ಒಂದು ಜೇನಿನ ಹಿಂದೆ-1
"ಒಂದು ಜೇನಿನ ಹಿಂದೆ " ೨೦೦೭ ರಲ್ಲಿ ಬರೆದ ೧೧೨ ಪುಟಗಳ ಪುಸ್ತಕ. ಸಂಪದದಲ್ಲಿ ಪ್ರಕಟಿಸುವ ಇರಾದೆಗೆ ಇಂದಿನಿಂದ ಚಾಲನೆ. ಹೀಗೆ ಧಾರಾವಾಹಿ ರೂಪದಲ್ಲಿ ಓದುವುದು ಕಷ್ಟ ಆಗಬಹುದು ಆದರೂ ಒಂದು ಯತ್ನ. ಧನ್ಯವಾದಗಳು.
ಪುಸ್ತಕ ತಂದ ಆಸೆ
ಸ್ವಾವಲಂಬನೆಯ ಬದುಕಿಗೆ ಜೇನುಕೃಷಿ ಎಂಬ ತಲೆಬರಹ ಹೊತ್ತ ಪುಸ್ತಕ ನನಗೆ ಓದಲು ಸಿಗುವಾಗ ಜೋರು ಮಳೆಗಾಲ. ಕಾಗೆಯೂ ಹಾರಾಡಲಾರದಷ್ಟು ಮಳೆ ಸುರಿಯುತ್ತಿದ್ದ ಒಂದುದಿನ ಮಾಡಲು ಯಾವ ಕೆಲಸವೂ ಇಲ್ಲದ್ದರಿಂದ ಹಳೆಯ ಟ್ರಂಕು ಹುಡುಕುತ್ತಿದ್ದೆ. ಹಳೆ ಕಸ್ತೂರಿ, ತುಷಾರ, ಮಯೂರಗಳ ನಡುವೆ ಆ ಪುಸ್ತಕ ಸಿಕ್ಕಿತು. ಅದು ಪ್ರಾಯಶಃ ನನ್ನ ಅಪ್ಪಯ್ಯ ಪ್ರಾಯದ ಕಾಲದಲ್ಲಿ ಕೊಂಡುತಂದ ಪುಸ್ತಕ ಇದ್ದಿರಬೇಕು. ಅರ್ಧ ಮುಖಪುಟ ಹರಿದುಹೋಗಿ ಮಾಸಲು ಬಣ್ಣ ತಲುಪಿತ್ತು. ಆದರೂ ಮುಖಪುಟದಲ್ಲಿನ ಸ್ವಾವಲಂಬನೆಯ ಬದುಕು ಎನ್ನುವ ಶೀರ್ಷಿಕೆ ನನಗೆ ಆ ಪುಸ್ತಕದ ಮೇಲೆ ಕುತೂಹಲ ಇಮ್ಮಡಿಸುವಂತೆ ಮಾಡಿತ್ತು. ಸಾಮಾನ್ಯವಾಗಿ ಕೃಷಿಕರ ಜೀವನದಲ್ಲಿ ಹಣದ ವಿಚಾರದಲ್ಲಿ ಪರಾವಲಂಬಿ ಬದುಕೆ ಹೆಚ್ಚು. ಬೆಳೆ ಕೈಗೆ ಬಂದಾಗ ಹಣದ ವಹಿವಾಟು ಜೋರಾಗಿ ನಡೆದು ನಂತರ ಮುಂದಿನ ಬೆಳೆ ಕೈಗೆ ಸಿಗುವವರೆಗೂ ಆಮೆಗತಿಯಲ್ಲಿ ಸಾಗುವ ವಹಿವಾಟಿನ ಕಾರಣದಿಂದ ಬಹಳಷ್ಟು ಕೃಷಿಕರು ಇಂತಹ ಶಬ್ದಗಳಿಗೆ ಮರುಳಾಗುತ್ತಾರೆ. ನಾನೂ ಅದಕ್ಕೆ ಹೊರತಾಗಿರಲಿಲ್ಲ. ಹಣ ಸಿಕ್ಕ ಕೂಡಲೇ ಕಣ್ಣಿಗೆ ಕಂಡ ವಸ್ತುಗಳನ್ನು ಖರೀದಿಸಿ ಕೈ ಬರಿದಾಗಿಸಿಕೊಳ್ಳುವ ನನ್ನಂತಹ ಸ್ವಭಾವದವರನ್ನು ಶೀರ್ಷಿಕೆ ಇನ್ನಷ್ಟು ಬೇಗನೆ ಸೆಳೆಯುತ್ತಿತ್ತು. ಹಾಗಾಗಿ ಜೇನುತುಪ್ಪ ಮಾರಾಟಮಾಡಿ ಬರುವ ಹಣದಿಂದ ಬೇಕಾಗಿದ್ದನ್ನು ಮಾಡಬಹುದು ಎಂಬ ಆಸೆ ಇನ್ನಷ್ಟು ಹೆಚ್ಚಿನ ಆಸಕ್ತಿಗೆ ಕಾರಣವಾಗಿತ್ತು. ನಿರಂತರ ಆದಾಯ ಬರುತ್ತದೆ ಎಂದರೆ ಯಾರಿಗೆ ಆಸೆ ಇರುವುದಿಲ್ಲ?. ಹಾಗಾಗಿ ಹಠಕ್ಕೆ ಬಿದ್ದು ಪುಸ್ತಕ ಓದತೊಡಗಿದೆ. ಪುಸ್ತಕ ಓದುತ್ತಾ ಹೋದಂತೆ ಜೇನಿನ ಪ್ರಪಂಚದ ಒಂದೊಂದೇ ಮಜಲು ಅರ್ಥವಾಗುತ್ತಾ ಹೋಯಿತು. ಜೇನುಹುಳದ ಜಾತಿ, ಅದರ ಸ್ವಭಾವ, ತುಪ್ಪಮಾಡುವ ಸಮಯ, ಜೇನುಗೂಡನ್ನು ಪತ್ತೆ ಮಾಡುವ ವಿಧಾನ, ಕಾಡಿನ ಪೊಟರೆಯಿಂದ ಮರದಪೆಟ್ಟಿಗೆಗೆ ಜೇನನ್ನು ಸೇರಿಸುವ ರೀತಿ ಹೀಗೆ ಒಂದೊಂದನ್ನೂ ಸವಿವರವಾಗಿ ಪುಸ್ತಕದಲ್ಲಿ ಹೇಳಲಾಗಿತ್ತು. ಮಧ್ಯದಲ್ಲಿ ಕೆಲವು ಪುಟಗಳು ಹರಿದು ಹೋಗಿತ್ತಾದರೂ ಆದರ ಹಿಂದಿನ ಹಾಗು ಮುಂದಿನ ಪುಟಗಳ ಆಧಾರದ ಮೇಲೆ ವಿಷಯವನ್ನು ತೂಗಿಸಿಕೊಂಡು ಅರ್ಥಮಾಡಿಕೊಳ್ಳಬಹುದಿತ್ತು. ಸ್ವಾವಲಂಬನೆಯ ಬದುಕಿಗೆ ಜೇನುಕೃಷಿ ಎಂಬ ಪುಸ್ತಕ ನನಗೆ ಎಷ್ಟರ ಮಟ್ಟಿಗೆ ಹುಚ್ಚು ಹಚ್ಚಿತ್ತು ಎಂದರೆ ನಾನು ಹತ್ತೆಂಟು ಪೆಟ್ಟಿಗೆಯಲ್ಲಿ ಜೇನು ಸಾಕಿದಂತೆ, ಡಬ್ಬಗಟ್ಟಲೆ ತುಪ್ಪ ತೆಗೆದು ಮಾರಾಟಮಾಡಿದಂತೆ, ಕೈತುಂಬಾ ಹಣ ಎಣಿಸಿದಂತೆ ಕನಸು ಕಾಣುತ್ತಿದ್ದೆ. ಕೆಲವು ರಾತ್ರಿ ಜೇನು.. ಜೇನು.. ಎಂದು ದೊಡ್ಡದಾಗಿ ನಿದ್ರೆಯಲ್ಲಿ ಕೂಗಿದ್ದೂ ಇತ್ತು. ಆದರೆ ಕನಸು ತಕ್ಷಣ ನನಸಾಗುವುದು ಸುಲಭವಾಗಿರಲಿಲ್ಲ. ಘೋರಾಕಾರದ ಮಳೆಗಾಲದ ಕಾರಣ ಜೇನು ಹಿಡಿಯಲು ಇದು ಸರಿಯಾದ ಸಮಯವಲ್ಲ ಎಂದು ಪುಸ್ತಕದಲ್ಲಿ ಇದ್ದದ್ದರಿಂದ ತತ್ಕ್ಷಣದಿಂದ ಪೆಟ್ಟಿಗೆಯಲ್ಲಿ ಜೇನು ಸಾಕುವ ನನ್ನ ಆಸೆಯನ್ನು ತಡೆಹಿಡಿಯಬೇಕಾಗಿತ್ತು. ಆಸೆ ತಡೆಹಿಡಿಯುವುದೆಂದರೆ ಸುಲಭದ ಮಾತಲ್ಲ. ಆಸೆಯೇ ಆಗದಿದ್ದಲ್ಲಿ ಅದರ ಪ್ರಶ್ನೆ ಬೇರೆ, ಆದರೆ ಈಗಾಗಲೆ ಆಸೆ ಹುಟ್ಟಿದ್ದರಿಂದ ಕುಳಿತಲ್ಲಿ ನಿಂತಲ್ಲಿ ಜೇನು ಕಾಡತೊಡಗಿತು. ಪುಸ್ತಕದಲ್ಲಿ ಮಳೆಗಾಲದಲ್ಲಿ ಜೇನುಗೂಡನ್ನು ಪತ್ತೆ ಮಾಡಲಾಗದ ಕಾರಣದಿಂದ ಪೆಟ್ಟಿಗೆಗೆ ಕೂಡುವುದಕ್ಕೆ ಸೂಕ್ತ ಸಮಯವಲ್ಲ ಎಂದಿರಬಹುದು, ಅಕಸ್ಮಾತ್ ಕಾಡಿನಲ್ಲಿ ಜೇನುಗೂಡು ಪತ್ತೆಯಾದರೆ ತೊಂದರೆಯೇನು ಇಲ್ಲವಲ್ಲ ಎಂಬ ಆಲೋಚನೆಯಿಂದಾಗಿ ಮನಸ್ಸಿನ ಮೂಲೆಯಲ್ಲಿ ಜೇನನ್ನು ಪೆಟ್ಟಿಗೆಯಲ್ಲಿ ಕೂಡುವ ಸಣ್ಣ ಆಸೆಯೊಂದು ಚಿಗುರಿತು.
********ಚೆನ್ನ*****
ಸಂಪಳ್ಳಿಯ ಚೆನ್ನ ಕಾಡು ಉತ್ಪನ್ನವನ್ನು ಆಧರಿಸಿ ಜೀವನ ನಡೆಸುತ್ತಿದ್ದ. ಅವುಗಳಲ್ಲಿ ಅವನಿಗೆ ಜೇನುತುಪ್ಪ ಮಾರಾಟದಿಂದ ಹೆಚ್ಚಿನ ಆದಾಯ ಬರುತ್ತಿತ್ತು. ಚೆನ್ನ ಎನ್ನುವ ಹೆಸರನ್ನು ಕೇಳಿದಾಕ್ಷಣ ಸಾಮಾನ್ಯವಾಗಿ ಆತ ನೋಡಲು ಬಹಳ ಸುಂದರವಾಗಿರಬಹುದೆಂಬ ಕಲ್ಪನೆ ಸಹಜ. ಆದರೆ ಅವನ ಹೆಸರಿಗೂ ದೇಹದ ರೂಪಕ್ಕೂ ಹೋಲಿಕೆಯೇ ಇರಲಿಲ್ಲ. ಚೆನ್ನ ಗಡಿಬಿಡಿಯಲ್ಲಿ ನಿರ್ಮಿಸಿದ ಮಣ್ಣಿನಬೊಂಬೆಯಂತಿದ್ದ. ನೋಡಲು ಕುರೂಪಿಯ ಜತೆ ಸ್ವಲ್ಪ ಸೋಂಬೇರಿ. ಹಾಗಾಗಿ ಇಡೀ ಕೇರಿಯಲ್ಲಿ ಕೂಲಿ ಕೆಲಸ ಮಾಡದೆ ಜೀವನ ಸಾಗಿಸುತ್ತಿರುವ ಏಕೈಕ ವ್ಯಕ್ತಿ. ಅಪರೂಪಕ್ಕೊಮ್ಮೆ ಒಂದವೈತ್ತು ರೂಪಾಯಿ ಇದ್ರೆ ಕೊಡ್ರಿ, ನಾಡಿದ್ದು ಸೋಮಾರ ವಾಪಾಸು ಕೊಡ್ತೀನಿ ಎಂದು ಇಸಿದುಕೊಂಡು ವಾಪಾಸು ಕೊಡುವುದನ್ನು ಮರೆಯುತ್ತಿದ್ದ. ಹಾಗಂತ ಅವನು ಮರೆಗುಳಿಯೇನಲ್ಲ. ಅದು ಉದ್ದೇಶಪೂರ್ವಕ ಮರೆವು. ಅಕಸ್ಮಾತ್ ದುಡ್ಡು ಕೊಟ್ಟವರು ಚೆನ್ನ ಕೊಡಬೇಕಾದ ದುಡ್ಡಿನ ನೆನಪು ಮಾಡಿದರೆ, ಬಾಯಿಂದ ಸೊರ್ ಎಂದು ಗಾಳಿಯನ್ನು ಒಳಗೆಳೆದುಕೊಂಡು ವಿಚಿತ್ರ ಶಬ್ದ ಹೊರಡಿಸುತ್ತಾ ತೋ ಹೌದಲ್ರಿ, ನಂಗೆ ಮರ್ತೆ ಹೋಗಿತ್ತು. ಯಾವ್ದೋ ದುಡ್ಡು ಬರದೈತಿ ನಾಡಿದ್ದು ಕೊಡ್ತೀನಿ ಎನ್ನುವ ಹೊಚ್ಚಹೊಸ ಸುಳ್ಳು ಹೇಳುತ್ತಿದ್ದ. ಈ ಮೂರು ಗುಣಗಳನ್ನು ಹೊರತುಪಡಿಸಿದರೆ ಚೆನ್ನ ಮಿಕ್ಕೆಲ್ಲರಿಗಿಂತ ಸಾಚಾ. ಇತರರಂತೆ ಸಾರಾಯಿ, ಬೀಡಿ ಮುಂತಾದ ಯಾವ ದುಶ್ಚಟವೂ ಇಲ್ಲದ ಜನ. ಹಾಗಾಗಿ ಖರ್ಚಿಗೆ ಅಂತ ಹೆಚ್ಚಿಗೆ ಕಾಸು ಅವನಿಗೆ ಬೇಕಾಗುತ್ತಿರಲಿಲ್ಲ. ವರ್ಷಪೂರ್ತಿ ಕಾಡು ಉತ್ಪನ್ನವೇ ಅವನ ಮಟ್ಟದ ಜೀವನಕ್ಕೆ ಸಾಕಾಗುತ್ತಿತ್ತು. ಯಾವ ಯಾವ ಕಾಲದಲ್ಲಿ ಯಾವ ಜಾತಿಯ ಕಾಡು ಉತ್ಪನ್ನ ಸಿಗುತ್ತದೆ ಮತ್ತು ಅವುಗಳನ್ನು ಯಾರು ಕೊಳ್ಳುತ್ತಾರೆ ಎನ್ನುವುದರಿಂದ ಹಿಡಿದು, ಕೊಳ್ಳುವವರು ಯಾವ ರೀತಿ ಮೋಸಮಾಡುತ್ತಾರೆ ಎನ್ನುವುದರವರೆಗೂ ಆತ ಪಳಗಿದ್ದ. ಜೇನುತುಪ್ಪ, ಉಪ್ಪಾಕೆ ಹಣ್ಣು, ವಾಟೆಕಾಯಿ, ಅಪ್ಪೆಮಿಡಿ, ಕಳಲೆಗಳನ್ನು ಸಂಗ್ರಹಿಸಿ, ಹವ್ಯಕಬ್ರಾಹ್ಮಣರೇ ಹೆಚ್ಚಾಗಿರುವ ಊರಿನಲ್ಲಿ ವ್ಯಾಪಾರಮಾಡಿ ಕೊಂಚ ಹಣ ಸಂಪಾದಿಸುತ್ತಿದ್ದ. ಮಿಕ್ಕಂತೆ, ಅಂಟುವಾಳಕಾಯಿ, ಸೀಗೆಕಾಯಿ, ಮುಂತಾದವುಗಳನ್ನು ತಾಳಗುಪ್ಪದ ಕಾಳಪ್ಪಶೆಟ್ರಿಗೆ ಮಾರುತ್ತಿದ್ದ. ಹಾಗೆ ಸಂಪಾದಿಸಿದ ಹಣದಲ್ಲಿ ಅರ್ಧವನ್ನು ಕುಮುಟಾಭಟ್ಟರ ಅಂಗಡಿಯಲ್ಲಿ ಕಾಮತ್ ಚೌಚೌ ತಿಂದು ಖಾಲಿ ಮಾಡಿದರೆ ಇನ್ನರ್ಧವನ್ನು ಮನೆಗೆ ಕೊಡುತ್ತಿದ್ದ. ಚೆನ್ನನ ಹೆಂಡತಿ ಮಗ ಇಬ್ಬರೂ ಕೂಲಿಗೆ ಹೋಗುತ್ತಿದ್ದುದರಿಂದ ಸಂಸಾರದ ಜವಾಬ್ದಾರಿಯಿಂದಲೂ ಅವನು ನುಣುಚಿಕೊಂಡಿದ್ದ. ಹಾಗಾಗಿ ಅವರಿಬ್ಬರ ಸಂಪಾದನೆಯಿಂದ ಸಾಮಾನ್ಯಮಟ್ಟದ ಜೀವನಕ್ಕೆ ತೊಂದರೆ ಇರಲಿಲ್ಲ. ಚೆನ್ನನನ್ನು ಜತೆಯಲ್ಲಿ ಇಟ್ಟುಕೊಂಡರೆ ನನ್ನ ಜೇನು ಸಾಕಾಣಿಕಾ ಕೆಲಸಕ್ಕೆ ಸಹಾಯವಾದೀತೆಂದು ಅವನನ್ನು ಹುಡುಕುತ್ತಾ ಸಂಪಳ್ಳಿಗೆ ಹೊರಡಲನುವಾದೆ. ಬೆಳಿಗ್ಗೆ ಮುಂಚೆ ಹೋದರೆ ಮಾತ್ರ ಅವನು ಮನೆಯಲ್ಲಿ ಸಿಕ್ಕುತ್ತಾನೆ, ಇಲ್ಲದಿದ್ದರೆ ಆತ ಮತ್ತೆ ಸಿಗುವುದು ಸಾಯಂಕಾಲವೇ, ಹಾಗಾಗಿ ಬೇಗನೆ ಹೊರಟೆ.
Comments
ಉ: ಒಂದು ಜೇನಿನ ಹಿಂದೆ-1
ಉ: ಒಂದು ಜೇನಿನ ಹಿಂದೆ-1
ಉ: ಒಂದು ಜೇನಿನ ಹಿಂದೆ-1
ಉ: ಒಂದು ಜೇನಿನ ಹಿಂದೆ-1