ಒಂದು ಬೆಳಗಿನ ಕಥೆ

4.1

ನನ್ನ ಸ್ಕೂಲ್ ಶುರುವಾಗುತ್ತಿದ್ದುದು ಸುಮಾರು 11.45. ಅಂದರೆ, ಚಿಕ್ಕವನಿದ್ದಾಗ, ಪ್ರತಿ ದಿನವೂ ಬೇಗ ಏಳೋ ಪದ್ಧತಿಯಂತೂ ನನಗಿರಲೇ ಇಲ್ಲ. ಇನ್ನು ಮನೆಯಲ್ಲಿ, ಎಲ್ಲರಿಗಿಂತ ನಾನೇ ಚಿಕ್ಕವನು. ಹಾಗಾಗಿ, ಅಕ್ಕನಿಗಿಂತ ನನ್ನ ಮೇಲೆ ಅಮ್ಮನಿಗೆ ಒಂದಿಷ್ಟು ಹೆಚ್ಚೇ ಪ್ರೀತಿ! ನಾನು ಮತ್ತು ನನ್ನ ಅಕ್ಕ, ಒಂದೇ ಸ್ಕೂಲಿಗೆ ಹೋಗುತ್ತಿದ್ದೆವಾದರೂ, ಅವಳು ಮಾತ್ರ ಬೇಗ ಏಳಬೇಕು. ಪಾಪ, ಮೊದಲು ಹುಟ್ಟಿದ್ದೇ ಅವಳು ಮಾಡಿದ ತಪ್ಪು! ನಂತರ ಹುಟ್ಟಿದ್ದು ನನ್ನ ಭಾಗ್ಯ!

ಬೆಳಿಗ್ಗೆ, ಸುಮಾರು ಎಂಟು ಘಂಟೆಯಾದಾಗ ನಾನು ಎದ್ದು, ಮುಖ ತೊಳೆದು ಬರುವ ಹೊತ್ತಿಗೆ ಅಮ್ಮ ಕೊಡುತ್ತಿದ್ದ 1/4 ಕಾಫಿ. ಇದೇನು 1/4 ಕಾಫಿ ಅಂದಿರಾ? ಇನ್ನೂ ಚಿಕ್ಕವನಿದ್ದಾಗ ಮಾಲ್ಟೋವ-ಹಾಲನ್ನು ಮಾತ್ರ ಕುಡಿಯುತ್ತಿದ್ದ ನಾನು, ’ದೊಡ್ಡವರು ಮಾತ್ರ ಕಾಫಿ ಕುಡೀತಾರೆ, ನಂಗೆ ಯಾಕೆ ಕೊಡಲ್ಲ’ ಎಂದು ಸಿಕ್ಕಾಪಟ್ಟೆ ಗಲಾಟೆ ಮಾಡ್ತಿದ್ದೆ. ’ಕಾಫಿ ಕುಡಿದರೆ ಕಪ್ಪಗಾಗ್ತೀಯ ಕಣೋ’ ಎಂಬ ಬುರುಡೆ ನನ್ನ ಬಳಿ ನಡೆದಿರಲಿಲ್ಲ. ಕೊನೆಗೆ, ನನ್ನ ಹಟಕ್ಕೆ ಬಿದ್ದು ಅಮ್ಮ ಅಂಗಡಿಯಿಂದ ನನಗೊಂದು, ಅಕ್ಕನಿಗೊಂದು, ಪುಟಾಣಿ ಸ್ಟೀಲ್ ಲೋಟ ತಂದಿದ್ದರು. ಆ ಲೋಟದಲ್ಲೂ ಅರ್ಧದಷ್ಟು ಕಾಫಿ! ಆ ಕಾಫಿಯನ್ನು ಈಗ ಒಂದೇ ಗುಟುಕಿಗೆ ಕುಡಿಯಬಹುದೇನೋ. ಆಗ, ಅಷ್ಟು ಕಾಫಿ ಕುಡಿಯುವುದರಲ್ಲೇ ಏನೋ ಒಂದು ಥ್ರಿಲ್! ದಿನವೂ, ಈ 1/4 ಕಾಫಿ ಕುಡಿಯುತ್ತಾ, ನೆಲದ ಮೇಲೆ ’ಕನ್ನಡಪ್ರಭ’ ಹರಡಿಕೊಂಡು ಓದಲೇಬೇಕು. ಮೊದಲಿಗೆ ಮುಖ್ಯವಾದ ಸುದ್ದಿಗಳು. ಇಂದಿನ ದಿನಗಳಲ್ಲಿ ಮುಂದಿನ ಪುಟದಲ್ಲಿ ಮಾಯವಾಗಿರುವ ’ಸಂಪಾದಕೀಯ’ ಆಗೆಲ್ಲಾ, ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತಿತ್ತು. ’ಸಂಪಾದಕೀಯ’ ಬಂದಾಗಲೆಲ್ಲ, ಪತ್ರಿಕೆಯವರನ್ನು ಮನಸ್ಸಿನಲ್ಲೇ ಬಯ್ದುಕೊಂಡು, ನೇರವಾಗಿ ನಾನು ಕೊನೆ ಪೇಜಿನಲ್ಲಿರುವ ಕ್ರೀಡಾ ಸುದ್ದಿ ಓದಲು ಶುರು ಮಾಡಿ ಬಿಡುತ್ತಿದ್ದೆ. ದಿನ ನಿತ್ಯದ ಪೇಪರ್‍ನಲ್ಲಿ ನನಗೆ ಮುಖ್ಯವಾದವು ಇವೆರಡೇ - ಮುಂದಿನ ಪುಟದಲ್ಲಿ ಬರುತ್ತಿದ್ದ ಸುದ್ದಿಗಳು ಹಾಗೂ ಕ್ರಿಕೆಟ್. ಇದಲ್ಲದೇ ಕ್ರೀಡಾ ಪುಟದಲ್ಲಿ ಯಾವುದೇ ಆಟವಿರಲಿ, ’ಪಾಕಿಸ್ತಾನ್’ ಎಂದು ಎಲ್ಲಾದರೂ ಕಾಣಿಸಿಕೊಂಡರೆ, ಭಾರತ ಪಾಕಿಸ್ತಾನವನ್ನು ಸೋಲಿಸಿತೇ ಇಲ್ಲವೇ ಎಂದು ನೋಡಲೇ ಬೇಕು. ಭಾರತ ಗೆದ್ದಿದ್ದರೆ, ಏನೋ ಸಾಧಿಸಿದಂತಹ ಹೆಮ್ಮೆ. ಇದನ್ನು ಬಿಟ್ಟರೆ, ’ಮಾಂತ್ರಿಕ ಮಾಂಡ್ರೇಕ್’ ಕಾರ್ಟೂನ್! ನನ್ನಕ್ಕನಿಗೆ, ಪೇಪರ್ ನಲ್ಲಿ ಎರಡು ಮತ್ತು ಮೂರನೇ ಪೇಜಿನಲ್ಲಿ ಬರುತ್ತಿದ್ದ ವಿಷಯಗಳು ಹೆಚ್ಚು ಪ್ರೀತಿ. ಅಂದರೆ, ಅವಳಿಗೆ ’ಎಲ್ಲೆಲ್ಲಿ ಕೊಲೆಯಾಗಿದೆ’, ’ಎಲ್ಲಿ ಸುಲಿಗೆ ನಡೆದಿದೆ’ ಎಂಬಂತಹಾ ಸುದ್ದಿಗಳು ಹೆಚ್ಚು ಪ್ರಿಯ. ಅವಳಿಂದಲೇ ನಾನು ’ಉರುಫ಼್’, ಅಲಿಯಾಸ್ ಪದಗಳನ್ನು ಕಲಿತಿದ್ದು ಎಂದು ಹೇಳಿದರೆ ತಪ್ಪಾಗಲಾರದು!

ನಿಧಾನವಾಗಿ ಪೇಪರ್ ಓದಿ, ಸ್ನಾನ ಮಾಡಿ ಬರುವ ಹೊತ್ತಿಗೆ ಸುಮಾರು ಒಂಬತ್ತಾಗಿರುತ್ತಿತ್ತು. ಇಷ್ಟು ಹೊತ್ತಿಗೆ ಅಣ್ಣ ಊಟವನ್ನು ಮಾಡಿ ಆಫೀಸಿಗೆ ಹೊರಟಾಗಿರುತ್ತಿತ್ತು! ಮನೆಯಲ್ಲಿರುವ ಗಡಿಯಾರ ’ಟೈಂ ಸರಿಯಾಗಿ ತೋರಿಸುತ್ತಾ?’ ಎಂಬ ವಿಚಿತ್ರ ಅನುಮಾನ, ಅಕ್ಕನಿಗೆ ಪ್ರತಿ ದಿನವೂ ಕಾಡುತ್ತಿತ್ತು! ಅವಳ ಅನುಮಾನವನ್ನು ಹೋಗಲಾಡಿಸುತ್ತಿದ್ದುದು ಒಂದೇ - ರೇಡಿಯೋ ! ಅಮ್ಮ ರೇಡಿಯೋ ಹಾಕದೇ ಹೋದರೂ, ಅಕ್ಕ ದಿನವೂ ತಪ್ಪದೇ ’ವಿವಿಧ ಭಾರತಿ’ ಕೇಳಿಸಿಕೊಳ್ಳಲೇಬೇಕು. ’ನಂದನ’ ಕಾರ್ಯಕ್ರಮವನ್ನು ನಡೆಸುವಾಕೆ, "ಈಗ ಸಮಯ ಸರಿಯಾಗಿ ಒಂಬತ್ತು ಘಂಟೆ ಹದಿನೈದು ಸೆಕೆಂಡುಗಳು" ಎಂದು ಹೇಳಿದಾಗ, ಅಕ್ಕ ಮನೆಯಲ್ಲಿರುವ ಪುಟ್ಟ ಗಡಿಯಾರವನ್ನು ನೋಡಿ ಮತ್ತೊಮ್ಮೆ ಖಚಿತಪಡಿಸಿಕೊಳ್ಳುತ್ತಿದ್ದಳು.

’ನಂದನ’ದಲ್ಲಿ ಹಾಡುಗಳು ತೇಲಿ ಬರುತ್ತಿದ್ದಾಗ ನಾವುಗಳು ಹಸಿರು ಮತ್ತು ಬಿಳಿ ಬಣ್ಣದ ಸಣ್ಣ ಚೌಕಲಿಯ ಯೂನಿಫಾರಂ ಧರಿಸಿಕೊಂಡು ಬಿಡುತ್ತಿದ್ದೆವು! ಅಲ್ಲಿ ಜಾನಕಿ ಹಾಡುತ್ತಿದ್ದರೆ, ಇಲ್ಲಿ ಅಮ್ಮ, ಅಕ್ಕನಿಗೆ ತಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ, ಬೈತಲೆಯನ್ನು ಬಾಚಿ, ಎರಡು ಜಡೆಯನ್ನು ಮೆಲ್ಲಗೆ ಹೆಣೆಯಬೇಕು. ಅತ್ತ ಕಡೆ ಅಮ್ಮ ತಲೆ ಬಾಚುತ್ತಿದ್ದರೆ, ಅಕ್ಕನ ಲೋಕವೇ ಬೇರೆಯಾಗಿರುತ್ತಿತ್ತು. ಅಲಂಕಾರದ ಬಗ್ಗೆ ಎಂದೂ ತಲೆ ಕೆಡಿಸಿಕೊಂಡಿರಲಿಲ್ಲ ಅವಳು. ಯಾವುದೇ ಹಾಡು ಬರುತ್ತಿರಲಿ, ಅಕ್ಕ ಅದರೊಂದಿಗೆ ಹಾಡಿಬಿಡುತ್ತಿದ್ದಳು. ಹಾಡುವುದು ಎನ್ನುವುದಕ್ಕಿಂತ ಗುನುಗುವುದು ಎಂದರೆ ಹೆಚ್ಚು ಸರಿ. ರಾಗಕ್ಕೆ ಸರಿಯಾಗಿ ಹಾಡುವುದಕ್ಕಿಂತ ಅವಳಿಗೆ ಸಾಹಿತ್ಯದ ಕಡೆ ಹೆಚ್ಚು ಗಮನ. ಪ್ರತಿ ದಿನವೂ ಬರುತ್ತಿದ್ದ ನೂರಾರು ಹಾಡುಗಳನ್ನು ಸರಾಗವಾಗಿ ಹೇಳಿಬಿಡುತ್ತಿದ್ದಳು. ದಿನವೂ ಯಾವುದೋ ಒಂದು ವಿಷಯಕ್ಕೆ, ಅಕ್ಕ , ಅಮ್ಮನ ಬಳಿ "ಮರೆತು ಹೋಯ್ತಮ್ಮಾ" ಎಂದು ಹೇಳಿ ಬಯ್ಸಿಕೊಳ್ಳುವುದು ಸಾಮಾನ್ಯವಾದರೂ, ಚಿತ್ರಗೀತೆಗಳ ಸಾಹಿತ್ಯವನ್ನು ಎಂದೂ ಮರೆತದ್ದಿಲ್ಲ! ಅವಳು ಆ ಕಡೆ ಹಾಡುತ್ತಿದ್ದರೆ, ಅಕ್ಕನಿಗಿಂತ ಚೆನ್ನಾಗಿ ಬರೆದು ಪರೀಕ್ಷೆಗಳನ್ನು ಲೀಲಾಜಾಲವಾಗಿ ಗೆದ್ದು ಬರುತ್ತಿದ್ದ ನನಗೆ, ಈ ಹಾಡುಗಳೇಕೆ ನೆನಪಿನಲ್ಲಿರುವುದಿಲ್ಲ ಎಂಬ ಯೋಚನೆ, ಇದಲ್ಲದೇ, ರೇಡಿಯೋದಲ್ಲಿ ಹಾಡಿನ ಪಲ್ಲವಿ ಬರುತ್ತಿದ್ದ ಕ್ಷಣವೇ, ’ಇದು ವಾಣಿ ಜಯರಾಂ’, ’ಇದು ಜಾನಕಿ’ ಎಂದು ಅಕ್ಕ ಸರಿಯಾಗಿ ಹೇಳಿದಾಗ, ನನಗೆ ಯಾಕೆ ಇದು ತಿಳಿಯುವುದಿಲ್ಲ ಎಂದು ಬೇಜಾರಾಗುತ್ತಿತ್ತು. ಆಗೆಲ್ಲಾ, ನನಗೆ ಸಾಹಿತ್ಯಕ್ಕಿಂತ, ಹಾಡುಗಳಲ್ಲಿ ಬರುತ್ತಿದ್ದ ಸಂಗೀತದ ಬಗ್ಗೆ ಗಮನ. ’ಡುಂಡುಡುಂ - ಡುಂಡುಡುಂ’ ಎಂದು ಹಾಡು ಡ್ರಂ ಶಬ್ದದ ಜೊತೆಗೆ ಶುರುವಾಗುತ್ತಿದ್ದ ಹಾಗೆ, ಇದು ರಾಜನ್-ನಾಗೇಂದ್ರ ಅವರ ಹಾಡೇ ಎಂದು ಖಚಿತವಾಗಿ ಹೇಳಿಬಿಡುತ್ತಿದ್ದೆ. ತಲೆ ಸುತ್ತಿ ಬರುವಂತಹಾ ಶಬ್ದದೊಂದಿಗೆ ಆರಂಭವಾಗುತ್ತಿದ್ದ ’ಪ್ರಿಯದರ್ಶಿನಿ’ ಜಾಹಿರಾತನ್ನು ಕೇಳಿ ನಾನು-ನನ್ನ ಅಕ್ಕ ನಗಾಡುತ್ತಿದ್ದೆವು. ಆ ಜಾಹಿರಾತು ಬಂದು ಹೋದಮೇಲೆ, ನಾವಿಬ್ಬರು ಸೇರಿ, ಮತ್ತೊಮ್ಮೆ ’ಟೀಂವ್ ಟೀಂವ್ ಟಿವ್-ಟಿವ್-ಟಿವ್-ಟಿವ್’ ಎಂದು ಮತ್ತೆ ಮತ್ತೆ ಹೇಳುತ್ತಾ, ’ಅಂದ ಚೆಂದದಾ ವಸ್ತ್ರ ವೈಭವ ಬಣ್ಣ ಬಣ್ಣದಾ ಉಡುಗೆ ತೊಡುಗೆಗೆ ಹೆಸರಾಗಿದೆ ಪ್ರಿಯದರ್ಶಿನಿ...ಆಹಾ ಪ್ರಿಯದರ್ಶಿನಿ’ ಎಂದು ಮತ್ತೊಮ್ಮೆ ಹಾಡಿ ನಗಲೇಬೇಕು!
ಅತ್ತ ಕಡೆ ಗೋಪಾಲ್ ಹಲ್ಲು ಪುಡಿಯ ಜಾಹಿರಾತು ಬರುತ್ತಿದ್ದರೆ, ನಮ್ಮ ಮನೆಯಲ್ಲಿ ಬಳಸುತ್ತಿದ್ದ, ’ನಂಜನಗೂಡು ಹಲ್ಲು ಪುಡಿ’ ಜಾಹಿರಾತು ಏಕೆ ಬರುವುದಿಲ್ಲವಲ್ಲ ಎಂಬ ಕ್ಷಣ ಮಾತ್ರದ ಬೇಸರ. ಇನ್ನು ದಸರಾ-ದೀಪಾವಳಿ ಹಬ್ಬಗಳು ಬರುತ್ತಿದ್ದ ಹಾಗೆ, ಸಿಲ್ಕ್ ಸೀರೆಗಳನ್ನು ಮಾರುವ ಅಂಗಡಿಗಳ ಜಾಹಿರಾತುಗಳ ಭರಾಟೆ. ’ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಭಾರೀ ರಿಯಾಯತಿ ಮಾರಾಟ. ಇಂದೇ ಭೇಟಿ ಕೊಡಿ ಧೋಂಡೂಸ ಸಿಲ್ಕ್ಸ್, ಚಿಕ್ಕಪೇಟೆ, ಬೆಂಗಳೂರು" ಎಂಬಂತಹಾ ಜಾಹಿರಾತುಗಳು. ಎರಡು ಮೂರು ದಿನಕ್ಕಾದರೂ ಒಮ್ಮೆ, ಗಂಧದ ಗುಡಿಯ ’ನಾವಾಡುವ ನುಡಿಯೇ ಕನ್ನಡ ನುಡಿ’ ಹಾಡು ಬರಲೇ ಬೇಕು. ಬಹುಶ: ವಿವಿಧ ಭಾರತಿಯವರ ಬಳಿಯಿದ್ದ ಈ ಹಾಡಿನ ಗ್ರಾಮಫೋನ್ ಡಿಸ್ಕ್ ಕೆಟ್ಟಿತ್ತೇನೋ, ಹಾಗಾಗಿ, ಈ ಹಾಡಂತೂ ಎರಡೆರಡು ಬಾರಿ ಬಂದ ಮೇಲೆ ನಿಲ್ಲುವುದು. ನಾವುಗಳು ತಿಂಡಿಯನ್ನು ತಿಂದು, ಮಾಲ್ಟೋವ ಕುಡಿಯುವ ವೇಳೆಗೆ, ಸುಮಾರು ಹತ್ತು ಘಂಟೆಯಾಗಿ, ’ನಂದನ’ ಕಾರ್ಯಕ್ರಮ ಮುಗಿಯುತ್ತಿತ್ತು.

ಇಷ್ಟು ವೇಳೆಗೆ ಅಮ್ಮನಿಗೆ ಬಿಡುವು. ನಾವಿದ್ದ ಪುಟ್ಟ ಮನೆಯ ಹೊರಗಡೆಯಿದ್ದ ಮೆಟ್ಟಿಲ ಮೇಲೆ ಕುಳಿತುಕೊಳ್ಳುವ ಹೊತ್ತಿಗೆ ಸರಿಯಾಗಿ ಮಹಡಿಯ ಮೇಲಿನ ಐಯ್ಯರ್ ಮಾಮಿ ಮಾತಿಗೆ ಬಂದು ಬಿಡುತ್ತಿದ್ದರು. ಮಾಮಿಯ ಜೊತೆಗೆ ಅಮ್ಮ ಮಾತಿಗೆ ಕುಳಿತರೆ, ಪ್ರಪಂಚ ಮುಳುಗುವವರೆಗೂ ಮಾತು ನಿಲ್ಲದು. ಅತ್ತ ಕಡೆ ಅಮ್ಮ ಹರಟುತ್ತಾ ಕುಳಿತರೆ, ’ಅಕ್ಕನಿಗೆ ಮಾತ್ರ ಬಾಚಿ, ನನಗೆ ತಲೆಯನ್ನು ಬಾಚದೇ ಹರಟುವುದಿಕ್ಕೆ ಕುಳಿತುಬಿಟ್ಟರಲ್ಲಾ’ ಎಂದು ಅಮ್ಮನ ಮೇಲೆ ಒಂದಿಷ್ಟು ಕೋಪ. ’ಸ್ಕೂಲಿಗೆ ಟೈಂ ಆಯ್ತು, ಬೇಗ ಬಾಚು’ ಎಂದು ಪದೇ ಪದೇ ಹೇಳುತ್ತಾ ಹರಟೆಯನ್ನು ಅರ್ಧಕ್ಕೇ ತುಂಡರಿಸುವ ವ್ಯರ್ಥ ಪ್ರಯತ್ನ. ನನ್ನ ಗಲಾಟೆಯನ್ನು ತಡೆಯದೇ, ಅಮ್ಮ ಹರಟೆಯ ಮಧ್ಯದಲ್ಲೇ, ನನ್ನ ತಲೆಗೂ ಒಂದಿಷ್ಟು ಕೊಬ್ಬರಿ ಎಣ್ಣೆಯನ್ನು ಹಚ್ಚಿ, ಬಾಚಲು ನನ್ನ ಗಲ್ಲವನ್ನು ಬಿಗಿಯಾಗಿ ಹಿಡಿದುಬಿಡುತ್ತಿದ್ದರು. ಇಷ್ಟು ಹೊತ್ತೂ, ’ಅಮ್ಮ ತಲೆ ಬಾಚುತ್ತಿಲ್ಲ’ ಎಂಬ ನನ್ನ ಕೋಪ, ಈಗ ಹೊಸ ರೂಪವನ್ನು ಪಡೆದುಕೊಳ್ಳುತ್ತಿತ್ತು. ’ಇಷ್ಟು ಹೊತ್ತು ನಾನೇ ತಲೆ ಬಾಚು ಎಂದು ಗಲಾಟೆ ಮಾಡಿದ್ದು, ಆದರೆ ಅಮ್ಮ ನನ್ನ ಗಲ್ಲವನ್ನು ಇಷ್ಟು ಬಿಗಿಯಾಗಿ ಏಕೆ ಹಿಡಿಯುತ್ತಾರೆ’ ಎಂಬ ಕೋಪ. ಮನಸ್ಸಿನಲ್ಲೇ ಮೆಲ್ಲನೆ ಅಮ್ಮನನ್ನು ಬಯ್ದುಕೊಂಡು ಬಿಡಿಸಿಕೊಳ್ಳಲು ಕೊಸರಾಡುತ್ತಿದ್ದೆ. ಈ ನನ್ನ ಪ್ರಯತ್ನದಿಂದ ಅಮ್ಮನ ಹಿಡಿತ ಸಡಿಲವಾಗದೇ ಮತ್ತಷ್ಟು ಬಲವಾಗಿಬಿಡುತ್ತಿತ್ತು. ಮಾಮಿಯ ಜೊತೆಗಿನ ಹರಟೆಯ ಮಧ್ಯದಲ್ಲೂ, ನನ್ನ ಕೂದಲುಗಳು ಶಿಸ್ತಿನ ಸಿಪಾಯಿಗಳಂತೆ ಒಪ್ಪಾಗಿ ಒಂದೇ ರೀತಿ ಕುಳಿತು ಬಿಡುತ್ತಿದ್ದವು.

ಇವೆಲ್ಲಾ ಮುಗಿಯುವ ಹೊತ್ತಿಗೆ ಸ್ಕೂಲಿಗೆ ಹೊರಡುವ ಸಮಯ. ಅಕ್ಕ, ನಾನೂ, ಒಂದೇ ಸ್ಕೂಲಿಗೆ ಹೋಗುತ್ತಿದ್ದರೂ ನಾನೂ, ಅವಳು ಬೇರೆ ಬೇರೆಯಾಗಿಯೇ ಹೋಗುತ್ತಿದ್ದುದು. ಸುಮಾರು 2 ಕಿ.ಮೀ ದೂರವಿದ್ದ ಸ್ಕೂಲಿಗೆ, ಪ್ರತಿ ದಿನವೂ ಹೋಗುವ ಮುನ್ನ ನಾನು ಪಕ್ಕದ ರೋಡಿನಲ್ಲಿದ್ದ ನನ್ನ ಅಚ್ಚುಮೆಚ್ಚಿನ ಗೆಳೆಯನ ಮನೆಗೆ ಮೊದಲು ಹೋಗಬೇಕು. ಅವನ ಜೊತೆಗೇ ನಾನು ಸ್ಕೂಲಿಗೆ ಹೋಗುವುದು. ಅವನು ಇನ್ನೂ ರೆಡಿಯಾಗಿಲ್ಲವಾದರೆ, ಅವರ ಮನೆಯಲ್ಲೊಂದಷ್ಟು ಹೊತ್ತು ಕುಳಿತುಕೊಳ್ಳುವುದು. ನಂತರ, ಅದೂ ಇದೂ ಹರಟುತ್ತಾ ಸ್ಕೂಲಿಗೆ ಮೆಲ್ಲಗೆ ಹೋಗುವುದು.

ಆಗ ಪ್ರತಿ ದಿನ ಬೆಳಗ್ಗೆ, ಯಾವುದೇ ಗಡಿಬಿಡಿಯಿರಲಿಲ್ಲ. ತಲೆ ಹೋಗುವಂಥಹಾ ಚಿಂತೆ ಮೊದಲೇ ಇರಲಿಲ್ಲ...ಆದರೆ ಈಗ...?

ಚಿತ್ರ ಕೃಪೆ: wallcoo.net

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.1 (10 votes)
To prevent automated spam submissions leave this field empty.