ಏಕಪಾತ್ರಾಭಿನಯ

ಏಕಪಾತ್ರಾಭಿನಯ

ಮನೆ ತುಂಬ ಜನ. ಇಷ್ಟು ದಿನ ಮಲಗೇ ಇರುತ್ತಿದ್ದ ಅಮ್ಮ ಇವತ್ತು ಚಂದ ಡ್ರೆಸ್ ಮಾಡಿಕೊಂಡು, ಹೊಸಾ ಪಾಪುನೆತ್ತಿಕೊಂಡು ಕೂತಿದಾಳೆ. ಬಂದವರೆಲ್ಲರನ್ನು ಮಾತಾಡಿಸುತ್ತ. ಎಲ್ಲರೂ ಪಾಪುವಿನ ಕೆನ್ನೆ ಅಮುಕುವವರೆ. ಚೆನಾಗಿದ್ನಲೆ ಮಗರಾಯ.. ಚಾನ್ಸ್ ಹೊಡೆದ್ ಬಿಟ್ಯಲಾ. ಅಡ್ದಿಲ್ಲೆ ಮನೆಗೊಬ್ಬ ಪುಟ್ಟ ಯಜಮಾನ.. ಹಂಗೆ ಹಿಂಗೆ. ಇವಳು ದೊಡ್ಡ ದೊಡ್ಡ ಕಂಬಗಳ ನಡುಮನೆಯ ಕತ್ತಲ ಕಂಬವೊಂದರ ಹಿಂದೆ ರೇಷ್ಮೆ ಫ್ರಾಕೊಂದು ಹಾಕಿಕೊಂಡು.. ಕೆನ್ನೆಗೆ ಕೈ ಕೊಟ್ಟು..ಯೋಚನೆಯಲ್ಲಿ ಮುಳುಗಿ..ಅಮ್ಮಮ್ಮ ನೋಡಿದವಳೆ ಹತ್ತಿರ ಬಂದು ಏನಾತೆಂದು ಕೇಳುವುದಕ್ಕಿಲ್ಲ. ಕಣ್ಣಕೊಳದ ಹನಿ ತುಳುಕಿಬಿಟ್ಟಿತು. ಈಗ ತಮ್ಮ ಬಂದನಲ್ಲ ನಾನಿನ್ಯಾರಿಗೂ ಬ್ಯಾಡ ಅಲ್ದಾ? ಯಾರೂ ನನ್ ಕೆನ್ನೆ ಹಿಂಡದೇ ಇಲ್ಲೆ.. ಅಮ್ಮಮ್ಮನಿಗೆ ತಡೆಯಲಾಗದ ನಗು. ಚಿಕ್ಕಿ ಹೇಳ ಹಾಳು ಮೂಳು ಕತೆ ಕೇಳಿ ಕೇಳಿ ಹಿಂಗಾಗಿರದು ನೀನು. ಯಾರಿಗೂ ಬ್ಯಾಡ ನೀನು ಅಂತ ಹೇಳಿದ್ ಯಾರು? ಎಲ್ರಿಗೂ ನೀನಿನ್ನು ಜಾಸ್ತಿ ಬೇಕು. ಅಮ್ಮನ್ನ ನೋಡಿಕೊಳ್ಳಕ್ಕೆ, ತಮ್ಮನ್ನ ಎತ್ತಿಕೊಳ್ಳಕ್ಕೆ, ಆಟ ಆಡಕ್ಕೆ, ಅವನ ಜೊತೆಜೊತೆಗೆ ಸ್ಕೂಲಿಗೆ ಹೋಗಕ್ಕೆ, ಎಲ್ಲಿಗೆ ಹೋದರೂ ಜೊತೆಯಾಗಿ ಬರೋ ಆ ತಮ್ಮನ ಜೊತೆ ಜೊತೆಗೇ ನಗ್ತಾ ಬರಲಿಕ್ಕೆ ಎಲ್ಲಕ್ಕೂ ನೀನೇ ಬೇಕು. ಮಳ್ ಮಳ್ ಯೋಚನೆ ಮಾಡಡ ಬಾ...ಒಂದು ಹಾಡು ಹೇಳ್ತಿ ಬಾ...

ಹೆಣ್ಣೀನ ಜನುಮಕ್ಕೆ ಅಣ್ಣ ತಮ್ಮರು ಬೇಕು
ಬೆನ್ನು ಕಟ್ಟುವರೂ ಸಭೆಯೋಳಗೇ
ಬೆನ್ನು ಕಟ್ಟುವರೂ
ಸಭೆಯೊಳಗೆ
ಸಾವೀರ ಹೊನ್ನ ತುಂಬುವರು ಉಡಿಯೊಳಗೇ..

ಅವಳು ಹಾಡಿನ ಇಂಪಲ್ಲಿ ನೆಂದು ಹೊಸದಾಗಿ ಅರಳಿದಳು. ಅಮ್ಮನ ಹತ್ತಿರ ಹೋಗಿ ಆ ಗುಂಡು ಗುಂಡು ಪಾಪುವಿನ ಕೆನ್ನೆ ಹಿಂಡಿದಳು.

ಅವಳ ಸಂಜೆಗಳನ್ನ ಅವನು ತುಂಬಿದ. ಅವನ ಸಂಜೆಗಳಲ್ಲಿ ಅವಳು. ಇಬ್ಬರ ಸಂಜೆಗಳ ತುಂಬ ಮಾತು, ನಗೆ, ಇದ್ದ ಬದ್ದ ಆಟ, ಕುಸ್ತಿ, ಜಗಳ, ಸಿಟ್ಟು, ಅಳು, ಪೆಟ್ಟು, ಅವುಚಿಕೊಂಡು ನಿಂತ ಗಳಿಗೆಗಳು, ಮಾತು ಮುರಿದ ದಿನಗಳು, ಮುರಿದ ಮೂರು ದಿನಕ್ಕೆ ಸೇರಿಕೊಂಡ ಸರಪಳಿಗಳು, ಕತೆ, ಸಿನಿಮಾ, ಹಾಡು, ಯಕ್ಷಗಾನ, ನಾಟಕ, ಏಕಪಾತ್ರಾಭಿನಯ, ಪತ್ತೇದಾರಿ ಕತೆಗಳು, ಕೋರ್ಟು ಶಾಲೆಗಳ ಆಟ, ರಜೆಯಲ್ಲಿ ಊರಿಗೆ ಓಟ, ಎಲ್ಲಿ ಹೋದರೂ ಅವಳ ಬೆನ್ನಿಗೆ ಅವನು, ಅವನ ಕೈ ಹಿಡಿದು ಅವಳು.. ಅವಳು ಸುಮ್ಮನೆ ಮೂಲೆಯಲ್ಲಿ ಕೂತು ಪುಸ್ತಕದ ಮೇಲೆ ಪುಸ್ತಕ, ಅವನು ಅಂಗಳದಲ್ಲಿ ಆಟದ ಮೇಲೆ ಆಟ, ಅವಳು ಮೆತ್ತಗೆ ಯಾರಿಗೂ ಬೇಸರವಾಗದಂತೆ ಅರಳಿ..ಅವನು ಜೋರಾಗಿ ಎಲ್ಲರ ಕಣ್ಣು ಅವನ ಮೇಲಿರುವಂತೆ ಬೆಳಗಿ... ಆ ದಿನಗಳ ತುಂಬ ಹುಳಿ-ಸಿಹಿಯ,ಕಾರ ಒಗರುಗಳ ಅನನ್ಯ ರಸಭಾವ.. ರಸ ಕೆಡಲು ಹೊರಟರೆ ಅಮ್ಮನ ಗುದ್ದು, ಸಲಹೆ, ಕತೆಗಳ ಪ್ರಿಸರ್ವೆಂಟ್..

ಒಂದಿನ ಏನೋ ಹುಳುಕು ಮಾಡಿ ಅವನನ್ನ ಸಿಕ್ಕಿಸಿ ಹಾಕಿದ್ದಳು ಅವಳು. ಅಮ್ಮನಿಂದ ಎರಡು ಒದೆ ಬಿದ್ದಿತ್ತವನಿಗೆ. ಮುಖ ಚಪ್ಪೆ ಮಾಡಿ ನಿಂತ ಪುಂಡನ ನೋಡಿ, ಇವಳ ಮುಖ ಪೇಲವ. ನೋಡಿದ ಅಮ್ಮನಿಗೆ ಗೊತ್ತಾಯಿತು ಹುಳುಕು.. ಒಂದು ರುಚಿ ರುಚಿಯಾದ ಟೀ ಮಾಡಿ ಕೊಟ್ಟು ಕೈಗೆರಡೆರಡು ಬೆಣ್ಣೆ ಬಿಸ್ಕೆಟ್ ಇಟ್ಟು ಇವತ್ತೊಂದು ಕತೆ ಹೇಳ್ತೀನಿ ಅಂತ ಕೂತಳು..

ಚಪ್ಪೆ ಮುಖದವರಿಬ್ಬರೂ ಅಮ್ಮನ ಬದಿ ಬದಿಗೆ..ಕಿವಿಯಾಗಿ..

ಒಂದೂರಲ್ಲಿ ಒಂದು ದೊ‌ಓ‌ಓ‌ಓಡ್ಡ ಮಾವಿನ ಮರ. ಆ ಊರಿಗೆ ಬರುವ ಎಲ್ಲರೂ ಮಾವಿನ ಮರವನ್ನ ದಾಟಿಕೊಂಡೇ ಬರಬೇಕು. ಎಲ್ಲರೂ ನೋಡಿ ಆಹಾ ಅಂತೇಳಿ ಹೋಗ್ತಿದ್ದರು. ಆ ಸಲ ಬೇಸಿಗೆ ಶುರುವಾಗುತ್ತಿದ್ದ ಹಾಗೆ ಮಾವಿನ ಮರದ ತುಂಬ ತೂಗಿ ಬಿದ್ದ ಬಂಗಾರ ಬಣ್ಣದ ಹಣ್ಣುಗಳು. ಪರಿಮಳವಂತೂ ಅರ್ಧ ಮೈಲಿ ದೂರಕ್ಕೇ ಬರುತ್ತಿತ್ತು. ಅಲ್ಲಿ ಬರುವವರೆಲ್ಲ ಆಸೆಯಿಂದ ಹಣ್ಣು ಕಿತ್ತು ಇನ್ನೇನು ಸಿಪ್ಪೆ ಕಚ್ಚುತ್ತಾ ಬಾಯಲ್ಲಿಡಬೇಕು.. ಅಷ್ಟರಲ್ಲಿ ಕಾಣಿಸಿಕೊಳ್ಳುತ್ತದೆ ಹಣ್ಣಿನೊಳಗೆ ಹುಳ.. ಥೂ ಅಂತ ಎಸೆದು ಇನ್ನೊಂದು ಹಣ್ಣು ಕಿತ್ತು ನೋಡಿದರೆ ಅದರಲ್ಲೂ ಹುಳ.. ಓ ಈ ರೆಂಬೆಯೇ ಸರಿಯಿಲ್ಲ ಅಂತ ಆ ಬದಿಗೆ ಹೋಗಿ ಅಲ್ಲಿ ಕಿತ್ತು ನೋಡಿದರೆ ಅದರಲ್ಲೂ.. ಹೀಗೇ ಬಂದವರೆಲ್ಲ ಕಿತ್ತು ನೋಡಿದ ಎಲ್ಲ ಹಣ್ಣಲ್ಲೂ ಹುಳ..ಎಲ್ಲರೂ ಛೀ ಥೂ ಅಂತ ಬಯ್ಯುತ್ತಾ ಅಯ್ಯೋ ಹುಳುಕು ಮಾವಿನ ಮರಾ ಇದು.. ಎಂತಕ್ಕು ಪ್ರಯೋಜ್ನವಿಲ್ಲ ಅನ್ನುತ್ತಾ ಹೋಗುತ್ತಿದ್ದರೆ ಮರದ ಕಣ್ಣಲ್ಲಿ ನೀರು..
ಆಂ ಮರದ ಕಣ್ಣಾಗೆ ನೀರಾ? ಅವನಿಗೆ ಆಶ್ಚರ್ಯ.
ಮರದ ಕಣ್ಣೆಲ್ಲಿರ್ತಮಾ ಅವಳ ಪ್ರಶ್ನೆ.

ಹೌದಲ್ಲಾ ಅಮ್ಮ ಯೋಚಿಸಿದಳು.. ಅದೂ ಅದೂ ಮರದ ಕಾಂಡದಿಂದ ರೆಂಬೆಗಳು ಹೊರಡ್ತಲಾ ಅಲ್ಲಿರ್ತು. ಅದು ಎಲ್ಲರಿಗೂ ಕಾಣಾ ಕಣ್ಣಲ್ಲ. ಕತೆ ಹೇಳುವವರಿಗೆ ಮಾತ್ರ ಕಾಣಿಸ್ತು ಅವಳ ಸಮಜಾಯಿಷಿ. ಸರಿ ಮುಂದೆ ಕೇಳಿ.
ಆ ಬೇಸಿಗೆಯಿಡೀ ಯಾರೂ ಆ ಮರದ ಹಣ್ಣು ಮುಟ್ಟಲಿಲ್ಲ. ಮುಟ್ಟುವುದಿರಲಿ ಅದರ ಹತ್ತಿರವೂ ಬರದೆ ಥೂ ಹುಳುಕ್ ಮಾವಿನ ಮರ ಅಂತ ಬೈದುಕೊಂಡು ಅದನ್ನ ಬಳಸದೆ ದೂರದ ದಾರೀಲಿ ಹೋಗ್ ಬಿಡುತ್ತಿದ್ದರು. ಒಂದಿನ ಒಬ್ಬವ ಋಷಿ ಬಂದ.
ಬಂದವನೇ ಈ ಹುಳುಕು ಮಾವಿನ ಮರ ನೋಡಿ ಕೇಳಿದ - ಯಾಕೆ ಮರವೇ ಬರೀ ಹುಳುಕು ಹಣ್ಣುಗಳು ಏನಾಯಿತು ನಿಂಗೆ ಏನು ಪಾಪ ಮಾಡಿದ್ದೆ. -
ಮರ ಅಳುಮುಖ ಮಾಡಿಕೊಂಡು ಹೇಳಿತು. ಹೋದ ಜನ್ಮದಲ್ಲಿ ನಾನು ಬರೀ ಹುಳುಕುತನ ಮಾಡ್ತಾ ಇದ್ದೆ. ಚಾಡಿ ಹೇಳಿಕೊಂಡು, ಯಾರನ್ನೂ ಸಹಿಸದೆ, ಎಲ್ಲರ ಹತ್ತಿರವೂ ಜಗಳ ಮಾಡಿಕೊಂಡು, ಯಾವುದನ್ನೂ ಯಾರ ಹತ್ತಿರವೂ ಹಂಚಿ ತಿನ್ನದೇ, ನಾನೇ ದೊಡ್ ಮನುಷ್ಯ ಅಂದ್ಕಂಡು ಶ್ರೀಮಂತಿಕೇಲಿ ಬದುಕಿದ್ದೆ. ಯಾರಿಗೂ ಸಹಾಯ ಮಾಡದೆ, ಎಷ್ಟು ಸಾಧ್ಯವೋ ಅಷ್ಟು ಕಷ್ಟ ಕೊಟ್ಟು, ಸುಳ್ಳು ಹೇಳಿ ಖುಷಿ ಪಡ್ತಾ ಇದ್ದೆ. ಅಣ್ಣ, ತಮ್ಮ, ಅಕ್ಕ ತಂಗಿ ಎಲ್ರಿಗೂ ಮೋಸ ಮಾಡ್ಕೋತ, ನೋವು ಕೊಡ್ತಿದ್ದೆ... ಅದಕ್ಕೆ ಈ ಜನ್ಮದಲ್ಲಿ ಹುಳುಕು ಮಾವಿನ ಮರ ಆಗಿ ಹುಟ್ಟಿ ಬಿಟ್ಟಿದೀನಿ. ನಾನು ಮಾಡಿದ ಹುಳುಕೆಲ್ಲ ನನ್ನೇ ತಿಂತಿದೆ ಈಗ. ಯಾರೂ ಮುಟ್ಟೋಲ್ಲ ನನ್ನ. ನೋಡಿದವರೆಲ್ಲ ಛೀ ಥೂ ಅಂತ ಹೋಗ್ತಿರ್ತಾರೆ..

ಆಂ ಹಂಗಾ.. ಅಯ್ಯೋ ನಾನ್ ನಿನ್ನತ್ರ ಮಾತಾಡಲ್ಲಪ್ಪ.. ಆಮೇಲೆ ನಂಗೂ ಹುಳುಕುಬುದ್ಧಿ ಬಂದ್ ಬಿಡತ್ತೆ ಅಂತ ಋಷಿ ಕೂಡ ಬಿಟ್ಟು ಹೋಗಿಬಿಡುತ್ತಾನೆ.
ಅವರಿಬ್ಬರೂ ಪಿಳಿಪಿಳಿ ಅಮ್ಮನ್ನೇ ನೋಡ್ತಿದಾರೆ.
ಅಮ್ಮ ಕತೆ ಮುಗೀತು. ನೋಡಿದ್ರಾ ಹುಳುಕು ಬುದ್ಢಿ ಮಾಡವ್ರಿಗೆ ಏನು ಗತಿ ಬರ್ತು ಅಂತ.. ಅಂತ ಕೇಳಿದಳು. ಇಬ್ಬರೂ ಹೌದೌದು. ನಾವು ಇನ್ಯಾವತ್ತೂ ಹಂಗೆ ಮಾಡಲ್ಲಮ್ಮಾ..ಅಂತ ಒಪ್ಪಿಕೊಂಡರು.

ಸಂಜೆಯೊಂದು ಮೆತ್ತಗೆ ಮನೆಯ ಹಿಂದಿನ ಹಿತ್ತಲ ಹಿಂದೆ ಸೂರ್ಯಮಾಮಾನ ಹಿಂದೆ ಹಿಂದೆ ಓಡುತ್ತಿದೆ. ಅಂಗಳದಲ್ಲಿ ಅವರಿಬ್ಬರ ಬ್ಯಾಡ್ ಮಿಂಟನ್ ಆಟದ ಕೊನೆಯ ಚರಣ. ಮಬ್ಬುಗತ್ತಲಲ್ಲಿ ಅವಳು ಬೀಸಿ ಹೊಡೆದ ಹೊಡೆತಕ್ಕೆ ಕಾಕ್ ಹಂಚಿನ ಮೇಲೆ ಹೋಗಿ ಬಿದ್ದುಬಿಟ್ಟಿತು. ಈಗ ಅದನ್ನು ಕೆಳಗಿಳಿಸುವ ಆಟ. ಅವನು ಒಂದು ಉದ್ದದ ಕೋಲು ಹಿಡಕೊಂಡು ಎರಡು ಮೂರು ಇಟ್ಟಿಗೆ ಸೇರಿಸಿ ಹತ್ತಿ ನಿಂತು ಕಾಕ್ ನ ಎಳೆದು ಬೀಳಿಸಲು ನೋಡ್ತಿದಾನೆ. ಇವಳು ಕಣ್ಣು ಮೇಲೆ ಮಾಡಿ ಸೂರಂಚಿಗೆ ನಿಂತು, ಬಂತೂ ಬಂತೂ, ಇನ್ನೋಚೂರು ಎಳಿ, ಅಲ್ಲೇ ಸ್ವಲ್ಪ ಬಲಕ್ಕೆ..ಹಾಂ ಹಾಂ ಅಂತಾ ಇದ್ದ ಹಾಗೆ ಆ ಕಾಕ್ ಬಿದ್ದೇ ಬಿಟ್ಟಿತು ಕಿರೀ ಹಿಡಿದು ನೋಡುತ್ತಿದ್ದ ಕಣ್ಣಿನ ಮೇಲೆ ಕಾಕಿನ ಹಿಂಭಾಗ ಬಿದ್ದ ಕೂಡಲೇ ಅಮ್ಮಾ, ಕಣ್ಣೂ ಕಣ್ಣೂ.. ಅಂತ ಕೂಗಿಕೊಳ್ಳುತ್ತ ಕಣ್ಣು ಮುಚ್ಚಿಕೊಂಡು ಓಡಿಹೋಗಿ ಮನೆಮೆಟ್ಟಿಲ ಮೇಲೆ ಕುಕ್ಕರಿಸಿದಳು. ಅವನು ಇಟ್ಟಿಗೆ ಇಳಿದು ಗಡಬಡಿಸಿ ಓಡಿಬಂದ. ಹಿತ್ತಿಲ ಬಾವಿಯಿಂದ ನೀರು ಸೇದುತ್ತಿದ್ದ ಅಮ್ಮ ಓಡಿಬಂದು ಒದ್ದೆ ಕೈಯಲ್ಲೇ ಅವನ ಬೆನ್ನಿಗೊಂದು ಗುದ್ದು ಕೊಟ್ಟು ಏನ್ ಮಾಡಿದ್ಯೋ ಅಕ್ಕಂಗೆ ಅಂತ ಸಿಟ್ಟು ಮಾಡಿ, ಎಂತಾತು ಅಂತ ಕೇಳಿದಳು. ಅವನು ಬೆನ್ನ ಮೇಲಿನ ಗುದ್ದು ಗುದ್ದೇ ಅಲ್ಲ ಅನ್ನೋ ಹಾಗೆ ಅಮ್ಮನ ಹತ್ತಿರ ಅವಳ ಕೈ ಹಿಡಿದುಕೊಂಡು ಕಾಕ್ ಕಣ್ಣಿಗೆ ಬಿದ್ ಬಿಡ್ತಮ್ಮಾ ನಾನೇನೂ ಮಾಡಲ್ಲೆ ಅನ್ನುತ್ತಿದ್ದರೆ, ಕಣ್ಣು ಮುಚ್ಚಿ ಅಳುತ್ತಿದ್ದ ಅಕ್ಕನೂ ಇಲ್ಲ ಅವನೇ ಮಾಡಿದ್ದು ಅಂತ ಹೇಳಬೇಕೆಂದುಕೊಂಡವಳು ಹುಳುಕು ಮಾವಿನ ಮರದ ನೆನಪಾಗಿ, ಹೌದೆಂದು ತಲೆಯಾಡಿಸಿದಳು. ಕತ್ತಲಾದ ಮೇಲೆ ಆಟ ಆಡಡಿ ಅಂದ್ರೆ ಕೇಳಾ ಮಕ್ಳಾ ನೀವು, ಈಗ ಕಣ್ಣಿಗೇನಾದ್ರೂ ಆದ್ರೆ ಅಮ್ಮನಿಗೆ ಆತಂಕ.. ಸ್ವಲ್ಪ ಕೊತ್ತಂಬರಿ ಬೀಜ ನೆನೆಸಿ ಅವಳ ಮುಚ್ಚಿದ ಕಣ್ಣಿಗೆ ಕರ್ಚೀಫಿನಿಂದ ನೀರು ಬಿಟ್ಟು ತಮ್ಮನಿಗೆ ಅದನ್ನು ಹೇಗೆ ಮಾಡುವುದು ಅಂತ ತೋರಿಸಿ ಅಮ್ಮ ಮತ್ತೆ ನೀರು ತುಂಬಲು ಹೋದಳು.

ಅವನ ಹತ್ತಿರ ಒಂದು ಚಂದದ ಪಾಟಿ. ಕಪ್ಪು ಪಾಟಿಯ ಸುತ್ತಲೂ ಕೇಸರಿ ಬಣ್ಣದ ಪ್ಲಾಸ್ಟಿಕ್ ಚೌಕಟ್ಟು. ವಿಶೇಷ ಏನಪಾ ಅಂದ್ರೆ, ಕಲ್ಲು ಕಡ್ಡೀಲಿ ಬರದ್ರೂ ಅಕ್ಷರ ಗುಂಡಕೆ ನೀಟಾಗಿ ಆಗ್ತು ಅದರಲ್ಲಿ. ಇನ್ನು ಬೆಣ್ಣೆ ಕಡ್ಡಿ ವಿಷ್ಯ ಕೇಳದೇ ಬೇಡ. ಅವಳಿಗೆ ಅದರ ಮೇಲೇ ಕಣ್ಣು. ಆದ್ರೇನು ಮಾಡದು ಅದು ಅವ್ನ ಪಾಟಿ. ಅಲ್ದೇ ಅವನಿಗೆ ಇನ್ನೂ ನೋಟ್ ಬುಕ್ಕಲ್ಲಿ ಬರಿಯೋ ಕ್ಲಾಸೂ ಅಲ್ಲ. ಹಂಗಾಗಿ ಅವ್ನು ಅದನ್ನ ಸುಮ್ನೆ ಕೇಳಿದ್ರೆ ಕೊಡದಿಲ್ಲೆ. ಅಂಬಾರ್ ಕಟ್ಟು, ಬೋಟಿ, ಕಾರಕಿತ್ಲೆ ಏನೋ ಇಂತ ಆಸೆ ತೋರ್ಸೇ ಪಾಟಿ ಇಸ್ಕಳಕ್ಕಾಗದು. ಒಂದಿನ ಅವ್ಳು ಅಮ್ಮನ ಹತ್ರ ಹಟ ಮಾಡ್ದ. ಅಮ್ಮಾ ನಂಗೂ ಅದೇ ಪಾಟಿನೇ ಬೇಕು. ಅವನ ಅಕ್ಷರ ಹೆಂಗೂ ಏನಷ್ಟು ಚೆನಾಗಿಲ್ಲೆ. ಅವನಿಗೆ ಬೇರೆ ಪಾಟಿ ಕೊಡ್ಸು ನೀನು. ಅಮ್ಮಂಗೆ ಸಿಟ್ ಬಂತು.
ಎಂತದೆ ನಿಂದು ರಗಳೆ. ಅವನ ಹಳೇ ಪಾಟಿ ಮೇಲೆ ನಿಂದ್ಯಾಕೆ ಕಣ್ಣು. ನಿಂಗೆ ಅಷ್ಟೊಳ್ಳೆ ಲೇಖಕ್ ಬುಕ್ಕಿದ್ದು. ಅವನ ಎಲ್ಲ ಪುಸ್ತಕ, ಚೀಲ, ಪೆನ್ನು, ಕಡ್ಡಿ, ಟೋಪಿ, ಸಾಕ್ಸು ಎಲ್ಲ ನೀನು ಹಾಕಿ ಬಿಟ್ಟಿದ್ದು.. ಅದೊಂದು ಪಾಟಿ ಅವನಿಗೇ ಅಂತ ಕೊಡಿಸಿದ್ರೆ ಅದ್ರ ಮೇಲೆ ಕಣ್ಣಾ ನಿಂದು? ಇದನ್ನೇ ಹುಳುಕು ಬುದ್ದಿ ಅನ್ನದು. ಹುಳುಕು ಬುದ್ದಿ ಮಾಡಿದ್ರೆ ಏನಾಗ್ತು ಗೊತ್ತಿದ್ದಲಾ..
ಅವಳು ತೆಪ್ಪಗಾದಳು. ಹೌದೆನ್ನಿಸಿತು. ಸುಮ್ಮನೆ ಮೂಲೆಯಲ್ಲಿ ಕೂತು ಕೇಳುತ್ತಿದ್ದ ಅವನ ಪಕ್ಕ ಹೋಗಿ ಕೂತು, ಕೈಗೆ ಕೈ ಹೊಸೆದಳು. ತಪ್ಪಾಯಿತೆಂಬಂತೆ, ಸಿಟ್ಟಿಲ್ಲವೆಂಬಂತೆ, ಮತ್ತೆ ಜೊತೆಯಾಗುವಂತೆ. ಅವನು ಎಂದಿನ ನಗೆಮುಖದ ಗುಂಡ..
ಆಟಕ್ಕೆದ್ದ.

ಸಾಬರಂಗಡಿಯ ಪುಟಾಣಿ ಸೈಕಲ್ಲಿಗೆ ಗಂಟೆಗೆ ಐವತ್ತು ಪೈಸೆ ಕೊಟ್ಟು ರಸ್ತೆಯಲ್ಲಿ ತಳ್ಳಿಕೊಂಡು ಹೋಗಿ, ಕಾಂಪ್ಲೆಕ್ಸಿನ ಪಾಗಾರ ಕಳೆದ ಕೂಡಲೆ ಸಿಗುವ ದೊಡ್ಡ ಮೈದಾನದಲ್ಲಿ ಅವರಿಬ್ಬರ ಸೈಕಲ್ ಕಲಿಯಾಟ.. ದೊಡ್ಡಕೆ ಹರಡಿರುವ ಹುಲ್ಲು ಮೈದಾನದಲ್ಲಿ ಎಳೆಬಿಸಿಲಿನ ಸಂಜೆಯಲ್ಲಿ ಪುಟಾಣಿ ಸೈಕಲ್ ಮೇಲೆ ಬ್ಯಾಲೆನ್ಸ್ ಮಾಡುತ್ತ ಅವಳು, ಹಿಂದೆ ಕ್ಯಾರಿಯರ್ ಹಿಡಿದು ಓಡುತ್ತ ಬರುತ್ತಿರುವ ಅವನು.. ಮೈದಾನದಂಚಿಗೆ ಮನೆಗೆ ಹೊರಟಿರುವ ಸೂರ್ಯ, ಬೇಗ ಬೇಗ ಹೋಗಲು ಮನಸ್ಸಾಗದೇ ಅವರಾಟವನ್ನು ನೋಡುತ್ತ ಆ ಎಳೆಮೈಗಳನ್ನು ಬೆಚ್ಚಗಾಗಿಸುತ್ತ ಚೂರು ಚೂರೇ ಮುಳುಗುತ್ತಿದ್ದ.. ಓ ರಾಧಾಕೃಷ್ಣ ಬಸ್ ಬಂತು. ಇನ್ನೇನು ಐದು ನಿಮಿಷಕ್ಕೆ ಟೈಮ್ ಆಗೋಗ್ತು. ಬಾ ಸೈಕಲ್ ವಾಪಸ್ ಕೊಡನ ಅವಳು. ಅಡ್ಡಿಲ್ಲೆ ಬಿಡೇ ನಾನೊಂದು ಲಾಸ್ಟ್ ರೌಂಡ್ ಹೋಗ್ತಿ. ಆಮೇಲೆ ಕೊಡಾನ. ಅವಳಿಗಿಷ್ಟವಿಲ್ಲ. ಆದ್ರೂ ಹೂಂ ಅಂದಳು. ಕೊನೆಯ ಒಂದು ರೌಂಡ್ ಅಂದವನು ಮೂರ್ನಾಕು ರೌಂಡ್ ಮುಗಿಸಿ ಬಂದು ಸೈಕಲ್ ವಾಪಸ್ ಕೊಟ್ಟಾಗ ಗಂಟೆಯ ಮೇಲೆ ಹತ್ತು ನಿಮಿಷವಾಗಿ ಅಂಗಡಿಯವನು ಬಯ್ದ. ಅವಳಿಗೆ ಅವಮಾ‌ಆ‌ಆ‌ಆ‌ಆನ. ಅವನು ಏ ಬಿಡೇ ಅದೆಲ್ಲ ಯಾಕೆ ತಲೆಬಿಸಿ.. ದಾರಿಯಲ್ಲಿ ಕಲ್ಪನೆಯ ಬಾಲನ್ನು ಸ್ಪಿನ್ ಬೌಲ್ ಮಾಡುತ್ತ ಕುಣಿಯುತ್ತ ಹೋಗುವ.. ಅವಳು ಮುಖ ದುಮ್ಮಿಸಿಕೊಂಡು ಸುಮ್ಮನೆ ಅವನ ಹಿಂದೆ.

ಹೈಸ್ಕೂಲಿನಲ್ಲಿ ಮಧ್ಯಾಹ್ನದ ಬೆಲ್ ಹೊಡೆದು ಮೊದಲ ಪೀರಿಯಡ್ಡಿಗೆ ಕಾಯುತ್ತ ಕೂತಿದ್ದಾಳವಳು ಹತ್ತನೇ ಕ್ಲಾಸಿನ ಮೊದಲ ಬೆಂಚಲ್ಲಿ. ಇದ್ದಕ್ಕಿದ್ದಂತೆ ಓಡಿಬಂದು ಅವಳ ಕ್ಲಾಸಿಗೆ ನುಗ್ಗಿದವನು ಅವಳ ಮುಂದಿದ್ದ ಜ್ಯಾಮಿಟ್ರಿ ಬಾಕ್ಸ್ ಎತ್ತಿಕೊಂಡು ಓಟ. ಗೊತ್ತವನಿಗೆ ಬೆಲ್ ಹೊಡೆದ ಮೇಲೆ ಅಕ್ಕ ಹೊರಗೆ ತನ್ನನ್ನು ಅಟ್ಟಿಸಿಕೊಂಡು ಬರುವುದಿಲ್ಲ. ಅವಳಿಗೆ ಸಿಟ್ಟು, ಕ್ಲಾಸಿನ ಉಳಿದೆಲ್ಲ ಕಣ್ಣೂ ತನ್ನನ್ನೇ ನೋಡುತ್ತಿರುವ ಎಚ್ಚರದ ಅವಮಾನ..

ಎರಡನೇ ಪಿರಿಯಡ್ ಮುಗಿದು ಮೂರರ ಬೆಲ್ಲಾಗುವಾಗ ಮತ್ತೆ ಓಡುತ್ತ ಬಂದವನು ಬಾಕ್ಸು ಅವಳ ಮುಂದಿಟ್ಟು, ಬಿ‌ಎನ್.ಪಿ ಪಿರಿಯಡ್ ಇತ್ತೇ ಮಾರಾಯ್ತಿ. ಗೊತ್ತಿದ್ದಲ ಜಾಮಿಟ್ರಿ ಬಾಕ್ಸಿಲ್ದೇ ಇದ್ರೆ ಏನ್ ಗತಿ ಅಂತ ಅದಕ್ಕೇ... ತುಂಟ ಮುಖದಲ್ಲಿ ಸಮಾಧಾನದ ನಗು ಬೀರುತ್ತ ಮತ್ತೆ ತಿರುಗಿ ಅವನ ಕ್ಲಾಸಿನತ್ತ ಓಡಿ ಹೋದ. ಸಿಟ್ಟೆಲ್ಲ ಇಳಿದು ಹೋಗಿ, ಪಾಪವೆನ್ನಿಸುವಂತೆ. ಸಂಜೆ ಸ್ಕೂಲು ಬಿಟ್ಟ ಕೂಡಲೇ ಕೆರೆ ಏರಿ ಮುಗಿದು ರೈಲ್ವೆ ಹಳಿ ದಾಟಿದ ಕೂಡಲೆ ಡಬ್ಬಲ್ ರೈಡು. ಅವಳು ಉದ್ದ ಅಕ್ಕ ಅವನು ಪುಟ್ಟ ತಮ್ಮ.

ಇಲ್ಲಿ ನಿಂತರೆ ಟಿಪ್ಪೂ ಸುಲ್ತಾನ್, ಇಲ್ಲಿ ನಿಂತರೆ ಮದಕರಿ ನಾಯಕ.. ಅವನು ಪುಟ್ಟ ಮುಖದ ಮೇಲಿನ ದೊಡ್ಡ ಮೀಸೆಯಡಿಯಿಂದ ಡೈಲಾಗ್ ಮೇಲೆ ಡೈಲಾಗ್ ಹೊಡೆದು ಗರ್ಜಿಸುತ್ತಿದ್ದ..ಮನೆಯ ಕಪಾಟು ತುಂಬ ಪುಟ್ಟ ಪುಟ್ಟ ಬಹುಮಾನದ ಕಪ್ಪುಗಳು. ಅವಳು ಕಪಾಟಿನ ಹೊರಗೆ ನೋಡುತ್ತ ನೋಡುತ್ತ..

ವರ್ಷಗಳುರುಳಿದಂತೆಲ್ಲ ಬದುಕಿನ ಏಕಪಾತ್ರಾಭಿನಯದಲ್ಲಿ ಇಬ್ಬರಿಗೂ ಅವರವರದ್ದೇ ಪಾಲು. ಅವನು ಒಬ್ಬಳೆ ನಿಂತ ಅಕ್ಕನಿಗೆ ಅಣ್ಣನಾಗಿ,ಗೆಳೆಯನಾಗಿ,ಅಪ್ಪನಾಗಿ,ಟೀಚರ್ರಾಗಿ.. ಅವಳು ಬೆಳೆಯುವ ತಮ್ಮನಿಗೆ ಅಮ್ಮನಾಗಿ, ಗೆಳತಿಯಾಗಿ, ತಂಗಿಯಾಗಿ, ಸ್ಟೂಡೆಂಟಾಗಿ.. ಅವನ ಮಾರ್ಕೆಟಿಂಗ್ ಟೆಕ್ನಿಕ್ಸುಗಳಿಗೆ ಬಕ್ರಾ ಆಗಿ..ಅವನು ಅವಳ ಕತೆಗಳಿಗೆ ಬೋಲ್ಡಾಗಿ.. ಅವಳ ಕಣ್ಣೀರ ಕ್ಷಣಗಳಿಗೆ ಅವನು ಮೌನ ಸ್ಪಂದನವಾಗಿ, ಅವನ ದುಗುಡದ ಕ್ಷಣಗಳಲ್ಲಿ ಅವಳು ಪದಗಳನ್ನು ಹೆಣೆಯದ ಖಾಲಿ ಗೆರೆಯಾಗಿ, ಜೀಟಾಕಿನಲ್ಲಿನ ಪ್ರೈಂ ಕಾಂಟ್ಯಾಕ್ಟುಗಳಾಗಿ.. ನೆಮ್ಮದಿಯ ದಿನಗಳ ನಲಿವಿನ ಪಂಚ್ ಲೈನಾಗಿ..ದಿನದಿನದ ಪಯಣದಲ್ಲಿ ಜತೆಯಾಗಿ, ವೀಕೆಂಡಿನ ಟ್ರೆಕ್ಕುಗಳಲ್ಲಿ ಒಬ್ಬರಿನ್ನೊಬ್ಬರಿಗೆ ಗೈಡಾಗಿ, ಕ್ಯಾಮೆರಾ ಕಣ್ಣಾಗಿ. ಒಂದೇ ಜೀನ್ಸು ಕೇಪ್ರಿ ಇಬ್ಬರಿಗೂ ಬರುವಷ್ಟು ಬೆಳೆದ ಜೀವಗಳಾಗಿ, ಅವಳ ಬರಹಗಳಿಗೆ ಅವನು ಮೈಕ್ರೋಸ್ಕೋಪಾಗಿ, ಅವನ ಅಭಿನಯಕ್ಕೆ ಅವಳು ಬೆರಗಿನ ನೋಡುಗಳಾಗಿ.. ಅವಳ ಸಹಾಯಕ್ಕೆ ಅವನು ಪ್ರೀಮಿಯಂ ಆಗಿ, ಅವನ ನೆರವಿಗೆ ಅವಳು ಸೆಕ್ಯೂರಿಟಿಯಾಗಿ...ನಿಂತು ನೋಡಿದಲ್ಲೆಲ್ಲ ಹಲವು ಹನ್ನೆರಡು ಪಾತ್ರಗಳು.

ಅವನು ಉದ್ದಕೆ ದೊಡ್ಡಕೆ ಅಣ್ಣನಂತಿರುವ ತಮ್ಮ. ಅವಳು ಕುಳ್ಳಕೆ (ಸ್ವಲ್ಪೇ ಸ್ವಲ್ಪ ಡುಮ್ಮಕೆ) ತಂಗಿಯಂತಿರುವ ಅಕ್ಕ..
ಅಮ್ಮ ಬಾಗಿಲವಾಡಕ್ಕೆ ಒರಗಿ ನಿಂತು, ಬೈಕು ಹತ್ತಿ ಕುಳಿತ ಅವರ ನೋಡಿ ನಸುನಗೆ ಬೀರುತ್ತಾಳೆ; ಈ ಪಯಣಕ್ಕೆ ಹುಳುಕಿನ ಸೋಂಕಿಲ್ಲ..

ಎಲ್ಲೋ ಇದ್ದಿರಬಹುದಾದ ಕಸರನ್ನೂ ಹಿಂಡಿ ತೆಗೆದ ಅಮ್ಮನ ನೆರಳ ಹಾದಿ..

Rating
No votes yet