ಒಂದು ಜೇನಿನ ಹಿಂದೆ-3

ಒಂದು ಜೇನಿನ ಹಿಂದೆ-3


 


ದಾರದ ದಾರಿ


 ಮನೆಗೆ ಹೋಗುವ ದಾರಿಯಲ್ಲಿ ಹುಳವೊಂದು ಬಿಕ್ಕೆಗಿಡದ ಸುತ್ತಲೂ ರೊಂಯ್ಯನೆ ಸದ್ದು ಮಾಡುತ್ತಾ ಸುತ್ತುತ್ತಿತ್ತು. ಜೇನು ಇರಬಹುದಾ ಎಂದು ಪರಿಶೀಲಿಸಿದೆ. ಅಲ್ಲ ಎನ್ನಲು ನನ್ನ ಬಳಿ ಯಾವ ಕಾರಣವೂ ಇರಲಿಲ್ಲ. ಹುಡುಕಿದ ಬಳ್ಳಿ ಕಾಲಿಗೇ ತೊಡರಿದಂತಾಯಿತಲ್ಲಾ, ಪ್ರಶಾಂತನ ಜೇನುಗೂಡು ಪತ್ತೆಮಾಡುವ ವಿಧಾನವನ್ನು ಅನುಷ್ಠಾನಗೊಳಿಸಲು ಇಷ್ಟು ಬೇಗನೆ ಅವಕಾಶ ಸಿಕ್ಕಿತಲ್ಲ ಎಂದು ಸಂತೊಷದಿಂದ ದಾರಕ್ಕಾಗಿ ಹುಡುಕಾಡಿದೆ. ಅಲ್ಲೆಲ್ಲಿ ದಾರ?, ಮನೆಗೆ ಹೋಗಿ ದಾರ ತರೋಣವೆಂದರೆ ಅಷ್ಟರಲ್ಲಿ ಹುಳ ಹಾರಿ ಹೋದರೆ ಅನ್ನುವ ಭಯ, ಏನು ಮಾಡಲಿ ಎಂದು ಆಲೋಚಿಸುತ್ತಿರುವಾಗ ಮಿಂಚಿನಂತೆ ಉಪಾಯವೊಂದು ಹೊಳೆಯಿತು. ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲಾ ಸುತ್ತಿದ ಗಾದೆ ಮಾತು ನೆನಪಾಯಿತು. ಉಟ್ಟ ಲುಂಗಿಯ ತುದಿಯಿಂದ ದಾರದ ತುಂಡೊಂದನ್ನು ಎಳೆದೆ. ಮೂರ‍್ನಾಲ್ಕು ಪ್ರಯತ್ನಗಳು ವಿಫಲವಾದ ನಂತರ ಗೇಣುದ್ದದ ದಾರ ಕೈಗೆ ಬಂತು. ಆಗ ಜೇನು ಬಿಕ್ಕೆಹೂವಿನ ಮೇಲೆ ಕುಳಿತಿತ್ತು. ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದ್ದರಿಂದ ರಾಣಿ ಹುಳುವೇ ಇರಬಹುದು ಎಂದು ಅನಿಸಿತಾದರೂ, ರಾಣಿಹುಳು ಮಕರಂದಕ್ಕಾಗಲೀ ಆಹಾರ ಸಂಗ್ರಹಣೆಗಾಗಲೀ ಹೊರಗಡೆ ಹೋಗುವುದಿಲ್ಲ ಎಂಬುದು ನೆನಪಾಯಿತು. ಬಹುಶಃ ಸ್ವಲ್ಪ ದೊಡ್ಡ ಗಾತ್ರದ ಜೇನಿನ ಹುಳವಾಗಿರಬಹುದೆಂದು ನಿಧಾನ ಹಿಡಿಯಲು ಕೈಚಾಚಿದೆ. ಅದು ನನಗಿಂತ ಬಲು ಸೂಕ್ಷ್ಮ. ನನ್ನ ಯೋಜನೆ ಅದಕ್ಕೆ ಹೊಳೆದಿರಬೇಕು, ರೊಂಯ್ಯನೆ ಮತ್ತೊಂದು ಬಿಕ್ಕೆ ಗಿಡದಮೇಲೆ ಹೋಗಿ ಕುಳಿತುಕೊಂಡಿತು. ಹೀಗೆ ನಾಲ್ಕೈದುಬಾರಿ ಪ್ರಯತ್ನಮಾಡಿ ಇದು ನನ್ನ ಕೈಯಲ್ಲಿ ಆಗದ ಕೆಲಸ ಎಂದು ಹೊರಡಲನುವಾದೆ. ಆದರೆ ಕೈಗೆ ಸಿಕ್ಕ ಅವಕಾಶವನ್ನು ದೂರಮಾಡಿ ಹೋಗಲು ಮನಸ್ಸಾಗದೆ ಪ್ರಯತ್ನ ಮುಂದುವರೆಸಿದೆ. ಚಿಟ್ಟೆ ಹಿಡಿಯುವ ಕೈಹಿಡಿಕೆಯುಳ್ಳ ಬಲೆ ಇದ್ದಿದ್ದರೆ ಎಂಬ ಆಲೋಚನೆ ಬಂತು, ಆ ಆಲೋಚನೆ ಬಂದದ್ದೆ, ಅರೆ ಹೌದು ಬಲೆ ಇಲ್ಲದಿದ್ದರೆ ಏನಾಯಿತು ಅದೇ ತರಹದ ಬಟ್ಟೆ ಇದೆಯೆಲ್ಲಾ ಎಂದು ಉಟ್ಟ ಲುಂಗಿ ಬಿಚ್ಚಿ ಜೇನುಹುಳದ ಮೇಲೆ ಎಸೆದೆ. ನನ್ನ ಈ ಹೊಸ ಯೋಜನೆ ಮೊದಲನೆಯ ಬಾರಿಯೇ ಯಶಸ್ಸು ಕಂಡಿತು. ಲುಂಗಿಯೊಳಗೆ ಸಿಕ್ಕಿಕೊಂಡ ಹುಳ ಹಾರಲಾಗದೆ ಅಲ್ಲಿಯೇ ಸದ್ದು ಮಾಡತೊಡಗಿತು. ಬಿಕ್ಕೆಗಿಡದ ಮೇಲಿದ್ದ ಲುಂಗಿಯ ಅಡಿಯಿಂದ ಕೈಯನ್ನು ಹಾಕಿ ಹುಳ ಹಿಡಿದುಕೊಂಡು ಬಹಳ ಎಚ್ಚರಿಕೆಯಿಂದ ದಾರ ಕಟ್ಟಿ ಹಾರಲು ಬಿಟ್ಟೆ. ಒಂದೆರಡು ಬಾರಿ ದಾರದೊಂದಿಗೆ ಹಾರಲು ಅದು ಮಿಸುಕಾಡಿದರೂ ಮೂರನೆ ಬಾರಿಗೆ ದಾರದ ಸಮೇತ ಹಾರಲು ಯಶಸ್ವಿಯಾಯಿತು.
 ಪ್ರಶಾಂತನ ಜೇನುಗೂಡು ಪತ್ತೆಮಾಡುವ ನೂತನ ವಿಧಾನ ಇಲ್ಲಿಯವರೆಗೆ ಯಶಸ್ವಿ ಹಾಗು ಸುಲಭವಾಗಿತ್ತು ನಿಜ. ಆದರೆ ಈಗ ದಾರ ಕಟ್ಟಿದ ನಂತರ ಹುಳುವನ್ನು ಬೆನ್ನತ್ತುವುದು ಯಾವ ಜನ್ಮದ ವೈರಿಗಳಿಗೂ ಬೇಡದ ಕೆಲಸವಾಗಿತ್ತು. ಅವುಗಳಿಗಾದರೋ ಗಾಳಿಯಲ್ಲಿ ಅಡ್ಡಿ ಆತಂಕಗಳಿಲ್ಲದ ರಹದಾರಿ, ಅದನ್ನು ಹಿಂಬಾಲಿಸುವ ನಮಗೆ ಕಲ್ಲು ಮುಳ್ಳುಗಳ ದಾರಿ.
ಆದರೆ ಯಾವ ಕಾರಣಕ್ಕೂ ಕೈಬಿಡುವಂತಿರಲಿಲ್ಲ. ಕಲ್ಲುಮುಳ್ಳುಗಳನ್ನು ಲೆಕ್ಕಿಸದೆ ಹುಳುವಿಗೆ ಕಟ್ಟಿದ್ದ ದಾರವನ್ನು  ನೊಡುತ್ತಾ, ಕೈಕಾಲುಗಳಲ್ಲಿ ಮುಳ್ಳು ಕೊರೆದು ರಕ್ತ ಸುರಿಯುತ್ತಿದ್ದರೂ ಗಮನಿಸದೆ ಓಡಿದೆ. ಒಮ್ಮೆ ಗುಡ್ಡದ ಕಡೆ ಮತ್ತೊಮ್ಮೆ ಕಾಡಿನಕಡೆ ಮಗದೊಮ್ಮೆ ನಮ್ಮಮನೆಯ ರಸ್ತೆಯಕಡೆ ಹೀಗೆ ಅದು ಹಾರುತ್ತಿತ್ತು. ವಿಚಿತ್ರವೆಂದರೆ ಆ ಹುಳು ನಾನು ಅದರ ಗೂಡನ್ನು ಪತ್ತೆಮಾಡುತ್ತಿದ್ದೇನೋ ಅಥವಾ ಅದು ನನ್ನ ಮನೆ ಪತ್ತೆ ಮಾಡುತ್ತಿದೆಯೋ ಎನ್ನುವಂತೆ ನಮ್ಮ ಮನೆಯ ಕಡೆ ಹೋಗುತ್ತಿತ್ತು. ಏನಾದರಾಗಲಿ ಆಮೇಲೆ ನೋಡೋಣ ಎಂದು ಅದರ ಹಿಂದೆಯೇ ಓಡಿದೆ. ಅದು ಸೀದಾ ನಮ್ಮ ಮನೆಯ ಜಗುಲಿಯನ್ನು ಪ್ರವೇಶಿಸಿತು. ಒಮ್ಮೆ ಸಖೇದಾಶ್ಚರ್ಯವಾಯಿತು. ಅರೆ, ಜೇನು ನನಗೆ ತಿಳಿಯದಂತೆ ನಮ್ಮ ಮನೆಯೊಳಗೆ ಸೇರಿಕೊಂಡಿದೆಯಾ?, ಇದೆಂತಹಾ ವಿಚಿತ್ರ ವಿಷಯವಾಯಿತಲ್ಲ ಎಂದು ಒಮ್ಮೆ ಅನಿಸಿತು. ಆದರೆ ಈ ವಿಷಯ ನಗೆಪಾಟಲಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.
 ಜಗುಲಿ ಪ್ರವೇಶಿಸಿದ ಜೇನು ಹುಳುವನ್ನು ಹುಡುಕಾಡಿದೆ. ಮರದ ಪಕಾಸಿಯ ಮೂಲೆಯಲ್ಲಿ  ಒಂದು ಸಣ್ಣ ಮಣ್ಣಿನ ಗೂಡಿನ ಬಾಯಿಂದ ನಾನು ಕಟ್ಟಿದ ಲುಂಗಿಯ ದಾರ ನೇತಾಡುತ್ತಿತ್ತು. ಅಷ್ಟರಲ್ಲಿ ಅಮ್ಮ ಒಳಗಡೆಯಿಂದ ಬಂದು ಎನೋ ಅದು? ಅಂದಳು. ಜೇನುಹುಳಕ್ಕೆ ದಾರ ಕಟ್ಟಿ ಫಾಲೋ ಮಾಡಿದ ಕಥೆ ಹೇಳಿದೆ. ಅಯ್ಯೋ ಹುಚ್ಚು ಮುಂಡೆಗಂಡ ಅದು ಜೇನಲ್ಲ ಗುಬ್ಬಿನೊಣ, ಅದು ಮಣ್ಣಿನಗೂಡು ಕಟ್ಟಿ ಮನೆಯನ್ನೆಲ್ಲಾ ರಾಡಿ ಮಾಡುತ್ತದೆ ಎಂದು ಹೇಳಿ ಹಿಡಿಯಿಂದ ಅದನ್ನು ಕಿತ್ತೆಸೆದಳು. ಜೇನು ಹಿಡಿಯುವ ಪ್ರಯತ್ನದಲ್ಲಿ ಪ್ರಥಮ ಚುಂಬನಂ ದಂತಭಗ್ನಂ ಕಥೆ ನನ್ನದಾದರೂ ಈ ಘಟನೆಯಿಂದ ಜೇನಿನ ಹುಚ್ಚು ಇನ್ನಷ್ಟು ಹೆಚ್ಚಿತೇ ಹೊರತು ಕಡಿಮೆಯಾಗಲಿಲ್ಲ.
 ಆದರೆ ಈ ಘಟನೆ ಮತ್ತೊಂದು ಸಣ್ಣ ನಗೆ ಪ್ರಸಂಗಕ್ಕೆ ಕಾರಣವಾಯಿತು. ನಾನು ಬಿಕ್ಕೆ ಗಿಡದ ಮೇಲೆ ಕುಳಿತ ಜೇನುಹುಳ ಹಿಡಿಯುವ ಗುಂಗಿನಲ್ಲಿ ಉಟ್ಟ ಲುಂಗಿ ಬಿಚ್ಚಿ ಗಿಡದ ಮೇಲೆ ಹಾಕುತ್ತಿದ್ದ ಕೆಲಸ ದೂರದ ರಸ್ತೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದವರಿಗೆ ವಿಚಿತ್ರವಾಗಿ ತೋರಿ ಅಲ್ಲಿ ಕೆಲ ಸಮಯ ಚರ್ಚಾವಿಷಯವಾಯಿತಂತೆ, ಯಾರು ಅದು? ಯಾಕೆ ಲುಂಗಿ ಬಿಚ್ಚಿ ಕುಣಿಯುತ್ತಿದ್ದಾರೆ ಎಂದು ಅರ್ಥವಾಗದೆ ಹಲವಾರು ಊಹಾಪೋಹಗಳಿಗೆ ಕಾರಣವಾಯಿತೆಂದು ನನಗೆ ಸಂಜೆ ಅಂಗಡಿ ಕಡೆಗೆ ಹೋದಾಗ ತಿಳಿಯಿತು. ಆದರೆ ಹಾಗೆ ಕುಣಿದವನು ನಾನೇ ಎಂದು ಹೇಳದೆ ಸುಮ್ಮನುಳಿದೆ.
* * * * *
ಪಟಾಕಿ......!


 ಜೇನಿನಲ್ಲಿ ಅತ್ಯಂತ ಅಪಾಯಕಾರಿ ಹಾಗು ಮನುಷ್ಯರಿಗೆ ಪೆಟ್ಟಿಗೆಯೊಳಗೆ ಸಾಕಲು ಆಗದ ಜೇನೆಂದರೆ ಹೆಜ್ಜೇನು. ಸಾಮಾನ್ಯ ಮನುಷ್ಯನ ಹೆಬ್ಬೆಟ್ಟು ಗಾತ್ರದಷ್ಟಿರುವ ಹೆಜ್ಜೇನುಹುಳುಗಳು ಜೇನಿನಲ್ಲಿಯೇ ಅತ್ಯಂತ ಬಲಿಷ್ಟ ಜಾತಿ. ಮಲೆನಾಡು, ಬಯಲುಸೀಮೆ ಎಂಬ ಭೇದಭಾವವಿಲ್ಲದೆ ವಾಸಿಸುವ ಹೆಜ್ಜೇನು ಕಡಿದು ಪ್ರಾಣ ಕಳೆದುಕೊಂಡವರೂ ಹಲವರಿದ್ದಾರೆ. ಮನುಷ್ಯನನ್ನು ಹೊರತುಪಡಿಸಿದರೆ ಕರಡಿ ಹಾಗು ಗಿಡುಗ ಹೆಜ್ಜೇನಿನ ಶತ್ರುಗಳು. ಕರಡಿ ಹಾಗು ಗಿಡುಗ ಹೆಜ್ಜೇನು ಗೂಡಿಗೆ ಧಾಳಿ ಮಾಡಿದಾಗಲೆಲ್ಲಾ ಅವು ಮನುಷ್ಯನ ಮೇಲೆ ತಮ್ಮ ಸೇಡು ತೀರಿಸಿಕೊಳ್ಳುತ್ತವೆ. ಗಿಡುಗ ಹೆಜ್ಜೇನುಗೂಡನ್ನು ಒದ್ದು ಹಾರಿಹೋದ ಸಮಯದಲ್ಲಿ ಅಲ್ಲಿ ಮನುಷ್ಯರು ಹೋದರೆ ಅಟ್ಟಿಸಿಕೊಂಡು ಬರುತ್ತವೆ. ಎರಡು ಕಿಲೋಮೀಟರ್ ದೂರದವರೆಗೂ ಅಟ್ಟಿಸಿಕೊಂಡು ಧಾಳಿ ಮಾಡಿದ ದಾಖಲೆಗಳಿವೆ. ಅವುಗಳು ಎಷ್ಟರಮಟ್ಟಿಗೆ ಸಿಟ್ಟಾಗುತ್ತವೆ ಎಂದರೆ ನೀರೊಳಗೆ ಮುಳುಗಿದರೂ ಬಿಡುವುದಿಲ್ಲ. ನೀರಿನಿಂದ ಉಸಿರಾಡಲು ತಲೆ ಹೊರಹಾಕಿದಾಗ ಅಲ್ಲೇ ಸುತ್ತುವರೆಯುತ್ತಲಿರುವ ಜೇನು ಮತ್ತೆ ಹೊಡೆಯುತ್ತವೆ. ಹೆಜ್ಜೇನು ಧಾಳಿಯಿಂದ ಬದುಕುಳಿಯಲು ಇರುವ ಏಕೈಕ ಮಾರ್ಗೋಪಾಯವೆಂದರೆ ಕಂಬಳಿ ಮುಚ್ಚಿ ಕುಳಿತುಕೊಳ್ಳುವುದು. ಕಂಬಳಿ ಮುಚ್ಚಿಕುಳಿತಾಗ ಅವು ಧಾಳಿಯನ್ನೇನೂ ನಿಲ್ಲಿಸುವುದಿಲ್ಲ ಆದರೆ ಕಂಬಳಿಯನ್ನು ಅವು ಮನುಷ್ಯರೆಂದು ತಿಳಿದುಕೊಂಡು ಅಂಬನ್ನು ಕಂಬಳಿಗೆ ಚುಚ್ಚುತ್ತವೆ. ಅಂಬು(ಜೇನು ಹುಳದ ಹಿಂಭಾಗದಲ್ಲಿರುವ ಚಿಕ್ಕದಾಗಿರುವ ವಿಷದ ಬಾಣ) ಕಂಬಳಿಯನ್ನು ದಾಟಿ ಮನುಷ್ಯರಿಗೆ ಚುಚ್ಚುವುದಿಲ್ಲವಾದ್ದರಿಂದ ಬದುಕುಳಿಯಬಹುದು. ಹಾಗಾಗಿ ಅದೊಂದೇ ಪರಿಹಾರ ಮಾರ್ಗ. ಬಹಳ ಜನರಲ್ಲಿ ಜೇನು ಕಡಿಯುತ್ತದೆ ಎಂಬ ತಪ್ಪು ಅಭಿಪ್ರಾಯವಿದೆ. ಆದರೆ ಜೇನು ಕಚ್ಚುವುದಿಲ್ಲ. ಅದರ ಹಿಂಭಾಗದಲ್ಲಿ ಚಿಕ್ಕದಾದ ಮುಳ್ಳಿರುತ್ತದೆ. ಅದನ್ನು ಜೇನುಹುಳು ನಮ್ಮ ಚರ್ಮಕ್ಕೆ ಚುಚ್ಚುತ್ತದೆ. ಹಾಗಾಗಿ ಜೇನುಹುಳ ದೂರದಿಂದ ಮಾತ್ರ ಗುರಿ ನಿರ್ಧರಿಸಿ ಧಾಳಿಮಾಡಬಲ್ಲದು. ಕೈಯಲ್ಲಿ ಹುಳವನ್ನು ಹಿಡಿದುಕೊಂಡುಬಿಟ್ಟರೆ ಅದಕ್ಕೆ ಗುರಿ ನಿರ್ಧರಿಸಲು ಸಾಧ್ಯವಾಗದಿರುವುದರಿಂದ, ರಭಸದಿಂದ ಚುಚ್ಚಲು ಬರುವುದಿಲ್ಲ. ಹಾಗಾಗಿ ಜೇನುಕಡಿಯಿತು ಅನ್ನುವುದಕ್ಕಿಂತಲೂ ಜೇನು ಹೊಡೆಯಿತು ಎನ್ನುವುದೇ ಸರಿಯಾದ ಅರ್ಥ. ದುರಂತವೆಂದರೆ ಅಂಬನ್ನು ಚರ್ಮಕ್ಕೆ ನಾಟಿಸಿದ ಜೇನು ಸ್ವಲ್ಪ ಹೊತ್ತಿನಲ್ಲಿ ಗಿರಕಿ ಹೊಡೆದು ಸಾವನ್ನಪುತ್ತದೆ.
 ಹೆಜ್ಜೇನು ಸಾಮಾನ್ಯವಾಗಿ ಹಳ್ಳಿಗಳಲ್ಲಿ ದೊಡ್ಡ ಮರದ ಗಟ್ಟಿ ಕೊಂಬೆಗೆ ಹಾಗು ಪಟ್ಟಣಗಳಲ್ಲಿ ಬಹುಮಹಡಿ ಕಟ್ಟಡಕ್ಕೆ ಅಥವಾ ದೊಡ್ಡ ನೀರಿನ ಟ್ಯಾಂಕಿಗೆ ತತ್ತಿಯನ್ನು ಕಟ್ಟಿಕೊಳ್ಳುತ್ತವೆ. ಒಂದೇ ತತ್ತಿಗೆ ಜೋತುಬೀಳುವ ಹೆಜ್ಜೇನು ಲಕ್ಷಾಂತರ ಹುಳುಗಳ ತಂಡ ಹೊಂದಿದ್ದರೂ ಏಕನಾಯಕತ್ವದ ನಿಯಮದಡಿಯಲ್ಲಿ ಒಂದೇ ರಾಣಿಯ ಆಜ್ಞೆಯನ್ನು ಪಾಲಿಸುತ್ತವೆ. ಕೆಲವು ಸಾಲು ಮರಗಳಲ್ಲಿ ಇಪ್ಪತ್ತು ಇಪ್ಪತ್ತೈದು ಹೆಜ್ಜೇನುಗೂಡು ಕಟ್ಟಿಕೊಂಡಿರುವುದನ್ನು ಕಾಣಬಹುದು. ಅವಷ್ಟೂ ಬೇರೆ ಬೇರೆ ಕುಟುಂಬಕ್ಕೆ ಸೇರಿದವುಗಳಾಗಿರುತ್ತವೆ. ತಮ್ಮ ಗೂಡನ್ನು ಹೊರತುಪಡಿಸಿ ಅಪ್ಪಿತಪ್ಪಿಯೂ ಅಕ್ಕಪಕ್ಕದ ಜೇನುಗೂಡಿಗೆ ಹುಳುಗಳು ಹೋಗುವುದಿಲ್ಲ. ಅಕಸ್ಮಾತ್ ಹೋದರೂ ಆ ಹುಳವನ್ನು ಮತ್ತೊಂದು ಗೂಡಿನ ಹುಳುಗಳು ಕಚ್ಚಿ ಸಾಯಿಸಿಬಿಡುತ್ತವೆ. ಅವು ತಮ್ಮ ಗುಂಪನ್ನು ಗುರುತಿಸಲು ರಾಣಿಹುಳು ಸ್ರವಿಸುವ ಪ್ಯಾರಾಮೂನ್ ಎಂಬ ದ್ರವವನ್ನು ಆಶ್ರಯಿಸುತ್ತವೆ. ಒಂದು ರಾಣಿಯ ಪ್ಯಾರಾಮೂನ್‌ದ್ರವದ ಅಡಿಯಲ್ಲಿ ಬಂದ ಹುಳು ಬೇರೆ ರಾಣಿಯ ಗುಂಪಿಗೆ ಹೋದಾಗ ಗುರುತಿಸುವುದು ಈ ವಾಸನೆಯಿಂದಲೇ. ಈ ಕ್ರಮವನ್ನು ಅವು ಹಿಸ್ಸೆಯಾಗುವವರೆಗೂ ಪಾಲಿಸುತ್ತವೆ. ತುಡುವೆಜೇನು ಹಾಗು ಕೋಲ್ಜೇನು ಇದೇ ಕ್ರಮವನ್ನು ಅನುಸರಿಸುತ್ತವೆ. ನಿಸರಿಜೇನು ಮಾತ್ರ ರಾಣಿಯನ್ನು ಹೊಂದಿರದೆ ಇದಕ್ಕೆ ಹೊರತಾಗಿದೆ. ಹೆಜ್ಜೇನು ಆಹಾರದ ಸಂಗ್ರಹಣೆಗಾಗಿ ೪-೫ ಕಿಲೋಮೀಟರ್ ದೂರದವರೆಗೂ ಹೋಗುವ ಸಾಮರ್ಥ್ಯವನ್ನು ಹೊಂದಿವೆ. ತನ್ನ ಗೂಡಿನ ಹತ್ತಿರದಲ್ಲಿ ನೀರು ಇದ್ದರೂ ಅವು ದೂರದಿಂದಲೇ ನೀರು ಸಂಗ್ರಹಿಸುತ್ತವೆ.
 ಸಾಮಾನ್ಯವಾಗಿ ಸರಿಯಾಗಿ ಅಭಿವೃದ್ದಿಯಾದ ಹೆಜ್ಜೇನನ್ನು ಕಿತ್ತಾಗ ಇಪ್ಪತ್ತು ಕೆ.ಜಿ ತುಪ್ಪ ಸಿಗುತ್ತದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಹಜ ಕಾಡಿನಲ್ಲಿ ಹೆಜ್ಜೇನು ಹೇರಳವಾಗಿದೆ.  ಹೆಜ್ಜೇನಿನ ತುಪ್ಪ ಸಂಗ್ರಹಿಸಲು ಸರ್ಕಾರ ಅರಣ್ಯಇಲಾಖೆಯ ಮೂಲಕ ಹರಾಜು ಹಾಕುತ್ತದೆ. ಅಲ್ಲಿಯ ಸಿದ್ದಿಜನಾಂಗ ಹೆಜ್ಜೇನು ಕೀಳುವುದರಲ್ಲಿ ಸಿದ್ದಹಸ್ತರು. ಹೆಜ್ಜೇನು ಗೂಡು ಕಟ್ಟಿರುವ ಮರದ ಕೆಳಗೆ ದಟ್ಟವಾದ ಹೊಗೆ ಹಾಕಿ ಅದು ಕಾರ್ಮೋಡದಂತೆ ಒಮ್ಮೆಲೆ ಜೇನುಗೂಡನ್ನು ಮುಚ್ಚುವಂತೆ ಮಾಡುತ್ತಾರೆ. ಈ ತರಹದ ಅನಿರೀಕ್ಷಿತ ಹೊಗೆಯಿಂದ ಅಷ್ಟೂ ಜೇನುಹುಳುಗಳು ಒಂದು ಸಾರಿ ತತ್ತಿಯನ್ನು ಬಿಟ್ಟು ಮೇಲೆ ಹಾರುತ್ತವೆ. ಹಾರಿದ ಜೇನುಹುಳುಗಳು ಮತ್ತೆ ತತ್ತಿಯ ಸಮೀಪ ವಾಪಾಸು ಬರುವುದರೊಳಗೆ ಮರವನ್ನು ಏರಿ ಅಥವಾ ಮೊದಲೇ ಏರಿ ಕುಳಿತುಕೊಂಡು  ತತ್ತಿಯನ್ನು ಕೊಯ್ದು ಹಗ್ಗದ ಮೂಲಕ ಕೆಳಗಿಳಿಸುತ್ತಾರೆ. ಈ ರೀತಿ ಒಂದು ಹೆಜ್ಜೇನು ಕೀಳುವುದರಿಂದ ಕನಿಷ್ಟ ಒಂದು ಸಾವಿರ ರೂಪಾಯಿಯಿಂದ ಎರಡು ಸಾವಿರ ರೂಪಾಯಿ ಆದಾಯ ಗಳಿಸಬಹುದು.
 ಪುಸ್ತಕದಲ್ಲಿ ಆದಾಯದ ಹಾಗೂ ಲಾಭದ ವಿಚಾರ ಬಂದಾಗಲೆಲ್ಲಾ ಎಲ್ಲರ ಆಸೆಯೂ ಚಿಗುರುತ್ತದೆ. ಆದರೆ ವಾಸ್ತವದ ಕಥೆ ಅಷ್ಟು ಸುಲಭವಲ್ಲ. ಹೆಜ್ಜೇನಿನ ಗೂಡಿನ ತತ್ತಿಯಿಂದ ಜೇನುತುಪ್ಪ ಸಂಗ್ರಹಿಸುವುದು ಅತ್ಯಂತ ಧೈರ್ಯ, ಸಾಹಸಗಳನ್ನು ಬೇಡುವ ಕೆಲಸ. ಇದಕ್ಕೆ ನುರಿತ ಕೆಲಸಗಾರರೇ ಆಗಿರಬೇಕು. ಮೂರ್ನಾಲ್ಕು ನಿಮಿಷಗಳಲ್ಲಿ ಈ ಕಾರ್ಯಾಚರಣೆ ಮುಗಿಯಬೇಕು. ನಿಗದಿತ ಸಮಯದಲ್ಲಿ ಕೆಳಗಡೆಯಿಂದ ಬರುವ ಹೊಗೆ ಕಡಿಮೆಯಾಗಿ ಅಥವಾ ತತ್ತಿ ಕೊಯ್ಯಲಾಗದಿದ್ದರೆ ಮರಹತ್ತಿದವನ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲರೂ ಈ ಕೆಲಸದಲ್ಲಿ ಪಾಲ್ಗೊಳ್ಳುವುದು ಆಗದ ಮಾತು. ಈ ಪ್ರಕ್ರಿಯೆ ಓದಲು ಅಥವಾ ಮತ್ಯಾರ ಬಳಿಯೋ ಕಥೆ ಕೇಳಲು ಸ್ವಾರಸ್ಯಕರವಾಗಿರುತ್ತದೆ. ಆದರೆ ವಾಸ್ತವ ಮಾತ್ರ ಅತ್ಯಂತ ಕಷ್ಟಕರ ಮತ್ತು ಅಪಾಯಕಾರಿ. ಪ್ರತೀಬಾರಿಯೂ ಹೊಸಹೊಸ ಸಮಸ್ಯೆಗಳು ಎದುರಾಗುತ್ತವಾದ್ದರಿಂದ ಹೆಜ್ಜೇನಿನ ವಿಷಯದಲ್ಲಿ ಪರಿಣಿತರ ಸಹಾಯದಿಂದ ಮುನ್ನುಗ್ಗುವುದೊಳಿತು. ಒಮ್ಮೆ ಹಾಗೆಯೇ ಆಯಿತು.
 ನಮ್ಮ ಪಕ್ಕದ ಊರಾದ ಇಡುವಾಣಿಯಲ್ಲಿ ಪಟಾಕಿನಾರಾಯಣ ಎಂಬೊಬ್ಬನಿದ್ದ. ಪಟಾಕಿ ಎಂದು ಅವನಿಗೆ ಅಡ್ಡ ಹೆಸರು. ಹಾಗಂತ ಅವನು ಪಟಾಕಿಯನ್ನು ತಯಾರಿಸುವುದಾಗಲಿ, ವ್ಯಾಪಾರಮಾಡುವುದಾಗಲಿ ಮಾಡುತ್ತಾನೆಂದು ತಿಳಿಯುವುದು ತಪ್ಪು. ಪ್ರಪಂಚದ ಯಾವುದೇ ವಿಷಯವಾದರೂ ಅವನು ತನಗೆ ಗೊತ್ತು ಎನ್ನುತ್ತಿದ್ದರಿಂದ ಅವನಿಗೆ ಪಟಾಕಿನಾರಾಯಣ ಎನ್ನುತ್ತಿದರು. ಪಟಾಕಿ ಎಂಬ ಶಬ್ದವನ್ನು ಆತನೂ ಸಂಪೂರ್ಣ ಒಪ್ಪಿಕೊಂಡು ನಾರಾಯಣ ಹೆಸರನ್ನು ಸೇರಿಸದೆ ಕೇವಲ ಪಟಾಕಿ ಎಂದು ಕರೆದರೂ ಓ ಎನ್ನುತ್ತಿದ್ದ.
 ಮಾರ್ಚ್ ತಿಂಗಳ ಒಂದು ದಿನ ಬೆಳಿಗ್ಗೆ ನಾವೆಲ್ಲಾ ಕುಮುಟಾಭಟ್ಟರ ಅಂಗಡಿಯಲ್ಲಿ ಮಾತನಾಡುತ್ತಾ ಕುಳಿತಿದ್ದೆವು. ಮನಮನೆಯ ಕಡೆಯಿಂದ ತಲ್ವಾಟದ ರಸ್ತೆಯ ಮೂಲಕ ನಡೆದುಕೊಂಡು ಬಂದ ಕಾಶಿ ರಾಮಕೃಷ್ಣ ತಲ್ವಾಟದ ರಮಾನಂದ ಹೆಗಡೆಯವರ ಮನೆ ಬಳಿ   ಹೆಜ್ಜೇನು ಗೂಡಿಗೆ ಗಿಡುಗ ಒದ್ದಿದ್ದು ಹಾಗು ಅದು ರಸ್ತೆಯಲ್ಲಿ ಓಡಾಡುವ ಶಾಲೆ ಮಕ್ಕಳಿಗೆ ಹೊಡೆದ ಸುದ್ದಿಯನ್ನು ಭಯದಿಂದ  ಹೇಳಿದ. ಅಲ್ಲಿ ನಮ್ಮ ಪಟಾಕಿ ನಾರಾಯಣನೂ ಇದ್ದ. ಅಲ್ಲಿದ್ದವರೆಲ್ಲ ಏನು ಮಾಡುವುದು ಎಂದು ಯೋಚಿಸುವಷ್ಟರಲ್ಲಿ ನಾರಾಯಣ,
     ಅಯ್ಯೋ ದೇವ್ರೆ ಅದಕ್ಕೆಂತ ಅಷ್ಟು ಹೆದರ‍್ತ್ರಿ, ನಾನು ಇಂಥಾ ಸಾವ್ರ ಜೇನ್ ಕಂಡಿದೆ, ಮೆಣ್ಸಿನ ಗೂಜಿಗೆ ಬೆಂಕಿ ಹಾಕಿ ಬುಡ್ದಲ್ಲಿಟ್ರೆ ಎಲ್ಲಾ ಜೇನು ಪರಾರಿ ಅಗ್ತೋ, ಕಾಣಿನಿ ಬೇಕಾರೆ ಎಂದ.
     ಹಾಗಾದ್ರೆ ಅದೊಂದು ಹೊಗೆ ಹಾಕಿ ಉಪಕಾರ ಮಾಡು ಮಾರಾಯ, ಜೇನಿನ ಹತ್ರ ಹೋಗೋದಕ್ಕೆ ಎಲ್ಲಾ ಹೆದ್ರಿ ಸಾಯ್ತಾ ಇದಾರೆ ಕಾಶಿ ರಾಮಕೃಷ್ಣ ಹೇಳಿದ.
 ಈಗ ನಾರಾಯಣನಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಹೆಜ್ಜೇನಿನ ಹಿಂದೂ ಮುಂದೂ ಗೊತ್ತಿಲ್ಲದೆ ಯಾರೋ ಹೊಗೆ ಹಾಕಿದರೆ ಹಾರಿಹೋಗುತ್ತವೆ ಎಂದಿದ್ದನ್ನು ಕೇಳಿ ಇಲ್ಲಿ ಎಲ್ಲರೆದುರು ಕೊಚ್ಚಿಕೊಂಡಿದ್ದ. ಪರಿಸ್ಥಿತಿ ಅವನ ಕಾಲಬುಡಕ್ಕೆ ತಗುಲುವ ಹಾಗಿತ್ತು.
     ನಂಗೆ ಒಂಚೂರು ಮನಮನೆಗೆ ಹೊಯ್ಕು ಇಲ್ದಿದ್ರೆ ನಾನೇ ಓಡಿಸ್ತಿದ್ದೆ, ಅದ್ಯಾವ ಮಹಾ ಕೆಲಸ ಎಂದ ನಾರಾಯಣ. ಅಷ್ಟರಲ್ಲಿ ಚೆನ್ನ ಅದೆಲ್ಲಿದ್ದನೋ ಬಂದು ಅಯ್ಯ ನಾರಾಯಣ ಶೆಟ್ರಿಗೆ ಇದ್ಯಾವ ಮಹಾ, ಅವ್ರು ಖಂಡಿತಾ ಹೆಜ್ಜೇನು ಓಡಿಸ್ತಾರಪ್ಪ, ಮನಮನೆಗೆ ಹೋಗೋ ಕೆಲಸಕ್ಕೆ ಇಲ್ಲೆ ಯವಸ್ಥೆ ಮಾಡಿದ್ರಾತು ಎಂದ ಬಲಗೈ ಮುಷ್ಠಿಕಟ್ಟಿ ಹೆಬ್ಬೆರಳನ್ನು ಮೇಲ್ಮುಖ ಮಾಡಿ ಪಟಾಕಿ ನಾರಾಯಣ ಕಂತ್ರಿ ಸರಾಯಿಕುಡಿಯುವ ಪರಿಯನ್ನು ಅಣಕಿಸಿ ತೋರಿಸುತ್ತಾ. ಅಲ್ಲದೇ,  ಮನಮನೆಗೆ ಹೋಗೋದಾದ್ರೂ ಅದೇ ರಸ್ತೆ ಸೈಯಲ, ದಾರೀಲಿ ಹೆಜ್ಜೇನು ಓಡ್ಸಿ ಹೋಕ್ತಾರಪ ಎಂದು ನಾರಾಯಣನಿಗೆ ಗಾಳಿಹಾಕತೊಡಗಿದ. ನಾರಾಯಣನಿಗೆ ಈಗ ಅನಿವಾರ್ಯವಾಯಿತು.
 ಕುಮುಟಾ ಭಟ್ಟರ ಅಂಗಡಿಕಟ್ಟೆಯಲ್ಲಿದ್ದ ಎಲ್ಲರೂ ನನ್ನ ವ್ಯಾನ್ ಹತ್ತಿಕೊಂಡು ತಲ್ವಾಟದತ್ತ ಹೊರಟಾಯಿತು. ಪಟಾಕಿನಾರಾಯಣ ಚೆನ್ನನ ಗಾಳಿ ಮಾತಿನಿಂದ ಸಿಕ್ಕಾಪಟ್ಟೆ  ಉಬ್ಬಿಹೋಗಿದ್ದ. ನನಗೆ ಹೆಜ್ಜೇನು ಕೀಳುವ ಈ ಸಾಹಸ ಏನಾದರೂ ಭಾನಗಡಿಯಾದೀತೆಂಬ ಭಯದಲ್ಲಿ,
     ಪಟಾಕಿ, ನಿಂಗೆ ಸರಿ ಗೊತ್ತಿದ್ರೆ ಕೆಲ್ಸ ಮಾಡು ಇಲ್ದಿದ್ರೆ ಬ್ಯಾಡ ಕೊನೆಗೆ ಒಂದಕ್ಕೆ ಒಂದೂವರೆಯಾದೀತು, ನಮಗೂ ಯಾರಿಗೂ ಹೆಜ್ಜೇನನ್ನು ಓಡ್ಸೋದು ಗೊತ್ತಿಲ್ಲಎಂದೆ. ಆದರೆ, ಪಟಾಕಿನಾರಾಯಣ ನಮ್ಮ ಯಾರ ಮಾತನ್ನೂ ಕೇಳುವ ಹಂತದಲ್ಲಿರಲಿಲ್ಲ. ಚೆನ್ನನ ಬಳಿ ತನ್ನ ಹಳೆ ಸಾಹಸ ಕೊಚ್ಚಿಕೊಳ್ಳುವುದರಲ್ಲಿ ಮುಳುಗಿದ್ದ. ಹೆಜ್ಜೇನು ಧಾಳಿ ಮಾಡುತ್ತಿರುವ ರಮಾನಂದ ಹೆಗಡೆಯವರ ಮನೆಬಳಿ ಎಲ್ಲರೂ ತಲುಪಿದ್ದಾಯಿತು. ಬೆಳಿಗ್ಗೆ ಮುಂಚೆ ಗಿಡುಗ ಒದ್ದಿದ್ದರೂ, ಆಗಲೇ ತುಂಬಾ ಹೊತ್ತಾದ್ದರಿಂದ ನಾವು ಹೋಗುವಷ್ಟರಲ್ಲಿ ಜೇನುಹುಳುಗಳು ಶಾಂತವಾಗಿದ್ದವು. ಅದನ್ನು ತಿಳಿದ ಪಟಾಕಿನಾರಾಯಣನ ವರಸೆ ಇನ್ನಷ್ಟು ಜಾಸ್ತಿಯಾಯಿತು.
     ನನ್ನ ವಾಸ್ನೆ ಅಂದ್ರೆ ಹಂಗ್ ಇತ್ತ ಕಾಣ್ ಚೆನ್ನ, ನನ್ ಹೆಸ್ರ ಕೇಣಿರೆ ಜೇನು ಸುಮ್ನಿರ್ಕು. ನಾನೊಂದ್ಸಾರಿ ಯಲ್ಲಾಪುರ‍್ದ ಕಾನಾಗೆ ಮೂರ್ ತಾಸ್ನೊಳಗೆ ಇಪ್ಪತ್ತೇಳು ಹೆಜ್ಜೇನು ಕೊಯ್ದಿದ್ದೆ. ಫಾರೆಸ್ಟ್ ರೇಂಜ್ರು ಶಭಾಷ್ ಬಡ್ಡಿಮಗನೆ ಅಂದ್ರು, ಪ್ರಶಸ್ತಿ ಕೊಡಸ್ತೆ ಅಂದ್ರು, ನಾನೇ ಬ್ಯಾಡ ಅಂದೆ  ಹೀಗೆ ಓತಪ್ರೋತವಾಗಿ ಪಟಾಕಿ ಉದುರಿಸುತ್ತಿದ್ದ.
 ಚೆನ್ನನಿಗೂ ಅವನ ಕೊರೆತ ಕೇಳಿ ಬೇಸರಬಂದಿರಬೇಕು, ಹೆಜ್ಜೇನು ಹಿಡಿಯದು, ತುಪ್ಪ ತೆಗಿಯದು ಎಲ್ಲಾ ಕೊನಿಗಾತು, ಸದ್ಯ ಈಗ ಈ ಹೆಜ್ಜೇನು ಓಡ್ಸಿ ಅಂದ.
 ರಮಾನಂದ ಹೆಗಡೆಯವರ ಮನೆಗಿಂತ ಅನತಿ ದೂರದಲ್ಲಿ ಹೆಜ್ಜೇನು ಅಪರೂಪದ ಜಾಗದಲ್ಲಿ ತತ್ತಿ ಕಟ್ಟಿತ್ತು. ರಸ್ತೆಯ ಪಕ್ಕದಲ್ಲಿ ನಲವತ್ತು ಅಡಿ ಆಳದ ಕಂದಕ. ಕಂದಕದ ಬುಡದ ಅಡಿಕೆತೋಟದಿಂದ ಬೈನೆ ಮರವೊಂದು ಬೆಳೆದು ನಿಂತಿತ್ತು. ತೋಟದಿಂದ ಮರದ ಎತ್ತರ ಸುಮಾರು ಐವತ್ತು ಅಡಿ, ಆ ಮರದ ಬುಡದಲ್ಲಿಯೇ ತೋಟಕ್ಕೆ ಇಳಿದು ಹೋಗುವ ದಾರಿ ಇತ್ತು. ಇಡೀ ಮರ ಐವತ್ತು ಅಡಿ ಎತ್ತರದಲ್ಲಿದ್ದರೂ ಜೇನುಗೂಡು ಕಟ್ಟಿದ್ದ ಬೈನೆ ಮರದ ಕೊಂಬೆ ರಸ್ತೆಯಿಂದ ಕೇವಲ ಹತ್ತು ಅಡಿ ಎತ್ತರದಲ್ಲಿತ್ತು. ಹಾಗಾಗಿಯೇ ಗಿಡುಗ ಒದ್ದಕೂಡಲೆ ಅವು ದಾರಿಹೋಕರಮೆಲೆ ಧಾಳಿಮಾಡಿದ್ದು. ಅಲ್ಲಿಂದ ನೂರುಅಡಿ ದೂರದಲ್ಲಿ ರಸ್ತೆಯ ಪಕ್ಕದಲ್ಲಿ ಮೂರ್ನಾಲ್ಕು ಮನೆ. ಇಂತಹಾ ಸುಲಭದಲ್ಲಿ ಜೇನಿನ ಧಾಳಿಗೆ ಜನರು ತುತ್ತಾಗುವ ಸಂದರ್ಭವಿರುವುದರಿಂದ ಹೊಗೆಹಾಕಿ ಓಡಿಸುವುದೂ ಕೂಡ ಸ್ವಲ್ಪ ಅಪಾಯಕಾರಿ ಹಾಗು ಕಷ್ಟಕರವಾಗಿತ್ತು. ಅಕಸ್ಮಾತ್ ಜೇನು ಓಡಿಸುವ ಕೆಲಸದಲ್ಲಿ ವ್ಯತ್ಯಾಸವಾದರೆ ಊರಿಗೆಊರೇ ಜೇನು ಧಾಳಿಗೆ ಗುರಿಯಾಗುವ ಸಂಭವ ಇತ್ತು. ಆದರೆ ಪಟಾಕಿನಾರಾಯಣ ಇದ್ಯಾವುದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಹೊಗೆ ಹಾಕುವ ತಯಾರಿಯಲ್ಲಿದ್ದ. ನಮಗೂ ಹೆಜ್ಜೇನನ್ನು ಓಡಿಸುವುದು ಬೇಕಾಗಿತ್ತು. ಆದರೆ ಓಡಿಸುವ ರೀತಿ ನೀತಿಗಳು ತಿಳಿಯದ್ದರಿಂದ ಪಟಾಕಿ ಹೇಳಿದ್ದಕ್ಕೆಲ್ಲಾ ತಲೆ ಆಡಿಸುತ್ತಾ ರಮಾನಂದ ಹೆಗಡೆಯವರ ಮನೆ ಬಾಗಿಲಲ್ಲಿ ವ್ಯಾನ್ ನಿಲ್ಲಿಸಿಕೊಂಡು ನಿಂತೆವು.
 ಪಟಾಕಿ ನಾರಾಯಣ ಉದ್ದನೆಯ ಬಿದಿರು ಕೋಲಿನ ತುದಿಯನ್ನು ಎರಡು ಅಡಿಯಷ್ಟು ಸೀಳಿ ಅದರ ಮಧ್ಯೆ ಗಾರೆ ಕೆಲಸಕ್ಕೆ ಬಳಸುವ ಕಬ್ಬಿಣದ ಬಾಂಡ್ಲಿ ಕಟ್ಟಿದ. ಅದರೊಳಗೆ ಒಣಗಿದ ಅಡಿಕೆಸಿಪ್ಪೆ ಹಾಗು ಕಾಳುಮೆಣಸಿನ ಗೂಜು ತುಂಬಿ ಸ್ವಲ್ಪ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದ. ನಂತರ ಬಾಯಲ್ಲಿ ಉಫ್ ಎಂದು ಬೆಂಕಿ ಆರಿಸಿದ. ಬೆಂಕಿ ಆರಿದ ಕೂಡಲೇ ಗಾಢವಾದ ಹೊಗೆ ಬಾಂಡ್ಲಿಯಿಂದ ಮೇಲೇಳತೊಡಗಿತು.
 ಅಲ್ಲಿಯವರೆಗಿನ ಅವನ ತಯಾರಿ ನೋಡುತ್ತಿದ್ದ ನನಗೆ ಅವನು ಹೇಳಿದ್ದು ತೀರಾ ಸುಳ್ಳಲ್ಲ ಅಂತ ಅನಿಸತೊಡಗಿತು. ಉದ್ದ ಕೋಲಿನ ತುದಿಯನ್ನು ಹಿಡಿದುಕೊಂಡು ಹೆಜ್ಜೇನು  ಗೂಡಿರುವ ಜಾಗದತ್ತ ಹೋಗತೊಡಗಿದ ಪಟಾಕಿ ನಾರಾಯಣ ಅರ್ಧದಾರಿಗೆ ಹೋದವನು ನಮ್ಮತ್ತ ತಿರುಗಿ,        
     ಅಯ್ಯೋ ಶಿವನೇ ನೀವು ಇಷ್ಟು ಹೆದ್ರಿಕೊಂಡ್ರೆ ಜೀವನ ಮಾಡ್ದಂಗೆ, ಅಲ್ಲಿ ರಸ್ತೆ ಪಕ್ದಲ್ಲಿ ಕಾರ್ ನಿಲ್ಸಿ, ಎಂತು ಆತಿಲ್ಲೆ ಮಾರಾಯ್ರೆ, ಈಗ ಒಂದ್ ಕ್ಷಣದಲ್ಲಿ ಅವು ನಾಪತ್ತೆಯಾತೋ ಕಾಣಿ ಎಂದ. ನನಗೂ ಅದನ್ನು ಹತ್ತಿರದಿಂದ ನೋಡುವ ಆಸೆಯಾಯ್ತು. ವ್ಯಾನಿನೊಳಗಡೆ  ಗ್ಲಾಸನ್ನೇರಿಸಿ ಕುಳಿತುಕೊಂಡರೆ ಜೇನು ಬರಲಾರದು ಎಂದು ವ್ಯಾನ್ ಸ್ಟಾರ್ಟ್‌ಮಾಡಿ ನಿಧಾನ ಹೋಗಿ ಪಟಾಕಿ ನಾರಾಯಣನಿಗಿಂತ ಹತ್ತಡಿ ದೂರದಲ್ಲಿ ನಿಲ್ಲಿಸಿದೆ. ಚೆನ್ನನೂ ಬಂದು ವ್ಯಾನ್ ಹತ್ತಿ ಕುಳಿತ. ಮಿಕ್ಕವರು ದೂರದಲ್ಲಿ ನಿಂತರು.
 ಪಟಾಕಿನಾರಾಯಣ ಹೊಗೆಯ ಬಾಂಡ್ಲಿಯನ್ನು ಹೆಜ್ಜೇನಿನ ತತ್ತಿಗಿಂತ ಸುಮಾರು ಐದಡಿ ಕೆಳಗೆ ಹಿಡಿದ. ಒಮ್ಮೆಲೆ  ರೊಂಯ್ಯನೆ ಸದ್ದು ಮಾಡುತ್ತಾ ಲಕ್ಷಾಂತರ ಹುಳು ಮೇಲೇರ ತೊಡಗಿತು. ಆಗ ಪಟಾಕಿ ನಮ್ಮ ಕಡೆ ತಿರುಗಿ,
     ಕಂಡೀರ‍್ಯಾ, ನಾನ್ ಹೇಳಿದ್ ಮೇಲೆ ಮುಗಿತು, ಕಾಣಿ ಜೇನೂ ಇಲ್ಲೆ ಎಂತದು ಇಲ್ಲೆ, ಅದೆಂತಾ ಹೆದರ‍್ತ್ರಿ ಕಾರಿಂದ ಇಳೀರಿ ಮರಾಯ್ರೆ ಎಂದ.
 ಅವನು ಅಷ್ಟು ಹೇಳಿ ಮುಗಿಸುವಷ್ಟರಲ್ಲಿ ಅವನು ಹಿಡಿದಿದ್ದ ಬಾಂಡ್ಲಿಯಿಂದ ಭಗ್ಗನೆ ಬೆಂಕಿ ಹೊತ್ತಿಕೊಂಡಿತು. ಪಟಾಕಿ ಒಮ್ಮೆಲೆ ಗಾಬರಿಯಾಗಿ ಕೋಲು ಕೈಬಿಟ್ಟ. ಅಲ್ಲಿಯತನಕ ದಟ್ಟವಾಗಿದ್ದ ಹೊಗೆ ಮಾಯವಾಗಿ ಬೆಂಕಿಸಮೇತ ಕಬ್ಬಿಣದ ಬಾಂಡ್ಲಿ ದೊಪ್ಪನೆ ಕೆಳಕ್ಕೆ ಬಿತ್ತು. ಕ್ಷಣಮಾತ್ರದಲ್ಲಿ ಅಲ್ಲಿನ ಚಿತ್ರಣವೇ ಬದಲಾಗಿ ಹೋಯಿತು. ನಾನು ಏನಾಯಿತೆಂದು ನೋಡುವಷ್ಟರಲ್ಲಿ ಪಟಾಕಿನಾರಾಯಣ ತಕತಕನೆ ಮೈಕೈ ಉಜ್ಜಿಕೊಳ್ಳುತ್ತಾ ಕುಣಿಯತೊಡಗಿದ. ಚೆನ್ನ ವ್ಯಾನಿನ ಒಳಗಡೆಯಿಂದಲೇ ಏ..ಓಡ...ಓಡ... ಓಡಲೇ ಎನ್ನುತ್ತಾ ಕೂಗುತ್ತಿದ್ದ. ಆದರೆ ಪಟಾಕಿ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.
     ಒಡಿಯಾ ವ್ಯಾನ್ ಅವನತ್ರ ತಗೊಂಡ್ಹೋಗಿ, ಹ್ಯಾಗಾದ್ರೂ ಅವನ್ನ ಒಳಗೆ ಎಳ್ಕತ್ತೀನಿ. ಇಲ್ದಿದ್ರೆ ಅವ್ನು ಸತ್ತೇ ಹೋಗ್ತಾನೆಎಂದು ಚೆನ್ನ ಹೇಳಿದ. ಗಡಿಬಿಡಿಯಿಂದ ವ್ಯಾನ್ ಸ್ಟಾರ್ಟ್ ಮಾಡಿ ಪಟಾಕಿ ಬಳಿ ನಿಲ್ಲಿಸಿದೆ. ಚೆನ್ನ ಲಬಕ್ಕನೆ ಅವನನ್ನು ಒಳಗೆಳೆದುಕೊಂಡ. ವ್ಯಾನ್ ಮುಂದೋಡಿಸಿದೆ. ಆದರೆ ಈಗ ಮತ್ತೊಂದು ಅನಾಹುತವಾಗಿತ್ತು. ಪಟಾಕಿನಾರಾಯಣನ ಜತೆಯಲ್ಲಿದ್ದ ಹತ್ತೆಂಟು ಹುಳುಗಳು ಕಾರಿನೊಳಗೆ ಸೇರಿಕೊಂಡು ನನ್ನನ್ನು ಚೆನ್ನನನ್ನು ಹೊಡೆಯಲಾರಂಭಿಸಿದವು. ಅದು ಹೇಗೋ ಉರಿಯನ್ನು ಸಹಿಸಿಕೊಂಡು ಅರ್ಧ ಕಿಲೋಮೀಟರ್ ದೂರ ಹೋಗಿ ವ್ಯಾನ್ ನಿಲ್ಲಿಸಿ ಹೊರಗೆ ಹಾರಿಕೊಂಡೆವು. ಆದರೆ ಪಟಾಕಿ ವ್ಯಾನಿನಿಂದ ಇಳಿಯುವ ಸ್ಥಿತಿಯಲ್ಲಿ ಇರಲಿಲ್ಲ. ನನಗೆ ಎರಡು ಜೇನುಹುಳು ಹೊಡೆದಿತ್ತು, ಆ ಉರಿ ಸಹಿಸಲಾರದೆ ತಕತಕನೆ ಕುಣಿಯುವಂತಾಗಿತ್ತು. ಇನ್ನು ಹತ್ತಿಪ್ಪತ್ತು ಹುಳ ಹೊಡೆದ ನಾರಾಯಣನ ಸ್ಥಿತಿ ಹೇಗಾಗಿರಬೇಡ. ತಕ್ಷಣ ಅವನನ್ನು ತಾಳಗುಪ್ಪದ ಹೆಗಡೆಡಾಕ್ಟರ್ ಬಳಿ ಕರೆದುಕೊಂಡು ಹೋಗಿ, ಅಂಬು ತೆಗೆಸಿ, ನಂಜಿನ ಇಂಜೆಕ್ಷನ್ ಕೊಡಿಸಿಕೊಂಡು ಮನೆ ಸೇರುವಷ್ಟರಲ್ಲಿ ನನ್ನ ಮುಖವೂ ಯಾರಿಗೂ ಗುರುತು ಸಿಗದಂತೆ ಆಂಜನೇಯನ ಮುಖದ ತರಹ ಉಬ್ಬಿಹೋಗಿತ್ತು.
 ಇಷ್ಟೆಲ್ಲಾ ಅನಾಹುತಕ್ಕೆ ಪಟಾಕಿನಾರಾಯಣ ಅರ್ಧಂಬರ್ಧ ತಿಳಿದುಕೊಂಡಿದ್ದ ಮಾಹಿತಿ ಕಾರಣವಾಗಿತ್ತು. ಹೆಜ್ಜೇನು ಓಡಿಸುವ ಕಾರ್ಯಾಚರಣೆ ಯಾವಾಗಲೂ ಸಂಜೆ ಮಾಡಬೇಕು. ಮತ್ತು ಹೆಜ್ಜೇನು ಓಡಿಸಲು ಮರದಬುಡದಿಂದ ಗಾಢವಾಗಿ ಮೇಲೇಳುವಂತೆ ದಟ್ಟವಾದ ಹೊಗೆ ಹಾಕಬೇಕು. ಜತೆಯಲ್ಲಿ ಬುಗ್ಗನೆ ಬೆಂಕಿ ಹತ್ತಿಕೊಳ್ಳದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮೊದಲಿಗೆ ಮೇಲೆದ್ದ ದಟ್ಟವಾದ ಹೊಗೆಯಿಂದಾಗಿ ಮೇಲೇರುವ ಜೇನು ಹುಳುಗಳು ಹೊಗೆ ಕಡಿಮೆಯಾಗುತ್ತಿದ್ದಂತೆ ಅದೇ ವೇಗದಲ್ಲಿ ಕೆಳಗಿಳಿದು ಧಾಳಿಮಾಡುತ್ತವೆ.
 ಇವಿಷ್ಟು ಮಾಹಿತಿಯನ್ನು ಚೆನ್ನ ನನಗೆ ಮಾರನೆ ದಿನ ಸಿಕ್ಕದವ ಹೇಳಿ ನಂತರ ಸಣ್ಣ ದನಿಯಲ್ಲಿ, ನಿನ್ನೆ ಅದು ಹಿಂಗೇ ಆಗ್ತೈತಿ ಅಂತ ನಂಗೂ ಗೊತ್ತಿತ್ರೀ, ಸಿಕ್ಕಾಪಟ್ಟೆ ಹಾರಾಡ್ತಾನಲ್ಲ  ಬುದ್ಧಿ ಬರ್ಲಿ ಅಂತ ಸುಮ್ನಿದ್ದೆಅಂದ.
     ಥೂ.. ದರಿದ್ರದವ್ನೆ, ಅವ್ನಿಗೆ ಬುದ್ದಿ ಕಲ್ಸಕ್ಕೋಗಿ ಜೀವಾನೆ ತೆಗಿತಿದ್ಯಲ್ಲೋ, ನಿಂಗೆ ಮಂಡೆ ಹಿಡಿದ್ರೂ ಬೋಳು ಕುಂಡೆ ಹಿಡಿದ್ರೂ ಬೋಳು, ಹೆಚ್ಚುಕಮ್ಮಿ ಆಗಿದ್ರೆ ಕೊನೆಗೆ ಎಲ್ಲಾ ನಮ್ತಲೆ ಮೇಲೆ ಬರ‍್ತಿತ್ತು ಅಂತ ಚೆನ್ನನ ಮೇಲೆ ರೇಗಿದೆ. ಆದರೆ ತೀರಾ ಅನಾಹುತ ಆಗದೆ ಇದ್ದುದ್ದಕ್ಕೆ ಅಂತಹ ಗಡಿಬಿಡಿಯ ಸಮಯದಲ್ಲೂ ಪಟಾಕಿಯನ್ನು ವ್ಯಾನಿನೊಳಕ್ಕೆ ಎಳೆದುಕೊಂಡ ಚೆನ್ನನ ಸಮಯ ಪ್ರಜ್ಞೆಯೇ ಕಾರಣ ಎಂದೆನಿಸಿ ಸುಮ್ಮನುಳಿದೆ.
 ಆ ದಿನ ಸಾಯಂಕಾಲದವರೆಗೂ ರಸ್ತೆಯಲ್ಲಿ ಯಾರಿಗೂ ಓಡಾಡಲು ಹೆಜ್ಜೇನು ಬಿಡಲಿಲ್ಲ. ನಾವು ವ್ಯಾನ್ ತೆಗೆದುಕೊಂಡು ಮುಂದೆ ಹೋದಮೇಲೆ ಕೆಲಹುಳುಗಳು ರಮಾನಂದ ಹೆಗಡೆಯವರ ಮನೆಯವರೆಗೂ ಬಂದು ಕೆಲವರಿಗೆ ಹೊಡೆಯಿತಂತೆ. ಶಾಲೆಗೆ ಹೊರಟ ಪೂಜಾ,  ಅನುಜಿತ್ ಮುಂತಾದ ಮಕ್ಕಳೆಲ್ಲಾ    ಜೇನುಹುಳ ಹೊಡೆಸಿಕೊಂಡು    ಮುಖ ಊದಿಸಿಕೊಂಡಿದ್ದರು.
 ಮಾರನೆ ದಿನ ಬೆಳಿಗ್ಗೆ ಹೆಜ್ಜೇನು ಅಲ್ಲಿಂದ ಹಾರಿ ಹೋಗಿತ್ತು. ಬಹುಶಃ ಅವುಗಳಿಗೆ ಗಿಡುಗನ ಕಾಟ ಜಾಸ್ತಿಯಾಯಿತೋ   ಅಥವಾ ನಾರಾಯಣನ  ಹೊಗೆ ಕೆಲಸ ಮಾಡಿತೋ ಗೊತ್ತಾಗಲಿಲ್ಲ. ಒಟ್ಟಿನಲ್ಲಿ ಅವುಗಳಿಗೆ ಆ ಜಾಗ ಸುರಕ್ಷಿತ ಅಲ್ಲ ಎಂಬ ಭಾವನೆ ಬಂದಿರಬೇಕು, ಹಾಗಾಗಿ ಜಾಗ ಖಾಲಿ ಮಾಡಿದ್ದವು. ಜೇನುಹುಳಗಳಿಲ್ಲದ ಖಾಲಿ ತತ್ತಿ ಮೂರ್ನಾಲ್ಕು ದಿನ ಅಲ್ಲಿಯೇ ಇತ್ತು. ಕೊನೆಗೆ ಚೆನ್ನ ಅದನ್ನು ಕಿತ್ತು ತಂದು ಒಂದು ಉಂಡೆ ಜೇನುಮೇಣ ಕಾಯಿಸಿ ಮರಗೆಲಸದ ಉದಯಾಚಾರಿಗೆ ಮೂವತ್ತು ರೂಪಾಯಿಗೆ ಮಾರಿದೆ ಎಂದು ಹೇಳಿದ. ಈ ಹೆಜ್ಜೇನು ಓಡಿಸುವ ಪ್ರಕರಣ ನನಗೆ ಸ್ವಲ್ಪ ಹಣವನ್ನು ಕೈಬಿಡಿಸಿ, ಪಟಾಕಿ ನಾರಾಯಣನಿಗೆ ಪಾಠ ಕಲಿಸಿದಂತಾದರೂ ಚೆನ್ನನಿಗೆ ಮಾತ್ರ ಆರ್ಥಿಕ ಲಾಭವನ್ನು ತಂದುಕೊಟ್ಟಿತ್ತು 


---(ಮುಂದುವರೆಯುತ್ತದೆ)


ಭಾಗ-೧ http://sampada.net/blog/shreeshum/29/08/2010/27682


ಭಾಗ-೨ http://sampada.net/blog/shreeshum/30/08/2010/27702

Rating
No votes yet

Comments