ಕತೆ: ಕನಸಿನ ಮಾಯಾಜಿಂಕೆ [ ಜನನಿ ಜನ್ಮ ಭೂಮಿಶ್ಚ]
ಕತೆ: ಕನಸಿನ ಮಾಯಾಜಿಂಕೆ [ ಜನನಿ ಜನ್ಮ ಭೂಮಿಶ್ಚ]
ಬೆಳಗ್ಗೆ ಎದ್ದು ಸ್ನಾನ ತಿಂಡಿ ಅಂತ ಮುಗಿಸುವದರಲ್ಲಿ ಒಂಬತ್ತು ಘಂಟೆ ದಾಟಿತ್ತು.
ಬಾನುವಾರ, ಹಾಗಾಗಿ ಶೇಖರ ಮನೆಯಲ್ಲಿಯೆ ಇದ್ದ. ವಿಶ್ವ ಬಟ್ಟೆ ಧರಿಸಿ ಸಿದ್ದನಾದ
"ಏನಪ್ಪ ಹೊರಗೆ ಒಂದು ಸುತ್ತು ಹೋಗಿ ಬರೋಣವೆ , ನಾನಿದ್ದ ಮನೆ ಎಲ್ಲವನ್ನು ನೊಡಬೇಕಲ್ಲ “ ಎಂದ ನಗುತ್ತ.
ಶೇಖರನು ಸಪ್ಪಗೆ ನಗುತ್ತ
"ನನಗೆ ಸ್ವಲ್ಪ ಕೆಲಸ ಇದೆಯಲ್ಲಪ್ಪ, ತಪ್ಪು ತಿಳಿಯಬೇಡ, ಅಷ್ಟಕ್ಕೂ ಇದು ನೀನು ನೋಡಿರುವ ಊರೆ ಅಲ್ಲವೆ ರಸ್ತೆಗಳೆಲ್ಲ ಆಗ ಇದ್ದ ಹಾಗೆ ಇವೆ, ಮನೆಗಳು ಮಾತ್ರ ಬಿದ್ದು ಎದ್ದು ಆಗಿವೆ ಅಷ್ಟೆ, ಒಂದು ಸುತ್ತು ಮುಗಿಸಿ ಊಟಕ್ಕೆ ಬಂದುಬಿಡು" ಅಂದ.
ವಿಶ್ವನು ಹೆಚ್ಚು ಬಲವಂತ ಮಾಡಲು ಹೋಗಲಿಲ್ಲ . ಅವನ ಮನಸ್ಸು ತಿಳಿದಿರುವುದೆ , ಬಹುಶಃ ಶೇಖರನಿಗೆ ಉಳಿದವರನ್ನು ಬೇಟಿ ಮಾಡುವದನ್ನು ತಪ್ಪಿಸಬೇಕಿದೆ . ವಿಶ್ವನಲ್ಲಿ ಉತ್ಸಾಹ ಆಗಲೆ ಸ್ವಲ್ಪ ಕುಗ್ಗಿ ಹೋಗಿತ್ತು.
ವಿಶ್ವ ನಡೆಯುತ್ತ ಚಿಕ್ಕವಯಸ್ಸಿನಲ್ಲಿ ತಂದೆಯಜೊತೆ ವಾಸವಾಗಿದ್ದ ಮನೆಯತ್ತ ಹೋದ. ಆಗ ಇದ್ದ ಅದೇ ಎತ್ತರದ ಮಾಳಿಗೆಯ ಹೆಂಚಿನ ಮನೆ. ಆದರೆ ನೋಡಿದರೆ ಯಾರು ವಾಸವಾಗಿದ್ದಂತೆ ಕಾಣಲಿಲ್ಲ. ಹೊರಗಿನಿಂದ ಚಿಲಕ ಸಿಕ್ಕಿಸಿ ಬಾಗಿಲು ಹಾಕಿತ್ತು, ಚಿಲಕಕ್ಕೆ ಸಿಕ್ಕಿಸಿದ ಕೋಲು ತೆಗೆದು ಬಾಗಿಲು ತೆರೆದ. ಒಳಗೆ ಬಹಳ ವರ್ಷಗಳ ದೂಳು ಇದ್ದಿತ್ತು.
ಒಂದೆರಡು ನಿಮಿಷ ಬಿಟ್ಟು ಒಳಗೆ ಅಡಿಯಿಟ್ಟ.
ತಾನು ಸುಮಾರು ಹತ್ತು ವರುಷಗಳನ್ನು ಕಳೆದ ಹಳೆ ಮನೆ, ಹಾಲಿನಲ್ಲಿ ನಿಂತರೆ ಎದುರಿಗೆ ಎಡಕ್ಕೆ ಅಡುಗೆ ಮನೆ ಬಾಗಿಲು. ಬಲಕ್ಕೆ ಬಚ್ಚಲು ಮನೆಗೆ, ಅಲ್ಲಿಂದ ಹಿತ್ತಲಿಗೆ ಹೋಗಲು ಬಾಗಿಲು, ತಾನು ನಿಂತ ಜಾಗದಲ್ಲಿ ಬಲಕ್ಕೆ ನೋಡಿದ ಮೇಲಕ್ಕೆ ಹತ್ತಿಹೋಗಲು ಮರದ ಮೆಟ್ಟಿಲುಗಳು. ಎಲ್ಲ ಗೋಡೆಗಳು ಖಾಲಿ ಖಾಲಿ, ನೆಲ ಗೋಡೆ ಎಲ್ಲವೂ ಬರೀ ದೂಳು ಜೇಡ.
ಅಡುಗೆ ಮನೆ ಒಳಗೆ ಹೋಗಿ ನೋಡಿದ.
ಅಮ್ಮ ಮೂಲೆಯಲ್ಲಿ ನಿಂತು ಅಡುಗೆ ಮಾಡುತ್ತ ಇದ್ದದ್ದು ಕಣ್ಣಿನ ಎದುರಿಗೆ ಬಂದಿತು. ಅಪ್ಪ ಹಾಗು ತಾನು ತನ್ನ ಅಣ್ಣ ಕುಳಿತು ಗೋಡೆಗೆ ಒರಗಿ ಊಟ ಮಾಡುತ್ತಿದ್ದೆವು ಇದೇ ಅಡುಗೆ ಮನೆಯಲ್ಲಿಯೆ. ಈಗಿನ ಕಾಲಕ್ಕೆ ಇರದ ಹೊಗೆಗೂಡು ಹಾಗೆಯೆ ಇದ್ದಿತು. ಹಳೆಯ ನೆನಪು ಅವನಿಗೆ ಕಣ್ಣಲ್ಲಿ ನೀರು ತುಂಬಿದಂತಾಯ್ತು.
ಹಾಗೆ ಹೊರಬಂದ, ಮತ್ತೆ ಬಲಕ್ಕೆ ಹೋದ,
ಅಲ್ಲಿ ಹಂಡೆ ಕಿತ್ತ ಒಲೆ, ಕಸ ತುಂಬಿದ ನೀರತೊಟ್ಟಿ, ಎಲ್ಲವೂ ಹಿಂದಿನ ದಿನಗಳನ್ನು ನೆನೆಪಿಸಿತು,ಅದೇ ತೊಟ್ಟಿಯಲ್ಲಿ ನೀರುತುಂಬಿ, ಹಂಡೆಯಲ್ಲಿ ನೀರು ಕಾಯಿಸಿ ಅಮ್ಮ ಎಷ್ಟು ಬಾರಿ ತಲೆಗೆ ನೀರು ಎರೆದಿರುವಳೊ. ಹಿಂದಿನ ಬಾಗಿಲು ಕಚ್ಚಿಕೊಂಡಿತ್ತು, ಬಲವಂತವಾಗಿ ತೆಗೆದು ಹೊರಬಂದು ನಿಂತ, ಹಿತ್ತಲು ಹಾಳು ಬಿದ್ದು ಸಿಕ್ಕಸಿಕ್ಕ ಮರಗಳೆಲ್ಲ ಬೆಳೆದು ಕಾಡಿನಂತಾಗಿತ್ತು. ಹಾಗೆ ಒಳಬಂದು ಬಾಗಿಲು ಹಾಕಿದ.
ಹಾಲಿಗೆ ಬಂದು ನಿಂತು ಮತ್ತೆ ಮೆಟ್ಟಿಲು ಹತ್ತಿ ಮೇಲೆ ಹೋಗೋಣ ಎಂದು ಹೊರಟ. ಎಸ್ ಎಸ್ ಎಲ್ ಸಿ ಪರೀಕ್ಷೆ ಕಟ್ಟಿದಾಗ ತಾನು ಮೇಲೆಯೆ ಕುಳಿತು ಓದುತ್ತ ಇದ್ದದ್ದು, ಅಲ್ಲಿಯೆ ಮಲಗುತ್ತ ಇದ್ದದ್ದು.
ಅಷ್ಟರಲ್ಲಿ,
ಮತ್ಯಾರೋ ಒಳಬಂದರು. ಸುಮಾರು ಅವನದೇ ವಯಸಿನವರು.
"ಇದೇನು ನೀವ್ಯಾರು ? , ಇಲ್ಲಿ ಏನು ಮಾಡುತ್ತಿರಿವಿರಿ?" ಕೇಳಿದ ಆತ ಕೊಂಚ ಆತಂಕದಿಂದ
"ಇಲ್ಲ ತುಂಬಾ ವರ್ಷದ ಕೆಳಗೆ ನಾನು ಇದೆ ಮನೆಯಲ್ಲಿ ವಾಸ ಮಾಡುತ್ತಿದೆ, ಹೀಗೆ ಬಂದಿದ್ದೆ ಮನೆ ನೋಡೋಣ ಅನ್ನಿಸಿತು,ಹಾಗೆ ಒಳಗೆ ಬಂದೆ, ಕೇಳಲು ಯಾರು ಇರಲಿಲ್ಲ"
"ಹಾಗೋ, ನೋಡಿ ಪರವಾಗಿಲ್ಲ, ಕೇಳಲು ಯಾರು ಇಲ್ಲ ಬಿಡಿ, ಈ ಮನೆಯ ಓನರ್ ಇಲ್ಲಿ ಇಲ್ಲ, ಬೆಂಗಳೂರಿಗೆ ಹೋಗಿ ಅಲ್ಲಿಯೆ ಸೆಟ್ಲ್ ಆಗಿದ್ದಾರೆ, ಈ ಮನೆ ಮಾರುತ್ತಲು ಇಲ್ಲ , ಅಥವ ಸರಿಮಾಡಿಸಿ ಬಾಡಿಗೆಗು ಕೊಡಲಿಲ್ಲ, ಪಕ್ಕದಲ್ಲಿದ್ದು ನಮಗೊಳ್ಳೆ ಕಷ್ಟವಾಗಿದೆ" ಎಂದರು ಆತ. ಆ ಮನೆಯ ಪಕ್ಕದಲ್ಲಿ ವಾಸವಾಗಿದ್ದವರು ಅವರು.
ವಿಶ್ವ ಮೆಟ್ಟಿಲನ್ನು ಹತ್ತಲು ಹೋದ ಆತ
"ಬೇಡ ಇವರೆ, ಹಳೆಯ ಮರದ ಮೆಟ್ಟಿಲು ಎಲ್ಲವೂ ಗೆದ್ದಿಲು ಹಿಡಿದಿದೆ, ಬಿದ್ದರೆ ಎಲ್ಲಿಯ ಗ್ರಹಚಾರ ಇಲ್ಲಿಂದಲೆ ನೋಡಿ ಸಾಕು ಬನ್ನಿ ಹೊರಗೆ ಹೋಗೋಣ" ಎನ್ನುತ್ತ ನಡೆದರು. ವಿದಿಯಿಲ್ಲದೆ ವಿಶ್ವನು ಅವರ ಹಿಂದೆ ಹೊರಟ.
ಆತನ ಹೆಸರು ರಂಗಸ್ವಾಮಿ, ತಾಲೋಕು ಆಫೀಸಿನಲ್ಲಿ ಕ್ಲಾರ್ಕ್ ಅಂತೆ, ಆತ ವಿಶ್ವನ ಬಗ್ಗೆ ವಿಚಾರಿಸಿದರು. ಅವರ ಜೊತೆ ಮಾತನಾಡುತ್ತ ತಾನು ತಂದೆಯ ಜೊತೆ ಅದೇ ಮನೆಯಲ್ಲಿ ಇದ್ದದ್ದು ಹೈಸ್ಕೂಲ್ ಓದಿದ್ದು , ಈಗ ಬೆಂಗಳೂರಿನಲ್ಲಿರುವುದು ಎಲ್ಲ ವಿವರ ತಿಳಿಸಬೇಕಾಯಿತು. ಕಡೆಗೊಮ್ಮೆ ವಿಶ್ವ ಕೇಳಿದ.
"ಇಲ್ಲಿ ಅಲಕಾನಂದ ನಗರ ಎಲ್ಲಿ ಬರುತ್ತೆ , ಅಲ್ಲಿ ನನ್ನ ಬಾಲ್ಯದ ಗೆಳೆಯರು ಕೆಲವರು ಇರುವರು"
ಅದಕ್ಕಾತ ,
"ನೋಡಿ ಬಲಗಡೆ ರಸ್ತೆಯಲ್ಲಿ ಉದ್ದಕ್ಕೆ ಹೋಗಿ, ಅಲ್ಲಿ ’ಅಲಕಾನಂದ ಟ್ಯಾಂಕ್ ರೋಡ್” ಅಂತ ಬೋರ್ಡ್ ಇದೆ ಅದೇ ರಸ್ತೆಯಲ್ಲಿ ಉದ್ದಕ್ಕೆ ಹೋದರೆ ಆಯಿತು. ಬದಲಾಗಿ ಒಂದು ಆಟೋ ಹಿಡಿದು ಹೋಗಿ ಹದಿನೈದು ನಿಮಿಷ ಅಷ್ಟೆ "
ವಿಶ್ವ ತನ್ನ ಮರೆವಿಗೆ ಬೈದುಕೊಂಡ. ಅಲಕಾನಂದ ಕೆರೆ ಅವನಿಗೆ ಗೊತ್ತಿರುವುದೆ, ಅಲ್ಲಿ ಎಷ್ಟು ಆಟವಾಡಿಲ್ಲ, ಈಜಾಟ ನಡೆಸಿಲ್ಲ ಗೆಳೆಯರ ಜೊತೆ. ಪಕ್ಕದ ಮನೆಯಾತನಿಗೆ ವಂದಿಸಿ.
"ಇಲ್ಲ ನಾನು ನಡೆದೆ ಹೋಗುತ್ತೇನೆ ಪರವಾಗಿಲ್ಲ ಅಂತಹ ಆತುರವೇನು ಇಲ್ಲ" ಎಂದು ತಿಳಿಸಿ ಅಲ್ಲಿಂದ ಹೊರಟ.
ಸುಮಾರು ಮುಕ್ಕಾಲು ಗಂಟೆ ನಡೆಯುತ್ತ ದೂಳಿನ ರಸ್ತೆ, ಬಿಸಿಲಿನ ಝಳ ಎಲ್ಲವೂ ಅವನಿಗೆ ಸ್ವಲ್ಪ ಆಯಾಸ ಅನ್ನಿಸಿತು.
ತಾನಿದ್ದ ಹಳೆಯ ಮನೆಯೊಳಗೆ ಹೋಗಿ ಬಂದಿದ್ದು ಅವನ ಮನಸಿಗೆ ಮುದ, ಎಂತದೋ ಸಂತಸ ನೀಡಿತ್ತು. ಎಲ್ಲ ಗೆಳೆಯರನ್ನು ಈ ದಿನ ಬೇಟಿಯಾದರೆ , ನಾಳೆ ಬೆಳಗ್ಗೆ ಹೊರಟುಬಿಡಬಹುದು ಎಂದು ಕೊಂಡವನು, ಪ್ರಕಾಶನಿಗೆ ಮೊಬೈಲ್ ಮಾಡಲೇ ಎಂದು ಚಿಂತಿಸಿದವರು , ಬೇಡ ಅನ್ನಿಸಿ ಸುಮ್ಮನಾದ, ಅಲ್ಲಿಯ ವಾತಾವರಣ ಗೆಳೆಯರ ಮಧ್ಯೆ ಇದ್ದ ಅನ್ಯೋನ್ಯತೆ ಅವನಿಗೆ ಆಗಲೇ ಮನವರಿಕೆ ಆಗಿತ್ತು.
ಅಲಕಾನಂದನಗರ ದೊಡ್ಡ ನಗರವೇನಲ್ಲ, ಅಲ್ಲಿದ್ದ ನಾಲಕ್ಕು ಅಡ್ಡ ಉದ್ದ ರಸ್ತೆ ಸೇರಿಸಿ ಅಲಕಾನಂದ ನಗರವಾಗಿತ್ತು.
ನಾವೆಲ್ಲ ಈಜುತ್ತಿದ್ದ ಕೆರೆಯೇ ಮಾಯವಾಗಿದೆಯಲ್ಲ, ಕೆರೆಯು ಇದ್ದ ಜಾಗ ಯಾವುದು ? ಎಂದು ಗುರುತಿಸಲು ಪ್ರಯತ್ನಪಡುತ್ತಿರುವಲ್ಲಿ ಮೊಬೈಲ್ ರಿಂಗ್ ಆಯಿತು. ತೆಗೆದುನೋಡಿದರೆ ಪ್ರಕಾಶ.
"ಏನಪ್ಪ ಏನು ಮಾಡಿದೆ, ಇಲ್ಲಿಗೆ ಬರುವದಾಗಿ ತಿಳಿಸಿದ್ದೆ. ನಾನು ನಿನ್ನೆಯೆಲ್ಲ ಕಾದೆ ನಿನ್ನ ಸುಳಿವೆ ಇಲ್ಲ, ಕಾರ್ಯಕ್ರಮ ಕ್ಯಾನ್ಸಲ್ ಮಾಡಿದೆಯ?" ಅತ್ತಲಿಂದ ಮಾತನಾಡುತ್ತಿದ್ದ ಪ್ರಕಾಶ.
"ಇಲ್ಲ ಪ್ರಕಾಶ, ನಾನು ನಿನ್ನೆಯೆ ಇಲ್ಲಿಗೆ ಬಂದೆ. ದಾರಿಯಲ್ಲಿ ಸಿಕ್ಕ ಶೇಖರನ ಮನೆಗೆ ಹೋಗಿದ್ದೆ ರಾತ್ರಿ ಅಲ್ಲಿಯೆ ಇದ್ದೆ " ಅಂದ ವಿಶ್ವ. ಆ ತುದಿಯಲ್ಲಿ ಒಂದು ದೀರ್ಘ ಮೌನ.
"ಸರಿ, ಅಲ್ಲಿ ಹೋಗಿದ್ದೆಯ, ನಾನು ನಿನ್ನೆ ರಾತ್ರಿಯೆಲ್ಲ ಕಾಯುತ್ತಿದ್ದೆ ಎಲ್ಲಿ ವಿಶ್ವ ಬರಲಿಲ್ಲವೆ ಎಂದು, ಇರಲಿ ಬಿಡು ಈಗ ಎಲ್ಲಿದ್ದೀಯ ಒಂದು ಕಾಲ್ ಮಾಡುವದಲ್ಲವೆ" ಎಂದ.
"ಅದೇನಪ್ಪ ನಮ್ಮ ಕೆರೆಯನ್ನೆಲ್ಲ ಮುಳುಗಿಸಿ ಕಟ್ಟಿದ್ದಾರಲ್ಲ ಅಲಕಾನಂದ ನಗರ ಅಲ್ಲಿಗೆ ನಡೆದು ಹೊರಟಿರುವೆ. ಇನ್ನೇನು ಬಂದಾಯ್ತು ಬಸವರಾಜುವಿನ ಮನೆ ಹುಡುಕಬೇಕಷ್ಟೆ" ಎಂದ ವಿಶ್ವ
"ಏನು ಈ ಬಿಸಿಲಲ್ಲಿ ದೂಳಿನಲ್ಲಿ ನಡೆದುಹೋಗುತ್ತಿರುವೆಯ ಸರಿಹೋಯ್ತು, ನನಗೆ ಒಂದು ಕಾಲ್ ಮಾಡುವದಲ್ಲವ, ಬೈಕ್ ತರುತ್ತಿದೆ, ಎಂತ ಸ್ನೇಹಿತನಪ್ಪ ನೀನು" ಅವನ ಮಾತಿಗೆ ವಿಶ್ವ
"ಇರಲಿ ಬಿಡಪ್ಪ ಹಳೆಯ ಮರದ ಬೇರು, ಸ್ವಂತ ಊರಿನ ದೂಳು ಎಲ್ಲವೂ ನೋಡಲು ಅನುಭವಿಸಲು ಚಂದ " ಎಂದ ನಗುತ್ತ .
"ಕವನಗಳನ್ನು ಜಾಸ್ತಿ ಓದುತ್ತಿದ್ದಿ ಅನ್ನಿಸುತ್ತೆ, ಬಸವರಾಜುವಿನ ಮನೆಯ ಹತ್ತಿರವೆ ಇರು, ನಾನು ಬೈಕ್ ತರುವೆ, ಮತ್ತೆ ನಡೆಯುತ್ತ ಬರಬೇಡ " ಎಂದು ಮೊಬೈಲ್ ಡಿಸ್ಕನೆಕ್ಟ್ ಮಾಡಿದ ಪ್ರಕಾಶ.
ಬಸವರಾಜಿವಿನ ಮನೆ ಮುಂದೆ ನಿಂತು ಬೆಲ್ ಮಾಡಿದ. ಹೊರಬಂದವನು ಅವನೇ. ವಿಶ್ವನ ಗುರುತು ಸಿಗದೆ ಮುಖ ನೋಡಿದ. ವಿಶ್ವ ಅವನಿಗೆ ತನ್ನ ನೆನಪನ್ನು ಕೊಟ್ಟ. ಅವನು ನಗುತ್ತ ಬಾಗಿಲು ತೆರೆದವನು,
"ಇದೇನೋ ಅಕಾಶದಿಂದ ಎನ್ನುವಂತೆ ದುಮುಕಿದೆ. ಇಷ್ಟು ವರ್ಷ ಒಂದು ಸುದ್ದಿಯಿಲ್ಲ. ಏನಾದೆ ಗೊತ್ತಿಲ್ಲ ಅನ್ನುವಂತೆ ಈಗ ಹೀಗೆ ಬಂದೆ ಅದು ನಡುಮಧ್ಯಾನ್ಹದ ಬಿಸಿಲಿನಲ್ಲಿ, ಬಾ ಬಾ "
ಎನ್ನುತ್ತ ಒಳಗೆ ಕರೆದೋಯ್ದ. 'ಕುಳಿತಿಕೊ' ಎನ್ನುತ್ತ ಒಳಗೆ ಹೋಗಿ ನೀರು ತಂದು ಅವನ ಕೈಗೆ ಕೊಡುತ್ತ.
"ಒಂದು ಆಟೋದಲ್ಲಾದರು ಬರುವದಲ್ವ, ಹೀಗೆ ಬಿಸಿಲಲ್ಲಿ ನಡೆಯುತ್ತ ಬರಲು ನೀನು ಇನ್ನು ಚಿಕ್ಕ ಹುಡುಗನಾ. ಹೇಗೆ ಬಂದೆ ಬಸ್ಸಿನಲ್ಲಿಯ ? ಎಲ್ಲಿ ನಿನ್ನ ಲಗೇಜ್ ಏನು ಕಾಣ್ತಿಲ್ಲ, ಬಸ್ ಸ್ಟಾಂಡಿನಲ್ಲಿಯೆ ಬಿಟ್ಟು ಬಂದೆಯ " ಎಂದು ಬಾಯಿತುಂಬ ಮಾತನಾಡುತ್ತ ಕುಳಿತ.
ಅದಕ್ಕೆ ವಿಶ್ವನು .
"ಇಲ್ಲಪ್ಪ ಹೀಗೆ ನಾವಿದ್ದ ಹಳೆಯ ಮನೆಯ ಹತ್ತಿರ ಹೋಗಿದ್ದೆ, ಅಲ್ಲಿಂದ ಹೀಗೆ ನಡೆದು ಬಂದೆ. ನೀನು ಹೇಗಿದ್ದೀಯ, ಅದೇನು ಹಳೆಯ ಮನೆಯನ್ನು ಬಿಟ್ಟು ಊರಿನಿಂದ ಹೊರಗೆ ಇಲ್ಲಿ ಬಂದು ಸೆಟ್ಲ್ ಆಗಿ ಬಿಟ್ಟಿರುವೆ. ಇದು ಕೆರೆ,ತೋಟಗಳಿದ್ದ ಜಾಗವಲ್ಲವೆ " ವಿಶ್ವನೆಂದ.
"ಹೌದಪ್ಪ, ಊರ ಒಳಗಿನ ಆ ಮನೆಯನ್ನು ಕೊಡಬೇಕಾಯಿತು, ಹೀಗೆ ಏನೊ ವ್ಯವಹಾರಗಳು. ಪಕ್ಕದಲ್ಲಿ ನಮ್ಮ ಜಮೀನು ಇತ್ತಲ್ಲ ಇಲ್ಲೆ ಕೆರೆಯ ಪಕ್ಕ, ಅದನ್ನು ಸೈಟ್ ಮಾಡಿದೆವು , ಹಾಗೆ ಸರ್ಕಾರದ ಒಳಗೆ ನಮಗೆ ಸ್ವಲ್ಪ ಲಿಂಕ್ ಇತ್ತು, ಸ್ವಲ್ಪ ಕೆರೆಯ ಜಾಗವು ಸೇರಿಬಿಡ್ತು ಅನ್ನು. ಅದಕ್ಕೆ ಊರ ಜನ ತಲೆಯೆಲ್ಲ ಮಾತನಾಡ್ತಾರೆ. ಯಾರು ಮಾಡದ ಕೆಲಸವನ್ನೇನೋ ನಾನು ಮಾಡಿರುವ ಹಾಗೆ ಇವರೆಲ್ಲ ಶುದ್ದ ಅನ್ನುವ ಹಾಗೆ ಎಲ್ಲ ತರಲೆಗಳು " ಬಸವರಾಜು ಒದರುತ್ತಿದ್ದ.
ಒಳಗಿನಿಂದ ಅವನ ಹೆಂಡತಿ ಕಾಫಿ ತಂದಳು. ಅವಳನ್ನು ಪರಿಚಯ ಮಾಡಿಸುತ್ತ.
"ನನ್ನ ಗೆಳೆಯ ವಿಶ್ವ ಎಂದು ಕಣೇ ಈಗ ಬೆಂಗಳೂರಿನಲ್ಲಿದ್ದಾನೆ ದೊಡ್ಡ ಹುದ್ದೆ ನಮ್ಮ ಹಾಗಲ್ಲ" ಎಂದು ನಗುತ್ತ,
"ಇವಳು ನೋಡಪ್ಪ ನನ್ನ ಒಬ್ಬಳೆ ಹೆಂಡತಿ" ಎಂದು ಜೋರಾಗಿ ನಕ್ಕ.
"ನೀನಿನ್ನು ತಮಾಷಿ ಮಾಡುವುದು ಬಿಡಲಿಲ್ಲ ನೋಡು, ಮೊದಲಿನ ಹಾಗೆ ಇದ್ದೀಯ "
ಎಂದು ನಗುತ್ತ ವಿಶ್ವ
"ಅಂದ ಹಾಗೆ ನಿನ್ನ ತಮ್ಮ ಲಿಂಗರಾಜು ಸಹ ಇಲ್ಲೆ ಇರಬೇಕಲ್ಲವೆ ?" ಎಂದ.
"ಹೌದಲ್ಲ ಇಲ್ಲೆ ಪಕ್ಕದಲ್ಲಿ ಇದ್ದಾರೆ, ಏನು ಅಣ್ಣನೋ ಏನು ತಮ್ಮನೋ ಒಂದು ಅರ್ಥವಾಗಲ್ಲ ,ಈಗ ಹಣವಷ್ಟೆ ಜಗತ್ತಲ್ಲವೆ. ನಮಗೂ ಅವರಿಗೂ ಅಂತ ಸಂಬಂಧ ಉಳಿದಿಲ್ಲ ಬಿಡು. ಇವತ್ತು ಅವರೇನೋ ಮನೆಯಲ್ಲಿ ಇದ್ದಹಾಗಿಲ್ಲ. ಅದೇನೊ ಹಾಸನಕ್ಕೆ ಹೋಗಿದ್ದಾರಂತೆ ಹುಡುಗರು ಅನ್ನುತ್ತಿದ್ದರು, ಅವರದೇ ಕಾರಿದೆಯಲ್ಲಪ್ಪ ಅದರಲ್ಲಿ ಜಂಬೂಸವಾರಿ"
ಎನ್ನುತ್ತ ಮತ್ತೆ ಜೋರಾಗಿ ನಕ್ಕ .
ವಿಶ್ವನಿಗೆ ಮತ್ತೆ ಅರ್ಥವಾಯಿತು, ಇಲ್ಲಿಯೂ ಅದೇ ಕತೆ.
"ಮಕ್ಕಳೆಷ್ಟಪ್ಪ, ನೀನು ಏನು ಮಾಡುಕೊಂಡಿದ್ದೀಯ" ಕೇಳಿದ ವಿಶ್ವ.
"ಮೂವರು ಮಕ್ಕಳಪ್ಪ, ಗಂಡು ಎರಡು ಒಂದು ಹೆಣ್ಣು. ಇಲ್ಲೆ ಎಲ್ಲೊ ಅಂಗಡಿ, ಎಂದೋ ಸ್ಪೆಶಲ್ ಕ್ಲಾಸ್ ಎಂದೋ ಹೋಗಿರುತ್ತಾರೆ. ಇನ್ನು ನಿನ್ನ ಪ್ರಶ್ನೆ ಕೆಲಸ , ನನಗೆ ಇಂತದ್ದೆ ಅಂತ ಕೆಲಸವೇನಿಲ್ಲ. ಹೀಗೆ ಅದು ಇದು ಮಾಡಿಕೊಂಡಿರೋದು, ಊರಿನಲ್ಲಿ ಪುಡಾರಿ ಅನ್ನುತ್ತಾರೆ. ಕೆಲಸ ಕಮ್ಮಿ ಪುರುಸೊತ್ತು ಜಾಸ್ತಿ ನೋಡು ಅದಕ್ಕೆ ಮಕ್ಕಳು ಜಾಸ್ತಿ " ಎನ್ನುತ್ತಾ ಕೆಟ್ಟದಾಗಿ ನಕ್ಕ.
ವಿಶ್ವನಿಗೆ ನಗದೆ ವಿಧಿಯಿಲ್ಲ.
ಹೊರಗೆ ಮೋಟರ್ ಸೈಕಲ್ ಶಬ್ದ ಕೇಳಿಸಿತು ವಿಶ್ವನಿಗೆ, ಬಹುಶಃ ಪ್ರಕಾಶ ಬಂದನೇನೊ ಅಂದುಕೊಂಡ.
"ಹೊರಗೆ ಮೋಟರ್ ಬೈಕ್ ಶಬ್ದವಾಯಿತು, ಅನ್ನಿಸುತ್ತೆ, ಪ್ರಕಾಶ ಬಂದನೇನೊ" ಎನ್ನುತ್ತ ಎದ್ದು ನಿಂತ
ವಿಶ್ವ ಹೇಳಿದಂತೆ ಪ್ರಕಾಶ ಬೈಕ್ ನಿಲ್ಲಿಸಿ ಬರುತ್ತಿದ್ದ. ಅವನನ್ನು ನೋಡುತ್ತಿರುವಂತೆ ಬಸವರಾಜನ ಮುಖ ವಿವರ್ಣವಾಯಿತು.
"ಓಹೋ ಇದೇನು ದೊಡ್ಡವರು ನಮ್ಮ ಮನೆಗೆ ಬರುತ್ತಿದ್ದಾರೆ!. ನನ್ನಂತಹ ಅನ್ಯಾಯದ ಜನರ ಮನೆಗೆ ಬಂದರೆ ತಮ್ಮ ಬದುಕಿಗೆ ಕಳಂಕ ಅಂಟುವದಿಲ್ಲವೆ " ಎಂದ ದೊಡ್ಡ ದ್ವನಿಯಲ್ಲಿ.
"ಬಸವರಾಜು ಅದೆಲ್ಲ ಈಗೇಕೆ ಬಿಡು, ಏನೊ ಆಗಿಹೋಯ್ತು ಕೆಟ್ಟಕಾಲ, ಈಗ ಅಪರೂಪಕ್ಕೆ ವಿಶ್ವ ಬಂದಿರುವ ಅವನ ಎದುರಿಗೆ ನಮ್ಮ ಜಗಳವೇಕೆ" ಎಂದ.
"ಅವನ ಎದುರಿಗಾದರು ಅಷ್ಟೆ ಎಲ್ಲಿಯಾದರು ಅಷ್ಟೆ. ನ್ಯಾಯ ಒಂದೇ ತಾನೆ. ನನ್ನ ಮಾನ ಬೀದಿಯಲ್ಲಿ ಹರಾಜಾಕಿದವನು ನನ್ನ ಮನೆ ಬಾಗಿಲಿಗೆ ಏಕೆ ಬರಬೇಕು" ಎಂದ .
ವಿಶ್ವನಿಗೆ ಗಾಭರಿಯಾಗಿತ್ತು. ಇದೇನು ನಡೆಯುತ್ತಿದೆ ಇಲ್ಲಿ . ಇವರ ನಡುವೆ ಇರುವ ಮನಸ್ತಾಪವಾದರೂ ಎಂತಹುದು ಎಂದು ಅವನಿಗೆ ಅರ್ಥವಾಗಲಿಲ್ಲ.
"ಹೋಗಲಿ ಬಿಡಪ್ಪ ನನ್ನ ಕಾರಣದಿಂದ ನಿಮ್ಮ ನಡುವೆ ಜಗಳವಾಗುವುದು ಈಗ ಬೇಡ. ನಾವೆಲ್ಲ ಬಾಲ್ಯ ಸ್ನೇಹಿತರಲ್ಲವೆ ಸ್ವಲ್ಪ ಚಿಕ್ಕವಯಸ್ಸಿನದನ್ನು ನೆನೆಪಿಸಿಕೊಳ್ಳಿ" ಎನ್ನುತ್ತ ಪುಸಲಾಯಿಸಿದ ವಿಶ್ವ
.
"ಅದೆಲ್ಲ ಚಿಕ್ಕವಯಸಿಗೆ ಆಯಿತು ವಿಶ್ವ. ಈಗ ಜೀವನ ಮುಖ್ಯ, ನಮ್ಮ ಮರ್ಯಾದೆ ಮುಖ್ಯ. ಒಮ್ಮೆ ಹೋದ ಮರ್ಯಾದ ಪುನಃ ಸಿಗುವುದಾ, ಊರಿನಲ್ಲಿ ಗುಲ್ಲು ಮಾಡಿ ಮನೆಯಲ್ಲಿ ಕಾಲು ಹಿಡಿಯಲು ಬಂದರೆ ಯಾರಿಗೆ ಬೇಕು ಇವನ ಸ್ನೇಹ"
ಬಸವರಾಜುವಿನ ಜಗಳದ ದ್ವನಿ ತಾರಕಕ್ಕೆ ಏರಿ ಅವನ ಹೆಂಡತಿ ಈಚೆ ಬಂದು ನಿಂತಳು.
ಹೊರಗಿನಿಂದ ಬಂದ ಬಸವರಾಜುವಿನ ಮಕ್ಕಳು, ಪಿಳಿ ಪಿಳಿ ಎಂದು ಕಣ್ಣು ಬಿಡುತ್ತ ನಿಂತುಕೊಂಡವು,
ಪ್ರಕಾಶ ಸಣ್ಣ ದ್ವನಿಯಲ್ಲಿ ಎಂದ
"ಇಲ್ಲಪ್ಪ ನಾನು ಕಾಲು ಹಿಡಿಯಲೂ ಬರಲಿಲ್ಲ, ಜಗಳಕ್ಕೂ ಬರಲಿಲ್ಲ, ವಿಶ್ವ ಬಂದಿದ್ದಾನಲ್ಲ, ಅವನನ್ನು ಕರೆದೊಯ್ಯೋಣ ಎಂದು ಬೈಕ್ ತಂದೆ ಅಷ್ಟೆ. ನಿನಗೆ ಬೇಸರವೇನು ಬೇಡ ನಾನು ಹೊರಡುತ್ತೇನೆ " ಎಂದ.
"ಸರಿ ಆಯಿತು, ವಿಶ್ವ ತಾನೆ ಕರೆದುಕೊಂಡು ಹೊರಡುತ್ತಿರು ನನ್ನ ಮನೆ ಮುಂದೆ ನಿಲ್ಲ ಬೇಡ. ನನಗೆ ಸ್ನೇಹಿತರಾರು ಇಲ್ಲ" ಮೈಮೇಲೆ ಬಂದವನಂತೆ ಕೂಗಾಡುತ್ತ ಬಸವರಾಜು ಒಳಗೆ ಹೋಗಿ ರಪ್ಪನೆ ಬಾಗಿಲು ಹಾಕಿಕೊಂಡ.
ವಿಶ್ವ ಪೆಚ್ಚಾದ. ಪ್ರಕಾಶನ ಮುಖ ವಿವರ್ಣವಾಯಿತು. ಛೇ! ಗೊತ್ತಿದ್ದು ತಾನು ಬಂದು ತಪ್ಪು ಮಾಡಿದೆ ಅಂದು ಕೊಂಡು.
"ಬಾ ವಿಶ್ವ ಹೋಗೋಣ, ಸಾರಿ ಕಣೋ ನನ್ನಿಂದ ಸೀನ್ ಕ್ರಿಯೇಟ್ ಆಯಿತು" ಎನ್ನುತ್ತ ಹೊರಟ.
ಹಿಂದೆ ಹೊರಟ ವಿಶ್ವನಿಗೆ ಪಾಪ ಕಡೆಗೆ ಬಸವರಾಜುವಿನ ಮಕ್ಕಳು ತನ್ನ ಬಗ್ಗೆ ಏನು ಭಾವಿಸಿದರೋ ಎನ್ನುವ ಭಾವನೆ ಕಾಡುತ್ತಿತ್ತು
ಬೈಕಿನಲ್ಲಿ ಇಬ್ಬರೂ ಪುನಃ ಊರಿನ ಕಡೆಗೆ ಹೊರಟರು. ಹೋಟೆಲ್ ಮುಂದೆ ಬೈಕ್ ನಿಲ್ಲಿಸಿದ ಪ್ರಕಾಶ್ .
ಊರು ಸಂಪೂರ್ಣ ಬದಲಾಗಿತ್ತು, ಸರಿಯಾಗಿ ಹೇಳುವದಾದರೆ ತಾನು ಎಲ್ಲಿದ್ದೇನೆ ಎಂದು ವಿಶ್ವನಿಗೆ ತಿಳಿಯಲೆ ಆಗದಷ್ಟು.
ಅವನ ನೆನಪಿನ ಹಿರಿಯೂರು ಕರಗಿ ಹೋಗಿತ್ತು, ಇಲ್ಲಿ ಬೇರೆಯದೆ ಆದ ದೂಳು ತುಂಬಿದ, ಸಾಲು ಸಾಲು ಮಹಡಿಮನೆಗಳ, ಸುತ್ತಲು ಇದ್ದ ಗುಡ್ಡ ಕೆರೆಗಳೆಲ್ಲ ಕರಗಿ ಅಪಾರ್ಟ್ ಮೆಂಟ್ ನಿರ್ಮಿತವಾದ ದೃಷ್ಯಗಳೆ ಕಾಣುತ್ತಿತ್ತು. ಅವನ ಸ್ನೇಹಿತರು ಈಗ ಜೊತೆಯಲ್ಲಿ ಆಡುತ್ತಿದ್ದ ಚಿಕ್ಕ ಮಕ್ಕಳಾಗಿ ಕಾಣದೆ , ಯಾರೋ ಅಪರಿಚಿತರಂತೆ ಕಾಣುತ್ತಿದ್ದರು. ಅವನು ಕಟ್ಟಿಕೊಂಡು ಬಂದ ಕನಸೆಲ್ಲ ಕರಗುತ್ತಿತ್ತು.
ಹೋಟೆಲ್ ಒಳಗೆ ಹೋಗಿ ಕಾಫಿ ಕುಡಿಯುತ್ತ ಕುಳಿತಂತೆ, ವಿಶ್ವ ಕೇಳಿದ.
"ಅದೇನು ಬಸವರಾಜುವಿಗೆ ನಿನ್ನ ಮೇಲೆ ಅಷ್ಟೊಂದು ದ್ವೇಷ"
ಪ್ರಕಾಶ ಸ್ವಲ್ಪಕಾಲ ನಿಶ್ಯಬ್ಧವಾಗಿದ್ದ, ನಂತರ ನಿಟ್ಟುಸಿರು ಬಿಟ್ಟು ಹೇಳಿದ,
"ವಿಶ್ವ ಪ್ರೀತಿಸಲು ಹೇಗೆ ಕಾರಣ ಬೇಡವೋ ಹಾಗೆ ದ್ವೇಷಿಸಲು ಕಾರಣ ಬೇಡ ಅನ್ನಿಸುತ್ತೆ. ಇಬ್ಬರು ಎದುರಾದಾಗ ಪ್ರೀತಿ ಪ್ರಾರಂಬವಾಗುತ್ತೆ. ಹಾಗೆ ಯಾವುದೊ ಸಣ್ಣ ಕಾರಣಕ್ಕೆ ಪ್ರಾರಂಭವಾಗುವ ಭಿನ್ನಾಬಿಪ್ರಾಯ ಕ್ರಮೇಣ ಅಸಹನೆಯಾಗಿ ಬೆಳೆಯುತ್ತೆ. ಒಮ್ಮೆ ಘರ್ಷಣೆಯಾದ ನಂತರ, ಎಲ್ಲಾ ಘಟನೆಗಳನ್ನು ದ್ವೇಷದ ಹಿನ್ನಲೆಯಲ್ಲಿಯೆ ವಿಮರ್ಶಿಸುವದರಿಂದ ದ್ವೇಷ ಮತ್ತೂ ಹೆಚ್ಚಾಗುತ್ತ ಹೋಗುತ್ತೆ, ಎದುರಿಗೆ ಬಂದರೆ ಸಾಕು ಸ್ಪೋಟಿಸುವಂತೆ, ಈಗ ನೋಡಿದೆಯಲ್ಲ ಹಾಗೆ……...
ಹಿಂದೆ ಆಗಾಗ್ಯೆ ಸ್ಥಳೀಯ ಪತ್ರಿಕೆಗಳಲ್ಲಿ ಕೆಲವು ಬರಹ ಬರೆಯುತ್ತಿದ್ದೆ, ಅದು ಪ್ರಕಟವಾಗುತ್ತಿತ್ತು. ಒಮ್ಮೆ ಕೆರೆಯ ಸುತ್ತಮುತ್ತ ಇದ್ದ ಜನರೆಲ್ಲ ಸೇರಿ ಹೇಗೆ ಕೆರೆಯನ್ನೆ ಸ್ವಾಹ ಮಾಡುತ್ತಿದ್ದಾರೆ ಅನ್ನುವದನ್ನು ಗಮನಿಸಿ ಸರ್ಕಾರದ ಗಮನ ಸೆಳೆಯಲು ಚಿತ್ರ ಸಮೇತ ಒಂದು ಬರಹ ಪ್ರಕಟಿಸಿದೆ, ಊರಲ್ಲಿ ಸಾಕಷ್ಟು ಗುಲ್ಲಾಯಿತು. ಕೆಲವರು ಆಕ್ರಮಣಗಳ ವಿರುದ್ದ ಕೋರ್ಟಿನ ಮೆಟ್ಟಿಲು ಹತ್ತಿದರು. ಕೇಸುಗಳು ದಾಖಲೆಯಾದಂತೆ ಕಡೆಗೆ ತಿಳಿದಿದ್ದು ಬಸವರಾಜುವೆ ಅದರ ಹಿಂದಿರುವ ರುವಾರಿ ಎಂದು.
ಅವನು ಸಹ ಕೋರ್ಟಿನಲ್ಲಿ ಸಾಕಷ್ಟು ಹೋರಾಡಿದ ಅವನ ಆಸ್ತಿಗೇನು ಆಗದಂತೆ ಕೋರ್ಟಿನಿಂದ ತಡೆಗಳನ್ನು ತಂದ ಆದರೆ ಅವನ ಮನದಲ್ಲಿ ನಾನು ಬರೆದ ಲೇಖನದಿಂದಲೆ ಇಷ್ಟೆಲ್ಲಾ ಆಯಿತು ಅನ್ನುವ ಕೋಪ ಉಳಿಯಿತು. ನಾನು ನಿಜಕ್ಕೂ ಲೇಖನ ಬರೆಯುವ ಕೆಲಸ ಒಂದು ಬಿಟ್ಟರೆ ಬೇರೆ ಯಾವುದಕ್ಕೂ ತಲೆಹಾಕಿರಲಿಲ್ಲ. ಆದರೆ ಅವನು ಅದನ್ನು ನಂಬುವದಿಲ್ಲ. ಈ ಕಾರಣಕ್ಕೆ ಅವನು ನನ್ನ ಜೊತೆ ಸಂಪೂರ್ಣ ಸಂಬಂಧವನ್ನು ಕಡಿದುಕೊಂಡ. ಹೀಗೆ ನಡೆದಿದೆ ಇಲ್ಲಿಯ ದ್ವೇಷದ ಕತೆ"
ಮುಂದಿನ ಬಾಗದಲ್ಲಿ ಮುಕ್ತಾಯ .