ಒಳ್ಳೆಯ ಹುಡುಗಿ ಶಿಲ್ಪಶ್ರೀ ಇನ್ನಿಲ್ಲದೆ ಹೋದಳು

ಒಳ್ಳೆಯ ಹುಡುಗಿ ಶಿಲ್ಪಶ್ರೀ ಇನ್ನಿಲ್ಲದೆ ಹೋದಳು

ಆ ಹೆಣ್ಣುಮಗುವಿನ ಹೆಸರು ಶಿಲ್ಪಶ್ರೀ. ಮಗುವೇ ಆಕೆ. ಇನ್ನು ಹೆಸರಿಗೆ ಅನ್ವರ್ಥ ಅವಳು. ಆಕೆಯ ಗುಣ, ನಡೆ ನುಡಿ, ಸಂಸ್ಕಾರ...ಎಲ್ಲದರಲ್ಲು ಶಿಲ್ಪದಂತ ಸುಂದರ ಕೆತ್ತನೆಯಿತ್ತು.

ಆಕೆ ನಮ್ಮ ಸ್ನೇಹಿತೆ. ನಮ್ಮ ಸುವರ್ಣ ನ್ಯೂಸ್‌ ಚಾನೆಲ್‌ನ ನನ್ನ ಸಹೋದ್ಯೋಗಿಳೆಲ್ಲರ ನೆಚ್ಚಿನ ಶಿಷ್ಯೆ. ಅವಳ ಬರಹ, ನಮ್ಮೆಲ್ಲರಿಗೆ ಅವಳ ವ್ಯಕ್ತಿತ್ವವನ್ನು ಆ ಮೂಲಕ, ಆಕೆಯ ಗೆಳೆತನವನ್ನು ನಮಗೆ ನೀಡಿತ್ತು. ಕಳೆದ ೫-೬ ತಿಂಗಳಿಂದಲೂ ನಮಗೆ ಆಕೆ ಪರಿಚಯ. ಫೋನ್‌ ಮೂಲಕ ಆಗಿದ್ದಾಂಗೆ ಆರಂಭವಾದ ಸ್ನೇಹ ಹಾಲಿನಂತಿತ್ತು. ಇದಕ್ಕಿದ್ದಂತೆ ಶುಕ್ರವಾರ ರಾತ್ರಿ(೦೬-೦೯-೦೮) ನಮ್ಮ ಸರ್‌ ಶಿವಸ್ವಾಮಿ ಫೋನ್ ಮಾಡಿ, ಹೀಗೀಗ್ಗೆ ಎಂದರು. ಎಚ್ಚೆತ್ತ ನನಗೆ ರಾತ್ರಿ ಪೂರ ನಿದ್ದೆಯಿಲ್ಲ. ಬಹುಶ ಸುದ್ದಿ ತಿಳಿದ ನನ್ನ ಎಲ್ಲ ಗೆಳೆಯರದ್ದೂ ಇದೇ ಸ್ಥಿತಿ. ಒಂದು ರೀತಿ ತಳಮಳ. ಸುದ್ದಿ ಸುಳ್ಳಾಗಲಿ ಎಂಬ ಹಂಬಲ. ಅದೇ ಜಾಡಿನಲ್ಲಿ ಬೆಳಗು ಕಂಡ ನಾನು, ಪೇಪರ್‍ ಮೊರೆ ಹೋದೆ.

ಸುದ್ದಿ ನಿಜವೇ ಆಗಿದ್ದರೆ ಬಂದಿರುತ್ತೆ, ಆ ಮೂಲಕ ಸುದ್ದಿ ಸುಳ್ಳಾಗಿರಲಿ ಎಂಬ ಹಪ ಹಪಿಕೆ ನನ್ನದಾಗಿತ್ತು. ಆದರೆ, ಕಣ್ಣು ಹಾಯಿಸಿದ್ದೇ ತಡ ಕಣ್ಣಿಗೆ ಬಿದ್ದ ಸುದ್ದಿ ಕಂಡು ದುಃಖ ಕಟ್ಟೆ ಒಡೆಯಿತು. ಅದೇಕೋ ಒಬ್ಬ ಹತ್ತಿರದ ಸಂಬಂಧಿ ಕಳೆದುಕೊಂಡ ನೋವು. ದುಃಖ. ಹತಾಷೆ. " ಇಷ್ಟೇನಾ....ಇಷ್ಟೇನಾ ನಮ್ಮ ಜೀವನಾ....." ಎಂಬ ಒಂದೆರಡು ಪದಗಳಷ್ಟೇ,,,ಬಿಟ್ಟರೇ ಬೇರೇನು ಕಾಣದಂತಾಗಿತ್ತು. ಅಷ್ಟ್ರಲ್ಲಿ ಸರ್‌, ಬೇಗ ಬಾ. ಬೌರಿಂಗ್ ಆಸ್ಪತ್ರೆಗೆ ಹೋಗೋಣ" ಅಂದ್ರು. ತಕ್ಷಣವೇ ಆಫೀಸ್‌ಗೆ ದಾಂಗುಡಿಯಿಟ್ಟೆ. ಕೂಡಲೇ ಆಸ್ಪತ್ರೆಗೆ ನಾನು, ಪ್ರವೀಣ, ನಮ್ಮ ಶಿವಸ್ವಾಮಿ ಸರ್‌ ಹೋದೆವು. ಅಲ್ಲಿದ್ದ ಶಿಲ್ಪಳ ಕೆಲ ಗೆಳೆಯ-ಗೆಳತಿಯರ ದುಃಖದ ದೇಹ ಹೊತ್ತು ತೂಗಾಡುತ್ತಿದ್ದರು. ಮತ್ತೆ ಮೂರು ದೇಹಗಳು ಆ ಗುಂಪು ಸೇರಿದೆವು. ಪೊಲೀಸರ ಪೆನ್ನು ಮಾಹಿತಿ ಸಂಗ್ರಹಿಸುತ್ತಿತ್ತು. ಕಪ್ಪು ಅಕ್ಷರಗಳು, ಬಿಳಿ ಕಾಗದದ ರೂಪ ಕೆಡಿಸುತ್ತಿದ್ದವು. ನಿತ್ಯ ಅದೇ ಕಪ್ಪು ಅಕ್ಷರಗಳೊಂದಿಗೆ ಒಡನಾಡುವ ನಮಗೆ, ಅದೇಕೋ ಶುಕ್ರವಾರದಂದು ಅಶುಭದ ಪ್ರತಿಮೆಗಳಂತೆ ಅಚ್ಚೊತ್ತುತ್ತಿದ್ದ ಅಕ್ಷರಗಳು ಶಿಲ್ಪಳೆಂಬ ಹೆಣ್ಣುಮಗುವಿನ ಬದುಕಿನ ಅಂತ್ಯವನ್ನು ಬರೆಯುತ್ತಿದ್ದವು. ಅಲ್ಲಿಯವರೆಗೂ ನಿಜವಾಗಿ ನಮ್ಮ ದುಃಖದ ಕಟ್ಟೆ ಒಡೆದಿರಲಿಲ್ಲ. ಪೊಲೀಸರ ಮಹಜರಿಗೆ ಸಹಿ ಹಾಕಿ ನಾನು ಮತ್ತು ಗೆಳೆಯರು ಶವಾಗಾರದ ಒಳ ಹೊಕ್ಕುತ್ತಿದ್ದಂತೆ, ಕಣ್ಣೀರ ಕೋಡಿ ಹೊಡೆಯಿತು.

ಇನ್ನೂ ಶಿಲ್ಪಶ್ರೀಯ ಅಪ್ಪ ಅಮ್ಮ ಬಂದಿರಲಿಲ್ಲ. ಆದರೆ ಆಕೆ ಒಂದು ತಿಂಗಳಿಂದ ಕೆಲಸ ಮಾಡುತ್ತಿದ್ದ " ದಿ ಸಂಡೇ ಇಂಡಿಯನ್‌ " ಪತ್ರಿಕೆಯ ಸಹೋದ್ಯೋಗಿ ಬಳಗ ಅಲ್ಲಿತ್ತು. ಪತ್ರಿಕೆಯ ಎಡಿಟರ್‍ ಸತೀಶ್‌ ಚಪ್ಪರಿಕೆ, ಶಿಲ್ಪಳ ಗೆಳತಿಯರು ಆಕೆಯೊಂದಿಗೆ ಕಳೆದ ಕಡೆಯ ಕ್ಷಣಗಳನ್ನು ಮೆಲುಕುತ್ತಿದ್ದರು. ಛೇ...ಇಷ್ಟೇನಾ....ಇಷ್ಟೇನಾ...ಬದುಕು...ಇದೇ ಮಾತು ನನ್ನಂತೆ, ಎಲ್ಲರಲ್ಲಿ. ೩ ತಿಂಗಳು ನಮ್ಮೊಂದಿಗೆ ಕಳೆದ ಆ ಸ್ನೇಹಿತೆಯ ಸಾವು ನಿಜಕ್ಕೂ ನಮ್ಮೆಲ್ಲರಿಗೂ ಬರ ಸಿಡಿಲೇ ಆಗಿತ್ತು. ಅವರಪ್ಪ ಅಮ್ಮ ಬರುತ್ತಿದ್ದಂತೆ, ಬೌರಿಂಗ್ ಆಸ್ಪತ್ರೆಯ ಆ ಸ್ಥಳ ದುಃಖದ ಸೌಧದಂತೆ. ಅಲ್ಲಿದ್ದ ನಾವೆಲ್ಲಾ ಜೀವಂತ ಶವಗಳಂತೆ ಕಾಣುತ್ತಿದ್ದೆವು. ನಿಜಕ್ಕೂ ಅದು ಮರೆಯಲಾಗದ ಕಾರ್ಕೋಟಕ ಕಹಿ ನೆನಪು. ಅವರಮ್ಮನ ಆ ಹೆಪ್ಪುಗಟ್ಟಿದ ಶೋಕ, ಅವರಪ್ಪರ ಅಸಹಾಯಕ ನೋಟ, ಬಡಕಲು ದೇಹ, ಉಸಿರೆಳೆದುಕೊಳ್ಳಲೂ ಆಗದ ಸ್ಥಿತಿ ಕಂದು, ಈ ತಾಯಿ ಅದ್ಹೇಗೆ ಅತ್ತೀತು. ಅದ್ಹೇಗೆ ಮಗುವನ್ನು ಕಳೆದುಕೊಂಡ ದುಃಖವನ್ನು ಸಹಿಸಿಕೊಂಡೀತು. ಅಂತಾಯಿತ್ತು ನನ್ನ ಮನಸು.

ಅವರಮ್ಮ, "ನೀವೇನಾ ನನ್ಮಗಳು ಇಂಟರ್‍ ಷಿಪ್ ಮಾಡಿದ ಸುವರ್ಣನ್ಯೂಸ್ ಚಾನೆಲ್‌ನವರು" ಅನ್ನೋವಾಗ "ಹೌದು" ಅಂತ ಉತ್ತರ ಕೊಡಲಿಕ್ಕೂ ನಮ್ಮ ಕಣ್ಣು ತೆರೆದುಕೊಳ್ಳಲಿಲ್ಲ. ಹಾಗೆ, ಕಣ್ಣಿರ ಮೂಲ ಸೆಲೆ ಎಂಬತ್ತಿತ್ತು ಆ ತಾಯಿಯ ಕಣ್ಣುಗಳು. ಆ ಕ್ಷಣ ಒಬ್ಬ ಸ್ನೇಹಿತೆ, ಸೋದರಿ, ಒಂದು ಮಗುವಿನ ಹೃದಯ ಬಡಿತ ನಿಂತಿತ್ತು. ಅಷ್ಟೇ, ಆದರೆ ಆಕೆಯ ಮುದ್ದು ಮುದ್ದು ಮಾತು, ತಂಗಿಯಂತ ನಡೆವಳಿಕೆ, "ಸರ್‌.ಸರ್‌". ಎನ್ನುತ್ತಿದ್ದ ಶಿಲ್ಪಳ ಮಾತುಗಳು ನಮ್ಮೆಲ್ಲರ ಸ್ಮೃತಿ ಪಟಲದಲ್ಲಿ ಅನುರಣಿಸುತ್ತಿತ್ತು. ಅಚ್ಚೊತ್ತಿತ್ತು. ಇದೊಂದು ಸ್ನೇಹಿತರ ದುರಂತ ಕ್ಷಣ. ಕರಾಳ ನೆನಪು.

- ಎಂ.ಸಿ. ಪ್ರಶಾಂತ್

Rating
No votes yet

Comments