"ಎಲ್ಲರಿಗಾಗಿ ವೇದ"- ವೇದಾಭಿಮಾನಿಗಳ ಸಮ್ಮೇಳನ
ಒಂದು ವಿಚಾರವು ನನ್ನ ತಲೆಯಲ್ಲಿ ಹೊಕ್ಕಿ ಆರು ತಿಂಗಳಾಗಿದೆ. ಇನ್ನು ಅದನ್ನು ಹೊರಹಾಕದಿರಲಾರೆ. ಒಂದು ವೇದಾಭಿಮಾನಿಗಳ ರಾಜ್ಯ ಸಮಾವೇಶ ಮಾಡಬೇಕು. ಈ ವರಗೆ ಸಾಕಷ್ಟು ವೇದ ಸಮ್ಮೇಳನ ಗಳಾಗಿವೆ. ಕೆಲವಕ್ಕೆ ಅಂತರಾಷ್ಟ್ರೀಯ ಸಮ್ಮೇಳನ, ಕೆಲವಕ್ಕೆ ರಾಷ್ಟ್ರೀಯ ಸಮ್ಮೇಳನ..ಎಂದೆಲ್ಲಾ ಹೆಸರು ಕೊಡಲಾಗಿದೆ. ಅವುಗಳಲ್ಲಿ ಪಾಲ್ಗೊಳ್ಳುವವರು ಬಹುಪಾಲು ವಿದ್ವಾಂಸರು. ನಮ್ಮಂತವರು ಬೆರಳೆಣಿಕೆಯಲ್ಲಿ ಕಾಣಬಹುದು. ನಾಲ್ಕೂ ವೇದಗಳ ಬಗ್ಗೆ ಭಾಷಣಗಳು ನಡೆಯುತ್ತವೆ. ವೇದದ ಹಿರಿಮೆಯನ್ನು ಕೊಂಡಾಡಲಾಗುತ್ತದೆ. ನಮ್ಮ ಗಡಿದಾಟಿದ ಜನರಿರುತ್ತಾರೆಂದು ಭಾವಿಸಿ ಸಮ್ಮೇಳನವು ಆಂಗ್ಲಭಾಷೆಯಲ್ಲಿ ನಡೆಯುತ್ತವೆ. ನಮ್ಮಂತವರು ಬಂದದಾರಿಗೆ ಸುಂಕವಿಲ್ಲವೆಂದು ಹಿಂದಿರುಗುತ್ತೇವೆ.
ಹಾಗಾದರೆ ನನ್ನ ತಲೆಯಲ್ಲಿ ಕಾಡುತ್ತಿರುವ ವಿಚಾರವೇನು?
- ವೇದವು ಕೇವಲ ಪಂಡಿತರಿಗಾಗಿ ಅಲ್ಲ, ಅದು ಎಲ್ಲರಿಗಾಗಿ
- ವೇದವು ಕೇವಲ ಪೂಜಾ ಮಂತ್ರಗಳಲ್ಲ. ಅದು ಜೀವನ ವಿಜ್ಞಾನ.
- ವಿಜ್ಞಾನದ ಹೆಸರು ಬಂದಕೂಡಲೇ ವೇದಕಾಲದಲ್ಲಿ ವಿಮಾನ ಇತ್ತು, ಇಂದಿನ ಆಧುನಿಕ ರಾಕೆಟ್ ಗಳ ಬಗ್ಗೆಯೂ ವೇದದಲ್ಲಿದೆ.....ಈ ಚರ್ಚೆಗಳಿಂದ ಸಾಮಾನ್ಯರ ಜೀವನಕ್ಕೆ ಸಹಾಯವಾಗಲಾರದು.ಆದ್ದರಿಂದ ಈವಿಷಯಗಳ ಚರ್ಚೆ ಸಮ್ಮೇಳನದಲ್ಲಿ ಇರುವುದಿಲ್ಲ.
- ಪ್ರಧಾನವಾಗಿ ನೆಮ್ಮದಿಯ ಬದುಕಿನ ಸೂತ್ರಗಳ ಬಗ್ಗೆ ಅರಿವು ಮೂಡಿಸುವ ಉಪನ್ಯಾಸಗಳು ಸಮ್ಮೇಳನದಲ್ಲಿರಬೇಕು.
- ವೇದದಲ್ಲಿರುವ ಸಾಮಾಜಿಕ ಸಾಮರಸ್ಯಕ್ಕೆ ಪೂರಕವಾದ ನೂರಾರು ಮಂತ್ರಗಳ ಬಗ್ಗೆ ಅರಿವು ಮೂಡಿಸುವುದು.
- ಮೂರ್ತಿ ಪೂಜೆಯ ಬಗ್ಗೆ ಚರ್ಚೆ ಅಗತ್ಯವಿಲ್ಲ. ದೇವರ ವಿಚಾರ ಬಂದಾಗ ಇಡೀ ಸಮ್ಮೇಳನದಲ್ಲಿ ಅದಕ್ಕೇ ಸಮಯ ಸಾಕಾಗುವುದಿಲ್ಲ.
- ಇಡೀ ಬ್ರಹ್ಮಾಂಡಕ್ಕೆ ಸೂತ್ರದಾರಿಯಾದ ಒಂದು ಶಕ್ತಿಗೆ "ಭಗವಂತ" ಎನ್ನಬಹುದು. ಅಷ್ಟೆ. ಅವನಿಗೆ ಎಷ್ಟು ಕೈಯ್ಯಿದೆ? ಎಷ್ಟು ತಲೆಯಿದೆ? ಈ ಚರ್ಚೆ ಬೇಡ
- ಎಲ್ಲರೂ ಮಾನವ ಜಾತಿ.ಎಲ್ಲರಿಗೂ ಒಬ್ಬನೇ ಭಗವಂತ.ಯಾರೂ ಮೇಲಲ್ಲ, ಯಾರೂ ಕೀಳಲ್ಲ...ಎಂಬ ಭಾವನೆ ಇರುವವರು ಸಮ್ಮೇಳನಕ್ಕೆ ಅಪೇಕ್ಷಿತರು.
- ಈ ಮೇಲಿನ ವಿಚಾರಗಳನ್ನು ಗಮನಿಸಿದ ಮೇಲೆ ಇದು ಜಾತಿ ಸಮ್ಮೇಳನವಲ್ಲಾ, ಎಂಬ
ತೀರ್ಮಾನಕ್ಕೆ ಬರಬಹುದಲ್ಲವೇ?
10. ಪಂಡಿತರು ಈ ಸಮ್ಮೇಳನಕ್ಕೆ ಬರಬೇಡವೇ? ಬರಬೇಕು.ಅವರೇ ಮಾರ್ಗದರ್ಶಿಗಳು.
ವೇದದಲ್ಲಿರುವ ಸಾಮರಸ್ಯದ ಸೂತ್ರಗಳು, ಜೀವನ ವಿಜ್ಞಾನ, ರಾಜಕೀಯ ಸೂತ್ರಗಳು,
ಆಹಾರ,ಆರೋಗ್ಯ,ಅಧ್ಯಾತ್ಮ , ವಿದ್ಯೆ...ಮುಂತಾದ ಮನುಷ್ಯನ ಸರ್ವತೋಮುಖ
ಬೆಳವಣಿಗೆಗೆ ಸಹಕಾರಿಯಾಗಬಲ್ಲ, ಸಮಾಜದ ಸಾಮರಸ್ಯ ಹೆಚ್ಚಿಸಬಲ್ಲ,
ಎಲ್ಲರನ್ನೂ ಒಂದು ಮಾಡಬಲ್ಲ ಮಂತ್ರಗಳನ್ನು ಆಯ್ದು ಅವುಗಳನ್ನು ಸರಳವಾಗಿ
ಸಾಮಾನ್ಯರಿಗೆ ಮುಟ್ಟುವಂತೆ ತಿಳಿಸುವ ಕೆಲಸವನ್ನು ಪಂಡಿತರು ಮಾಡಬೇಕು.
11. ಇಷ್ಟೆಲ್ಲಾ ಹೇಳಿದ ಮೇಲೆ ಇದನ್ನೆಲ್ಲಾ ಒಂದು ಸಭೆಯಲ್ಲಿ ಕುಳಿತು ಚರ್ಚಿಸಿದ್ದೇನೆಂದು ಭಾವಿಸಬೇಡಿ.ಇದನ್ನು ಯಾರು ಮೊದಲು ಓದುತ್ತೀರೋ, ಯಾರು ಪ್ರತಿಕ್ರಿಯಿಸುತ್ತೀರೋ, ನಿಮ್ಮಗಳೊಡನೆಯೇ ಮೊದಲ ಸಭೆ. ಅದು ಬೆಂಗಳೂರಿ ನಲ್ಲಾಗ ಬಹುದು, ಮೈಸೂರಿನಲ್ಲಾಗಬಹುದು, ಮಂಗಳೂರಿನಲ್ಲಾಗಬಹುದು, ಹಾಸನ ಯಾವಾಗಲೂ ಸಿದ್ಧ.
12.ನೀವು ಹೇಗೆ ಸಹಕರಿಸಬಹುದು?
೧. ನೀವು ಪಾಲ್ಗೊಳ್ಳುವುದು.
೨. ವಿದ್ವಾಂಸರುಗಳ ವಿಳಾಸ ಕೊಡುವುದು
೩. ವಿಷಯ ಸೂಚಿಸುವುದು
ಇನ್ನು ಒಂದು ವರ್ಷ ಸಮಯ ಇಟ್ಟುಕೊಂಡು ಸಮ್ಮೇಳನ ನಡೆಸುವುದಂತೂ ನಿಶ್ಚಿತವೇ. ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯಿಂದಲೂ 10 ರಿಂದ 15 ಜನರಾದರೂ ಪಾಲ್ಗೊಳ್ಲಬೇಕೆಂಬುದು ನನ್ನ ಅಪೇಕ್ಷೆ. ಇಂತಹಾ ವಿಚಾರಕ್ಕೆ ಸ್ಪಂದಿಸುವವರು ಹಿರಿಯರೇ ಹೆಚ್ಚು ಎಂಬುದು ಎಲ್ಲರೂ ಒಪ್ಪುವ ಮಾತು. ಆದರೂ ನನ್ನದೊಂದು ಸೂತ್ರವಿದೆ. ಬರುವ ಒಬ್ಬ ಹಿರಿಯರು 40 ವಯೋಮಾನದ ಒಳಗಿನ ಒಬ್ಬರನ್ನು ಕರೆ ತರಬೇಕು. ಕೇವಲ ಸಮ್ಮೇಳನಕ್ಕಾಗಿ ಬರುವವರಿಗೆ ಶುಲ್ಕ. ಇದೇ ಕೆಲಸಕ್ಕೆ ಸಮಯ ಕೊಡುತ್ತೀನೆನ್ನುವವರಿಗೆ ಶುಲ್ಕವಿಲ್ಲ.
ದಯಮಾಡಿ ನಿಧಾನವಾಗಿ ಓದಿ ನಿಮ್ಮ ಸಲಹೆಯನ್ನು vedabharatihassan@gmail.com ಗೆ ಕಳಿಸಿ