ಕಡಲೂ ನಿನ್ನದೆ ಒಡಲ ಕಿಚ್ಚೂ ನಿನ್ನದೆ ಮುಳುಗದಿರಲಿ....
ಮನದ ತುಂಬ
ಕತ್ತಲು ಮುಸುಕಿದೆ
ಯಾವುದೋ ಮಾಯಾ
ರಾಗದ ಜಾಲದಿ ಬಂದಿತ
ಏಕಾಕಿ ಮನ ಹೊರಟಿದೆ
ಸಾಗರದಲೆಗಳ
ನಡುವೆ ನಾವಿಕನಿಲ್ಲದ
ನಾವೆಯಲ್ಲಿ ದೂರ
ದಡದ ಗೂಡನರಸಿ...
ಸುತ್ತಾ ನೀರು ಮೇಲೆ
ನೀಲ ನಭದ ವಿಸ್ತಾರ.
ಬೀಸುವ ಗಾಳಿಗೆ ದೀಪದ
ಕೆನ್ನಾಲಿಗೆ ನಾವೆಯ
ಆವರಿಸಿ ಏಳುತ್ತಾ ಬೀಳುತ್ತಾ
ಸಾಗುತ್ತಿರಲು ದೂರದಿಂದ
ಅಲೆಯಲೆಯಾಗಿ ತೇಲಿ
ಬರುತಲಿದೆ ಇಂಪಾದ ಗಾನ...
ಇದೇನು ಕನಸೋ ನನಸೋ
ಅರಿಯದಾಗಿದೆ ಮನ...
ನಾವಿಕನಿಲ್ಲದ ನಾವೆ
ಮುಳುಗುವುದು ಖಚಿತ
ಸಾಗುವಷ್ಟು ಸಮಯ ಸಾಗಲಿ
ಉಳಿಸುವ ಅಳಿಸುವ ಜವಾಬ್ದಾರಿ
ಕಡಲಿನದ್ದೇ...
ಉದಾಸನಾಗದಿರು ಮನವೇ
ಹುಡುಕಾಟದ ಹಾದಿ
ಹೂವಿನ ಹಾಸಿಗೆಯಲ್ಲ
ವೆಂಬ ಸತ್ಯದ ಅರಿವು
ನಿನಗಿದೆಯಲ್ಲಾ..
ಸುಂದರ ಬೆಳಕು
ಜನ್ಮಿಸಲು ಅಗಣಿತ
ತಾರೆ ಚಂದ್ರಮರ ಕೊನೆ
ಯಾಗಬೇಕು....
ಕಡಲೂ ನಿನ್ನದೆ
ಒಡಲ ಕಿಚ್ಚೂ ನಿನ್ನದೆ
ಬದುಕಿನ ನಾವೆ
ಮುಳುಗದಿರಲೆಂಬುದೇ
ನಮ್ಮ ಪ್ರಾರ್ಥನೆ....
Rating