ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೨

ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೨

ಐಶ್ವರ್ಯಳಿಗೆ ನನ್ನನ್ನು ನೋಡಿ ಬಹಳ ಆಶ್ಚರ್ಯವಾಯಿತು. ಅಂದು ಆಕೆ ಬಹಳ ಮಾತಾಡಿದಳು. ಮಾತಿನಲ್ಲೆಲ್ಲಾ ಸ್ತ್ರೀ ಸ್ವಾತಂತ್ರ, ಸಮಾನತೆ, ಶೋಷಣೆ ಇವುಗಳೇ ತುಂಬಿದ್ದವು. ಸಂಸಾರ ಬಂಧನದಲ್ಲಿದ್ದ ನನಗೆ ಇದು ನಿಜವಾಗಲೂ ಬೋರ್ ಹೊಡೆಸಿತು. ನಾನು ಅವಳಿಗೆ ಮದುವೆಯಾಗುವಂತೆ ಸಲಹೆ ನೀಡಿದ್ದಕ್ಕೆ, ನಗುತ್ತಾ "ನನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಅದು. ಯಾರಿಗೆ ಬೇಕು ಮದುವೆ ಮಕ್ಕಳು ಎಂಬ ಸಂಕೋಲೆಗಳು" ಎಂದಳು. ಇನ್ನು ದೈಹಿಕ ಬಯಕೆಗಳಿಗೆ ಈ ತರಹ ಪಾರ್ಟಿಯಲ್ಲಿ ಸಿಗುವ ಗಂಡು ಬಕರಾಗಳನ್ನು ಉಪಯೋಗಿಸಿಕೊಳ್ಳುತ್ತೇನೆ ಎಂದಾಗ ಅವಳ ಬಗ್ಗೆ ಇದ್ದ ಅಲ್ಪ ಸ್ವಲ್ಪ ಪ್ರೀತಿಯು ಅಸಹ್ಯಕ್ಕೆ ಮಾರ್ಪಾಟಾಯಿತು. ಪಾರ್ಟಿಯು ಯಾವಾಗ ಮುಗಿಯುತ್ತದೆಯೋ ಎನ್ನುವ ತವಕ ಶುರುವಾಯಿತು ನನಗೆ.

ಮೈಸೂರಿಗೆ ಬಂದ ಮೇಲೆ ಅವಿನಾಶ್ ಗೆ ನನ್ನ ಬಳಿಯಿರಲು ಸಮಯ ಸಾಲುತ್ತಿರಲಿಲ್ಲ. ನನಗೂ ಕೂಡ ಬಹಳ ಏಕಾಂಗಿತನ ಕಾಡುತ್ತಿತ್ತು. ಸದಾ ಟೂರ್, ಪಾರ್ಟಿ, ಕೆಲಸದ ಕಾರಣ ಕೊಟ್ಟು ಅವಿನಾಶ್ ಮನೆಯಿಂದಾಚೆಯೇ ಉಳಿಯುತ್ತಿದ್ದ. ಮೊದಮೊದಲಿಗೆ ಪಾರ್ಟಿಗಳಿಗೆ ಕರೆಯುತ್ತಿದ್ದ ಆತ, ನನ್ನ ನಿರಾಕರಣೆಯಿಂದಾಗಿ ಆಮೇಲೆ ಕರೆಯುವುದನ್ನು ನಿಲ್ಲಿಸಿದ್ದ. ನನಗಾದರೂ ಈ ಪಾರ್ಟಿಗಳು ಉಸಿರು ಕಟ್ಟುವಂತೆ ಆಗುತ್ತಿತ್ತು. ಈ ಮೋಜು, ಮಸ್ತಿ, ಕುಡಿತ, ನೃತ್ಯ, ಇದೆಲಾ ಅಸಹ್ಯವಾಗುತ್ತಿತ್ತು. ಅವಿನಾಶ್ ಈಗೀಗ ನನ್ನನ್ನು ಅವಾಯ್ಡ್ ಮಾಡಿದಂತೆ ಭಾಸವಾಗುತ್ತಿತ್ತು. ತವರು ಮನೆಗೆ ಹೋಗೋಣವೆಂದರೆ, ನನ್ನ ತಾಯಿಯ ನಿಧನದ ನಂತರ ಅಣ್ಣ ಅತ್ತಿಗೆಗೆ ಅವರದೇ ಸಂಸಾರದ ತಾಪತ್ರಯ. ಅಲ್ಲಿಯೂ ಕೂಡ ಹೆಚ್ಚು ದಿನಗಳು ಇರಲಾಗುತ್ತಿರಲಿಲ್ಲ. ಗೆಳತಿಯರು ಮೊದಲೇ ಇರಲಿಲ್ಲ. ಐಶ್ವರ್ಯನಂತೂ ಪಾರ್ಟಿಯ ನಂತರ ನೋಡಿರಲೇ ಇಲ್ಲ.

ಹೀಗೆ ಒಂದು ದಿನ ಬೇಸರವಾಗಿ, ದೇವಸ್ಥಾನದಕ್ಕೆಂದು ಹೊರಟಾಗ ಅವಿನಾಶ್ ನ ಕಾರ್ ಒಂದು ಮನೆಯ ಮುಂದೆ ನಿಂತಿದ್ದಿತು. ಹಾಗೇ ಮನದಲ್ಲಿ ನನ್ನ ಗಂಡ ನನ್ನಿಂದ ದೂರವಾಗುತ್ತಿರುವನೇ ಎಂಬ ಭಯವೂ ಆಯಿತು. ಜಗಳ ಮಾಡಿ ಪ್ರಯೋಜನವಿಲ್ಲ, ತಾಳ್ಮೆಯಿಂದ ಅವನ ಬಾಯಿ ಬಿಡಿಸಬೇಕೆಂದು ನಿಶ್ಚಯಿಸಿದೆ. ಅಂದು ರಾತ್ರಿ ಅವಿನಾಶ್ ಮನೆಗೆ ಬಂದಾಗ ನಾನೇನೂ ಕೇಳಲಿಲ್ಲ. ಮರುದಿನದಿಂದ ಅವಿನಾಶ್ ಸಂಜೆ ಮನೆಗೆ ಬರುವಾಗ ಆತನಿಗೆ ಇಷ್ಟವಿರುವಂತೆ ಅಲಂಕಾರ ಮಾಡಿಕೊಂಡು ನಗುಮುಖದಿಂದ ಬರಮಾಡಿಕೊಳ್ಳಹತ್ತಿದೆ. ಇತ್ತೀಚೆಗೆ ಅಲಂಕಾರದ ಕಡೆ ಅಷ್ಟಾಗಿ ಮನಸ್ಸೇ ಇರುತ್ತಿರಲಿಲ್ಲ. ಇನ್ನಾರೂ ನನ್ನನ್ನು ನೋಡಬೇಕೆಂಬ ಉದಾಸೀನವಿರುತ್ತಿತ್ತು. ನನ್ನಲ್ಲಾದ ಮಾರ್ಪಾಡು ನಿಜವಾಗಲೂ ನನಗೆ ಮಾನಸಿಕ ಭದ್ರತೆಯನ್ನು ಕೊಟ್ಟಿತು ಹಾಗೂ ಅವಿನಾಶ್ ನನ್ನು ಕೂಡಾ. ಅವಿನಾಶ್ ನ ಕೆಲಸ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗಿಯಾಗುತ್ತಿದ್ದೆ ಈಗೀಗ. ಇದು ಅವಿನಾಶ್ ನಿಗೆ ಬಹಳ ಖುಷಿ ಕೊಡುತ್ತಿತ್ತೋ ಏನೋ ಗೊತ್ತಿಲ್ಲ, ಅವಿನಾಶ್ ಕೂಡಾ ಈಗೀಗ ಎಲ್ಲೂ ಹೋಗುತ್ತಿರಲಿಲ್ಲ. ನನ್ನ ಸಂಸಾರಕ್ಕೆ ಬಂದಿದ್ದ ಶಾಪವೊಂದನ್ನು ನಾ ನಿವಾರಿಸಿಕೊಂಡಿದ್ದೆ ಅಥವಾ ಆ ಭ್ರಮೆಯಲ್ಲಿದ್ದೆ!

ಇದಾದ ೧ ತಿಂಗಳ ನಂತರ ಒಮ್ಮೆ ಶಾಪಿಂಗ್ ಮಾಲಿನಲ್ಲಿ ಐಶ್ವರ್ಯಳನ್ನು ಭೇಟಿ ಮಾಡಿದೆ. ಆಕೆಯ ಮುಖದಲ್ಲಿ ಮೊದಲಿನ ಕಳೆಯಿರಲಿಲ್ಲ. ಸ್ವಲ್ಪ ಸುಸ್ತಾದವಳಂತೆ ಕಂಡು ಬರುತ್ತಿದ್ದಳು. ನಾನೇ ಕರೆದು ಮಾತಾಡಿಸಿದೆ. ಆಕೆ ನನ್ನ ಕಣ್ತಪ್ಪಿಸಿದವಳಂತೆ ಮಾತಾಡುತ್ತಿದ್ದಳು. ಸ್ವಲ್ಪ ಗೊಂದಲದಲ್ಲಿಂತೆ ಕಂಡು ಬಂದಳು. ನಾನು ಅವಿನಾಶ್ ನ ಬಗ್ಗೆ ಮಾತಾಡುತ್ತಾ, ಆತ ದಾರಿ ತಪ್ಪಿದನ್ನು, ನಾನು ಹೇಗೆ ಆತನನ್ನು ಕಾಪಾಡಿಕೊಂಡೆ ಎಂಬುದನ್ನು ಉತ್ಸಾಹದಲ್ಲಿ ವಿವರಿಸುತ್ತಿದ್ದರೆ, ಐಶ್ವರ್ಯಳಿಗೆ ನನ್ನ ಮಾತಿನ ಮೇಲೆ ಅಷ್ಟಾಗಿ ಗಮನವಿರಲಿಲ್ಲ. ಮನೆಗೊಮ್ಮೆ ಬರುವಂತೆ ಹೇಳಿ ನಾ ಅಲ್ಲಿಂದ ಹೊರಟೆ.

ಈಗೆರಡು ದಿನಗಳಿಂದ ತಿಂದದ್ದು ಸ್ವಲ್ಪ ವಾಕರಿಸುವ ಹಾಗೆ ಆಗುತ್ತಿತ್ತು. ಹಾಗಾಗಿ ವೈದ್ಯರಲ್ಲಿಗೆ ಹೋಗಲು ಬೇಗ ಬರುವುದಾಗಿ ಅವಿನಾಶ್ ಹೇಳಿದ್ದ. ನಾವಿಬ್ಬರೂ ವೈದ್ಯರಲ್ಲಿಗೆ ಹೋದೆವು. ನಾನು ಗರ್ಭಿಣಿಯೆಂದು, ಸ್ವಲ್ಪ ವೀಕಾಗಿರುವೆನೆಂದು ವೈದ್ಯರು ಮಾತ್ರೆಗಳನ್ನು ಕೊಟ್ಟರು. ಜಾಗರೂಕತೆಯಿಂದ ನೋಡಿಕೊಳ್ಳಲು ಹೇಳಿದರು. ಸ್ವರ್ಗದಲ್ಲಿ ತೇಲಾಡುತ್ತಿದ್ದ ನನಗೆ, ಐಶ್ವರ್ಯಳನ್ನು ಭೇಟಿ ಮಾಡಿದ ವಿಷಯ ಅವಿನಾಶ್ ಗೆ ಹೇಳಲು ಮರೆತುಹೋಯಿತು. ಬಹಳ ಅಕ್ಕರಾಸ್ತೆಯಿಂದ ಅವಿನಾಶ್ ನನ್ನನ್ನು ನೋಡಿಕೊಳ್ಳುತ್ತಿದ್ದ. ೨ ತಿಂಗಳಿನ ಚೆಕಪ್ ಗಾಗಿ ನಾನೊಬ್ಬಳೇ ಆಸ್ಪತ್ರೆಗೆ ಹೊರಟೆ. ಅಲ್ಲಿ ಹೋದಾಗ ಐಶ್ವರ್ಯ ಕೂಡಾ ಬಂದಿದ್ದಳು. ಕಣ್ಣಿನ ಕೆಳಗೆ ಕಪ್ಪು, ಕೃಶವಾಗಿದ್ದಳು. ನನ್ನನ್ನು ನೋಡಿದ ಕೂಡಲೇ ಮಾತಾನಾಡಿಸದೆ ಹೊರಟೇ ಹೋದಳು. ಕುತೂಹಲದಿಂದ ಅಲ್ಲೇ ಇದ್ದ ನರ್ಸ್ ಬಳಿಯಲ್ಲಿ ಅವಳು ಬಂದಿದ್ದ ಕಾರಣ ಕೇಳಿದೆ. ಆಗ ನರ್ಸ್ ಹೇಳಿದ ಮಾತು ಕೇಳಿದ ಕೂಡಲೇ ತಲೆ ಗಿರ್ರೆಂದಿತು. ನನ್ನ ಗೆಳತಿ ಐಶ್ವರ್ಯಳಿಗೆ HIV +. ಸಮಾಧಾನ ಮಾಡಿಕೊಂಡೆ. ಅವಳ ನಡೆವಳಿಕೆಗೆ ಆ ದೇವರು ಸರಿಯಾದ ಶಿಕ್ಷೆಯನ್ನೇ ಕೊಟ್ಟಿದ್ದಾನೆ ಅಂದುಕೊಂಡೆ.

ಅವಿನಾಶ್ ಬರುವಷ್ಟರಲ್ಲಿ ಅಂದ್ಯಾಕೋ ಸ್ವಲ್ಪ ತಡವಾಗಿತ್ತು. ಬಂದ ಒಡನೆಯೇ ಏನೇನೋ ಬಡಬಡಿಸಹತ್ತಿದ. ತುಂಬಾ ಕುಡಿದಿದ್ದ ಅವಿನಾಶ್ ’ನನ್ನನ್ನು ಕ್ಷಮಿಸು, ಕ್ಷಮಿಸು’ ಎನ್ನುತ್ತಲೇ ಇದ್ದ ಅಮಲಿನಲ್ಲಿ. ಅತ್ತಿಗೆಯ ಫೋನ್ ಬಂತು ಅಷ್ಟರಲ್ಲಿ. "ನಿನ್ನ ಗೆಳತಿ ಐಶ್ವರ್ಯ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ". ಇತ್ತ ಕಡೆ ಅವಿನಾಶ್ ಈ ಸ್ಥಿತಿಯಲ್ಲಿದ್ದ, ಅತ್ತ ಕಡೆ ಗೆಳತಿಯ ಸಾವು, ನಾ ಏನು ಮಾಡಲಿ ಎನ್ನುವ ಗೊಂದಲಕ್ಕೆ ನನ್ನನ್ನು ಸಿಲುಕಿಸಿತ್ತು. ಪಕ್ಕದ ಮನೆಯವರಿಗೆ ಅವಿನಾಶ್ ನ ಸ್ಥಿತಿ ತಿಳಿಸಿ, ನಾ ಒಬ್ಬಳೇ ಹೊರಟೆ. ಅತ್ತಿಗೆಯ ಬಳಿ ಐಶ್ವರ್ಯಳ ಅಡ್ರೆಸ್ ತಿಳಿದು ಆಕೆಯ ಮನೆಗೆ ಹೋದರೆ, ನಾನಂದು ಅವಿನಾಶ್ ನನ್ನು ನೋಡಿದ್ದು ಇದೇ ಮನೆಯ ಮುಂದಾಗಿತ್ತು. ಗಾಬರಿಯಾಗಿ ನಾ ಅಲ್ಲಿಂದ ಬಂದುಬಿಟ್ಟೆ.

ಮನದಲ್ಲಿ ಬಿರುಗಾಳಿಯೇಳುತ್ತಿದ್ದರೂ ಸಮಾಧಾನದಿಂದಲೇ ತಲೆತಗ್ಗಿಸಿ ನಿಂತಿದ್ದ ಅವಿನಾಶ್ ನನ್ನು ನೆನ್ನೆಯ ಘಟನೆಗೆ ಕಾರಣವನ್ನು ಕೇಳಿದೆ. ಆತ ಮುಂದಿಟ್ಟ ಚಿತ್ರಣ ಇದುವರೆವಿಗೂ ನಾ ನಂಬಿಕೊಂಡು ಬಂದಿದ್ದ, ಪಾಲಿಸಿಕೊಂಡು ಬಂದ ನೀತಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿತು. ನನ್ನ ಉದಾಸೀನದಿಂದ ಬೇಸತ್ತ ಅವಿನಾಶ್, ಐಶ್ವರ್ಯಳ ರೂಪ ಲಾವಣ್ಯಕ್ಕೆ ಮನಸೋತಿದ್ದ. ಆಕೆಯೊಡಗಿನ ಒಡನಾಟ ದೈಹಿಕ ಸಂಭಂದದವರೆಗೂ ಮುಂದುವರೆದಿತ್ತು. ನಾ ಬದಲಾದ ನಂತರ ಅವಿನಾಶ್ ಅತ್ತ ಕಡೆ ತಲೆ ಹಾಕಿಯೂ ಮಲಗಿರಲಿಲ್ಲವೆಂದು, ತನ್ನನ್ನು ನಂಬುವಂತೆ ಪರಿಪರಿಯಾಗಿ ಬೇಡಿಕೊಂಡ. ಆದರೂ ಮನಸ್ಸು ಮುರಿದಿತ್ತು. ಗೆಳತಿಯೇ ಹೀಗೆ ಮಾಡುವಳೆಂದು ನಂಬಲಾದೀತೇ! ಕೈ ಹಿಡಿದ ಗಂಡನೇ ನನಗೆ ಮೋಸ ಮಾಡಿದರೆ ಇನ್ನಾರೂ ದಿಕ್ಕು.

ಮುಂದುವರಿಯುವುದು

Rating
No votes yet

Comments