ಒಂದು ಲಾರಿ ಲೋಡ್ ಸುಳ್ಳು

ಒಂದು ಲಾರಿ ಲೋಡ್ ಸುಳ್ಳು

ನಾನು, ಸುಬ್ಬ, ನಿಂಗ, ಅಂಗೇ ಇಸ್ಮಾಯಿಲ್ ಎಲ್ಲಾ ರಾಮ ಜನ್ಮಭೂಮಿ ವಿವಾದದ ಬಗ್ಗೆ ಮಾತಾಡ್ತಾ ಹೊಂಟಿದ್ವಿ. ಅಟ್ಟೊತ್ತಿಗೆ ಗೌಡಪ್ಪ ಬಂದೋನು ಬರ್ರಲಾ ನಮ್ಮ ತೋಟಕ್ಕೆ ಹೋಗಿ ಬರುವಾ ಅಂದ. ಲೇ ಇವನು ತೋಟಕ್ಕೆ ಹೋದರೆ ನಮ್ಮ ಕೈಲೇ ಎಲ್ಲಾ ಕ್ಯಾಮೆ ಮಾಡಿಸ್ತಾನೆ ಬೇಡ ಕನ್ರಲಾ ಅಂದ ಸುಬ್ಬ. ಇಲ್ಲ ಬರ್ರಲಾ, ಸುಮ್ಕೆ ಮಾತಾಡ್ತಾ ಕೂರುವಾ ಅಂದೋನು ಕರ್ಕಂಡು ಹೋದ. ಆದ್ರೂ ಅಲ್ಲಿ ಬಿದ್ದಿರೋ ತೆಂಗಿನಕಾಯಿ ಹಂಗೇ ಹ್ಯಾಡೆನ ನಮ್ಮ ಕೈಲೇ ತೆಗೆಸಿ ತೋಟದ ಮನೆಗೆ ಹಾಕ್ಸಿದ.

 

ನೋಡ್ರಲಾ ನಿಮ್ಮ ವಯಸ್ನಾಗೆ ಇದ್ದಾಗ ನಾನು ಬಹಳ ಸೂರವಂತ, ಧೀರವಂತ ಆಗಿದ್ದೆ ಕನ್ರಲಾ ಅಂದ. ತೋಳು ಅನ್ನೋದು ಬೀಟೆ ತುಂಡು ಇದ್ದಂಗೆ ಇತ್ತು ಕಲಾ. ನಿಮ್ದೂ ಐತೆ ನಾಯಿ ಕಾಲು ತರಾ ಅಂದ. ತೊಡೆ ಅನ್ನೋದು ತೆಂಗಿನ ಮರ ಬುಡಾ ಇದ್ದಂಗೆ ಇತ್ತು ಕಲಾ. ನಿಮ್ದೂ ಐತೆ ತುಳಸಿ ಗಿಡದ್ದ ತರಾ ಅಂತಿದ್ದ ಅಟ್ಟೊತ್ತಿಗೆ ರಂಗಜ್ಜ, ಗೌಡರೆ ನಿಮಗೆ ಸಣ್ಣ ವಯಸ್ನಾಗೆ ಪೋಲೀಯೋ ಆಗಿತ್ತು ಅಲ್ವರಾ ಅಂದ. ಸುಮ್ಕಿರಲಾ ಅಂದಾ ಗೌಡಪ್ಪ.

ಕೇಳ್ರಲಾ ನನ್ನ ಕಥೆ ಅಂದೋನು ಗೌಡಪ್ಪ ಸುರು ಹಚ್ಕಂಡ. ನಮ್ಮವ್ವ ಮಗಾ ನಂಗೆ ಕೂರಕ್ಕೆ ಹುಲಿ ಚರ್ಮ ಬೇಕು ಅಂದ್ಲು. ಅದೂ ನಮ್ಮವ್ವ ಕೇಳಿದಾಳೆ ಅಂತಾ ಒಂದು ಮಚ್ಚು ತಗೊಂಡು ಕಾಡಿಗೆ ಹೋದೆ ಕಲಾ. ಕಾಡ್ನಾಗೆ ಹೋದ್ರೆ ಬರೀ ಪ್ರಾಣಿಗಳೆಯಾ ಎದುರಿಗೆ ಒಂದು ಹುಲಿ ಬಂತು ಇದನ್ನೇ ಹೊಡೆಯವಾ ಅಂತಾ ಮಚ್ಚು ಎತ್ತಿದೆ. ಆದರೆ ಅದು ವೀಕ್ ಇತ್ತು. ಅದರ ಚರ್ಮ ನಮ್ಮವ್ವನ ಬುಡಕ್ಕೆ ಸಾಕಾಗಿಲ್ಲ.  ಅಂತಾ ಅಂಗೇ ಮುಂದೆ ಹೋದೆ. ಅದು ಹೆಂಗ್ರಿ ಗೌಡರೆ ನಿಮಗೆ ಗೊತ್ತಾತು ಅಂದ ನಿಂಗ. ಲೇ ಅಳತೆ ತಗೊಂಡು ಹೋಗಿದ್ದೆ ಕಲಾ ಅಂದ ಮಗಾ ಗೌಡಪ್ಪ. 

ಸರಿ ಮುಂದೆ ಹೋದ್ರೆ ಅಲ್ಲಿ ಹುಲಿ ತನ್ನ ಮಕ್ಕಳು ಜೊತೆ ಮಕ್ಕೊಂಡಿತ್ತು ಕನ್ರಲಾ ದೊಡ್ಡ ಹುಲಿ. ಹೊಡೆದೇ ಬಿಡವಾ ಅಂತಾ ಮಚ್ಚು ಎತ್ತಿದೆ. ಯಾಕೆ ಮಕ್ಕಳನ್ನು ಅನಾಥ ಮಾಡಬೇಕು. ನನ್ನ ತರಾ ಜಾರಿಣಿಯ ಮಕ್ಕಳು ಆಗ್ ಬಾರದು ಅಂತಾ ಹಂಗೇ ಮುಂದೆ ಹೋದರೆ ಸಿಕ್ಕತು ನೋಡ್ರಲಾ ಹುಲಿ. ಒಂದೇ ಹೊಡೆತ ತಲೆ ಆ ಕಡೆ ಬಾಡಿ ಈ ಕಡೆ. ಅದ್ರಾಗಿನ ಮಾಂಸ ಎಲ್ಲಾ ಕಾಡು ಮನಸ್ಯರಿಗೆ ಕೊಟ್ಟು ಚರ್ಮ ಮಾತ್ರ ತಗೊಂಡು ಬಂದೆ ಕನ್ರಲಾ, ಫಾರೆಸ್ಟ್ ನೋರಿಗೆ 100ರೂಪಾಯಿ ಲಂಚ ಕೊಟ್ಟೆ  ಅಂದ ಗೌಡಪ್ಪ. ಮಗಾ ಹುಲಿ ಹಾಲಿನ ಮೇವು ಕತೆ ಹೇಳ್ತಾ ಇದಾನೆ ಕಲಾ ಅಂದ ನಿಂಗ. ಅಟ್ಟೊತ್ತಿಗೆ ಕಾಯಿ ಆರಿಸ್ತಿದ್ದ ರಂಗಜ್ಜ, ಗೌಡರೆ ನಮ್ಮೂರ್ನಾಗೆ ಕಾಡೇ ಇಲ್ಲ. ಅದ್ಯಾವಾಗ ಹುಲಿ ಬಂದಿತ್ತು. ನೀ ಸುಮ್ಕೆ ಕೆಲಸ ನೋಡ್ಕಳಲಾ ಅಂದ. ನಮ್ಮನೇಗೆ ನಾನು ಕೂರ್ತಿನಲ್ಲಾ ಅದೇ ಚರ್ಮ ಕನ್ರಲಾ ಅಂದ ಗೌಡಪ್ಪ. ಮಗಾ ಕುರಿ ಚರ್ಮಕ್ಕೆ ಹುಲಿ ಪೇಂಟ್ ಮಾಡಿಸಿದ್ದ. ಸುಬ್ಬ ಬಾಯಿ ಬಿಟ್ಕಂಡು ಕೇಳ್ತಾ ಇದ್ದ.

ಇನ್ನೊಂದು ಕಥೆ ಹೇಳ್ತೀನಿ ಕೇಳ್ರಲಾ ಅಂದು ರಾತ್ರಿ 10 ಆಗಿತ್ತು. ನಮ್ಮಪ್ಪ ಲೇ ಮಗಾ ನನಗೆ ಉಣ್ಣಕ್ಕೆ ಜಿಂಕೆ ಮಾಂಸ ಬೇಕು ಅಂದ. ಸರಿ ದೊಡ್ಡ ಬಂದೂಕು ತಗೊಂಡು ಹಂಗೇ ಹಳೇ ಬುಲೆಟ್ ಬೈಕ್ ತಗೊಂಡು ಹೋದೆ ಕಲಾ. ಎದರುಗಡೆ ನೋಡ್ತೀನಿ ಒಂದು ಕಾಳಿಂಗ ಸರ್ಪ ಅದರ ಪಕ್ಕದಾಗೆ ಚಿರತೆ ಎರಡು ನನ್ನನ್ನೇ ನೋಡೋವು. ಬಂದೂಕು ತೆಗಿತೀನಿ. ಒಂದೇ ಗುಂಡು. ಏನು ಮಾಡಬೇಕು ಅಂತಾ ಯೋಚಿಸ್ತಿದ್ದ. ಜೋಬ್ನಾಗೆ ಚಾಕು ಇತ್ತು. ಕಿಕ್ ಹೊಡೆಯೋ ಬೇಕಾದ್ರೆ ತೊಡೆಗೆ ಚುಚ್ಚಿದ್ದು ಜ್ಞಾಪಕ ಬಂತು. ಅದು ರಕ್ತ ಆಗಿತ್ತು. ಬಂದೂಕು ಮುಂದೆ ಚಾಕು ಇಟ್ಟು. ಢಂ ಅನ್ನಿಸಿದೆ. ಅರ್ಧ ಗುಂಡು ಕಾಳಿಂಗ ಸರ್ಪಕ್ಕೆ ಮಿಕ್ಕ ಅರ್ಧ ಗುಂಡು ಚಿರತೆಗೆ ಎರಡು ಸ್ಪಾಟ್ ಡೆತ್ ಅಂದ ಗೌಡಪ್ಪ. ಲೇ ಇವನು ರಜನಿಕಾಂತ್ ಪಿಚ್ಚರ್ ಹೇಳ್ತಾವ್ನೆ ಅಂದ ಕಿವ್ಯಾಗೆ ಇಸ್ಮಾಯಿಲ್. ಸರಿ ಜಿಂಕೆ ಸಿಕ್ತಾ ಅಂದ ಸುಬ್ಬ. ಕೇಳಲಾ ಮುಂದೆ. ಲೇಟಾಯ್ತದೆ. ಮೊದಲೇ ನಮ್ಮಪ್ಪಂಗೆ ಗ್ಯಾಸು ಅಂತಾ ಚಿರತೆನೇ ಬೈಕ್ನಾಗೆ ಹಾಕ್ಕೊಂಡು ಹೋದೆ ಕಲಾ. ನಮ್ಮಪ್ಪ ನನಗೆ ಜಿಂಕೆ ಮಾಂಸನೇ ಬೇಕು. ಚಿರತೆ ಮಾಂಸ ಬೇಡ ಎಂದು ಹಠ ಹಿಡಿದು ಉಪವಾಸ ಮಕ್ಕೊಂಡ. ಕಡೆಗೆ ಊರಿಗೆಲ್ಲಾ ಹಂಚಿದ್ದಾತು ಅಂದ ಗೌಡಪ್ಪ. ಮತ್ತೆ ಚರ್ಮ. 50ರೂಪಾಯಿಗೆ ಮಾರಿದೆ ಕಲಾ ಅಂದ ಮಗಾ ಆಗಲೇ ಎರಡು ಪಿಚ್ಚರ್ ಕತೆ ಹೇಳಿದ್ದ.

ಇದು ಕೇಳ್ರಲಾ ಸಾನೇ ಇಂಟರೆಸ್ಟಿಂಗ್ ಅಂದ. ಬಾಬರಿ ಮಸೀದಿ ಗಲಾಟೆ ಆತಲಾ. ಅವಾಗ ನಾನು ಅಯೋಧ್ಯೆಗೆ ಹೋಗಿದ್ದೆ ಕಲಾ.  ಲಾರಿಯಲ್ಲಿ ಒಂದು ಲೋಡ್ ಇಟ್ಟಿಗೆ ಒಯ್ದಿದ್ದೆ. ನಾನು ಮಸೀದಿ ಒಡೆಯವಾ ಅಂತಾ ಮೇಲಕ್ಕೆ ಹತ್ತಿ. ಕೊಡಲಿಯಿಂದ ಒಂದು ಗೋಡೆ  ಕೆಡವಿದೆ ಕನ್ರಲಾ. ಇದನ್ನ ಪೋಲೀಸ್ನೋರು ನೋಡಿದ್ದೆ. ಅಂಗೇ ಫೈರಿಂಗ್,. ಎಲ್ಲಾ ಗುಂಡು ತಪ್ಪಿಸಿಕೊಂಡೆ. ಮಗಂದು ಕಡೇ ಗುಂಡು ಕಾಲಿಗೆ ಬಿತ್ತು ಅಂತಾ ಮಂಡಿ ತೋರಿಸಿದ. ಅದು ನೋಡಕ್ಕೆ ಕೊಟ್ಟಿಗೆ ಮನೇ ಗೂಟ ಹೊಡೆದ ಗಾಯದ ತರಾ ಇತ್ತು. ಆಮ್ಯಾಕೆ ಏನ್ ಮಾಡಿದ್ರಿ ಅಂದಾ ಸುಬ್ಬ. ಮತ್ತೆ ಇಟ್ಟಿಗೆ ಯಾಕೆ ವಾಪಸ್ಸು ಯಾಕೆ ತರಬೇಕು, ಸಾನೇ ಕ್ರಾಸಿಂಗ್ ಅಂತಾ ಅಲ್ಲೇ ಮನೆ ಕಟ್ಟೋರಿಗೆ ಒಂದು ಇಟ್ಟಿಗೆಗೆ 2ರೂಪಾಯಿ ಅಂಗೆ ಕೊಟ್ಟು ಬಂದೆ ಕಲಾ ಅಂದ.

ಇದು ಕೇಳ್ರಲಾ, ಒಂದು ದಿನಾ ನಮ್ಮಪ್ಪ ನೋಡಲಾ ಎಲ್ಲಾ ಮರದ್ದು ತೆಂಗಿನ ಕಾಯಿ ನೀನೇ ಕಿತ್ತು ತರಬೇಕು ಅಂದ. ಅವಾಗ ಮುದ್ದೆ ಉಣ್ತಾ ಇದ್ದೆ. ನಮ್ಮವ್ವ ಇಷ್ಟು ಮುದ್ದೆ ಸಾಕಾಗಕ್ಕಿಲ್ಲಾ ಅಂತಾ. ಮರದ ಲೆಕ್ಕದಂಗೆ 15ಮುದ್ದೆ ಹಾಕಿದ್ಲು. ತಿಂದು ಹೋದೋನೆ ಮರದಿಂದ ಮರಕ್ಕೆ ಹಾರ್ತಾ ಅಷ್ಟು ಮರದ್ದು ಕಾಯಿ ಕಿತ್ತು. ಗಾಡ್ಯಾಗೆ ಹಾಕ್ಕಂಡು ಬಂದು ಮಾರಿ ನಮ್ಮಪ್ಪಂಗೆ ದುಡ್ಡು ಕೊಟ್ಟೆ ಕಲಾ. ಅವಾಗ ನಮ್ಮಪ್ಪ ಖುಸಿಯಾಗಿ ಅದೇ ದುಡ್ನಾಗೆ ಎರಡು ಚೆಡ್ಡಿ ಕೊಡಿಸಿದಾನೆ ಕಲಾ. ಅದನ್ನ ಪ್ರತೀ ಗಣಪತಿ ಹಬ್ಬಕ್ಕೂ ಹಾಕ್ಕಂತೀನಿ ಅಂದ. ಮಗಾ ಗೌರಿಹಬ್ಬದಾಗೆ ಹೆಣ್ಣು ಮಕ್ಕಳು ಸೀರೆ ಉಡೋರ ತರಾ ಹೇಳಿದ್ದ.

ಇದು ಕೇಳ್ರಲಾ ಅಂದ. ಲೇ ಇವನನ್ನ ಹಿಂಗೇ ಬಿಟ್ಟರೆ ಜಾಕಿಚಾನ್, ಬ್ರೂಸ್ಲಿ ಕತೆ ಹೇಳ್ತಾನೆ ಕಲಾ. ಆಗಲೇ ಮೇರಾ ನಾಮ್ ಜೋಕರ್ ತರಾ 32ರೀಲ್ ಕತೆ ಹೇಳಾಗಿತ್ತು. ಮತ್ತೆ ನೀವು ಆಗ ಗರುಡ ಇದ್ದಂಗೆ ಇದ್ದೋರು ಈಗ ಯಾಕೆ ಕಸಾಯಿ ಖಾನೆ ಹಸಾ ತರಾ ಆಗಿದೀರಿ ಅಂದ ಸುಬ್ಬ. ನಾಕು ಜನಾ ಹೆಂಡರು ಕಲಾ ಅವರನ್ನ ನಿಭಾಯಿಸಿ ಹಿಂಗೆ ಆಗಿದೀನಿ ಅಂದ. ಸರಿ ಎಲ್ಲಾರೂ ಅವನ ತೋಟದಾಗೆ ಎಳ್ಳೀರು ಕುಡಿದು ಒಂದು ಅರ್ಧ ಗಂಟೆ ಆದ್ ಮ್ಯಾಕೆ ಅಲ್ಲೇ ಬಿಟ್ಟು ಹಳ್ಳಿ ಕಡೆ ಹೊಂಟ್ವಿ. ಅಲ್ಲ ಕಲಾ ಸುಬ್ಬ, ಗೌಡಪ್ಪ ಹೇಳಿದ್ದಕ್ಕೆ ನೀನು ಯಾಕಲೇ ತಲೆ ಆಡುಸ್ತಿದ್ದಿ  ಅಂದ ನಿಂಗ. ಲೇ ನಮ್ಮ ಹತ್ತಿರಾನೇ ಒಂದು ಲೋಡಷ್ಟು ಸುಳ್ಳು ಇದೆ. ಮಗಾ ಏನ್ ಹೇಳ್ತಾನೆ ಹೇಳ್ಲಿ ಅಂತಾ ಕೇಳ್ತಾ ಇದ್ದೆ. ನಮಗೆ ಚೋಡ್ತಾನಲ್ಲಾ ಮಗಾ, ಯಾರಾದ್ರೂ ಹೂವು ಇಟ್ಕಂಡರೆ ಸಿಕ್ಕರೆ ಹೆಂಗಲಾ ಅಂದ ಸುಬ್ಬ, ಈಗ ಗೌಡಪ್ಪ ಬಂದರೆ. ಎಲ್ಲಾರೂ ಒಟ್ಟಿಗೆ "ಚುಕು ಬುಕು ಚುಕು ಬುಕು" ಅಂತಾರೆ. ಯಾಕ್ರಲಾ ಅಂದ್ರೆ ಗೌಡಪ್ಪ. ನಮ್ಮೂರಿಗೆ ಹೊಸಾ ಕಲ್ಲಿದ್ದಲು ಟ್ರೇನ್ ಯಡಿಯೂರಪ್ಪ ಬಿಡ್ತಾರಂತೆ ಆ ಖುಸಿಗೆ ಅಂತಾನೆ ಮಗಾ ಸುಬ್ಬ, ಅಂಗೇ ಟವಲ್ ಮುಚ್ಕಂಡು ನಗ್ತಾನೆ.

Rating
No votes yet

Comments