ಕತೆ : ಅಂತರಂಗದ ಗಂಗೆ

ಕತೆ : ಅಂತರಂಗದ ಗಂಗೆ

ಆಫೀಸ್ ಗೆ ಮುಂಚೆ ಬರುವ ಅಭ್ಯಾಸವಿದ್ದರೆ ಇದೊಂದು ಮುಜುಗರ. ಒಳಗೆಲ್ಲ ಕಸ ಗುಡಿಸುತ್ತಿದ್ದರು. ಹಾಗಾಗಿ ಸೆಕ್ಷನ್ನಿನ ಹೊರಗೆ ನಿಂತಿದ್ದೆ. ನಾನು   ನಿಂತಿರುವುದು ಗಮನಿಸಿದ ಆಕೆ ಬೇಗ ಬೇಗ ಎಂಬಂತೆ ಗುಡಿಸಿ, ಹಾಗೆ ಒಳಗಿದ್ದ ಡಸ್ಟ್ ಬಿನ್ ಗಳ ಎಲ್ಲ ಕಾಗದಗಳನ್ನು ಒಂದೆ ಬ್ಯಾಸ್ಕೆಟ್ ಗೆ ಹಾಕಿ ಹೊರಬಂದಳು. ಒಳಗೆ ಗುಡಿಸಿದಾಗ ಎದ್ದ ದೂಳು ಸ್ವಲ್ಫ ಸರಿಯಾಗಲಿ ಎಂದು ಒಂದೆರಡು ನಿಮಿಷ ನಿಂತಿದ್ದೆ. ಆಕೆ ಒಳಗಿನಿಂದ ತಂದ ಕಸವನ್ನೆಲ್ಲ ಹೊರಗಿನ ದೊಡ್ಡ ಕಸದಡಬ್ಬಿಗೆ ಹಾಕುವ ಮುನ್ನ ಅದೇನೊ ಗಮನಿಸಿದಳು.  ಈ ಅಕ್ಷರಜ್ಞಾನವಿಲ್ಲದಿರುವ ಕೆಲಸದವರಲ್ಲಿ ಒಂದು ವಿಷೇಶವಿರುತ್ತೆ, ಅವರು ಕೆಲವು ಪತ್ರಗಳನ್ನು ಮುಖ್ಯ ಎಂದು ಅವರದೆ ಆದ ರೀತಿಯಲ್ಲಿ ನಿರ್ಧಾರಮಾಡಿ ತೆಗೆದಿಡುತ್ತಾರೆ

ಆಕೆ ಒಂದು ಪತ್ರವನ್ನು ನನ್ನ ಕೈಗೆ ಕೊಡುತ್ತ

"ಇದೇನೊ ನೋಡಿ ಸಾರ್,  ಕಸದ ಜೊತೆ ಬಂದು ಬಿದ್ದಿದ್ದೆ, ಯಾವುದೊ ಡಭ್ಭಿಯದು " ಎನ್ನುತ್ತ ಕೊಟ್ಟಳು.

ಗಮನಿಸಿದೆ, ಅದೊಂದು ಕನ್ನಡದಲ್ಲಿ ಬರೆದ ಪತ್ರ, ಎರಡು ಪುಟಗಳಷ್ಟಿದ್ದು,  ಸ್ಟಾಪ್ಲರ್ ನಿಂದ ಪಿನ್ ಮಾಡಲಾಗಿತ್ತು. ಅದನ್ನು ಹಿಡಿದು ಒಳಬಂದು ನನ್ನ ಟೇಬಲ್ಲಿನ ಮೇಲಿಟ್ಟೆ. ಯಾವುದೋ ಕೆಲಸದ ಮೇಲೆ ಗಮನಹರಿಸುತ್ತ, ಆ ಪತ್ರದ ಬಗ್ಗೆ ಮರೆತೆ ಬಿಟ್ಟಿದ್ದೆ.

ಊಟದ ನಂತರ, ಅತ್ತಿತ್ತ ನೋಡುವಾಗ ಮತ್ತೆ ಆ ಪತ್ರ ಟೇಬಲಿನ ಮೇಲೆ ಗಮನ ಸೆಳೆಯಿತು. ಯಾರಿಗೆ ಸೇರಿರಬಹುದು ಎನ್ನುತ್ತ ಕಣ್ಣಾಡಿಸಿದೆ. ಆದರೆ ಅದು ಆಫೀಸ್ ಗೆ ಸೇರಿದ ಪತ್ರವಾಗಿರದೆ, ಯಾರದೋ ಸ್ವಂತ ಪತ್ರವಾಗಿತ್ತು.  ಮೇಲೆ ಬರೆದ ದಿನಾಂಕವಾಗಲಿ ಸ್ಥಳವಾಗಲಿ ಇಲ್ಲ. ಕಡೆಯಲ್ಲಿ ನೋಡಿದೆ, ನಿನ್ನ ಒಲವಿನ   ವಿಶು.. ಅಂತಿತ್ತು.    

ಯಾರ ಪತ್ರ ಎಂದು ತಿಳಿಯುತ್ತಿಲ್ಲ ಯಾರಿಗೆ ಎಂದು ಕೊಡುವುದು ಪತ್ರದ ಸಾರಂಶದಿಂದ, ಪತ್ರದ ಒಡೆಯರು ಸಿಗಬಹುದೆ ಅನ್ನಿಸಿತು ಸುಮ್ಮನೆ ಕಣ್ಣಾಡಿಸಿದೆ.

ಸಾರಂಶ ಹೀಗಿತ್ತು.

ನನ್ನ ಪ್ರೀತಿಯ ಹುಡುಗಿ  ನಿಮ್ಮಿ

ನನ್ನ ಪತ್ರದಿಂದ ನಿನಗೆ ಆಶ್ಚರ್ಯವಾಗಬಹುದು, ಮತ್ತೆ... ನಿಮ್ಮಿ ಎಂದು ಕರೆದು ನಿನಗೆ ಬರೆದಿರುವ ಪತ್ರ ಅನಿರೀಕ್ಷಿತವು ಅನ್ನಿಸಬಹುದು, ಎಸ್ ಎಮ್ ಎಸ್ , ಮೊಬೈಲ್, ಈ ಮೈಲ್ ಗಳ  ನಡುವೆ ಈ ಪತ್ರವು ನಗು ತರಿಸಲುಬಹುದು ಅಲ್ಲವೆ. ಆದರೆ ನಿನ್ನನ್ನು ಬಹಳ ವರ್ಷಗಳ ನಂತರ ಮತ್ತೆ ಕಾಣುವಾಗ ನನಗೆ ಆದ ಸಂತೋಷವನ್ನೆಲ್ಲ ವಿವರಿಸಲು ಈ ಎಲ್ಲ  ಅದುನಿಕ  ಸಾಧನಗಳು ವಿಫಲವಾಗಬಹುದು ಅನಿಸಿತು ಹಾಗಾಗಿ ಪತ್ರ ಬರೆಯುತ್ತಿರುವೆ.  ಈಗಿನ ನಿನ್ನ ಭಾವನೆಗಳು ಹೇಗಿವೆಯೊ, ನಿನ್ನ ಮನಸಿನಲ್ಲಿ ನನಗೆ ಯಾವ ಜಾಗವಿದೆಯೊ ಏನು ಕಲ್ಪನೆಯು ನನಗಿಲ್ಲ.

ನನಗೆ ಸದಾ ಕಾಡುವುದು, ನಮ್ಮ ಅದೇ ಹೈಸ್ಕೂಲು ಹಾಗು ಕಾಲೇಜಿನ ದಿನಗಳು. ಬಹುಷಃ  ನಮ್ಮ ಕಾಲೇಜಿನಲ್ಲಿ ನನ್ನ ಹಾಗು ನಿನ್ನ ಎಲ್ಲ ಸ್ನೇಹಿತರು ನಿರೀಕ್ಷಿಸಿದ್ದರು ನಾನು ಹಾಗು ನೀನು ಓದಿನ ನಂತರ ಮದುವೆಯಾಗುವೆವು ಎಂದು. ಆದರೆ ಎಲ್ಲ ಪ್ರೀತಿಗಳು ಮದುವೆಯಲ್ಲಿ ಕೊನೆಗೊಳ್ಳುವುವು ಎನ್ನುವುದು ಕೇವಲ ಕಲ್ಪನೆ. ನಾನು ಹಾಗು ನೀನು ಅದೆಷ್ಟು ಬಾರಿ ನಮ್ಮ ಭವಿಷ್ಯದ ಬಗ್ಗೆ ಕನಸು ಕಂಡಿದ್ದೆವು ಲೆಕ್ಕವಿಲ್ಲ. ನಮ್ಮ ಕನಸುಗಳಿಗೆ ಕೊನೆಯು ಇರಲಿಲ್ಲ. ನಮ್ಮ ಕನಸುಗಳಿಗೆ ಯಾರಾದರು ಅಡ್ಡಿ ಬರುವರೆಂಬ ನಿರೀಕ್ಷೆಯು ಇರಲಿಲ್ಲ. ಹಾಗೆ ನೋಡಿದಲ್ಲಿ ನನ್ನ ಕನಸಿಗೆ ಯಾರು ಅಡ್ಡಬರಲಿಲ್ಲ ಆದರೂ ಕನಸು ನನಸಾಗಿ ನೆರವೇರಲಿಲ್ಲ ಅಲ್ಲವೆ.

ಶಾಲೆಯ ಹಿಂದಿನ ಮರಗಳ ಕೆಳಗೆ ಕುಳಿತು ನಾವು ಆಡಿದ ಅದೆಷ್ಟು ಪಿಸುನುಡಿಗಳು ಗಾಳಿಯಲ್ಲಿ ಕರಗಿ ಹೋಯಿತು, ಹಾಗೆ ನಮ್ಮ ಕನಸುಗಳು ಸಹ ನಿದ್ದೆಯಲ್ಲಿ ಕರಗಿ ಹೋಯಿತೇನೊ. ಇಷ್ಟು ವರ್ಷಗಳ ನಂತರವು ನಿನ್ನ ನೆನಪಾದರೆ ನಾನು ಅದೇಕೊ ಚಿಕ್ಕವಯಸ್ಸಿನ ಪ್ರೇಮಿಯಂತೆ ಆಗಿಬಿಡುವೆ. ಯಾವುದೊ ಮರದ ಕೆಳಗೆ ಕಣ್ಮುಚ್ಚಿ ಕುಳಿತರೆ ಬೀಸುವ ಗಾಳಿಯಲ್ಲಿ ನಿನ್ನ ಪಿಸುನುಡಿ ಇಂದಿಗೂ ಇದೆ ಅನ್ನಿಸುತ್ತದೆ. ಮರಗಳಿಗೂ ಪ್ರೇಮಿಗಳಿಗೂ ಅದೇನು  ಬಂಧವೊ ಅರಿಯೆ.

ನಮ್ಮ ಕನಸು ಅದೇಕೊ ಮಧ್ಯದಲ್ಲಿಯೆ  ನಿಂತು ಹೋಯಿತು. ಅದಕ್ಕೆ ಕಾರಣವನ್ನು ನಾನು ಎಂದು ಅರಿಯಲಿಲ್ಲ. ನಿನಗೆ ಗೊತ್ತಿತ್ತೇನೊ ನೀನು ತಿಳಿಸಲಿಲ್ಲ.  ನನ್ನ ಪ್ರತಿ ಮಾತು ನಿನಗೆ ಇಷ್ಟ ಅಂದಿದ್ದೆ, ನನ್ನ ಬರುವಿಕೆಯನ್ನು ಕಾಯುವುದು ನಿನಗೆ ಅಮೂಲ್ಯ ಕ್ಷಣ ಅನ್ನುತ್ತಿದೆ. ನಮ್ಮ ಅಗಲಿಕೆಯ ಕ್ಷಣವೆ ನನಗೆ ಮರಣ ಎಂದು ನೀನೆ ನುಡಿದಿದ್ದೆ. ಆದರೆ ಅದೇನು ಆಯಿತು ಎಂದು ನನಗೆ ತಿಳಿಯಲಿಲ್ಲ. ನನ್ನ ಪ್ರತಿ ಮಾತಿನಲ್ಲು ನೀನು ಅದೇಕೊ ತಪ್ಪನ್ನೆ ಹುಡುಕಿ ತೆಗೆಯುತ್ತಿದ್ದೆ. ನಾನು ಬರಲು ತಡವಾದರೆ ನನ್ನ ಪ್ರೀತಿಯನ್ನೆ ಶಂಕಿಸಿ ದೂರುತ್ತಿದ್ದೆ.  ನನ್ನ ಅಗಲಿಗೆ ನಿನಗೆ ಮರಣ ಎಂದಿದ್ದ ನೀನು ಅದೇಕೊ, ಏನಾದರು ನೆಪ ಒಡ್ಡಿ ನನ್ನನ್ನು ತಪ್ಪಿಸಲು , ದೂರ ಇರಿಸಲು ಪ್ರಯತ್ನಿಸುತ್ತಿದ್ದೆ.  

ನನಗೆ ತಿಳಿಯುತ್ತಿತ್ತು, ನಿನ್ನ ವರ್ತನೆಯಲ್ಲಿ ಅದೇನೊ ಅಸಹಜತೆ ಇದೆ ಎಂದು. ನೀನು ನನ್ನ ಮೇಲೆ ತಪ್ಪು ಹೊರಸಿ ಮಾತನಾಡುವಾಗಲೆಲ್ಲ ನೀನು ಸಹಜವಾರುತ್ತಿರಲಿಲ್ಲ, ಕೋಪದ ಅಭಿನಯ ತೋರಿಸುತ್ತ ಇದ್ದೆ ಅಷ್ಟೆ. ನನ್ನನ್ನು ದೂರ  ತಳ್ಳುವಾಗಲು ನಿನ್ನಲ್ಲಿ ಅದೆಂತದೊ ನೋವು ಕಣ್ಣಗಳಲ್ಲಿ ಕಾಣುತ್ತಿತ್ತು. ಆದರೆ ನೀನು ಹೊರಗೆ ಬೇರೆ ರೂಪ ಧರಿಸಿರುತ್ತಿದ್ದೆ. ನನಗೆ ಅಪರಿಚಿತಳಂತೆ ವರ್ತಿಸಲು ಕಷ್ಟ ಪಡುತ್ತಿದ್ದೆ.

  ಇದ್ದಕ್ಕಿದಂತೆ ನಿನ್ನ ಮದುವೆ ನಿಶ್ಚಯವಾಗಿರುವ ವಿಷಯ ತಿಳಿದಾಗ , ನನಗೆ ಅದು ಅನಿರೀಕ್ಷಿತ ಸುದ್ದಿ  ,   ನೀನು ಕಡೆ ಕ್ಷಣದವರೆಗು ಆ ಸುದ್ದಿಯನ್ನು ಅದೇಕೆ ಮುಚ್ಚಿಟ್ಟೆ ಎಂದು ನನಗೆ ತಿಳಿಯಲೆ ಇಲ್ಲ.  ನನ್ನನ್ನು ದೂರ ಮಾಡಲು ನಿನಗೆ ಅದೇನೊ ಕಾರಣವಿತ್ತು, ಬಲವಂತವಿತ್ತು ಎಂದು ಒಂದು ಕ್ಷಣವು ನೀನು  ತೋರಿಸಿಕೊಳ್ಳಲಿಲ್ಲ.  ನನಗಂತು ದೊಡ್ಡ ಅಘಾತವಾಗಿತ್ತು. ನಿನ್ನ ವಿಚಿತ್ರ ವರ್ತನೆಯ ಹಿಂದೆ ಇಂತದೊಂದು ಕಾರಣವಿರಬಹುದೆಂದು ನಾನು ಊಹೆ ಮಾಡಿರಲಿಲ್ಲ ಬಿಡು.

ನಾನು ನಿನ್ನ ಮದುವೆಗು ಬಂದೆ, ಅಪರಿಚಿತನಂತೆ    ನಿನ್ನ ಎದುರಿಗೆ ನಿಂತು ಮದುವೆಗೆ ಶುಭ ಹಾರೈಸಿದೆ. ಆಗಿನ ನಿನ್ನ ಮುಖದ ಭಾವನೆಯನ್ನು  ಅರ್ಥಮಾಡಿಕೊಳ್ಳಲು ನನಗೆ ಇಂದಿಗೂ ಸಾದ್ಯವೆ ಆಗಿಲ್ಲ.  ನಾನು ಅಲ್ಲಿಂದ ಹೊರಡುವ ಮುಂಚೆ ನೀನು ನನ್ನತ್ತ ನೋಡುವಾಗ ಇದ್ದ ಭಾವನೆ ಏನು ? ,  ವಿಶ್ವದ ಎಲ್ಲ ಭಾವನೆಗಳನ್ನು ಒಟ್ಟಿಗೆ ಸೇರಿಸಿ, ಬಿಂದು ಗಾತ್ರಕ್ಕೆ ತಂದು ನಿನ್ನ ಕಣ್ಣಲ್ಲಿಟ್ಟಂತೆ ಕಾಣಿಸಿ ನಾನು ಬೆಚ್ಚಿ ಬಿದ್ದಿದ್ದೆ, ಕನಲಿಹೋಗಿದ್ದೆ

ಅದಾಗಿ ಈಗ ವರ್ಷಗಳೆ ಕಳೆದವು ,  ಗಿಡವನ್ನು ಬೇರು ಸಮೇತ ಕಿತ್ತು, ಮತ್ತೊಂದಡೆ ನೆಟ್ಟರೆ ಹೇಗಿರುತ್ತೆ, ಹಾಗೆ ಮತ್ತೆ ಮನ ಹೊರಗಿನ ಪ್ರಪಂಚದಲ್ಲಿ  ನಿಧಾನಕ್ಕೆ ಬೇರು ಬಿಟ್ಟಿತ್ತು. ಮದುವೆಯು ಆಯಿತು ನನಗೆ ಈಗ ಮಗನು ಸಹ ಇದ್ದಾನೆ ಅದರಲ್ಲಿ ಯಾವ ಮುಚ್ಚುಮರೆಯು ಇಲ್ಲ.

 ಇಷ್ಟು ವರ್ಷಗಳ ನಂತರ  ಒಮ್ಮೆಲೆ ನಮ್ಮ ಆಫೀಸಿನಲ್ಲೆ ಪ್ರತ್ಯಕ್ಷಳಾಗಿ ನನ್ನಲ್ಲಿ ಅಚ್ಚರಿ ಮೂಡಿಸಿದೆ. ನೀನು ನಮ್ಮದೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿರಬಹುದೆಂಬ ಕಲ್ಪನೆಯು ನನಗಿರಲಿಲ್ಲ ಬಿಡು.

ಈಗ ಹೇಗಿದ್ದೀಯ. ಬಹುಷಃ ನೀನು ನಿನ್ನದೆ ಸಂಸಾರದಲ್ಲಿ , ಸುಖದಲ್ಲಿ ಇದ್ದಿರಬಹುದು. ಈಗ ನನ್ನನ್ನು ಕಂಡು ನಿನಗೂ ಗಲಿಬಿಲಿಯಾದಂತೆ ಕಾಣಿಸಿತು. ಈಗ ಯಾವ ಗಾಭರಿಗು ಕಾರಣವಿಲ್ಲ ಬಿಡು. ಜೀವನ ಕಂಡವರು. ಅದರು ಒಂದೆ ಒಂದು ಕುತೂಹಲ. ನಿನ್ನ ಜೊತೆ ಒಂದು ಸಾರಿ ವಿರಾಮವಾಗಿ ಕುಳಿತು ಮಾತನಾಡಬೇಕು ಎಂದು. ಸಾದ್ಯವಾದರೆ ಹಿಂದಿನ ನೆನಪುಗಳ ಪುನರಾವಲೋಕನ ಸಾದ್ಯವಿದೆ ಅಲ್ಲವೆ.

 ಈ ಸಂಜೆ ಆಫೀಸಿನ ನಂತರ , ಸಿಗಲು ಸಾದ್ಯವೆ. ಇದರಲ್ಲಿ ಯಾವ ಬಲವಂತವು ಇಲ್ಲ. ಒಮ್ಮೆಯಾದರು ಎದುರಿಗೆ ಕುಳಿತು ನಿನ್ನ ಅಂದಿನ ನಿಗೂಢ ವರ್ತನೆಗೆ ಕಾರಣ ಹೇಳಿಬಿಡು. ನಾವಿಬ್ಬರು ಈಗ ಸಮಾನಂತರ ರೇಖೆಯ ಮೇಲೆ ಚಲಿಸುವ ಜೀವನ ಮಾರ್ಗದಲ್ಲಿರುವರು. ಸಂಜೆ ಆರು ಘಂಟೆಗೆ ರಾಜಾಜಿನಗರದ ಕಾಫಿಡೇ ಯಲ್ಲಿ ನಿನ್ನನ್ನು ಬೇಟಿಮಾಡುವೆ ಎಂಬ ನಿರೀಕ್ಷೆಯಲ್ಲಿರುವೆ. ಒಮ್ಮೆ ನಿನಗೆ ಇಷ್ಟವಾಗಲಿಲ್ಲ ಅಂದರೆ ಯಾವ ಬೇಸರವು ಬೇಡ. ಪತ್ರವನ್ನು ಹರಿದುಹಾಕಿ ಸುಮ್ಮನಾಗಿಬಿಡು.  ಎಲ್ಲರ ಕಣ್ಣುಗಳಲ್ಲಿ ಅಪರಿಚಿತರಾಗಿಯೆ ಉಳಿದುಬಿಡೋಣ

ಇಂತಿ ನಿನ್ನ ಪ್ರೀತಿಯ …. ವಿಶು


ಪತ್ರವನ್ನು ಓದಿ ಮುಗಿಸಿದಾಗ ನನಗೆ ವಿಚಿತ್ರವೆನಿಸಿತು. ಮೊದಲೆನೆಯದಾಗಿ ಪತ್ರವನ್ನು ಯಾರು ಯಾರಿಗೆ ಬರೆದಿರಬಹುದು ಎನ್ನುವದನ್ನು  ತಿಳಿಯಲಾಗುತ್ತಿಲ್ಲ. ಇಲ್ಲಿ ಅನೇಕ ಸಾದ್ಯತೆಗಳಿದ್ದವು. ಬರೆದವನು ಅದನ್ನು ಅವನ ಪ್ರೀತಿಯ ಹುಡುಗಿಗೆ ತಲುಪಿಸದೆ ಹಾಗೆ ಅದನ್ನು ಬುಟ್ಟಿಗೆ ಎಸೆದಿರುವ ಸಾದ್ಯತೆ. ಎರಡನೆಯದು ಪತ್ರ ಸ್ವೀಕರಿಸಿದ ಆಕೆ ಅದನ್ನು ಓದದೆ ಅಥವ ಓದಿ ಎಸೆದಿರುವ ಸಾದ್ಯತೆ.  ಪತ್ರದ ಓದಿದ ನಂತರ  ಅವರು ಕಾಫಿಗೆ ಹೋಗಿ ಹಳೆಯ ವಿಷಯಗಳನ್ನೆಲ್ಲ ಮೆಲುಕುಹಾಕಿ ನಂತರ ಈಗಿನ  ಸಂದರ್ಭಕ್ಕೆ ಅನಿವಾರ್ಯವಾಗಿ ಹೊಂದುಕೊಳ್ಳುವ ಪರಿಸ್ಥಿಥಿ. ಅಥವ ಮತ್ತೆ ಅವರಿಬ್ಬರ ನಡುವೆ ಚಿಗುರಿರಬಹುದಾದ ಪ್ರೀತಿಯ ಸಾದ್ಯತೆ, ಇದೊಂದು ಪತ್ರಕ್ಕೆ ಎಷ್ಟೊಂದು ಆಯಾಮಗಳು.
ನಾನು ಕುಳಿತ್ತಿದ್ದ ಜಾಗ ವಿಷೇಶವಾಗಿತ್ತು. ನಾನು ಸೆಕ್ಷನ್ ನಲ್ಲಿ ಇರುವ ಎಲ್ಲರನ್ನು ಕುಳಿತಲ್ಲಿಂದ ಕಾಣಬಹುದಿತ್ತು. ಸುಮಾರು ಮೂವತ್ತು ಜನರಿದ್ದ ಜಾಗ ಅದು. ಸುಮ್ಮನೆ ತಲೆ ಎತ್ತಿ ಸುತ್ತಲು ಕಣ್ಣು ಹಾಯಿಸಿದೆ. ಎಲ್ಲರು ಅವರವರ ಕೆಲಸದಲ್ಲಿ ಮಗ್ನರಾಗಿದ್ದಾರೆ. ಗಂಡಸರು , ಹೆಂಗಸರು  ಎಲ್ಲರು ಇದ್ದಾರೆ. ಕೆಲವರು ಪೋನಿನಲ್ಲಿ ಯಾರೊಂದಿಗೆ ಮಾತನಾಡುತ್ತಿರುವರು. ನೋಡಿದರೆ ಕೆಲಸಕ್ಕೆ ಸಂಭಂದಪಟ್ಟಂತೆ ಅನಿಸುವ ರೀತಿ ಇದೆ. ಕೆಲವರು ಗಂಭೀರ ಕೆಲವರು ನಗು, ಕೆಲವರ ಮುಖದಲ್ಲಿ ಆಯಾಸ. ಈ ಪತ್ರ ಯಾರಿಗೆ ಸೇರಿರಬಹುದೆಂದು ಕಲ್ಪಿಸಲು ಕಷ್ಟವಾಗುತ್ತಿದೆ, ಪತ್ರದಲ್ಲಿ ಉಪಯೋಗಿಸಿರುವ ಎರಡು ಹೆಸರುಗಳು ನಿಜ ನಾಮಗಳಲ್ಲ. ಪರಸ್ಪರ ಪ್ರೀತಿಯಿಂದ ಗುರುತಿಸಲು ಇಟ್ಟುಕೊಂಡಿರುವ ಮುದ್ದು ಹೆಸರುಗಳು ಅಂತ ಗೊತ್ತಾಗುತ್ತಿದೆ.

ಇಲ್ಲಿ ಕುಳಿತಿರುವರಲ್ಲಿ ಒಬ್ಬರು ಯಾರೊ ನಿಮ್ಮಿ ಇರಬಹುದು, ಯಾರೊ ವಿಶು ಇರಬಹುದು, ಇಲ್ಲಿ ಏಕೆ ಇಂತ ವಿಶು ಅಥವ ನಿಮ್ಮಿ  ಹೊರಗೆ ರಸ್ತೆಯಲ್ಲಿ, ಮನೆಗಳಲ್ಲಿ,  ವಾಹನಗಳಲ್ಲಿ, ಪಾರ್ಕಗಳಲ್ಲಿ , ಸಿನಿಮಾಹಾಲಿನಲ್ಲಿ ಎಲ್ಲೆಲ್ಲೊ ಇರಬಹುದು.

ನನ್ನೊಳಗೆ ಎಂತದೊ ಭ್ರಮೆಯೊಂದು ತುಂಬಿತು. ನಾನು ನೋಡುವ ಹೊರಗಿನ ವ್ಯವಹಾರಿಕ ಪ್ರಪಂಚವೆ ಬೇರೆ. ಈ ಪ್ರೀತಿ ಪ್ರೇಮ ಅನ್ನುವ ಲೋಕವೆ ಬೇರೆ. ಮನುಷ್ಯನ ಬದುಕಿನ ಇತಿಹಾಸದುದ್ದಕ್ಕು, ಗುಪ್ತಗಾಮಿನಿಯಂತೆ , ಅಂತರಂಗದಲ್ಲಿನ ಗಂಗೆಯಂತೆ ಹರಿಯುತ್ತಲೆ ಬರುತ್ತಿದೆ . ಈ ಪ್ರೇಮಿಗಳ ನಡುವಿನ ಈ ಪ್ರೀತಿ. ಅದರ ಹರಿವಿಕೆಯನ್ನು ಗುರುತಿಸುವುದೆ ಒಮ್ಮೊಮ್ಮೆ ಕಷ್ಟ. ನಾವು ನಿಂತ ನೆಲದ ಕೆಳಗೆ ಎಷ್ಟು ಆಳದಲ್ಲಿ ಪ್ರವಹಿಸುತ್ತಿರಬಹುದಾದ ಅಂತರ್ಜಲದಂತೆ ಈ ಪ್ರೀತಿ  ಅನ್ನಿಸಿತು. ಕಣ್ಣಿಗೆ ಕಾಣಿಸದು. ದ್ವನಿಯು ಕೇಳಿಸದು. ಆತ್ಮ ಆತ್ಮಗಳ ನಡುವಿನ ಪ್ರವಾಹ ಈ ಪ್ರೀತಿ ಪ್ರೇಮ ಎಂಬ ಭಾವ ಪ್ರವಾಹ. ಒಮ್ಮೆ ಕಣ್ಣು ಮುಚ್ಚಿದೆ. ಯಾರೊ ಪಾಪ ನನಗೆ ಪರಿಚಿತರಾಗಿರಬಹುದಾದ ಅಪರಿಚಿತರು ಈ ಪ್ರೇಮಿಗಳು. ತಮ್ಮ ಜೀವನಕ್ಕೆ ಅನಿವಾರ್ಯವಾಗಿ ಹೊಂದಿಕೊಂಡವರು ಅನ್ನಿಸಿತು.

ಮತ್ತೆ ಪತ್ರದ ಕಡೆಗೊಮ್ಮೆ ನೋಡಿದೆ.  ಆ ಪತ್ರ ಅಪ್ರಸ್ತುತ ಅನ್ನಿಸಿತು.
ಅದನ್ನು ಮದ್ಯಕ್ಕೆ ಮಡಿಚಿ ಎರಡು ಬಾಗವಾಗಿ ಹರಿದೆ,
ಮತ್ತೆ ಸೇರಿಸಿ, ಮದ್ಯಕ್ಕೆ ಎರಡು ಬಾಗವಾಗಿ ಹರಿದೆ,
ಮತ್ತೆ ಸೇರಿಸಿ ಎರಡು ಬಾಗವಾಗಿ ಹರಿದೆ...

-ಮುಗಿಯಿತು

Rating
No votes yet

Comments

Submitted by bhalle Wed, 02/06/2013 - 23:15

ಪತ್ರವನ್ನು ಹರಿದು, ಆ ಭೇಟಿಯಿಂದ ಹರಿದು ಹೋಗಿದ್ದ ಸಂಬಂಧವನ್ನು ಹಾಗೇ ಹರಿಯ ಬಿಟ್ಟು, ಸದ್ಯದ ಸಂಸಾರ ಹರಿದು ಚಿಂದಿಯಾಗದಂತೆ ತಡೆದಿದ್ದೀರಿ ಅನ್ನಿಸಿತು !

Submitted by kavinagaraj Fri, 02/08/2013 - 09:45

In reply to by sathishnasa

ನನಗೂ ಸತೀಶರಿಗೆ ಅನ್ನಿಸಿದಂತೆಯೇ ಅನಿಸಿತು. ನಿಜವಾಗಿದ್ದರೆ ಕುತೂಹಲಕ್ಕಾಗಿ ಪತ್ತೇದಾರಿಕೆ ಮಾಡಲಿಲ್ಲವೇ?

Submitted by partha1059 Fri, 02/08/2013 - 10:24

In reply to by kavinagaraj

ಕವಿನಾಗರಾಜರು,ಸತೀಷರಿಗೆ ನಿಮ್ಮ ಪ್ರತಿಕ್ರಿಯೆ ನನಗೆ ಸ0ತಸ‌ ತ0ದಿದೆ. ನನ್ನ ಬಹಳ‌ ಕತೆಗಳನ್ನು ಎಲ್ಲರು ಸತ್ಯಘಟನೆ ಎ0ದೆ ಭಾವಿಸಿಸುತ್ತಾರೆ ಅ0ದರೆ ಕತೆ ಸತ್ಯಕ್ಕೆ ಹತ್ತಿರವಾಗಿದೆ ಸಹಜವಾಗಿದೆ ಎ0ದೆ ಭಾವಿಸುತ್ತೇನೆ. ಇದೊ0ದು ಕಲ್ಪನೆಯ‌ ಕತೆಯೆ :‍)

‍ಪಾರ್ಥಸಾರಥಿ