ಕಗ್ಗ - ಮತ್ತೊಂದು ಚಿಂತನೆ
ಇತ್ತೀಚೆಗೆ ಡಿ.ವಿ.ಜಿ ಯವರ ಕಗ್ಗ ಮತ್ತು ನೇಮಿಚಂದ್ರ ಅವರ "ಇಲ್ಲಿಅವರೆಗಿನ ಕಥೆಗಳು" ಓದುತ್ತಿದ್ದೇನೆ. ಸಾಹಿತ್ಯ ಎಂತಹ ಆನಂದ. ನೇಮಿಚಂದ್ರರ ಬಿಸಿರಕ್ತದ ಉತ್ಸಾಹೀ, ಧೀರ ಮತ್ತು ಸಂಕೀರ್ಣ ಭಾವಗಳು ಗಮನ ಸೆಳೆದರೆ, ಡಿ.ವಿ.ಜಿ ಯವರ ಪಕ್ವಗೊಂಡ ನೈಜತೆಗಳು ಮನದಲ್ಲಿ ಮನೆ ಮಾಡುತ್ತಿವೆ. ಒಂದು ರೀತಿಯ ದ್ವಂದ್ವ ಭಾವ. ಏನೇ ಆದರೂ ಈ ಅನುಭೂತಿಗಳು ಬಹಳ ಚೆನ್ನಾಗಿವೆ.
ಎಲ್ಲ ಅರೆಬೆಳಕು, ಅರೆಸುಳಿವು, ಅರೆತಿಳಿವಿಲ್ಲಿ |
ಎಲ್ಲಿ ಪರಿಪೂರಣವೋ ಅದನರಿಯುವನಕ ||
ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ ?
ಎಲ್ಲ ಬಾಳು ರಹಸ್ಯ - ಮಂಕುತಿಮ್ಮ ||
ಎಂತಹ ಚಂದದ ಸಾಲುಗಳು? ನಮ್ಮದೇ ಮತ, ನಮ್ಮದೇ ಧರ್ಮ, ನಮ್ಮದೇ ಜಾತಿ ಎಂತೆಲ್ಲ ಸಾರುವ ನಾವು ಪರಿಪೂರ್ಣರೇ? ಅಥವಾ ನಾವು ಪ್ರತಿಪಾದಿಸುವ ಪರಿಪೂರ್ಣತೆಯ ತೀರ್ಪುಗಾರರು ಯಾರು? ನಮ್ಮ ಈ ವಾದವನ್ನು ಪರಿಶೀಲಿಸುವವರಾರು? ಯಾರಾದರೂ ಪರಿಶೀಲಿಸಲು ಅರ್ಹರೇ?
ಈ ಅನುಭವ, ಈ ವಾದಗಳು, ಈ ತರ್ಕ/ವಿತರ್ಕಗಳು ಬಹಳವೇ ವೈಯಕ್ತಿಕವಾಗಿವೆ. ಎಲ್ಲರ ತರಹೇವಾರು ಅನುಭವಗಳ ಪ್ರಕಾರ ತಳಪಯಾಯ ಸಾಗುತ್ತಾ ನಡೆಯುತ್ತದೆ. ಶತಮಾನ ಶತಮಾನಗಳು ಸಂಶೋಧನೆ, ಆಲೋಚನೆಗಳನ್ನು ಮಾಡಿದರೂ ನಾವು ತಳಪಾಯವನ್ನೇ ಕಟ್ಟುತ್ತಿದ್ದೇವೆ ಹೊರತು ಒಂದು ನಿರ್ಧಿಷ್ಟವಾದ ಪರಿಹಾರ ಮಾಡಲಾರೆವು. ಈ ತಳಪಾಯದ ಮೇಲೆ ಮನೆ ಕಟ್ಟಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಗೆ ಬಿಟ್ಟಿದು.
ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ?
ದಿನಪನದೆ? ಚಂದ್ರನದೆ? ನೀರಿನದೆ? ನಿನದೆ?
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ ? ನೋಡು |
ಗುಣಕೆ ಕಾರಣವೊಂದೆ? - ಮಂಕುತ್ತಿಮ್ಮ ||
ಸಂಶಯಗಳ ಹುಟ್ಟು ಹಾಕುವ ಮನದ ಭಾವಗಳ ಸಂಗ್ರಹ ! ನಿಜಕ್ಕೂ ಈ ಸಾಲುಗಳೊಂದಿಗೆ ತಾಳೆಮಡಿಕೊಳ್ಳುವ ಸಾಮರ್ಥ್ಯ ಬೇಕು. ಈ ಯೋಚನೆಗಳೇ ಉನ್ಮಾದ ನೀಡುತ್ತವೆ. ಕಾರಣಗಳ ಹುಡುಕುತ್ತಾ ಅಲೆಯುವ ನಮಗೆ ಎಲ್ಲದಕ್ಕೂ ನಾವೇ ಬಹುಮುಖ್ಯ ಕಾರಣ ಎನ್ನುವ ಅರ್ಥ ತಿಳಿಯುವುದೇ ಇಲ್ಲ. ಬಹುಶಃ ತಿಳಿದಂದು ದಿನ ನಮ್ಮ ಆರೋಪಗಳ ಪಟ್ಟಿ ಇಲ್ಲವಾಗುತ್ತದೆ. ಅರಿವಿನ ಪರಿಧಿಯೊಳಗೇ ಗುರಿಯನ್ನು ಹೆಸರಿಸುತ್ತೇವೆ. ಎಲ್ಲವೂ ಬಂಧನ! ಶಕ್ತಿಗೆ ದೇಹದ ಬಂಧನ, ಮನದ ಭಾವಗಳಿಗೆ ಭಾಷೆಯ ಬಂಧನ, ಪದಗಳ ಬಂಧನ! ಭಾವಗಳಿಗೆ ಈ ಬಂಧನಗಳಿಲ್ಲದೇ ವ್ಯಕ್ತವಾಗಲೌ ಸಾಧ್ಯವೇ? ಅಥವಾ ವ್ಯಕ್ತಪಡಿಸಿದ ಭಾವಗಳೆಲ್ಲ "ಭಾವ"ಗಳೇ?
ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು?
ಅರಿಯದದು ನಮ್ಮೆದೆಯ ಭಾವಗಳನೊರೆಯೆ ||
ಪರಮಾನುಭವಗಳುಲಿಯನುಭವಿಗಳೊಳ ಕಿವಿಗೆ |
ಒರಟು ಯಾನವೋ ಭಾಷೆ - ಮಂಕುತಿಮ್ಮ ||
ಕುರುಡನಿನ ಚಂದ್ರರನು ಕಣ್ಣಿಂದ ಕಾಣುವನೆ?
ಅರಿಯುವಂ ಸೋಮ್ಕಿಂದೆ ಬಿಸಿಲು ತಣಿವುಗಳ ||
ನರನುಮಂತೆಯೆ ಮನಸಿನನುಭವದಿ ಕಾಣುವನು |
ಪರಸತ್ತ್ವ ಮಹಿಮೆಯನು - ಮಂಕುತಿಮ್ಮ ||
ನಮ್ಮಳತೆಗೋಲುಗಳೇ ಭಿನ್ನವಾಗಿರುವಾಗ ಸಂಭಾಷಣೆಯ ಬೆಲೆ ಏನು? ಕೇವಲ "ಅನುಭವ"ವಷ್ಟೇ ದೇವರಾಗಿ, ಪರಸತ್ತ್ವವಾಗಿ ತೋರ್ಪಡುತ್ತದೆ. ಭಾಷೆಯಲ್ಲಿ ವ್ಯಕ್ತಪಡಿಸಲಾಗದ್ದು ಈ ಅನುಭವ.
Rating
Comments
ಉ: ಕಗ್ಗ - ಮತ್ತೊಂದು ಚಿಂತನೆ
ಉ: ಕಗ್ಗ - ಮತ್ತೊಂದು ಚಿಂತನೆ
In reply to ಉ: ಕಗ್ಗ - ಮತ್ತೊಂದು ಚಿಂತನೆ by krvinutha
ಉ: ಕಗ್ಗ - ಮತ್ತೊಂದು ಚಿಂತನೆ
In reply to ಉ: ಕಗ್ಗ - ಮತ್ತೊಂದು ಚಿಂತನೆ by RAMAMOHANA
ಉ: ಕಗ್ಗ - ಮತ್ತೊಂದು ಚಿಂತನೆ
ಉ: ಕಗ್ಗ - ಮತ್ತೊಂದು ಚಿಂತನೆ
In reply to ಉ: ಕಗ್ಗ - ಮತ್ತೊಂದು ಚಿಂತನೆ by sinjo
ಉ: ಕಗ್ಗ - ಮತ್ತೊಂದು ಚಿಂತನೆ
ಉ: ಕಗ್ಗ - ಮತ್ತೊಂದು ಚಿಂತನೆ