ಒಳ್ಳೆಯ ಸುದ್ದಿ -ಪಾಸಿಟಿವ್ ಸುದ್ದಿ! - ೧
ಅವನ ಹೆಸರು ಥಾಮಸ್ 'ಆಟೋ' ರಾಜಾ.ಚಿಕ್ಕಂದಿನಲ್ಲಿ ಅವನಿಗೆ ತಾಯಿತಂದೆಯರ ಪ್ರೀತಿ ಸಿಗಲಿಲ್ಲವಂತೆ, ಚಿಕ್ಕ ಪುಟ್ಟ ಕಳ್ಳತನ ದರೋಡೆ ಮಾಡುತ್ತಿದ್ದನಂತೆ, ಉಳಿದ ಹುಡುಗರಿಗೆ ಕಾಟ ಕೊಡುತ್ತಿದ್ದನಂತೆ.ಜನರ ದೂರು ಹೆಚ್ಚಾದಾಗ ಅವನನ್ನು ಮನೆಯಿಂದ ಹೊರಗೆ ಹಾಕಿದರಂತೆ, ಒಂದು ಸಲ ಒಂದು ತಿಂಗಳು ಜೈಲಿಗೂ ಹೋದನಂತೆ. ಜೈಲಿನಲ್ಲಿ ಅವನು ಯೋಚಿಸಿದನಂತೆ -ಇಂತಹ ಬದುಕು ನನ್ನದಾಗುವುದು ಬೇಡ. 'ದೇವರೇ ಏನಾದರೂ ದಾರಿ ತೋರಿಸು ' ಅಂತ ದೇವರನ್ನು ಬೇಡಿಕೊಂಡನು. ತನ್ನ ಜೀವನದಲ್ಲಿ ಬದಲಾವಣೆ ತಂದುಕೊಂಡನು. ಆಟೋ ಓಡಿಸಲು ಕಲಿತು ಆಟೋ ಓಡಿಸಲು ಶುರುಮಾಡಿದ. ಅಲ್ಲಿ ಆಟೋ ಚಾಲಕರ ಆಟೋಚಾಲಕರ ನಾಯಕನಾದನು. ಅವರ ಪರವಾಗಿ ನ್ಯಾಯಕ್ಕಾಗಿ ಅನೇಕ ಹೋರಾಟಗಳನ್ನು ಮಾಡಿದನು. ಕೆಲವು ಬಾರಿ ಜೈಲಿಗೂ ಹೋಗಬೇಕಾಯಿತು. ಆದರೆ ಈ ತರ ಜೈಲಿಗೆ ಹೋದದ್ದು ಹಿಂದಿನ ಹಾಗೆ ಕಳ್ಳತನ ಮತ್ತು ದರೋಡೆಗಳಂತಹ ಅಪರಾಧಗಳಿಗಾಗಿ ಆಗಿರಲಿಲ್ಲ.
ಮುಂದೆ ಅವನು ನಿರ್ಗತಿಕರಿಗೆ ಒಂದು ಆಶ್ರಯಧಾಮವನ್ನು ಶುರುಮಾಡಿದನು. ಈಗ ಅದರಲ್ಲಿ 750 ಜನ ಇದ್ದಾರಂತೆ. ಅನೇಕ ಸ್ವಯಂ ಸೇವಕರು ಅವನ ಜೊತೆಗೆ ನಿರ್ಗತಿಕರ ಸೇವೆ ಮಾಡುತ್ತಾರಂತೆ. ಇವನ ಕೆಲಸದಿಂದ ಅನೇಕರು ಸ್ಪೂರ್ತಿ ಹೊಂದಿದ್ದಾರಂತೆ. ಅವರಲ್ಲೊಬ್ಬ ರವಿಕುಮಾರ್ . ಅವನ ಸಂಗತಿ ಹೀಗಿದೆ - ಅವನು ಮಾನಸಿಕ ಆರೋಗ್ಯ ಸಂಸ್ಥೆಯಿಂದ ಮರಳಿ ಬಂದ ಕಾರಣ ಅವನ ಅಣ್ಣಂದಿರು ಅವನನ್ನು ಮನೆಗೆ ಸೇರಿಸಿಕೊಳ್ಳಲಿಲ್ಲ. ಆಗ ಅವನು ಈ ಮೊದಲು ಹೇಳಿದ ಥಾಮಸ್ ಆಟೋರಾಜನ ಜೊತೆಗೆ ಇದ್ದ. ಮುಂದೊಂದು ದಿನ ಅವನ ಮನೆತನದ ಆಸ್ತಿಯ ಪಾಲು ಎಂದು 80 ಲಕ್ಷ ರೂಪಾಯಿ ಅವನ ಪಾಲಿಗೆ ಬಂದಿತು. ಆ ಎಲ್ಲಾ ಹಣವನ್ನು ಈ ಥಾಮಸ್ ಆಟೋರಾಜನ ಸಂಸ್ಥೆಗೆ ಕೊಟ್ಟು ಬಿಟ್ಟ. ಅಷ್ಟೇ ಅಲ್ಲ, ಅದೇ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಒಂದು ಕೆಲಸ ಮಾಡುತ್ತಿದ್ದಾನೆ - ಏನೂ ಸಂಬಳ ತೆಗೆದುಕೊಳ್ಳದೆಯೇ ! ಈ ಕುಮಾರ್ ಹೇಳುತ್ತಾನೆ - " ಸಂಬಳ ತೆಗೆದುಕೊಂಡು ಏನು ಮಾಡಬೇಕೆಂದು ನನಗೆ ತಿಳಿಯದು. ಆ ಹಣ ನನಗೆ ನಿರುಪಯುಕ್ತ. ಇಲ್ಲಿ ನನಗೆ ತೃಪ್ತಿ ಗೌರವ ಎಲ್ಲ ಸಿಗುತ್ತದೆ. "
ಈ ಆಶ್ರಯ ಧಾಮದಲ್ಲಿ ತೀರಾ ಬಡವರು ಯಾವುದೇ ವಯಸ್ಸು ಲಿಂಗ ಜಾತಿ ಭೇದವಿಲ್ಲದೆ ಬಂದು ಸೇರಿ ಉದ್ದೇಶ ಮತ್ತು ಗುರಿಗಳುಳ್ಳ ಬಾಳನ್ನು ಬದುಕಲಿ ಎಂಬುದು ಈ ಥಾಮಸ್ ಆಟೋರಾಜನ ಬಯಕೆ.
ಈ ಸಂಗತಿಯನ್ನು ಹೆಚ್ಚಿನ ವಿವರಗಳೊಂದಿಗೆ ಈ 2022 ಜನವರಿ ತಿಂಗಳ ರೀಡರ್ಸ್ ಡೈಜೆಸ್ಟ್ ನಲ್ಲಿ ಓದಬಹುದು.