ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...

ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...

ಏಳು ಸ್ವರವು ಸೇರಿ ಸಂಗೀತವಾಯಿತು- ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು - ಏಳು ದಿನವು ಸೇರಿ ಒಂದು ವಾರವಾಯಿತು - ಏಳು ತಾರೆ ಸಪ್ತಋಷಿಯ ಚಿಹ್ನೆಯಾಯಿತು ಎಂದು ಪಿ.ಸುಶೀಲಾ ಅವರು ಮಧುರವಾಗಿ ಹಾಡಿರುವ ಹಾಡನ್ನು ನಾವೆಲ್ಲಾ ಕೇಳಿಯೇ ಇದ್ದೇವೆ. ಸ್ವರಗಳು ಏಳೇ ಏಕಿರಬೇಕು? ಇದಕ್ಕೆ ಉತ್ತರ ಹೇಳಲು ಸಾಧ್ಯವಾದರೂ, ಸ್ವಲ್ಪ ಕಷ್ಟ. (ಇಲ್ಲದಿದ್ದರೆ ಆ ಪಾಟಿ ಸಂಗೀತ ಲಕ್ಷಣ ಗ್ರಂಥಗಳು ಇರುತ್ತಿದ್ದವೇ!?) ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗುವುದನ್ನು ನಾವೆಲ್ಲ ವರ್ಣಚಕ್ರದಲ್ಲಿ ನೋಡೇ ಇದ್ದೇವೆ. ಏಳು ನಕ್ಷತ್ರಗಳು ಸೇರಿ ಆಕಾಶದಲ್ಲಿ ಚಿತ್ರಿಸುವ ಸಪ್ತಋಷಿ ಮಂಡಲ ಆಗಸದಲ್ಲಿ ಅತಿ ಸುಲಭವಾಗಿ ಗುರುತಿಸಬಲ್ಲಂತಹ ರಾಶಿಚಿತ್ರ (constellation).

ಇನ್ನು ಏಳುದಿನವು ಸೇರಿ ಒಂದು ವಾರವಾಗುವ ವಿಷಯವಂತೂ ಮೂರು ವರ್ಷದ ಮಗುವಿಗೂ ತಿಳಿದಿರುವ ವಿಷಯ. ಆದರೆ, ವಾರಕೆ ಏಕೆ ಏಳೇ ದಿನ? ಎಂಬ ಪ್ರಶ್ನೆಯನ್ನು ನಿಮಗೆ ನೀವು ಕೇಳಿಕೊಂಡಿದ್ದೀರಾ? ಅಲ್ಲದೆ, ಭಾನುವಾರವಾದ ಮೇಲೆ ಸೋಮವಾರ ಯಾಕೆ? ಬುಧವಾರ ಆದಮೇಲೆ ಗುರುವಾರ ಯಾಕೆ ಎಂದು ನಿಮ್ಮ ಮಗ/ಮಗಳು ಕೇಳಿದರೆ ಅದಕ್ಕೆ ಉತ್ತರ ಇದೆಯಾ ನಿಮ್ಮ ಬಳಿ?

ನಿಮಗೆ ಗೊತ್ತಿದ್ದರೆ ಒಳಿತು. ಇಲ್ಲದಿದ್ದರೆ,ನಾನೀಗ ಕೊಡುವ ತಿಳಿವು ನಿಮಗೆ ಎಂದಾದರೊಂದು ದಿನ ಉಪಯೋಗಕ್ಕೆ ಬರಬಹುದು ಎಂದುಕೊಂಡಿದ್ದೇನೆ.

ಎಲ್ಲಾ ಪುರಾತನ ನಾಗರೀಕತೆಗಳೂ, ಆಕಾಶವನ್ನು ನೋಡುತ್ತಾ, ಆಕಾಶಕಾಯಗಳಿಗೂ ಕಾಲಮಾನಕ್ಕೂ ಇರುವ ಸಂಬಂಧವನ್ನು ಕಂಡುಕೊಂಡಿದ್ದವರೇ. ನಮ್ಮ ದೇಶದಲ್ಲಿ ತಿಂಗಳುಗಳ ಎಣಿಕೆಗೆ ಚಂದ್ರನ ಚಲನೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿತ್ತು. ನಕ್ಷ್ಜತ್ರಗಳ ಹಿನ್ನಲೆಯಲ್ಲಿ ಚಲಿಸುವ ಚಂದ್ರ, ಆಕಾಶದಲ್ಲಿನ ಅದೇ ಸ್ಥಾನಕ್ಕೆ ಸುಮಾರು ೨೭-೨೮ ದಿನಗಳಲ್ಲಿ ಬರುವುದನ್ನು ತಿಳಿದ ಭಾರತೀಯರು (ಚೀನೀಯರು ಕೂಡ), ಆಕಾಶವನ್ನು ೨೭-೨೮ ಭಾಗಗಳಾಗಿ ವಿಂಗಡಿಸಿಕೊಂಡಿದ್ದರು. ನಾವು ಅಶ್ವಿನಿ, ಭರಣಿ ಮೊದಲಾದ ಹೆಸರಿಂದ ಕರೆಯುವ ನಕ್ಷತ್ರಗಳು ಇವೇ. ಮತ್ತೆ, ಒಂದು ಹುಣ್ಣೀಮೆಯಿಂದ ಹುಣ್ಣಿಮೆಗೆ ಸುಮಾರು ೨೯-೩೦ ದಿನಗಳಿರುವುದನ್ನೂ, ಅದರಲ್ಲಿ ಅರ್ಧಾ ಭಾಗ ಚಂದಿರ ಹೆಚ್ಚುವುದನ್ನೂ, ಇನ್ನ್ರರ್ಧ ಭಾಗ ಕಿರಿದಾಗುವುದನ್ನೂ ಗಮನಿಸಿದ ಅವರು, ಆ ಅಂತರವನ್ನೇ, ಎರಡು ಪಕ್ಷ (ಪಕ್ಷ= ಬದಿ)ಗಳಿರುವ ತಿಂಗಳು ಎಂದು ಕರೆದರು.ನಮ್ಮ ಹೆಚ್ಚಿನ ಹಬ್ಬಗಳೂ ಆಚರಣೆಗಳೂ. ಈ ತಿಥಿ ಹಾಗೂ ನಕ್ಷತ್ರಗಳನ್ನು ಅವಲಂಬಿಸಿಯೇ ಇರುತ್ತವೆ. ಅತಿ ಹಿಂದಿನ ಕಾವ್ಯಗಳಲ್ಲಿ (ರಾಮಾಯಣ/ಮಹಾಭಾರತ ಇತ್ಯಾದಿ) ವಾರಗಳ ಪ್ರಸ್ತಾಪ ಬರುವುದೇ ಇಲ್ಲ.

ವಾರಗಳ ಎಣಿಕೆ ಪ್ರಾರಭ್ಹವಾಗಿದ್ದು ಗ್ರೀಸಿನ ಆಸುಪಾಸಿನಲ್ಲಿ. ಆಕಾಶದಲ್ಲಿ , ನಕ್ಷತ್ರಗಳು ಯಾವಾಗಲೂ ಒಂದೇ ರೀತಿಯಾಗಿರುತ್ತವೆ (ಪರಸ್ಪರ ೨ ನಕ್ಷತ್ರಗಳ ನಡುವೆ ಕಣ್ಣಿಗೆ ಕಾಣುವ ಬದಲಾವಣೆ ಒಬ್ಬ ವ್ಯಕ್ತಿಯ ಜೀವನಕಾಲದಲ್ಲಿ ಕಾಣುವುದು ಕಷ್ಟ. ಆದರೆ, ಇನ್ನು ೭ ಆಕಾಶಕಾಯಗಳು ಮಾತ್ರ, ಈ ತಾರೆಗಳ ಹಿನ್ನಲೆಯಲ್ಲಿ ಚಲಿಸುತ್ತಿರುತ್ತವೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ ಮತ್ತು ಶನಿ ಅವೇ ಈ ಕಾಯಗಳೆಂದು ಅವರು ಕಂಡುಕೊಂಡಿದ್ದರು. ಅದರಲ್ಲಿ, ಈ ಒಂದೊಂದು ಕಾಯವೂ ನಕ್ಷತ್ರಗಳ ಹಿನ್ನಲೆಯಲ್ಲಿ ಹೊರಟಲ್ಲಿಗೇ ಬರಲು ಬೇರೆಬೇರೆ ಸಮಯ ಬೇಕಾಗುತ್ತದೆ ಎನ್ನುವುದೂ ಅವರೆಗೆ ತಿಳಿದಿತ್ತು. ಚಂದ್ರ ಈ ಕೆಲಸಕ್ಕೆ ಮೂವತ್ತು ದಿನ ತೆಗೆದುಕೊಂಡರೆ, ಶುಕ್ರ ಗ್ರಹಕ್ಕೆ ಸುಮಾರು ಇನ್ನೂರೈವತ್ತು ದಿನ ಬೇಕು. ಮಂಗಳನಿಗೆ ಸುಮಾರು ಎರಡು ವರ್ಷ ಬೇಕಿದ್ದರೆ, ಬುಧನಿಗೆ ಮೂರು ತಿಂಗಳೇ ಸಾಕು. ಇನ್ನು, ಸೂರ್ಯನಿಗೆ ಒಂದು ವರ್ಷವಾದರೆ, ಗುರುಗ್ರಹಕ್ಕೆ ಹನ್ನೆರಡು ವರ್ಷ. ಶನಿಗಂತೂ ಕೇಳಲೇಬೇಡಿ. ಶುದ್ದ ಸೋಮಾರಿ ಆ ಗ್ರಹ. ಹೊರಟಲ್ಲಿಗೇ ಮರಳಲು ಮೂವತ್ತು ವರ್ಷ ಬೇಕು  ಅದಕ್ಕೆ...

ಈ ಸಮಸ್ತವೂ ಈ ಜನರು ತಿಳಿದುಕೊಂಡದ್ದು ನೂರಾರು ವರ್ಷ ಆಗಸವನ್ನು ವೀಕ್ಷಿಸಿದರ ಫಲ..

ಇದರ ಜೊತೆ ಇನ್ನೊಂದು ವಿಷಯವೂ ಅವರ ಗಮನಕ್ಕೆ ಬಂದಿತ್ತು. ಮತ್ತೆ ಮತ್ತೆ ಮರಳುವ ಕಾಲಗಳು ಸುಮಾರು ಮುನ್ನೂರ ಅರವತ್ತು ದಿನಗಳ ಅಂತರದಲ್ಲಿ ಬರುವುದು ಅವರಿಗೆ ಗೊತ್ತಾಗಿತ್ತು. ಸೂರ್ಯ ಒಂದು ಸಲ ಆಗಸದ ಸುತ್ತ ಸುತ್ತಲು ಬೇಕಾದ ಸಮಯ ಮುನ್ನೂರ ಅರವತ್ತೈದು ದಿನ ಎಂದು ಅವರು ಕಂಡುಕೊಂಡಿದ್ದನ್ನು ಆಗಲೇ ಹೇಳಿದೆ. ಈ ಕಾಲಕ್ಕೇ ಅವರು ವರ್ಷ ಎಂದದ್ದು. ಹಾಗಾದರೆ, ಕಾಲಗಳಿಗೂ, ಸೂರ್ಯನಿಗೂ ನಂಟು ಇದ್ದದ್ದು ತಿಳಿದುಬಂತು ಎನ್ನಿ. ಈ ಒಂದು ವರ್ಷದ ಅವಧಿಯಲ್ಲಿ ಚಂದ್ರ ಹನ್ನೆರಡು ಬಾರಿ ಕುಗ್ಗುವನು, ಮತ್ತೆ ಹನ್ನೆರಡು ಬಾರಿ ಹಿರಿದಾಗುವನು ಅಲ್ಲವೇ? ಅಂದರೆ ವರ್ಷಕ್ಕೆ ೨೪ ಪಕ್ಷಗಳಾದವು.

ಸೂರ್ಯ ಹುಟ್ಟಿ, ಮುಳುಗಿ , ಮತ್ತೆ ಹುಟ್ಟುವ ಕಾಲಾವಧಿಗೆ ಅವರು ದಿನ (day) ಎಂದರು. ಅನುಕೂಲಕ್ಕೆ ಇದನ್ನು ಸಣ್ಣ ಸಣ್ಣ ಅವಧಿಗಳಾಗಿ ವಿಂಗಡಿಸಿದರೆ, ಒಳಿತಲ್ಲವೇ? ಆಗ ಅವರಿಗೆ ನೆನಪಾಗಿದ್ದು ವರ್ಷದ ೨೪ ಚಂದ್ರನ ಪಕ್ಷಗಳು. ಹಾಗಾಗಿ, ದಿನವನ್ನೂ ಅವರು ೨೪ ಭಾಗಗಳಾಗಿ ಮಾಡಿದರೆ ಏಕರೂಪಿಯಾಗಿರಬಹುದೆಂದೆಣಿಸಿ, ದಿನಕ್ಕೆ ೨೪ ಗಂಟೆಗಳೆಂದು (hour) ನಿಗದಿ ಮಾಡಿದರು.

ಕಾಲಮಾನಕ್ಕೂ, ಆಕಾಶಕಾಯಗಳಿಗೂ ಹೀಗೆ ನಂಟು ಬೆಸೆದಮೇಲೆ, ಅವರು ದಿನದ ಪ್ರತಿ ಗಂಟೆಗೂ ಒಂದು ಆಕಾಶಕಾಯಕ್ಕೆ ಹೀಗೆ ಹಂಚಿಬಿಟ್ಟರು.

ಮೊದಲು ಈ ಎಲ್ಲ ಕಾಯಗಳೂ ಆಕಾಶದಲ್ಲಿ ಸುತ್ತುವ ಸಮಯದ ಇಳಿಕೆಯ ಪ್ರಕಾರ ಬರೆಯುತ್ತ ಹೋಗೋಣ. ಸುಮ್ಮನೆ, ಇವತ್ತಿನ ದಿವಸದ ಮೊದಲ ಘಂಟೆಯನ್ನು ಸೂರ್ಯನಿಗೆ ಕೊಟ್ಟರು ಎಂದುಕೊಳ್ಳೋಣ. ಕೆಳಗಿನ ಪಟ್ಟಿಯಲ್ಲಿ ಸೂರ್ಯನ ಮುಂದೆ ೧ ಬರೆದಿದ್ದೇನೆ. ಆಮೇಲೆ ಮುಂದಿನ ಗಂಟೆಯನ್ನು ಪಟ್ಟಿಯಲ್ಲಿ ತೋರಿಸಿರುವ ಹಾಗೆ ಶುಕ್ರನಿಗೆ ಕೊಡಬೇಕು. ಅದರ ಮುಂದಿನ ಗಂಟೆಯನ್ನು ಬುಧನಿಗೆ ಕೊಡಬೇಕು. ಹೀಗೇ ಹೋದರೆ, ದಿನದ ಇಪ್ಪತ್ತನಾಕನೆಯ, ಅಂದರೆ ಕೊನೆಯ ಗಂಟೆಯನ್ನು ಮತ್ತೆ ಬುಧನಿಗೇ ಸಲ್ಲಿಸಬೇಕು.

ಹಾಗಾದರೆ, ಪಟ್ಟಿಯ ಪ್ರಕಾರ ಹೋದರೆ ನಾಳೆಯ ಮೊದಲ ಗಂಟೆಯನ್ನು ಚಂದ್ರನಿಗೆ ಕೊಡಬೇಕು. ಮುಂದೆ ಹೋಗಿ ಇನ್ನೂ - ನಾಡಿದ್ದಿನ ಮೊದಲ ಗಂಟೆಯನ್ನು ಮಂಗಳನಿಗೆ ಕೊಡಬೇಕು.

 

ಆಕಾಶಕಾಯ ಸುತ್ತುವ ಸಮಯ                    
                       
ಶನಿ ೩೦ ವರ್ಷ     ೧೨ ೧೯ ೧೬ ೨೩  
ಗುರು ೧೨ ವರ್ಷ     ೧೩ ೨೦ ೧೦ ೧೭ ೨೪  
ಮಂಗಳ ~೬೮೦ ದಿನ     ೧೪ ೨೧ ೧೧ ೧೮  
ಸೂರ್ಯ ೩೬೫ ದಿನ   ೧೫ ೨೨ ೧೨ ೧೯  
ಶುಕ್ರ ~೨೫೦ ದಿನ   ೧೬ ೨೩ ೧೩ ೨೦    
ಬುಧ ~೯೦ ದಿನ   ೧೦ ೧೭ ೨೪ ೧೪ ೨೧    
ಚಂದ್ರ ೩೦ ದಿನ   ೧೧ ೧೮ ೧೫ ೨೨    
                       
                       
                       

ಹೀಗೇ ಏಳು ದಿನ ಹೋದರೆ, ಪ್ರತಿ ದಿನದ ಮೊದಲ ಗಂಟೆಯ ಅಧಿಪತಿ ನಿಮಗೆ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ ಮತ್ತೆ ಶನಿ ಆಗುತ್ತಾರೆ. ಶನಿಯ ನಂತರ ಮತ್ತೆ ಮಾರನೆಯ ದಿನ ಸೂರ್ಯನ ಸರತಿ.

ಈಗ, ಪ್ರತೀ ದಿವಸವನ್ನು ಆ ದಿನದ ಮೊದಲ ಗಂಟೆಯ ಅಧಿಪತಿ ಯಾರೋ ಅದರ ಹೆಸರಿನಲ್ಲಿ ಕರೆಯಲು ಪ್ರಾರಂಭ ಮಾಡಿದ್ದರಿಂದ, ವಾರಗಳು ಏಳಾದವು - ಭಾನುವಾರ ಸೋಮವಾರ ಮಂಗಳವಾರ ಬುಧವಾರ ಗುರುವಾರ ಶುಕ್ರವಾರ ಶನಿವಾರ!

ಅದಕ್ಕೇ ವಾರಕೆ ಏಳೇ ಏಳು ದಿನ. ಮತ್ತೆ ಸೋಮವಾರ ವಾದ ಮೇಲೆ, ಮಂಗಳವಾರವೇ ಬರಬೇಕು :)

ಈ ವಿಷಯ ತಿಳಿದಿಲ್ಲದಿದ್ದವರಿಗೆ ಈಗ ಮನದಟ್ಟಾಗಿರಬಹುದು. ತಿಳಿದಿದ್ದವರು, ಬಹುಶಃ ಓದಲಿಕ್ಕಿಲ್ಲ ;) ಹಾಗಾಗಿ ಪರವಾಗಿಲ್ಲ!

Rating
Average: 4 (1 vote)

Comments