಿನಲ್ಲಿದ್ದೆವು. ಈ ಸುಂದರ ಅನುಭವದ ನಡುವೆ ೨ ಘಟನೆಗಳು ನಮ್ಮ ಮನಸ್ಸಿಗೆ ಬಹಳ ನೋವುಂಟು ಮಾಡಿತು. ನಾವು ಟ್ರಾಕ್ಟರ್‌ನಲ್ಲಿ ಹೋಗುತ್ತಿದ್ದಾಗ, ಎಸ್ಟೇಟ್ ಮಾಲೀಕನಂತೆ ಕಾಣುತ್ತಿದ್ದ ಮಹಾನುಭಾವನೊಬ್ಬ ಜೀಪ್ನಲ್ಲಿ ಎದುರಾದ. ಆತ ಟ್ರಾಕ್ಟರ್ ಚಾಲಕನಿಗೆ ಸಂಜೆಯ ವೇಳೆಗೆಲ್ಲಾ ಒಂದು ಲೋಡ್ ಸೌದೆ ತಂದು ಹಾಕಲು ಹೇಳಿದ.

ಅವರ ಸಂಭಾಷಣೆ:
ಚಾ: ಅಲ್ಲಿಂದ ಸೌದೆ ತೆಗೆಯೋಕ್ಕೆ ಫಾರೆಸ್ಟ್ನೋರು ಬಿಡೋಲ್ಲಾ ಸ್ವಾಮೀ...
ಮ: ಥು... ಈ ಫಾರೆಸ್ಟ್ನೋರು, ದೇಶಾ ಎಲ್ಲಾ ಕಾಡಿದ್ದ್ರೂ ಒಂದು ಕಡ್ಡಿ ಕಿತ್ತರೆ ಊ... ಆಆಆಆ ಅಂತಾರೆ. ಏನಾಗೊಲ್ಲಾ... ತೆಗಿ.... ನಾನು ಹೇಳ್ತೇನೆ.....

ಅಬ್ಬಾ.... ಕಾಡಿನ ಬಗ್ಗೆ ಆತನ ಅಸಡ್ಡೆಯೇ......

೨ನೇ ಘಟನೆ ಗೌಡರಹಳ್ಳಿಯಲ್ಲಿ ನಾವು ಬಸ್ಸಿಗಾಗಿ ಕಾಯುತ್ತಿದ್ದಾಗ.....
ಸ್ಥಳೀಯ : ಎಲ್ಲಿಂದ ಬಂದದ್ದು ??
ನಾನು : ನಾವು ಬೆಂಗಳೂರಿನವರು... ಶಿಶಿಲದಿಂದ ಎತ್ತಿನಭುಜಕ್ಕೆ ಚಾರಣ ಮಾಡಿ ಬಂದಿದ್ದೇವೆ.
ಸ್ಥ : ಅಡ್ಡಿಇಲ್ಲ ಮಾರಾಯ್ರೇ..... ನಾವೇ ಅಲ್ಲಿ ಹೋಗೋಕ್ಕೆ ಹಿಂದೆ ಮುಂದೆ ನೋಡ್ತೀವಿ.... ಅಲ್ಲಿ ಮಂಕಿನ ಗಿಡ ಅಂತ ಇರುತ್ತೆ. ಅದು ತಾಕಿದ್ರೆ... ದಾರೀನೇ ಗೊತ್ತಾಗೊಲ್ಲಾ.... ನಾನೇ ೩ ದಿನ ದಾರಿ ತಿಳೀದೇ ಅಲೆದಿದ್ದೇನೆ....
ನಾನು : ನಿಮ್ಮ ಕೆಲ್ಸ ಏನು?
ಸ್ಥ : ನಾನು ಟಿಂಬರ್ ಮರ್ಚಂಟ್...!!! ಟಿಂಬರ್ ಹುಡುಕಿ ಕೊಂಡು ಹೋಗಿದ್ದೆ. ಇಲ್ಲಿ ತುಂಬಾ ಒಳ್ಳೆ ಸೀನರಿ ಎಲ್ಲಾ ಇದೆ. ಮುಂದಿನ ಸಲ ಬನ್ನಿ... ಎಲ್ಲಾ ತೋರಿಸ್ತೀನಿ. ಶಿಕಾರೀನೂ ಮಾಡಬಹುದು....
ನಾನು : ಛೆ... ಛೆ... ನಾವು ಅಂತಹವರಲ್ಲಾ... ಶಿಕಾರಿಯೆಲ್ಲಾ ಮಾಡೋಲ್ಲಾ....
ಸ್ಥ : ಮತ್ತೆ.... ಬರೀ ಸೀನರಿ ನೋಡೋದು... ಬರೋದು... ಅಷ್ಟೇಯಾ ?!?!?!
ನಾನು : ಹೌದು.... ನಾವು ಪ್ರಕೃತಿಯ ಆರಾಧಕರು....
ಸ್ಥ : ನಿಮ್ದೊಳ್ಳೇ ಕಥೆ..... (ನಗು)...

ನಂತರ ಆತ ಹೊರಟು ಹೋದ.... ಆದರೆ... ಪ್ರಕೃತಿಯ ಮಕ್ಕಳ ಈ ವರ್ತನೆ ಸರಿಯೇ????

ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rating
No votes yet

Comments