ಕಂಡೆನಾ ಕನಸಿನಲಿ! ಗೋವಿಂದನ!

ಕಂಡೆನಾ ಕನಸಿನಲಿ! ಗೋವಿಂದನ!

ಸಿಂಗರದಿ ನವಿಲುಗರಿ ಮೆರೆದಿದ್ದ ಸಿರಿಮುಡಿಯ

ಕಾರ್ಮೋಡದಂತೆಸೆವ ದಟ್ಟಕೂದಲಿಗೆ

ಮಿಂಚಿನೊಡ್ಯಾಣವನೆ ತೊಡಿಸಿದಂತಿತ್ತಮ್ಮ

ಕಟ್ಟಿದ್ದ ರೇಸಿಮೆಯ ನವಿರು ದಟ್ಟಿ!

 

ಪಚ್ಚೆಮಣಿಗಂಬಗಳ ಪೋಲ್ವನಿಡುತೋಳ್ಗಳಲಿ

ತಬ್ಬಿಹಿಡಿದಿರಲೆನ್ನನೆಚ್ಚೆತ್ತೆನಮ್ಮ!

ಮುದ್ದು ತರಳನ್ನೀಗ ಕಂಡೆನಾ ಕನಸಿನಲಿ

ಇಟ್ಟ ತುಳಸಿಯಮಾಲೆಯೊಡವೆಯವನ!

 

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ, ಎರಡನೇ ಆಶ್ವಾಸದ ಏಳನೇ ಪದ್ಯ):

 

ವೇಣೀಮೂಲೇ ವಿರಚಿತಘನಶ್ಯಾಮ ಪಿಂಛಾವಚೂಡೋ

ವಿದ್ಯುಲ್ಲೇಖಾವಲಯಿತ ಇವ ಸ್ನಿಗ್ಧ ಪೀತಾಂಬರೇಣ

ಮಾಮಾಲಿಂಗನ್ಮರಕತಮಣಿಸ್ತಂಭ ಗಂಭೀರಬಾಹುಃ

ಸ್ವಪ್ನೇ ದೃಷ್ಟಸ್ತರುಣ ತುಲಸೀಭೂಷಣೋ ನೀಲಮೇಘಃ

 

-ಹಂಸಾನಂದಿ

 

ಕೊ: 'ಕಂಡೆನಾ ಕನಸಿನಲಿ ಗೋವಿಂದನ' ಎಂಬುದು ಪುರಂದರ ದಾಸರ ಒಂದು ಜನಪ್ರಿಯ ಪದ. ಇದರಲ್ಲಿ ಪುರಂದರದಾಸರು ತಾನು ಕನಸಿನಲ್ಲಿ ಕಂಡ ಗೋವಿಂದ ಹೇಗಿದ್ದನೆಂದು ಬಗೆಬಗೆಯಾಗಿ ಬಣ್ಣಿಸುತ್ತಾರೆ. ಅಲ್ಲಿನ ಕಟ್ಟಿದ ವೈಜಯಂತಿ ತುಳಸಿವನಮಾಲೆ ಇಟ್ಟ ದ್ವಾದಶನಾಮ ನಿಗಮಗೋಚರನ ಅನ್ನುವ ಸಾಲುಗಳು ನಾನು ಅನುವಾದಿಸುವಾಗ ಮನಸ್ಸಿಗೆ ಬಂದುವು.

 

ಕೊ.ಕೊ: ಅನುವಾದದಲ್ಲಿ ಆದಷ್ಟೂ ಮೂಲದಲ್ಲಿದ್ದ ಪದಗಳನ್ನು, ಭಾವನೆಗಳನ್ನು ತೋರಿಸಬಾರದೆಂಬುದು ಒಂದು ಸಾಮಾನ್ಯ ನಿಯಮ. ಆದರೆ ಅದನ್ನು ಈ ಬಾರಿ ಸ್ವಲ್ಪ ಮೀರಿದ್ದೇನೆ. ಮುಖ್ಯವಾಗಿ, ಮೂಲದಲ್ಲಿ, ಸ್ವಪ್ನವನ್ನು ಕಂಡಿದ್ದು ಯಾರು, ಅದನ್ನು ಯಾರಿಗೆ ಹೇಳಿದರು ಎನ್ನುವುದು ತೋರ್ಪಡುವುದಿಲ್ಲ. ನನ್ನ ಅನುವಾದದಲ್ಲಿ ನಾನು ಸ್ವಲ್ಪ ಸ್ವತಂತ್ರ ವಹಿಸಿದ್ದೇನೆ.

ಚಿತ್ರ: ದ ಹಿಂದೂ ದಿನಪತ್ರಿಕೆಯ ಕಲಾವಿದ ಕೇಶವ್ ವೆಂಕಟರಾಘವನ್ ಅವರದು

Rating
No votes yet

Comments