ಒಂದೆರಡು ಸಾಲಿನ ಕಥೆಗಳು ಭಾಗ-4 (ವಿ.ಕ. ದಲ್ಲಿ ಪ್ರಕಟಿತ).
ಇನ್ನೊಂದಿಷ್ಟು ಒಂದೆರಡು ಸಾಲಿನ ಕಥೆಗಳು ಇವತ್ತಿನ (ದಿನಾಂಕ: 04-03-2010) ವಿಜಯ ಕರ್ನಾಟಕ ಪೇಪರ್ ನಲ್ಲಿ ಬಂದಿದೆ. ಬ್ಲಾಗೋದುಗರಿಗೆ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.
1) ರೈಲಿನ ಟಿಕೆಟ್ ಕೌಂಟರ್ ನವ ಎಲ್ಲಿಗೆ ?? ಅಂತಾ ಮೂರನೇ ಬಾರಿ ಕೇಳಿದ.. ಅವನು ಅವಳ ಕಡೆ ನೋಡಿದ. ಅವಳು ಇನ್ನೂ ಊರುಗಳ ಚಾರ್ಟ್ ನೋಡುತ್ತಿದ್ದಳು.
2) ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ಮನೆಯ ರೇಷನ್ ಖಾಲಿಯಾಗಿತ್ತು. ಅವಳು ಹೇಗೋ ಮಾಡಿ ರೇಷನ್ ತಂದು ಅಡಿಗೆ ಮಾಡಿದ್ದಳು. ಊಟ ಬಡಿಸಲು ಬಗ್ಗಿದಾಗ ತಾನು ಕಟ್ಟಿದ ತಾಳಿ ಕಾಣದಾದಾಗ, ಅವನ ಗೊಂದಲಗಳಿಗೆ ತೆರೆ ಬಿತ್ತು.
3) ಅವತ್ತೇ ಅವರು ಮನೆ ಖಾಲಿ ಮಾಡಿಕೊಂಡು ಊರು ಬಿಟ್ಟು ಹೋಗಬೇಕಾಗಿತ್ತು. ಮುದ್ದು ಮಗ ಎದುರುಮನೆಯ ತನ್ನ ಗೆಳೆಯ ಊರಿಂದ ಬರುವವರೆಗೂ ಇಲ್ಲಿಯೇ ಇರುತ್ತೇನೆಂದು ಹಠ ಮಾಡಿ ಕೂತಿದ್ದ. ಇವನ ಆಟದ ಸಾಮಾನನ್ನು ಅವನು ಕಡ ಒಯ್ದಿದ್ದ.
4) ಜೀವನದಲ್ಲಿ ಕೊನೆ ಬಾರಿ ನಡೆಸಿಕೊಡಬೇಕಾಗಿದ್ದ ಸಂಗೀತ ಸಂಜೆಯ ಕಾರ್ಯಕ್ರಮದ ದಿನದ ಮುಂಜಾವಿನಲ್ಲಿ ಇವನ ದನಿ ಒಡೆದು ಹೋಗಿತ್ತು.
5) ಆಸ್ಪತ್ರೆಯ ಐ.ಸಿ.ಯು. ವಾರ್ಡಿನಲ್ಲಿ ಸಾವಿನ ಕ್ಷಣಗಳನ್ನು ಎಣಿಸುತ್ತಾ ಮಲಗಿದ್ದ ಮುದುಕನೊಬ್ಬ. ಪ್ರತಿ ಬಾರಿ ಮೊಮ್ಮಗನ ಮುದ್ದು ಮಾತುಗಳನ್ನು ಕೇಳಿದಾಗಲೆಲ್ಲಾ ಇನ್ನಷ್ಟು ಕ್ಷಣಗಳಿಗೆ ಮುಂದೂಡುತ್ತಿದ್ದ.
6) ಜನಸಂಖ್ಯಾ ನಿಯಂತ್ರಣಾಧಿಕಾರಿ ಮನೆಯ ನಾಯಿಯೊಂದು ಒಮ್ಮೆಲೆ 7 ಮರಿಗಳನ್ನು ಹಾಕಿ ತನ್ನ ಬಲ ಪ್ರದರ್ಶಿಸಿತು.
7) ಕರೆಂಟ್ ಇಲ್ಲದ ಮನೆಗೆ ಲಾಟೀನು ಹಿಡಿದು ಬಂದವಳು ಜೀವನ ಪೂರ್ತಿ ಬೆಳಗಿದಳು.
8) ಜಗಳವಾಡಿಕೊಂಡ ಸಹೋದ್ಯೋಗಿಗಳನ್ನು ಮ್ಯಾನೇಜರು ಕೊಟ್ಟ ಪ್ರಾಜೆಕ್ಟ್ ವರ್ಕ್ ಒಂದು ಮಾಡಿತು.
9) ಉತ್ತಮವಾಗಿ ಕೆಲಸ ಮಾಡುತ್ತಿದ್ದ ಪ್ರತಿಷ್ಠಿತ ಕಂಪನಿಯ ನೌಕರನೊಬ್ಬ ರಿಷೆಷನ್ ಭಯದಿಂದ ಇನ್ನೊಂದು ಕಂಪನಿಗೆ ಅಪ್ಲಿಕೇಷನ್ ಹಾಕಿ, ಇದ್ದ ಕೆಲಸವನ್ನು ಕಳೆದುಕೊಂಡ.
ಇಂತಿ ನಿಮ್ಮ ಪ್ರೀತಿಯ,
ಯಳವತ್ತಿ.
ಬ್ಲಾಗಿನ ಹೊಸ ಓದುಗರಿಗಾಗಿ ಹಳೆಯ ಕೊಂಡಿಗಳು:-
1) ಒಂದೆರಡು ಸಾಲಿನ ಕಥೆಗಳು ಭಾಗ-1
2) ಒಂದೆರಡು ಸಾಲಿನ ಕಥೆಗಳು ಭಾಗ-2
3) ಒಂದೆರಡು ಸಾಲಿನ ಕಥೆಗಳು ಭಾಗ-3