ಒಬ್ಬ ಎಲ್ಲರಿಗಾಗಿ, ಎಲ್ಲ ಒಬ್ಬನಿಗಾಗಿ - All of us or None
ನಿನ್ನ ದಾಸ್ಯದ ಸಂಕಲೆಯ ಕಳೆವರಾರು?
ನಿನ್ನಂತೆ ಕತ್ತಲೆಯಲೇ ಕೊಳೆತ ಹತಭಾಗ್ಯರು ..!
ಕಣ್ಣಲ್ಲಿ ಹರಿವ ನೀರ ಕಾಣುವರು.
ಸದ್ದಿಲ್ಲದ ಸುಳಿವ ಆಳಲ ಕೇಳುವರು.
ನಿನ್ನಂತೆ ನರಳಿದವರಷ್ಟೇ, ನಿನ್ನ ಬಿಡಿಸುವವರು.. !
ಮಾಡೋಣ ಇಲ್ಲವೇ ಮಡಿಯೋಣ..
ಒಬ್ಬ ಎಲ್ಲರಿಗಾಗಿ, ಎಲ್ಲ ಒಬ್ಬನಿಗಾಗಿ
ದುಡಿಯೋಣ ಇಲ್ಲವೇ ಮಡಿಯೋಣ..
ಗುಂಡೇಟೆ ಇರಲಿ, ಹೂಮಳೆಯೇ ಬರಲಿ
ಎಲ್ಲ ನಮಗಿರಲಿ, ಇಲ್ಲ ಏನೂ ಬರದಿರಲಿ
ಒಬ್ಬ ಎಲ್ಲರಿಗಾಗಿ, ಎಲ್ಲ ಒಬ್ಬನಿಗಾಗಿ
ಹಸಿದ ಹೊಟ್ಟೆಗಳಿಗೆ ಅನ್ನವಿಕ್ಕುವರಾರು?
ತುಣುಕು ರೊಟ್ಟಿಗಾಗಿ ಕಾದವನಾದರೆ ನೀನು
ನಿನ್ನಂತೆಯೇ ಹಸಿದವರು ನಾವು
ಜೊತೆಯಾಗಿ ಮುನ್ನಡೆವ ದಾರಿ ತೋರುವರು
ಹಸಿದವರೇ ನಿನಗೆ ಊಟವಿಕ್ಕುವವರು...!
ಒಬ್ಬ ಎಲ್ಲರಿಗಾಗಿ, ಎಲ್ಲ ಒಬ್ಬನಿಗಾಗಿ
ದುಡಿಯೋಣ ಇಲ್ಲವೇ ಮಡಿಯೋಣ..
ಗುಂಡೇಟೆ ಇರಲಿ, ಹೂಮಳೆಯೇ ಬರಲಿ
ಎಲ್ಲ ನಮಗಿರಲಿ, ಇಲ್ಲ ಏನೂ ಬರದಿರಲಿ
ಒಬ್ಬ ಎಲ್ಲರಿಗಾಗಿ, ಎಲ್ಲ ಒಬ್ಬನಿಗಾಗಿ
ತುಳಿತಕೊಳಗಾದ ನಿನ್ನ ಸೇಡು ತೀರಿಸುವರಾರು?
ಒದೆ ತಿಂದು ನರಳಿರುವ ನಿನ್ನಣ್ಣತಮ್ಮರು.
ಗಾಯದ ನೋವಿಂದ ಕೂಗುತಿಹರು
ಮಾಯದಾ ನೋವಲ್ಲೂ ಬಲವ ಪಡೆಯುವರು.
ಒಟ್ಟಾಗಿ ಮುನ್ನುಗ್ಗಿ ಹಗೆಯು ತೀರಿಪರು.
ಒಬ್ಬ ಎಲ್ಲರಿಗಾಗಿ, ಎಲ್ಲ ಒಬ್ಬನಿಗಾಗಿ
ದುಡಿಯೋಣ ಇಲ್ಲವೇ ಮಡಿಯೋಣ..
ಗುಂಡೇಟೆ ಇರಲಿ, ಹೂಮಳೆಯೇ ಬರಲಿ
ಎಲ್ಲ ನಮಗಿರಲಿ, ಇಲ್ಲ ಏನೂ ಬರದಿರಲಿ
ಒಬ್ಬ ಎಲ್ಲರಿಗಾಗಿ, ಎಲ್ಲ ಒಬ್ಬನಿಗಾಗಿ
ನಿನಗಾಗಿ ಮುನ್ನುಗ್ಗಿ ಹೋರಾಡುವರು ಯಾರು ?
ನಿನ್ನಂತೆ ಬೆನ್ನ ಬಗ್ಗಿಸಿ ಮಣಿದವರು..!
ಬಾಸುಂಡೆ ಏಟಿ೦ದ ಛಲ ಬೆಳೆಸಿಕೊಂಡೋರು
ಅಳುವಿಂದ, ಹಸಿವಿಂದ ಪಾಠ ಕಲಿತೋರು
ನುಗ್ಗುವರು ಇಂದು, ನುಗ್ಗುವರು ಇಂದು
ಒಬ್ಬ ಎಲ್ಲರಿಗಾಗಿ, ಎಲ್ಲ ಒಬ್ಬನಿಗಾಗಿ
ದುಡಿಯೋಣ ಇಲ್ಲವೇ ಮಡಿಯೋಣ..
ಗುಂಡೇಟೆ ಇರಲಿ, ಹೂಮಳೆಯೇ ಬರಲಿ
ಎಲ್ಲ ನಮಗಿರಲಿ, ಇಲ್ಲ ಏನೂ ಬರದಿರಲಿ
ಒಬ್ಬ ಎಲ್ಲರಿಗಾಗಿ, ಎಲ್ಲ ಒಬ್ಬನಿಗಾಗಿ
ಬ್ರೆಕ್ಟ್ ಮಹಾಶಯನ All of Us or None ಪದ್ಯದ ಭಾವಾನುವಾದ... ಮೂಲ ಇಲ್ಲಿದೆ.
Comments
ಉ: ಒಬ್ಬ ಎಲ್ಲರಿಗಾಗಿ, ಎಲ್ಲ ಒಬ್ಬನಿಗಾಗಿ - All of us or None
ಧನ್ಯವಾದಗಳು, ಮೊದ್ಮಣಿಯವರೇ. ನನಗೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿನ ನನ್ನ ಅನುಭವಗಳು ನೆನಪಾದವು!