ಒಂದು ಜೇನಿನ ಹಿಂದೆ-೨

ಒಂದು ಜೇನಿನ ಹಿಂದೆ-೨


ಮುಂದುವರೆದದ್ದು


ಹಿಡಿಯೋರು


            ಮಲೆನಾಡಿನ ಕಾಡಿನಲ್ಲಿರುವ ಮಣ್ಣಿನಹುತ್ತದಲ್ಲಿ ಗೂಡುಮಾಡಿಕೊಂಡಿರುವ ಜೇನು  ಮಳೆಗಾಲಕ್ಕೆ ಸ್ವಲ್ಪ ಮುಂಚೆ ಸಂಸಾರ ಸಮೇತ ಜಾಗ ಖಾಲಿಮಾಡಿಬಿಡುತ್ತವೆ. ಇಪ್ಪತ್ತು ಇಪ್ಪತ್ತೈದು ಕಿಲೋಮೀಟರ್ ದೂರದ ಮಳೆ ಸ್ವಲ್ಪ ಕಡಿಮೆಯಿರುವ ಅರೆಮಲೆನಾಡಿಗೆ ತಾತ್ಕಾಲಿಕ ವಲಸೆ ಹೋಗಿರುತ್ತವೆ. ಮಲೆನಾಡಿನ ಅತಿಯಾದ ಮಳೆ ಅವುಗಳಿಗೆ ಆಹಾರದ ಕೊರತೆಯನ್ನು ತಂದಿಡುವುದರ ಜೊತೆಗೆ ಮಣ್ಣಿನ ಗೂಡಿನೊಳಗೆ ನೀರು ನುಗ್ಗುವುದರಿಂದ ಅವುಗಳಿಗೆ ಮಳೆಗಾಲ ಅಸುರಕ್ಷಿತ. ಮತ್ತೆ ಮಳೆಗಾಲ ಮುಗಿದು ಚಳಿಗಾಲ ಶುರುವಾಗುತ್ತಿದ್ದಂತೆ ತಂಡೋಪತಂಡವಾಗಿ ಮಲೆನಾಡ ಕಾಡಿಗೆ ಬಂದು ಸೇರುತ್ತವೆ. ಆದರೆ ಅಪರೂಪಕ್ಕೆ  ಮರದಪೊಟರೆಯನ್ನು ಆಶ್ರಯಿಸಿರುವ ಜೇನು ಮಳೆಗಾಲದಲ್ಲಿಯೂ ಮಲೆನಾಡ ಕಾಡಿನಲ್ಲಿಯೇ ಉಳಿದಿರುತ್ತದೆ. ಅವುಗಳನ್ನು ಪತ್ತೆ ಮಾಡಿ ಪೆಟ್ಟಿಗೆ ತುಂಬುವ ಯೋಜನೆ ನನ್ನದಾಗಿತ್ತು. ಆದರೆ ಮಳೆಗಾಲದಲ್ಲಿ ಜೇನನ್ನು ಪತ್ತೆ ಮಾಡುವುದಕ್ಕೆ ತುಂಬಾ ಅನುಭವಸ್ಥರೇ ಆಗಿರಬೇಕು. ಕಾರಣ ಯಾವಾಗಲೂ ಮೋಡ ಮುಸುಕಿದ ವಾತಾವರಣದಿಂದ ಜೇನು ಹುಳುಗಳ ಹಾರಾಟವನ್ನು ಪತ್ತೆ ಮಾಡುವುದು ಕಷ್ಟಕರ.
 ತುಡುವೆಜೇನನ್ನು ಹಿಡಿಯುವವರು ಎರಡು ಬಗೆಯವರು. ಒಂದನೆಯವರೆಂದರೆ  ಜೇನಿನ ತುಪ್ಪ ಮತ್ತು ತತ್ತಿಯನ್ನು ಮಾತ್ರ ಬಯಸುವವರು, ಎರಡನೆಯವರೆಂದರೆ, ಜೇನು ಹುಳುಗಳನ್ನು ಹಿಡಿದು ತಂದು ಪೆಟ್ಟಿಗೆಯೊಳಗೆ ಸಾಕುವವರು.
 ತುಪ್ಪಕ್ಕಾಗಿ ಜೇನು ಹಿಡಿಯುವವರು ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ಬೆಳಗ್ಗೆ ಎಂಟು ಗಂಟೆಗೆ ಮನೆಬಿಡುತ್ತಾರೆ. ಅದು ಜೇನುಹುಳುಗಳು ಸಾಲುಸಾಲಾಗಿ ಹೂವಿನ ಮಕರಂದ ಹೀರಲು ಹೊರಗಡೆ ಬರುವ ಸಮಯ. ಮಕರಂದ ಕುಡಿದ ಜೇನು ವಾಪಾಸು ಯಾವ ಮಾರ್ಗದಲ್ಲಿ ಸಾಗುತ್ತದೆ ಎನ್ನುವುದನ್ನು ಬಿಸಿಲಿಗೆ ಎದುರಾಗಿ ನಿಂತುಕೊಂಡು, ಹಣೆಯಮೇಲೆ ಕೈಯನ್ನು ಅಡ್ಡಹಿಡಿದು,ಕಣ್ಣನ್ನು ಕಿರಿದಾಗಿಸಿ ನೋಡುತ್ತಾ ನಿಲ್ಲುತ್ತಾರೆ. ಅತಿ ಹೆಚ್ಚು ಜೇನುಹುಳುಗಳ ಹಾರಾಟ ಯಾವ ಮಾರ್ಗದಲ್ಲಿ ಸಾಗಿದೆ ಎನ್ನುವುದನ್ನು ಅನುಸರಿಸಿ ಅತ್ತ ಕಡೆ ಹೊರಡುತ್ತಾರೆ. ಹೀಗೆ ಹೊರಟ ಅರ್ಧಗಂಟೆಯೊಳಗೆ ಒಂದು ಜೇನು ಗೂಡುಪತ್ತೆ ಮಾಡುತ್ತಾರೆ. ತಕ್ಷಣ ಕಾರ್ಯಾಚರಣೆ ಶುರುಮಾಡಿ ಗೂಡಿಗೆ ಹೊಗೆ ಹಾಕಿ ಹುಳ ಓಡಿಸಿ ಕಿತ್ತುಬಿಡುತ್ತಾರೆ. ಹೋದ ಒಂದೆರಡು ತಾಸಿನೊಳಗೆ ಕೈತುಂಬಾ ಜೇನುರೊಟ್ಟಿನೊಂದಿಗೆ ವಾಪಾಸು ಮನೆಗೆ ಬಂದುಬಿಡುತ್ತಾರೆ.
 ಪೆಟ್ಟಿಗೆಗೆ ಜೇನನ್ನು ಕೂಡಿಸುವವರು ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ಜೇನು ಹುಡುಕಲು ಹೊರಡುತ್ತಾರೆ. ಜೇನು ಪತ್ತೆ ಮಾಡುವ ವಿಧಾನ ಒಂದೇ ಆದರೂ, ನಂತರ ಪೆಟ್ಟಿಗೆಗೆ ಜೇನನ್ನು ಕೂಡಲು ಸ್ವಲ್ಪ ಹೆಚ್ಚಿನ ಸಮಯ ತಗಲುತ್ತದೆ. ಒಮ್ಮೊಮ್ಮೆ ಸಾಯಂಕಾಲದವರೆಗೂ ಕಾರ್ಯಾಚರಣೆ ನಡೆಸಬೇಕಾದ ಸಂದರ್ಭ ಇರುತ್ತದೆ. ಅಕಸ್ಮಾತ್ ಬೇಗನೆ ಪೆಟ್ಟಿಗೆಯೊಳಗೆ ಎಲ್ಲಾ ಜೇನುಹುಳುಗಳು ಬಂದರೂ ಆಹಾರಕ್ಕೆ ಹೋದ ಜೇನುಗಳು ಬರುವವರೆಗೆ ಪೆಟ್ಟಿಗೆಯನ್ನು ಅಲ್ಲಿಯೇ ಇಟ್ಟು ಕತ್ತಲೆಯಾದಮೇಲೆ ಮನೆಗೆ ತರುತ್ತಾರೆ. ಜೇನುಗೂಡನ್ನು ಪತ್ತೆ ಮಾಡುವ ವಿಚಾರದಲ್ಲಿ ಜೇನು ಸಾಕುವವರಿಗಿಂತ ತುಪ್ಪಕ್ಕಾಗಿ ಜೇನು ಕೀಳುವವರೇ ಹೆಚ್ಚು ಪಳಗಿರುತ್ತಾರೆ.
ಕಾರಣ, ಜೇನು ಸಾಕುವವರು ವರ್ಷದಲ್ಲಿ ಹೆಚ್ಚೆಂದರೆ ಒಂದೆರಡು ಗೂಡು ಪತ್ತೆ ಮಾಡುತ್ತಾರಷ್ಟೆ. ಆದರೆ ತುಪ್ಪಕ್ಕಾಗಿ ಜೇನು ಹುಡುಕುವವರು ವರ್ಷಕ್ಕೆ ಕನಿಷ್ಟವೆಂದರೂ ಇಪ್ಪತ್ತು ಜೇನುಗೂಡು ಪತ್ತೆ ಮಾಡಿರುತ್ತಾರೆ. ಒಮ್ಮೊಮ್ಮೆ ಎರಡೂ ತರಹದ ಜನರು ಒಂದಾಗಿ ಹೊರಟು, ತುಪ್ಪ ಒಬ್ಬರಿಗೆ ಜೇನುಹುಳುಗಳು ಮತ್ತೊಬ್ಬರಿಗೆ ಎಂದು ಪಾಲು ಮಾಡಿಕೊಳ್ಳುವುದೂ ಇದೆ.
 ಸಂಪಳ್ಳಿಯ ಚೆನ್ನ ಜೇನುಗೂಡು ಪತ್ತೆ ಮಾಡುವುದರಲ್ಲಿ ನಮ್ಮ ಭಾಗದಲ್ಲಿ ಎತ್ತಿದ ಕೈ. ಚೆನ್ನ ತುಡುವೆ ಜೇನುತುಪ್ಪವನ್ನು ಮಾರಾಟಮಾಡಿ, ಅದರಲ್ಲಿ ಬರುವ ಹಣದಿಂದ ಎರಡು ತಿಂಗಳು ಆರಾಮಾಗಿ ಇರುತ್ತಿದ್ದ.  ಆದರೆ ಅವನಿಗೆ ಜೇನನ್ನು ಪೆಟ್ಟಿಗೆಯೊಳಗೆ ಕೂಡುವ ವಿಚಾರ ಗೊತ್ತಿರಲಿಲ್ಲ. ಮತ್ತು ಅದರಲ್ಲಿ ಅವನಿಗೆ ಆಸಕ್ತಿಯೂ ಇರಲಿಲ್ಲ. ಮರದ ಪೆಟ್ಟಿಗೆಯನ್ನು ಹಣಕೊಟ್ಟು ತಂದು ಕಬ್ಬಿಣದ ಸ್ಟ್ಯಾಂಡ್ ಮಾಡಿಸಿ, ಜೇನು ಕೂಡಿಸಿ, ಜೇನುಹುಳ ತಿನ್ನಲು ಬರುವ ಓತಿ, ಜೇನುಹಕ್ಕಿ, ಬಂಡಾರು ಬಡ್ಚಿಗೆಯಿಂದ ಅವನ್ನು ರಕ್ಷಿಸಿ ತುಪ್ಪ ತೆಗೆಯುವುದರ ಬದಲು ಸುಮ್ಮನೆ ಕಾಡಲ್ಲಿ ಅಡ್ಡಾಡುತ್ತಾ ಅಲ್ಲಿ ಸಿದ್ಧವಾಗಿರುವ ಜೇನುತುಪ್ಪ ತಂದು ಮಾರಾಟ ಮಾಡುವುದೇ ಅವನಿಗೆ ಸುಲಭವಾಗಿತ್ತು. ಆದರೆ ವಾಸ್ತವವಾಗಿ ಅವನು ಸ್ವಲ್ಪ ಯೋಚಿಸಿದ್ದರೆ ಇನ್ನೂ ಬಹಳಷ್ಟು ಹೆಚ್ಚು ಹಣಗಳಿಸಿ ಯಶಸ್ವಿ ಜೇನು ಸಾಕಾಣಿಕಾದಾರನಾಗಬಹುದಿತ್ತು.
   ಜೇನುತುಪ್ಪದ ಬೆಲೆಯ ವಿಚಾರದಲ್ಲಿ ಕಾಡಿನಿಂದ ಕಿತ್ತು ತಂದ ಜೇನುತುಪ್ಪಕ್ಕಿಂತ   ಸಾಕಿದ ಪೆಟ್ಟಿಗೆಯಿಂದ ತೆಗೆದ ತುಪ್ಪಕ್ಕೆ ಎರಡುಪಟ್ಟು ಬೆಲೆ ಹೆಚ್ಚು. ಕಾರಣ, ಕಾಡಿನ ಜೇನನ್ನು ಹಿಡಿದು ತತ್ತಿಯನ್ನು ಕೈಯಿಂದ ಹಿಂಡಿ ತುಪ್ಪವನ್ನು ತೆಗೆಯುತ್ತಾರೆ. ಕೈಯಿಂದ ತುಪ್ಪವನ್ನು ಹಿಂಡುವಾಗ ತತ್ತಿಯೊಳಗಿನ ಮರಿಗಳೂ ಸೇರಿಬಿಟ್ಟಿರುತ್ತವೆ. ಹಾಗಾಗಿ ಆ ತುಪ್ಪ ಶುದ್ಧವಾಗಿರುವುದಿಲ್ಲ. ಅದೇ ಸಾಕಿದ ಜೇನಿನಲ್ಲಿ ಸಣ್ಣದಾದ ತುಪ್ಪ ತೆಗೆಯುವ ಯಂತ್ರದ ಮುಖಾಂತರ ತೆಗೆಯುವುದರಿಂದ ಉತ್ತಮ ತುಪ್ಪ ಸಿಗುತ್ತದೆ ಮತ್ತು ಅದು ಹುಳಿಬರುವುದಿಲ್ಲ. ದೀರ್ಘಕಾಲ ಬಾಳಿಕೆ ಬರುತ್ತದೆ. ಆದರೆ ಅದು ಸ್ವಲ್ಪ ಜಾಸ್ತಿ ಕೆಲಸವನ್ನು ಬೇಡುತ್ತದೆ. ಚೆನ್ನನಿಗೆ ಜಾಸ್ತಿ ಕೆಲಸ ಎಂದರೆ ಆಗುತ್ತಿರಲಿಲ್ಲ. ಬೇಗನೆ ಕೆಲಸ ಮುಗಿಯಬೇಕು ಮತ್ತು ಸಿಕ್ಕಷ್ಟು ದುಡ್ಡು ಸಾಕು ಎನ್ನುವ ತತ್ವ ಅವನದು. ಹಾಗಾಗಿ ನಾನು ಜೇನುಗೂಡು ಪತ್ತೆ ಮಾಡುವ ಮಟ್ಟಿಗೆ  ಅವನನ್ನು ಆಶ್ರಯಿಸಬಹುದಿತ್ತು. ಅದರ ಹೊರತಾಗಿ ಪುಸ್ತಕದಲ್ಲಿ ಓದಿದಂತೆ ಜೇನುಸಾಕಾಣಿಕಾದಾರನ ಪಟ್ಟಿಗೆ ಅವನ ಹೆಸರನ್ನು ಸೇರಿಸುವಂತಿರಲಿಲ್ಲ. ಜೇನುಗೂಡನ್ನು ಪತ್ತೆ ಮಾಡಿ ಪೆಟ್ಟಿಗೆಯೊಳಗೆ ಸೇರಿಸಿದ ನಂತರದ ಸಾಹಸಗಳಿಗೆ ನಾನು ಬೇರೆಯವರನ್ನೋ ಅಥವಾ ಸ್ವಾವಲಂಬನೆಗೆ ಜೇನುಕೃಷಿ ಪುಸ್ತಕವನ್ನು ಆಶ್ರಯಿಸುವುದು ಅನಿವಾರ್ಯವಾಗಿತ್ತು. ಆದರೆ ಅದು ನಂತರದ್ದು, ಪ್ರಸ್ತುತ ಚೆನ್ನನ ಸಹಾಯದ ಅಗತ್ಯ ನನಗೆ ಇತ್ತು.
ನಿತ್ಯಸತ್ಯ


                  ಚೆನ್ನನ ಮನೆ ಸಮೀಪಿಸುತ್ತಿರುವಂತೆ ದೊಡ್ಡದಾಗಿ ಮಾತುಗಳು ಕೇಳಲಾರಂಭಿಸಿತು. ಸಂಪಳ್ಳಿಯ ಕೇರಿಯಲ್ಲಿ ಯುದ್ದ ಘೋಷಣೆಯಾಗಿತ್ತು. ಸಾಮಾನ್ಯವಾಗಿ ವಾರಕ್ಕೊಂದು ಯುದ್ದ ಅಲ್ಲಿ ನಡೆಯುತ್ತಿರುತ್ತದೆ. ಒಮ್ಮೊಮ್ಮೆ ಸಾಯಂಕಾಲ ಶುರುವಾದ ಜಗಳ ರಾತ್ರಿ ಹನ್ನೆರಡು ಘಂಟೆಯವರೆಗೆ ನಡೆದು, ನಿದ್ರೆಯ ಕಾರಣಕ್ಕಾಗಿ ಕದನವಿರಾಮ ಘೋಷಣೆಯಾಗಿ ಮತ್ತೆ ಬೆಳಿಗ್ಗೆ ಅದರ ಎರಡನೇ ಕಂತು ಕೆಲಸಕ್ಕೆ ಹೊರಡುವ ತನಕ ಮುಂದುವರೆಯುತ್ತಿರುತ್ತದೆ. ಅದು ರಾಜಿಯಾಗುವುದು ಸಾಯಂಕಾಲ. ರಾಜಿಯಾದ ವಾರದ ನಂತರ ಕದನ ಮತ್ತೆ ಶುರುವಾಗುವುದು ಸರ್ವೇಸಾಮಾನ್ಯ. ಆದರೆ ವ್ಯಕ್ತಿಗಳು ಬದಲಾಗುತ್ತಿರುತ್ತಾರೆ. ಅದಕ್ಕೆ ಸುತ್ತಮುತ್ತಲಿನವರು ಹೆಚ್ಚಿನ ಮಹತ್ವ ಕೊಡುವುದಿಲ್ಲ. ಕಂಡೂಕಾಣದಂತೆ ಅವರವರ ಕೆಲಸಗಳಿಗೆ ಹೋಗುತ್ತಲಿರುತ್ತಾರೆ. ಆದರೆ ನನಗೆ ಚೆನ್ನನನ್ನು ಕಾಣುವುದು ಅನಿವಾರ್ಯವಾಗಿತ್ತಾದ್ದರಿಂದ ಅಲ್ಲಿಯೇ ನಿಂತೆ.
     ನಾನು ಸಾವ್ರ ಜನ್ರ ಜತೆ ಮಲಗ್ತೀನಿ ನಿಂಗೇನಾ ಹೆಣ್ಣು ದನಿಯ ಆರ್ಭಟ ಕೇಳುತ್ತಿತ್ತು.
ಸಾವ್ರ ಏನು ಹತ್ತಸಾವ್ರ ಜನ್ರ ಜತೆ ಹೋಗು ನಂಗೇನು ಚೆನ್ನನ  ಉತ್ತರ ಅದಕ್ಕೆ.
     ಏ ಹಲ್ಕಟ್ ಸೂಳೆಮಗನೆ ಅಷ್ಟಿದ್ದವ ನನ್ನ ಹಿಂದೆ ಇವ್ಳು ಯಾರ್ಜೊತೆ ಹೊಗ್ತಾಳೆ ಅಂತ ನೋಡಾಕೆ ಮೂರ‍್ಮನೆ ಕಾನ್ತನಕ ಬಂದಿದ್ದೆ
     ಲೌಡಿ, ನಾಲ್ಗೆ ಬಿಗಿ ಹಿಡ್ದು ಮಾತಾಡು ನಾನು ಉಪ್ಪಾಕೆ ಹಣ್ಣು ಕೊಯ್ಯಾಕೆ ಹೋಗಿದ್ದೆ, ನಿನ್ನ ಮಿಂಡನ್ನ ಕಟ್ಗೆಂಡು ನಂಗೇನಾಗ್ಬೇಕು
     ಬೋಳಿಮಗನೆ ಉಪ್ಪಾಕೆ ಹಣ್ಣಿನ ಮರ ಮೂರ‍್ಮನೆ ಕಾನಾಗೆ ಶಾಸ್ತ್ರಕ್ಕಾದ್ರೂ ಐತನಾ? ಅತ್ವಾ  ನೀನು ಅಕೇಶಿಯಾ ಮರ‍್ದಾಗೆ ಉಪ್ಪಾಕೆ ಹಣ್ಣು ಕೊಯ್ತೀಯಾ?
     ಓ....ಹೋ... ಹೋ...ಹೋ ಹೌದೌದು, ನೀನು ಹಗಲಿಡೀ ಮೂರ‍್ಮನೆ ಕಾನಾಗೆ ಅಂಗಾತ ಮಲ್ಕ್ಯಂಡು ಮ್ಯಾಲೆ ನೊಡ್ತಾ ಇರ್ತೀಯಾ, ಹಂಗಾಗಿ ನಿಂಗೆ ಇಡೀ ಕಾನಾಗೆ ಇರೋ ಮರದ ಜಾತ್ಯೆಲ್ಲಾ ಗೊತ್ತು.... ವ್ಯಂಗ್ಯವಾಡಿದ ಚೆನ್ನ.
 ನನಗೆ ಅಲ್ಲಿ ನಿಲ್ಲಲೂ ಆಗದು, ಹಾಗಂತ ಚೆನ್ನನನ್ನು ಕಾಣದೆ ವಾಪಾಸು ಹೋಗಲು ಜೇನಿನ ಹುಚ್ಚು ಬಿಡದು, ಸ್ವಲ್ಪ ಹೊತ್ತು ಕುಮಟಾಭಟ್ರ ಅಂಗಡಿಕಟ್ಟೆಯ ಮೇಲೆ ಕುಳಿತು, ಜಗಳ ನಿಂತಮೇಲೆ ಬಂದರಾಯಿತು ಎಂದು ತಿರುಗಿದೆ. ನಾನು ಹೊರಟಿದ್ದು ಚೆನ್ನನ ಹೆಂಡತಿ ಸುಬ್ಬಿಗೆ ಕಾಣಿಸಿರಬೇಕು, ಅವಳು -
     ಅಲ್ಲಿ ಭಟ್ರು ನಿಂತ್ಕಂಡು ಕಾಯ್ತಿದಾರೆ ಹೋಗ್ರಿ, ಆ ರಂಡೆಗಂತೂ ಮಾನಮರ‍್ವಾದಿ ಇಲ್ಲ, ನಿಮ್ಗೂ ಬೇರೆ ಕೆಲ್ಸ ಇಲ್ಲ, ಬೆಳ್ಗೆ ಬೆಳ್ಗೆ ಹೋಗಿ ಹೋಗಿ ಆ ನಾಯಿಬಾಯಿಗೆ ಕೋಲು ಹಾಕ್ತಾ ಕುಂತೀರಿ ಎಂದು ಚೆನ್ನನ ಬಳಿ ಹೇಳಿದಳು. ಚೆನ್ನ ಏಕಪಕ್ಷೀಯ ಕದನ ವಿರಾಮ ಘೋಷಿಸಿ ನನ್ನ ಬಳಿ ಬಂದು,
     ಯಂತ್ರೀ....ರಾಗಣ್ಣ ಬೆಳಿಗ್ಗೆ ಮುಂಚೆ ಈ ಕಡಿಗೆ ಹೊಂಟ್ರಲಾ ಎಂದ.
     ಕಾಡಲ್ಲಿ ಎಲ್ಲಾದ್ರು ಜೇನು ಕಂಡಿದ್ದೀಯಾ? ಎಂದು ಚೆನ್ನನನ್ನು ಕೇಳಿದೆ.
    ಈ ಘೋರಾಕಾರದ ಮಳೇಗಾಲ್ದಲ್ಲಿ ಎಂಥಾ ಜೇನ್ರಿ, ಅವು ಊರ‍್ಬಿಟ್ಟು ಆಗ್ಲೆ ಎರ‍್ಡು ತಿಂಗ್ಳಾತು
     ಅದು ನಂಗೂ ಗೊತ್ತಿದೆ, ಆದ್ರೆ ಅಪರೂಪಕ್ಕೊಂದು ಮರದ ಪೊಟರೆಯಲ್ಲಿ ಇರ‍್ತಾವಂತಲ್ಲ. ಅದ್ನೇನಾದ್ರೂ ಕಂಡಿದ್ರೆ ಹೇಳು, ನಾನು ಅದನ್ನ ಹಿಡಿದು ಪೆಟ್ಟಿಗೆ ಕೂಡಬೇಕಾಗಿದೆ
ಅಯ್ಯೋ.. ಈ ಮಳೆಗಾಲ್ದಲ್ಲಿ ಜೇನು ಹಿಡ್ದು ಪೆಟ್ಗೆ ಕೂಡಾಕೆ ಬರದಿಲ್ಲ, ಅದಕ್ಕೆ ಮಳೆಗಾಲ ಕಳ್ದು ಚಳಿಗಾಲ ಶುರುವಾಗ್ಬೇಕು. ಆ ಟೈಮಲ್ಲಿ ಮಾತ್ರ ಅವು ಪೆಟ್ಗೇಲಿ ನಿಲ್ತಾವೆ. ಹಂಗಾಗಿ ಇನ್ನು ಎರಡು ತಿಂಗ್ಳು ನೀವು ಕಾಯ್ಲೇ ಬೇಕು.
     ದಿನಾ ಸಕ್ರೆಪಾಕ ಕೊಟ್ರೆ ಪೆಟ್ಗೇಲಿ ನಿಲ್ತಾವಂತಲ್ಲೋ,
     ಅದು ನಂಗೆ ಗೊತ್ತಿಲ್ಲ, ಯಾಕಂದ್ರೆ ನಾನು ಜೇನುಗೂಡಿನ ಬಾಯಿಗೆ ಹೊಗೆ ಹಾಕಿ ಹುಳ ಹಾರ‍್ಸಿ ತತ್ತಿಯಿಂದ ತುಪ್ಪ ಹಿಂಡಿ ತರ‍್ತೀನಿ. ಈ ಟೈಮಲ್ಲಿ ಪೆಟ್ಗೇಲಿ ನಿಲ್ಲಲ್ಲ ಅಂತ ಪ್ರಶಾಂತಣ್ಣಯ್ಯ ಹೇಳಿದ್ದನ್ನ ಕೇಳಿದ್ದೆ, ನೀವೊಂದು ಕೆಲ್ಸ ಮಾಡಿ, ಅವ್ರನ್ನೆ ಕೇಳಿ. ಅವ್ರು ಮಳೆಗಾಲ್ದಲ್ಲಿ ಹೂವಿಗೆ ಬರೋ ಜೇನುಹುಳ ಹಿಡಿದು ಅದರ ಕುಂಡಿಗೆ ಕೆಂಪಿ ದಾರ ಕಟ್ಟಿ ಗೂಡು ಪತ್ತೆ ಮಾಡ್ತಾರೆ
     ಅವ್ರನ್ನ ಕೇಳೋದು ಆಮೇಲಾತು. ನಿನಗೆ ನೂರು ರೂಪಾಯಿ ಕೊಡ್ತೀನಿ ಮರದ ಪೊಟರೆಯಲ್ಲಿರೊ ಒಂದು ಜೇನು ಪತ್ತೆ ಮಾಡಿಕೊಡ್ತೀಯಾ? ಎಂದು ಚೆನ್ನನನ್ನು ಕೇಳಿದೆ.
ಅಯ್ಯ.. ದುಡ್ಡಿನ ಮಕಕ್ಕೆ ಅಷ್ಟು ಬೆಂಕಿ ಬಿತ್ತು, ಈಗ ಮಳೆಮಾಡ ತುಂಬ್ಕಂಡೈತಿ, ಹಂಗಾಗಿ ಹುಳದ ದಾರಿ ಪತ್ತೆಮಾಡೊದು ಬಹಳ ಕಷ್ಟ. ಗೂಡು ಪತ್ತೆ ಮಾಡಕೆ ಬಿಸಿಲು ಬೇಕೇಬೇಕು. ನೀವು ಯಾವ್ದಕ್ಕೂ ಮಳೆಗಾಲ ಮುಗಿದ ಮೇಲೆ ಒಂದ್ಸಾರಿ ನೆಪ್ಪ ಮಾಡ್ರಿ ಎನ್ನುತ್ತಾ ಮನೆಕಡೆ ಹೊರಟ. ಅವನಿಗೆ ನನ್ನ ಜೇನಿನ ಕುರಿತಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಆಸಕ್ತಿ ಇರಲಿಲ್ಲ. ಅರ್ಧಕ್ಕೆ ನಿಲ್ಲಿಸಿ ಬಂದಿದ್ದ ಜಗಳದ ಯೋಚನೆಯೇ ಜಾಸ್ತಿಯಾಗಿತ್ತು.
     ಕದನವನ್ನು ಚೆನ್ನ ನಿಲ್ಲಿಸಿದ್ದನೇ ಹೊರತು ಆಕೆ ನಿಲ್ಲಿಸಿರಲಿಲ್ಲ. ಆದರೆ ಧ್ವನಿ ಸ್ವಲ್ಪ ಸಣ್ಣದಾಗಿತ್ತು.
     ಏ... ಬಸ್ವಿ, ನಿನ್ನ ಅಪ್ಪ ಅಮ್ಮ ನಿಂಗೆ ಸರಿಯಾದ ಹೆಸ್ರು ಇಟ್ಟಿದಾರೆ ನೋಡು, ಊರುಬಸ್ವಿ ಅಂತ ಇಟ್ಟಿದ್ರೆ ಇನ್ನೂ ಲಾಯ್ಕಿತ್ತು. ನಿನ್ಮಿಂಡ ಎಮ್ಮೆ ಹೊಡ್ಕಂಡು ಗದ್ದಿಗೆ ಹೊಂಟ ನೋಡು, ಒಂದ್ ಮೋಟ್‌ಕತ್ತಿ ಹಿಡ್ಕಂಡು ಮನ್ಯಾಗೆ ಬೆಂಕಿ ಒಟ್ಟಾಕೆ ಒಂಚೂರು ಕಟಿಗೆಯಿಲ್ಲಾ ಈಗ್ ತರ್ತೀನಿ ಅಂತ ಗಂಡನತಾವ ಒಂದ್ ಅಗಡಬಾಂಕ್ ಸುಳ್ಳೇಳಿ ನೀನೂ ಆ ಕಡೆ ಹೋಗು ಎಂದ. ಇಷ್ಟು ಹೊತ್ತಿನ ತನಕ ಸಣ್ಣದಾಗಿ ಗೊಣಗುಟ್ಟುತ್ತಿದ್ದ ಬಸವಿಯ ದನಿ ಆ ಕಡೆಯಿಂದ ಮತ್ತೆ ಆರ್ಭಟಿಸತೊಡಗಿತು.
     ಬೇವರ್ಸಿ ಸೂಳೆಮಗನೆ, ನಮ್ಮ ಅಪ್ಪ ಅಮ್ಮನ ಸುದ್ದಿ ಎತ್ತಿದ್ರೆ ಬೋಟಿತೆಗಿತೀನಿ ನೋಡು, ನೀನು ಕೊಸಿಯೋದು ಆಚಾರ ಮಾಡೋದೆಲ್ಲಾ ಅನಾಚಾರ ಅಂತಾ ಊರಿಗೆಲ್ಲಾ ಗೊತ್ತು, ನಿನ್ಮನೆ ಆಟಾನೆಲ್ಲಾ ನನ್ನತ್ರ ತೋರಿಸಬ್ಯಾಡ, ನೀನು ವಾಟೆಕಾಯಿ ಕೊಯ್ಯಕೆ ಹೋದಾಗ ಮಾಡೊ ಹಲ್ಕಟ್ ಕೆಲ್ಸ ನಂಗೆ ಏನು ಇಡೀ ಊರಿಗೆ ಗೊತ್ತು. ನಿಂಗೆ ತಾಕತ್ತಿದ್ರೆ ನೀನೂ ಬಾ ನಿನ್ನ ಮಗನ್ನೂ ಕಳುಸು, ಅದ ಬಿಟ್ಟು............ ಮುಂದುವರೆಯುತ್ತಲೇ ಇತ್ತು. ನನಗೆ ಜಗಳ ನೋಡುವ ಆಸೆ ಇತ್ತಾದರೂ ಇನ್ನು ಹೆಚ್ಚು ಹೊತ್ತು ಅಲ್ಲಿ ನಿಂತರೆ ನೋಡಿದವರು ತಪ್ಪು ತಿಳಿದಾರು ಎಂದು ಮನೆಯ ಕಡೆ ಹೊರಟೆ.
ಜೇನಜಾತಿ


           ಜೇನು, ಶಿಸ್ತುಬದ್ದ ಜೀವನ ನಡೆಸುವ ಜೀವಿ. ಜೇನಿನ ಪ್ರಬೇಧದಲ್ಲಿ ಸಾವಿರಾರು ಜಾತಿಯ ಜೇನುಗಳಿದ್ದರೂ ಪ್ರಮುಖವಾಗಿ ಹೆಜ್ಜೇನು, ತುಡುವೆ, ನಿಸರಿ, ಹಾಗು ಕೋಲ್ಜೇನು ಎಂಬ ನಾಲ್ಕು ಜಾತಿಯ ತುಪ್ಪವನ್ನು ಮನುಷ್ಯ ಬಳಕೆ ಮಾಡುತ್ತಿದ್ದಾನೆ.
 ಹೆಜ್ಜೇನುತುಪ್ಪವನ್ನು ಆಹಾರಕ್ಕಾಗಿ ಹಾಗು ತತ್ತಿಯನ್ನು ಮೇಣಕ್ಕಾಗಿಯೂ ಬಳಕೆ ಮಾಡುತ್ತಾರಾದರೂ ಅದನ್ನು ಪೆಟ್ಟಿಗೆಯಲ್ಲಿಟ್ಟು ಸಾಕಾಣಿಕೆ ಮಾಡಲು ಆಗುವುದಿಲ್ಲ. ಅವು ಬೆಳಕಿನಲ್ಲಿಯೇ ಗೂಡು ಕಟ್ಟುತ್ತವೆ. ದೊಡ್ಡ ಕಟ್ಟಡಗಳಲ್ಲಿ, ಆಕಾಶದೆತ್ತರದ ಮರಗಳಲ್ಲಿ ಒಂದೇ ತತ್ತಿಗೆ ಲಕ್ಷಾಂತರ ಹುಳುಗಳು ಜೋತು ಬಿದ್ದಿರುತ್ತವೆ. ಅವು ಗಾತ್ರದಲ್ಲಿ ದೊಡ್ಡದಿದ್ದು ಮನುಷ್ಯನ ಪ್ರಾಣಕ್ಕೆ ಸಂಚಕಾರ ತಂದ ಹಲವಾರು ಘಟನೆಗಳು ಕಾಣಸಿಗುತ್ತವೆ.
 ಗಾತ್ರದಲ್ಲಿ ಹೆಜ್ಜೇನನ್ನು ಹೋಲುವ ಆದರೆ ಕತ್ತಲೆಯಲ್ಲಿ ಮಾತ್ರ ಗೂಡುಕಟ್ಟುವ, ಪೆಟ್ಟಿಗೆಯಲ್ಲಿಟ್ಟು ಸಾಕಬಹುದಾದ ಮೆಲ್ಲಿಫಿರಾ, ಎಂಬ ವಿದೇಶಿತಳಿ ಭಾರತಕ್ಕೆ ವಿದೇಶದಿಂದ ಬಂದಿದೆಯಾದರೂ ಅದಕ್ಕೆ ಹೇರಳ ಹೂವುಗಳು ಬೇಕಾಗುವುದರಿಂದ ಮಲೆನಾಡಿನಲ್ಲಿ ಅವುಗಳ ಸಾಕಾಣಿಕೆ  ಕಷ್ಟಕರ. ಸಾವಿರಾರು ಎಕರೆ ಜಾಗದಲ್ಲಿ ಸೂರ್ಯಕಾಂತಿ ಬೆಳೆಯುವ ಉತ್ತರಭಾರತದಲ್ಲಿ  ಮೆಲ್ಲಿಫಿರಾ ಜೇನನ್ನು ಸಾಕುತ್ತಾರೆ.
 ಕೋಲ್ಜೇನು ಗಾತ್ರದಲ್ಲಿ ತುಡುವೆಜೇನಿಗಿಂತ ಸ್ವಲ್ಪ ಚಿಕ್ಕದಾಗಿದ್ದು ಅರೆಮರೆಯಲ್ಲಿ ಸಣ್ಣಗಾತ್ರದ ಮರದ ಟೊಂಗೆಗೆ ಕಟ್ಟಿಕೊಳ್ಳುತ್ತದೆ. ಸಾವಿರದೊಳಗಿನ ಹುಳುಗಳ ಸಂಖ್ಯೆಯ ಇವು ಅಲ್ಪಸ್ವಲ್ಪ ತುಪ್ಪವನ್ನು ಮಾತ್ರ ಸಂಗ್ರಹಿಸಿಡುತ್ತದೆ. ಇವನ್ನು ಸಾಕಾಣಿಕೆ ಮಾಡಲಾಗುವುದಿಲ್ಲ.
 ನಿಸರಿಹುಳು ಜೇನಿಗಿಂತ ಭಿನ್ನ ಜಾತಿಯ ಹುಳುವಾಗಿದ್ದು ತುಪ್ಪದ ರುಚಿಯಲ್ಲಿ ಹಾಗೂ ಔಷಧೀಯ ಗುಣಗಳಲ್ಲಿ ವಿಶಿಷ್ಠ ಸ್ಥಾನಗಳಿಸಿದೆ. ಇದರ ಏರಿ ಕಟ್ಟುವ ವಿಧಾನ ಹಾಗು ಜೀವನ ಕ್ರಮಗಳು ಜೇನಿನಷ್ಟು ಶಿಸ್ತುಬದ್ದವಾಗಿರುವುದಿಲ್ಲವಾದ್ದರಿಂದ ಅವುಗಳನ್ನು ದೊಡ್ದ ಪ್ರಮಾಣದಲ್ಲಿ ಸಾಕಾಣಿಕೆ ಮಾಡಲಾಗುವುದಿಲ್ಲ.
 ತುಡುವೆಜೇನು ಇವೆಲ್ಲಕ್ಕಿಂತ ಸಾಕಾಣಿಕೆಯಲ್ಲಿಯೂ ಆದಾಯದಲ್ಲಿಯೂ ಮನುಷ್ಯರಿಗೆ ಹೊಂದಿಕೊಂಡಿರುವುದರಿಂದ ಹಾಗು ಅತ್ಯಂತ ವ್ಯವಸ್ಥಿತ ಜೀವನಕ್ರಮದಿಂದ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಎರಡು ಜಾತಿ, ಒಂದು ಅರಿಶಿನತುಡುವೆ ಇನ್ನೊಂದು ಕಪ್ಪುತುಡುವೆ. ಇವೆರಡು ಜಾತಿಗಳಲ್ಲಿ ಬಣ್ಣದ ವ್ಯತ್ಯಾಸದ ಹೊರತಾಗಿ ಮತ್ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ.   ಕಪ್ಪುತುಡುವೆಜೇನು ಮಲೆನಾಡಿನ ಹವಾಗುಣಕ್ಕೂ, ಅರಿಶಿನ ತುಡುವೆಜೇನು ಬಯಲುಸೀಮೆಯ
ಹವಾಗುಣಕ್ಕೂ ಒಗ್ಗಿಕೊಂಡಿವೆ. ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಜೇನುಹುಳುಗಳು ಇದ್ದು  ಅಲ್ಲಿಯ ಹವಾಗುಣಕ್ಕೆ ಸಣ್ಣಪುಟ್ಟ ಬದಲಾವಣೆಯ ದೇಹ ರಚನೆಯನ್ನು ಹೊಂದಿವೆ. ಆದರೆ ತುಪ್ಪ ಸಂಗ್ರಹಿಸುವ ಮೂಲಗುಣ ಮಾತ್ರ ಎಲ್ಲಾ ಕಡೆಗಳಲ್ಲಿಯೂ ಒಂದೇರೀತಿ.
 ಜೇನು ಸಾಕಾಣಿಕ ವಿಧಾನದ ಪುಸ್ತಕದ ಮಾಹಿತಿಯನ್ನು ಮೆಲುಕು ಹಾಕುತ್ತಾ ಮನೆಯಕಡೆ ಹೊರಟವನಿಗೆ ಚೆನ್ನ ಮಳೆಗಾಲದಲ್ಲಿ ಜೇನುಗೂಡು ಕಂಡುಹಿಡಿಯುವ ಪ್ರಶಾಂತನ ಹೊಸ ವಿಧಾನದ ಬಗ್ಗೆ ಹೇಳಿದ್ದು ನೆನಪಾಯಿತು. ಹೇಗೂ ಬಂದಿದ್ದಾಗಿದೆ ಸಂಪಳ್ಳಿಯಿಂದ ಪ್ರಶಾಂತನ ಮನೆಯಿರುವ ಕೆರೆಕೈ ಕೂಗಳತೆಯಷ್ಟು ದೂರ ಅವನನ್ನು ವಿಚಾರಿಸಿಕೊಂಡು ಹೋದರಾಯಿತು ಎಂದು ಅತ್ತಕಡೆ ಹೊರಟೆ.
 ಪ್ರಶಾಂತ ತುಡುವೆಜೇನು ಹಿಡಿದು ಪೆಟ್ಟಿಗೆಯಲ್ಲಿ ಸಾಕುವುದರಲ್ಲಿ ಎತ್ತಿದ ಕೈ. ಕಡ್ಡಿಯಂತೆ ಸಪೂರವಾಗಿದ್ದ ಅವನಿಗೆ ಮರ ಹತ್ತುವುದು, ಹುತ್ತದೊಳಕ್ಕೆ ತೂರುವುದು ಬಹಳ ಸುಲಭವಾಗಿತ್ತು. ಹಾಗಾಗಿ  ಜೇನು ಮರದ ತುದಿಯ ಪೊಟರೆಯಲ್ಲಿದ್ದರೂ ಬಿಡುತ್ತಿರಲಿಲ್ಲ. ನಾಲ್ಕೈದು ವರ್ಷಗಳ ಹಿಂದೆ ದೊಡ್ಡ  ಪ್ರಮಾಣದಲ್ಲಿ  ಜೇನು ಕೃಷಿ ಆರಂಭಿಸಿ ನಂತರ ಅಡಿಕೆ ವ್ಯಾಪಾರ ಶುರುಮಾಡಿದ ಕಾರಣದಿಂದ ಜೇನು ಸಾಕಾಣಿಕೆ ಬಗೆಗಿನ ಆಸಕ್ತಿ ಕಡಿಮೆಯಾಗಿ ಒಂದು ಪೆಟ್ಟಿಗೆಯನ್ನು ಮಾತ್ರ ಇಟ್ಟುಕೊಂಡಿದ್ದ. ಜೇನುಹುಳಗಳ ಬಗ್ಗೆ ಪ್ರಶಾಂತ ಹೊಸಹೊಸ ವಿಧಾನಗಳನ್ನು ಅದೆಲ್ಲಿಂದಲೋ ಪತ್ತೆಮಾಡಿಕೊಂಡು ಅನುಷ್ಠಾನಗೊಳಿಸುತ್ತಿದ್ದ. ಅದರಲ್ಲಿ ಮಳೆಗಾಲದ ದಿನಗಳಲ್ಲಿ ಜೇನುಗೂಡು ಪತ್ತೆಮಾಡುವ ವಿಧಾನವೂ ಒಂದು.
 ಅಪರೂಪಕ್ಕೆ ಹೂವಿನಮಕರಂದ ಹೀರಲು ಬರುವ ತುಡುವೆಜೇನುಹುಳವನ್ನು ಕೈಯಲ್ಲಿ ನಿಧಾನವಾಗಿ ಹಿಡಿದು ಅದರ ಸೊಂಟಕ್ಕೆ ಸಣ್ಣದಾದ ಬಣ್ಣದ ದಾರವನ್ನು ಕಟ್ಟಿ ಅದು ಹಾರಿಹೋಗುವ ದಾರಿಗುಂಟ ಸಾಗಿದರೆ ಜೇನುಗೂಡು ಸುಲಭವಾಗಿ ಪತ್ತೆಯಾಗಿಬಿಡುತ್ತಿತ್ತು. ಇಲ್ಲಿ ಎರಡು ಕ್ರಮಗಳನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗಿತ್ತು ಮೊದಲನೆಯದು ದಾರವನ್ನು ಜೇನುಹುಳದ ಸೊಂಟಕ್ಕೆ ಬಿಗಿಯಾಗದಂತೆ ಹಾಗು ದಾರ ಕಳಚಿಹೋಗದಂತೆ ಕಟ್ಟುವುದು. ಎರಡನೆಯದು ದಾರದ ಬಣ್ಣ ಹಾಗು ಉದ್ದ. ಸಾಧ್ಯವಾದಷ್ಟು ದೂರದಿಂದ ಗುರುತಿಸಬಹುದಾದ ದಟ್ಟಬಣ್ಣದ ದಾರವನ್ನು ಬಳಸಬೇಕು ಹಾಗು ಅದು ಜಾಸ್ತಿ ಉದ್ದವಾಗಿರದಂತೆ ನೋಡಿಕೊಳ್ಳಬೇಕು. ದಾರದ ಬಣ್ಣ ಮಾಸಲಾಗಿದ್ದರೆ ಹುಳ ಮೇಲೆ ಹಾರಿದಾಗ ನಮಗೆ ಕಾಣಿಸುವುದೇ ಇಲ್ಲ. ಅದೇರೀತಿ ದಾರದ ಉದ್ದ ತೀರ ಜಾಸ್ತಿಯಾಗಿದ್ದರೆ ಅದು ಗಿಡಗಂಟಿಗಳಿಗೆ ಸಿಕ್ಕಿಹಾಕಿಕೊಂಡು ಹುಳದ ಪ್ರಾಣಕ್ಕೆ ಸಂಚಕಾರ ಬಂದೆರೆಗುವ ಸಾಧ್ಯತೆ ಹೆಚ್ಚು . ಹಾಗಾಗಿ ಇವೆರಡು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿ ಕೆಲಸಮಾಡಿದರೆ ಘೋರಾಕಾರದ ಮಳೆಗಾಲದಲ್ಲಿಯೂ ಜೇನುಹಿಡಿಯುವ ಕೆಲಸದಲ್ಲಿ ಯಶಸ್ಸು ಸಾಧ್ಯ ಎಂಬುದು ಪ್ರಶಾಂತ ಅನುಭವದಿಂದ ಕಂಡುಕೊಂಡ ಸತ್ಯ.
     ಯಾವ ಪುಸ್ತಕದಲ್ಲಿಯೂ ಸಿಗದ ಇಂತಹ ಹಲವಾರು ಉಪಾಯಗಳು ಜೇನು ಸಾಕಾಣಿಕಾದಾರರ ಅನುಭವದಲ್ಲಿ ಬಚ್ಚಿಟ್ಟುಕೊಂಡಿರುತ್ತವೆ. ಹಾಗಾಗಿ ಈ ತರಹದ ಹಲವಾರು ಮಾಹಿತಿಗಳನ್ನು ತಿಳಿದಿರುವ ಪ್ರಶಾಂತನನ್ನು ಹುರಿದುಂಬಿಸಿ ನನ್ನ ಜೊತೆಗೂಡಿಸಿಕೊಂಡರೆ ನನಗೆ ಸ್ವಲ್ಪ ಸಹಾಯವಾಗಬಹುದೆಂಬ ಆಲೋಚನೆಯೊಂದಿಗೆ ಅವರ ಮನೆಯೊಳಕ್ಕೆ ಕಾಲಿಟ್ಟೆ. ಆದರೆ ಪ್ರಶಾಂತ ಅಡಿಕೆವ್ಯಾಪಾರಕ್ಕೆಂದು ಕಲಗಾರಿಗೆ ಹೋಗಿದ್ದಾನೆಂದು ಅವನ ಅಮ್ಮ ಹೇಳಿದ್ದರಿಂದ ಇವತ್ತೇಕೋ ಹೊರಟ ಘಳಿಗೆ ಸರಿಯಿಲ್ಲವೆಂದೆನಿಸಿ ಮನೆಯ ಕಡೆ ವಾಪಾಸು ಹೊರಟೆ.  (ಮುಂದುವರೆಯುತ್ತದೆ)

Rating
No votes yet

Comments