ಒಂದು ಎರಡು ಬಾಳೆಲೆ ಹರಡು..

ಒಂದು ಎರಡು ಬಾಳೆಲೆ ಹರಡು..

ನನ್ನ ಮಗಳು "ಇಸ್ರಾ" ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬಾಗಿಲು ತೆರೆದು ಜಿಗಿದುಬಂದು ಗೇಟಿನ ಹತ್ತಿರ ನಿಂತು ನನ್ನನ್ನು ಬರಮಾಡಿಕೊಂಡಾಗ ಎಲ್ಲಾ ಆಯಾಸವೂ ಮಾಯ. ಮಕ್ಕಳು ಮನೆಯಲ್ಲಿ ಸಡಗರವನ್ನೂ, ನಮ್ಮ ಮನದಲ್ಲಿ ಸಂತಸವನ್ನೂ ತುಂಬಿ ನಮ್ಮನ್ನು ನಮ್ಮ ಕೆಳೆದುಹೋದ ಬಾಲ್ಯದ ಕಡೆ ನೆನಪುಗಳು ಹರಿಯುವಂತೆ ಮಾಡುತ್ತಾರೆ. ಮಕ್ಕಳೊಂದಿಗೆ ಮಗುವಾಗಿ ಆಡದವರು ಯಾರು? ಒಮ್ಮೆ ಪ್ರವಾದಿಗಳು ಮಕ್ಕಳೊಂದಿಗೆ ನಗುತ್ತಾ ಮಾತನಾಡುತ್ತಾ ಅವರೊಂದಿಗೆ ಮಕ್ಕಳಂತೆ ಬೆರೆತಿದ್ದನ್ನು ನೋಡಿ ಒಬ್ಬರು ಹೇಳಿದರು, ಪ್ರವಾದಿಗಳೇ ನನಗಂತೂ ಮಕ್ಕಳೊಂದಿಗೆ ಹೀಗೆ ಇರುವುದು ಬಿಡಿ ಅವರೊಂದಿಗೆ ತಾಳ್ಮೆಯೊಂದಿಗೆ ಇರಲೂ ಸಾಧ್ಯವಿಲ್ಲ ಎಂದು. ಅದಕ್ಕೆ ಪ್ರವಾದಿಗಳು ಆ ಕರುಣಾಮಯನಾದ ಅಲ್ಲಾಹನೇ ನಿಮ್ಮ ಮನಸ್ಸಿನಲ್ಲಿ ಕರುಣೆಯನ್ನು ಹಾಕದಿದ್ದರೆ ನನ್ನಿಂದೇನು ಮಾಡಲು ಸಾಧ್ಯ ಎಂದುತ್ತರಿಸಿದರು.  

ನನ್ನ ಮಗಳು ಮಾತಿನಲ್ಲಿ ಸ್ವಲ್ಪ ಹಿಂದೆಯೇ ಎನ್ನಬಹುದು. ಅವಳಿಗಿಂತ ಕೇವಲ ಎರಡು ವಾರಗಳ ಹಿರಿಯನಾದ ನನ್ನ ತಂಗಿಯ ಮಗ "ಅಹ್ಮದ್" ಮಾತಿನ ಗಣಿ. ಮನೆಯಲ್ಲಿ ಕೆಲಸಕ್ಕಿರುವ ಇಂಡೊನೆಷ್ಯಾ ದೇಶದ ಮೇಡ್ ಒಂದಿಗೆ ಸೇರಿ ಅರಬ್ಬೀ ಭಾಷೆಯನ್ನೂ ಉಲಿಯುತ್ತಾನೆ. ನನ್ನ ತಂಗಿಗೆ ತನ್ನ ಮಕ್ಕಳಿಗೆ ಕನ್ನಡದ ಚಿಕ್ಕ ಪುಟ್ಟ ಕವನ ಹೇಳಿಕೊಡುವ ಚಪಲ. ತನ್ನ ಮೊದಲ ಮಗ " ಅಯ್ಮನ್" ಒಂದು ಎರಡು ಬಾಳೆಲೆ ಹರಡು ಎಂದು ಹಾಡುವುದನ್ನು ನಮಗೆಲ್ಲಾ ಕೇಳಿಸಿ ಸಂತಸ ಪಡುತ್ತಿದ್ದಳು. ಹಾಗೆಯೇ ಅಹ್ಮದ್ ನಿಗೂ ಒಂದು ಪದ್ಯ ಹೇಳಿಕೊಟ್ಟಾಗ ಅದನ್ನು ಬಹಳ ಬೇಗ ತನ್ನ ಅಣ್ಣನಂತೆಯೇ ಕರಗತ ಮಾಡಿಕೊಂಡ. ಮೊನ್ನೆ ಅವನ ಮನೆಗೆ ಹೋದಾಗ ಅವನ ಕವನ ಗೋಷ್ಠಿ ಜೋರಾಗಿ ನಡೆಯುತ್ತಿತ್ತು...

ಡಮ್ಮರೆ ಡಮ್ಮಮ್ಮ, ಮನೆ ಸುಟ್ಟೋಯ್ತು

ಯಾರ ಮಾನೆ 

ಪೂಜಾರಿ ಮಾನೆ

ಯಾವ ಪೂಜಾರಿ 

ಜುಟ್ಟು ಪೂಜಾರಿ 

ಯಾವ ಜುಟ್ಟು 

ಕೋಳಿ ಜುಟ್ಟು

ಯಾವ ಕೋಳಿ 

ಬಾತು ಕೋಳಿ 

ಯಾವ ಬಾತು 

ಕೇಸರಿ ಬಾತು 

ಯಾವ ಕೇಸರಿ 

ತಿನ್ನೋ ಕೇಸರಿ 

ಯಾವ ತಿನ್ನೋದು 

ಹೊಡ್ತ ತಿನ್ನೋದು

ಹಹಹಾ ಎಂದು ಚಪ್ಪಾಳೆ ತಟ್ಟಿಕೊಂಡು ತನಗೆ ತಾನೇ ಅಭಿನಂದಿಸಿಕೊಂಡ. 

ನನ್ನ ಮಗಳೋ, ಇನ್ನೂ johnny johnny yes pappa ಹೇಳಲು ಒದ್ದಾಡುತ್ತಿದ್ದಾಳೆ. ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಒಂದು ಲಾರಿಯ ಮೇಲೆ ತೆಲುಗುವಿನಲ್ಲಿ ಇದನ್ನು ಬರೆದಿದ್ದನ್ನು ಕಂಡೆ, " ನಿಧಾನಮು ಪ್ರಧಾನಮು" ಎಂದು. ಅವಳ ವೇಗದ ಮಿತಿಯಲ್ಲೇ ಹೋಗಲಿ ಅಲ್ಲವೇ?      

ತಾಳಿದವನು ಬಾಳಿಯಾನು. ನನಗಂತೂ ತಾಳ್ಮೆ ಮಂಕರಿ ತುಂಬಾ ಇದೆ... ಕೃಪೆ ನನ್ನ ಮುದ್ದಿನ ಮಗಳು.

Rating
No votes yet

Comments