ಎರಡು ವಜ್ರಗಳು ಮತ್ತು ಯೇಸು ಕ್ರಿಸ್ತನ ಹುಟ್ಟು
ಇಂದು ಬೆಳಗ್ಗೆ ಎರಡು ವಜ್ರಗಳು ದೊರಕಿದ್ದವು ನನಗೆ. ಒಂದು ನಾಕು ಕ್ಯಾರಟ್, ಒಂದು ಎರಡು ಕ್ಯಾರಟ್. ಹೋಗಿ ಎತ್ತಿಕೊಳ್ಳುವಷ್ಟರಲ್ಲಿ, ಹಾಳು ಸೂರ್ಯ ಮೇಲೆ ಬರತೊಡಗಿದ ;)
ಹೌದು. ನಾನು ಮಾತಾಡತೊಡಗಿದ್ದು ಇಂದು ನಡೆದ ಗುರು-ಶುಕ್ರ ಗಳ ಗ್ರಹಕೂಟವನ್ನ ! ೨೦೦೮ರ ಮೊದಲ ಗ್ರಹಕೂಟ (conjunction) ಇಂದು ಇತ್ತು. ಅದರ ಬಗ್ಗೆ ಮೊದಲೇ ಬರೆಯಬೇಕೆಂದಿದ್ದೆ. ಆದರೆ, ಏಕೋ, ಸಂಪದಿಗರಿಗೆ ಆಕಾಶವೀಕ್ಷಣೆ ಬಗ್ಗೆ ಹೆಚ್ಚು ಅಕ್ಕರೆ ಇದೆಯೋ ಇಲ್ಲವೋ ಎಂಬ ಹಿಂಜರಿಕೆ ಒಂದುಕಡೆ ಆದರೆ, ಮತ್ತೊಂದೆಡೆ ಹೋದ ತಿಂಗಳು ಕ್ವಾಡ್ರಾಂಟಿಡ್ಸ್ ಉಲ್ಕಾವರ್ಷದ ದಿನ ಆದ ಗತಿಯೇ ಇಂದೂ ಆಗಿ, ಮೋಡ ಕವಿದು (ನನಗೆ) ನಿರಾಸೆಯಾದರೆ ಎನ್ನುವ ಯೋಚನೆ ಇನ್ನೊಂದು ಕಡೆ. ಅಂತೂ ಇಂತೂ ಮೊದಲು ಬರೆಯದೇ ಹೋದೆ.
ಆದರೆ, ಅದು ಹೇಗೋ ವಾರದಿಂದ ಹಿಡಿದ ಮಳೆರಾಯ, ಈ ಮುಂಜಾವು ನಾನೆದ್ದಾಗ ಬಿಡುಗಡೆ ಕೊಟ್ಟಿದ್ದ. ಹೊರ ಹೋಗಿ ನೋಡಿದರೆ, ಗುರು-ಶುಕ್ರ ಇಬ್ಬರೂ ಪಕ್ಕ ಪಕ್ಕ ಕೈ ಹಿಡಿದು ನಲಿಯುತ್ತಿದ್ದಾರೆ :) ನನಗಂತೂ ಬಹಳ ಖುಷಿಯಾಯಿತು.
ಶುಕ್ರ, ಈಗ ಭೂಮಿಗೆ ಹತ್ತಿರವಾಗಿರುವುದರಿಂದ ಸುಮಾರು -೪ ರ ಕಾಂತಿಯಿಂದ ಹೊಳೆಯುತ್ತಿದೆ. ಗುರುವೂ -೨ರ ಕಾಂತಿಯಿಂದ ಹೊಳೆಯುತ್ತಿದೆ. ಆಕಾಶಕಾಯಗಳ ಕಾಂತಿಯನ್ನು ಅಂಕೆಯಲ್ಲಿ ಹೇಳುವಾಗ, ಅದು ಕಡಿಮೆ ಇದ್ದಷ್ಟೂ, ಪ್ರಕಾಶ ಹೆಚ್ಚು. ( -೪ , -೨ ಕ್ಕಿಂತ ಸಣ್ಣ ಅಂಕೆ ಎನ್ನುವುದನ್ನು ಮರೆಯಬೇಡಿ). ಬರಿಗಣ್ಣಿಗೆ ಕಾಣುವ ಅತಿ ಪ್ರಕಾಶಮಾನವಾದ ತಾರೆ -೧.೫ರ ಕಾಂತಿ ಹೊಂದಿದೆ.
ಈ ವಿಷಯಗಳಿಗೂ ಯೇಸುಕ್ರಿಸ್ತನಿಗೂ ಏನು ಸಂಬಂಧ? ಇಮಾಂ ಸಾಬರಿಗೂ, ಗೋಕುಲಾಷ್ಟಮಿಗೂ ಇದ್ದಷ್ಟೇ ಎಂದಿರಾ?
ಕ್ರಿಸ್ತನು ಹುಟ್ಟಿದ ಸಮಯದಲ್ಲಿ, ಪೂರ್ವ ದಿಕ್ಕಿಂದ ಬಂದ ಮೂರು ಮೇಧಾವಿಗಳು ಪ್ರಕಾಶಮಾನವಾದ ಕ್ರಿಸ್ಮಸ್ ತಾರೆಯನ್ನು ಹಿಂಬಾಲಿಸಿ ಬಂದರು ಎನ್ನುವ ಕಥೆ ಇದೆಯಲ್ಲ - ಆ ಕ್ರಿಸ್ಮಸ್ ತಾರೆ-( ಸ್ಟಾರ್ ಆಫ್ ಬೆಥ್ಲೆಹೆಮ್ ), ಗುರು ಶುಕ್ರರು ಪರಸ್ಪದ ಬಹಳ ಹತ್ತಿರದಲ್ಲಿ ಕಂಡ ಒಂದು ಗ್ರಹಕೂಟ ಎನ್ನುವ ಮಾತನ್ನು ಹಲವು ವಿದ್ವಾಂಸರು ಮುಂದಿಟ್ಟಿದ್ದಾರೆ. ಈ ಗ್ರಹಕೂಟ ಕ್ರಿ.ಪೂ. ಮೂರನೇ ವರ್ಷದಲ್ಲಿ ನಡೆದಿತ್ತು.
ಗುರು-ಶುಕ್ರ ಗ್ರಹಕೂಟಗಳು ಅಂತಹ ಅಪರೂಪವಲ್ಲದಿದ್ದರೂ, ಇವತ್ತು ನಡೆದ ಗ್ರಹಕೂಟ ಸ್ವಲ್ಪ ವಿಶೇಷವೇ ಆಗಿತ್ತು. ಏಕೆಂದರೆ ಎರಡರ ನಡುವೆ ಅರ್ಧ ಡಿಗ್ರಿ ಅಂತರ ಮಾತ್ರ, ಮತ್ತೆ ಸೂರ್ಯನಿಂದ ಸುಮಾರು ಮೂವತ್ತು ಡಿಗ್ರಿ ದೂರದಲ್ಲಿ ನಡೆದ ಇಂತಹ ಗ್ರಹಕೂಟವನ್ನು ಮತ್ತೆ ನೋಡಲು ನಾವು ಸುಮಾರು ೨೦೧೪ರ ವರೆಗೆ ಕಾಯಬೇಕಾಗುತ್ತೆ.
-ಹಂಸಾನಂದಿ
Comments
ಉ: ಎರಡು ವಜ್ರಗಳು ಮತ್ತು ಯೇಸು ಕ್ರಿಸ್ತನ ಹುಟ್ಟು