ಓರ್ವ ಕನ್ನಡಾಭಿಮಾನಿಯನ್ನು ನಾವು ಕಳೆದುಕೊಂಡಿದ್ದೇವೆ!

ಓರ್ವ ಕನ್ನಡಾಭಿಮಾನಿಯನ್ನು ನಾವು ಕಳೆದುಕೊಂಡಿದ್ದೇವೆ!

ಓರ್ವ ಕನ್ನಡಾಭಿಮಾನಿಯನ್ನು ನಾವು ಕಳೆದುಕೊಂಡಿದ್ದೇವೆ!

     ನಾವು ಕನ್ನಡಿಗರು ಭಾಷಣ ಮಾಡುವಾಗ ‘ಜೈ ಭುವನೇಶ್ವರಿ’ ಎಂದು ಗಂಟಲು ನರ ಸಿಡಿಯುವಂತೆ ಕೂಗುವುದು ಸಾಮಾನ್ಯ. ಇದನ್ನು ಕೇಳಿದಾಗಲೆಲ್ಲ ನನ್ನ ಕುತೂಹಲ ಗರಿಗೆದರುತಿತ್ತು. ಕನ್ನಡಕ್ಕೂ-ಭುವನೇಶ್ವರಿಗೂ ಎಲ್ಲಿಯ ನಂಟು? ಭುವನೇಶ್ವರಿಯು ಯಾವಾಗ, ಯಾರ ಕಾಲದಲ್ಲಿ, ಹೇಗೆ ಕನ್ನಡಕ್ಕೆ ಗಂಟು ಬಿದ್ದಳು? – ಈ ಬಗ್ಗೆ ಒಂದಷ್ಟು ಮಾಹಿತಿಯನ್ನು ಸಂಗ್ರಹಿಸಬೇಕೆಂದು ಹೊರಟೆ.

     ಮೊದಲು ನನ್ನ ಗಮನಕ್ಕೆ ಬಂದದ್ದು ಭುವನಗಿರಿಯಲ್ಲಿರುವ ಭುವನೇಶ್ವರಿಯ ಆಲಯ. ಭುವನಗಿರಿಗೇ ಹೋಗಿ, ಅಲ್ಲಿನ ಅರ್ಚಕರನ್ನು ಹಾಗೂ ಗೆಳೆಯರನ್ನು ಕಂಡು ಭುವನೇಶ್ವರಿಯ ಕನ್ನಡ ಸಂಬಂಧವನ್ನು ಹುಡುಕಿದೆ. ಇಂದಿಗೆ ಸುಮಾರು ೩೦೦ ವರ್ಷಗಳ ಹಿಂದೆ ವಿಜಯನಗರದ ಸಾಮಂತರಾಗಿ ಬಿಳಗಿ ಅರಸರಿದ್ದರು. ಉತ್ತರಕನ್ನಡ ಜಿಲ್ಲೆಯ ಗಂಗಾವಳಿಯಿಂದ ಹಿಡಿದು, ಉಡುಪಿಯವರೆಗಿನ ಪ್ರದೇಶವನ್ನು ಆಳುತ್ತಿದ್ದ ಅರಸರಿವರು. ಇವರ ರಾಜಧಾನಿ ಶ್ವೇತಪುರ. ಇದು ಇಂದಿನ ಭುವನಗಿರಿಯಿಂದ ಸುಮಾರು ೫ ಕಿ.ಮೀ. ಹಾಗೂ ಸಿದ್ದಾಪುರದಿಂದ ೧೫ ಕಿ.ಮೀ.ದೂರದಲ್ಲಿದೆ. ಬಿಳಗಿ ವಂಶದ ಕೊನೆಯ ಅರಸು ದೊರೆ ಬಸವೇಂದ್ರ. ಈತನು ಕ್ರಿ.ಶ.೧೬೯೨ರಲ್ಲಿ ಭುವನಗಿರಿಯ ಮೇಲೆ ಭುವನೇಶ್ವರಿಯ ಈ ದೇವಸ್ಥಾನವನ್ನು ಕಟ್ಟಿಸಿದನು. ಭುವನೇಶ್ವರಿಯು ಸ್ಥಳೀಯ ದೇವತೆಯಾಗಿದ್ದಳೇ ಹೊರತು ಆಕೆಯು ಅಖಂಡ ಕರ್ನಾಟಕ ವ್ಯಾಪ್ತಿಯನ್ನು ಹೊಂದಿದ್ದ ಯಾವ ಆಧಾರವೂ ದೊರೆಯಲಿಲ್ಲ. (ಈ ಬಗ್ಗೆ ಪ್ರತ್ಯೇಕ ಚಿತ್ರಲೇಖನ ಬರೆದಿದ್ದೇನೆ. ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಹೇಗೆ ಲಗತ್ತಿಸಬಹುದು ಎಂಬುದನ್ನು ಯಾರಾದರೂ ಹೇಳಿಕೊಟ್ಟರೆ, ಆ ಲೇಖನವನ್ನು ಇಲ್ಲಿ ಪ್ರಕಟಿಸುತ್ತೇನೆ.)

     ‘ಭುವನೇಶ್ವರಿಯ ಕನ್ನಡ ಸಂಬಂಧದ ಬಗ್ಗೆ ಶ್ರೀಯುತರಾದ ಎಲ್.ಎಸ್.ಶೇಷಗಿರಿರಾವ್, ಚಿದಾನಂದಮೂರ್ತಿ ಹಾಗೂ ಶ್ರೀನಿವಾಸ ಹಾವನೂರು ಅವರನ್ನು ವಿಚಾರಿಸಿದೆ.

     ಡಾ.ಶ್ರೀನಿವಾಸ ಹಾವನೂರರಿಗೆ ಆಗ ೭೯-೮೦ ವರ್ಷಗಳಿರಬಹುದು. ವೃದ್ಧಾಪ್ಯ ಅವರನ್ನು ಸಾಕಷ್ಟು ಕಾಡುತಿತ್ತು. ಭುವನೇಶ್ವರಿಯ ಬಗ್ಗೆ ವಿಚಾರಿಸುತ್ತಿದ್ದ ಹಾಗೆ…………

     ‘ಬಿಡಯ್ಯ…ಭುವನೇಶ್ವರಿಗೂ ಕನ್ನಡಕ್ಕೂ ಯಾವ ಸಂಬಂಧವೂ ಇಲ್ಲ’ ಎಂದರು.

     ‘ಹಾಗಿದ್ದ ಮೇಲೆ ನಾವು ಮಾತು ಮಾತಿಗೂ ಕನ್ನಡ ಭುವನೇಶ್ವರಿ ಎಂದು ಜೈಕಾರ ಹಾಕುತ್ತೇವಲ್ಲ ಏಕೆ? ಎಂದೆ.

     “ಭಾಷಣಕಾರರು ಭಾಷಣ ಮಾಡುವಾಗ ಜನರನ್ನು ಕೆರಳಿಸಲು ಕೆಲವು ಸಿದ್ಧ ವಾಕ್ಯಗಳನ್ನು ಇಟ್ಟುಕೊಂಡಿರುತ್ತಾರೆ. ಅಂತಹವುಗಳಲ್ಲಿ ಈ ಜೈ ಭುವನೇಶ್ವರಿಯೂ ಒಂದು. ಕನ್ನಡದ ಬಗ್ಗೆ ಅಭಿಮಾನ ಆ ಕ್ಷಣದಲ್ಲಿ ಮೂಡಿಸಲು ಜೈ ಭುವನೇಶ್ವರಿ, ಜೈ ಕನ್ನಡಾಂಬೆ ಇತ್ಯಾದಿಗಳು ನೆರವಾಗುತ್ತವೆ” ಎಂದರು.

     ‘ಇರಬಹುದು ಸರ್. ಆದರೆ ಜೈಕಾರ ಹಾಕಲು ಭುವನೇಶ್ವರಿಯೇ ಏಕೆ ಬೇಕಾಗಿತ್ತು? ಚಾಮುಂಡೇಶ್ವರಿ ಇರಲಿಲ್ಲವೆ? ಎಂದೆ. ಆಗ ಅವರು ಕನ್ನಡಿಗರಿಗೂ ಹಾಗೂ ಭುವನೇಶ್ವರಿಗೂ ಹೇಗೆ ಸಂಬಂಧ ಬಂದಿರಬಹುದು ಎಂಬುದರ ಸುಳುಹನ್ನು ಕೊಟ್ಟರು. ಅವರು ನೀಡಿದ ಸುಳುಹನ್ನು ಆಧರಿಸಿ ಗಳಗನಾಥ ಅವರು ಬರೆದ ವಿಜಯನಗರ ಸ್ಥಾಪನೆಯ ಬಗ್ಗೆ ಬರೆದ ಕಾದಂಬರಿಯನ್ನು ಹುಡುಕಿಕೊಂಡು ಹೊರಟೆ. ಕೊನೆಗೆ ಅಂಕಿತಾ ಪ್ರಕಾಶನದ ಶ್ರೀ ಪ್ರಕಾಶ್ ಕಂಬತ್ತಳ್ಳಿಯವರು ಆ ಪುಸ್ತಕ ನೀಡಿದರು. ಅದರಲ್ಲಿ ವಿದ್ಯಾರಣ್ಯರು ವಿಜಯನಗರ ಸ್ಥಾಪನೆಗಾಗಿ ಭುವನೇಶ್ವರಿಯನ್ನು ಪ್ರಾರ್ಥಿಸುತ್ತಾರೆ. ಆಗ ಭುವನೇಶ್ವರಿಯು ಮೂರುಮುಕ್ಕಾಲು ಘಳಿಗೆ ಚಿನ್ನದ ಮಳೆಯನ್ನು ಸುರಿಸುತ್ತಾಳೆ. ಆ ಚಿನ್ನವನ್ನು ಬಳಸಿಕೊಂಡು ವಿದ್ಯಾರಣ್ಯರು ವಿಜಯನಗರವರನ್ನು ಸ್ಥಾಪಿಸುತ್ತಾರೆ ಎನ್ನುವ ವಿವರಣೆ ಬರುತ್ತದೆ. ಬಹುಶಃ ಈ ಕಥೆಯು ಕನ್ನಡ-ಕರ್ನಾಟಕದ ನಂಟನ್ನು ಭುವನೇಶ್ವರಿಗೆ ಬಲವಾಗಿ ಅಂಟಿಸಿತು ಎಂದು ಕಾಣುತ್ತದೆ. ಶ್ರೀನಿವಾಸ ಹಾವನೂರು ಅವರಿಗೆ ಕೃತಜ್ಞತೆಯನ್ನು ಅರ್ಪಿಸಿದೆ.

ಡಾ.ಶ್ರೀನಿವಾಸ ಹಾವನೂರು ಅವರು ಇದೇ ಸೋಮವಾರ, ೦೫.೦೪.೧೦ರಂದು ನಮ್ಮನ್ನು ಬಿಟ್ಟು ಅಗಲಿದರು. ಅವರು ನಮ್ಮ ನಡುವೆಯಿದ್ದ ಓರ್ವ ಹಿರಿಯ ವಿದ್ವಾಂಸರು ಹಾಗೂ ಸಂಶೋಧಕರು, ಎಲ್ಲಕ್ಕೂ ಮಿಗಿಲಾಗಿ ಓರ್ವ ಅಚ್ಚ ಕನ್ನಡಿಗರು. ಅವರನ್ನು ನಾವು ಕಳೆದುಕೊಂಡಿದ್ದೇವೆ.

ಸಣ್ಣಕಥೆ, ಕಾದಂಬರಿಗಾರ, ಲಲಿತ ಪ್ರಬಂಧ, ಪತ್ರಿಕೋದ್ಯಮ, ಗ್ರಂಥ ಸಂಪಾದನೆ, ದಾಸ ಸಾಹಿತ್ಯ, ಕ್ರೈಸ್ಥಸಾಹಿತ್ಯ, ಪುಸ್ತಕೋದ್ಯಮ ಮುಂತಾದವುಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು.

ನಮ್ಮಲ್ಲಿ ಅನೇಕರು ವಿದೇಶಯಾತ್ರೆ ಎಂದರೆ ಬಾಯಿ ಬಾಯಿ ಬಿಡುವರು. ವಿದೇಶಕ್ಕೆ ಹೋಗುತ್ತಲೇ ಪ್ರವಾಸಿ ತಾಣಗಳನ್ನು, ಮಾಲುಗಳನ್ನು, ಹೋಟೆಲುಗಳನ್ನು ಸುತ್ತಿದರೆ ಹಾವನೂರು ಅವರು ತಮ್ಮ ಅಷ್ಟೂ ಸಮಯವನ್ನು ಹೆಸರಾಂತ ಗ್ರಂಥಾಲಯಗಳಲ್ಲಿ ಕಳೆಯುತ್ತಿದ್ದರು. ಕನ್ನಡಕ್ಕೆ ಸಂಬಂಧಿಸಿದ ಪುಸ್ತಕಗಳು ಹಾಗೂ ದಾಖಲೆಗಳನ್ನು ಹುಡುಕುತ್ತಿದ್ದರು. ಮಹತ್ವ ಎನಿಸಿದ ದಾಖಲೆ ದೊರೆತಾಗ, ಅವುಗಳ ನೆರಳುಪ್ರತಿಯನ್ನು (ಜ಼ೆರಾಕ್ಸ್) ತಮ್ಮದೇ ಹಣದಲ್ಲಿ ತೆಗೆದಿಟ್ಟುಕೊಳ್ಳುತ್ತಿದ್ದರು. ವಿದೇಶದಿಂದ ಭಾರತಕ್ಕೆ ಬರುವಾಗ ಅವರ ಪೆಟ್ಟಿಗೆಯ ತುಂಬಾ ಪುಸ್ತಕಗಳು ಹಾಗೂ ಇತರ ದಾಖಲೆಗಳು ಇರುತ್ತಿದ್ದವು. ಎಲ್ಲವನ್ನು ಒಪ್ಪವಾಗಿ ಓರಣವಾಗಿ ಇಡುತ್ತಿದ್ದರು. ಅವರ ಬರಹವೂ ಅಷ್ಟೆ. ಸುಂದರ ಹಾಗೂ ಸ್ಫುಟ. ೧೯೭೩ರಲ್ಲಿ ಇವರು ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸಿದರು ಎಂದು ಕೇಳಿದ್ದೇನೆ. ತಮ್ಮ ಕೊನೆಯ ದಿನಗಳಲ್ಲಿ ದೇಶ ವಿದೇಶಗಳಿಂದ ಸಂಗ್ರಹಿಸಿದಾ ಪುಸ್ತಕಗಳನ್ನು ಹಾಗೂ ದಾಖಲೆಗಳನ್ನು ಬಾಸೆಲ್ ಮಿಷನ್ ಅವರಿಗೆ ದಾನ ಮಾಡಿದರು. ಇವರು ಬರೆದ ಹೊಸಗನ್ನಡದ ಅರುಣೋದಯ ಎಂಬ ಮಹಾಪ್ರಬಂಧ ಅವರಿಗೆ ಡಾಕ್ಟೋರೇಟ್ ಪದವಿಯನ್ನು ಪುಣೆ ವಿವಿಯಿಂದ ಕೊಡಿಸಿತು.

ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ, ಮುಳಿಯ ತಿಮ್ಮಪ್ಪಯ್ಯ, ಸಂದೇಶ್, ಚಿದಾನಂದ ಪ್ರಶಸ್ತಿ, ನಾಡೋಜ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ರಾಜ್ಯ ಇತಿಹಾಸ ಪರಿಷತ್ತಿನ ಗೌರವವನ್ನು ಪಡೆದಿದ್ದರು. ಅವರಿಗೆ ೮೦ ವರ್ಷಗಳಾದ ಆವರ ಲೇಖನಗಳ ಸಂಗ್ರಹ ‘ಸಂಕಥನ’ವನ್ನು ಅರ್ಪಿಸಲಾಯಿತು.

     ಡಾ.ಶ್ರೀನಿವಾಸ ಹಾವನೂರು ಅವರು ೮೨ರ ಹರಯದಲ್ಲಿ ನಮ್ಮನ್ನು ಅಗಲಿರುವರು. ಇಂತಹ ವಿದ್ವಾಂಸರು ವಿರಳ ಎಂದು ಗಟ್ಟಿಯಾಗಿ ನುಡಿಯಬಲ್ಲೆ. ಕನ್ನಡದ ಬಗ್ಗೆ ಎಲ್ಲಿಯೂ ದೊಡ್ಡ ಗಂಟಲಿನಲ್ಲಿ ಭಾಷಣವನ್ನು ಮಾಡದೇ ಸದ್ದಿಲ್ಲದೇ ಕನ್ನಡ ಕೆಲಸವನ್ನು ಮಾಡಿಕೊಂಡು ಬಂದವರು. ಅವರನ್ನು ನಾವು ಸೂಕ್ತರೀತಿಯಲ್ಲಿ ಗೌರವಿಸಿದ್ದೇವೆಯೇ ಎಂಬ ಪ್ರಶ್ನೆ ಮಾತ್ರ ಈಗ ನನ್ನಲ್ಲಿ ಉಳಿದಿದೆ.

 

-ನಾಸೋ

Rating
No votes yet

Comments