ಎಲ್ಲೆಲ್ಲಿ ನೋಡಲಿ ...

ಎಲ್ಲೆಲ್ಲಿ ನೋಡಲಿ ...

ಮಾಳಿಗೆಯ ಮೇಲವಳು ದಿಕ್ಕುದಿಕ್ಕಲ್ಲವಳು ಹಿಂದುಮುಂದೆಲ್ಲಕಡೆ ಅವಳು
ಮಂಚದಾ ಮೇಲವಳು ಹಾದಿಹಾದಿಯಲವಳು ಅವಳಿಂದದೂರವಿರಲಾಗಿ 
ಹಾಳು ಮನಸಿದಕೇನು ತಿಳಿದೀತು ಅವಳ ಬಿಟ್ಟೇನೊಂದು ಕಾಣದೇನೇ
ಅವಳೆ ಅವಳೇ ಅವಳೆ ಅವಳೆ ಜಗವೆಲ್ಲವಿರೆ ಒಂದಾದೆವೆಂಬುದೆಂತು?

ಸಂಸ್ಕೃತ ಮೂಲ (ಅಮರುಕವಿಯ ಅಮರುಶತಕದಿಂದ):

ಪ್ರಾಸಾದೇ ಸಾ ದಿಶಿ ದಿಶಿ ಚ ಸಾ ಪೃಷ್ಠತರಃ ಸಾ ಪುರಾ ಸಾ
ಪರ್ಯಂಕೇ ಸಾ ಪಥಿ ಪಥಿ ಚ ಸಾ ತದ್ವಿಯೋಈಗಾತುರಸ್ಯ
ಹಂಹೋ ಚೇತಃ ಪ್ರಕೃತಿರಪರಾ ನಾಸ್ತಿ ಮೇ ಕಾಪಿ ಸಾ ಸಾ
ಸಾ ಸಾ ಸಾ ಸಾ ಜಗತಿ ಸಕಲೇ ಕೋsಯಮದ್ವೈತ ವಾದಃ

प्रासादे सा दिशि दिशि च सा पृष्ठतरः सा पुराः सा
पर्यांके सा पथि पथि च सा तद्वियोगातुरस्य
हंहो चेतः प्रकृतिरपरा नास्ति मे कापि सा सा
सा सा सा सा जगति सकले कोsयमद्वैतवादः

-ಹಂಸಾನಂದಿ

ಕೊ: ಮೂಲದ "ಕೋsಯಮದ್ವೈತವಾದಃ" ಎಂಬುದನ್ನು ಕನ್ನಡಕ್ಕೆ ತರುವುದು ಬಹಳ ಕಷ್ಟವೆನಿಸಿತು! ಅದ್ವೈತವೆಂದರೆ, ಎರಡಲ್ಲ, ಒಂದೇ ಎಂದರ್ಥ. ಇಲ್ಲಿ ನಾಯಕನಿಗೆ ನಾಯಕಿ ಹೊರಗಡೆಯೆಲ್ಲ ಕಡೆ ಕಂಡರೂ, ತನ್ನೊಡನೆ ಇಲ್ಲದಿರಲಾಗಿ, ಈ ಅದ್ವೈತವೆನ್ನುವುದು ಹೇಗೆ ಸರಿಯಾದೀತು ಎನ್ನುವುದೇ ನಾಯಕನ ಪ್ರಶ್ನೆ ಎಂಬುದು ಪದ್ಯದ ಭಾವನೆ.

ಕೊ.ಕೊ: ಇದು ಪಂಚಮಾತ್ರಾ ಚೌಪದಿಯ ಒಂದು ಮಾರ್ಪಾಟು ಎಂದು ಹೇಳಬಹುದು. ಅನುವಾದದ ಪ್ರತಿ ಸಾಲಿನಲ್ಲೂ 5/5/5/5/5/5/3 ರೀತಿಯ ನಡಿಗೆಯಿದೆ. ಪ್ರಾಸವನ್ನಿಟ್ಟಿಲ್ಲ.

ಕೊ.ಕೊ.ಕೊ: ಈ ಪದ್ಯಕ್ಕೂ, ಡಾ.ರಾಜ್ ರ ನಾನಿನ್ನ ಮರೆಯಲಾರೆ ಚಿತ್ರಕ್ಕೂ ಏನೇನೂ ಸಂಬಂಧವಿಲ್ಲ ;-) 

Rating
No votes yet