ಒಂದು ಮುಂಜಾವಿನಲೀ....

ಒಂದು ಮುಂಜಾವಿನಲೀ....

ಜನವರಿಯ ಕೆಟ್ಟ ಚಳಿಗೂ ಕರುಣೆ ತೋರದ ಅಲಾರಾಂ ಸರಿಯಾದ ಸಮಯಕ್ಕೆ ಹೊಡ್ಕೋಳುತ್ತೆ. ನಿದ್ದೆಗಣ್ಣಲ್ಲೇ ತಡಕಾಡಿ ಫೋನ್ ನಲ್ಲಿ ಟೈಮ್ ನೋಡಿದ್ರೆ 5.07. ಮುಖ ತೊಳೆದು ಕೆದರಿರೋ ಕೂದಲಿಗೆ ರಿಬ್ಬನ್ ಬಿಗಿದು, ಶೂಸ್ ಏರಿಸಿ ಟಪ ಟಪ ಸದ್ದು ಮಾಡುತ್ತ ರೋಡಿಗಿಳಿದ್ರೆ, ಕಾಲಿಂದ ತಲೇವರ್ಗೂ ಗಡ ಗಡ ನಡುಗಿಸುವ ಚಳಿ. ಫೋನಿಗೆ ಹ್ಯಾಂಡ್ಸ್ ಫ್ರೀ ಕನೆಕ್ಟ್ ಮಾಡಿದ ಕೂಡಲೇ ಭಾಗ್ಯಾದಾ ಲಕ್ಷ್ಮಿ ಬಾರಮ್ಮಾ, ಸುಪ್ರಭಾತ ತೇಲಿ ಬರುತಿತ್ತು, ಮುಷ್ಟಿಯನ್ನು ಟ್ರೌಶರ್ ಜೇಬಿನಲ್ಲಿಳಿಸಿ ಸಣ್ಣಗೆ ವಿಷಲ್ ಹಾಕ್ತಾ ನಡೆದೆ. ಚಳೀಗೆ ವಿಷಲ್ಲೂ ಸರೀಗೆ ಬರ್ತಿಲ್ಲ.

ಗೃಹಿಣಿಯೊಬ್ಬಳು ಮನೆಯಂಗಳವನ್ನು ಗುಡಿಸೋ ಸದ್ದು ಎಷ್ಟೋ ದೂರದಿಂದ ಕೇಳಿ ಬರ್ತಲೇ ಇತ್ತು. ಕೈಗೆಟುಕುವಷ್ಟು ಸನಿಹದಲ್ಲಿ ಹೆಸರರಿಯದ ಪಕ್ಷಿ ಸೊಯ್ಯನೆ ಹಾರಿಹೋಯ್ತು. ಅಯ್ಯಪ್ಪ ಸ್ವಾಮಿ ಭಕ್ತನೊಬ್ಬ ಬೀದಿ ನಲ್ಲಿಗೇ ತನ್ನ ನಡುಗುವ ಮೈಯೊಡ್ಡಿ ನೆನೆಯುತ್ತಿದ್ದ. ಅವರಿವರು ಕೇಳುವ ಹಾಡನ್ನು ಹಾಕುತ್ತಿದ್ದ ಎಫ್.ಎಮ್ ನ ರೇಡಿಯೋ ಜಾಕಿ ಅಷ್ಟು ಬೆಳಿಗ್ಗೆಯೂ ಉತ್ಸಾಹದಿಂದ ಚಿಮ್ಮುತ್ತಿದ್ದ. ಪೇಪರ್ ಹಾಕೋ ಹುಡುಗ್ರು ನಿದ್ದೆ ಮುಗಿಯದ ಮುಖ ಹೊತ್ತು ತಮ್ಮದೇ ಲೋಕದಲ್ಲಿ ಸೈಕಲ್ ಮೇಲೆ ಹೊರಟಿದ್ರು. ಕಣ್ಣು ಮಾತ್ರ ಕಾಣೋ ಹಾಗೆ ಸ್ಕಾರ್ಫ್ ಕಟ್ಟಿದ್ದ ಹೆಣ್ಣೊಬ್ಬಳು ಬ್ಯಾಗ್ ಹಿಡಿದು ಹೂ ತರಲು ಮಾರ್ಕೆಟ್ಟಿನ ದಾರಿ ಹಿಡಿದಿದ್ದಳು. ಬೆಳಗ್ಗಿನ ಮೊದಲ ಬಸ್ಸಿಗೆ ಕಾದು ನಿಂತಿರೋ ಬಸ್ ಸ್ಟಾಪಿನ ಜನ, ಚಳಿಯಲ್ಲಿ ಮುಳುಗೇಳುತ್ತಿದ್ದಾರೆನಿಸಿತು. ಚಳಿಗೆ ಮೈ ಚೂರು ಒಗ್ಗಿಕೊಂಡಂತೆನಿಸಿ ಪಾರ್ಕಿನೊಳಗಡಿಯಿಟ್ಟೆ.

ದುಂಡು ಹೊಟ್ಟೆ ಹೊತ್ತ ಅಂಕಲ್ ಗಳು, ಗುಂಡುಗುಂಡಗಿರೋ ಹುಡುಗೀರು, ವಯಸ್ಸಾದ ಅಜ್ಜ ಅಜ್ಜಿ, ಎಲ್ಲರನ್ನು ಪಾರ್ಕಿನ ಗಿಡಮರಗಳು ನಿಶ್ಯಬ್ದವಾಗಿ ಅವಲೋಕಿಸುತ್ತಿದ್ದವು. ನಸುಕಿನಲ್ಲಿ ಈ ಪಾರ್ಕು, ಈ ಜನ, ಹೆಸರರಿಯದ ಆ ಹಕ್ಕಿ, ಪ್ಲಾಸ್ಟಿಕ್ ಕವರ್ ಹೊದಿಸಿಕೊಂಡು ನಿರ್ಲಿಪ್ತವಾಗಿರುವ, ಇನ್ನು ಸ್ವಲ್ಪ ಹೊತ್ತಿಗೆ ಮದುವೆಮನೆಯಂತಾಗುವ ಅಂಗಡಿಗಳು, ಹಾಲು ಮಾರಲು ಹೊರಟ ಹುಡುಗನ ನಿದ್ದೆಗಣ್ಣು, ನೈಟ್ ಶಿಫ್ಟ್ ಮುಗಿಸಿ ಮನೆಗೆ ಹೊರಟಿರೋ ಕಾರ್ ಡ್ರೈವರ್, ಇಂತಹ ಸಣ್ಣ ಸಣ್ಣ ಸಂಗತಿಗಳನ್ನು ಗಮನಿಸದೆ ವಂಚಿತರಾಗುತ್ತೇವಲ್ಲ ನಾವು? ಯೋಚಿಸುತ್ತ ನಡೆದಿದ್ದೆ, ಹಿಂದೆ ಯಾರೋ ಕೆಮ್ಮಿದ ಸದ್ದು. ಜಾಗ್ ಮಾಡುತ್ತಿದ್ದ ಯುವಕನೊಬ್ಬ ದಾರಿಕೇಳಲು ಸದ್ದು ಮಾಡಿದ್ದ. ಪಕ್ಕ ಸರಿದ ನಾನು, ಸ್ಲೀವ್ಸ್ ಇಲ್ಲದ ಬನಿಯನ್ ನಂತಹ ಶರ್ಟ್ ತೊಟ್ಟು ಆ ಚಳಿಯಲ್ಲಿ ಜಾಗ್ ಮಾಡುತ್ತಿದ್ದ ಅವನನ್ನೇ ದಿಟ್ಟಿಸುತ್ತ ನಡೆದೆ. ಪಕ್ಕದಲ್ಲಿದ್ದ ಆಂಟಿ ಕಣ್ಣಲ್ಲಿ ತುಂಟ ನಗು. ಅರೆ ಆಂಟಿ ಯು ಆರ್ ವೆರಿ naughty ಎಂದು ಮುಗುಳ್ನಗುತ್ತಾ ಮುಂದುವರೆದೆ.

ಅಲ್ಲೇ ಕಲ್ಲು ಬೆಂಚಿನ ಮೇಲೆ ತೂಕಡಿಸುತ್ತ ಕುಳಿತ ತಾತ. ಮನೆಯಲ್ಲೇ ಮಲಗಬಹುದಿತ್ತಲ್ವೆ ಪಾಪ, ಇಷ್ಟು ಬೆಳಿಗ್ಗೆ ಇಲ್ಲಿ ಬಂದು ತೂಕಡಿಸುತ್ತಿದೆ ಅಂದುಕೊಂಡೆ. ಆದರೆ ಮರುಕ್ಷಣವೇ ಒಂದು ಕಡೆಯ ಮೂಗು ಮುಚ್ಚಿ ದೀರ್ಘ ಉಸಿರೆಳೆದುಕೊಂಡ ತಾತ ನಾನು ತೂಕಡಿಸುತ್ತಿಲ್ಲ ಎಂದು ಸಾಬೀತುಮಾಡಿತ್ತು. ದಸ್ ಬಹಾನೆ ಕರ್ಕೆ ಲೇಗಯೆ ದಿಲ್..... ಎಫ್.ಎಮ್ ನಲ್ಲಿ ಈಗ ಹಿಪ್ ಹಾಪ್ ಹಾಡುಗಳು ತೇಲಿಬರುತ್ತಿದ್ದವು. ಇಬ್ಬರು ಹುಡುಗೀರು ಪಾರ್ಕನ್ನು ಒಂದು ರೌಂಡ್ ಹೊಡೆದು ತುಂಬಾ ಸುಸ್ತಾದವರಂತೆ ಅಲ್ಲೇ ಕಲ್ಲು ಬೆಂಚಿನ ಮೇಲೆ ಕೂತು ಹರಟೆ ಕೊಚ್ಚ ತೊಡಗಿದ್ದರು. ಏದುಸಿರು ಬಿಡುತ್ತ ಸುಮಾರು 20 ಕಿಲೋಮೀಟರ್ ಸ್ಪೀಡ್ನಲ್ಲಿ ಒಬ್ಬ ವ್ಯಕ್ತಿ ಎಲ್ಲರನ್ನು ಹಿಂದಿಕ್ಕುತ್ತ ಬಿರುಸಾಗಿ ನಡೆಯುತ್ತಿದ್ದ. ಕೂರಲು ಏಳಲು ಅಡ್ಡ ಬರುತ್ತಿದ್ದ ಹೊಟ್ಟೆಯನ್ನು ಇವತ್ತು ಕರಗಿಸಿಯೇ ತೀರುತ್ತೇನೆ ಎಂದು ಶಪತ ಮಾಡಿದಂತೆ ದಪ್ಪ ಹೊಟ್ಟೆಯ ಅಂಕಲ್ ಬಸ್ಕಿ ಮೇಲೆ ಬಸ್ಕಿ ಹೊಡೆಯುತ್ತಿದ್ದರು. ಚಳಿಗೆ ಸುಮಾರು ಮುಕ್ಕಾಲು ಪಾಲು ಕವರ್ ಆಗಿದ್ದ ಅಜ್ಜಿಯೊಬ್ಬರು ಕಷ್ಟಪಟ್ಟು ಬಗ್ಗುವುದು ಏಳುವುದು ಮಾಡುತ್ತಿದ್ದರು. ಜಾದು ಹೇ ನಶಾ ಹೇ ಮದ್ಹೋಶಿಯಾ, ತುಜ್ ಕೋ ಭುಲಾಕೆ ಅಬ್ ಜಾವೂ ಕಹಾ.... ಎಫ್ ಎಮ್ ಹಾಡುತ್ತಲೇ ಇತ್ತು. ಭಾನ ಕಿಟಕಿಯಿಂದ ಸೂರ್ಯ ಇಣುಕುತಿದ್ದ. ಪಾರ್ಕಿನಿಂದ ಹೊರಟ ಈ ವ್ಯಕ್ತಿಗಳೆಲ್ಲ ಹೊರಗೋದ ಮೇಲೆ ಏನೇನಾಗ್ತಾರೆ? ಅವರ ಕೆಲಸ, ಮನೆಸಾಲ, ಫೋನ್ ಬಿಲ್ಲು, ಪೇರೆಂಟ್ಸ್ ಮೀಟಿಂಗು ಇತ್ಯಾದಿಗಳಲ್ಲೇ ಮುಳುಗೋಗ್ತಾರಲ್ಲ? ಇಷ್ಟು ಪ್ರಶಾಂತ ಏಕಾಂತ, ಇಡೀ ದಿನದಲ್ಲಿ ಮತ್ತೆ ಅವರಿಗೆ ಸಿಗಬಹುದೆ? ಅದು ಸಿಗಲಾರದು ಎಂಬ ಅರಿವು ಇವರಿಗಿದೆಯೇ? ಗಡಿಯಾರ ಯಾರನ್ನೂ ಗಮನಿಸದೇ ತಿರುಗುತಿತ್ತು. ಆಫೀಸಿಗೆ ಹೊತ್ತಾಗುತ್ತಿದೆ ಎಂದು ಮೌನವಾಗಿ ಸಾರುತಿತ್ತು. ಎದೆತುಂಬಾ ಅಚ್ಚರಿ ಹೊತ್ತೇ ಪಾರ್ಕಿನಿಂದ ಹೊರಟೆ!!!

Rating
No votes yet

Comments