ಕತೆ : ಒಂದು ಕೊಲೆಯ ಸುತ್ತ [ಭಾಗ-2]

ಕತೆ : ಒಂದು ಕೊಲೆಯ ಸುತ್ತ [ಭಾಗ-2]

 ಮೊದಲ ಬಾಗ ಓದಲು ಇಲ್ಲಿ ಕ್ಲಿಕ್ ಮಾಡಿ  : ಕತೆ - ಒಂದು ಕೊಲೆಯ ಸುತ್ತ [ ಬಾಗ - ೧]

 

ಎರಡನೆ ಭಾಗ:

 

 

 
ನಾಯಕ್  ಬೆಂಗಳೂರು ಪೋಲಿಸ್ ಸೆಂಟ್ರಲ್  ಡಿವಿಷನ್ ಎಸಿಪಿ ಕೆಳಗೆ ಕೆಲಸ ಮಾಡುತ್ತಿದ್ದವನು, ಹೈಗ್ರೌಂಡ್ಸ್ ಪೋಲಿಸ್ ಸ್ಟೇಷನ್ ಸಬ್ ಇನ್ಸ್ಪೆಕ್ಟರ್ , ಕೆಲಸದಲ್ಲಿ ಅವನಿಗೆ ಅತೀವ ಆಸಕ್ತಿ ಆದರೆ ಅನುಭವ ಸ್ವಲ್ಪ ಅಷ್ಟಕಷ್ಟೆ. ಅವನ ಜೊತೆ ಸದಾ   ಕಾನ್ಸ್ಟೇಬಲ್ ಮಂಜುನಾಥ . ಮಹಾಂತೇಶನ ಕೇಸಿನಲ್ಲಿ ಅವನಿಗೆ ಅಪಾರ ಆಸಕ್ತಿ ಮೂಡಿತ್ತು.  . ಅವನು ಕೇಳಿರುವಂತೆ ಮಹಾಂತೇಶ ಪ್ರಾಮಾಣಿಕ ಅಧಿಕಾರಿ, ಇಂತವನಿಗೆ ತಾನು ಸಾದ್ಯವಾದಷ್ಟು ನ್ಯಾಯ ಒದಗಿಸಬೇಕು ಎಂದು ಮನದಲ್ಲಿ ತುಡಿತ. ಮೂರು ನಾಲಕ್ಕು ದಿನದಲ್ಲಿ ಅವನು ಸಾಕಷ್ಟು ವಿಷಯ ಸಂಗ್ರಹಿಸಿದ್ದ. ಮೊದಲಿಗೆ ಮಹಾಂತೇಶನ ಮೇಲೆ ನಡೆದ ಹಲ್ಲೆ ಹಾಗು ರಸ್ತೆಯಲ್ಲಿ ಬಿದ್ದಿರುವನೆಂದು ಪೋಲಿಸ್ ಗೆ ವಿಷಯ ತಿಳಿಸಿದ ವ್ಯಕ್ತಿ, ಮಹಾಂತೇಶ ರಸ್ತೆಯಲ್ಲಿ ಬಿದ್ದಿದ್ದ ಎದುರು ಗೇಟಿನಲ್ಲಿದ್ದ ಏಟ್ರಿಯ ಹೋಟೆಲಿನ ವಾಚ್ ಮನ್. 
 
 ನಾಯಕ್ ಮೋಟರ್ ಬೈಕ್ ನಲ್ಲಿ ಬಂದಿಳಿದಾಗಲೆ ವಾಚ್ ಮೆನ್ ಗೆ ಇವನು ಏಕೆ ಬಂದನೆಂದು ತಿಳಿದಿತ್ತು. 
 
"ನೀನೆ ಏನಯ್ಯ ಮೊದಲು, ಅವನ್ನು ಕಾರ್ ಮೇಲೆ ಅಟ್ಯಾಕ್ ಆದದ್ದು ನೋಡಿದವನು"  ಕೇಳಿದ ಸ್ವಲ್ಪ ಗತ್ತಿನಿಂದಲೆ
 
"ಇಲ್ಲ ಸಾರ್ ನಾನು ನೋಡಿದ್ದಲ್ಲ, ನಾನು ನೋಡುವ ಹೊತ್ತಿಗಾಗಲೆ , ಅಲ್ಲಿ ಯಾರು ಇರಲಿಲ್ಲ, ಕಾರು ಪಕ್ಕದ ಮರಕ್ಕೆ ಡ್ಯಾಶ್ ಹೊಡೆದು ನಿಂತಿತ್ತು, ಮತ್ತು ಅವರು ರಸ್ತೆಯಲ್ಲಿ ಬಿದ್ದಿದ್ದರು, ಸುತ್ತಲು ರಕ್ತವಿತ್ತು, ಹಾಗಾಗಿ ಪೋಲಿಸ್ಗೆ ತಿಳಿಸಿದೆ"
ತನ್ನ ಅಪ್ಪಟ ತಮಿಳುಗನ್ನಡದಲ್ಲಿ ಹೇಳಿದ ವಾಚ್ ಮನ್
 
"ಮತ್ತೆ ನೀನು ಏನು ನೋಡಲಿಲ್ಲ ಅನ್ನುವ ಹಾಗಿದ್ದರೆ, ಅದು ಅಪಘಾತ ಇರಬಹುದಲ್ಲ, ಯಾರೊ ಅಟ್ಯಾಕ್ ಮಾಡಿದ್ದಾರೆ ಅಂತ ಸುಳ್ಳು ಏಕೆ ತಿಳಿಸಿದೆ?"
 
"ಹಾಗಲ್ಲ ಸಾರ್, ಅವತ್ತು ಹೋಟೆಲ್ ಗೆ ಆ ಕಡೆಯಿಂದ ಬಂದವರೊಬ್ಬರು, ಅಲ್ಲಿ ಯಾರೊ ಕಾರಿನಲ್ಲಿದ್ದವರನ್ನು ಹೊಡೆಯುತ್ತಿದ್ದಾರೆ ಅಂತ ತಿಳಿಸಿ, ಒಳಗೆ ಹೋದರು, ನಾನು ಆಮೇಲೆ ಹೊರಗೆ ಬಂದು ನೋಡಿದೆ, ಅಲ್ಲಿ ಯಾರು ಇರಲಿಲ್ಲ, ಆದರೆ ಅವರು ರಸ್ತೆಯ ಮೇಲೆ ಬಿದ್ದಿದ್ದರು" 
 
" ಕಾರಿನಲ್ಲಿದ್ದವರನ್ನು ಹೊಡೆಯುತ್ತಿದ್ದಾರೆ ಅಂತ ನಿನಗೆ ತಿಳಿಸಿದವರ ಹೆಸರು ಗೊತ್ತ, ಹೋಗಲಿ ಕಾರಿನಲ್ಲಿದ್ದವರು ಯಾರು ಅಂತ ನಿನಗೆ ತಿಳಿದಿತ್ತಾ?"
 
"ಇಲ್ಲ ಸಾರ   ಹೋಟೆಲ್ ನಲ್ಲಿ ಸಂಜೆ ಯಾವುದೊ ಪಾರ್ಟಿ ಇತ್ತು, ಆ ಪಾರ್ಟಿಗೆ ಬಂದಿದ್ದವರು, ಒಳಗೆ ಹೋಗುವಾಗ ನನ್ನ ಕೈಲಿ ಹೊರಗೆ ,ಏನೊ ಗಲಾಟೆ ನಡೆಯುತ್ತಿದೆ ಅಂತ ತಿಳಿಸಿ ಹೋದರು, ನಾನು ಹೊರಗೆ ಬಂದು ನೋಡಿದೆ ಅಷ್ಟೆ, ಅಷ್ಟೆ ನನಗೆ ಗಲಾಟೆ ಬಗ್ಗೆ ತಿಳಿದಿಲ್ಲ, ಮತ್ತು ನಾನು ಹೊರಗೆಲ್ಲ ನೋಡಿ ಬರುವದರೊಳಗೆ ಇಲ್ಲಿ ಪಾರ್ಟಿಯು ಮುಗಿದಿತ್ತು ಎಲ್ಲರು ಹೊರಟುಹೋಗಿದ್ದರು"
 
ಈ ವಾಚ್ ಮನ್ ನಿಂದ ಹೆಚ್ಚಿಗೇನು ತಿಳಿಯುವಂತಿಲ್ಲ ಅಂದುಕೊಂಡ ನಾಯಕ್ ಸುತ್ತಲು ಕಣ್ಣಾಡಿಸಿ ಹೊರಟ. ಮಹಾಂತೇಶನ ಮನೆಗೆ ಇನ್ನೊಮ್ಮೆ ಹೋಗೋಣವೆಂದು ಚಾಮರಾಜಪೇಟೆ ಕಡೆ ಹೊರಟ, ನಿನ್ನೆ ಹೋಗಿದ್ದಾಗ, ಯಾರು ಸಿಕ್ಕಿರಲಿಲ್ಲ ಎಲ್ಲರು ಆಸ್ಪತ್ರೆಯಲ್ಲಿ ಸೇರಿದ್ದರು, ಅಲ್ಲಿ ಮಲ್ಲಿಗೆ ಆಸ್ಪತ್ರೆಯಲ್ಲಿ ಮಹಾಂತೇಶನ ಬಗ್ಗೆ ಕೇಳೋಣವೆಂದುಕೊಂಡರೆ ಸುತ್ತಲು ಸದಾ ಮಾದ್ಯಮದವರ ಸರ್ಪಗಾವಲು, ಅಲ್ಲದೆ ಮನೆಯವರೆಲ್ಲ ಇನ್ನು ಶಾಕ್ ನಲ್ಲಿದ್ದರು. ಏನಾಗಲಿ ಮಹಾಂತೇಶನಿಗೆ ಮತ್ತೆ ಪ್ರಜ್ಞೆ ಬರುವವರೆಗು ಹೆಚ್ಚಿಗೆ ವಿಷಯ ತಿಳಿಯುವುದು ಕಷ್ಟ, ಒಮ್ಮೆ ಅವನಿಗೆ ನೆನಪು ಬಂದಿತ್ತೆಂದರೆ, ಯಾರು ರಸ್ತೆಯಲ್ಲಿ ಆಕ್ರಮಣ ನಡೆಸಿದರೆಂದು ತಿಳಿಯಬಹುದು. 
 
ಈ ದಿನ ಮನೆಯಲ್ಲಿ ಅತಿ ಕಡಿಮೆ ಜನರಿದ್ದರು, ಮಹಾಂತೇಶನ ತಂದೆ ಮಧ್ಯಾಹ್ನದ ವಿಶ್ರಾಂತಿಗೆಂದು ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಇವನು ಬಂದಿದ್ದನ್ನು ಕಂಡು, ನಿಧಾನಕ್ಕೆ ಎದ್ದು ಬಂದರು, ಗೇಟಿನ ಹತ್ತಿರ ಬಂದು
"ಬನ್ನಿ  ಇವರೆ, ನಿನ್ನೆ ನಿಮ್ಮನ್ನು ನೋಡಿದೆ ಮತ್ತೆ ಮಾತನಾಡಿಸಲು ಆಗಲೆ ಇಲ್ಲ, ಅಂದ ಹಾಗೆ ಎಲ್ಲಿಯವರೆಗು ಬಂದಿತು ನಿಮ್ಮ ತನಿಖೆ, ಏನಾದರು ಯಾರು ಹೊಡೆದರೆಂದು ತಿಳಿಯಿತೆ?" 
"ಇಲ್ಲ ಸಾರ್ ನಾನು ಅದಕ್ಕಾಗಿಯೆ ನಿನ್ನೆಯಿಂದ ಸುತ್ತುತ್ತಿದ್ದೇನೆ, ನಿಮ್ಮಿಂದ ಏನಾದರು, ಮಹಾಂತೇಶ್ ರಿಗೆ ಸಂಭಂದಿಸಿದ ವಿಷಯ ತಿಳಿಯಬಹುದೆಂದು ಬಂದೆ" 
"ಸರಿ ನನ್ನಿಂದ ಏನಾಗಬಹುದೆಂದು ತಿಳಿಸಿ, ನೋಡಿ ಈ ಇಳಿ ವಯಸ್ಸಿನಲ್ಲಿ ನನಗೆ ಬಂದಿರುವ ಈ ಸಂಕಟ ಯಾರ ಬಳಿ ಹೇಳಲಿ ಹೇಳಿ"
"ಸಮಾದಾನವಾಗಿರಿ ಎಲ್ಲ ಸರಿ ಹೋಗುತ್ತೆ, ಸರ್ಕಾರಿ ಕೆಲಸದ ಹಾದಿಯಲ್ಲಿ ಇಂತವೆಲ್ಲ ಇರುವುದೆ , ನಿಮಗೆ ತಿಳಿಯದ್ದೇನಿದೆ, ನನಗೆ ಮಹಾಂತೇಶರ , ಕೆಲವು ವಿಷಯಗಳು ಅವರ ಆಫೀಸಿನ ವಿಷಯಗಳು, ಅವರ ಹಣಕಾಸಿನ ಯಾವುದಾದರು ವ್ಯವಹಾರ, ಅಥವ ಸಂಬಂಧಿಗಳಲ್ಲಿ ಏನಾದರು ಜಗಳಗಳು, ಈ ರೀತಿ ಯಾವುದಾದರು ವಿಷಯವಿದ್ದರೆ ತಿಳಿಸಿ, ಹಿಂದೆ ಏನಾದರು ಈ ರೀತಿ ಅವರಮೇಲೆ ದಾಳಿ ನಡೆದಿತ್ತಾ?"
 
"ಈ ರೀತಿ ದಾಳಿಯ, ದಾಳಿ ಅಂತ ಅಲ್ಲ ಆದರೆ ಕೆಲವೊಮ್ಮೆ  ಬೆದರಿಕೆಯ ಕರೆಗಳು ಬರುತ್ತಿದ್ದವು ಅಂತ ನನ್ನ ಬಳಿ ತಿಳಿಸಿದ್ದ, ಆದರೆ ಹೊರಗೆ ಅವನೆಲ್ಲು ಅದರ ಬಗ್ಗೆ ತಿಳಿಸುತ್ತಿರಲಿಲ್ಲ, ಈ ರೀತಿಯ ಕೆಲಸಗಳಲ್ಲಿ ಅಂತವೆಲ್ಲ ಸಾಮಾನ್ಯ ಎಂದು ಅವನ ಭಾವನೆ, ಬಹುಷ: ಈ ರೀತಿಯ ಅಲಕ್ಷ್ಯವೆ ಅವನನ್ನು ಈ ಸ್ಥಿಥಿಗೆ ತಂದು ಬಿಟ್ಟಿತು. ಈಗ ಪೂರ್ಣಿಮಾ ಹಾಗು ಮಕ್ಕಳ ಗತಿ ಏನೆಂದು ಭಯವಾಗುತ್ತಿದೆ" ಎಂದರು,  ಪೂರ್ಣಿಮ ಎಂದರೆ ಮಹಾಂತೇಶನ ಪತ್ನಿ ಎಂದು ಅರ್ಥಮಾಡಿಕೊಂಡ ನಾಯಕ್.
"ಮತ್ತೆ ನೀವು ಹೇಳಿದಂತೆ ನಮ್ಮ ಸಂಸಾರದಲ್ಲಿ ಯಾವುದೆ ಗಲಾಟೆಗಳು, ಆಸ್ತಿಗಾಗಿ ಹೊಡೆದಾಟಗಳು ಇರಲಿಲ್ಲ, ಅವನ ವೃತ್ತಿಯ ಪೂರ್ಣ ಸ್ವರೂಪದ ಪರಿಚಯ ನನಗಿಲ್ಲ ಆದರೆ ಅಲ್ಲಿ ಸಾಕಷ್ಟು ಬೆದರಿಕೆಗಳು  ಇದ್ದವು ಅಂತಲೆ ನಾನು ಭಾವಿಸುತ್ತೇನೆ"
 
 ನಾಯಕ್ ಸ್ವಲ್ಪ ಸಂಕೋಚದಿಂದಲೆ ನುಡಿದ
"ತಪ್ಪು ತಿಳಿಯಬೇಡಿ, ಅವರಿಗೆ ಯಾವುದಾದರು, ಹೆಣ್ಣುಗಳ ಪರಿಚಯವಿತ್ತೆ, ಅಥವ ಹೊರಗಿನ ಪ್ರೇಮ ವ್ಯವಹಾರ ಈ ರೀತಿ, ಕೇಳುವುದು ನನ್ನ ಕರ್ತವ್ಯ, ಅಲ್ಲದೆ ಈ ಬಗ್ಗೆ ಮಾಧ್ಯಮಗಳಲ್ಲಿ , ಪತ್ರಿಕೆಗಳಲ್ಲಿ ಕೆಲವು ಊಹಾವರದಿಗಳನ್ನು ನೋಡಿದೆ" 
ಆತ ಪಾಪ ಗಂಭೀರವಾದರು,
"ನೋಡಿ ಇವರೆ, ನಮ್ಮ ಮಹಾಂತೇಶ ಅಂತವನಲ್ಲ,  ಸಂಸಾರದಲ್ಲಿ ಅವನಿಗೆ ಯಾವ ಸುಖಕ್ಕು ಕಡಿಮೆ ಇರಲಿಲ್ಲ, ಮುದ್ದಾದ ಇಬ್ಬರು ಹೆಣ್ಣುಮಕ್ಕಳು, ಹಾಗಿರುವಾಗ ಹೊರಗೆ ಆ ರೀತಿ ಅವನು ಏಕೆ ಹೋಗುತ್ತಾನೆ ಹೇಳಿ, ಅಲ್ಲದೆ ಅದು ಅವನ ಸಂಸ್ಕಾರವು ಆಗಿರಲಿಲ್ಲ, ಉತ್ತಮ ಮನೆತನದಿಂದ ಬಂದವನು ಅವನು, ನಿನ್ನೆ ರಾತ್ರಿಯು ನೋಡಿ ಅದ್ಯಾವನೊ ತಲೆಹರಟೆ ಪತ್ರಿಕೆಯವನು, ನನ್ನನ್ನು ಇದೆ ಪ್ರಶ್ನೆಯನು ಕೇಳಿದ, ನಾನು "ನನಗೆ ಅಥವ ನಮ್ಮ ಮನೆಯವರಿಗೆ ಅಂತವೆಲ್ಲ ಯಾವುದು ಗೊತ್ತಿಲ್ಲ ಅಂದೆ" ಆದರೆ,  ಟೀವಿ ಗಳಲ್ಲಿ ,"ಮನೆಯವರಿಗೆ ಗೊತ್ತಿಲ್ಲದೆ, ಮಹಾಂತೇಶನಿಗೆ ಹೊರಗೆ ಹುಡುಗಿಯ ಸಹವಾಸವಿತ್ತು ಅಂತ ತೋರಿಸಿದ್ದಾರೆ, ಅಲ್ಲದೆ ಅವಳೆ ಅವನ ಸಾವಿನ ಹಿಂದೆ ಇದ್ದಾಳೆ ಅಂತ ಬರೆದಿದ್ದಾರೆ" ಈ ರೀತಿ ಎಲ್ಲ ಮಾಡುವುದು ಅವನಿಗೆ ಅನ್ಯಾಯ ಮಾಡಿದಂತೆ ಅಲ್ಲವಾ?" , ಸತ್ಯ ನಿಷ್ಟೆ ಪ್ರಮಾಣಿಕತೆ ಎಂದು ಇದ್ದವರಿಗೆ ನಮ್ಮ ಸಮಾಜ ಕೊಡುವ ಬೆಲೆ ಇದೇನಾ"
 
ಪುನಃ ನಾಯಕ್ ಅವರನ್ನು ಸಮಾದಾನ ಮಾಡುತ್ತ "ನೋಡಿ ನೀವು ಈಗಿನ ಪರಿಸ್ಥಿಥಿಯನ್ನು ಸಮಾಜವನ್ನು ತಿಳಿದವರು, ನಾವು ನಮ್ಮ ಹುಶಾರಿನಲ್ಲಿರಬೇಕಷ್ಟೆ, ನಿಮಗೆ ಮತ್ತೆ ಯಾವುದಾದರು ನನಗೆ ಅಪರಾದಿಗಳನ್ನು ಹಿಡಿಯಲು ಅನುಕೂಲವಾಗುವಂತ ವಿಷಯಗಳಿದ್ದರೆ ಕಾಲ್ ಮಾಡಿ ತಿಳಿಸಿ, ನನ್ನ ನಂಬರ್ ಬರೆದುಕೊಳ್ಳಿ, ಪುನಃ ಅಗತ್ಯ ಬಿದ್ದರೆ ನಿಮ್ಮನ್ನು ಬೇಟಿ ಮಾಡುವೆ, ನಿಮ್ಮ ಮಗ ಬೇಗ ಮನೆಗೆ ಬರಲೆಂದು ಹಾರೈಸುವೆ" ಎಂದು ಹೊರಬಂದ. 
 
ನಾಯಕ್ ಗೆ ಹೆಚ್ಚಿನ ವಿಷಯಗಳೇನು ತಿಳಿದು ಬರಿಲಿಲ್ಲ, ಇಷ್ಟಾದರು ಮಹಾಂತೇಶನ ಮೇಲೆ ದಾಳಿಮಾಡಿದವರು ಯಾರೆಂದು ತಿಳಿದುಬರುತ್ತಿಲ್ಲ, ಸನ್ನಿವೇಶವನ್ನು ನೋಡಿದರೆ, ಯಾರೊ ಹಣ ಕೊಟ್ಟು ವೃತ್ತಿ ನಿರತ ದಾಳಿಕಾರರಂತವರ ಕೈಲಿ ಹೊಡೆಸಿದಂತೆ ಇದೆ, ಇದು ಕೊಲೆಯ ಪ್ರಯತ್ನವೊ ಅಥವ ದಾಳಿಮಾಡಿ ಮಹಾಂತೇಶನನ್ನು ಘಾಸಿಗೊಳಿಸುವ ಉದ್ದೇಶವೊ ಅರ್ಥವಾಗುತ್ತಿಲ್ಲ ಅಂದುಕೊಂಡ ನಾಯಕ್. ಬಹುಷ; ಮಹಾಂತೇಶನ ಆಫೀಸಿಗೆ ಹೋದರೆ ಹೆಚ್ಚಿನ ವಿಷಯ ತಿಳಿಯಬಹುದೆ ಎನ್ನಿಸಿತು. 
 
 ನಾಯಕ್   ಮೇಲೆ ಒತ್ತಡ ಸಾಕಷ್ಟಿತ್ತು, ಮಹಾಂತೇಶನ ಪ್ರಕರಣ ನಡೆದು ಮೂರನೆ ದಿನವಾದರು , ಈ ಕೇಸಿನಲ್ಲಿ ಯಾವ ಪ್ರಗತಿಯು ಆಗಿರಲಿಲ್ಲ. ಪತ್ರಿಕೆಗಳಲ್ಲಿ , ತಮ್ಮ ಸಾಹೇಬರು ರವಿಕಾಂತೇಗೌಡರು ಒಂದೆರಡು ದಿನದಲ್ಲೆ ಪ್ರಕರಣದ ಗುಟ್ಟನ್ನು ಬೇದಿಸುವದಾಗಿ ತಿಳಿಸಿದ್ದಾರೆ, ACP ಸಾಹೇಬರು ದಿನಕ್ಕೆ ಎರಡು ಸಾರಿ ಕಾಲ್ ಮಾಡಿ ಕೇಸ್ ಎಲ್ಲಿಗೆ ಬಂತು ಅನ್ನುತ್ತಿದ್ದಾರೆ, ಈಗ ಸಂಜೆಯಾಗುತ್ತ ಬಂದಿತು, ನಾಳೆ ಮಹಾಂತೇಶನ ಆಫೀಸಿಗೆ ಹೋಗಿ ಕೆಲವು ವಿಷಯ ತಿಳಿಯಬೇಕು ಅಂದುಕೊಂಡ. ಹಾಗೆ ಮಹಾಂತೇಶ ದಾಳಿಗೆ ಗುರಿಯಾಗುವ ಮುಂಚೆ ಸಹಕಾರ ನಗರ ಕೋಅಪರೇಟಿವ್ ಸೋಸೈಟಿಯಿಂದ ಹೊರಟಿದ್ದು,  ಒಮ್ಮೆ ಅಲ್ಲಿಗೆ ಹೋಗಿ ಬರುವದು ಒಳ್ಳೆಯದು ಅನ್ನಿಸಿತು. 
   ---------------------------------------------------------------
 
 ಮರುದಿನ ಮುಂಚೆ ಆಫೀಸಿಗೆ ಬಂದ ನಾಯಕ್ ಮಹಾಂತೇಶನ ಆಪೀಸಿಗೆ ಹೋಗಿ ಬರಬೇಕೆನ್ನುವ ತನ್ನ ನಿರ್ಧಾರ ಬದಲಿಸಿ ಸಹಕಾರನಗರ ಕೋಆಪರೇಟಿವ್ ಸೊಸೈಟಿಯತ್ತ ಹೊರಟ ಜೊತೆಯಲ್ಲಿ ಎಂದಿನಂತೆ ಮಂಜುನಾಥ. ಸೊಸೈಟಿಯ ಒಳಬಾಗದಲ್ಲಿ ಬೈಕ್ ನಿಲ್ಲಿಸಿ ಒಳನಡೆದಾಗಲೆ ಅಲ್ಲಿಯ ಸಿದ್ಭಂದಿಗೆ ಅರಿವಿನಲ್ಲಿತ್ತು, ಪೋಲಿಸ್ ಬಂದಿರುವುದು ವಿಚಾರಣೆಗೆ ಎಂದು, ಅಲ್ಲಿಯು ಬಹಳಷ್ಟು ವಿಷಯ ತಿಳಿಯಿತು. ಮಹಾಂತೇಶ್ ಬಹುತೇಕ ಅಲ್ಲಿ ಎಲ್ಲ ವಿಭಾಗಗಳನ್ನು ಕೂಲಂಕುಶವಾಗಿ ಆಡಿಟಿಂಗ ನಡೆಸಿದ್ದ. ಬಹುತೇಕ ಸಿದ್ಬಂದಿ ಹೆದರಿ ಹೋಗಿದ್ದರು. ಕೆಲವರು ಕಿರಿಯ ಕೆಲಸಗಾರರು ಅನುಭವ ಕಡಿಮೆ ಅಂತವರನ್ನು ಕರೆದು ಬಹುತೇಕ ವಿಷಯ ಕೆದಕಿದ್ದ ಮಹಾಂತೇಶ್. 
 
 ನಾಯಕ್ ಸೊಸೈಟಿಯ ಹಿರಿಯ ಆಡಳಿತಾಧಿಕಾರಿಗಳನ್ನು ಕೇಳಿ ಅಲ್ಲಿ ಕೆಲಸ ಮಾಡುವ ಎಲ್ಲ ಸಿದ್ಬಂದಿಯ ಹೆಸರು , ವಿಳಾಸಗಳನ್ನು ತೆಗೆದುಕೊಂಡ. ಅಲ್ಲಿ ಗಮನಿಸುವಂತ ಸಂಗತಿಗಳೇನಿರಲಿಲ್ಲ.
 
 ನಂತರ ಅಲ್ಲಿಂದ ಹೊರಟವನು ಮಹಾಂತೇಶನ ಆಫೀಸ್ ತಲುಪಿದ. ನಡುವೆ ಒಂದು ಸಿಗರೇಟ್ ಮತ್ತು ಕಾಫಿ ಅಷ್ಟೆ. ಏಕೊ ಬೆಳಗಿನ ಉಪಹಾರವನ್ನು ಮಾಡಲು ಆಗಿರಲಿಲ್ಲ ಅವನಿಗೆ, ಹೇಗೊ ಈ ಕೇಸನ್ನು ಕೊನೆಗಾಣಿಸಲೆ ಬೇಕೆಂಬ ತವಕ. ಮಹಾಂತೇಶನ ಆಫೀಸಿನಲ್ಲಿ , ಮೊದಲ ದಿನ ಮಾತನಾಡಿದ , ಮಹಾಂತೇಶನ ಅಸಿಸ್ಟೆಂಟ್ ಜ್ಯೋತಿ ಸಿಕ್ಕಿದ್ದಳು.  
 
 ಆಕರ್ಷಕ ಮಹಿಳೆ ಆದರೆ ಅಷ್ಟೆ ಗಂಭೀರ. ನಾಯಕ್ ಅವಳ ಹತ್ತಿರ ಹೋಗಿ ವಿವರ ಕೇಳುವಾಗಲು ಯಾವುದೆ ಗೊಂದಲಕ್ಕೆ ಒಳಗಾಗದೆ ಸಾಕಷ್ಟು ವಿವರ ಒದಗಿಸಿದಳು, ಬಹುತೇಕ ಮಹಾಂತೇಶನ ಕೆಲಸದ ವಿವರ. ಆಪೀಸಿನಲ್ಲಿ ಅವಳು ಹೇಳುವಂತೆ ಮಹಾಂತೇಶನಿಗೆ ಯಾವುದೆ ವಿರೋದವಾಗಲಿ ಅಥವ ಅಸೂಯೆ ಮುಂತಾದ ಸಮಸ್ಯಗಳಾಗಲಿ ಇರಲಿಲ್ಲ. ಆದರೆ ಅವನ ಕೆಲಸದ ಒತ್ತಡ ಹಾಗು ಸ್ವರೂಪವೆ ಬೇರೆ. ಬರಿ ಬೆಂಗಳೂರಿನಲ್ಲಿ ಸುಮಾರು 282 ಗೃಹನಿರ್ಮಾಣ ಸಂಘಗಳಿವೆ, ಅಲ್ಲಿ ಸುಮಾರು ರೂಪಾಯಿ ಮೂರು ಲಕ್ಷ ಕೋಟಿಗಳಿಗಿಂತ ಅಧಿಕ ಹಣದ ವ್ಯವಹಾರವಿದೆ. ಈ ಸಂಘಗಳಿಗೆಲ್ಲ ಮೇಲ್ವಿಚಾರಕನಾಗಿ ಅವುಗಳ ವ್ಯವಹಾರವನ್ನು ಗಮನಿಸಿ , ಅವುಗಳಲ್ಲಿನ ಮೋಸ ವಂಚನೆಯನ್ನು ಬಯಲಿಗೆಳಿಯುವ ಗುರುತರ ಜವಾಬ್ದಾರಿ ಮಹಾಂತೇಶನ ಮೇಲಿತ್ತು. ಹಾಗಾಗಿ ಸಹಜವಾಗಿ ಭೂಮಾಫಿಯದಂತ ವ್ಯವಸ್ಥೆಗಳು ಮಹಾಂತೇಶನತ್ತ ಕೆಂಗಣ್ಣು ಬೀರುವುದು ಸಾಮಾನ್ಯ.
"ಪರಿಸ್ಥಿಥಿ ಹೀಗಿದೆ, ನೀವು ಯಾರ ಮೇಲೆ ಅನುಮಾನ ಪಡುತ್ತೀರಿ ಹೇಳಿ" ಜ್ಯೋತಿ ಪ್ರಶ್ನಿಸಿದಳು, ನಾಯಕ್ ಸಹ ತಲೆದೂಗಿದ. ಅವಳ ಮಾತು ನಿಜವೆ, ಇಂತದೊಂದು ವ್ಯವಸ್ಥೆಯ ಕೇಂದ್ರಬಿಂದು ಮಹಾಂತೇಶ ಅನ್ನುವಾಗ ಅವನ ಕೊಲೆಗೆ ಸಹಜವಾಗಿ ಬಹಳಷ್ಟು ಜನರಿಗೆ ಕಾರಣವಿರುತ್ತದೆ. 
 
 ನಾಯಕನಿಗೆ ತಲೆ ಕೆಟ್ಟಂತಾಗಿತ್ತು, ಕೇಸು ದಿನ ದಿನಕ್ಕೆ ಕಗಂಟಾಗುತ್ತಿದೆ. ಹಾಗೆ ಪೋಲಿಸಿನ ಇಲಾಖೆಯ ಮೇಲೆ ಮಾಧ್ಯಮಗಳ , ಸರ್ಕಾರದ ಒತ್ತಡ ಜಾಸ್ತಿಯಾಗುತ್ತಿದೆ. ಅಲ್ಲಿಂದ ಹೊರಟವನು ಪುನಃ ಪೋಲಿಸ್ ಸ್ಟೇಷನ್ ಸೇರಿ ಕುಳಿತುಕೊಳ್ಳೂವಾಗಲೆ ACP ಕಾಲ್ ಬಂದಿತು. 
"ಏನ್ರಿ ಬೆಳಗ್ಗೆ ಇಂದ ಎಲ್ಲಿ ಹೋಗಿದ್ರಿ, ಅಲ್ಲಿ ಮಹಾಂತೇಶ್ ಕೇಸು ನೋಡಿರೆಂದು ನಮ್ಮ ಪ್ರಾಣ ಹಿಂಡ್ತಾ ಇದ್ದಾರೆ, ಇವತ್ತು ನೋಡ್ರಿ , ಅದ್ಯಾರೊ ಆ ಮಹಿಮಾಪಾಟೇಲ್ ಮೊದಲೆ ರಾಜಕೀಯದವರು ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ, ಅವರು ಮಹಾಂತೇಶ್ ಕೈಲಿ ಅದೇನೊ ಕೋಅಪರೇಟಿವ್ ಸೊಸೈಟಿ  ಅವ್ಯವಹಾರಗಳ ಡಿಟೈಲ್ ಕೇಳಿದ್ದರಂತೆ,  ಅದಕ್ಕೆ ಹಲ್ಲೆಯಾಗಿರಬಹುದು ಅಂತ ಹೇಳಿದ್ದಾರೆ, ಭೂಮಾಫಿಯದ ನೆರಳು ಕಾಣ್ತಾ ಇದೆ, ನೀವು ನೋಡಿದ್ರೆ ಸುಮ್ಮನೆ ಬೈಕ್ ನಲ್ಲಿ ಸಿಟಿ ಸುತ್ತುತ್ತ ಮಜಾ ಮಾಡ್ತಾ ಇದ್ದೀರಿ, ನೋಡ್ರಿ ನೀವು ಏನು ಮಾಡ್ತೀರಿ ಗೊತ್ತಿಲ್ಲ, ನನಗೆ ನಾಳೆ ಒಳಗೆ ರಿಸಲ್ಟ್ ಬೇಕು" ಅಂತ ಸಿಕ್ಕ ಪಟ್ಟೆ ಕೂಗಾಡಿದರು, 
ನಾಯಕ್  'ಸರಿ ಸಾರ್ , ನಾನು ಪೂರ್ತಿ ಅದೆ ಪ್ರಯತ್ನದಲ್ಲಿದ್ದೇನೆ ಸಾರ್, ಸಾಕಷ್ಟು ವಿಷಯ ಸಂಗ್ರಹಿಸಿದ್ದೇನೆ, ಮಹಾಂತೇಶ್ ಅವರಿಗೆ ಪ್ರಜ್ಞೆ ಬಂದರೆ ನಮಗೆ ಕ್ಲೂ ಸಿಗಬಹುದು' ಎಂದನು.
ಅದಕ್ಕೆ ಅವರು "ರೀ ಅವರಿಗೆ ಪ್ರಜ್ಝೆ ಬರಲಿ ಅಂತ ಕಾಯ್ತ ಕೂರುವಷ್ಟು ಪುರುಸತ್ತು ಇಲ್ರಿ, ಇವತ್ತು ದೊಡ್ಡ ಸಾಹೇಬ್ರೆ ಡೈರಕ್ಟ್ ಆಗಿ ಮಾತನಾಡಿದ್ದಾರೆ, ನಿಮಗೆ ಏನು ಸಹಾಯ ಬೇಕು ಹೇಳಿ, you go beyond motive ಇವ್ರೆ, ಕೊಲೆಗೆ ಕಾರಣ ತಿಳಿದ್ರೆ  ಕೊಲೆ ಕೇಸ್ ಸಾಲ್ವ್ ಆದ ಹಾಗೆ ಅಲ್ವೆನ್ರಿ, ಕೊಲೆಗೆ ಕಾರಣಗಳನ್ನು ಗುರುತಿಸಿ ಅವುಗಳ ಹಿಂದೆ ಹೋಗ್ರಿ"
 
 ದರಿದ್ರ ಮೋಟೊ ಅಂತೆ, ಮುದುಕ ಸಾಯ್ತಾನೆ, ಕುಡಿಯಲು ಹಣಕೊಡಲಿಲ್ಲ ಅಂತ ಹೆಂಡತಿ ಕುತ್ತಿಗೆ ಕುಯ್ಯುವ, ತನಗೆ ಅಪ್ಪ ತೋರಿಸಿದ ಗಂಡು ಒಪ್ಪಿಗೆ ಇಲ್ಲ ಎಂದು ಅವನನ್ನೆ ಕತ್ತರಿಸುವ , ಅಥವ ಮದುವೆ ಮಾಡಲಿಲ್ಲ ಎಂದು ತಂದೆ ತಾಯಿಯನ್ನೆ ಶೂಟ್ ಮಾಡುವ ಈ ಕಾಲದಲ್ಲಿ ಕೊಲೆಗಳಿಗೆ ಇಂತಹುದೆ ಅಂತ ಉದ್ದೇಶ ಎಲ್ಲಿರುತ್ತೆ  ಇವನ ....   ಎಂದು ಮನಸಿನಲ್ಲಿ ಅಂದುಕೊಂಡು,  
"ಆಯ್ತು ಸಾರ್ ನಿಮ್ಮ ಸಲಹೆಯಂತೆ ನಡೆಯುತ್ತೀನಿ" ಎನ್ನುತ್ತ ಪೋನ್ ಕೆಳಗಿಟ್ಟ ನಾಯಕ್
 
ನಾಯಕ್ ಕಂಗಾಲಾಗಿ ಹೋದ, 'ಥೂ ದರಿದ್ರ ಕೆಲಸವೆ" ಅಂತ ಬೈದುಕೊಂಡ. ಮಂಜುನಾಥನನ್ನು ಕರೆದು, 
'ಒಂದು ಕಾಫಿ ತರಿಸಲು ಹೇಳಿ ಸಿಗರೇಟ್ ಹಚ್ಚಿದ"
"ಅಲ್ಲಿಗೆ ಈದಿನದ ಮಧ್ಯಾನದ ಊಟದ ಕತೆ ಮುಗಿಯಿತು," ಎಂದು ಗೊಣಗುತ್ತ ಹೊರಗೆ ಹೊರಟ ಮಂಜುನಾಥ. 
ಅಷ್ಟರಲ್ಲಿ ನಾಯಕ್ ಗಮನಿಸಿದ, ಸ್ಟೇಶನಿನಲ್ಲಿ ಜೀನ್ಸ್, ಬಿಳಿಯ ಶರ್ಟ್ ದರಿಸಿದ ವ್ಯಕ್ತಿ ಟಳಾಯಿಸುತ್ತಿದ್ದ, ಅವನನ್ನು ಹತ್ತಿರ ಕರೆದು
"ರೀ ನೀವು ಅವತ್ತು , ಮಹಾಂತೇಶ್ ಆಕ್ಸಿಡೆಂಟ್ ಆದ ಸ್ಥಳದ ಹತ್ತಿರವಿದ್ದವರು ನೀವೆ ಅಲ್ಲವೇನ್ರಿ" ಎಂದ. 
ಅವನು ಹಲ್ಲು ಕಿರಿಯುತ್ತ
"ಹೌದು ಸಾರ್, ನಾನೆ ವೀರೇಶ, ನನಗೆ ಅಂತ ವಾಸನೆಯೆಲ್ಲ ಬೇಗ ಬಂದುಬಿಡುತ್ತೆ ಸಾರ್, ಏನಾಯ್ತು ಸಾರ್ ಆ ಕೊಲೆ ವಿಷಯ, ಏನಾದ್ರು  ಕ್ಲೂಗಳು ಸಿಕ್ಕಿದೆಯಾ" 
"ರೀ, ಕ್ಲೂನಂತೆ ನಿಮ್ಮ ತಲೆ, ಅದೇನ್ರಿ ಹಾಗೆ ಬರೆದಿದ್ದಾರೆ ನಿಮ್ಮೊರು, ಕೊಲೆ ಹಿಂದೆ ಯಾರೊ ಹುಡುಗಿ ಇದ್ದಾಳೆ ಅಂತ, ನಿಮ್ಮನ್ನು ನಂಬಿ ನಾವು ಎನ್ ಕ್ವಯರಿ ಮಾಡಲು ಹೋದರೆ ಅಷ್ಟೆ ಮುಖಕ್ಕೆ ಸಗಣಿ ಹೊಡಿತಾರೆ" ಅಂತ ರೇಗಿದ.
"ಅದೆಲ್ಲಿ ಸಾರ್ , ನೀವೆ ಅವತ್ತು ಮಾತಾಡ್ತಾ ಇದ್ರಲ್ಲ , ಮೊಬೈಲ್ ನಲ್ಲಿ ಯಾವುದೊ ಹುಡುಗಿಯ ಕರೆ ಇದೆ ಅಂತ ಹಾಗಾಗಿ ಬರೆದುಬಿಟ್ಟೆ ಅಷ್ಟೆ" ಅಂತ ಮತ್ತೆ ಹಲ್ಲು ಕಿರಿದ,
"ಸರಿ ಸರಿ, ನಿಮ್ಮ ಸುದ್ದಿಗಳನ್ನು ನಂಬಿದವರು ಅಷ್ಟೆ , ಹೋಗ್ರಿ ಹೊರಗೆ, ಹೊರಡಿ" ಎಂದು ಬೈದ
"ಹೋಗ್ತೀನಿ ಬಿಡಿ ಸಾರ್, ನಾನೇನೊ ಸುಮ್ಮನೆ ಇರಲಿ ಅಂತ ಒಂದು ಲೈನ್ ಸೇರಿಸಿದ್ದೆ, ಅದಿರ್ಲಿ ಬಿಡಿ ಸಾರ್, ಆದರೆ ನಾನು ಒಂದು ಹೇಳ್ಬೋದ, ನೀವು ಕೊಲೆ ತನಿಖೆ ಮಾಡೋರು, ಗಟ್ಟಿ ಸಾಕ್ಷಿಗಳನ್ನು ಹಿಡಿದು ಹೋಗ್ಬೇಕು , ಅದು ಬಿಟ್ಟು ಪತ್ರಿಕೆಯಲ್ಲಿ ಊಹ ಸುದ್ದಿಯನ್ನೆ ಹಿಡಿದು, ತನಿಖೆಗೆ ಹೋಗಬಾರದು ಅಲ್ವ ಸಾರ್" ಅಂತ ನಗುತ್ತ  ಹೊರಟ, ನಾಯಕನಿಗೆ ಅವನು ತನ್ನನ್ನು ಹಂಗಿಸಿದ್ದು ರೇಗಿ ಹೋಯ್ತು, 
"ಈಡಿಯೆಟ್ , ಸ್ಕೌಂಡ್ರಲ್ " ಅಂತ ವೀರೇಶನನ್ನು ಮನಸಿನಲ್ಲೆ ಬೈದುಕೊಂಡ.
ಸರಿ ಹೇಗಾದರು ಸರಿ , ನಾಳೆ ಮಲ್ಲಿಗೆ ಆಸ್ಪತ್ರೆಗೆ ಹೋಗಿ, ಡಾಕ್ಟರ್ ಗಳನ್ನು ಬೇಟಿಮಾಡಿ, ಏನಾದರು ಮಹಾಂತೇಶರನ್ನು ಮಾತನಾಡಿಸಲು ಸಾದ್ಯವ ತಿಳಿಯಬೇಕು. ಅಂದುಕೊಂಡ. ಅಷ್ಟರಲ್ಲಿ ಕಾಫಿಹಿಡಿದು, ಮಂಜುನಾಥ ಒಳಗೆ ಬಂದವನು ಕಾಫಿ ಕೊಡುತ್ತ
"ಸಾರ್ ವಿಷಯ ತಿಳಿಯಿತ?" ಎಂದ
"ಏನೊ ಅದು, ನೇರವಾಗಿ ಸುದ್ದಿಯನ್ನು ತಿಳಿಸು, ಒಳ್ಳೆ ಮನೇಲಿ ಹೆಂಡತಿ ಹೇಳೂವ ಒಗಟಿನಂತೆ ಹೇಳಬೇಡ" ಎಂದು ರೇಗಿದ. 
ಮಂಜುನಾಥ , ನಾಯಕನ ಕೋಪಕ್ಕೆ ಎಂದು ಹೆದರುವದಿಲ್ಲ.
"ಅದಲ್ಲ ಸಾರ್, ನಮ್ಮ ಏಟ್ರಿಯ ಹೊಟೆಲ ಹತ್ತಿರದ ಆಕ್ಸಿಡೆಂಟ್ ಹೀರೊ ಮಹಾಂತೇಶ್ ಕೆ ಎ ಎಸ್ , ಆಸ್ಪತ್ರೆಯಲ್ಲಿ ಸತ್ತು ಹೋದನಂತೆ, ಎಲ್ಲ ಟೀವಿಗಳಲ್ಲಿ ಬರ್ತಾ ಇದೆ" ನುಡಿದ ಮಂಜುನಾಥ
 
 ನಾಯಕನ ಕೈಯಲ್ಲಿದ್ದ ಕಾಫಿ ಲೋಟ ತುಳುಕಿ, ಕಾಫಿಯೆಲ್ಲ ಟೇಬಲ್ ಮೇಲೆ ಚೆಲ್ಲಿಹೋಯಿತು. 
 --------------------------------------------------------------------------
 
 ಎರಡು ದಿನ ಸಬ್ ಇನ್ಸ್ ಪೆಕ್ಟರ್ ನಾಯಕ್ ಗೆ ಮಹಾಂತೇಶನ ಕೊಲೆ ಕೇಸಿನ ಓಡಾಟವೆ ಆಗಿಹೋಯಿತು, ಆಸ್ಪತ್ರೆಗೆ ಹೋಗಿದ್ದು, ಅಲ್ಲಿಯ ಪ್ರೊಸೀಜರ್ಸ್ ಗಳು, ನಂತರ ಮಹಾಂತೇಶನ ಮನೆಗೆ ಓಡಾಟ. ಪೋಸ್ಟ್ ಮಾರ್ಟಮ್ ರೆಪೋರ್ಟ್, ಅಲ್ಲದೆ ಕೊಲೆ ಪ್ರಯತ್ನ ಹಾಗು ಪರಾರಿ ಎಂದು ಇದ್ದ ಕೇಸನ್ನು ಈಗ, ಕೊಲೆ ಎಂದು ಬದಲಾಯಿಸಬೇಕಾಯಿತು. 
 
ಈ ನಡುವೆ ಮಹಾಂತೇಶ  ಮರಣಹೊಂದಿದ ನಂತರ, ಮುಖ್ಯಮಂತ್ರಿ ಗೌಡರು , ಮೃತನ ಮನೆಗೆ ಬೇಟಿನೀಡಿ, ಆದಷ್ಟು ಬೇಗ ಕೊಲೆಗಾರರನ್ನು ಪೋಲಿಸರ ಮೂಲಕ ಹಿಡಿದು ಕಾನುನಿನ ಕೈಗೆ ಒಪ್ಪಿಸುವ ಆಶ್ವಾಸನೆ ನೀಡಿದರು. ನಂತರ ಇಲಾಖೆಯ ಮೇಲೆ ಒತ್ತಡ ಮತ್ತು ಜಾಸ್ತಿ ಆಯಿತು. ಏಟ್ರಿಯ ಹೋಟೆಲ್ ಸಮೀಪದ ಸರ್ಕಲ್ ನಲ್ಲಿ ಇರಬಹುದಾದ ಸಿ.ಸಿ. ಕ್ಯಾಮರ ದೃಷ್ಯಗಳನ್ನು ಗ್ರಹಿಸುವ ಪ್ರಯತ್ನ ಕೂಡ ನಡೆಯಿತು. ಆದರೆ ರಾತ್ರಿಯಾದ ಕಾರಣ ಮತ್ತು ಮಳೆ ಬಂದು ನಿಂತಿದ್ದ ಕಾರಣ ಎಲ್ಲವು ಅಸ್ವಷ್ಟ.  ಅಲ್ಲಿಗೆ ಬಂದಿರಬಹುದಾದ ವ್ಯಕ್ತಿಗಳು ಯಾರಿರಬಹುದು, ಯಾವ ಕ್ಲೂಗಳನ್ನು ಬಿಡದೆ ಮಾಡಿರುವ ಕೊಲೆ ನೋಡಿದರೆ ಯಾರೊ ಪಕ್ಕಾ ಪ್ರೊಫೆಷನಲ್ಸ್ ಮಾಡಿರುವುದು ಅನ್ನಿಸುತ್ತಿತ್ತು, ಅಂದರೆ ಯಾರೊ ಹಣ ಕೊಟ್ಟು ಸುಫಾರಿ ನೀಡಿ ಕೊಲೆ ಮಾಡಿಸಿದ್ದಾರೆ, ನಾಯಕ್ ಗೆ ಇದು ಯಾರೊ ಭೂಮಾಫಿಯಾದವರ ಕೆಲಸ ಅನ್ನಿಸ ತೊಡಗಿತು. ಅವನಿಗೆ ಸಾಕಷ್ಟು ತಲೆ ಕೆಟ್ಟಿತ್ತು. 
ಮಧ್ಯಾನದ ಸಮಯ ಎಂದಿನಂತೆ ಮಂಜುನಾಥನನ್ನು ಕಾಫಿ ತರಲು ಕಳಿಸಿದ, ಹೈಗೃಂಡ್ ಪೋಲಿಸ್ ಸ್ಟೇಷನ್ ನಿಂದ. ತಾನು ಕಿಟಕಿ ಪಕ್ಕ ಹಾಕಿದ್ದ ತನ್ನ ಛೇರಿನಲ್ಲಿ ಕುಳಿತು ಹೊರಗೆ ನೋಡುತ್ತಿದ್ದ.
ಐದು ನಿಮಿಷದಲ್ಲೆ ಕಾಫಿ ಜೊತೆ ಬಂದ ಮಂಜುನಾಥ. 
"ಸಾರ್ , ನಿಮಗೆ ಆರಾಮ ಆಯ್ತು ಬಿಡಿ" ಅಂದ. 
ನಾಯಕನಿಗೆ ಅರ್ಥವಾಗದೆ, "ಅದೇನೊ ನನಗೆ ಅರಾಮವಾಗಿದ್ದು, ಬಿಡಿಸಿ ಹೇಳು" ಎಂದ
"ಸಾರ್ ಗೊತ್ತಾಗ್ಲಿಲ್ವ,  ಅದೇ ಅ ಮಹಾಂತೇಶ್ ಕೇಸನ್ನು . ಸಿ.ಸಿ.ಬಿ ಗೆ ವಹಿಸಿದ್ದಾರಂತೆ ಗೊತ್ತಾಯ್ತ, ಇವತ್ತು ಮಿರ್ಜಿ ಸಾಹೇಬ್ರು ಹೇಳಿದ್ದಾರೆ, ಹಾಗೆ ಸಿ.ಸಿ.ಬಿ ಯ ದಯಾನಂದ ಸಾಹೇಬ್ರು ಆಗ್ಲೆ ಚಾರ್ಚ್ ತಗಳಕ್ಕೆ ರಡಿ ಅಂತ ಹೇಳಿಕೆ ಕೊಟ್ಟಾಯ್ತು" ಎಂದ
ನಾಯಕನಿಗೆ ಪಿಚ್ಚೆನಿಸಿತು. ತಾನು ಒಂದು ವಾರಕ್ಕಿಂತ ಅಧಿಕ ಓಡಾಡಿ ಶ್ರಮಪಟ್ಟಿದ್ದೆಲ್ಲ ಅಷ್ಟೆ ನೀರಲ್ಲಿ ಹೋಮದಂತೆ, ಅಷ್ಟಕ್ಕು ನನಗೆ ಎಂತ ಸಪೋರ್ಟ್ ಇದೆ, ಈ ಮಂಜುನಾಥ, ಮತ್ತೊಬ್ಬ ಸೋಂಬೇರಿ ಆ ಚಂದ್ರ ಅಷ್ಟೆ. ಅಂತೆಲ್ಲ ಯೋಚಿಸುತ್ತ
"ಅಲ್ವೊ ಅದೇನೊ ನಿನಗೆ ಎಲ್ಲ ವಿಷಯವು ನನಗಿಂತ ಮೊದಲೆ ತಿಳಿಯುತ್ತೆ,  ಡಿಪಾರ್ಟ್ ಮೆಂಟಿನಲ್ಲಿ ಒಳ್ಳೆ ಲಿಂಕ್ ಇದೆ ಅನ್ನು " ಎಂದ
"ಅಯ್ಯೊ ಲಿಂಕು ಅದೆಲ್ಲ ಎಲ್ಲಿ ಬಂತು ಸಾರ್, ನೀವು ಕಾಫಿಗೆ ಅಂತ ಕಳಿಸ್ತ ಇರ್ತೀರಲ್ಲ,  ಆ ಪಳಿನಿ ಡಬ್ಬ ಹೋಟೆಲ್ ನಲ್ಲಿ ಒಂದು ಚಿಕ್ಕ ಟೀವಿ ಇಟ್ಟಿದ್ದಾನೆ, ಅದರಲ್ಲಿ ಯಾವಗಲು ಎಂತದೋ ಸುದ್ದಿ ಬರ್ತಾನೆ ಇರ್ತದೆ, ನಾನು ಅದನ್ನು ನೋಡಿ ನಿಮಗೆ ಬಂದು ಹೇಳ್ತೀನಿ ಅಷ್ಟೆ" ಎಂದ. ನಾಯಕನಿಗೆ ಮತ್ತೆ ಬೇಜಾರಾಯ್ತು, 
"ಛೇ ಇದೆಂತ ವ್ಯವಸ್ಥೆ,  ಕೆಲವು ಅಫಿಶಿಯಲ್ ನ್ಯೂಸ್ ಗಳು ಸಹ, ನಮಗೆ ಮೇಲಿನಿಂದ ಬರದೆ , ಟಿ,ವಿ, ನೋಡಿ ತಿಳಿಯುವಂತೆ ಆಯ್ತಲ್ಲ" ಎಂದು ಬೇಸರ ಪಡ್ತಾ ಕಾಫಿ ಕುಡಿಯುತ್ತಿರುವಂತೆ, ಫೋನ್ ರಿಂಗ್ ಆಯ್ತು, 
ಉತ್ತರಿಸಿದರೆ, ಆ ಕಡೆಯಿಂದ ACP, 
 
"ನಾಯಕ್, ಗೊತ್ತಾಯ್ತೇನ್ರಿ,  ನೀವು ಹ್ಯಾಂಡಲ್ ಮಾಡ್ತಿದ್ದ ಆ ಮಹಾಂತೇಶ್ ಕೇಸನ್ನ , ಸಾಹೇಬ್ರು ಸಿ.ಸಿ.ಬಿ ಗೆ ಕೊಟ್ಟಿದ್ದಾರೆ,  ಆಗ್ಲೆ ಅವ್ರು ಕಾಂಟಾಕ್ಟ್ ಮಾಡಿದ್ರು, ನಾನು ನಿಮ್ಮ ಹತ್ತಿರ ಮಾತನಾಡುವಂತೆ ಹೇಳಿದ್ದೀನಿ, ನೀವು ತಾನೆ ಆ ಕೇಸಲ್ಲಿ ಇನ್ ವಾಲ್ ಆಗಿ ಇದ್ದೋರು" ಎಂದು ಸಪ್ಪೆಯಾಗಿ ನುಡಿದು, ಫೋನ್ ಡಿಸ್ ಕನೆಕ್ಟ್ ಮಾಡಿದರು. 
  ಅವರ ಫೋನ್ ಇಡುತ್ತಿರುವಾಗಲೆ, ಸ್ಟೇಷನಿನ್ನ ಗೇಟ್ ಬಳಿ , ಸಿ.ಸಿ.ಬಿ. ಚೀಫ್ ದಯಾನಂದ ಹಾಗು A.CP. ಗುಲೇದ್ ರವರು ಬರುತ್ತಿರುವುದು ಕಾಣಿಸಿತು. ಜೊತೆ ಜೊತೆಗೆ ಸಿ.ಸಿ.ಬಿ  ಇನ್ಸ್ ಸ್ಪೆಕ್ಟರ್ ರಾಜಾರಾಮ್, ಮತ್ತು ಮತ್ತೆ ಒಬ್ಬರು ಪರಿಚಯದವರು ಅನ್ನಿಸಿತು. ಅವನಿಗೆ ಆಶ್ಚರ್ಯವೆ ಆಯಿತು, ಪರವಾಗಿಲ್ಲವೆ ಅದೇನೊ ಸಿ.ಸಿ.ಬಿ ಯವರು ಬಾರಿ ವೇಗದಲ್ಲಿದ್ದಾರೆ,  ಇಷ್ಟು ಬೇಗ ಕಾಣಿಸುತ್ತಿದ್ದಾರೆ, ಅಂದರೆ ಸಾಕಷ್ಟು ಒತ್ತಡವಿರಬೇಕು ಅಂದುಕೊಂಡ.
--------------------------------------------------------------------------------------------
ಮುಂದಿನ ಭಾಗ - 3 ರಲ್ಲಿ ನಿರೀಕ್ಷಿಸಿ : ಸಿ.ಸಿ.ಬಿ. ಯ ಕಾರ್ಯಶೈಲಿ ಹಾಗು ಕೊಲೆಯ ನಿಗೂಡತೆ ಬಯಲಿಗೆ
 
ಮೂರನೆಯ ಬಾಗ ಓದಲು ಇಲ್ಲಿ ಕ್ಲಿಕ್ ಮಾಡಿ : ಒಂದು ಕೊಲೆಯ ಸುತ್ತ [ಬಾಗ3]
 
Rating
No votes yet

Comments