ಏಕ ಭಾಷೆಯ ಕಡೆ ಸಾಗಿದ್ದೇವೆಯೇ...

ಏಕ ಭಾಷೆಯ ಕಡೆ ಸಾಗಿದ್ದೇವೆಯೇ...

ತಂತ್ರಜ್ಞಾನ ಬೆಳೆದಂತೆ ಹೊಸ ವಸ್ತುಗಳು ನಿರ್ಮಾಣವಾಗುತ್ತಾ ಹೋಗುತ್ತಿವೆ. ಹಾಗೇ ಅವುಗಳಿಗೆ ಹೊಸ ಕನ್ನಡ ಪದಗಳನ್ನು ರೂಪಿಸಬೇಕಾದ ಗರಜೂ ಸಹ ಬೆಳೆಯುತ್ತಿದೆ. ಮಾಹಿತಿ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಬರೆಯಬೇಕೆಂದರೆ ಈ ಅವಶ್ಯಕತೆಯ ಅಗಾಧತೆ ಮನವರಿಕೆಯಾಗುತ್ತದೆ. ಈ ಸಂದರ್ಭದಲ್ಲಿ ತೇಜಸ್ವಿಯವರು ಬರೆದ ಒಂದು ಲೇಖನ ನೆನಪಾಗುತ್ತದೆ. ಈ ವಿಚಾರದ ಕುರಿತಾದ ಅವರ ಅಭಿಪ್ರಾಯಗಳು ನನಗೆ ಬಹಳ ಇಷ್ಟವಾಗಿವೆ, ಹಾಗು ಅವುಗಳನ್ನು ನಾನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ.

ಇದರ ಬಗ್ಗೆ ನೆನ್ನೆ ಯೋಚಿಸುತ್ತಿದ್ದಾಗ ಕೆಲವು ವಿಚಾರಗಳು ಮೂಡಿದವು.ನಮ್ಮ ಕನ್ನಡ ಭಾಷೆಯಲ್ಲಿ ಇಂದು ಅನೇಕ ಪದಗಳು ಚಲಾವಣೆ ಕಳೆದುಕೊಂಡು ಮರೆತೇಹೋಗುವ ಸ್ಥಿತಿಗೆ ಬಂದಿವೆ. ಅಂತಹ ಉದಾಹರಣೆಯೊಂದು ನನಗೆ ಹೊಳೆಯಿತು. ನೇಗಿಲಿಗೆ ಕಟ್ಟುವ ಹಗ್ಗಕ್ಕೆ 'ಮಿಣಿ'ಎನ್ನುತ್ತಾರೆ. ಈಗ ನೇಗಿಲುಗಳ(ಟ್ರ್ಯಾಕ್ಟರು, ಟಿಲ್ಲರುಗಳ ಬಳಕೆಯಿಂದಾಗಿ) ಬಳಕೆ ಕಡಿಮೆಯಾದಂತೆ ಈ ಪದದ ಬಳಕೆಯೂ ಕಡಿಮೆಯಾಗಿ ಮತ್ತೆ ಮರೆತೇ ಹೋಗುತ್ತದೆ. ಇಂತಹ ಇನ್ನೊಂದು ಉದಾಹರಣೆ 'ಕಪಿಲೆ'. ನನಗನ್ನಿಸಿದಂತೆ ಈ ಪದಗಳಿಗೆ ಹೊಸ ಅರ್ಥ ಹಚ್ಚಿ ಬಳಕೆಗೆ ತರಬಹುದು.

ಇದು ನನಗ್ಯಾಕೆ ಹೊಳೆಯಿತು, ಅಂದಾಗ ನಾನು ನಾವು ದಿನ ನಿತ್ಯ ಬಳಸುವ ವಸ್ತುಗಳ ಪಟ್ಟಿ ಮಾಡುತ್ತಾ ಹೋದಾಗ ಅವಿಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಎರವಲು, ಮುಖ್ಯವಾಗಿ ಇಂಗ್ಲೀಷು ಪದಗಳೇ ಆಗಿದ್ದುವು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಇಂದು ಜ್ಞಾನವಾಹಿನಿಯಾಗಿ ಕೆಲಸ ಮಾಡುತ್ತಿರುವುದು ಇಂಗ್ಲೀಷು ಭಾಷೆಯೇ...ಹೀಗಾಗಿ ಹೊಸದಾಗಿ ನಿರ್ಮಾಣವಾದ ವಸ್ತುಗಳಿಗೆಲ್ಲ ಮೊದಲು ಇಂಗ್ಲಿಷಿನ ನಾಮಕರಣವಾಗಿ, ಅವುಗಳನ್ನು ನಾವು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ನಮ್ಮ ಭಾಷೆಗಳಲ್ಲೂ ಬಳಸತೊಡುಗುತ್ತೇವೆ. ಉದಾ. ಬಸ್ - ಬಸ್ಸು, ಹಾಸ್ಪಿಟಲ್ - ಆಸ್ಪತ್ರೆ ಆಗುವಂತೆ.
ಈ ತರ್ಕವನ್ನು ಮುಂದುವರೆಸಿದರೆ, ಈಗ ಪದ ನಿರ್ಮಾಣ ಕೇವಲ ಇಂಗ್ಲಿಷ್ಗೆ ಸೀಮಿತವಾಗಿ, ಬೇರೆಲ್ಲ ಭಾಷೆಗಳು ಕೇವಲ ಅವುಗಳನ್ನು ಎರವಲು ಪಡೆಯುವಲ್ಲಿಗೆ ಬಂದು ನಿಂತಿವೆ. ಹೀಗಾದರೆ ನಮ್ಮ ಭಾಷೆಗಳ ಸ್ವಂತಿಕೆ ಏನಾಗಬೇಕು. ಈಗ ಇರುವಂತೆ ಕನ್ನಡದಲ್ಲಿ Ass ಶಬ್ಧದಲ್ಲಿರುವ ಅರ್ಧ ಅ ಸ್ವರದ ಬಳಕೆ ಮೂಲ ಕನ್ಡ ಭಾಷೆಯಲ್ಲಿಲ್ಲ. ಹಾಗಾಗಿ ಇವುಗಳನ್ನು ಕನ್ನಟ ಲಿಪಿಯಲ್ಲಿ ಈಗಿರುವಂತೆ ಬರೆಯಲು ಸಾಧ್ಯವಿಲ್ಲ. ಆದರೆ ನಾವು ಅದನ್ನು ನಮ್ಮ ಶಬ್ಧಕೋಶಕ್ಕೆ ಸೇರಿಸಿಕೊಂಡರೆ, ಆ ಕನ್ನಡದ ವೈಶಿಷ್ಟ್ಯತೆಯನ್ನು ಕಳೆದುಕೊಂಡಂತಲ್ಲವೆ..

ಹೀಗೆ ನಮ್ಮ ಭಾಷೆಗಳು ಎರವಲು ಪಡೆಯುವಲ್ಲಿಗೆ ನಿಂತುಬಿಟ್ಟರೆ ನಾವು ಏಕ ಭಾಷೆಯ ಕಡೆಗೆ ಸಾಗುತ್ತಿದ್ದೇವೆ ಎಂದಾಯಿತಲ್ಲವೆ...

Rating
No votes yet

Comments