ಓದಿದ ಒಂದು ಕಥೆ - ಕಮೂನ 'ಅತಿಥಿ'
ಆತ ಲೋಕ ಪ್ರಸಿದ್ಧ ಸಾಹಿತಿ ಆಲ್ಬರ್ಟ್ ಕಮೂ - ಕಾಮೂ ಎಂದೂ ಬರೆಯುತ್ತಾರೆ. ಅದಿರಲಿ. ಕನ್ನಡದ ಕಥೆಗಾರ ಕೇಶವ ಮಳಗಿ ಅವರು ಈತನ ಬಗ್ಗೆ ಬರೆದ 'ಕಮೂ - ತರುಣ ವಾಚಿಕೆ, ಎಂಬ ಪುಸ್ತಕವನ್ನು ಓದುತ್ತಿದ್ದೇನೆ. ಅದರಲ್ಲಿನ ಒಂದು ಕಥೆಯನ್ನು ಈಗತಾನೆ ಓದಿದೆ. ಕಥೆಯು ಸಂಕ್ಷಿಪ್ತವಾಗಿ ಹೀಗಿದೆ.
ಊರಿನ ಒಂದು ಶಾಲೆ. ಅಲ್ಲಿ ಒಬ್ಬ ಮಾಸ್ತರ. ಆತನ ಪರಿಚಯದ ಪೊಲೀಸನು ಒಬ್ಬ ಕೈದಿಯನ್ನು ಕರೆತಂದು ಇವನಿಗೆ ಒಪ್ಪಿಸುತ್ತಾನೆ. ಅವನ ಮೇಲಧಿಕಾರಿಗಳ ಆದೇಶದಂತೆ ಈ ಮಾಸ್ತರನು ಈ ಕೈದಿಯನ್ನು ಹತ್ತಿರದಲ್ಲಿರುವ ಪೊಲೀಸ್ ಠಾಣೆಗೆ ತಲುಪಿಸಬೇಕು. ಮಾಸ್ತರನಿಗೆ ಇದೆಲ್ಲಾ ಮನಸ್ಸಿಗೆ ಬರದಿದ್ದರೂ ಪೊಲೀಸನು ಅದನ್ನು ಕಿವಿಗೆ ಹಾಕಿಕೊಳ್ಳದೆ ಕೈದಿಯನ್ನು ಇವನಲ್ಲಿ ಬಿಟ್ಟು ಇವನ ರಕ್ಷಣೆಗೆ ಒಂದು ರಿವಾಲ್ವರನ್ನು ಕೊಟ್ಟು ಹೋಗಿಬಿಡುತ್ತಾನೆ. ಈ ಮಾಸ್ತರನು ಕೈದಿಯ ಊಟಕ್ಕೆ ವ್ಯವಸ್ಥೆ ಮಾಡಿ ರಾತ್ರಿ ಅವನು ಮಲಗಲು ಅನುಕೂಲ ಮಾಡಿಕೊಡುತ್ತಾನೆ. ಆ ಕೈದಿಯಾದ ರೋ ತಪ್ಪಿಸಿಕೊಂಡು ಹೋಗುವ ಅವಕಾಶವಿದ್ದರೂ ಓಡಿ ಹೋಗುವುದಿಲ್ಲ.
ಮರುದಿನ ಬೆಳಗ್ಗೆ ಕೈದಿಯನ್ನು ಹೊರಡಿಸಿಕೊಂಡು ಮಾಸ್ತರನು ಊರ ಹೊರಗೆ ಬರುತ್ತಾನೆ. ಅಲ್ಲಿ ಅವನಿಗೆ ಪೊಲೀಸ್ ಠಾಣೆಗೆ ಹೋಗುವ ದಾರಿಯನ್ನು ತಿಳಿಸುತ್ತಾನೆ. ಜೊತೆಗೆ ಅವನಿಗೆ ಅದರ ಬದಲಾಗಿ ಬೇರೆಡೆ ಹೋಗುವುದರ ಬಗೆಗೂ ತಿಳಿಸಿ ಒಂದಿಷ್ಟು ಹಣ ಮತ್ತು ಒಣಹಣ್ಣುಗಳನ್ನು ಅವನ ಕೈಗೆ ಇಡುತ್ತಾನೆ. ಅಲ್ಲಿಂದ ವಾಪಸ್ ಬರುತ್ತಾ ಹಿಂದಿರುಗಿ ನೋಡುತ್ತಾನೆ. ಆ ಕೈದಿಯು ಪೊಲೀಸ್ ಠಾಣೆಯ ಮತ್ತು ಸೆರೆಮನೆಯ ದಾರಿ ಹಿಡಿದಿದ್ದಾನೆ. ಮಾಸ್ತರನು ಶಾಲೆ ತಲುಪಿದಾಗ ಅಲ್ಲಿ ಕರಿಹಲಿಗೆಯ ಮೇಲೆ ಬರೆದಿದೆ -"ನೀವು ನಮ್ಮ ಸೋದರನನ್ನು ಹಸ್ತಾಂತರಿಸಿದ್ದೀರಿ. ಇದಕ್ಕೆ ತಕ್ಕ ಬೆಲೆ ತೆರುತ್ತೀರಿ".
ಇದಿಷ್ಟು ಕಥೆ. ಏನಿದರ ಅರ್ಥ? ನನಗೆ ತೋಚಿದ್ದು-ನಾವು ನಮಗೆ ಸರಿಕಂಡಂತೆ ಮಾಡಬೇಕು, ಅದರ ಪರಿಣಾಮ ಏನು ಬೇಕಾದರೂ ಆಗಬಹುದು. ಆ ಬಗ್ಗೆ ತಲೆಕೆಡಿಸಿಕೊಳ್ಳಬಾರದು!