ಒಂದು ಹುಚ್ಚುಹುಚ್ಚಾದ, ಆದ್ರೆ ಅರ್ಥಪೂರ್ಣ ಕತೆ
ಒಂದು ರೈಲುನಿಲ್ದಾಣ; ಒಬ್ಬ ಸೂಟ್ಕೇಸಿನೊಂದಿಗೆ ಅಲ್ಲಿಗೆ ಬಂದು ಅಲ್ಲಿ ಇರೋನ್ನ ಕೇಳಿದ.
-ಕ್ಷಮಿಸಿ , ರೈಲು ಆಗಲೇ ಹೊರಟು ಹೋಯಿತೆ?
-ನೀವು ಈ ದೇಶಕ್ಕೆ ಹೊಸಬರಂತ ಕಾಣ್ತದೆ , ಒಂದ್ ಕೆಲ್ಸ ಮಾಡಿ , ತಕ್ಷಣ ಒಂದು ಹೋಟೆಲ್ಲಿನಲ್ಲಿ ರೂಮ್ ಹಿಡೀರಿ , ತಿಂಗಳ ಲೆಕ್ಕಕ್ಕೆ ಆದ್ರೆ ತುಂಬ ಸೋವಿ ಆಗುತ್ತೆ.
-ನಿಮಗೇನು ಹುಚ್ಚಾ ? ನಾನು ಈ ಊರಲ್ಲಿ ಇರೋದಿಕ್ಕೆ ಬಂದಿಲ್ಲ ; ನಾಳೆ ಹೊತ್ತಿಗೆ ನಾನು ಟೀಸಿಟೀನಲ್ಲಿರಬೇಕು.
-ನಾನು ನಿಮ್ಮನ್ನ ನಿಮ್ಮ ಪಾಡಿಗೆ ಬಿಡಬೋದು , ಆದ್ರೆ ಒಂದಿಷ್ಟು ವಿಷ್ಯ ಹೇಳ್ಬೇಕು.
-ದಯಮಾಡಿ ಅದೇನು ತಿಳಿಸಿ
-ಈ ದೇಶದ ರೈಲು ವ್ಯವಸ್ಥೆ ಇನ್ನೂ ಪರಿಪೂರ್ಣ ಆಗಿಲ್ದಿದ್ರೂ ಟೈಮ್-ಟೇಬಲ್ ಪ್ರಕಟಿಸೋದ್ರಲ್ಲಿ ಮತ್ತು ಟಿಕೆಟ್ ಕೊಡೋದ್ರಲ್ಲಿ ಬಹಳ ಮುಂದುವರಿದಿದೆ. ರೈಲ್ ವೇಳಾಪಟ್ಟಿಯಲ್ಲಿ ದೇಶದ ಎಲ್ಲಾ ನಗರಗಳೂ ಹಳ್ಳಿಗಳೂ ಸಂಪರ್ಕ ಹೊಂದಿವೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಟಿಕೆಟ್ ಸಿಗುತ್ತದೆ . ಆದರೆ ಟ್ರೇನುಗಳು ಮಾತ್ರ ಸರಿಯಾಗಿ ಇಲ್ಲ ; ಜನ ಪ್ರಗತಿ ಆಗುತ್ತೆ ಅನ್ನೋ ಭರವಸೆ ಇಟ್ಕೊಂಡಿದಾರೆ , ಈ ನಡುವೆ ಅವರು ರೈಲು ಸೇವಾವ್ಯವಸ್ಥೆಯಲ್ಲಿರುವ ವ್ಯತ್ಯಯಗಳನ್ನೆಲ್ಲಾ ಒಪ್ಪಿಕೊಂಡು ಬಿಟ್ಟಿದಾರೆ. ಇದಕ್ಕೆ ಅವರ ದೇಶಪ್ರೇಮವೇ ಕಾರಣ ;
-ಅಂದ್ರೆ? ಈ ಊರಿನ ಮೂಲಕ ಟ್ರೇನು ಓಡಾಡುತ್ವೆ ತಾನೆ?
-ಇಲ್ಲಿ ಹಳಿಗಳಾದ್ರೂ ಇವೆ , ಬೇರೆ ಊರಲ್ಲಿ ಸೀಮೆಸುಣ್ಣದಲ್ಲಿ ನೆಲದ ಮೇಲೆ ಎರಡು ಗೆರೆ ಎಳ್ದಿರ್ತಾರೆ ; ಅವೇ ಹಳಿಗಳು . ಪರಿಸ್ಥಿತೀನ ಗಮನಿಸಿದ್ರೆ ಇಲ್ಲಿ ಯಾವ ಟ್ರೇನೂ ಬರಬೇಕಾಗಿಲ್ಲ . ಆದ್ರೆ ಇಲ್ಲಿ ಯಾವಾಗಲೋ ಒಮ್ಮೆ ಟ್ರೇನು ಬರೋದಂತೂ ನಿಜ. ನೀವು ಸಾಕಷ್ಟು ಸಮಯ ಕಾದರೆ ಒಂದು ಒಳ್ಳೇ ಅನುಕೂಲಕರ ಡಬ್ಬಿಯೊಳಗೆ ಸೀಟೂ ಸಿಗಬಹುದು.
- ಆ ಟ್ರೇನಿನಲ್ಲಿ ನಾನು ಟೀಸಿಟೀಗೆ ಹೋಗ್ಬಹುದಾ?
- ನಿಮಗೆ ಟೀಸಿಟೀಗೇ ಹೋಗ್ಬೇಕನ್ನೋ ಹಟ ಯಾಕೆ? ಯಾವ್ದೋ ಒಂದು ಟ್ರೇನು ಸಿಕ್ರೆ ಸಾಕು ಅಂತ ಜನ ಕಾದಿದಾರೆ? ಅದು ಎಲ್ಲಿಗೆ ಹೋದ್ರೆ ಏನು? ನಿಮಗೆ ಮುಖ್ಯ, ಸಂತೃಪ್ತ ಭಾವನೆ ಇರಬೇಕು.
- ಅಲ್ಲಾ, ಯಾಕೆ ಕೇಳ್ದೆ ಅಂದ್ರೆ , ನಾನು ಹೋಗ್ಬೇಕಿರೋದು ಟೀಸಿಟೀಗೆ , ಅಲ್ಲಿಗೆ ಹೋಗೋಕೆ ಟಿಕೇಟ್ಟೂ ತಗೊಂಡಿದೀನಿ
- ಟಿಕೆಟ್ ವಿಷ್ಯ ಏನ್ ಹೇಳ್ತೀರಾ? ಇಲ್ಲಿ ರಾಶಿರಾಶಿ ಟಿಕೆಟ್ ತಕೊಂಡೋರಿದ್ದಾರೆ, ಜಾಣರಾದವರು ದೇಶದಲ್ಲಿರೋ ರೈಲುಮಾರ್ಗಗಳ ಎರಡೂ ಕಡೇಲಿರೋ ಎಷ್ಟು ಸಾಧ್ಯವೋ ಅಷ್ಟು ಸ್ಟೇಶನ್ನಿಗೆ ಟಿಕೆಟ್ ತಗೊಂಡಿರ್ತಾರೆ. ಟಿಕೆಟ್ ಮೇಲೆ ಅಪಾರ ಆಸ್ತಿಪಾಸ್ತಿ ಖರ್ಚು ಮಾಡಿರೋರೂ ಇದ್ದಾರೆ, ಗೊತ್ತಾ? ಒಬ್ಬ ಅಂತೂ ಟಿಕೆಟ್ ಮೇಲೆ ಎಷ್ಟು ಹಣ ಖರ್ಚು ಮಾಡಿದ್ದಾನೆ ಅಂದ್ರೆ ಆ ಹಣದಲ್ಲೇ ಅವನಿಗೆ ಬೇಕಾದ ಸ್ಥಳಕ್ಕೆ ರೈಲು ಲೈನ್ ಹಾಕಿ , ನಡುವೆ ಬೇಕಾಗೋ ಸೇತುವೆ , ಸುರಂಗ ಕೂಡ ಮಾಡಿ , ಒಂದು ರೈಲನ್ನೇ ಖರೀದೀನೂ ಮಾಡ್ಬಹುದಿತ್ತು .
- ಟೀಸಿಟೀಗೆ ಹೋಗೋ ರೈಲು ....
- ಟ್ರೇನುಗಳೇನೋ ಅಗಾಗ ಬರುತ್ವೆ ಆದ್ರೆ ಅವನ್ನ ನಂಬೋ ಹಾಗಿಲ್ಲ ಅನ್ನೋದನ್ನ ಮರೀಬೇಡಿ . ಒಂದು ಟ್ರೇನಿಗೆ ನೀವು ಹತ್ಕೊಂಡ್ರಿ ಅಂತ ತಿಳ್ಕೊಳ್ಳಿ . ಆದ್ರೆ ಅದು ನಿಮಗೆ ಬೇಕಾದ ಸ್ಥಳಕ್ಕೆ ನಿಮ್ಮನ್ನ ಮುಟ್ಟಿಸತ್ತೆ ಅಂತ ನೀವು ನಿರೀಕ್ಷೆ ಮಾಡ್ಬಾರ್ದು.
.....(ಇನ್ನೂ ಇದೆ)
.....ಇದೆಲ್ಲ ಏನಪ್ಪಾ ಅಂತ ಇದೀರಾ? ತಡೀರಿ , ಪೂರ್ತಿ ಕತೆ ಕೇಳೋರಂತೆ . ಆಮೇಲೆ ಹೇಳ್ತೀನಿ.
(ಮುಂದಿನ ಭಾಗ ಇಲ್ಲಿದೆ - http://www.sampada.net/blog/shreekantmishrikoti/22/12/2007/6749 )