ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
ಈ ಗಾದೆ ಕನ್ನಡಿಗರಿಗೆಲ್ಲಾ ಪರಿಚಿತ. ರೈತರಂತೂ ಇದನ್ನು ಅಕ್ಷರಾರ್ಥದಲ್ಲೇ ಕಲ್ಪಿಸಿಕೊಂಡು ಸ್ವಾರಸ್ಯವನ್ನು ಗ್ರಹಿಸಿಯಾರು. ಒಂದು ವಸ್ತುವನ್ನು ಇಬ್ಬರು ಎರಡು ಪರಸ್ಪರ ಭಿನ್ನ ದಿಕ್ಕುಗಳಿಗೆ ಎಳೆದರೆ ಅದು ಒಂದಿಂಚೂ ಅಲುಗದು ಎಂಬುದನ್ನು ಈ ಗಾದೆ ಧ್ವನಿಸುತ್ತದೆ. ಇನ್ನೂ ಸರಳಗೊಳಿಸಿದರೆ ಇಬ್ಬರ ಮೊಂಡುವಾದಗಳು ಅಥವಾ ಇಬ್ಬರ ವ್ಯರ್ಥ ಪ್ರಯತ್ನಗಳಿಗೆ ಇದು ರೂಪಕವಾಗಬಹುದು. ಈ ಸರಳ ಗ್ರಹಿಕೆಗಳ ಆಚೆಗೆ ಹೋಗಿ ಈ ಗಾದೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರೆ...?
ಮೊದಲನೆಯದಾಗಿ ಎತ್ತು ಮತ್ತು ಕೋಣಗಳು ಏನನ್ನು ಎಳೆಯುತ್ತಿವೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. ವಿಶ್ಲೇಷಣೆಯ ಅನುಕೂಲಕ್ಕೆ ಇವರೆಡೂ ಸೇರಿ ಒಂದು ಗಾಡಿಯನ್ನು ಎಳೆಯುತ್ತಿವೆ ಎಂದು ಭಾವಿಸಿ ಮುಂದುವರಿಯೋಣ.
ಮುಂದಿನ ಪ್ರಶ್ನೆ ಇರುವುದು ಕೋಣ-ಎತ್ತುಗಳ ಜೋಡಿಯನ್ನು ಗಾಡಿಗೆ ಕಟ್ಟಿ ನೀರಿರುವ ಜಾಗಕ್ಕೆ ಅದನ್ನು ತಂದದ್ದೇಕೆ?
ಏನೋ ಹಾಗಾಯಿತು ಎಂಬ ಸಮಜಾಯಿಶಿ ಕೊಟ್ಟೆವು ಎಂದುಕೊಳ್ಳೋಣ. ಮತ್ತೆಯೂ ಪ್ರಶ್ನೆಗಳು ಮುಗಿಯುವುದಿಲ್ಲ. ಎತ್ತು ಗಾಡಿಯನ್ನು ಎಳೆಯಲು ಪ್ರಯೋಗಿಸುತ್ತಿರುವ ಬಲದ ಪ್ರಮಾಣ, ಹಾಗೆಯೇ ಕೋಣದ ಬಲ ಇದಾದ ನಂತರ ಗಾಡಿಯ ಭಾರ, ಅದಕ್ಕೆ ಅಳವಡಿಸಲಾಗಿರುವ ಚಕ್ರದ ವ್ಯಾಸ. ಘರ್ಷಣೆ ಹೀಗೆ ಹಲವು ಸೂಕ್ಷ್ಮ ವಿಚಾರಗಳನ್ನು ಲೆಕ್ಕ ಹಾಕುತ್ತಲೇ ಹೋಗಬಹುದು. ಈ ಎಲ್ಲಾ ಲೆಕ್ಕಾಚಾರಗಳ ಫಲಿತಾಂಶವಾಗಿ ಗಾಡಿ ಏರಿಯ ಕಡೆಗೆ ಚಲಿಸಿತು ಅಥವಾ ನೀರಿನ ಕಡೆಗೆ ಚಲಿಸಿತು ಎಂಬ ಸ್ಪಷ್ಟ ಉತ್ತರ ಸಿಗುತ್ತದೆ. ಆದರೆ ಈ ಉತ್ತರದಿಂದ ಆದ ಪ್ರಯೋಜನವೇನು?
ವೈಜ್ಞಾನಿಕ ಕೃಷಿಯ ಆರಂಭದ ದಿನದಿಂದಲೂ ಇಂಥದ್ದೊಂದು ಪ್ರಶ್ನೆಯನ್ನು ನಾವು ಎದುರಿಸುತ್ತಲೇ ಇದ್ದೇವೆ. ಭೂಮಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯುತ್ತದೆ ಎಂಬ ಸರಳ ಸತ್ಯವನ್ನು ಸಂಕೀರ್ಣವಾಗಿ ಗ್ರಹಿಸಲು ಹೊರಟೆವು. ಪರಿಣಾಮವಾಗಿ ನಾವು ಮಣ್ಣಿನಲ್ಲಿ ಇರಬೇಕಾದ ರಾಸಾಯನಿಕಗಳ ಬಗ್ಗೆ ತಿಳಿದುಕೊಂಡೆವು. ಮೊಳಕೆಯೊಡೆಯಲು ಅವಶ್ಯವಿರುವ ರಾಸಾಯನಿಕ ಇಲ್ಲ ಎಂದಾದಾಗ ಆ ರಾಸಾಯನಿಕವನ್ನು ಭೂಮಿಗೆ ಸೇರಿಸಿದೆವು. ಇವುಗಳ ಮಧ್ಯೆ ವೈಜ್ಞಾನಿಕ ಕೃಷಿಯನ್ನು ಆರಂಭಿಸುವ ಮೊದಲೂ ಕೃಷಿಯಿತ್ತು ಮತ್ತು ಆಗಲೂ ಬೀಜ ಮೊಳಕೆಯೊಡೆಯುತ್ತಿತ್ತು ಎಂಬುದನ್ನು ಮರೆತಿದ್ದೆವು.
ಈ ಬಗೆಯ ವಿಸ್ಮೃತಿ ಸೃಷ್ಟಿಸುವ ಗೊಂದಲಗಳು ಹೇಗಿವೆ ಎಂಬುದನ್ನು ಪ್ರತಿಯೊಬ್ಬರೂ ಅನುಭವಿಸುತ್ತಿದ್ದೇವೆ. ಈ ಗೊಂದಲದಿಂದ ಹೊರಬರಲು ಹೆಚ್ಚು ಕಷ್ಟ ಪಡಬೇಕಿಲ್ಲ. ಸಹಜವಾಗಿ ಇದ್ದುಬಿಟ್ಟರೆ ಸಾಕಾಗುತ್ತದೆ. ಹಾಗಾದರೆ ಪ್ರಕೃತಿ ಅಷ್ಟು ಸರಳವೇ? ಖಂಡಿತವಾಗಿಯೂ ಅಲ್ಲ. ಪ್ರಕೃತಿಯ ಕುರಿತ ನಮ್ಮ ಗ್ರಹಿಕೆಯನ್ನು ತಿರುಗು ಮುರುಗಾಗಿಸಿಕೊಂಡರೆ ಇದು ಅರ್ಥವಾಗುತ್ತದೆ.
ನಾಥ ಪಂಥದ ಸಂತರು ಈ ಬಗೆಯ ಹೇಳಿಕೆಗಳಿಗೆ ಪ್ರಸಿದ್ಧರು. ಇದನ್ನು ಉಲಟ್ ಭಾಂಸಿ ಎನ್ನುತ್ತಾರೆ. ಸಂತ ಕಬೀರನ ಉಲಟ್ ಭಾಂಸಿ ಪ್ರಕೃತಿಯ ಕುರಿತ ಗ್ರಹಿಕೆ ಹೇಗಿರಬೇಕು ಎಂಬುದಕ್ಕೆ ಮಾರ್ಗದರ್ಶಿಯಾಗಬಹುದು.
ಏಕ್ ಅಚಂಛಾ ದೇಖರೆ ಭಾಯಿ, ಠಾಢಾ ಸಿಂಹ ಚರಾವೈ ಗಾಇ
ಪಹಲೇ ಪೂತ ಪೀಚೆ ಮಾಇ ಭಾಯಿ, ಚೇಲಾಕೆ ಗುರು ಲಾಗೈ ಪಾಯಿ
ಹಸುವನ್ನು ಸಿಂಹ ಸಾಕುತ್ತದೆ. ಮಗನಿಂದಾಗಿ ತಾಯಿ ಇದ್ದಾಳೆ. ಶಿಷ್ಯನಿಂದಾಗಿ ಗುರುವಿದ್ದಾನೆ ಎನ್ನುವ ಈ ದ್ವಿಪದಿ ನೈಸರ್ಗಿಕ ಸಂಬಂಧಗಳನ್ನು ಸ್ಪಷ್ಟವಾಗಿ ಹೇಳುತ್ತದೆ. ಒಂದು ಸಿಂಹ ಬದುಕಿದೆ ಎಂದಾದರೆ ನೂರಾರು ಹಸುಗಳು, ಆ ಹಸುಗಳು ತಿನ್ನಲು ಬೇಕಿರುವ ಹುಲ್ಲು, ಆ ಹುಲ್ಲು ಬೆಳೆಯುವ ಭೂಮಿ ಎಲ್ಲವೂ ಇದೇ ಎಂದರ್ಥ. ಹಾಗಾಗಿಯೇ ಸಿಂಹ ಹಸುವನ್ನು ಸಾಕುತ್ತದೆ!
ಇಸ್ಮಾಯಿಲ್
Comments
ಕಬೀರರ ಕಾಣಿಕೆ