ಒಲವಿನೋಲೆ
ಮನದನ್ನೆ,
ಕಣ್ರೆಪ್ಪೆ ಮಿಟುಕುವುದರೊಳಗೆ ಅದಾವ ಒಲವಿನಂಬನೆಸೆದೆಯೋ ನಾ ಕಾಣೆ. ವಿರಹದುರಿಯಿಂದ ಬೆಂದು ಬರಡಾಗಿದ್ದ ಎನ್ನೆದೆಗೆ ಒಲುಮೆಯ ತಂಪು ಮಳೆಗರೆದೆ ನೀನು. ಚೈತ್ರ ಪಲ್ಲವಿಸುವ ವೇಳೆ ಎನಗಾಯ್ತು ನೀ ಬಂದ ಘಳಿಗೆ. ತುಸು ಕೋಪ, ಹುಸಿ ಮುನಿಸು ಮೆಳೈಸಿ ನಮ್ಮಿಬ್ಬರ ಪ್ರೇಮಾಂಕುರವಾದದ್ದು ಈಗ ಇತಿಹಾಸ.
ಬೆಚ್ಚನೆಯ ಕಂಬಳಿ ಹೊದ್ದು ಮಲಗಿದ್ದ ಎನ್ನೆದೆಯ ನವಿರು ಭಾವನೆಗಳಿಗೆ ಹೊಂಗನಸಾಗಿ ನೀ ಬಂದೆ. ಹುಡುಗಿ ನಿನಗೆ ಗೊತ್ತೇ?, ಅಂದು ಸಂಕ್ರಾಂತಿಯ ಕುಸುರೆಳ್ಳು, ಸಮಿ ಹಬ್ಬದ ಬನ್ನಿಯ ವಿನಿಮಯದ ನೆಪದಲ್ಲಿ ನಾವು ಉಲಿದ ಪ್ರೇಮದ ಮೊದಲ ನಿವೇದನೆ ನಮ್ಮೀ ಹೃನ್ಮನದಲ್ಲಿ ಒಲವು ಅಂಕುರಗೊಂಡ ಮಧುರ ಘಳಿಗೆ. ನನಗೆ ನೀನು, ನಿನಗೆ ನಾನು ಬಿಡದಂತೆ ಕನಸಾಗಿ ಬಂದು ಕಾಡಿದ ನೆನಪು ಅಂದಿಗೆ ಕೊನೆ ಎಂದುಕೊಂಡೆವು. ಬಿಡಲಿಲ್ಲ ಮಾಯೆ, ಹತ್ತಿರವಿದ್ದೂ ದೂರವಾಗಿ, ದೂರವಿದ್ದೂ ಹತ್ತಿರವಾಗಿ ಕಾಡಿದ ಇರುಳದು ನಮ್ಮ ಕನಸಿಗೆ ಉರುಳಾಯ್ತು. ಆಗ ನನಗನಿಸಿದ್ದು - " ನಿನ್ನ ಬರುವೆನಗೆ ಪಲ್ಲವಿಪ ವಸಂತ, ನಿನ್ನ ಉಲಿತವೆನಗೆ ಶುಕ-ಪಿಕಗಳ ಕೂಜನ. ನೀ ನಡೆದ ದಾರಿ ಹೂ ಬನದ ಹಾದಿ, ನಿನ್ನೆಡೆಯಿಂದ ಬೀಸಿದ ಗಾಳಿ, ಬಿಸಿಯಿದ್ದರೂ ಮನಕೆ ಕಚಗುಳಿ ಇಟ್ಟು ಪುಳಕಿತಗೊಳಿಸಿದ ತಂಗಾಳಿ ".
ಚಂದುಟಿಯ ಚಲುವೆ, ಅಂದೊಂದುದಿನ ನಿನಗಾಗಿ ಕಾಯುತ್ತ ಮನದ ಕದ ತೆರೆದು, ಹಸಿದ ಭಾವಕೆ ಬಸಿರು ತುಂಬಿ ನೀ ಅಡಿ ಇಟ್ಟೆಡೆ ಹೃದಯ ಹಾಸಿದೆ. ನಿನ್ನಾಗಮನ ಅರುಣೋದಯ. ಏನೋ ಪುಳಕ ಭಾವನೆಗಳ ಮೈ ಜಳಕ. ನೀ ಬೀರಿದ ಮಂದಹಾಸ, ಗಾಳಿಯ ಮೈ ತೊಗಲು ಸವರಿ ಕಣ್ಪರದೆ ಮೇಲೆ ಮರೆಯಾದ ಹಾಗೆ ಮತ್ತೆ ಎಂದು ಬರುವೆಯೋ ಎಂಬ ತವಕದೀಕ್ಷೆಯಲಿ ಯುಗ ಕಳೆದೆ.
ನಿನಗೆ ನೆನಪಿದೆಯೇ ಗೆಳತಿ ಅಂದು ನೀನಾಡಿದ ಮಾತು. " ನಮ್ಮ ಮಾತುಗಳು ಹೃದಯ ಗೀತೆಗಳು. ಕನಸುಗಳು ಗತಕಾಲದ ಅರಮನೆಯ ಒಡ್ಡೋಲಗದ ನೆನಪುಗಳು. ನಮ್ಮ ಭೇಟಿ ಅಷ್ಟಾವಂಕ - ಅಮೃತಮತಿಯರ ಮಿಲನಗಳು. ಏಳು ಸಮುದ್ರ ದಾಟಿ ಮೇಘದೂತನಿಂದ ಹೊತ್ತು ತಂದ ಪ್ರೇಮಪತ್ರದಂತೆ. ನನ್ನೊಲವಿನೋಲೆ ". ಹುಚ್ಚು ಮನದ ಕುದುರೆ ಏರಿ ಪಯಣಿಸುವ ನಿನ್ನ ಮನಕ್ಕೆ ಏನೆನ್ನಬೇಕೋ ತಿಳಿಯದೆ ನನ್ನೇ ನಾ ಮರೆತುಹೋದೆ.
ಆದರೂ, ಒಲವ ಕೂಸೆ, ನೀ ಮರೆಯಾದ ಕ್ಷಣ ನಿನ್ನೊಲವ ಕೂರ್ಗಣೆಯಿಂದ ಘಾಸಿಯಾದ ಈ ಹೃದಯ - ಮನಸುಗಳೆರಡೂ ನಿನ್ನ ಸಾಂಗತ್ಯದ ಸರಸ-ಸಲ್ಲಾಪದ ಮುಲಾಮು ಲೇಪನಕ್ಕಾಗಿ ಕಾಯುತ್ತೆ. ಹೃದಯದ ಒಳ ನೋಟ, ಕಣ್ಬೇಟ, ಮನದಾಳದ ಒಲವ ಒಸಗೆ- ಪ್ರೇಮ ಬೆಸುಗೆಯಾದಾಗಲೇ ಮನದ ತಿಲ್ಲಾನದ ದನಿಗೆ ಬೆರಳ ಬೆಸುಗೆಯ ಆಟ ಸಂಗೀತದ ರಿದಮ್ಮಾಗಿ ಅನುರಣಿಸುತ್ತೆ. ನಿನ್ನ ಮರೆತು ನಾ ಹೇಗಿರಲಿ ಎಂಬ ನನ್ನುಲಿತಕ್ಕೆ ನಿನ್ನ ಹುಸಿ ಕೋಪವೆ ಸಾಂತ್ವನದ ನುಡಿಯಾಗಿ, ನಿನ್ನಗಲಿಕೆಯಿಂದ ನೊಂದರೂ ಪುನಃ ನಿನ್ನಾಗಮನಕೆ ಚಾತಕ ಪಕ್ಷಿಯಂತೆ ಕಾಯುವೆ.
ಸಂಗಾತಿ, " ನೀರಾಗ ಇದ್ದೂ ಇದ್ದೂ ಯಾ ಕಲ್ಲೂ ಮೆತ್ತಗಾಗಲಿಲ್ಲ. ಆದ್ರ ಒಂದು ದಿನ ನಿನ್ನ ನೆನೆದು ನಾ ಎಷ್ಟು ಮೆತ್ತಗಾದೆ ಗೊತ್ತೇ " ಎನ್ನುವ ಕವಿಯೊಬ್ಬರ ಹಾಯಿಕು ನೆನಪಾಗಿ ಮನದಲ್ಲೇ ನಿನಗಾಗಿ ಕನವರಿಸಿದೆ.
ಪ್ರಿಯೆ, ನೀ ಧರಿತ್ರಿಯಾಗಿ ನಾ ಮೇಘವಾಗಿ ಒಲವಧಾರೆಯಾಗಿ ಹನಿದು ಭಾವಕ್ಕೆ ತಂಪೆರೆವಂತೆ. ನೀ ಪ್ರಕೃತಿಯಾಗಿ, ನಾ ಗಾಳಿಯಾಗಿ ನೇವರಿಸುವಂತೆ. ನೀ ಹಕ್ಕಿಯಾಗಿ ನಾ ಕೊರಳ ಇಂಚರವಾದಂತೆ. ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ, ನಾದ - ನಿನಾದಗಳ ಲಯ ಮೇಳೈಸಿದಂತೆ ನಮ್ಮನ್ನೇ ನಾವು ಮರೆತುಬಿಡೋಣ ಬೆಟ್ಟ-ಗುಡ್ಡ, ಕಾಡು-ಮೇಡು, ನದಿ-ಸರೋವರಗಳಲಿ ಮಿಂದೆದ್ದು ಕಲ್ಪನಾ ವಿಲಾಸದಲಿ ತೇಲುತ್ತ.
ಮತ್ತದೇ ಕವಿಯ ಹಾಯಿಕು ನೆನಪಾಯ್ತು ನೋಡು ಸಿಂಗಾರಿ. " ಪ್ರೇಮ ಅಂದ್ರ ಹಾಲಿನ ತಂಬ್ಗಿ ಇದ್ದಂಗ, ಪ್ರೀತಿ ಅಂದ್ರ ಸಕ್ರಿ ಹರಳಿದ್ದಂಗ. ಒಂದಕೊಂದು ಬೆರತರ ಬದುಕು ಬಂಗಾರದಂಗ ". ಇದು ಎಷ್ಟು ನಿಜ ಅಂತಿ ಚಲುವಿ. ನಮ್ಮ ಜೀವನವೂ ಹೀಗೇ ಇರಲಿ ಅನ್ನುವಾಸೆ. ಅದೇನೋ ನಾ ಒಲಿದಂತೆ ಉಲಿದ ಅನುರಾಗದ ಅನುರಣನದಲ್ಲಿ ಹೀಗೆಯೇ ದಿನದೂಡುತಿರುವೆ ಗೆಳತಿ ನಿನ್ನಾಗಮನದ ನಿರೀಕ್ಷೆಯಲ್ಲಿ ಈ ಒಲವಿನೋಲೆ ಹಿಡಿದು. ಪಾರಿವಾಳ ಕೈಲಿ ಕಳುಹಿಸಲು ಮನಸಿಲ್ಲದೆ. ನೀ ಬಂದೇ ಬರುತ್ತಿ ಎಂದು.
ಇಂತಿ ನಿನ್ನೊಲವ ಒಡ್ಡೋಲಗದ ರಾಯಭಾರಿ.