ಕಟ್ಟ ಕೊನೆಗೆ...

ಕಟ್ಟ ಕೊನೆಗೆ...

     ಒಂಟಿಯಾಗಿ ಕುಳಿತು ಶೂನ್ಯವನ್ನೇ ದಿಟ್ಟಿಸುತ್ತಾ.. ದಿಟ್ಟಿಸುತ್ತಾ.. ಥಟ್ಟನೆ ಎಲ್ಲವೂ ನಿಂತಂತಾಗಿ, ಸುತ್ತೆಲ್ಲವೂ ಘನೀರ್ಭವಿಸಿ, ಸ್ಥೂಲದಿಂದ ಸೂಕ್ಷ್ಮದತ್ತ ತಳ್ಳಿದಂತಾಗಿ..

ಅಸಂಖ್ಯ ಶಕ್ತಿಗಳು.. ವಿವಿಧಾಕಾರದ, ಬಣ್ಣ ಬಣ್ಣದ ಶಕ್ತಿಗಳು, ನಾಲಗೆ ಚಾಚಿ ಒಂದನ್ನೊಂದು ನೆಕ್ಕುತ್ತಾ, ಕುಗ್ಗುತ್ತಾ, ಹಿಗ್ಗುತ್ತಾ, ಬಣ್ಣ ಬದಲಿಸುತ್ತಾ, ಒಂದರೊಳಗೊಂದು ಸೇರುತ್ತಾ ಬೇರ್ಪಡುತ್ತಾ, ದೈತ್ಯಾಕಾರವನ್ನು ಹೊಂದಿ ಮತ್ತೆ ಒಡೆದು ಅಣುಗಾತ್ರಗಳಾಗಿ..

ಮತ್ತೂ ಸೂಕ್ಷ್ಮದತ್ತ ಪಯಣಿಸಿ...  ಆಲೋಚನೆಗಳು.. ನಗುವ, ಅಳುವ, ಕೊಲ್ಲುವ, ಕೂಡುವ, ಸ್ವಾರ್ಥದ, ದರ್ಪದ, ಮೋಹದ, ಕಿಚ್ಚಂತೆ ಸುಡುವ, ಬಯಸುವ.. ಸಮುದ್ರದ ಅಲೆಗಳಂತೆ ಮೇಲೇರುತ್ತ ಏರುತ್ತ ಮತ್ತೆ ಕೆಳಗಿಳಿದು ಒಂದಾಗಿ ಮುನ್ನುಗ್ಗಿ ಮತ್ತೆ ಸಾವಿರವಾಗುತ್ತ ಅದೆಲ್ಲಿಂದಲೋ ಹಾರಿ ಬಂದು ನನ್ನ ಸುತ್ತುವರಿದು ಮತ್ತೆಲ್ಲೋ ಮಾಯವಾಗುವ ಯೋಚನೆಗಳು.. ನನ್ನ ಅಸ್ಥಿತ್ವವೂ ಬರೇ ಒಂದು ಯೋಚನೆ ಮಾತ್ರವೇ ಎಂದೆನಿಸಿ.. ಇಲ್ಲ ನನ್ನ ಬೇರುಗಳು ಇನ್ನೂ ಸೂಕ್ಷ್ಮಕ್ಕಿಳಿದಿವೆ ಎಂಬುದರ ಅರಿವಾಗಿ..

ಇನ್ನೂ ಸೂಕ್ಷ್ಮಕ್ಕಿಳಿದಂತೆ ಎಲ್ಲೆಲ್ಲೂ ದ್ವಂದ್ವಗಳೇ ಕಂಡು.. ನಿಜ-ಸುಳ್ಳು, ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು, ಚಂದವಿರುವುದು-ಅಸಹ್ಯವಾದದ್ದು... ಅಸಂಖ್ಯ ದ್ವಂದ್ವಗಳು ಒಂದನ್ನೊಂದು ಅಪ್ಪಿಕೊಂಡು ಮಿಲನದ ಸರ್ಪಗಳಂತೆ ಒಂದಕ್ಕೊಂದು ಸುರುಳಿ ಸುತ್ತುತ್ತಾ, ಒಂದರಿನ್ನೊಂದು ಹುಟ್ಟುತ್ತಾ ಸಾಯುತ್ತಾ, ಒಂದಿಲ್ಲದೆ ಇನ್ನೊಂದಿರಲು ಸಾಧ್ಯವೇ ಇಲ್ಲವೇನೋ ಎಂಬಂತೆ ತೋರಿ ಇನ್ನೊಂದು ಕ್ಷಣದಲ್ಲಿ ಎಲ್ಲವೂ ಮಾಯವಾಗಿ ಇರುವ ದ್ವಂದ್ವಗಳೆಲ್ಲಾ ಒಟ್ಟಾಗಿ, ಬರೇ ನಾನು ಮತ್ತು ಬೇರೆಯದು ಎಂಬ ದ್ವಂದ್ವವೊಂದೇ ಉಳಿದು...

ಫಕ್ಕನೆ ಇನ್ನೂ ಮುಂದುವರಿದು, ಅತಿ ಸೂಕ್ಷ್ಮಕ್ಕಿಳಿದು.. ಅತೀವ ಆನಂದ! ಎಲ್ಲಕ್ಕಿಂತಲೂ ಹಗುರವಾಗಿ, ತೇಲುವ ಆನಂದ.. ಸುತ್ತಲಿಂದಲೂ ಆವರಿಸಿಕೊಂಡು ಬರುವ ವಿವರಿಸಲಾರದ ಆನಂದ! ಈವರೆಗೆ ಹಾದು ಬಂದುದೆಲ್ಲವೂ ಸ್ಥೂಲವೆನಿಸಿ, ಇಲ್ಲೇ ಇದ್ದು ಬಿಡುವವೆನಿಸಿ, ಇದ್ದರೆ ಮೋಹವುಂಟಾಗಬಹುದೆನಿಸಿ, ಈ ಸೂಕ್ಷ್ಮ ಸ್ಥಿತಿಗಿಂತಲೂ ಆಚೆಗೆ ಏನಿರಬಹುದೆಂದು ಮುನ್ನುಗ್ಗಿ..

ಅರೆರೆ...  ಅಗಾಧ!   ಅನಂತ!!   ಅಖಂಡ!!!   ಅದೆಂತಹದೋ ಎಲ್ಲೆಲ್ಲೂ! ಅದೊಂದೇ...!! ನಾನೇ ಅದಾಗಿ... ಅದೇ ನಾನಾಗಿ... ನಾನೇ ಎಲ್ಲೆಲ್ಲೂ... ಎಲ್ಲದರೊಳಗೂ ನಾನೇ... ಎಲ್ಲದೂ ನನ್ನೊಳಗೇ... ಕಣ ಕಣದಲ್ಲೂ... ನಾನೇ !! ನನಗಿಂತ ಆಚೆಯಿಲ್ಲ, ನನಗಿಂತ ಈಚೆಯಿಲ್ಲ, ನನಗಿಂತ ಮುಂಚಿಲ್ಲ, ಅನಂತರವಿಲ್ಲ... ಆಕಾರಗಳೆಲ್ಲವೂ ನನ್ನೊಳಗಿದ್ದು ನನ್ನದೇ ಯಾವ ಆಕಾರವಿಲ್ಲದೆ, ಎಲ್ಲವನ್ನೂ ಬಲ್ಲವನಾಗಿ, ನನ್ನ ಇರುವಿಕೆಯ ಅರಿವು ಮಾತ್ರವಿದ್ದು... ನಾನಾರೆಂದು ತಿಳಿದು...

ಇನ್ನೆಂದೂ ಬೇರೇನೂ ಬೇಡವೆನಿಸುವ ಸ್ಠಿತಿ......

Rating
No votes yet