ಓ ದೊರೆಯೇ ಪತ್ರ ಓದಲು ನಾ ಒಲ್ಲೆ...

ಓ ದೊರೆಯೇ ಪತ್ರ ಓದಲು ನಾ ಒಲ್ಲೆ...

ಹಾಯ್ ಕಪೀಶ
ನಾನು ನಿಂಗೆ ಹೊಸ ಹೆಸರಿಟ್ಟಿದ್ದೇನೆ ಅಂತಾ ಕಣ್ಣು ಮಿಟುಕಿಸುತ್ತಿದ್ದೀಯಾ? ನೀನು ಬರೀ ಕಪೀಶ ಅಲ್ಲ. ಕಪೀಶೋತ್ತಮ ಕಪೀಶ! ಅಣ್ಣಾ ದೊರೆಯೆ, ನನ್ನ ಅಪ್ಪಾ ಜೋಯ್ಸನ್ನ ಸಾರ್ವಜನಿಕವಾಗಿ ಬೈಯ್ಯಬೇಡ ಅಂತಾ ನಾ ನಿಂಗೆ ಎಷ್ಟು ಸಲ ವದರಿದ್ದೀನಿ. ಆದ್ರೂ ನೀನು ಮಾತ್ರ ನಿನ್ನ ಚಾಳಿ ಬಿಟ್ಟಿಲ್ಲ. ಹಾಗಾಗಿ ಇನ್ನು ಮೇಲೆ ನಾನು ನಿನ್ನ ಪತ್ರವನ್ನು ಓದುವುದಿಲ್ಲ ಎಂಬುದಾಗಿ ನಿರ್ಧಾರ ಮಾಡಿದ್ದೇನೆ. ನನ್ನ ಈ ನಿರ್ಧಾರಕ್ಕೆ ಎದುರಿಗಿರುವ ಎಮ್ಮೆ ಕೋಣಗಳೇ ಸಾಕ್ಷಿ!
ಅದ್ಯಾಕೋ ಇತ್ತೀಚೆಗೆ ನಿನ್ನ ಪತ್ರಗಳು ತುಂಬಾ ಬೇಸರ ಮೂಡಿಸತೊಡಗಿವೆ. ಕಾಂಕ್ರೀಟು ಜಂಗಲ್ಲನ್ನು ಬೈಯ್ಯುವ ತೆವಲನ್ನು ಬಿಟ್ಟು ಮತ್ತೇನೂ ನಿನ್ನ ಪತ್ರದಲ್ಲಿ ಕಾಣುತ್ತಿಲ್ಲ. ಅದನ್ನ ಬಿಟ್ಟರೆ ಇನ್ನೂ ನಿನಗೆ ಗೊತ್ತಿರೋದು ನನ್ನನ್ನು ಅಣಗಿಸಿಸುವುದು ಮಾತ್ರ. ಮೊದಲೆಲ್ಲಾ ನೀನು ಪತ್ರದಲ್ಲಿ ಚೆಂದಚೆಂದದ ಪುಟ್ಟ ಪುಟಾಣಿ ಕಥೆಗಳನ್ನು ಬರೆಯುತ್ತಿದ್ದೆ ಅಲ್ವಾ? ಏ ಈಗ್ಲೂ ಅಂತಹದ್ದೇ ಕಥೆ ಬರೆಯೋ ಪ್ಲೀಸ್.
ನೋಡು ನಮ್ಮಪ್ಪ ಜೋಯ್ಸ್ ಎಂತಹವನೇ ಆಗಿರಬಹುದು. ಆದ್ರೆ ಅವನನ್ನು ಸಾರ್ವಜನಿಕವಾಗಿ ಬೈಯ್ಯುವ ಅಧಿಕಾರ ನಿನಗಿಲ್ಲ. ಇನ್ನೂ ಮುಂದೆ ಮತ್ತೆ ಬೈದೆ ಅಂತಾದರೆ ನಾನಂತೂ ನಿನ್ನನ್ನು ಬಿಲ್‌ಕುಲ್ ಮಾತಾಡಿಸುವುದಿಲ್ಲ. ಏ ಬೆವರ್ಸಿ ಹೋಗೇ ನೀನಲ್ಲದಿದ್ದರೆ ಮತ್ತೊಬ್ಬಳು ಅಂತಾ ನೀನು ಹೇಳೆ ಹೇಳ್ತಿಯಾ ಅಂತಾ ನಂಗೆ ಗೊತ್ತು. ನಾನು ಈ ಸಲ ನಿನ್ನ ಆ ಗೊಡ್ಡು ಬೆದರಿಕೆಗಳಿಗೆಲ್ಲಾ ಬಗ್ಗುವುದಿಲ್ಲ ಎಂಬುದಾಗಿ ಈ ಪತ್ರದ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ.
ಡಿಗ್ರಿ ಮುಗಿಸಿ ಮನೆಯಲ್ಲಿ ಕುಳಿತಿರುವ ನನ್ನ ಬದುಕು ನಿಜಕ್ಕೂ ನನಗೆ ಬೇಸರ ಮೂಡಿಸುತ್ತಿದೆ. ಅಪ್ಪಾ, ಅಮ್ಮ ನನ್ನ ಮದುವೆ ಮಾಡಬೇಕು ಅಂತಾ ಒಂದೇ ಸಮನೆ ಹಠ ಹಿಡಿದು ಕುಳಿತಿದ್ದಾರೆ. ನಾನು ಮದುವೆ ಆಗಲಾರೆ ಎಂದು ಕುಳಿತಿದ್ದೇನೆ. ಯಾಕೋ ನನಗೆ ಕೆಲವೊಮ್ಮೆ ಈ ಬದುಕು ಅರ್ಥವೇ ಆಗಲ್ಲ ಮಾರಾಯ. ಮದ್ವೆ ಆದ್ರೆ ನನ್ನ ಇಡೀ ಬದುಕೇ ಮುಗಿಯಿತು ಅನ್ನಿಸುತ್ತಾ ಇದೆ. ಆಫ್‌ಕೋರ್ಸ್ ನಿನ್ನನ್ನೇ ನಾನು ಮದ್ವೆ ಆದ್ರೂ ಕೂಡಾ! ಥೂ ಜೀವನೆಲ್ಲಾ ಜಿಗುಪ್ಸೆ ಬಂದು ಬಿಟ್ಟಿದೆ. ಯಾವಾಗ ಸಾಯುತ್ತೇನೋ ಅನ್ನಿಸ್ತಾ ಇದೆ. ಬದುಕಿ ಸಾಧಿಸುವುದಾದರೂ ಏನು ಅಲ್ವಾ?
ಕೆಲವರು ಬದುಕಿನ ಪ್ರತಿ ಕ್ಷಣವನ್ನು ಎನ್‌ಜಾಯ್ ಮಾಡುತ್ತಾರೆ. ಆದರೆ ನನ್ನಿಂದ ಅದು ಸಾಧ್ಯವೇ ಇಲ್ಲ. ಮಾರಾಯ. ಒಮ್ಮೊಮ್ಮೆ ಏನಾದ್ರೂ ಸಾಧಿಸಬೇಕು, ಒಂದಿಷ್ಟು ಹೆಸರು ಮಾಡಬೇಕು ಅನ್ನಿಸತ್ತೆ. ಮತ್ತೆ ಕೆಲವೊಮ್ಮೆ ಸಾಧಿಸಿ ಆಗಬೇಕಾದದ್ದು ಏನು ಅನ್ನಿಸತ್ತೆ. ಸಾಧನೆ ಮಾಡಿದವನು ಸಾಯುತ್ತಾನೆ. ಮಾಡದವನು ಸಾಯುತ್ತಾನೆ ಅಲ್ವಾ?
ನನ್ನ ಪ್ರಶ್ನೆಗಳನ್ನೆಲ್ಲಾ ಕಂಡು ಅರವತ್ತರ ಅರಳು ಮರಳು ನಿನಗೆ ಈಗಲೇ ಶುರುವಾಗಿದೆ ಅಂತಾ ನೀನು ಅಣಗಿಸುತ್ತೀಯಾ ಅಂತಾ ಗೊತ್ತು. ಆದ್ರೂ ನನ್ನ ಸಮಸ್ಯೆಗಳನ್ನು ನಿನ್ನಲ್ಲಿ ಅಲ್ಲದೇ ಮತ್ಯಾರಲ್ಲಿ ಹೇಳಿಕೊಳ್ಳಲಿ ಅಲ್ವಾ? ಮದ್ವೆ ಆಗೋದು, ಸಮಸ್ಯೆ, ಆಗದೇ ಇರೋದು ಸಮಸ್ಯೆ. ನಿನ್ನನ್ನೇ ಮದ್ವೆ ಆಗ್ತೀನಿ ಅಂತಾ ಹಠ ಹಿಡಿದು ಕೂರೋದು ಮತ್ತು ದೊಡ್ಡ ಸಮಸ್ಯೆ. ದೊರೆ ನನ್ನ ಸಮಸ್ಯೆಗೆ ಏನಾದ್ರೂ ಪರಿಹಾರ ಹೇಳೋ ಪ್ಲೀಸ್.
ಪರಿಹಾರಕ್ಕೆ ಕಾಯುತ್ತಾ
ನಿನ್ನವಳು

Rating
No votes yet

Comments