ಕತೆ : ಕೋಡುವಳ್ಳಿಯ ಕರೆ ( ಕೋಡುವಳ್ಳಿಗೆ ಪಯಣ )

ಕತೆ : ಕೋಡುವಳ್ಳಿಯ ಕರೆ ( ಕೋಡುವಳ್ಳಿಗೆ ಪಯಣ )

ಭಾಗ ೧:  ಕೋಡುವಳ್ಳಿಗೆ ಪಯಣ
===================
 
ನಾಲ್ವರು ಗೆಳತಿಯರು ಬೆಂಗಳೂರಿನ ಮೆಜಿಸ್ಟಿಕ್ ಬಸ್ ಸ್ಟಾಪ್ ನಲ್ಲಿ ಸಂತಸದಿಂದ ಹರಟುತ್ತಿದ್ದರು. ರಾತ್ರಿ ಆಗಲೆ ಹತ್ತು ಘಂಟೆ ದಾಟಿದ್ದು, 10:40 ಕ್ಕೆ ಚಿಕ್ಕಮಂಗಳೂರಿಗೆ ಹೊರಡುವ ರಾಜಹಂಸ ಬಸ್ಸಿಗೆ ಕಾಯುತ್ತಿದ್ದರು. ಎಲ್ಲರದು ಹೆಚ್ಚುಕಡಿಮೆ ಒಂದೆ ವಯಸ್ಸು. ಹತ್ತೊಂಬತ್ತು ಇಪ್ಪತ್ತರ ಉತ್ಸಾಹದ ಚಿಲುಮೆಗಳು. ಮೈಸೂರು ರಸ್ತೆಯಲ್ಲಿರುವ ಡಾನ್ ಬಾಸ್ಕೋನಲ್ಲಿ ಇಂಜಿನೀಯರಿಂಗ್ ಕಾಲೇಜಿನ ಐ.ಎಸ್ ವಿಭಾಗದ ಮೂರನೆ ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿದ ಎಲ್ಲರು, ರಜೆ ಇರುವ ಕಾರಣ ಒಂದು ವಾರ ಸಮಯ ಕಳೆಯಲು ಪ್ರಕೃತಿಯ ಮಡಿಲು ಚಿಕ್ಕಮಗಳೂರಿಗೆ ಹೊರಟಿರುವರು.  
 
  ಚಿಕ್ಕಿ , ಚಿಕ್ಕಮಗಳೂರಿನ ಹತ್ತಿರದ ಕೋಡುವಳ್ಳಿಯ ಹುಡುಗಿ ಹೆಸರು ಚಿತ್ರಾ , ಗೆಳತಿಯರು ಆಕೆಯನ್ನು ಚಿಕ್ಕಮಗಳೂರಿನವಳು ಅನ್ನುವ ಕಾರಣಕ್ಕ ಚಿಕ್ಕಿ ಅನ್ನುತ್ತಿದ್ದರು,  ಶಾಲು ಅಂದರೆ ಶಾಲಿನಿ, ಕೀರು ಅಂದ್ರೆ ಕೀರ್ತನ ಮಾತ್ರ ಬೆಂಗಳೂರಿನವರು. ಉಳಿದಂತೆ ಅಚಲ  ಕೇರಳದವಳು. ಅಚಲಳಿಗೆ ಕನ್ನಡ ಸರಿಯಾಗಿ ಬರಲ್ಲ , ಅವಳ ಕನ್ನಡ ಅಂದ್ರೆ ಮೂವರಿಗು ತಮಾಷಿ,  
 
 ರಜಾ ಎನ್ನುವಾಗ ಅಚಲ ಮೊದಲಿಗೆ ಎಲ್ಲರನ್ನು ಕೇರಳಕ್ಕೆ ಕರೆದಳು. ಚಿತ್ರಾ ಚಿಕ್ಕಮಗಳೂರಿನ ಕೋಡುವಳ್ಳಿಗೆ ಎಲ್ಲರು ಬನ್ನಿ ಎಂದಳು. ಶಾಲಿನಿ, ಕೀರ್ತನರಿಗೆ ತಮ್ಮ ಮನೆಯಲ್ಲಿ ಒಪ್ಪಿಸುವುದು ಒಂದು ಸಾಹಸವಾಯಿತು, ಚಿತ್ರಾಳೆ ಇಬ್ಬರ ಮನೆಗೂ ಹೋಗಿ ಅವರವರ ಅಮ್ಮಂದಿರ ಹತ್ತಿರ ಮಾತನಾಡಿ, ತಮ್ಮ ಮನೆಗೆ ಕರೆದೊಯ್ಯುವದಾಗಿ, ನಂತರ ಕ್ಷೇಮವಾಗಿ ಹಿಂದೆ ಕಳಿಸುವುದು ತನ್ನ ಜವಾಬ್ದಾರಿ ಎಂದು ಒಪ್ಪಿಸಿದ್ದಳು. ಅಚಲ,ಹಾಗು ಚಿತ್ರಾ ಹಾಸ್ಟೆಲ್ ವಾಸಿಗಳು. ಅಚಲ ತನ್ನ ಊರು ಎರ್ನಾಕುಲಮಗೆ ಅಪ್ಪನ ಹತ್ತಿರ ಮಾತನಾಡಿ ಒಂದು ವಾರ ಕಳೆದು ಬರುವದಾಗಿ ತಿಳಿಸಿದ್ದಳು. 
 
"ಚಿಕ್ಕಿ , ಬೆಳಗ್ಗೆ ಚಿಕ್ಕಮಗಳೂರಿಗೆ ತಲುಪುವಾಗ ಎಷ್ಟು ಗಂಟೆ ಆಗುತ್ತೆ?" ಎಂದಳು ಕೀರ್ತನ
"ಲೇ ಕೀರು, ಎಷ್ಟಾದರೆ ಏನೆ ನೀನು ಮಲಗಿದರೆ ನಿನಗೆ ಸಮಯವೆ ತಿಳಿಯುವದಿಲ್ಲ, ಬೆಳಗ್ಗೆ ಎಬ್ಬಿಸುತ್ತೇನೆ, ಎದ್ದರೆ ಸರಿ, ಇಲ್ಲದಿದ್ದರೆ ನಿನ್ನ ಬಸ್ಸಿನಲ್ಲಿ ಬಿಟ್ಟು ನಾವು ಚಿಕ್ಕಪ್ಪ ತರುವ ಜೀಪಿನಲ್ಲಿ ಹೊರಟು  ಹೋಗುವೆವು"
ಎಂದಳು ಚಿತ್ರಾ. 
ಕೀರ್ತನನಿಗೆ ರೇಗಿಹೋಯಿತು, ಆದರೇನು ಮರುಕ್ಷಣ ನಕ್ಕಳು. 
 
ಬಸ್ಸು ಹತ್ತು ನಿಮಿಷ ತಡವಾಗಿಯೆ ಹೊರಟಿತು. ಬೆಂಗಳೂರು ದಾಟುವವರೆಗು ಎಲ್ಲರು ಮಾತು ನಡಿಸಿಯೆ ಇದ್ದರು. ಬಸ್ಸಿನಲ್ಲಿ ಅಕ್ಕ ಪಕ್ಕದ ವಯಸ್ಸಾದವರು ಕಡೆಗೊಮ್ಮೆ, ಮಲಗಿರಮ್ಮ, ನಮಗು ನಿದ್ದೆ ಬರುತ್ತಿದೆ ಎಂದು ಗೊಣಗಿದಾಗ ಎಲ್ಲರು ಮಾತು ನಿಲ್ಲಿಸಿ ತಲೆ ಹಿಂದೆ ಒರಗಿಸಿದರು. 
..
ಚಿಕ್ಕಮಗಳೂರಿನ ಬಸ್ ನಿಲ್ದಾಣದಲ್ಲಿ ಬಸ್ಸು ನಿಂತಾಗ ಬೆಳಗಿನ ಐದು ಗಂಟೆ ಸಮಯ. ಎಲ್ಲರು ಅವರವರ ಬ್ಯಾಗ್ ಗಳನ್ನು ಹುಡುಕುತ್ತಿದ್ದರೆ, ಕೀರ್ತನ ಮಾತ್ರ ಸೊಂಪಾದ ನಿದ್ದೆಯಲ್ಲಿದ್ದಳು. ಚಿತ್ರಾ ಅವಳನ್ನು ಅಲುಗಾಡಿಸಿದಳು , ಕಣ್ಣು ಬಿಟ್ಟ ಅವಳು
"ಏ ಆಗಲೆ ನಿಮ್ಮ ಮನೆ ಬಂತಾ" ಎನ್ನುತ್ತ ಎದ್ದಳು.
"ಇಲ್ಲಮ್ಮ ಮನೆ ಇಲ್ಲಿ ಬಂದಿಲ್ಲ, ನಾವೆ ಮನೆಗೆ ಹೋಗಬೇಕು, ಎದ್ದೇಳು" ನಗುತ್ತ ಅಂದಳು ಚಿತ್ರಾ, 
ಎಲ್ಲರಿಗು ನಗು. ಬಸ್ಸಿನಿಂದ ಇಳಿದು,  ಎದುರಿಗೆ ನೋಡುವಾಗ  ಚಿತ್ರಾಳ ಚಿಕ್ಕಪ್ಪ ಬಂದಿದ್ದರು. 
"ಚಿಕ್ಕಪ್ಪ ನೀವೆ ಬಂದ್ರಾ, ಜೀಪ್ ಕಳಿಸಿದ್ದರೆ ಸಾಕಿತ್ತು " ಎಂದಳು, 
ಆತ ನಗುತ್ತ
"ಇನ್ನು ಕತ್ತಲೆ ಅಲ್ಲವೇನಮ್ಮ , ಅಲ್ಲದೆ ಜೀಪ್ ಡ್ರೈವರ್ ಇರಲಿಲ್ಲ, ಹಾಗೆ ನಾನೆ ಬಂದೆ. ಪ್ರಯಾಣ ಹೇಗಿತ್ತು, ನಿದ್ದೆ ಬಂದಿತಾ, ಇಲ್ಲ ಮಾತನಾಡುತ್ತ ಕುಳಿತಿದ್ದೀರ" ಎಂದರು ಆತ, 
"ಬರಿ ನಾಲಕ್ಕು ಐದು ಗಂಟೆ ಪ್ರಯಾಣ ಅಲ್ವ ಚಿಕ್ಕಪ್ಪ, ಹಾಯಾಗಿತ್ತು, ಎಲ್ಲರು ಮಲಗಿದ್ದೇವು, ಇವಳೊಬ್ಬಳಿಗೆ ಮಾತ್ರ ನಿದ್ದೆ ಬರಲಿಲ್ಲ, " ಎನ್ನುತ್ತ ಕೀರ್ತನಳನ್ನು ತೋರಿದಳು ಚಿತ್ರಾ. 
ಕೀರ್ತನ ಮುಖ ಕೋಪದಿಂದ, ಸಂಕೋಚದಿಂದ ಕೆಂಪಾಯಿತು. 
"ಏಕಮ್ಮ ಬಸ್ ಪ್ರಯಾಣ ಒಗ್ಗುವದಿಲ್ಲವ " ಎನ್ನುತ್ತಿರಬೇಕಾದರೆ ಎಲ್ಲರಿಗು ನಗು. ಕೀರ್ತನ ಚಿತ್ರಾಳನ್ನು ಅವರ ಚಿಕ್ಕಪ್ಪನಿಗೆ ಕಾಣದಂತೆ ಸರಿಯಾಗಿ ಜಿಗುಟಿದಳು, ಅವಳು "ಹಾ,,,," ಎಂದಾಗ, 
"ಏಕೆ, ಚಿತ್ರಾ ಏನಾಯಿತು"   ಎಂದು ಚಿಕ್ಕಪ್ಪ ಎಂದರೆ,
"ಏನಿಲ್ಲ ಚಿಕ್ಕಪ್ಪ" ಎಂದು ನಗುತ್ತ ಹೇಳಿದಳು ಚಿತ್ರಾ
 
 ಎಲ್ಲರು ತಮ್ಮ ಬ್ಯಾಗ್ ಗಳನ್ನು ಹಿಡಿದು ಅವರ ಹಿಂದೆ ನಡೆದರು. ಬಸ್ ನಿಲ್ಡಾಣದ ದ್ವಾರದಲ್ಲಿಯೆ ಜೀಪ್ ನಿಂತಿತ್ತು, ಹಿಂದಿನ ಬಾಗಿಲು ತೆಗೆದ ಆತ ಎಲ್ಲರ, ಬ್ಯಾಗಗಳನ್ನು ಪಡೆದು ಅದರಲ್ಲಿ ಹಾಕಿ, ಬಾಗಿಲು ಮುಚ್ಚಿ, ಮುಂದೆ ಬಂದು ಬಾಗಿಲು ತೆಗೆದಾಗ, ಎಲ್ಲರು ಜೀಪಿನ ಒಳ ಸೇರಿದರು, ಆತನು ಡ್ರೈವರ್ ಸೀಟಿನಲ್ಲಿ ಕುಳಿತರು.  
 
ಜೀಪ್ ಹೊರಟಂತೆ ಚಿತ್ರಾಳು
"ಚಿಕ್ಕಪ್ಪ ಎಲ್ಲರನ್ನು ಪರಿಚಯಿಸುವುವೆ ಮರೆತೆ, ಇವಳು ಶಾಲಿನಿ, ನಾವು ಶಾಲು ಅನ್ನುತ್ತೇವೆ, ಇವಳು ಕೀರ್ತನ ನಮಗೆಲ್ಲ ಕೀರು, ಇವಳು ಅಚಲ ಕನ್ನಡ ಸ್ವಲ್ಪ ಅಷ್ಟಕ್ಕಷ್ಟೆ"
ಎನ್ನುತ್ತ ಎಲ್ಲರಿಗು 
"ಇವರು ನಮ್ಮ ಚಿಕ್ಕಪ್ಪ, ನನಗೆ ಚಿಕ್ಕವಯಸಿನಿಂದಲು ಪ್ರೆಂಡ್ " ಅಂದಳು
ಶಾಲಿನಿ , ಒಮ್ಮೆ ಚಿತ್ರಾಳ ಚಿಕ್ಕಪ್ಪನತ್ತ ನೋಡಿದಳು, ಇವರನ್ನು ಮೊದಲೆ ಎಲ್ಲಿಯೊ ನೋಡಿರುವಂತಿದೆ, ಎಲ್ಲಿರಬಹುದು ಅಂದುಕೊಂಡಳು. ಹೊರಗಿನ ನಸುಗತ್ತಲು, ರಸ್ತೆ ಕಾಣದಂತೆ ಮುಸುಕಿದ ಮಂಜು, ಜೀಪಿನ ಬೆಳಕಿನಲ್ಲಿ ಮುಂಬಾಗದ ರಸ್ತೆಯಷ್ಟೆ ಕಾಣುತ್ತಿತ್ತು. 
"ನಿಮ್ಮ ಹಳ್ಳಿ ದೊಡ್ಡದ, ಏನೆಲ್ಲ ಇದೆ? " ಅಚಲ ಕೇಳಿದಳು
"ದೊಡ್ಡದೆಲ್ಲಿ ಬಂತು, ಕೋಡುವಳ್ಳಿ ಎಂದರೆ ಅರವತ್ತು ಎಪ್ಪತ್ತು ಮನೆ ಇದ್ದೀತು, ಮೂರುನೂರ ಜನಸಂಖ್ಯೆ ದಾಟದ ಹಳ್ಳಿ, ಸುತ್ತ ಮುತ್ತ ಕಾಫಿ ತೋಟ, ಬೆಟ್ಟಗುಡ್ಡ , ನಮ್ಮ ಹಳ್ಳಿ ಏಕೆ, ಚಿಕ್ಕಮಗಳೂರಿನ ಎಲ್ಲ ಹಳ್ಳಿಗಳಿರುವುದು ಹಾಗೆ" ಎಂದಳು
"ನನಗಂತು ದೊಡ್ಡ ಪಟ್ಟಣಗಳಿಗಿಂತ ಚಿಕ್ಕ ಹಳ್ಳಿಯೆ ಇಷ್ಟವಮ್ಮ" ಎಂದಳು ಕೀರ್ತನ, 
"ಇಷ್ಟವೇನೊ ಸರಿ, ಆದರೆ ಅಲ್ಲಿ ಗೋಪಾಲನ್ ಮಾಲು, ಪಿಜ್ಜ ಇವೆಲ್ಲ ಇರಲ್ವಲ್ಲ ಏನು ಮಾಡ್ತಿ " ಚಿತ್ರಾ ತುಂಟತನದಿಂದ ಪ್ರಶ್ನಿಸಿದಾಗ ಎಲ್ಲರಲ್ಲು ಮತ್ತೆ ನಗು.
...
 
ಕೋಡುವಳ್ಳಿಯ ಚಿತ್ರಾಳ ಮನೆಯ ಎದುರಿಗೆ ಜೀಪ್ ನಿಂತಾಗ, ಸೂರ್ಯ ಹುಟ್ಟಲು ಸಿದ್ದತೆ ನಡೆಸಿದ್ದ. ಪೂರ್ವದಿಕ್ಕು ತನ್ನ ಕಪ್ಪುಬಣ್ಣವನ್ನು ತೊಡೆಯುತ್ತ, ಕೆಂಪಾಗುತ್ತಿತ್ತು. ಮಲೆನಾಡಿನ ವಿಶಾಲ ಅಂಕಣದ ಮನೆಯನ್ನು ನೋಡುತ್ತ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶಾಲಿನಿ, ಕೀರ್ತನ ದಂಗಾಗಿ ನಿಂತರು. ಸುತ್ತಲ ಹಸಿರಿನ ಸಿರಿ, ಮನೆಯ ಮುಂದಿನ ದೊಡ್ಡ ಅಂಗಳದಲ್ಲಿ ಪೇರಿಸಿದ್ದ ಅಡಕೆಯ ಮೂಟೆಗಳು,  ಮನೆಯ ಮುಂದಿನ ಮರದ ಕಂಬಗಳ ಸಾಲು ಮೇಲೆ ಹೆಂಚಿನ ಮಾಡು ಎಲ್ಲವು ವಿಶೇಷ ಎನಿಸಿದ್ದವು.
 
 ಒಳಗಿನಿಂದ ಮತ್ತೊಬ್ಬ ನಡುವಯಸಿನ ವ್ಯಕ್ತಿ ಬಂದರು, ನೋಡಲು ಚಿತ್ರಾಳ ಚಿಕ್ಕಪ್ಪನಂತಯೆ ಇದ್ದರು, ಅವರನ್ನು ನೋಡುವಾಗಲೆ, 'ನಮ್ಮ ಅಪ್ಪ' ಎಂದು ಎಲ್ಲರಿಗೆ ಹೇಳಿ   ನಡೆದಳು ಚಿತ್ರಾ.  
"ನೀವು ಒಳಗೆ ನಡೆಯರಿ , ನಿಮ್ಮ ಬ್ಯಾಗನು ಕೆಂಚ ತರುತ್ತಾನೆ" ಎಂದರು ಚಿತ್ರಾಳ ಚಿಕ್ಕಪ್ಪ.
 
"ಯಾರೊ ಈ ಕೆಂಚ" ಎಂದುಕೊಳ್ಳುತ್ತ, ಎಲ್ಲರು ನಿದಾನವಾಗಿ ಚಿತ್ರಾಳ ಹಿಂದೆ ನಡೆದರು. ಚಿತ್ರಾ ಅವರ ಅಪ್ಪನ ಜೊತೆ ಮಾತನಾಡುವಾಗಲೆ ಒಳಗಿನಿಂದ ನಡುವಯಸಿನ ಹೆಂಗಸೊಬ್ಬರು ಈಚೆ ಬಂದರು,
ಎಲ್ಲರು ಬನ್ನಿ ಎಂದು ಕರೆಯುತ್ತ ಚಿತ್ರಾ 
 
"ಇವರು ನಮ್ಮ ಅಪ್ಪ,  ಇವರು ನಮ್ಮ ಚಿಕ್ಕಮ್ಮ " ಎನ್ನುತ್ತ ಇಬ್ಬರನ್ನು ಪರಿಚಯಿಸಿ, ಮತ್ತೆ ಅವರಿಗು ತನ್ನ ಗೆಳತಿಯರನ್ನೆಲ್ಲ ಪರಿಚಯಿಸಿದಳು. ನಗುತ್ತ ಮಾತನಾಡುತ್ತ ಎಲ್ಲರು, ಹೊರಗೆ ಇದ್ದ ತೊಟ್ಟಿಯಲ್ಲಿದ್ದ ನೀರಿನಲ್ಲಿ ಕಾಲು ತೊಳೆದು ಒಳಗೆ ಹೋದರು. ಅದು ಹಳೆಯ ಸಂಪ್ರದಾಯ, ಇವರಿಗೆ ಹೊಸದು. 
"ಚಿತ್ರಾ  ಕಾಫಿ ಕೊಡುವೆ, ಪ್ರಯಾಣದ ಸುಸ್ತು ಬೇರೆ, ನಿನ್ನ ಗೆಳತಿಯರೆಲ್ಲರಿಗು ಮಹಡಿಯ ಮೇಲಿನ ಅತಿಥಿಗಳ ರೂಮನ್ನು ಸಿದ್ದಪಡಿಸಿದೆ,  ಸ್ನಾನ ಮಾಡಿ ಸಿದ್ದವಾಗಿ, ಎಲ್ಲರಿಗು ಇಡ್ಲಿ ಮಾಡಿಕೊಡುತ್ತೇನೆ " ಎಂದರು.
 
 ಎಲ್ಲರು ಮುಖತೊಳೆದು ಕಾಫಿ ಕುಡಿದು, ಚಿತ್ರಾಳ ಅಪ್ಪ ಹಾಗು ಚಿಕ್ಕಮ್ಮನೊಡನೆ ಮಾತನಾಡುತ್ತ ಕುಳಿತರು. 
 
 ಚಿತ್ರಾ ತಾಯಿಯಿಲ್ಲದ ಮಗು, ಅವಳು ಎರಡು ವರ್ಷದ ಮಗುವಿರುವಾಗಲೆ ಅವಳ ತಾಯಿ ತೀರಿಹೋಗಿದ್ದರು. ತಂದೆ ಮತ್ತೊಂದು ಮದುವೆಯಾಗಲಿಲ್ಲ, ಹಾಗಾಗಿ ಚಿಕ್ಕಪ್ಪ ಚಿಕ್ಕಮ್ಮನ ಜೊತೆಗೆ ಬೆಳೆದವಳು ಅವಳು. ಚಿಕ್ಕಪ್ಪನ ಇಬ್ಬರು ಮಕ್ಕಳು  ಅಭಿ ಹಾಗು ಅಜಯ್ ಅಂದರು ಅವಳಿಗೆ ಅಷ್ಟೆ ಪ್ರೀತಿ. ಎಲ್ಲರು ಹರಟುತ್ತಿದ್ದರು ಸಹ ಶಾಲಿನಿ ಮಾತ್ರ ತುಟಿ ಬಿಚ್ಚದಂತೆ ಕುಳಿತ್ತಿದ್ದಳು, ಸಾಮಾನ್ಯವಾಗಿಯೆ ಅವಳದು ಮಾತು ಕಡಿಮೆ ಆದರೆ ಈಗ ಅದೇನೊ ಮೌನ.
 
"ಏಕೆ ಸುಮ್ಮನೆ ಕುಳಿತೆ, ನಿನಗೆ ನಮ್ಮ ಮನೆ ಹಿಡಿಸಲಿಲ್ವ" ಚಿತ್ರಾ ಕೇಳಿದಳು, 
"ಅದೆಲ್ಲ ಏನಿಲ್ಲ ಚಿಕ್ಕು,  ಅದೇನು ಒಂದು ತರ ಅನ್ನಿಸುತ್ತಿತ್ತು, ಸುಮ್ಮನೆ ಕುಳಿತೆ, ನೀವು ಮಾತನಾಡುತ್ತಿರಿ, ನಾನು ಮೇಲೆ ಅತಿಥಿಗಳ ಕೊಣೆಯಲ್ಲಿರುತ್ತೇನೆ" ಎಂದವಳೆ , ಒಳಬಾಗದಲ್ಲಿದ್ದ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದಳು.
ಅವಳು ಹೋದ ಹಿಂದೆಯೆ , ಚಿತ್ರಾಳ ಚಿಕ್ಕಮ್ಮ, 
"ನೋಡಮ್ಮ ಮೇಲೆ ಅವಳಿಗೆ ಯಾವ ರೂಮು ಅಂತ ತಿಳಿಯಲ್ಲ, ಇದೋ ಹಳೆಯ ಬಂಗಲೆಯಂತಿದೆ, ಹೊಸಬರಿಗೆ ಕಷ್ಟವೆ , ನಿನ್ನ ಸ್ನೇಹಿತೆಗೆ ರೂಮು ತೋರಿಸು " ಎಂದರು. 
 
ಶಾಲಿನಿಹೋದ ಒಂದೆರಡು ಕ್ಷಣದಲ್ಲಿ , ಚಿತ್ರಾಳು ಹೊರಟು,
"ನಾನು ಮೇಲೆ ಹೋಗ್ತೀನಿ ನೀವು ಬನ್ನಿ, ಎನ್ನುತ್ತ ಹೊರಟಾಗ, ಇಬ್ಬರು ಗೆಳತಿಯರು ಜೊತೆಗೆ ಹೊರಟರು" 
ಮೂವರು ಮಾತನಾಡುತ್ತ ಬೇಗ ಬೇಗಲೆ ಮೇಲೆ ಬಂದರು, ಶಾಲಿನಿ ಎಲ್ಲಿಯು ಕಾಣಲಿಲ್ಲ 
"ಎಲ್ಲಿ ಹೋದಳೆ ಶಾಲು, ಮೊದಲೆ ಅವಳೊಂತರ ಮೊದ್ದು " ಎನ್ನುತ್ತ,  ಮೇಲಿನ ಕಾರಿಡಾರಿನಲ್ಲಿ ಕೊನೆಯವರೆಗು ನಡೆದು, ಬಲಕ್ಕೆ ತಿರುಗಿ
"ಇದೆ ನೋಡಿ ನಿಮ್ಮಗಾಗಿ ಸಿದ್ದವಾದ ರೂಮು" ಎನ್ನುತ್ತ ಬಾಗಿಲು ತೆರೆದರೆ, 
 
ಅಲ್ಲಿ ಶಾಲಿನಿ ಆಗಲೆ ಕುರ್ಚಿಯಲ್ಲಿ ವಿರಾಮಮಾಡುತ್ತ ಕುಳಿತ್ತಿದ್ದಳು, ಒಂದು ಕುರ್ಚಿಯ ಮೇಲೆ ಕುಳಿತು ಮತ್ತೊಂದರ ಮೇಲೆ ಕಾಲಿಟ್ಟು ಕಣ್ಣು ಮುಚ್ಚಿದ್ದಳು. 
 
"ರಾತ್ರಿ ಮಾಡಿದ ನಿದ್ದೆ ಸಾಲದೆ?  ಮತ್ತೆ ಮಲಗಿದ್ದಿ " ಎನ್ನುತ್ತ ಕೀರ್ತನ ಒಳಬಂದಾಗ ಕಣ್ಣು ತೆರೆದಳು ಶಾಲಿನಿ.
"ಅಲ್ವೆ ಶಾಲು , ನಿನಗೆ ಇದೆ ಅತಿಥಿಗಳ ಕೋಣೆ ಎಂದು ಹೇಗೆ ತಿಳಿಯಿತು?, ಸರಿಯಾಗಿ ಇಲ್ಲಿಯೆ ಬಂದು ಸೆಟ್ಲ್ ಆಗಿ ಬಿಟ್ಟಲ್ಲ" ಚಿತ್ರಾ ಕೇಳಿದಳು.
"ಅದೇನೊ ಗೊತ್ತಿಲ್ವೆ, ಸುಮ್ಮನೆ ಹೀಗೆ ಉದ್ದಕ್ಕೆ ಬಂದೆ , ಇಲ್ಲಿ ರೂಮು ಕಾಣಿಸಿತು, ಒಳಗೆ ಬಂದೆ, ಸುಮ್ಮನೆ ಕಣ್ಣು ಮುಚ್ಚಿದ್ದೆ ಅಷ್ಟೆ" ಶಾಲಿನಿ ಅಂದಳು.
 
"ಸರಿ ಈಗ ನಮ್ಮ ಕಾಯಗಳೆನಮ್ಮ, ಚಿಕ್ಕು, ಇಲ್ಲದಿದ್ದರೆ, ಇವರಿಬ್ಬರು ರೂಮಿನಲ್ಲಿ ವಾರ ಪೂರ್ತಿ ನಿದ್ದೆ ಮಾಡುತ್ತಲೆ ಸಮಯ ಕಿಲ್ ಮಾಡ್ತಾರೆ" ಅಚಲ ಕೇಳಿದಳು. 
"ಕಾಯವೆಂದರೆ ಎಂತದೆ" ಚಿತ್ರಾ ಕೇಳಿದಳು
"ಅದೇ ಚಿಕ್ಕು, ಪ್ರೋಗ್ರಾಮ್ ಅಂತಾರಲ್ಲ ಅದು" ಅಚಲ ಎಂದಳು
"ನಿನ್ನ ಕನ್ನಡಕ್ಕಿಷ್ಟು,  ಕಾರ್ಯಕ್ರಮನ? , ನೀನು ಇಂಗ್ಲೀಷ್ ನಲ್ಲಿ ಮಾತನಾಡು, ನಮಗೆ ಅರ್ಥವಾಗುತ್ತೆ,    ಈಗ ಸ್ನಾನ ಮಾಡಿ, ನಂತರ ಮನೆಯ ಪರಿಚಯ, ಆಮೇಲೆ ಚಿಕ್ಕಮ್ಮ ಮಾಡಿರುವ ತಿಂಡಿಗಳ ದ್ವಂಸ, ಮದ್ಯಾನ್ಹ ನಮ್ಮ ಹಳ್ಳಿ ಹಾಗು ಚಿಕ್ಕಮಗಳೂರಿಗೆ ಹೋಗಿ ಬರೋಣ ಇವತ್ತು ಸಾಕು, ಇನ್ನು ಸಮಯವಿದೆಯಲ್ಲ, ನಾಳೆ ಮುಳ್ಳಯ್ಯನ ಗಿರಿ, ಹಾಗು ಬಾಬ ಬುಡನ್ ಮತ್ತು ಸುತ್ತ ಮುತ್ತ ಅಂದುಕೊಂಡಿರುವೆ ನಮ್ಮ ಚಿಕ್ಕಪ್ಪ ಏನು ಹೇಳುವರೊ ನೋಡೋಣ" ಎಂದಳು.
 
"ಚಿಕ್ಕು, ನಿಮ್ಮ ಚಿಕ್ಕಪ್ಪನ?, ನನಗೆ ಏಕೊ ಅವರನ್ನು ನೋಡಿದರೆ ಭಯ ಅನ್ನಿಸುತ್ತೆ, ಅವರು ನಿನಗೆ ಏನು ಅನ್ನಲ್ವ?" ಶಾಲಿನಿ ಕೇಳಿದಳು.
ಎಲ್ಲರು ಶಾಲಿನಿಯನ್ನು ಅಚ್ಚರಿಯಿಂದ ನೋಡಿದರು
 
"ಏ ಶಾಲು ಭಯ ಎಂತದೆ, ಅವರು ತುಂಬಾ ಒಳ್ಳೆಯವರು, ನಾನು ಅಂದರೆ ಅವರಿಗೆ ಪ್ರಾಣ, ಈಗ ಅವರೆ  ನಮ್ಮನ್ನು ಎಲ್ಲ ಕಡೆಗು ಕರೆದು ಕೊಂಡು ಹೋಗುವುದು, ನಮ್ಮ ಅಪ್ಪ ಇನ್ನೇನು ಯಾವುದಕ್ಕು ಬರಲ್ಲ, ಜೊತೆಗೆ ಚಿಕ್ಕಮ್ಮ , ಮಕ್ಕಳು ಬರಬಹುದು, ಮಕ್ಕಳನ್ನು ನೀವು ನೋಡಲಿಲ್ಲ ಅಲ್ವ ಮಲಗಿರಬಹುದು, ಈಗ ಸ್ನಾನ ಮುಗಿಸಿ, ನಂತರ ನೋಡೋಣ" ಎಂದಳು.
 
ಶಾಲಿನಿ  ,  ಅಚಲ ಹಾಗು ಚಿತ್ರಾ ಸ್ನಾನ ಮುಗಿಸಿ ಸಿದ್ದವಾದರೆ, ಕೀರ್ತನ ಸಿದ್ದಳಾಗುತ್ತಿದ್ದಳು, 
"ಇವಳೋಬ್ಬಳು ಬಂದರೆ ಆಯಿತು, ಒಟ್ಟಿಗೆ ಹೋಗಿ ಮನೆಯನ್ನೆಲ್ಲ ನೋಡುವ, ನಂತರ ಚಿಕ್ಕಮ್ಮ ಮಾಡಿರುವ ಇಡ್ಲಿ , ಹಾಗು ಗಸಗಸೆ ಪಾಯಸ  " ಎಂದಳು ಚಿತ್ರಾ.
"ನನಗೆ ಓಡಾಡಲು ಬೇಸರ, ಒಂದು ಕೆಲಸ ಮಾಡು ಚಿಕ್ಕು ನೀವು ಮನೆಯನ್ನೆಲ್ಲ ನೋಡಿ ಬನ್ನಿ, ನಾನು ಇಲ್ಲೆ ಬಿಸಿಲುಮಚ್ಚಿನಲ್ಲಿ ನಿಂತು ಹಿಂದೆ ಕಾಣುವ ಹಸಿರು ಬೆಟ್ಟ ನೋಡುತ್ತ ನಿಂತಿರುತ್ತೇನೆ" ಎನ್ನುತ್ತ  ಶಾಲಿನಿ ಹೊರಗೆ ನಡೆದಳು.
 
ಚಿತ್ರಾ ದಂಗಾಗಿ ನಿಂತಳು.  ನಾನು ಇವರಲ್ಲಿ ಎಂದಿಗು ನಮ್ಮ ಮನೆಯ ಬಗ್ಗೆ  ಹೇಳಿಲ್ಲ, ಆದರೆ ಶಾಲಿನಿ ತನಗೆ ಗೊತ್ತಿರುವಂತೆ ಬಿಸಿಲುಮಚ್ಚಿನ ಕಡೆ ನಡೆದಿದ್ದಾಳೆ, ಅಲ್ಲದೆ ಅಲ್ಲಿ ನಿಂತರೆ ಹಿಂದಿರುವ ಹಸಿರು ಇಳಿಜಾರು ಬೆಟ್ಟ ನೋಟ ಕಾಣುತ್ತದೆ ಎಂದು ಇವಳಿಗೆ ಹೇಗೆ ತಿಳಿಯಿತು, ಇದೇನೊ ವಿಚಿತ್ರವಾಗಿದೆ ಅಂದುಕೊಂಡಳು, ಆದರೆ ತನ್ನ ಸ್ನೇಹಿತೆಯರ ಜೊತೆ ಏನು ಹೇಳಲು ಹೋಗಲಿಲ್ಲ. 
 
ಕೀರ್ತನ ಸಿದ್ದವಾದ ನಂತರ, ಇಬ್ಬರ ಜೊತೆ ಚಿತ್ರಾ ಮನೆಯನ್ನೆಲ್ಲ ಸುತ್ತು ಹೊಡೆದಳು, ಹಳೆಯ ಕಾಲದ ಮನೆ. ಯಾವುದೋ ರಾಜನ ಕಾಲದ ಅರಮನೆಯಂತಿದೆ, ಅಲ್ಲಿನ ಕಂಬಗಳ ಮೇಲಿನ ಕೆತ್ತನೆಗಳು, ವಿಶಾಲವಾದ ಕೋಣೆಗಳು, ಧವಸ ದಾನ್ಯಗಳನ್ನು ಕಾಫಿ, ಅಡಕೆಯನ್ನು  ರಕ್ಷಿಸಿಡಲು ಇರುವ ಜಾಗಗಳು, ಅವನ್ನು ಒಣಗಿಸಲು ಮುಂದೆ ಇರುವ ವಿಶಾಲ ಅಂಗಳ ಎಲ್ಲವನ್ನು ನೋಡುತ್ತ  ಗೆಳತಿಯರು ಮೈಮರೆತರು. 
"ಇದೆಲ್ಲ ಸರಿ , ಶಾಲು ಎಲ್ಲಿ ಹೋದಳೆ ಎಲ್ಲು ಕಾಣಿಸುತ್ತಿಲ್ಲ" ಕೀರ್ತನ ಕೇಳಿದಳು
"ಬಾ ಅಲ್ಲಿಗೆ ಹೋಗೋಣ, ಅವಳೇನು ಬಿಸಲುಮಚ್ಚು ಸೇರಿಬಿಟ್ಟಿದ್ದಾಳೆ ಅನ್ನಿಸುತ್ತೆ, ಅಲ್ಲಿಂದ ಸುತ್ತಮುತ್ತಲ ಬೆಟ್ಟಗುಡ್ಡ ನಮ್ಮ ತೋಟ ಎಲ್ಲವು ಕಾಣುತ್ತದೆ, ನಮ್ಮ ಮನೆ ಸಾಕಷ್ಟು ಎತ್ತರದಲ್ಲಿದೆ ಹಾಗಾಗಿ ಸುತ್ತಲ ದೃಶ್ಯ ಚೆನ್ನಾಗಿರುತ್ತೆ" ಎನ್ನುತ್ತ, ಇಬ್ಬರ ಜೊತೆ ನಡೆಯುತ್ತ, ಪುನಃ ಮನೆಯ ಮೇಲ್ಬಾಗಕ್ಕೆ ಬಂದು, ಎಡಕ್ಕೆ ತಿರುಗುತ್ತ, ಅಲ್ಲಿದ್ದ ಹಳೆಯ ಮರದ ಬಾಗಿಲು ತೆರೆಯುತ್ತ ಬಿಸಿಲು ಮಚ್ಚು ಪ್ರವೇಶಿಸಿದರು.
 
"ಓ ಬ್ಯೂಟಿ, ಮಾರ್ವಲಸ್ , ಓಸಮ್.."  ಕೀರ್ತನ, ಹಾಗು ಅಚಲ ಬಾಯಲಿ ಹೊರಟ ಪದಗಳು.
 
ಇವರು ಸುತ್ತಲು ನೋಡಿದರು, ಎತ್ತ ನೋಡಿದರು, ವನಸಿರಿ, ಹಸಿರ ಹೊದ್ದಿಕೆ, ಬೆಳಗಿನ ಬಿಸಿಲು ಹಾಗು ಮುಚ್ಚಿದ್ದ ಹಿಮ ಎಂತದೊ ಮಾಯಾಲೋಕವನ್ನು ಸೃಷ್ಟಿ ಮಾಡಿತ್ತು. ಬಿಸಿಲುಮುಚ್ಚಿನ ಕೊನೆಯಲ್ಲಿ ಅರ್ದ ಗೋಡೆಯ ಹತ್ತಿರ , ಶಾಲಿನಿ, ಬೆಟ್ಟದ ಕಡೆ ಮುಖ ಮಾಡಿ ನಿಂತಿರುವುದು ಕಾಣಿಸಿತು. ಮೂವರು ಹತ್ತಿರ ಹೋದಂತೆ, ಅವಳು ಹಿಂದೆ ತಿರುಗಿ , ಇವರನ್ನು ನೋಡಿ ನಸುನಕ್ಕಳು. ಅವಳ ಮುಖದಲ್ಲಿ ಎಂತದೋ ಪ್ರಭೆ ಇತ್ತು. 
"ಏನು ಶಾಲು ಒಬ್ಬಳೆ ನಿಂತಿದ್ದಿ ತಪಸ್ಸು ಮಾಡಲೆಂದು ಇಲ್ಲಿ ಬಂದೆಯಾ" ಕೀರ್ತನ ನುಡಿದಾಗ,
"ಅಷ್ಟಲ್ಲದೆ ಎನು ಇದು ನಿಜಕ್ಕು ತಪಸ್ಸು ಮಾಡುವ ಸ್ಥಳದಂತೆ ಇದೆ, ನೋಡು ಆ ಹಸಿರು ಇಳಿಜಾರು   ಬೆಟ್ಟವನ್ನು " ಎಂದಳು ಶಾಲಿನಿ.
"ನೀನು ಕವಿಯಾಗಿಬಿಟ್ಟೆ ಬಿಡು ಶಾಲು"  ಅಚಲ ರೇಗಿಸಿದಳು.
"ಇಲ್ಲವೆ ಇಲ್ಲಿ ಎಲ್ಲವು ಹೀಗೆ ಚೆನ್ನಾಗಿದೆ, ಮಳ್ಳಯ್ಯನ ಗಿರಿ ಶ್ರೇಣಿಯನ್ನು ಹಾಯುವಾಗಲು ಅಷ್ಟೆ ಇಂತದೆ ಹಸಿರು ಬೆಟ್ಟಗಳ ಸಾಲುಗಳಿವೆ" ಶಾಲಿನಿ ಸ್ವಗತದಂತೆ ನುಡಿದಳು.
"ನೀನು ಮೊದಲೆ   ಚಿಕ್ಕಮಗಳೂರಿಗೆ ಬಂದಿದ್ದೆಯ ಶಾಲು, ಎಲ್ಲ ಗೊತ್ತಲ್ಲ" ಅಚ್ಚರಿ ಎಂಬಂತೆ ಕೇಳಿದಳು  ಚಿತ್ರಾ.
"ಇಲ್ಲಮ್ಮ ನಾನು ನಿಮ್ಮ ಊರಿಗೆ ಬರುತ್ತಿರುವುದು ಇದೆ ಮೊದಲು, ಅಲ್ಲದೆ ನಮ್ಮ ಅಪ್ಪ ಅಮ್ಮ ನನ್ನನು  ಈ ರೀತಿ ಹೊರಗೆ ಒಬ್ಬಳನ್ನೆ ಕಳಿಸುತ್ತಿರುವುದು ಇದೆ ಮೊದಲು, ಅದು ನಿನ್ನ ಕೃಪೆಯಿಂದ" ನಗುತ್ತ ಹೇಳಿದಳು ಶಾಲಿನಿ.
 
ಚಿತ್ರಾಳ ಮನದಲ್ಲಿ ಎಂತದೊ ಗೊಂದಲ. ಏಕೊ ಶಾಲಿನಿಯ ನಡೆನುಡಿಗಳು, ನಮ್ಮ ಮನೆಗೆ ಬಂದ ನಂತರ ಬದಲಾಗಿದೆ, ಇದೆ ಮೊದಲು ಬರುತ್ತಿರುವುದು ಅನ್ನುತ್ತಾಳೆ, ಆದರೆ ಮೊದಲೆ ಎಲ್ಲವು ಗೊತ್ತು ಅನ್ನುವ ರೀತಿ ವರ್ತಿಸುತ್ತಿದ್ದಾಳೆ. ಎಲ್ಲಿಯೋ ಏನೊ ತಪ್ಪು ಆಗುತ್ತಿದೆ ಅಂದುಕೊಂಡಳು. ಆದರೆ ಅದನ್ನು ಯಾರಲ್ಲಿಯು ಹೇಳುವುದು ಬೇಡ, ಹೇಗೊ ಒಂದುವಾರ ಎಲ್ಲ ಸಂತಸದಿಂದ ಇದ್ದರೆ ಸರಿ ಎಂದು ಚಿಂತಿಸುತ್ತ,  ಶಾಲಿನಿ ಕಡೆ ನೋಡಿದಳು, ಅವಳು ದೂರದ ಹಸಿರು ಬೆಟ್ಟದ ಮೇಲೆ ಗಮನವಿಟ್ಟಿದ್ದಳು.
 
Rating
No votes yet