ಒಂದೆರಡು ಸಾಲಿನ ಕಥೆಗಳು ಭಾಗ-3 (ವಿ.ಕ. ದಲ್ಲಿ ಪ್ರಕಟಿತ).
ಈ ಲೇಖನದ ಮೂಲ ಪೋಸ್ಟ್ ನನ್ನ ಬ್ಲಾಗಿನಲ್ಲಿದೆ. ಸಂಪದಿಗನಾಗಿ, ಸಂಪದಿಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.
ಇನ್ನೊಂದಿಷ್ಟು ಒಂದೆರಡು ಸಾಲಿನ ಕಥೆಗಳನ್ನು ಬರೆದು ನಾನು ನನ್ನ ಹುಂಬತನವನ್ನು ಪ್ರದರ್ಶಿಸುತ್ತಿದ್ದರೆ, ವಿಜಯ ಕರ್ನಾಟಕ ಪೇಪರ್ ನೋರು, ಅದನ್ನೇ ಚಂದ ಇದೆ ಅನ್ಕೊಂಡು, ಪೇಪರ್ ನಲ್ಲಿ ಹಾಕ್ತಾನೇ ಇದ್ದಾರೆ. ಇದೋ.. ಒಂದೆರಡು ಸಾಲಿನ ಕಥೆಗಳು, ಈ ಬಾರಿ ಕಥೆಗಳಲ್ಲಿ ಬರೀ ಮೆಸೇಜನ್ನೇ ಇಟ್ಟಿದ್ದೀನಿ. ಪ್ರೀತಿ-ಪ್ರೇಮದ ಕಥೆಗಳ ನಡುವೆ ಸೇರಿಸಿದ್ದರೆ ನಿಮಗೆ ಇಷ್ಟವಾಗುತ್ತಿತ್ತೇನೋ ಅಂದನಿಸುತ್ತಿದೆ.
1) Rank ಬಂದವನನ್ನು ಎಲ್ಲರೂ ಅಭಿನಂದಿಸಿದ್ದರು. ಪ್ರಶ್ನೆ ಪತ್ರಿಕೆ ತಂದುಕೊಂಡವನನ್ನು ಬಿಟ್ಟು..
2) ಹಫ್ತಾ ವಸೂಲಿ ಮಾಡುವ ಪತ್ರಕರ್ತರ ಮಾಹಿತಿಯನ್ನು ಸಂಗ್ರಹಿಸಿದ್ದನೊಬ್ಬನ ಸಾವಿನೊಂದಿಗೆ, ಸಾವಿರಾರು ಸತ್ಯಗಳು ಮುಚ್ಚಿಹೋದುವು.
3) ಏನೂ ಬರೆಯಲಾಗದೆ ಸೋತು ಹೋದ ಲೇಖಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ವಿಫಲನಾದ. ನಂತರ ತನ್ನ ಆತ್ಮ ಕಥೆಯ ಪುಸ್ತಕ ಬರೆದು ಜಯಶಾಲಿಯಾದ.
4) ಪಾಳು ಬಿದ್ದ ಮನೆಯನ್ನು ಕೆಡವಲು ಹೊರಟ ಮನೆ ಮಾಲೀಕನ ಮೇಲೆ ದಾಳಿ ನಡೆಸಿದ ಬಾವಲಿಗಳು, ತಮ್ಮ ವಿರೋಧವನ್ನು ವ್ಯಕ್ತಪಡಿಸಿದುವು.
5) ವೈದ್ಯರ ಮುಷ್ಕರದಿಂದ ಎಲ್ಲಾ ಆಸ್ಪತ್ರೆಗಳು ಮುಚ್ಚಿದ್ದವು. ಹೃದಯಾಘಾತಕ್ಕೆ ಒಳಗಾದ ವೈದ್ಯನೊಬ್ಬ ಚಿಕಿತ್ಸೆಯಿಲ್ಲದೇ ಸತ್ತು ಹೋದ.
6) 5 ವರ್ಷಗಳಿಂದ ಉದ್ಯೋಗವನ್ನು ಅರಸುತ್ತಿದ್ದ ನಿರುದ್ಯೋಗಿಗೆ ಖಾಸಗಿ ಕಂಪನಿಯ ಉದ್ಯೋಗದ ಜಾಹೀರಾತುಗಳು ಕಾಣಿಸುತ್ತಲೇ ಇರಲಿಲ್ಲ.
7) ಲವ್ ಜಿಹಾದ್ ಗೆ ಬೆಂಬಲಿಸುತ್ತಿದ್ದ ಮುಲ್ಲಾನ ಮಗಳೊಬ್ಬಳು ಹಿಂದೂ ಹುಡುಗನೊಬ್ಬನನ್ನು ಮದುವೆಯಾದಳು. ಕ್ರುದ್ಧನಾದ ಮುಲ್ಲಾ ಅವರಿಬ್ಬರ ಕತ್ತು ಕುಯ್ದಿದ್ದ.
8) ನನಗೆ ನಿನ್ನ ಜೀವನದ ಭೂತ ಕಾಲ ಬೇಡ. ನಮ್ಮ ಭವಿಷ್ಯತ್ತು ಬೇಕು ಎಂದು ಹೇಳಿದ ವರನೊಬ್ಬನ ಮಾತುಗಳು ಕೇಳಿ ಇವಳಲ್ಲಿದ್ದ ಹಳೇ ಪ್ರೀತಿಯ ಕನವರಿಕೆಗಳು ಕಾಲು ಮುರಿದುಕೊಂಡು ಕುಳಿತವು.
9) ತನಗಿಂತ ದೊಡ್ಡ ಹುದ್ದೆಯಲ್ಲಿದ್ದಾಳೆಂದು ಸಿಡುಕುತ್ತಿರುತ್ತಿದ್ದ ಗಂಡನಿಗೆ, ಅವಳ ಪೂರ್ತಿ ಸಂಬಳ ಇವನ ಜೇಬಿಗೆ ಸೇರುತ್ತಿದ್ದುದು ಅಂತಾ ದೊಡ್ಡ ವಿಷಯವೇನೂ ಅನ್ನಿಸಿರಲಿಲ್ಲ.
10) ನಾನು ನಿನ್ನನ್ನು ಪ್ರೀತಿಸುತ್ತಿಲ್ಲ ಎಂದವಳ ಕಣ್ಣಲ್ಲಿ ಸಾಗರದಷ್ಟು ನೀರಿತ್ತು.
ಇಂತಿ,
ಯಳವತ್ತಿ