ಒಳ್ಳೆಯ ಮಾತಿಗೇಕೆ ದಾರಿದ್ರ್ಯ?

ಒಳ್ಳೆಯ ಮಾತಿಗೇಕೆ ದಾರಿದ್ರ್ಯ?

ಆತನಿಗೆ ಬಹುದೂರದಿಂದಲೇ ನಾನು ಅಲ್ಲಿರುವುದು ಗೊತ್ತಾಗಿದೆ. ಓಡೋಡಿ ಬಂದವನೇ… “ದೂರದಿಂದಲೇ ನೋಡಿದೆ, ಎಲ್ಲಿ ರಿಕ್ಷಾ ಹತ್ತಿ ಹೊರಟು ಬಿಡುತ್ತೀರೋ ಅಂತಾ ಓಡೋಡಿ ಬಂದೆ”..ಏದುಸಿರು ಬಿಡುತ್ತಿದ್ದ. ಪಾಪ! ನನ್ನನ್ನು ನೋಡುವ ಏಕ ಮಾತ್ರ ಉದ್ಧೇಶದಿಂದ ಓಡೋಡಿ ಬಂದಿದ್ದಾನೆ! ಆದರೆ ನನಗೆ  ಆತನ ನೆನಪೇ ಆಗುತ್ತಿಲ್ಲ.

ಆತನೇ ಮಾತು ಮುಂದುವರೆಸಿದ…

“ಅತ್ತಿಗೆ ಹೇಗಿದ್ದಾರೆ? ಸುಬ್ರಹ್ಮಣ್ಯ, ಶ್ರೀಕಂಠ ಹೇಗಿದ್ದಾರೆ?”

  “ಚೆನ್ನಾಗಿದ್ದಾರೆ, ನೀವು?” …ನನಗೆ ಇನ್ನೂ ಆತನ ನೆನಪು ಬಂದೇ ಇಲ್ಲ.ಇಷ್ಟೊಂದು ಆತ್ಮೀಯತೆಯಿಂದ ಮಾತನಾಡುತ್ತಿರುವ ಆತನನ್ನು ಎಲ್ಲೋ ನೋಡಿದಂತಿದೆ, ಅಷ್ಟೆ. ನೆನಪು ಬರುತ್ತಿಲ್ಲವಲ್ಲಾ!.....ಅಷ್ಟು ಹೊತ್ತಿಗೆ ನನ್ನ ಮಿತ್ರ ರಮೇಶ್ ಸಮೀಪ ಬಂದ. “ಹೋ, ಏನಪ್ಪಾ ಜಗದೀಶ್? ಹೇಗಿದ್ದೀಯಾ? ಅಂದ

ಬದುಕಿದೆಯಾ ಬಡಜೀವವೇ ಅಂದುಕೊಂಡೆ. ಹೌದು ಆತ ಜಗದೀಶ್. ಸಕಲೆಶಪುರದಲ್ಲಿ ಸಂಘದ ಪ್ರಚಾರಕ ನಾಗಿದ್ದವನು.

ಜಗದೀಶ್ ಮಾತು ಮುಂದುವರೆಸಿದ ”ನಾನು ನಿಮ್ಮನ್ನೂ ಅತ್ತಿಗೆಯನ್ನೂ ನೆನಪು ಮಾಡಿಕೊಳ್ಳದ ದಿನವಿಲ್ಲ”

ಈಗ ಇನ್ನೂ ಇಕ್ಕಟ್ಟಿಗೆ ಸಿಲುಕಿದೆ. ಇಷ್ಟೊಂದು ಆತ್ಮೀಯವಾಗಿ ವರ್ತಿಸುವ ಜಗದೀಶನ ನೆನಪು ನನಗೆ ಬಾರದಿದ್ದಕ್ಕೆ ನಾಚಿಕೆಯಾಯ್ತು. ತೋರಿಸಿಕೊಳ್ಳಲಿಲ್ಲ.

“ಅವತ್ತು ನಾನು ಆರೋಗ್ಯತಪ್ಪಿ ಹಾಸನದ ಅಸ್ಪತ್ರೆಗೆ ಸೇರಿದಾಗ ನಿಮ್ಮ ಮನೆಯಲ್ಲಿ ನನಗೆ ಮಾಡಿರುವ ಸೇವೆ, ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ನಿಮ್ಮ ಮನೆಯಲ್ಲಿ ಒಂದುವಾರ ವಿಶ್ರಾಂತಿ ಪಡೆದೆ. ಅತ್ತಿಗೆಯವರು ಮಾಡಿದ ಉಪಚಾರವನ್ನು ನಾನು ಹೇಗೆ ತಾನೇ ಮರೆಯಲಿ? “-ಜಗದೀಶ ಮಾತನಾಡುತ್ತಿದ್ದ. ಆಗ ಸ್ವಲ್ಪ ನೆನಪಾಯ್ತು. ಹೌದು ಇತ್ತೀಚೆಗೆ ನನಗೆ ತುಂಬಾ ಮರೆವಿದೆ. ಆದರೆ ನನ್ನ ಚಿಕ್ಕಂದಿನ ಕಷ್ಟದ ದಿನಗಳಲ್ಲಿ  ನನಗೆ ಸಹಾಯ ಮಾಡಿದವರ ನೆನಪು ನನ್ನ ಸ್ಮೃತಿಯಲ್ಲಿ ಖಾಯಂ ಆಗಿ ಉಳಿದಿದೆ. ಆದರೆ ಕಷ್ಟಗಳು ದೂರವಾದಮೇಲೆ  ಸಾಮಾನ್ಯ ಮತ್ತು ಸುಖದ ಜೀವನದ ಘಟನೆಗಳು ಮರೆತು ಹೋಗಿವೆ. ಹೌದು ಕಷ್ಟದಲ್ಲಿ ನೆರವಾದವರ ನೆನಪು ಮಾಸ ಬಾರದು. ಏನಾದರೂ ಒಳ್ಳೆಯ ಕೆಲಸ ಮಾಡಿದ್ದರೆ ಮರೆತು ಬಿಡಬೇಕು.

 ಇನ್ನೊಂದೆರಡು ಸತ್ಯ ಘಟನೆಯನ್ನು ಬರೆಯುವೆ. ಯಾವುದೂ ಅಹಂಕಾರಕ್ಕಾಗಿ ಅಲ್ಲ. ಬದಲಿಗೆ  ಯುವ ಪೀಳಿಗೆಗೆ ಏನಾದರೂ ಪ್ರಯೋಜನ ವಾದರೆ ಆಗಲೀ, ಎಂದು.

ನೀವು ಒಳ್ಳೆಯ ಮನಸ್ಸಿನಿಂದ ಒಬ್ಬರಿಗೆ ಶುಭವಾಗಲೆಂದು ಏನಾದರೂ ಹೇಳಿದ್ದರೆ ನೀವು ಮರೆತರೂ ಆ ಮಾತನ್ನು ಕೇಳಿ ಅದರ ಸತ್ಪರಿಣಾಮಕ್ಕೆ ಪಾತ್ರರಾಗಿದ್ದವರು ಜೀವನದಲ್ಲಿ ಹೇಗೆ ಅಳವಡಿಸಿಕೊಂಡಿರುತ್ತಾರೆಂಬುದಕ್ಕೆ   ಎರಡು ಘಟನೆಗಳನ್ನು ಉಲ್ಲೇಖಿಸುವೆ.

ಘಟನೆ: 1

 ಆಗ ನಾನು ಹಿಂದಿನ ಕೆ.ಇ.ಬಿ ಇಲಾಖೆಯಲ್ಲಿ ಹಾಸನ ವಿಭಾಗ ಕಛೇರಿಯಲ್ಲಿ ವೆಹಿಕಲ್ ಫೋರ್ ಮನ್ ಜವಾಬ್ದಾರಿ ನಿರ್ವಹಿಸುತ್ತಿದ್ದೆ. ಲಾರಿ ಚಾಲಕ ನಾಗರಾಜ್ ಮದ್ಯವ್ಯಸನಿ. ಕುಡಿದು ವಾಹನ ಚಾಲನೆ ಮಾಡುತ್ತಾನೆ, ಅಸಭ್ಯವಾಗಿ ವರ್ತಿಸುತ್ತಾನೆಂದು ಸಸ್ಪೆಂಡ್ ಮಾಡಲಾಗಿತ್ತು. ನಾನು ಅಲ್ಲಿ ಕರ್ತವ್ಯಕ್ಕೆ  ವರದಿ ಮಾಡಿಕೊಳ್ಳುವಾಗಲೆ  ಆತ ಸಸ್ಪೆಂಡ್ ಆಗಿದ್ದ. ನಿತ್ಯವೂ ಬೆಳಿಗ್ಗೆ ಹಾಜರಿ ಹಾಕಿದ ಮೇಲೆ   ಕಛೇರಿಯ ಬಾಗಿಲ ಮುಂದೆ ಹಾಕಿದ್ದ ಬೆಂಚಿನ ಮೇಲೆ ಸಂಜೆಯವರೆಗೂ ಕುಳಿತು ಹೋಗುತ್ತಿದ್ದ. ನನಗೋ ಹೊಸದು ಬೇರೆ. ನಾಲ್ಕಾರು ದಿನ ನೋಡಿದೆ. ಒಂದು ದಿನ ಕಛೇರಿಯ ಒಳಗೆ ಕರೆದೆ.” ನಿನಗೆ  ಏನಾಯ್ತು?” ಕೇಳಿದೆ.

  “ಕುಡಿದು ಡ್ರೈವ್ ಮಾಡ್ತೀನಿ ಅಂತಾ ಸಸ್ಪೆಂಡ ಮಾಡಿದಾರೆ ಸಾರ್.” –ಎಂದ

  -ಒಂದು ಕೆಲಸ ಮಾಡ್ತೀಯಾ?

   -ಹೇಳಿ ಸಾರ್

   “ ಇವತ್ತಿನಿಂದ ಒಂದು ತಿಂಗಳು  ನೀನು ಯಾವತ್ತೂ ಕುಡಿಯ ಕೂಡದು. ನನಗೆ ಅದು ಗೊತ್ತಾಗಬೇಕು. ನನಗೆ ಸಮಾಧಾನವಾದರೆ 31 ನೇ ದಿನವೇ ನಿನಗೆ ಲಾರಿ ಕೊಡಿಸ್ತೇನೆ”- ಎಂದೆ

   “ಆಯ್ತು ಸಾರ್” ಎಂದ

ನಮ್ಮ ಎಗ್ಸಿಕ್ಯೂಟೀವ್ ಇಂಜಿನಿಯರ್ ಶ್ರೀ ಚನ್ನಪ್ಪಶೆಟ್ಟರಿಗೆ ವಿಷಯ ತಿಳಿಸಿದೆ. ಅವರು ಹೇಳಿದರು” ಎಲ್ಲರೂ  ಅವನನ್ನು ಸರಿಮಾಡಿಯಾಯ್ತು, ನೀವು ಈಗ ಹೊಸದಾಗಿ ಮಾಡೋಕೆ ಹೊರಟಿದ್ದೀರಿ. ಹೋಗಿ ನಿಮ್ಮ  ಕೆಲಸಾ ನೋಡ್ರೀ”-  ಬೇಸರದ ನುಡಿಗಳನ್ನೇ ಆಡಿದ್ದರು.

 “ ಸರ್, ಒಂದು ತಿಂಗಳು ಕಳೆಯಲಿ, ನನ್ನ ಪ್ರಯೋಗ ಏನಾಗುತ್ತೆ, ಹೇಳ್ತೀನಿ, ಎಂದು ನನ್ನ ರೂಮೊಳಗೆ ತೆರೆಳಿದೆ.

   ದಿನಗಳು ಕಳೆಯಿತು, ಒಂದು ವಾರ ವಾಯ್ತು,ಎರಡು ವಾರ ವಾಯ್ತು. ಆ ಹೊತ್ತಿಗಾಗಲೆ  ನಾಗರಾಜನ ನಡವಳಿಕೆಯೇ ಬದಲಾಯಿಸಿತ್ತು. ಮೂರು ವಾರ ಕಳೆದ ಕೂಡಲೇ ನಮ್ಮ ಎಗ್ಸಿಕ್ಯೂಟೀವ್ ಇಂಜಿನಿಯರ್ ಛೇಂಬರಿಗೆ ನಾಗರಾಜನನ್ನು ಕರೆದುಕೊಂಡು ಹೋದೆ” ಸರ್ ನನಗೆ  ನಾಗರಾಜ್ ಬಗ್ಗೆ ಭರವಸೆ ಬಂದಿದೆ. ನಾಗರಾಜ್ ಬದಲಾಗಿದ್ದಾನೆ” ವಿಶ್ವಾಸದಿಂದ ಹೇಳಿದೆ.

 ನಮ್ಮ ಎಗ್ಸಿಕ್ಯೂಟೀವ್ ಇಂಜಿನಿಯರ್ ರವರಿಗೂ ಅವನ ನಡವಳಿಕೆ ಬಗ್ಗೆ ಭರವಸೆ ಬಂದಿತ್ತು. ಇಲಾಖೆಯ ನಿಯಮಗಳನ್ನು ಅನುಸರಿಸಿ ನಾಗರಾಜನಿಗೆ ಲಾರಿ ಕೊಟ್ಟಿದ್ದಾಯ್ತು. ಅಂದಿನಿಂದ ನಿಯತ್ತಿನಿಂದ ದುಡಿದ ನಾಗರಾಜ್ ತನ್ನ ಕೆಟ್ಟ  ಹವ್ಯಾಸಗಳಿಂದ ದೂರವಾಗಿ ಸಂಬಳದ ಹಣವನ್ನು ಉಳಿಸುತ್ತಾ ಬಂದ. ಮೂರ್ನಾಲ್ಕು ವರ್ಷ ಕಳೆದಿರಬಹುದು. ನಾನು ಬೇರೆ ಕಛೇರಿಯಲ್ಲಿ ಹೊಳೇ ನರಸೀಪುರದಲ್ಲಿದ್ದೆ. ಅಲ್ಲಿಗೇ ಹುಡುಕಿಕೊಂಡು ಬಂದ ನಾಗರಾಜ್ ಕೈನಲ್ಲಿ ಅಮಂತ್ರಣ ಪತ್ರಿಕೆ ಇತ್ತು” ಸಾರ್ ನಿಮ್ಮ ಆಶೀರ್ವಾದದಿಂದ ನಾನೊಬ್ಬ ಮನುಷ್ಯನಾಗಿ ಹೊಸದಾಗಿ ಮನೆಯನ್ನು ಕಟ್ಟಿದ್ದೇನೆ, ಬಂದು ಆಶೀರ್ವಾದ ಮಾಡಬೇಕೆಂದು ಆಹ್ವಾನಿಸಿದ”. ಈಗ ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ ಹನಿಹನಿಯಾಗಿ ಉದುರಿತ್ತು.

ಘಟನೆ: 2

ಇದೊಂದು ಅತೀ ಚಿಕ್ಕ ಘಟನೆ. ಒಳ್ಳೆಯ ಮಾತು ಎಂತಹ ಪರಿಣಾಮ ಬೀರುತ್ತದೆ, ಎಂಬುದಕ್ಕೆ ಅಷ್ಟೆ. ನಮ್ಮ ಹಳ್ಳಿಯ ಈಶ್ವರ ದೇವಾಲಯದ ಮುಂದೆ ನನ್ನ ಬಂಧು ಅನಂತ ಕಡ್ಡಿ ಪೊರಕೆ ಹಿಡಿದು ಗುಡಿಸುತ್ತಿದ್ದ.”ಏನಪ್ಪಾ ದೇವಾಲಯದ ಆವರಣದ ಕಸ ಗುಡಿಸ್ತಾ ಇದೀಯಲ್ಲಾ! ಎಂದೆ

“ ಯಾರ ಸಹವಾಸವೂ ಬೇಡ, ನಿನ್ನಷ್ಟಕ್ಕೆ ನೀನು ನಿತ್ಯವೂ ಈಶ್ವರ ದೇವಸ್ಥಾನದ ಆವರಣವನ್ನು    ಗುಡಿಸಿ ನೀರು ಚಿಮುಕಿಸಿ, ರಂಗೋಲಿ ಹಾಕಿಸಿಬಿಡು”  ಅಂತಾ ನೀನೇ ಹೇಳಿದ್ದೆಯಲ್ಲಾ,ಮರೆತೇ ಬಿಟ್ಟೆಯಾ? ನೀನು ಹೇಳಿ 20ವರ್ಷ ಆಗಿರಬಹುದು. ಅವತ್ತಿನಿಂದ ತಪ್ಪದೆ ಮಾಡುತ್ತಿರುವೆ. ಇಲ್ಲಿ ನಲ್ಲಿಯನ್ನೂ ನಾನೇ ಹಾಕಿಸಿರುವೆ. ನಾಲ್ಕಾರು ಹೂಗಿಡವನ್ನೂ ಹಾಕಿರುವೆ.  ಅರ್ಚಕರು ಪೂಜೆಗೆ ಕೊಯ್ದು ಕೊಳ್ಳುತ್ತಾರೆ.”

ನಿಜವಾಗಿ ನಾನು ಯಾವತ್ತು ಅವನಿಗೆ ಹೇಳಿದ್ದೆ ನೆಂದು ನನಗೆ ನೆನಪಿಲ್ಲ. ಆದರೆ ಅವನಂತೂ ಒಬ್ಬರ ಪಾಡಿಗೆ ಹೋಗದೆ ನೆಮ್ಮದಿಯಿಂದ  ತಪ್ಪದೆ  ಈ ಕೆಲಸ ಮಾಡುತ್ತಾ ಇದ್ದಾನೆ.

ಒಳ್ಳೆಯ ಮಾತಿಗೇಕೆ ದಾರಿದ್ರ್ಯ? ನಮ್ಮ ಮಾತುಗಳು ಯಾರಿಗಾದರೂ ಪ್ರೇರಣೆ ಕೊಟ್ಟಿವೆಯೇ? ಅಥವಾ ಯಾರನ್ನಾದರೂ ಘಾಸಿಗೊಳಿಸಿವೆಯೇ? ಹಾ, ಒಮ್ಮೆ ನಮ್ಮ ಆತ್ಮಾವಲೋಕನ ಮಾಡಿಕೊಂಡರೆ ಹೇಗೆ? ಏನಂತೀರಾ?

Rating
No votes yet

Comments

Submitted by sathishnasa Fri, 01/04/2013 - 11:08

+1