ಒಂದು ಅತ್ಯಾಚಾರದ ಸುತ್ತ!

ಒಂದು ಅತ್ಯಾಚಾರದ ಸುತ್ತ!

ಅಂದು ನಮ್ಮ ಉದ್ಯಾನ ನಗರಿ ಬೆಂಗಳೂರು ತುಂಬ ಗರಮ್ಮಾಗಿತ್ತು!  ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಮೂರ್ತಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆಯ ಘಟನೆ ಇಡೀ ಉದ್ಯಾನನಗರಿಯನ್ನೇ ಬೆಚ್ಚಿ ಬೀಳಿಸಿತ್ತು. ಮಾಧ್ಯಮಗಳಲ್ಲೆಲ್ಲಾ ಅದೇ ಸುದ್ಧಿ, ಇಡೀ ನಗರ ಒಕ್ಕೊರಲಿನಿಂದ ದಾರುಣ ಕೃತ್ಯವನ್ನೆಸಗಿದ್ದ ಕ್ಯಾಬ್ ಚಾಲಕ ಶಿವಕುಮಾರನ ವಿರುದ್ಧ ಧ್ವನಿಯೆತ್ತಿ ಅತ್ಯಂತ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿತ್ತು.  ಆ ದಾರುಣ ಘಟನೆ ನಡೆದ ಕೆಲವೇ ದಿನಗಳಲ್ಲಿ ಅಂದಿನ ಪೋಲೀಸ್ ಕಮೀಷನರ್ ಆಗಿದ್ದ ಶ್ರೀ ಅಜಯ್ ಕುಮಾರ್ ಸಿಂಗ್ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಎಲ್ಲಾ ಕಾಲ್ ಸೆಂಟರ್, ಬಿಪಿಒ, ಸಾಫ್ಟ್ವೇರ್ ಸಂಸ್ಥೆಗಳ ಮುಖ್ಯಸ್ಥರು ಹಾಗೂ ನಿರ್ವಾಹಕರುಗಳ ಸಭೆ ಕರೆದಿದ್ದರು.  ಹಲವು ಕಾಲ್ ಸೆಂಟರ್ ಹಾಗೂ ಬಿಪಿಒಗಳಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದ ಪ್ರಮುಖ ಭದ್ರತಾ ಸಂಸ್ಥೆಗಳನ್ನು ಆಹ್ವಾನಿಸಿದ್ದರು.  ನಮ್ಮ ಸಂಸ್ಥೆಯಿಂದ ನಾನೂ ಪಾಲ್ಗೊಂಡಿದ್ದೆ.  ಹಲವು ಸುತ್ತಿನ ವಿಚಾರ ವಿನಿಮಯದ ನಂತರ ಹೊಸ ನಿಯಮವೊಂದನ್ನು ರೂಪಿಸಲಾಯಿತು.  ಅದರಂತೆ ಎಲ್ಲಾ ಕಾಲ್ ಸೆಂಟರ್, ಬಿಪಿಒ, ಸಾಫ್ಟ್ವೇರ್ ಸಂಸ್ಥೆಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಭದ್ರತಾ ಅಂಗರಕ್ಷಕರನ್ನು ಒದಗಿಸಬೇಕು, ಮನೆಯಿಂದ ಕೆಲಸಕ್ಕೆ ಬರುವಾಗ, ಕೆಲಸದಿಂದ ಮನೆಗೆ ಹಿಂದಿರುಗುವಾಗ ಮನೆಬಾಗಿಲಿನವರೆಗೂ ಒಬ್ಬ ಭದ್ರತಾ ರಕ್ಷಕ ಜೊತೆಯಲ್ಲಿಯೇ ಹೋಗಿ ಬಿಟ್ಟು ಬರಬೇಕು ಎಂದು ಆದೇಶಿಸಲಾಯಿತು. 

ಬೆಂಗಳೂರಿನ ಭದ್ರತಾ ಸಂಸ್ಥೆಗಳ ಇತಿಹಾಸದಲ್ಲಿಯೇ ಇದೊಂದು ಅಪೂರ್ವ ಬೆಳವಣಿಗೆಗೆ ಕಾರಣವಾಯಿತು.  ಅದುವರೆವಿಗೂ ಕೇವಲ ಹವಾಯಿ ಚಪ್ಪಲಿ, ಖಾಕಿ ಬಟ್ಟೆ ತೊಟ್ಟು, ಬೀಡಿ ಸೇದುತ್ತಾ, ಗೇಟು ತೆಗಿ, ಗೇಟು ಮುಚ್ಚು ಎಂದಷ್ಟೆ ಸೀಮಿತವಾಗಿದ್ದ ಭದ್ರತಾರಕ್ಷಕರ ಪಾಲಿಗೆ ಈ ಘಟನೆ ಹೊಸ ಆಯಾಮವನ್ನೇ ಸೃಷ್ಟಿಸಿತು ಎಂದರೆ ತಪ್ಪಾಗಲಾರದು. ಹೊಸ ಹೊಸ ವಿನ್ಯಾಸದ ಸಮವಸ್ತ್ರಗಳಲ್ಲಿ ಸಧೃಡಕಾಯದ ಯುವಕರು ಈ ಕ್ಷೇತ್ರಕ್ಕೆ ಕಾಲಿಟ್ಟರು.  ಎಲ್ಲ ಭದ್ರತಾ ಕಂಪನಿಗಳು ತಮ್ಮ ನೇಮಕಾತಿ ವಿಧಾನಗಳನ್ನು  ಬದಲಿಸಿ ವಿದ್ಯಾವಂತ ಹಾಗೂ ಸಧೃಡರಾದ ಯುವಕರನ್ನು ಈ ಕೆಲಸಕ್ಕೆ ನೇಮಿಸಿಕೊಳ್ಳಲಾರಂಭಿಸಿದವು.  ಅತ್ಯಂತ ಕಡಿಮೆ ಸಂಬಳ ಸಿಗುತ್ತಿದ್ದ ಈ ಕೆಲಸದಲ್ಲಿಯೂ ಉತ್ತಮ ವೇತನ ಹಾಗೂ ಇತರೆ ಸೌಲಭ್ಯಗಳು ದೊರಕಲಾರಂಭಿಸಿದವು.  ಈ ಸಮಯದಲ್ಲಿ ನಮ್ಮ ಸಂಸ್ಥೆಗೆ ಒಂದು ಕಾಲ್ ಸೆಂಟರಿಗೆ ಭದ್ರತಾ ರಕ್ಷಕರನ್ನು ಒದಗಿಸುವ ದೊಡ್ಡ ಗುತ್ತಿಗೆಯೇ ಸಿಕ್ಕಿತ್ತು.  ಸಂಸ್ಥೆಯ ಮಾಲೀಕರು ಎಲ್ಲಾ ಜವಾಬ್ಧಾರಿಯನ್ನು ನನ್ನ ಹೆಗಲಿಗೇರಿಸಿ ತಾವು ನಿಶ್ಚಿಂತರಾಗಿದ್ದರು.  ನಾನು ಎಲ್ಲ ಕನ್ನಡ ಪತ್ರಿಕೆಗಳಲ್ಲಿಯೂ ಭದ್ರತಾ ರಕ್ಷಕರ ನೇಮಕಾತಿಗಾಗಿ ಒಂದು ಜಾಹಿರಾತು ನೀಡಿದೆ, "ಕನ್ನಡಿಗರಿಗೆ ಮೊದಲ ಆದ್ಯತೆ " ಎನ್ನುವ ತಲೆಬರಹದಡಿಯಲ್ಲಿ  ನಾನು ಕೊಟ್ಟಿದ್ದ ಜಾಹೀರಾತಿಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿತ್ತು.  ದೂರದ ಬಿಜಾಪುರ, ಗುಲ್ಬರ್ಗ, ಬೀದರ್, ರಾಯಚೂರುಗಳಿಂದಲೂ ಪ್ರತಿದಿನಾ ನನ್ನ ಮೊಬೈಲಿಗೆ ಕರೆಗಳು ಬರುತ್ತಿದ್ದವು. ಅಷ್ಟೋ ಇಷ್ಟೋ ವಿದ್ಯೆ ಕಲಿತು ಮಾಡಲು ಕೆಲಸವೂ ಇಲ್ಲದೆ, ಸರಿಯಾದ ಮಳೆ ಬೆಳೆಯೂ ಇಲ್ಲದೆ ಅತಂತ್ರರಾಗಿ ಕುಳಿತಿದ್ದ ಅದೆಷ್ಟೋ ಗ್ರಾಮೀಣ ಯುವಕರಿಗೆ ಈ ಪ್ರಸಂಗ ಬಹಳಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಿತ್ತು. ತಮ್ಮ ಊರನ್ನು ಬಿಟ್ಟು ಬೇರೆ ಜಗತ್ತನ್ನೇ ನೋಡಿರದ ಮುಗ್ಧ ಯುವಕರು ಕೇಳುತ್ತಿದ್ದ ಪ್ರಶ್ನೆಗಳು ನಿಜಕ್ಕೂ ನನ್ನಲ್ಲಿ ಸೋಜಿಗವನ್ನುಂಟು ಮಾಡುತ್ತಿದ್ದವು. ಆ ಪ್ರಶ್ನೆಗಳ ಕೆಲವು ಝಲಕುಗಳು ಹೀಗಿವೆ:

ಸರ್ರಾ, ನಾ ಡಿಗ್ರೀ ಮಾಡೀನ್ರೀ, ಆದ್ರ ನನಗ ಇಂಗ್ಲೀಸು ಮಾತಾಡೂದಿಕ್ಕ ಬರಾಂಗಿಲ್ರೀ, ಈ ಕೆಲ್ಸಕ್ಕೆ ನಾ ಅಪ್ಲಾಯ್ ಮಾಡ್ಬೋದೆನ್ರೀ?

ಸರ್ರಾ, ನಾ ಬೆಂಗಳೂರು ಹೆಂಗೈತಿ ಅಂತಾ ನೋಡಿಲ್ರೀ, ಅಲ್ಲಿ ಬಂದ್ರಾ ನಮಗೆ ಇರಾಕ್ ರೂಮು, ಊಟ ತಿಂಡಿ ವ್ಯವಸ್ಥಾ ಹೆಂಗ್ರೀ?

ಸರ್ರಾ, ನಾನು ನಮ್ಮವ್ವನ ನೋಡ್ದೆ ಇರಾಕ್ ಆಗುದಿಲ್ರಿ, ತಿಂಗಳಾಗೊಮ್ಮಿ ಊರಿಗೋಗಿ ಬರಾಕ್ ಬುಡ್ತೀರೆನ್ರೀ?

ಹೀಗೆ ಬರುತ್ತಿದ್ದ ಥರಾವರಿ ಪ್ರಶ್ನೆಗಳಿಗೆ ಉತ್ತರಿಸಿ ಅವರನ್ನು ಬೆಂಗಳೂರಿಗೆ ಬರಲು ಒಪ್ಪಿಸಿದ್ದೆ, ನಮ್ಮ ಕಛೇರಿಯ ಮೇಲೆಯೇ ಮಾಲೀಕರನ್ನೊಪ್ಪಿಸಿ, ದೊಡ್ಡದೊಂದು ವಸತಿಯನ್ನೇ ಕಟ್ಟಿಸಿದ್ದೆ.  ಹಲಸೂರಿನ ಹೃದಯಭಾಗದಲ್ಲಿ ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿದ್ದುದರಿಂದ ನಗರದ ಯಾವುದೇ ಭಾಗಕ್ಕೆ ಬಸ್ ಹಿಡಿದು ಹೋಗಿ ಬರಲು ಅನುಕೂಲಕರವಾಗಿತ್ತು. ಹೀಗೆ ಸುಮಾರು ನೂರೈವತ್ತು ಜನರ ತಂಡವನ್ನು ನೇಮಕಾತಿ ಮಾಡಿ, ಅವರಿಗೆ ಸೂಕ್ತ ತರಬೇತಿಯನ್ನು ನೀಡಿ, ನಮಗೆ ಸಿಕ್ಕಿದ್ದ ಕಾಲ್ ಸೆಂಟರ್ ಗುತ್ತಿಗೆಯಲ್ಲಿ ಭದ್ರತಾ ರಕ್ಷಕರನ್ನಾಗಿ ನಿಯೋಜಿಸಿದ್ದೆ.  ಅವರ ಮೇಲುಸ್ತುವಾರಿಗಾಗಿ ಇಬ್ಬರು ಮೇಲ್ವಿಚಾರಕರನ್ನು ನಿಯಮಿಸಿದ್ದೆ.  ಆದರೂ ಪ್ರತಿದಿನ ಕೆಲಸ ಹೇಗೆ ನಡೆಯುತ್ತಿದೆ, ಮತ್ತೇನಾದರೂ ಅವಘಡಗಳು ಸಂಭವಿಸುವ ಅವಕಾಶಗಳಿವೆಯೇ ಹೇಗೆ ಎನ್ನುವುದನ್ನು ಸ್ವಯಂ ಖಾತ್ರಿಗೊಳಿಸಿಕೊಳ್ಳಲು ಯಾವಾಗಂದರಾಗ ನನ್ನ "ರೋಡ್ ಕಿಂಗ್" ಬೈಕನ್ನು  ಕಾಲ್ ಸೆಂಟರಿನತ್ತ ಓಡಿಸುತ್ತಿದ್ದೆ.  ಹೀಗಾಗಿ ನನ್ನ ದೈನಂದಿನ ಚಟುವಟಿಕೆಗಳಲ್ಲಿ ಬಹಳ ಏರುಪೇರಾಗತೊಡಗಿತು, ಅದಿನ್ಯಾವ ಸೀಮೆಯ ಕೆಲಸ ಮಾಡ್ತೀರ್ರೀ, ಒಂದು ದಿನವಾದರೂ ಸಮಯಕ್ಕೆ ಸರಿಯಾಗಿ ಮನೆಗೆ ಬರೋದಿಲ್ಲ ಅಂತ ಶ್ರೀಮತಿ ಮನೆಯಲ್ಲಿ ಸಿಡಿಯುತ್ತಿದ್ದಳು. ಮಕ್ಕಳೊಡನೆಯೂ ನನ್ನ ಒಡನಾಟ ಕಡಿಮೆಯಾಗಿತ್ತು, ನನ್ನ ಗಮನ ಪೂರ್ತಿ ನನ್ನ ಕೆಲಸದ ಮೇಲಿತ್ತು, ಪ್ರತಿಭಾಳಿಗಾದ ಅನ್ಯಾಯ ಮತ್ಯಾವ ಮಹಿಳಾ ಉದ್ಯೋಗಿಗೂ ಆಗಬಾರದೆನ್ನುವುದು ಸದಾ ನನ್ನ ಮನಸ್ಸಿನಲ್ಲಿ ಕೊರೆಯುತ್ತಾ ನನ್ನನ್ನು ಸದಾ ಜಾಗೃತಾವಸ್ಥೆಯಲ್ಲಿಟ್ಟಿತ್ತು. ಇದರಿಂದಾಗಿ ನಗುನಗುತ್ತಲೇ ಕೆಲಸಕ್ಕೆ ಸೇರಿದ್ದ ಕೆಲವರು ತಮ್ಮ ಜವಾಬ್ಧಾರಿಯನ್ನು ಉಪೇಕ್ಷಿಸಿ ಕೆಲವು ಮಹಿಳಾ ಉದ್ಯೋಗಿಗಳನ್ನು ಮಾರ್ಗ ಮಧ್ಯದಲ್ಲಿಯೇ ಇಳಿಯಲು ಬಿಟ್ಟಾಗ ನನ್ನಿಂದ ಸಾಕಷ್ಟು ಬೈಸಿಕೊಳ್ಳುತ್ತಿದ್ದರು, ಕೆಲವರಿಗೆ ಒದೆಗಳು ಬಿದ್ದದ್ದು ಉಂಟು!

ನಾವೆಷ್ಟೇ ಕಟ್ಟುನಿಟ್ಟಾಗಿ ಸಂಸ್ಥೆಯು ರೂಪಿಸಿದ್ದ ಭದ್ರತಾ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದರೂ ಕೆಲವು ಮಹಿಳಾ ಉದ್ಯೋಗಿಗಳು ಚಾಲಕನಿಗೆ ಹಾಗೂ ಭದ್ರತಾ ರಕ್ಷಕನಿಗೆ ಇಲ್ಲದ ಸಬೂಬು ಹೇಳಿ, ಮನೆ ತಲುಪುವ ಮುಂಚೆಯೇ ಎಲ್ಲೋ ಒಂದು ಕಡೆ ಇಳಿದು ಬಿಡುತ್ತಿದ್ದರು.  ಆ ನಂತರ ಅವರು ಮತ್ತೆ ಮನೆ ತಲುಪಿದರೋ ಇಲ್ಲವೋ ಎನ್ನುವುದನ್ನು ನಾವು ಖಾತ್ರಿಯಾಗಿ ಸಂಸ್ಥೆಗೆ ತಿಳಿಸಲಾಗುತ್ತಿರಲಿಲ್ಲ!  ದಿನದಿಂದ ದಿನಕ್ಕೆ ಈ ರೀತಿ ದೂರುಗಳು ಹೆಚ್ಚಾದಂತೆ ನನ್ನ "ರಾತ್ರಿ ಗಸ್ತು"ಗಳೂ ಹೆಚ್ಚಾದವು. ಆ ರಾತ್ರಿಗಸ್ತಿನ ಸಮಯದಲ್ಲಿ ನನಗೆ ತಿಳಿದು ಬಂದ ಸಂಗತಿಗಳು ಬೆಚ್ಚಿ ಬೀಳಿಸುವಂತಿದ್ದವು. ಸುಮಾರು ೫೦೦ ಜನರಿಂದ ಆರಂಭಗೊಂಡ ಆ ಕಾಲ್ ಸೆಂಟರ್ ಕ್ರಮೇಣ ವಿಸ್ತಾರಗೊಳ್ಳುತ್ತಾ ೪೦೦೦ ಉದ್ಯೋಗಿಗಳ ಮಟ್ಟ ತಲುಪಿತ್ತು.  ಅದಕ್ಕೆ ತಕ್ಕಂತೆ ನಮ್ಮ ಭದ್ರತಾ ರಕ್ಷಕರ ಸಂಖ್ಯೆಯೂ ವೃದ್ಧಿಗೊಂಡಿತ್ತು.  ದಿನೇದಿನೇ ದೂರುಗಳ ಸಂಖ್ಯೆಯೂ ಹೆಚ್ಚಾಗುತ್ತಿತ್ತು!  ಈ ದೂರುಗಳನ್ನು ನಿಯಂತ್ರಿಸಲು ನಾನು ಅಖಾಡಕ್ಕೆ ಇಳಿಯಬೇಕಾಯಿತು.  ಹಾಗೆ ಎಲ್ಲ ಭದ್ರತಾ ರಕ್ಷಕರನ್ನು ವಿಚಾರಿಸಿದಾಗ  ಕಂಡು ಬಂದ ಕೆಲವು ಅಂಶಗಳು ಇಂತಿವೆ. 

ಮನೆಯಿಂದ ಹೊರಟು ಕೆಲಸಕ್ಕೆ ಬರುವಾಗ ಕೆಲವು ಮಹಿಳಾ ಉದ್ಯೋಗಿಗಳು  ತಮ್ಮ ಮೊಬೈಲ್ ಫೋನನ್ನು ಕಿವಿಗಿಟ್ಟರೆ ಅದನ್ನು ಇಳಿಸುತ್ತಿದ್ದುದು ಕಛೇರಿಯ ಬಳಿಗೆ ಬಂದಾಗಲೇ!   ತಮ್ಮ ಬಾಯ್ ಫ್ರೆಂಡ್ ಜೊತೆಗೆ ಅವರಾಡುತ್ತಿದ್ದ ಎಲ್ಲ ಮಾತುಗಳೂ ಮುಂದಿನ ಸೀಟಿನಲ್ಲಿ ಕುಳಿತಿದ್ದ ಭದ್ರತಾ ರಕ್ಷಕನ ಕಿವಿಗೆ  ಬೀಳುತ್ತಿತ್ತು. ಕೆಲಸದಿಂದ ಮನೆಗೆ ಹೊರಟಾಗ ಎಲ್ಲಿ ಇಳಿಯಬೇಕು, ಎಲ್ಲಿ ಮೀಟ್ ಆಗಬೇಕು, ಯಾವ ಹೋಟೆಲಿನಲ್ಲಿ ಊಟ, ಎಲ್ಲಿ ಮೋಜು ಮಸ್ತಿ! ಎಲ್ಲವೂ ಮೊಬೈಲಿನಲ್ಲೇ ನಿರ್ಧಾರವಾಗುತ್ತಿತ್ತಂತೆ!  ಜೊತೆಗೆ ಹೇಗೆ ಭದ್ರತಾ ರಕ್ಷಕನಿಗೆ ಸಬೂಬು ಹೇಳಿ ತಪ್ಪಿಸಿಕೊಳ್ಳಬೇಕೆನ್ನುವುದನ್ನೂ ಅವರೇ ಹೇಳಿ ಕೊಡುತ್ತಿದ್ದರಂತೆ!  ಮಾತಿಗೆ ಜಗ್ಗದ ರಕ್ಷಕರಿಗೆ ಕೆಲವೊಮ್ಮೆ ಹಣ ಕೊಟ್ಟದ್ದು ಉಂಟಂತೆ! ಹೀಗೆ ಎಲ್ಲಾ ವಿವರಗಳನ್ನು ಪಡೆದು ಕೆಲವು ಮಹಿಳಾ ಉದ್ಯೋಗಿಗಳನ್ನು ಉಲ್ಲೇಖಿಸಿ ಒಂದು ಸವಿಸ್ತಾರವಾದ ವರದಿಯನು ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ನೀಡಿದ್ದೆ.  ಪ್ರತಿಭಾ ಪ್ರಸಂಗ ಮತ್ತೊಮ್ಮೆ ಮರುಕಳಿಸಬಾರದು ಅನ್ನುವಂತಿದ್ದರೆ ಇವರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದೂ ಉಲ್ಲೇಖಿಸಿದ್ದೆ. ಇದಾದ ನಂತರ ದೂರುಗಳ ಸಂಖ್ಯೆ ಕಡಿಮೆಯಾಯಿತು, ಆದರೆ ನನಗೆ ಕೆಲವು ಬೆದರಿಕೆ ಕರೆಗಳು ಬರಲಾರಂಭಿಸಿದವು!   "ಲೇ, ನಮ್ ಉಡ್ಗಿ ಮ್ಯಾಲೆ ಕಂಪ್ಲೇಂಟ್ ಮಾಡ್ತಿಯೇನ್ಲಾ, ನಮ್ ಕೈಗೆ ಸಿಕ್ಕು, ನಿನ್ನ ನೋಡ್ಕೊಂತೀವಿ" ಅನ್ನುವ ಕರೆಗಳು ಮಾಮೂಲಾದವು. ಎಂತೆಂಥದಕ್ಕೋ ಅಂಜದಿದ್ದ ನಾನು ಇವರ ಬೆದರಿಕೆ ಕರೆಗಳಿಗೆ ಹೆದರುವಂಥವನಾಗಿರಲಿಲ್ಲ! ಕ್ರಮೇಣ ಆ ಕರೆಗಳು ನಿಂತು ಹೋದವು.

ಪ್ರತಿ ಭಾನುವಾರ ಬೆಳಿಗ್ಗೆ  ಆ ಕಾಲ್ ಸೆಂಟರಿನಲ್ಲಿ ನಮ್ಮ ಭದ್ರತಾ ರಕ್ಷಕರಿಗೆ ತರಬೇತಿ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದ್ದೆ. ನಾನು ಹಾಗು ಇಬ್ಬರು ಮೇಲ್ವಿಚಾರಕರು ಎಲ್ಲ ಭದ್ರತಾ ರಕ್ಷಕರನ್ನು ಭೇಟಿಯಾಗಿ ಅವರಿಗೆ ಕಾಫಿ, ತಿಂಡಿ ಕೊಡಿಸಿ, ಆ ವಾರದಲ್ಲಿ ಅವರ ಕೆಲಸದ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಕೂಲಂಕುಶ ವಿವರ ಪಡೆದುಕೊಳ್ಳುತ್ತಿದ್ದೆವು. ಆಕಸ್ಮಾತ್ ಯಾವುದಾದರು ಅಹಿತಕರ ಘಟನೆ ನಡೆದಿದ್ದಲ್ಲಿ ಅಥವಾ ಎದುರಾದಲ್ಲಿ ಹೇಗೆ ಎದುರಿಸಬೇಕು, ಮಹಿಳಾ ಉದ್ಯೋಗಿಗೆ ಹೇಗೆ ರಕ್ಷಣೆ ನೀಡಬೇಕು ಎನ್ನುವುದರ ಬಗ್ಗೆ ತರಬೇತಿ ನೀಡುತ್ತಿದ್ದೆವು. ಕೆಲವೊಮ್ಮೆ ನಗರದ ಪ್ರಖ್ಯಾತ ಕರಾಟೆ ಮಾಸ್ಟರುಗಳನ್ನು ಕರೆಸಿ ಎಲ್ಲ ಭದ್ರತಾ ರಕ್ಷಕರಿಗೂ ಆತ್ಮರಕ್ಷಣೆಯ ತರಬೇತಿ ಕೊಡಿಸಿದ್ದು ಉಂಟು!  ಹೀಗೊಮ್ಮೆ  ಭಾನುವಾರದ ಬೆಳಿಗ್ಗೆ ಕೆಳಮಹಡಿಯಲ್ಲಿ ತರಬೇತಿ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಕಟ್ಟಡ ಮೇಲ್ವಿಚಾರಕರೊಬ್ಬರು, ಕಟ್ಟಡದ ಎಲ್ಲಾ ಸ್ಯಾನಿಟರಿ ಪೈಪ್ ಲೈನುಗಳು ಬ್ಲ್ಯಾಕ್ ಆಗಿರುವುದರಿಂದ ತಳಮಹಡಿಯ ಪೈಪುಗಳನ್ನು ಓಪನ್ ಮಾಡಬೇಕಾಗಿದೆ, ನಿಮ್ಮ ತರಬೇತಿಯನ್ನು ಬೇಗ ಮುಗಿಸಿ ಅಂದರು.  ಸರಿಯೆಂದು ಬೇಗಬೇಗನೆ ನಾವು ಮುಗಿಸುವಷ್ಟರಲ್ಲಿ ಆತುರಗಾರ ಕಾರ್ಮಿಕನೊಬ್ಬ ಅಲ್ಲಿದ್ದ ಸ್ಯಾನಿಟರಿ ಪೈಪನ್ನು ಒಡೆದು ಓಪನ್ ಮಾಡೇ ಬಿಟ್ಟಿದ್ದ!  ಇಡೀ ಕಟ್ಟಡದ ಎಲ್ಲಾ ಪಾಯಿಖಾನೆಗಳಿಂದ ಬಂದು ಕಟ್ಟಿಕೊಂಡಿದ್ದ  ಕಸಕಲ್ಮಶಗಳೆಲ್ಲಾ ಒಮ್ಮೆಗೇ ಹೊರಬಂದು  ಕ್ಷಣಾರ್ಧದಲ್ಲಿ  ಇಡೀ ಕೆಳಮಹಡಿ  ಕೊಚ್ಚೆ ನೀರಿನ ಗಬ್ಬಿನಿಂದ ಆವೃತವಾಗಿತ್ತು. ಅತ್ತಿತ್ತ ಓಡಿದ ನಮ್ಮ ಭದ್ರತಾ ರಕ್ಷಕರೆಲ್ಲಾ ಮೂಗು ಮುಚ್ಚಿಕೊಂಡು  ನಿಂತಿದ್ದರು. ಅಲ್ಲಿಗೆ ಬಂದ ಕಟ್ಟಡ ಮೇಲ್ವಿಚಾರಕ ಯಾರನ್ನೋ ಎತ್ತರದ ಧ್ವನಿಯಲ್ಲಿ ಹಿಗ್ಗಾಮುಗ್ಗಾ ಬೈಯ್ಯುತ್ತಿದ್ದ!  ಅವನು ಯಾರನ್ನು ಬೈಯ್ಯುತ್ತಿದ್ದಾನೆಂದು ನೋಡಲು ನಾನು ಅತ್ತ ಹೊರಟರೆ ಎದುರಾಗಿದ್ದು ಸ್ಯಾನಿಟರಿ ಪೈಪಿನಿಂದ ಹೊರಬಂದಿದ್ದ ನೂರಾರು ಕಾಂಡೋಮುಗಳ ರಾಶಿ ರಾಶಿ!  ನೋಡಿ ಸಾರ್, ಬೇವಾರ್ಸಿಗಳು, ಕೆಲಸ ಮಾಡೋದಿಕ್ಕೆ ಅಂತ ಬರ್ತಾರೆ, ತಾವು ಸಂಪಾದನೆ ಮಾಡೋ ಜಾಗಾನೇ ಲಾಡ್ಜು ಮಾಡ್ಕೊಂಡಿದ್ದಾರೆ, ಇವರಿಗೆ ಇನ್ನೆಲ್ಲೂ ಬೇರೆ ಜಾಗ ಸಿಗಲ್ವಾ,  ಮಜಾ ಮಾಡಿ ಎಲ್ಲಾ ತೊಗೊಂಡು ಬಂದು ಟಾಯ್ಲೆಟ್ಟಿನಲ್ಲಿ ಹಾಕಿದ್ದಾರೆ ಅಂತ ವಾಚಾಮಗೋಚರವಾಗಿ ಮತ್ತೆ ಬೈಯ್ಯಲಾರಂಭಿಸಿದ! ಅವನಿಗೆ ಏನು ಹೇಳಬೇಕೋ ತಿಳಿಯದೆ ನಾನು ಮೂಕನಾಗಿ ನಿಂತಿದ್ದೆ.  ನನ್ನ ಬಳಿ ಬಂದ ಮೇಲ್ವಿಚಾರಕ ಬನ್ನಿ ಸಾರ್ ಹೋಗೋಣ, ಯಾಕೆ ನಿಂತಿದ್ದೀರಾ, ಈ ಗಬ್ಬು ವಾಸನೇಲ್ಲಿ , ಇಲ್ಲಿ ಇದೆಲ್ಲಾ ಕಾಮನ್ನು ಅಂದ!  ಅವನೇನೋ ಇದು ಕಾಮನ್ನು ಅಂದ, ಆದರೆ ಆ "ಕಾಮ"ನ್ನು  ಅನ್ನೋ ಪದವನ್ನು ಅರಗಿಸಿಕೊಳ್ಳಲು ನನಗೆ ಬಹಳ ಕಷ್ಟವಾಗಿತ್ತು.

Rating
No votes yet

Comments

Submitted by lpitnal Tue, 07/29/2014 - 12:15

ಮಂಜು ರವರೇ, ತುಂಬ ಕಣ್ಣುತೆರೆಸುವ, ಸಾಮಾಜಿಕ ಸಮಸ್ಯೆಗಳ ಜಟಿಲ ಪ್ರಶ್ನೆಗಳ ಸರಮಾಲೆ ಇದು. ನಗರ ಬದುಕಿನ ಮಗ್ಗಲುಗಳು, ವಾಂಛೆಗಳ ಹತೋಟಿಯಿಲ್ಲದ, ಸ್ವೇಚ್ಛೆ ಎನ್ನಲೂ ಆಗದ, ಬದುಕಿನ ದಬ್ಬಾಳಿಕೆಯೂ ಸೇರಿದ, ವಂಚನೆಯ ಮನಸ್ಸುಗಳ ಕೂಪಗಳ ಕಥೆ ಇದು. ಇದೆಲ್ಲ ನಗರ ಬದುಕಿನ ಮಾನಸಿಕ ಸ್ಥಿತಿಗಳ ತಲ್ಲಣಗಳ ಅಧ್ಯಯನಕ್ಕೆ ಬಲು ಯೋಗ್ಯವಾದ ಲೇಖನ. ಇಂತಹ ಮಾನವೀಯ ಪ್ರಾಮಾಣಿಕ ಕಳಕಳಿ ವ್ಯಕ್ತಪಡಿಸುತ್ತ ನಮ್ಮೊಂದಿಗೆ ಅನುಭವಗಳನ್ನು ಹಂಚಿಕೊಂಡ ತಮಗೆ ಅಭಿನಂದನೆಗಳು ಮಂಜು ರವರೇ.,