ಎಲ್ಲರಿಗಾಗಿ ವೇದ-೪

ಎಲ್ಲರಿಗಾಗಿ ವೇದ-೪

ಎರಡು ಪ್ರತಿಕ್ರಿಯೆಗಳು:

“ಎಲ್ಲರಿಗಾಗಿ ವೇದ” ಲೇಖನ ಸರಣಿಯನ್ನು  ಓದಿದ   ಸಿಂಗಪುರದಲ್ಲಿರುವ ಮೈಸೂರಿನ ನಾಗೇಶ್  ತಾವು ಈ ಲೇಖನವನ್ನು ಹೇಗೆ ಅರ್ಥಮಾಡಿಕೊಂಡೆ, ಎಂಬುದನ್ನು ಕವನದ ಮೂಲಕ ವ್ಯಕ್ತಪಡಿಸಿದ್ದಾರೆ.    

ಹರಿಹರಪುರ ಶ್ರೀಧರರೆ, ನಿಮ್ಮ ಲೇಖನ ಓದಿ ನಾನು ವರ್ಣವನ್ನ ಅರ್ಥ ಮಾಡಿಕೊಂಡಿದ್ದು ಹೀಗೆ :-)

ಜಾತಿ ವರ್ಣ ಏಕಗಣ, ಇಡದ ಅಜಗಜಾಂತರ ಜನಮಾನಸ
ನಿಜದಿ ಹುಟ್ಟಿನಿಂದ ಬಂದ ಜಾತಿ ಸಾಯೋತನಕದ ದಿರುಸ
ಮನುಜ ಪ್ರಾಣಿ ಪಶು ಪಕ್ಷಿ ಸಂಕುಲವೆ ಜಾತಿ, ಆಯ್ಕೆಗೆ ವರ್ಣ
ವ್ಯಕ್ತಿ ತಾನಾಯಬಯಸುವ ವೃತ್ತಿ, ಕಟ್ಟಿದ ಪದವಿ ಜೀವಋಣ!

 

ನಿಜ ಬ್ರಾಹ್ಮಣ ಬ್ರಹ್ಮಜ್ಞಾನಿ ನಿರಂತರ ಪ್ರಸಾರ ವೇದಜ್ಞಾನ
ಅಹಿಂಸಕ ಕಾಯಾ ವಾಚಾ ಮನಸಾ ನಡೆನುಡಿ ಅವಧಾನ
ಧ್ಯಾನ ವ್ರತ ನಿಯಮಾದಿ ನಿರತ ತಪೋಬದ್ದ ತಪಸ್ವಿ ಭಾವ
ಶ್ರಮಿಕನೆ ದುಡಿದುಣ್ಣುತ ಸೋಮಾರಿಯಲ್ಲದ ಮನೋಭಾವ!

- ನಾಗೇಶ ಮೈಸೂರು, ಸಿಂಗಪುರ

ಹೈದರಾಬಾದ್ ನಲ್ಲಿರುವ ಶ್ರೀಯುತ ಶ್ರೀಧರಭಂಡ್ರಿಯವರ ಪ್ರತಿಕ್ರಿಯೆ ಕೆಳಗಿನಂತಿದೆ.

 “ಬ್ರಾಹ್ಮಣ ವರ್ಣವನ್ನು ಅನುಸರಿಸುವವನು ಸಮಾಜದಲ್ಲಿ ಇತರರಿಗೆ ಮಾದರಿಯಾಗಿರಬೇಕು; ಏಕೆಂದರೆ ಆ ವರ್ಣವನ್ನು ಎಲ್ಲಾ ವರ್ಣಕ್ಕಿಂತ ಶ್ರೇಷ್ಠ ವರ್ಣವೆಂದು ಪರಿಗಣಿಸಲಾಗಿದೆಯಾದ್ದರಿಂದ. ಆ ವರ್ಣವನ್ನು ಶ್ರೇಷ್ಠ ವರ್ಣವೆಂದು ಪರಿಗಣಿಸಲು ಕಾರಣಗಳು ಅನೇಕವಿವೆ. ಸಾಮಾನ್ಯವಾಗಿ ಬ್ರಾಹ್ಮಣನಾದವನು ವೇದಾಧ್ಯಯನ ಮಾಡುತ್ತಾ ಸಮಾಜವನ್ನು ಸರಿಯಾದ ದಾರಿಯಲ್ಲಿ ನಡೆಸಬೇಕೆಂದಿದೆ. ಅವನು ಧನ, ಕನಕ ಅಥವಾ ಇತರ ಯಾವುದೇ ವಿಧವಾದ ಆಸ್ತಿಯನ್ನು ಸಹ ಮಾಡಿಕೊಳ್ಳಬಾರದೆಂದು ಹೇಳುತ್ತಾರೆ. ಹಾಗೆ ಮಾಡಿದಲ್ಲಿ ಅವನ ದೃಷ್ಟಿಯೆಲ್ಲಾ ಅದನ್ನು ಕಾಪಾಡಿಕೊಳ್ಳುವುದರ ಮೇಲೆ ಹೋಗಿ ಅವನು ಪೂರ್ಣ ಸಮಯವನ್ನು ಅಧ್ಯಯನದ ಮೇಲೆ ಕ್ರೋಢೀಕರಿಸಲಾರ. ಮತ್ತು ಅವನು ಎಲ್ಲೆಂದರಲ್ಲಿ, ಏನೆಂದರೆ ಅದನ್ನು ತಿನ್ನಬಾರದು. ಇದನ್ನು ಇತರೇ ವರ್ಣಗಳವರಿಗೆ ಸಡಲಿಸಲಾಗಿದೆ ಎನ್ನುವುದನ್ನು ಗಮನಿಸಿ. ವರ್ಣಗಳ ವರ್ಗವು ಕಡಿಮೆಯಾದಂತೆಲ್ಲಾ ಅವರಿಗೆ ವಿಧಿಸಿರುವ ನಿಯಮಗಳು ಸಡಿಲಗೊಳ್ಳುತ್ತವೆ. ಅವನು ದುಡ್ಡಿಗೆ ವಿದ್ಯೆಯನ್ನು ಮಾರಿಕೊಳ್ಳಬಾರದು ಮೊದಲಾದವು. ಅವುಗಳನ್ನು ಇಂದಿನ ಬ್ರಾಹ್ಮಣರು ಎಷ್ಟರ ಮಟ್ಟಿಗೆ ಆಚರಿಸುತ್ತಾರೆನ್ನುವುದು ಬೇರೆ ವಿಷಯ; ಆದರೆ ಆ ವರ್ಣಕ್ಕೆ ನಿಯಮಿಸಿರುವ ವಿಧಿಗಳು ಹೆಚ್ಚು ಕಠಿಣವಾದಂತಹವುಗಳು ಆದ್ದರಿಂದ ಅವರು ಹೆಚ್ಚಿನ ಪರಿಶ್ರಮ ಪಡುವುದರಿಂದ ಅವರಿಗೆ ಹೆಚ್ಚು ಮರ್ಯಾದೆ,ಗೌರವಗಳು ಸಲ್ಲುತ್ತವೆ. ಈ ಬರಹದಲ್ಲಿಯೇ ತಿಳಿಸಿದಂತೆ ಬ್ರಾಹ್ಮಣನು ಕೇವಲ ತನಗಾಗಿ ಜೀವಿಸದೆ ಸಮಾಜದ ಒಳಿತಿಗಾಗಿ ಜೀವಿಸಬೇಕು. ಅವನು ತನ್ನ ಉನ್ನತಿಯೊಂದಿಗೆ ಸಮಾಜದ ಉನ್ನತಿಗಾಗಿಯೂ ಜಪ, ತಪ ಮತ್ತು ಯಜ್ಞ-ಯಾಗಾದಿಗಳನ್ನು ಮಾಡಬೇಕು ಅಲ್ಲದೇ ಸಮಾಜದ ಒಳಿತಿಗಾಗಿ ಎಲ್ಲಾ ವಿಧವಾದ ತ್ಯಾಗಕ್ಕೂ ಸಿದ್ಧನಾಗಿರಬೇಕು ಹಾಗಾಗಿಯೇ ಅವನಿಗೆ ಸಮಾಜದಲ್ಲಿ ಮರ್ಯಾದೆಯೇ ಹೊರತು ಅವನು ದ್ವಿಜನಾಗಿರುವುದರಿಂದ ಎರಡು ಕೊಂಬುಗಳನ್ನು ಬೆಳೆಸಿಕೊಂಡಿರುತ್ತಾನೆಂದಲ್ಲ.
ವಂದನೆಗಳೊಂದಿಗೆ,

- ಶ್ರೀಧರ್ ಬಂಡ್ರಿ

ಈ ಸಂಚಿಕೆಯಲ್ಲಿ ಕ್ಷತ್ರಿಯ ವರ್ಣದ ಕರ್ತವ್ಯಗಳ ಬಗ್ಗೆ ವಿಚಾರ ಮಾಡೋಣ.

ಧೃತವ್ರತಾ: ಕ್ಷತ್ರಿಯಾ ಯಜ್ಞನಿಷ್ಕೃತೋ ಬೃಹದ್ದಿವಾ ಅಧ್ವರಾಣಾಮಭಿಶ್ರಿಯ: |

ಅಗ್ನಿಹೋತಾರ ಋತಸಾಪೋ ಅದ್ರುಹೋಪೋ ಅಸೃಜನ್ನನು ವೃತ್ರತೂರ್ಯೇ ||

[ಋಕ್. 10.66.8]

ಧೃತವ್ರತಾ: = ಸತ್ಯ ಅಹಿಂಸಾದಿ ವ್ರತಗಳನ್ನು ಧರಿಸುವವರೂ

ಯಜ್ಞನಿಷ್ಕೃತ: = ಶುಭಕರ್ಮಗಳಿಂದ ಪವಿತ್ರರಾದವರೂ

ಬೃದದ್ಧಿವಾ: = ಮಹಾತೇಜಸ್ವಿಗಳೂ

ಅಧ್ವರಾಣಾಂ ಅಭಿಶ್ರಿಯ: = ಹಿಂಸಾರಹಿತ ಕರ್ಮಗಳ ಸೌಂದರ್ಯವರ್ಧಕರೂ

ಅಗ್ನಿಹೋತಾರ: = ಅಗ್ನಿಹೋತ್ರವನ್ನು ಮಾಡುವವರೂ

ಋತಸಾಪ: = ಧರ್ಮವನ್ನು ಸ್ತುತಿಸುವವರೂ

ಅದ್ರುಹ: = ದ್ರೋಹಮಾಡದವರೂ

ಕ್ಷತ್ರಿಯಾ: = ಕ್ಷತ್ರಿಯರಾಗಿರುತ್ತಾರೆ.

ವೃತ್ರತೂರ್ಯೇ= ಶತೃ ಸಂಹಾರದಲ್ಲಿ

ಆಪ: ಅಸೃಜನ್ = ಸಾಹಸಕಾರ್ಯ ಮಾಡುತ್ತಾರೆ.

ಭಾವಾರ್ಥ:

ಸತ್ಯ ಅಹಿಂಸಾದಿ ವ್ರತಗಳನ್ನು ಧರಿಸುವವರೂ , ಶುಭಕರ್ಮಗಳಿಂದ ಪವಿತ್ರರಾದವರೂ,  ಮಹಾತೇಜಸ್ವಿಗಳೂ,

ಹಿಂಸಾರಹಿತ ಕರ್ಮಗಳ ಸೌಂದರ್ಯವರ್ಧಕರೂ, ಅಗ್ನಿಹೋತ್ರವನ್ನು ಮಾಡುವವರೂ, ಧರ್ಮವನ್ನು ಸ್ತುತಿಸುವವರೂ, ದ್ರೋಹಮಾಡದವರೂ ಕ್ಷತ್ರಿಯರಾಗಿರುತ್ತಾರೆ. ಅವರು ಶತೃಸಂಹಾರದಲ್ಲಿ ಸಾಹಸದಿಂದ  ಹೋರಾಡಿ ಪ್ರಜಾಪಾಲನೆ ಮಾಡುತ್ತಾರೆ.

ಒಂದೊಂದೂ ವರ್ಣದ ಕರ್ತವ್ಯವನ್ನು ವಿಚಾರಮಾಡುವಾದ ಅದರದರ ಮಹತ್ವವು ನಮಗೆ ಅರ್ಥವಾಗುತ್ತದೆ. ಕ್ಷತ್ರಿಯವರ್ಣದ  ಬಗ್ಗೆ ವಿಚಾರ ಮಾಡುವಾಗ ಕ್ಷತ್ರಿಯರು  ಅದೆಷ್ಟು ಶ್ರೇಷ್ಠ ಗುಣಗಳನ್ನು ಹೊಂದಿರಬೇಕು!! ಒಂದೊಂದಾಗಿ ವಿಚಾರ ಮಾಡೋಣ.

ಸತ್ಯ ಅಹಿಂಸಾದಿ ವ್ರತಗಳನ್ನು ಧರಿಸುವವರು: ಪ್ರಜಾ ರಕ್ಷಣೆ ಮಾಡುವಾಗ ಶತೃಗಳೊಡನೆ ಹೋರಾಟ ಅನಿವಾರ್ಯ.ಹೋರಾಟ ಮಾಡುವಾಗ ಹಿಂಸೆಯಾಗಲಾರದೆ? ಇಲ್ಲಿ ಜಿಜ್ಞಾಸೆ ಎದಿರಾಗುತ್ತದೆ. ಯಾವುದು ಹಿಂಸೆ, ಯಾವುದು ಅಹಿಂಸೆ. ಈ ವಿಚಾರವನ್ನು ಉದ್ದಮಾಡದೆ ಸರಳವಾಗಿ ಹೇಳಬೇಕೆಂದರೆ ಸತ್ಯದ ವ್ರತ ಮಾಡುತ್ತಿರುವವನು ಸತ್ಯಮಾರ್ಗದಲ್ಲೇ ಹೋಗುತ್ತಾನೆ, ಅಲ್ಲವೇ? ಸತ್ಯದ ಮಾರ್ಗದಲ್ಲಿ ಹೋಗುವಾಗ ಅದಕ್ಕೆ ವಿರುದ್ಧವಾಗಿ ಶತೃಗಳು ಧಾಳಿ ಮಾಡಿದರೆ ಆಗ ಮಾಡುವ ಯುದ್ಧ ಕೂಡ “ಹಿಂಸೆ” ಎನಿಸಿಕೊಳ್ಳುವುದಿಲ್ಲ.

ಕ್ಷತ್ರಿಯರು ಕಡ್ಡಾಯವಾಗಿ ಅಗ್ನಿಹೋತ್ರ ಮಾಡಬೇಕು.ಮಹಾ ತೇಜಸ್ವಿಗಳಾಗಿರಬೇಕೆಂದರೆ ಬ್ರಹ್ಮಯಜ್ಞವನ್ನು ನಿಯಮಿತವಾಗಿ ಮಾಡಬೇಕು. ಧರ್ಮದ ಸ್ತುತಿ ಮಾಡಬೇಕೆಂದು ವೇದವು ಹೇಳುತ್ತದೆ. ಅಂದರೆ ಧರ್ಮವನ್ನು ಕೊಂಡಾಡಬೇಕೆಂದಾಗ ಧರ್ಮದ ರಕ್ಷಣೆ ಮಾಡಬೇಕು. ಕ್ಷತ್ರಿಯರು ದ್ರೋಹಮಾಡಬಾರದು. ಯಾವುದೇ ವರ್ಣದವರೂ ಕೂಡ ದ್ರೋಹಮಾಡಬಾರದಾದರೂ ಕ್ಷತ್ರಿಯರ ಬಗ್ಗೆ ವಿಶೇಷವಾಗಿ ಒತ್ತು ಕೊಡಲು ಕಾರಣವೂ ಇದೆ. ರಾಜನೇ ದ್ರೋಹ ಮಾಡಿದರೆ ಪ್ರಜೆಗಳ   ಗತಿಏನು?

Rating
No votes yet

Comments

Submitted by nageshamysore Thu, 06/06/2013 - 16:15

ಶ್ರೀಧರ ಹರಿಹರಪುರರೆ, ಕ್ಷತ್ರಿಯನನ್ನು ಹಿಡಿದಿಡುವ ಪ್ರಯತ್ನ ಈ ಕವನದಲ್ಲಿ :-) - ನಾಗೇಶ ಮೈಸೂರು, ಸಿಂಗಪುರದಿಂದ

ಕ್ಷತ್ರೀಯಧರ್ಮ ಹೋರಾಟ, ಶತೃವಿನಾಶ ಸಕಾರಣ
ಹಿಂಸಾಹಿಂಸ ಜಿಜ್ಞಾಸೆ ಸಹಜ, ಸತ್ಯಮಾರ್ಗವೆ ಘನ
ಬ್ರಹ್ಮ ಯಜ್ಞಾದಿ ಮಗ್ನ, ತೇಜಸ್ವಿ ಮಹಾ ಅಗ್ನಿಹೋತ್ರ
ಸ್ತುತಿಸಿ ಧರ್ಮ ದ್ರೋಹ ಮಾಡದವ, ಮಾದರಿ ಪಾತ್ರ!

Submitted by ritershivaram Sun, 06/09/2013 - 13:25

ಜನ್ನನಾತ್ ಜಾಯತೆ ಶೂದ್ರಃ| ಕರ್ಮಣಾತ್ ಜಾಯತೆ ದ್ವಿಜ:||
ವರ್ಣಾಶ್ರಮ ಧರ್ಮ ಎಂದರೆ ಜಾತಿಸೂಚಕವಲ್ಲ. ಅದು ಗುಣ ಸೂಚಕ. ವ್ಯಕ್ತಿಯನ್ನು ವರ್ಣಿಸುವಾಗ ಗೌರವ ವರ್ಣ ಎನ್ನವ ಹಾಗೆ. ಬ್ರಾಹ್ಮಣರೆಲ್ಲ ಸದ್ಗುಣ ಶಾಲಿಗಳಲ್ಲ. ಹಾಗೇ ಶೂದ್ರರೆಸಿಕೊಂಡವರೆಲ್ಲ ದುರ್ಗುಣರಲ್ಲ. ಹೌದು. ಇದು ವೇದಕಾಲವಲ್ಲ. ತಂತ್ರಜ್ಞಾನದ ದಲ್ಲಿ ಮುಂದುವರೆಯುತ್ತಿರುವ ವೇಗಗತಿಯ ಕಾಲ. ಯಾರೇ ಆಗಲಿ ಅದರ ಹೊಡೆತಕ್ಕೆ ಸಿಕ್ಕು ಹಳೆಯದನ್ನೆಲ್ಲ ಹಳಿಯ ಬಾರದು. ಯಾಕೆಂದರೆ, ಹಿಂದಿನ ಕಾಲದಿಂದಲೂ ಶೂದ್ರರಲ್ಲೂ ವೇದಶಾಸ್ತ್ರ ಪಾರಂಗತರಿದ್ದಾರೆ. ಬ್ರಾಹ್ಣಣರಲ್ಲದ ವಿವೇಕಾನಂದರು ಇದಕ್ಕೆ ಮಾದರಿಯಾಗುತ್ತಾರೆ. ಧರ್ಮದ ಅಂಜಿಕೆ ಬೇರೆಯಲ್ಲ ದೇವರ ಅಂಜಿಕೆ ಬೇರೆಯೇನಲ್ಲ. ಇವೆರಡರ ಅಂಜಿಕೆ ಇರುವಲ್ಲಿ ಮಾನವೀಯತೆ ಮೆರೆಯುತ್ತದೆ ಅಲ್ಲವೇ…