ಏನನ್ನು ನಂಬಲಿ?

ಏನನ್ನು ನಂಬಲಿ?

ಅಬ್ಬಾ!!! ಕಳೆದ ಒಂದು ತಿಂಗಳಲ್ಲಿ ಎಷ್ಟೊಂದು ಘಟನೆಗಳು. ಎಷ್ಟೊಂದು ಚರ್ಚೆ. ಪ್ರಪಂಚ ಇನ್ನೇನು ಅಂತ್ಯ ಕಾಣಲಿದೆ ಅನ್ನುವಷ್ಟು...
ಯಾವುದೇ ಬ್ಲಾಗ್ ಸೈಟ್ ಆಗಲಿ, ಟಿವಿ ಚಾನೆಲ್ ಆಗಲಿ... ಎಲ್ಲರೂ ಪ್ರಸಕ್ತ ವಿಷಯಗಳ ಬಗ್ಗೆ ಕೊರೆಯುವವರೇ. ಪ್ರತಿಯೊಬ್ಬರದೂ ಅವರದೇ ಆವೃತ್ತಿ.

ಪತ್ರಿಕೆಗಳು, ವಾಹಿನಿಗಳು ಕ್ರೈಸ್ತರ ಮೇಲೆ ನಡೆದ ಧಾಳಿಗಳ ಬಗ್ಗೆ ಕಿರಿಚಾಡುತ್ತಿದ್ದರೆ, ಬ್ಲಾಗಿಗರ ಪ್ರಕಾರ ಅದು ಯಾರೋ ಚಿಲ್ಲರೆ ಕಳ್ಳನ ಕೆಲಸ. ಅದಕ್ಕೂ ಬಜರಂಗದಳಕೂ ಯಾವ ಸಂಬಂಧವೂ ಇಲ್ಲ. ಪತ್ರಿಕೆಗಳು ಬರೀತಿರೋದೆಲ್ಲ ಸುಳ್ಳು. ಯಾಕಂದ್ರೆ ಪತ್ರಿಕೆಗಳಿಗೆ ದುಡ್ಡು ಕೊಡುತ್ತಿರುವುದು ಚರ್ಚುಗಳೇ.
ಕ್ರೈಸ್ತರು ಶಾಂತಿಪ್ರಿಯರು ಸಹೃದಯಿಗಳು ಅನ್ನೋರು ಒಂದು ಕಡೆಯಾದರೆ, ಚರ್ಚುಗಳದ್ದು ರಕ್ತಸಿಕ್ತ ಇತಿಹಾಸ ಅನ್ನೋ ಲೇಖನಗಳೂ ದಂಡಿಯಾಗಿವೆ (ಅದೂ ಸಾಕ್ಷಿಗಳ ಸಮೇತ).
ಮೊನ್ನೆ ಈಮೈಲ್ ನಲ್ಲಿ ೧೦೦ ಸ್ಲೈಡ್ ಗಳಿಗೂ ಹೆಚ್ಚಿನ death of hinduism ಅನ್ನೋ pdf ಬಂತು. ಅದರಲ್ಲಿ ಸಾಕ್ಷಿಗಳ ಸಮೇತ ಮತಾಂತರದ ಬಗ್ಗೆ ಬರೆದಿದ್ರು. ಆ ಸಾಕ್ಷಿಗಳಲ್ಲಿ ಎಷ್ಟು ನಿಜ ಎಷ್ಟು ಸುಳ್ಳು? ಯಾರಿಗೆ ಗೊತ್ತು? ಇದೇ ರೀತಿ ಇಸ್ಲಾಂ, ಕ್ರೈಸ್ತ ಮತಗಳೂ ಅನೇಕ ಪುಸ್ತಕಗಳನ್ನ ಹೊರತರ್ತಿವೆ.
ಕೆಲವು ಕ್ರೈಸ್ತ ಶಾಲೆಗಳಲ್ಲಿ ಕುಂಕುಮ, ಬಳೆಗಳು ನಿಶಿದ್ಧ ಇದು ಹಿಂದೂ ವಿರೋಧಿ ಅನ್ನೋರು ಒಂದು ಕಡೆಯಾದರೆ ಎಷ್ಟೋ ಕ್ರೈಸ್ತಶಾಲೆಗಳಲ್ಲಿ ಅಂತಹ ಸ್ಥಿತಿಯೇ ಇಲ್ಲ ಅನ್ನೋ ಸಂಗತಿ ಸುಳ್ಳಲ್ಲ.
ಇವೆಲ್ಲದರ ನಡುವೆ ದೆಹಲಿಯಲ್ಲಿ ೧೫ ದಿನಗಳ ಅಂತರದಲ್ಲೇ ೨ ಸ್ಫೋಟಗಳು... ಇಂಡಿಯನ್ ಮುಜಾಹಿದೀನ್ ಸ್ಫೋಟ ಮಾಡಿದ್ದು ಅಂತ ಒಬ್ಬರು ಹೇಳಿದ್ರೆ ಇದು ಹಿಂದೂ ಸಂಘಟನೆಗಳೇ ಮಾಡಿರಬಹುದೇನೋ ಅನ್ನೋರೇನೂ ಕಡಿಮೆ ಇಲ್ಲ. ಎಷ್ಟೋ ಮುಸ್ಲಿಮರು ಇಂಡಿಯನ್ ಮುಜಾಹಿದೀನ್ ಹೆಸರಿನ ಸಂಘಟನೆ ಇಲ್ವೇ ಇಲ್ಲ ಇದು ಹಿಂದೂಗಳ ಕೆಲಸಾನೇ ಅಂತ್ಲೂ ಹೇಳ್ತಿದಾರೆ. ಇದಕ್ಕೆ ತುಪ್ಪ ಸುರಿಯುವಂತೆ ಪ್ರಮೋದ್ ಮುತಾಲಿಕ್ ಹಿಂದೂಗಳ ಆತ್ಮಹತ್ಯಾ ದಳ ಕಟ್ಟುವುದಾಗಿ ಹೇಳಿದ್ದಾರೆ.
ಪೋಲೀಸರು ಹಾಗೂ ಹೀಗೂ ಕೆಲವು ಉಗ್ರರನ್ನ ಸೆರೆ ಹಿಡಿದ್ರು. ಭಯೋತ್ಪಾದಕರನ್ನು ಹಿಡಿಯುವಾಗ ಹುತಾತ್ಮರಾದ ಇನ್ಸ್ ಪೆಕ್ಟರ್ ಉಗ್ರರ ಗುಂಡಿಗೆ ಬಲಿಯಾದರು ಅಂತ ಒಂದು ಪತ್ರಿಕೆ ಹೇಳಿದ್ರೆ ಇನ್ನೊಂದು ಪತ್ರಿಕೆಯ ಪ್ರಕಾರ ಅವರು ಸತ್ತಿದ್ದು ಪೋಲೀಸರ ಗುಂಡಿನಿಂದಲೇ.
ಹೋದ ತಿಂಗಳೆಲ್ಲಾ ಕಾಶ್ಮೀರದ ಬಗ್ಗೆ ಚರ್ಚೆ ನಡೀತಿತ್ತು. ಕಾಶ್ಮೀರದ ಜನರಿಗೆ ಏನು ಬೇಕು ಪಾಕಿಸ್ತಾನವೇ, ಭಾರತವೇ ಅಥವಾ ಸ್ವಾತಂತ್ರ್ಯವೇ? ಹತ್ತಾರು ವಾಹಿನಿಗಳಲ್ಲಿ ನೂರಾರು ಚರ್ಚೆಗಳು. ಜನರು ಕೂಡ ಬರೆದಿದ್ದೇ ಬರೆದಿದ್ದು... ಫಲಿತಾಂಶ ಮಾತ್ರ ಸೊನ್ನೆ.
ಒಬ್ಬರ ಹೇಳಿಕೆ ಇನ್ನೊಬ್ಬರಿಗೆ ಪಥ್ಯವಾಗೋದೇ ಇಲ್ಲ. ಯಾರೂ ಇನ್ನೊಬ್ಬರ ಹೇಳಿಕೆಯ ಬಗ್ಗೆ ಯೋಚನೆ ಮಾಡೋದೂ ಇಲ್ಲ.
ಸಂಪದದಲ್ಲೇ ಪ್ರತಿಯೊಂದು ಲೇಖನಗಳಲ್ಲೂ ಉತ್ತರಿಸಲಾಗದ ನೂರಾರು ಪ್ರಶ್ನೆಗಳು.
ಯಾರನ್ನು ನಂಬಬೇಕು? ಸತ್ಯ ಏನು?

Rating
No votes yet

Comments