ಕತೆ : ಭಾಗಿರಥಿ

Submitted by partha1059 on Mon, 05/27/2013 - 14:41

ಗಂಗೋತ್ರಿಯ ಹೋಟೆಲ್ 'ಮಂದಾಕಿನಿ' ಕೊಠಡಿಯ ಕಿಟಿಕಿಯಿಂದ ಒಮ್ಮೆ ಹೊರಗಡೆ  ನೋಡಿದೆ,  ಹಸಿರು ಬೆಟ್ಟಗಳ ಸಾಲು. ಕೊರೆಯುವ ಚಳಿ. ಬೆಂಗಳೂರಿನಂತಲ್ಲದೆ ಅಲ್ಲಿಯದೇ ಆದ ಸಂಸ್ಕೃತಿ, ಜನಗಳು, ಮನೆಗಳು, ರಸ್ತೆ ಎಲ್ಲವೂ ಹೊಸ ಲೋಕವೊಂದನ್ನು ನನ್ನೊಳಗೆ ಸೃಷ್ಟಿಸಿತ್ತು.

"ದ ಗ್ರೇಟ್ ಹಿಮಾಲಯನ್ ಟ್ರಕ್ಕಿಂಗ್ ಅಸೋಸಿಯೇಷನ್" 

ನನ್ನ ಹಲವು ವರ್ಷಗಳ ಕನಸಿಗೆ ನಿಜ ರೂಪ ಕೊಡಲು ಸಿದ್ದವಾಗಿದ್ದ ಸಂಸ್ಥೆ. 

ಚಿಕ್ಕವಯಸ್ಸಿನಿಂದಲು ಬೆಟ್ಟಗುಡ್ಡ ಏರುವುದರಲ್ಲಿ ಎಂತದೊ ಆಸಕ್ತಿ. ಹೈಸ್ಕೂಲಿನ ಎನ್ ಸಿ ಸಿ ಸಹ ಅದಕ್ಕೆ ಪೂರಕವಾಗಿತ್ತು. ಕಾಲೇಜಿನ ಗೆಳೆಯರ ಜೊತೆ ಸಹ ಇಂತದ್ದೇ ಸುತ್ತಾಟಗಳಿದ್ದವು. ಶಿವಗಂಗೆ, ದೇವರಾಯನ ದುರ್ಗದಂತದ ಬೆಟ್ಟಗಳಲ್ಲಿ ಓಡಾಡಿದ ಅನುಭವ ಬಿಟ್ಟರೆ, ಹೊರಗೆ ಮಲೆನಾಡಿನ ಚಾರಣ, ಕುತೂಹಲಕ್ಕೆ ಎಂಬಂತೆ ಹೋದ ಶಬರಿಮಲೆಯಾತ್ರೆ ಇವೆಲ್ಲ ನನ್ನ ಬೆಟ್ಟ ಹತ್ತುವ ಕುತೂಹಲಕ್ಕೆ ಅಹಾರವಾಗಿದ್ದವು. ಆದರೂ ಮನದ ಮೂಲೆಯಲ್ಲಿ ಒಂದು ಆಸೆ ಸದಾ ಕೊರೆಯುತ್ತ ಇದ್ದದ್ದು, ವಿಶ್ವದಲ್ಲಿ ಹೆಸರು ಮಾಡಿರುವ ಹಿಮಾಲಯದ ಯಾವುದಾದರೂ ಭಾಗದಲ್ಲಿ ಚಾರಣ ಮಾಡಿ ಅನುಭವ ಗಳಿಸಬೇಕು ಎನ್ನುವುದು. ಅದಕ್ಕೆ ಅವಕಾಶ ಕೂಡಿ ಬಂದಿದ್ದು ನಾನು ಕೆಲಸಮಾಡುವ ಕಂಪನಿಯಲ್ಲಿ ನನ್ನ ಜೊತೆಯೆ ಇರುವ ಸುಬ್ರಮಣ್ಯ ಎನ್ನುವವರಿಂದ. ಅವರಿಗೂ ನನ್ನಂತದೆ ಕನಸುಗಳು ಹೀಗಾಗಿ ಜೊತೆಯಾದೆವು. ಒಮ್ಮೆ ಪತ್ರಿಕೆಯಲ್ಲಿ ಕಂಡ ಜಾಹಿರಾತನ್ನು ಓದಿ,ವಿಷಯ ಸಂಗ್ರಹಿಸಿ, ಸಂಪರ್ಕಿಸಿ, ಕಡೆಗೊಮ್ಮೆ ನಮ್ಮ ಕನಸಿಗೆ ಸಾಥ್ ಆದ ಸಂಸ್ಥೆಯೇ "ದ ಗ್ರೇಟ್ ಹಿಮಾಲಯನ್ ಟ್ರಕ್ಕಿಂಗ್ ಅಸೋಸಿಯೇಶನ್" . 

ಪ್ರತಿ ವರ್ಷವೂ  ಬ್ಯಾಚ್ ಗಳಲ್ಲಿ ಟ್ರಕ್ಕಿಂಗ್ ಏರ್ಪಡಿಸುತ್ತಿದ್ದರು. ಅಗತ್ಯವಾದ ದಾಖಲೆಗಳು, ಡಾಕ್ಟರುಗಳ ಶಿಫಾರಸ್ಸು ಎಲ್ಲವನ್ನು ಒಟ್ಟುಗೂಡಿಸಲು ಸಾಕಷ್ಟು ಕಾಲ ಹಿಡಿಯಿತು. ಪ್ರೊಸಿಜರ್ಸ್ ಮುಗಿದು, ಈಗ ಟ್ರಕ್ಕಿಂಗ್ ಗೆ ಸಿದ್ದವಾಗಿ ಬೆಂಗಳೂರಿನಿಂದ ಹೊರಟು ನಾನು ಅಂದರೆ ಗಿರೀಶ್, ನನ್ನ ಗೆಳೆಯ ಸುಬ್ರಮಣ್ಯ ಗಂಗೋತ್ರಿಯ ಹೊಟೆಲ್ 'ಮಂದಾಕಿನಿ'ಯಲ್ಲಿ ತಂಗಿರುವೆವು. 'ಭಾಗೀರಥಿ' ಪರ್ವತವನ್ನು ಏರಲು ಒಪ್ಪಿಗೆ ಪತ್ರವು ಕೈಸೇರಿತು. 

ನಾವು ಪರ್ವತ ಏರಲು ಬೇಕಾದ ಮಾರ್ಗ ಸಿದ್ದವಾಗಿತ್ತು ಅಲ್ಲಿಯ ಹೆಸರುಗಳನ್ನು ಉಚ್ಚರಿಸುವುದೆ ಬೇರೆ ರೀತಿ, ಗಂಗೋತ್ರಿ, ಚೀರ್ಬಾಸ್, ಭೋಜ್ಬಾಸ್, ನಂದನವನ್, ಅಪ್ಪರ್ ನಂದನವನ್, ನಂತರ ಕ್ಯಾಂಪ್-೧,ಕ್ಯಾಂಪ್-೨ , ಎಂದು ಹೆಸರಿಸಲಾಗಿತ್ತು. ಅಲ್ಲಿಗೆ ಬೇಕಾದ  ಸಾಮಾಗ್ರಿಗಳು ಸಿದ್ದವಿದ್ದವು, ಐದು ಸಾವಿರ ಅಡಿ ನಂತರ ಗ್ಯಾಸ್ ಸೀಮಎಣ್ಣೆ ಎಲ್ಲ ಕೆಲಸಮಾಡಲ್ಲ ಆಗ ಬಳಸಲು ಬ್ಯೂಟನ್ ಒಯ್ಯುತ್ತಾರೆ, ನಮ್ಮ ಜೊತೆ ಮೂವರು ಗೈಡ್ ಗಳಿದ್ದರು, ಹದಿನಾರು ಜನರ ಗುಂಪು. ಕಡೆಗೊಮ್ಮೆ ಹತ್ತಲು ಬೇಕಾದ ಅನುಮತಿ ಪತ್ರವು ಸಿಕ್ಕಿತ್ತು. ಗುಂಪಿನಲ್ಲಿದ್ದವರ ಪರಿಚಯವು ಆಗಿತ್ತು. ಲಗೇಜ್ ಗಳನ್ನು ಹೊರಲು  ಸ್ಥಳಿಯರಿರುತ್ತಾರೆ.  ಇಲ್ಲಿಯ ದಿನ ರಾತ್ರಿಗಳು ಸಹ ನಮ್ಮಲ್ಲಿಯಂತೆ ಇರದೆ, ಬೇರೆಯದೇ ನಿಯಮ, ಸೂರ್ಯ ಬೆಳಗ್ಗೆ ನಾಲ್ಕಕ್ಕೆ ಹುಟ್ಟಿದರೂ, ನಮಗೆ ಕಾಣಿಸುವಾಗ ಹತ್ತಾಗುತ್ತಿತ್ತು, ನಂತರ ಸಂಜೆ ನಾಲ್ಕಕ್ಕೆ  ಅವನ ಕೆಲಸ ಮುಗಿಯುತ್ತಿತ್ತು. 

ಮರುದಿನ ಬೆಳಗಿನ ಐದಕ್ಕೆ ಹೊರಟು, ನಡೆಯುತ್ತ , ಭಾರವನ್ನು ಹೊರುತ್ತ ಎಲ್ಲರು ಚೀರ್ಬಾಸ್ ಮಾರ್ಗವಾಗಿ ಸಂಜೆಗೆ   ಭೋಜ್ಬಾಸ್ ತಲುಪಿದೆವು, ಎಂಟು ಡಿಗ್ರಿಗಿಂತ ಕೆಳಗಿನ ಉಷ್ಣಾಂಶ   ಚರ್ಮ, ಮಾಂಸಗಳನ್ನು ಕೊರೆಯುತ್ತಿತ್ತು, ಚಳಿ ಇನ್ನೂ ಜಾಸ್ತಿಯಾದರೆ ಇರುವ ಮೇಣದ ಬತ್ತಿ ಸಹ ಕೆಲಸ ಮಾಡುವದಿಲ್ಲ.  ರಾತ್ರಿ ರೋಟಿ ದಾಲ್ ಊಟ ಮುಗಿಸಿ ಮಲಗಿದಾಗ ಮರುದಿನಕ್ಕೆ ಎಂಥದೋ ಉತ್ಸಾಹ. 

ಮರುದಿನ ಚಳಿ ಮತ್ತೂ ಜಾಸ್ತಿಯಾಗಿತ್ತು, ದಿನಕ್ಕೆರಡು ಸಾರಿ ಹೆಲ್ತ್ ಚೆಕಪ್‍. ರಕ್ತದ ಒತ್ತಡ, ಎಲ್ಲದರ ಪರೀಕ್ಷೆಯಾಗಬೇಕು. ಉಸಿರಾಟ ಸಮರ್ಪಕವಾಗಿದೆಯೆ ಎಂದು ಪರೀಕ್ಷಿಸಿಕೊಳ್ಳಬೇಕು. ಸಂಜೆ ನಂದನವನ್ ಸೇರಿ, ಆರೋಗ್ಯಪರೀಕ್ಷೆ ಊಟಗಳೆಲ್ಲ ಮುಗಿಸಿ ಟೆಂಟ್ ಗಳಲ್ಲಿ ಮಲಗಿದರೆ, ಮೇಲಿನ ಆಕಾಶದಲ್ಲಿನ ನಕ್ಷತ್ರಗಳು ಹುಚ್ಚು ಹಿಡಿಸುವಷ್ಟಿದ್ದವು, ಕವಿಯಲ್ಲದವನು ಕವಿಯಾಗುವನು ಅಲ್ಲಿ.  ಟೆಂಟ್ ಒಳಗೆ ಸೇರಿ ಮಲಗಿದರೆ ಆಗದು ಆಗಾಗ ಹೊರಬರಬೇಕು ಅಲ್ಲಿನ ವಾತವರಣಕ್ಕೆ ಮೈಒಡ್ಡಬೇಕು. ಬೆಳಗ್ಗೆ ಇಬ್ಬರ ಆರೋಗ್ಯ ಕೈಕೊಟ್ಟಿತು. ಹೊಟ್ಟೆತೊಳಸು ವಾಂತಿಯಂತ ಲಕ್ಷಣಗಳು, ಅಲ್ಲಿಂದ ಮೇಲೆ ಅವರು ಬರಲಾರೆವೆಂದರು. 

ಮುಂದಿನದು ಕಠಿಣ ಪಯಣ, ಅಪ್ಪರ್ ನಂದನವನ್ ಸೇರಿ, ಕ್ಯಾಂಪ್ - ೧ , ಕ್ಯಾಂಪ್ -೨ ಗೆ ಬೇಕಾದ ಸಾಮಾಗ್ರಿಯನ್ನೆಲ್ಲ ಸಾಗಿಸಬೇಕು. ೫೯೦೦ ಅಡಿಗಳ ಎತ್ತರದ ಸ್ಥಳದಲ್ಲಿ ಹೆಜ್ಜೆ ಇಡುವುದು ಒಂದು ಸವಾಲು.ಪ್ರತಿಯೊಬ್ಬರೂ ಹನ್ನೆರಡರಿಂದ ಹದಿನೈದು ಕೇಜಿಯಷ್ಟಾದರೂ ಸಾಮಗ್ರಿ ಹೊರುತ್ತ ನಡೆಯಬೇಕು ಮುಂದಿನ ಕ್ಯಾಂಪಿಗೆ, ಜೊತೆಗಿದ್ದ ಸಹಾಯಕರು ಸುಲುಭವಾಗಿಯೆ ೩೦ ಕೇಜಿ ಹೊತ್ತು ನಡೆಯುತ್ತಿದ್ದರು. ಮಧ್ಯಾಹ್ನ ಕಳೆದಿತ್ತು, ಭಾಗೀರಥಿ ಪರ್ವತದ ಸೊಬಗನು ಸವಿಯುತ್ತಲೇ ಹೆಜ್ಜೆ ಹಾಕುತ್ತಿದ್ದೆವು, ಎಲ್ಲರಿಗಿಂತ ಬಹುಷಃ ಹಿಂದೆ ನಾನಿದ್ದೆ, ಈ ಕ್ಯಾಂಪನ್ನು ತಲುಪಿದರೆ ನಾಳೆಯಿಂದ ನಿಜವಾದ ಸವಾಲು, ನನಗೆ ನಾಳಿನ ಕನಸು,  ಹತ್ತು ಜನರ ಗುಂಪಿನಲ್ಲಿ ಮುಂದಿನವರು ಇಟ್ಟ ಹೆಜ್ಜೆಯ ಮೇಲೆ ನಾವು ಸಾಗಬೇಕು, ಒಬ್ಬರಿಗೊಬ್ಬರಿಗೆ ಬೇರೆಯಾಗದಂತೆ ಹಗ್ಗ ಕಟ್ಟಿ ಬ್ಲೇಡಿನಂತಹ ಮಾರ್ಗದಲ್ಲಿ ನಡೆಯಬೇಕು. ಮುಂದಿನ ಕ್ಯಾಂಪ್ ಕಡೆಯದು, ನಾಳೆ ಬೆಳಗ್ಗೆ ಅಲ್ಲಿಂದ ಹೊರಟರೆ ಸಂಜೆಯ ಹೊತ್ತಿಗೆ ನಮ್ಮ ಗುರಿ ತಲುಪುವೆವು, ಭಾಗೀರಥಿಯ ಶೃಂಗವೇರಿ ನಿಂತರೆ ಅಲ್ಲಿಂದ ಏಳು ಸಾವಿರ ಅಡಿ ಎತ್ತರದ ಶಿವಲಿಂಗ ಪರ್ವತ ದರ್ಶನ ಎಲ್ಲ ನೆನೆಯುತ್ತ ಹೊತ್ತಿರುವ ಭಾರ ಹಗುರವಾದಂತೆ ಅನ್ನಿಸಿತು. 

ವಾತವರಣದಲ್ಲಿ ಎಂಥದೊ ಬದಲಾವಣೆ ಕಾಣಿಸುತ್ತಿತ್ತು, ಕುಳಿರ್ಗಾಳಿ ಪ್ರಾರಂಭವಾಯಿತು, ಹಿಮಾಲಯದ ಶೀತಲ ಮಾರುತ ಮುಖವನ್ನು ರಾಚುತ್ತಿತ್ತು. ಏಕೋ ಬರುಬರುತ್ತ ನಾವು ಕ್ಯಾಂಪ್ ತಲುಪುವುದು ಕಷ್ಟಸಾಧ್ಯವೆನಿಸತೊಡಗಿತು, ನಾನು ಕಡೆಯಲ್ಲಿದ್ದೆ, ನನ್ನ ಮುಂದೆ ಸುಬ್ರಮಣ್ಯ, ನಂತರ ಒಬ್ಬ ಗೈಡ್ ಇದ್ದ, ಅವನಿಗಿಂತ ಮೇಲೆ ನಮ್ಮ ಭಾರಹೊರುವ ಸಹಾಯಕ. ಹಾಗೆ ಮೇಲೆ ಸುಮಾರು ಹತ್ತು ಪರ್ವತಾರೋಹಿ ಸದಸ್ಯರು, ಒಟ್ಟು ಹದಿನಾರು ಜನ ಒಬ್ಬರ ಹಿಂದೆ ಒಬ್ಬರು ಇರುವೆಯಂತೆ ನಡೆಯುತ್ತಿದ್ದೆವು. ಸ್ವಲ್ಪ ಮೇಲೆ ಮುಖ ಮಾಡಿ ನೋಡಿದೆ, ಭಾಗೀರಥಿಯ ಪರ್ವತ ತುದಿಯಿಂದ ಬೆಳ್ಳಿಯ ಅಲೆಯಂತೆ ನುಗ್ಗಿ ಬರುತ್ತಿರುವ ಹಿಮ ಕಾಣಿಸಿತು. ನನ್ನ ಮುಂದಿದ್ದ ಸುಬ್ರಮಣ್ಯ ಹಾಗೂ ಇತರರು ಗಾಬರಿಯಾಗಿರುವಂತೆ ಕಂಡರು. ನಮಗೆ ತಪ್ಪಿಸಿಕೊಳ್ಳುವ ಯಾವ ಮಾರ್ಗವೂ ಇಲ್ಲ. ನಾನು ಊಹೆ ಮಾಡಿದ ವೇಗಕ್ಕಿಂತ ಅದೆಷ್ಟೊಪಟ್ಟು ವೇಗದಲ್ಲಿ ಹಿಮಪಾತ ನಮ್ಮನ್ನು ಅಪ್ಪಳಿಸಿತು. ಯಾರು ಏನಾದರೋ ತಿಳಿಯುತ್ತಿಲ್ಲ, ನಾನು ಹಿಡಿತ ತಪ್ಪಿ ಹಿಮ್ಮುಖವಾಗಿ ಬಿದ್ದೆ, ನಂತರ ಏಳಲು ಹೋದವನು ಕೆಳಗೆ ಉರುಳಲು ಪ್ರಾರಂಬಿಸಿದೆ. ಎಲ್ಲರ ಚೀರಾಟ ಕೇಳಿಸುತ್ತಿತ್ತು. ಬೆನ್ನಿಗಿದ್ದ ಬ್ಯಾಗ್ ಬೇರ್ಪಟ್ಟಿತ್ತು, ಕೈ ಕಾಲುಗಳೆಲ್ಲ ಹಿಮದ ಕಲ್ಲುಗಳಿಗೆ ತಗಲುತ್ತಿರುವಂತೆ, ಉರುಳುತ್ತಿದ್ದ ನಾನು ಈಗ ಇದ್ದಕ್ಕಿದಂತೆ ಗಾಳಿಯಲ್ಲಿ ಹಾರುತ್ತಿರುವಂತೆ ಅನ್ನಿಸುತ್ತಿತ್ತು, ಕಣ್ಣಿಗೆ ಬಿಳಿ ಬಿಳಿ ಬಿಳಿ ಅನ್ನುವ ಬಿಳುಪಿನ ಹೊರತು ಮತ್ತೇನೊ ಕಾಣದು, ಬಹುಶಃ ನಾನು ಪಕ್ಕದ ಕಣಿವೆಗೆ ಜಾರಿದೆ ಅನ್ನಿಸುತ್ತೆ, ಗಾಳಿಯಲ್ಲಿ   ಚಲಿಸುತ್ತಿರುವೆ, ಯಾವ ಕ್ಷಣದಲ್ಲಿ ನೆಲಕ್ಕೆ ಅಪ್ಪಳಿಸುವೆ ಗೊತ್ತಿಲ್ಲ, ಇದು ನನ್ನ ಜೀವನದ ಕಡೆಯ ಕ್ಷಣ ಅಂದುಕೊಳ್ಳುತ್ತಿರುವಂತೆ,  ಯಾವುದೋ ವಸ್ತುವಿನ ಮೇಲೆ ಬಿದ್ದೆ ಮತ್ತೆ ಉರುಳುತ್ತ ಇರುವಂತೆ ನನ್ನ ಜ್ಞಾನ ತಪ್ಪಿತು. 

...........

ನಿಧಾನವಾಗಿ ಕಣ್ತೆರೆದೆ. ಮೊದಲಿಗೆ ಎಲ್ಲಿರುವೆ ಎನ್ನುವ ಗುರುತು ಹತ್ತುತ್ತಿಲ್ಲ. ಕೈ ಊರುತ್ತ ಎದ್ದು ಕುಳಿತೆ. ಸುತ್ತಲೂ ಗಮನಿಸಿದೆ, ಎತ್ತ ನೋಡಿದರೂ ಯಾವ ದಿಕ್ಕಿಗೂ ಬಿಳಿ ಮಂಜಿನ ಹಾಸು.ಕಣ್ಣಿಗೆ ಬಿಳಿ ಬಣ್ಣದ ಹೊರತಾಗಿ ಯಾವುದೆ ಬಣ್ಣವಿಲ್ಲ. ಕಣ್ಣು ಮಂಜು ಮಂಜಾಯಿತು. ತಲೆ ಮೇಲೆತ್ತಿ ನೋಡಿದರೆ ಸ್ವಲ್ಪ ಕಪ್ಪು ಬಣ್ಣಕ್ಕೆ ಕಾಣುತ್ತಿದ್ದ ಆಕಾಶ, ಅಲ್ಲಲ್ಲಿ ಅಸ್ವಸ್ಟವಾಗಿದ್ದ ನಕ್ಷತ್ರಗಳು. ಸುತ್ತಲು ಬೆಳಕು ಹರಡಿದ್ದು, ಸೂರ್ಯ ಎಲ್ಲಿದ್ದಾನೆ ಎಂದು ಮಾತ್ರ ತಿಳಿಯುತ್ತಿಲ್ಲ. ಅದು ಬೆಳಗೊ ಸಂಜೆಯೊ ಮಧ್ಯಾಹ್ನವೋ ಏನೂ ಅರ್ಥವಾಗುತ್ತಿಲ್ಲ. ಕೈ ಊರಿ ಎದ್ದು ಕುಳಿತಿದ್ದು ಎಡಗೈನ ಮುಂಗೈನಲ್ಲಿ ನೋವು ಕಾಣಿಸಿತು. ಸ್ವಲ್ಪ ಹೊತ್ತು ಹಾಗೆ ಕುಳಿತಿದ್ದು ಮನದಲ್ಲಿ ದೇಹದಲ್ಲಿ ಶಕ್ತಿಯನ್ನು ತುಂಬಿಕೊಂಡೆ. ನಿಧಾನವಾಗಿ ಎದ್ದು ನಿಂತೆ. 

ಒಮ್ಮೆ ಸುತ್ತಲೂ ನೋಡಿದೆ, ಹತ್ತಾರು ಮೈಲು ಸುತ್ತಳತೆ ಕಾಣಿಸುತ್ತಿದೆಯಾದರು ಅಲ್ಲಲ್ಲಿ ಕಲ್ಲನ್ನು ಬಿಟ್ಟು ಬೇರೇನೂ ಕಾಣಿಸದು, ಮೇಲೆ ಆಕಾಶ. ನೀರವ ನಿಶ್ಯಬ್ದ ಮನಸನ್ನು ತುಂಬುತ್ತಿತ್ತು. ನಾನು ಮಲಗಿದ ಜಾಗದ ಕಡೆ ನೋಡಿದೆ. ವಿಚಿತ್ರ ಅನ್ನಿಸಿತು. ರಸ್ತೆಯಲ್ಲಿ ಅಪಘಾತವಾಗಿ ಯಾರಾದರು ಬಿದ್ದಲ್ಲಿ, ದೇಹ ನೆಲದಮೇಲೆ ಬಿದ್ದಿರುವ ಆಕಾರದಲ್ಲಿ ಸೀಮೆಸುಣ್ಣದಲ್ಲಿ ಗೆರೆ ಹಾಕಿರುವದನ್ನು ಕಾಣಬಹುದು, ಆದರೆ ಇಲ್ಲಿ ನಾನು ಮಲಗಿದ್ದ ಜಾಗದಲ್ಲಿ ನನ್ನದೆ ಆಕಾರದ ಒಂದು ಹಳ್ಳ ಏರ್ಪಟ್ಟಿದ್ದು ನೋಡಲು ವಿಚಿತ್ರವೆನಿಸಿತು, ನಾನು ಮಲಗಿದ್ದಂತೆ ಕಾಲು ಕೈಗಳು, ದೇಹ ತಲೆ ಎಲ್ಲವೂ ಹಿಮದ ರಾಶಿಯಲ್ಲಿ ಕೊರೆದಂತೆ ಕಾಣಿಸಿತು. ನಾನು ಅಲ್ಲಿ ಎಷ್ಟು ಹೊತ್ತಿನಿಂದ ಮಲಗಿರುವೆ ಗೊತ್ತಾಗುತ್ತಿಲ್ಲ. ಆಗ ನೆನಪಿಸಿಕೊಂಡೆ ನಾನು ಗೆಳೆಯರೊಡನೆ ಭಾಗೀರಥಿ ಪರ್ವತ ಹತ್ತುತ್ತ ಇದ್ದದ್ದು, ಕಡೆಯ ಹಂತದಲ್ಲಿ ಹಿಮಪಾತಕ್ಕೆ ಸಿಕ್ಕಿ ನಾನು ಹಿಡಿತ ತಪ್ಪಿ ಕೆಳಗೆ ಉರುಳಿದ್ದೆ. ಈಗ ಇರುವ ಜಾಗ ಯಾವುದು ತಿಳಿಯುತ್ತಿಲ್ಲ, ನಾನಿನ್ನು ಭಾಗೀರಥಿಯ ಮೇಲೆಯೆ ಇರುವೆನೊ ಅಥವ ಕಂದರಕ್ಕೆ ಜಾರಿ ಮತ್ಯಾವುದೊ ಪರ್ವತದ ಮೇಲೆ ಬಿದ್ದಿರುವೆನೊ. ಕಡೆಗೆ ಯಾವ ದಿಕ್ಕಿನಿಂದ ಗಾಳಿಯಲ್ಲಿ ಹಾರಿಬಂದು ಅಥವ ಉರುಳಿ ಅಲ್ಲಿ ಬಿದ್ದೆ ಗೊತ್ತಾಗುತ್ತಿಲ್ಲ. 

ಮುಂದಿನ ನನ್ನ ನಡೆಯೇನು ನಿರ್ದರಿಸಲಾಗುತ್ತಿಲ್ಲ, ಅಲ್ಲಿಂದ ಹೊರಡಬೇಕು, ಮೊದಲ ಸಮಸ್ಯೆ ಇದ್ದದ್ದು, ದಿಕ್ಕಿನದು, ನನ್ನ ಬಳಿ ದಿಕ್ಕನ್ನು ಅರಿಯುವ ಯಾವುದೆ ದಿಕ್ಸೂಚಿಯಂತಹ ವಸ್ತುವಿಲ್ಲ, ಸೂರ್ಯನ ಬೆಳಕು ಏಕತ್ರವಾಗಿ ಹರಡಿದ್ದು, ಬಿಳಿಯ ಬೆಳಕಿತ್ತೆ  ವಿನಃ ಅದು ಯಾವ ದಿಕ್ಕಿನಿಂದ ಬೀಳುತ್ತಿದೆ ಎಂದು ತಿಳಿಯಲಾಗುತ್ತಿಲ್ಲ. ಎಲ್ಲ ದಿಕ್ಕುಗಳು ಏಕತ್ರವಾಗಿ, ಒಂದೆ ದಿಕ್ಕಾಗಿದೆ .  ಒಮ್ಮೆ ದಿಕ್ಕು ತಿಳಿಯಿತು ಅಂದರು ಸಹ ಯಾವುದೆ ಉಪಯೋಗವಿಲ್ಲ, ಏಕೆಂದರೆ ನಾನು ಇಲ್ಲಿಗೆ ಯಾವ ದಿಕ್ಕಿನಿಂದ ಬಂದು ಬಿದ್ದೆ, ಅಥವ ಈಗ ಯಾವ ದಿಕ್ಕಿಗೆ ಚಲಿಸಿದರೆ ಎಲ್ಲರನ್ನು ಸೇರುವೆ ಅನ್ನುವುದು ನನಗೆ ತಿಳಿಯುತ್ತಿಲ್ಲ. ಕೆಳಗೆ  ಹರಡಿ ನಿಂತ ಅನಂತ ವೆನಿಸುವ ಬಿಳಿಯ ಹಿಮದಿಂದ ತುಂಬಿದ ಭೂಮಿ, ಮೇಲೆ  ಕವಿಚಿದಂತೆ ಹರಡಿನಿಂತ ನೀಲ ಗಗನ, ಎಲ್ಲಡೆಯು ತುಂಬಿ ನಿಂತ, ಬೆಳದಿಂಗಳಿನಂತಹ ಸಣ್ಣ ಬೆಳಕು, ನೀರವ ನಿಶ್ಯಬ್ದದ ನಡುವೆ ಏಕಾಂಗಿಯಾಗಿ ನಿಂತ ನಾನು. 

ನಾನು ಇಲ್ಲಿ ಬಂದು ಬಿದ್ದು ಎಷ್ಟು ಕಾಲವಾಗಿರಬಹುದು ಗೊತ್ತಾಗಲಿಲ್ಲ, ಜ್ಞಾನತಪ್ಪಿದ ಕಾರಣದಿಂದ ಸಮಯದ ಪ್ರಜ್ಞೆ ಹೊರಟುಹೋಗಿದೆ, ನನ್ನಲ್ಲಿದ್ದ ಬ್ಯಾಗ್ ಕೈ ತಪ್ಪಿದ್ದರಿಂದ ಯಾವುದೇ ವಸ್ತುವಿಲ್ಲ, ಕೈ ಎಲ್ಲಿಯೊ ತಗಲಿತೇನೊ ಕೈ ಗಡಿಯಾರವು ಇಲ್ಲ ಬಿದ್ದು ಹೋಗಿದೆ. ನಾನು ಇಲ್ಲಿ ಬಂದಿದ್ದು, ಇಂದೊ ಅಥವ ನಿನ್ನೆಯೊ, ಆದರೆ ನಿಲ್ಲಲು ಆಗದಷ್ಟು ಅಪಾರ ಸುಸ್ತು ಕಾಡುತಿತ್ತು, ಹಾಗಾಗಿ ಈಗ ನಡೆಯುವುದು ದೂರ ಉಳಿಯಿತು, ಹೊಟ್ಟೆಯ ಒಳಗೆಲ್ಲೊ ಹಸಿವಿನ ಸಂಕಟ, ಅದನ್ನು ಮೀರಿ ಗಂಟಲಲ್ಲಿ ತುಂಬಿದ ನೀರಿನ ದಾಹ ಎಲ್ಲವು ಕಾಡುತ್ತಿತ್ತು. ನಿಧಾನವಾಗಿ ಹೆಜ್ಜೆಗಳನ್ನು ಇರಿಸಿದೆ,  ಬಹುಶಃ ರಾತ್ರಿಯಾಗುತ್ತಿದೆ ಅನ್ನಿಸುತ್ತಿದೆ. ಅಲ್ಲಿಂದ ನಡೆಯುತ್ತ ಹೊರಟೆ. ಆದರೆ ಹೆಚ್ಚು ದೂರ ನಡೆಯುವ ಶಕ್ತಿ ಇರಲಿಲ್ಲ, ಕತ್ತಲಲ್ಲಿ ಇರಲು ಹಿಮ ಹಾಗು ಗಾಳಿಯಿಂದ ತಪ್ಪಿಸಿಕೊಳ್ಳಲು ಯಾವುದಾದರು ಜಾಗ ತಕ್ಷಣಕ್ಕೆ ಬೇಕಾಗಿತ್ತು.  ಸಾಮಾನ್ಯವಾಗಿ ಬೆಟ್ಟಗಳಲ್ಲಿ ಬಂಡೆಗಳ ಅಡಿಯಲ್ಲಿ ಇರಲು ಗವಿಯಂತಹ ಜಾಗವಿರುತ್ತದೆ   ಅನ್ನುವುದು ಸಾಮಾನ್ಯ ಅನುಭವ.

ಸುಮಾರು ಅರ್ದ ಕಿ.ಮಿ ಅಷ್ಟೆ ನಡೆಯಲು ಸಾದ್ಯವಾಯಿತು.  ಎದುರಿನಲ್ಲಿ ದೊಡ್ಡದೊಂದು ಬಂಡೆ ಮೇಲೆದ್ದು ಚಾಚಿತ್ತು, ಅದರ ಹತ್ತಿರ ಹೋಗಿ ಪರಿಶೀಲಿಸಿದೆ, ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ, ಬಂಡೆಯ ಒಂದು ಬಾಗದಲ್ಲಿ,ಕೆಳಗೆ ಗುಹೆಯಂತಹ ಜಾಗವಿದ್ದು, ಒಬ್ಬ ವ್ಯಕ್ತಿ ಆರಾಮವಾಗಿ ತಲೆಬಗ್ಗಿಸಿ ಹೋಗಬಹುದಿತ್ತು,  ನನಗೆ ಮತ್ತೊಂದು ಯೋಚನೆ ಕಾಡಿತು, ಕತ್ತಲಿನಲ್ಲಿ ಒಳಗಿ ಹೋದರೆ, ಅಲ್ಲಿ ಇದ್ದರೆ ಯಾವುದಾದರು ಪ್ರಾಣಿಗಳಿದ್ದರೆ ಎಂದು. ಆದರೆ ಹಿಮಾಲಯದಲ್ಲಿ ಬೆಟ್ಟಗಳಲ್ಲಿ ಗುಹೆಯಲ್ಲಿ ಇರಬಹುದಾದ ಪ್ರಾಣಿಗಳ ಬಗ್ಗೆ ನನಗೆ ಯಾವುದೆ ಮಾಹಿತಿ ಇಲ್ಲ, ಆದರೆ ಅಲ್ಲಿ ನಾನಿದ್ದ ಎರಡು ಗಂಟೆಗಳಷ್ಟು ಅವಧಿಯಲ್ಲಿ ನನ್ನ ಹೊರತು ಯಾವುದೆ ಜೀವವನ್ನು ಗಮನಿಸಲಿಲ್ಲ, ಹಾಗಾಗಿ ಗುಹೆಯ ಮುಂಬಾಗದಲ್ಲಿ ರಾತ್ರಿ ಕಳೆಯುವದಾಗಿ ನಿರ್ಧರಿಸಿದೆ, ಚಳಿ ದೇಹವನ್ನೆಲ್ಲ ತುಂಬುತ್ತಿತ್ತು, ನನ್ನ ಬೆನ್ನಿಗಿದ್ದ ಹರಿದು ಹೋದ ಬ್ಯಾಗನ್ನು ಬಿಚ್ಚಿ ಮುಖವನ್ನಾದರೂ ಮುಚ್ಚುವಂತೆ ಮಾಡಿಕೊಂಡೆ, ರಾತ್ರಿ ಅಲ್ಲಿ ಇರಲೇಬೇಕಾದ ಅನಿವಾರ್ಯತೆ. 

ಹಿಮಾಲಯದ ಉನ್ನತ ಶಿಖರಗಳ ನಡುವೆ ಎಲ್ಲಿ ಎಂದು ಗೊತ್ತಿಲ್ಲದ, ಬೆಟ್ಟದ ಶೃಂಗ, ಮುಂದೆ ಕಾಣುವಂತೆ ನೆಲವನ್ನೆಲ್ಲ ಆವರಿಸಿದ ಬಿಳಿಯ ಹಿಮದ ಪದರ, ಎಲ್ಲವನ್ನು ಮುಚ್ಚಿಬಿಟ್ಟು ಕತ್ತಲು ಆ ಕತ್ತಲನ್ನು ಓಡಿಸುತ್ತ ಇದ್ದದ್ದು   ಮೇಲೆ ಶುಭ್ರ ಆಕಾಶ, ಅಸಂಖ್ಯಾತ ನಕ್ಷತ್ರ. ವಿಶಾಲ ಪ್ರಪಂಚದಲ್ಲಿ ನಾನೊಬ್ಬನೇ, ನಾನೊಬ್ಬನೇ, ರಾತ್ರಿ ಯಾವಾಗ ಆಯಿತು, ಇಂದು ಯಾವ ದಿನವೋ ಏನೂ ತಿಳಿಯದು, ರಾತ್ರೆ ಎಷ್ಟೋ ಹೊತ್ತಾದ ಮೇಲೆ, ಚಂದ್ರ ನಿಧಾನವಾಗಿ ಮೇಲೆ ಬಂದು ಆಕಾಶವನ್ನೆಲ್ಲ ತುಂಬಿಕೊಂಡ, ನಾನು ಎಂದೂ ಅನುಭವಿಸಿರದ, ಅನುಭವಿಸಲು ಸಿಗದ, ಕವಿ ಕಲ್ಪನೆಗೆ ಸಿಗದ, ದೃಶ್ಯ ಕಣ್ಣ ತುಂಬುತ್ತಿತ್ತು, ಚಂದ್ರನ ಬೆಳದಿಂಗಳು ಹರಡಿದ ಹಿಮದ ಮೇಲೆ ಬಿದ್ದು, ಎಲ್ಲಡೆ ಹಾಲು ಚೆಲ್ಲಾಡಿದಂತಹ ವಾತವರಣ. ಆಕಾಶವನ್ನೆಲ್ಲ ತು೦ಬಿದ ಚಂದ್ರನ ಬೆಳಕು,  ನನ್ನಲ್ಲಿ ಎಂಥದೊ ಅಪೂರ್ವವಾದ ಅನುಭವ ನೀಡುತ್ತಿತ್ತು. ಯಾವುದೊ ಉನ್ನತ ಭಾವ ನನ್ನಲ್ಲಿ ತುಂಬುತ್ತ, ನನ್ನಲ್ಲಿ ತುಂಬಿ ತುಳುಕುತ್ತಿದ್ದ ಹಸಿವು ನೀರಡಿಕೆ ಎಲ್ಲವೂ ನನ್ನೊಳಗೆ ಬತ್ತಿ ಹೋಯಿತು, ಯಾವಾಗಲೋ ನಿದ್ರೆ ನನ್ನ ಕಣ್ಣನ್ನು ತುಂಬಿಕೊಂಡಿತು.  ದೇಹಭಾದೆಗಳನ್ನೆಲ್ಲ ಮೀರಿ ಸುಖದ ನಿದ್ರೆಗೆ ಒಳಗಾಯಿತು ದೇಹ. 

 .....

ಮುಖದ ಮೇಲೆ ಸೂರ್ಯನ ಬಿಸಿಲ ಎಳೆಗಳು ಬಿದ್ದು ಎಚ್ಚರವಾಯಿತು, ಹೆಚ್ಚುಕಡಿಮೆ ಬೆಳಗಿನ ಹತ್ತು ಗಂಟೆ ಆಗಿದೆ ಅನ್ನಿಸಿತು. ನಿಧಾನವಾಗಿ ಹೊರಬಂದೆ, ಚಳಿಯ ಕೊರೆತವನ್ನು ಸೂರ್ಯನ ಬಿಸಿಲು ತಗ್ಗಿಸಿತ್ತು, ಆದರೂ ರಾತ್ರಿಯೆಲ್ಲ ಚಳಿಯಲ್ಲಿ ಮಲಗಿದ್ದು, ಕೈಕಾಲು ಬೆನ್ನು ಎಲ್ಲ ಮರಗಟ್ಟಿದಂತೆ , ರಕ್ತಸಂಚಾರವೆ ಇಲ್ಲದಂತಹ ಅನುಭವ. ಸೂರ್ಯನಿಗೆ ಬೆನ್ನುಮಾಡಿ ನಾನು ಮಲಗಿದ್ದ ಗುಹೆಯನ್ನು ನೋಡುತ್ತ ಹತ್ತು ನಿಮಿಷ ನಿಂತೆ, ಬೆನ್ನ ಮೇಲೆ ಬಿಸಿಲು ಬಿದ್ದ ಪರಿಣಾಮ ದೇಹವೆಲ್ಲ ಬಿಸಿಯಾಗಿತ್ತು, ಕೈಕಾಲುಗಳಲ್ಲಿ ರಕ್ತಸಂಚಾರವಾಗಿತ್ತು, ಆದರೆ ಹಾಗೆ ಹೆಚ್ಚು ಹೊತ್ತು ನಿಲ್ಲುವಂತಿರಲಿಲ್ಲ. ಈಗ ನಾನು ರಾತ್ರಿ ಇದ್ದ ಗುಹೆಯನ್ನು ಹೊರಗಿನಿಂದ ಗಮನಿಸಿದೆ, ಹೊರಗಿನ ಬೆಳಕು ಒಳಗೆ ಬೀಳುತ್ತಿತ್ತು. ಒಳಗೆ ಏನಿರಬಹುದು ಹೋಗಿ ನೋಡಬಹುದು ಅನ್ನಿಸಿತು, ರಾತ್ರಿಯೆಲ್ಲ ಅಲ್ಲಿಯೇ ಮಲಗಿರುವುದರಿಂದ, ಯಾವುದೇ ಪ್ರಾಣಿಯ ದರ್ಶನವಾಗದೆ ಇರುವುದು ಒಳಗೆ ಬಹುಷಃ ಯಾವ ಪ್ರಾಣಿಯು ಇಲ್ಲ ಅನ್ನಿಸುತ್ತೆ. ಅಲ್ಲದೆ ನಿನ್ನೆಯೋ, ಮೊನ್ನೆಯೋ ನಾನು ಇಲ್ಲಿ ಬಂದು ನನಗೆ ಎಚ್ಚರ ಬಂದ ಗಳಿಗೆಯಿಂದ ಯಾವುದೇ ಪ್ರಾಣಿಯನ್ನು ನೋಡಿಲ್ಲ ಅಂತ ನೆನಯುವಾಗ, ಬಹುಶಃ ಸುತ್ತ ಮುತ್ತ ಯಾವುದೇ ಪ್ರಾಣಿ ಇರಲಾರದು ಅನ್ನಿಸುತ್ತೆ, ಎನ್ನುವ ತರ್ಕದೊಂದಿಗೆ ಒಳಹೋಗಲು ನಿರ್ಧರಿಸಿದೆ. 

ಒಳಹೋಗುವ ನಿರ್ಧಾರದೊಡನೆ, ಆ ಬಂಡೆಯ ಸುತ್ತ ಮುತ್ತ ಕಣ್ಣು ಆಡಿಸಿದೆ, ಬಂಡೆಯ ಎಡಬದಿಯಲ್ಲಿ, ಸ್ವಲ್ಪ ಹಸಿರುಬಣ್ಣದ ಪಾಚಿಯಂತೆ ಕಾಣಿಸಿತು, ಹತ್ತಿರ ಹೋಗಿ ನೋಡಿದೆ, ಅದು ಒಂದು ನೀರಿನ ಹರಿವು !. ಹೌದು ಸಣ್ಣ ನೀರಿನ ಝರಿಯೊಂದು, ಬಂಡೆಯ ಮೇಲ್ಬಾಗದಿಂದ ಜಿನುಗಿ ಕೆಳಗೆ ಸಣ್ಣ ದಾರದಂತೆ ಹರಿಯುತ್ತಿತ್ತು, ಆಶ್ಚರ್ಯವೆಂದರೆ, ನೆಲದ ಮೇಲೆ ಬಿದ್ದ ನೀರು ಮುಂದೆ ಹರಿಯದೆ, ಬಂಡೆಯ ಮುಂದೆ ಬಿದ್ದಿದ್ದ ಮತ್ತೊಂದು ಸಣ್ಣ ಬಂಡೆಯ ಅಡಿಯಲ್ಲಿದ್ದ ಜಾಗದಲ್ಲಿ ಒಳಗೆ ಹೋಗಿ ಕಣ್ಮರೆಯಾಗುತ್ತಿತ್ತು. 

ಈ ಬೆಟ್ಟದ ಮೇಲಿನ ನೀರಿನ ಝರಿಗಳನ್ನು ನೋಡುವಾಗ, ಕಾಲೇಜಿನಲ್ಲಿ ಓದಿದ್ದ ಭೂಗರ್ಭಶಾಸ್ತ್ರದ ಪಾಠ ಒಂದು ನೆನಪಾಯಿತು, ನೀರು ನೆಲದ ಒಳಬಾಗದಲ್ಲಿ ಆಳದಲ್ಲಿ ಹರಡಿರುತ್ತದೆ, ಅದು ನೆಲದ ಒಳಗೆ ಅಂತರ್ಜಲದ ರೂಪದಲ್ಲಿ ಇರುತ್ತದೆ, ಅದನ್ನು 'ವಾಟರ್ ಟೇಬಲ್' ಎನ್ನುವರು. ಸಾಧಾರಣ ನೆಲದ ಮೇಲೆ ಆ ನೀರಿನ ಪದರ ಸಾಕಷ್ಟು ಆಳದಲ್ಲಿ ಇರುವುದು, ಆದರೆ ಕಲ್ಲಿನ ಬೆಟ್ಟಗಳ ಮೇಲೆ, ಅದೇ ನೀರಿನ ಪದರ ತೀರ ಮೇಲೆ, ನೆಲದ ಮಟ್ಟಕ್ಕೆ ಇರುವುದು, ಕೆಲವೊಮ್ಮೆ ಅದು ನೆಲದಿಂದ ಚಿಮ್ಮಿ ಹೊರಗೆ ಹರಿಯುವುದು, ಅದಕ್ಕೆ ನೆಲದ ಸವಕಳಿಯು ಕಾರಣವಾಗಿರುತ್ತದೆ, ಹಾಗಾಗಿ ಬೆಟ್ಟದ ತುದಿಗಳಲ್ಲಿ ನೀರಿನ ಮೂಲ ಜಾಸ್ತಿ. ದೇವರಾಯನ ದುರ್ಗದ ನಾಮದ ಚಿಲುಮೆಯಾಗಲಿ, ಶಿವಗಂಗೆಯ ಅಂತರ್ಗಂಗೆಯಾಗಲಿ ಹಾಗೆಯೇ. ಹಿಮಾಲಯದ ಪರ್ವತದ ತುದಿಗಳಲ್ಲೂ ಇಂತಹ ಕೆಲವು ನದಿಗಳು ಹುಟ್ಟುವುವು, ಹಾಗೆ ಅಲ್ಲಿಯ ಹಿಮವು ಕರಗುವದರಿಂದ ನೀರಿನ ಹರಿವು ಹೆಚ್ಚು, ಬಂಡೆಗಳ ಸಂದಿಗಳಲ್ಲಿ ನೀರಿನ ಒರೆತ ಹೆಚ್ಚು, ಆದರೆ ಅದು ಎಲ್ಲ ಕಾಲಕ್ಕೂ ಹಾಗೇ ಇರದೆ, ಕೆಲವೊಮ್ಮೆ ಕಾಲ ಕಾಲಕ್ಕೆ ಬದಲಾಗುತ್ತಲೇ ಇರುತ್ತದೆ.

ನಾನು ನಿಧಾನವಾಗಿ ನೀರಿನ ಹತ್ತಿರಹೋಗಿ, ಕೈ ಮುಖ ತೊಳೆದು, ಬೊಗಸೆ ಒಡ್ಡಿದೆ, ಸಣ್ಣಗೆ ದಾರದಂತೆ ಬರುತ್ತಿದ್ದ ನೀರು ಬೊಗಸೆ ತುಂಬುತ್ತಲೆ, ಸ್ವಲ್ಪ ಕುಡಿದು ನೋಡಿದೆ, ಸಿಹಿಯಾದ ನೀರು, ಸಾಕಷ್ಟು ರುಚಿಯಾಗಿತ್ತು, ಹಾಗೆ ಒಂದೆರಡು ಬೊಗಸೆ ಕುಡಿದವನು, ಕಡೆಗೆ ಬಾಯನ್ನೇ ನೀರ ಧಾರೆಗೆ ಹಿಡಿದೆ, ಸ್ವಲ್ಪ ಸ್ವಲ್ಪವಾಗಿ, ನಿಧಾನವಾಗಿ ಕುಡಿಯುತ್ತಿದ್ದೆ. ಮನಸಿಗೆ ಎಂಥದೋ ತೃಪ್ತಿ ಅನ್ನಿಸಿತು, ದೇಹವು ಸ್ವಲ್ಪ ಹಗುರವಾಯಿತು ಅನ್ನಿಸಿತು. ಹಾಗೆ ಬಿಸಿಲಿನಲ್ಲಿ ಸ್ವಲ್ಪ ಕಾಲ ಕುಳಿತೆ. 

ಈಗ ಗುಹೆಯ ಕಡೆಗೆ ನನ್ನ ಗಮನ ಹರಿಯಿತು, ಕೈಗೆ ಕೋಲಿನಂತದು ಏನಾದರು ಸಿಗಬಹುದೆ ಅಂತ ನೋಡಿದೆ, ಆದರೆ ಏನು ಸಿಗುವ ಹಾಗಿರಲಿಲ್ಲ. ನಿಧಾನವಾಗಿ ಗುಹೆಯ ಒಳಗೆ ಹೋದೆ, ಅಲ್ಲಿಯ ಬೆಳಕಿಗೆ ಕಣ್ಣು ಹೊಂದಿಸಿಕೊಳ್ಳುತ್ತ ಸುತ್ತಲೂ ನೋಡಿದೆ, ಅಲ್ಲಿ ಚಿಕ್ಕ ರೂಮಿನಷ್ಟು ಜಾಗವಿರುವ ಹಾಗಿತ್ತು, ಹಿಂಭಾಗಕ್ಕೆ ಗೋಡೆಯ ಹತ್ತಿರ, ಎಂತದೊ ಮಂಚದಂತಹ ರಚನೆ, ಕಲ್ಲಿನಲ್ಲಿ ಆಗಿರುವುದೆ, ಆದರೆ ಅದರ ಮೇಲೆ ಏನದು ಮನುಷ್ಯ ಆಕಾರವೆ? ಸ್ವಲ್ಪ ಅಚ್ಚರಿ ಅನಿಸಿತು, ಹತ್ತಿರ ಹೋಗಿ ನೋಡಿದೆ, ಎದೆಯಲ್ಲಿ ಎಂಥದೋ ನಡುಕ.

ಹೌದು ಕಲ್ಲಿನ ಮೇಲೆ ಇದ್ದದ್ದು, ಒಂದು ಮನುಷ್ಯ ದೇಹವೆ, ಆದರೆ , ಅದು ಜೀವಂತ ಇರುವಂತೆ ಇರಲಿಲ್ಲ. ಸತ್ತ ದೇಹವೆಲ್ಲ ಜೀರ್ಣವಾಗಿ ವಿಕಾರಗೊಂಡಿತ್ತು. ನೋಡಿದರೆ ನಗುತ್ತಿರುವಂತೆ ಬಿರಿದ ಹಲ್ಲು, ಒಳಗೆ ಬರಿ ಮೂಳೆಗಳ ರಚನೆ ಉಳಿದು, ಮೇಲೆ ಚರ್ಮದ ಹೊದಿಕೆ, ಆದರೆ  ಆ ಚರ್ಮವು ಹಳೆಯ ಆಲೂಗೆಡ್ಡೆಯ ಸಿಪ್ಪೆಯಂತೆ  ಅಲ್ಲಲ್ಲಿ ದೇಹಕ್ಕೆ ಅಂಟಿಕೊಂಡಿತ್ತು. ದೇಹವನ್ನು ನೋಡುವಾಗ ಮಲಗಿರುವ ವ್ಯಕ್ತಿಯು ಮರಣ ಹೊಂದಿ ಬಹಳ ಕಾಲವಾಗಿರುವಂತಿದೆ, ಮೇಲಿನ ಬಟ್ಟೆಗಳು ಸಾಕಷ್ಟು ಶಿಥಿಲಗೊಂಡಿದ್ದವು, ಆಗ ಇನ್ನೊಂದು ಅಚ್ಚರಿ ಕಾಣಿಸಿತು, ಕಲ್ಲಿನ ಮೇಲೆ ಕುಳಿತಿರುವ ದೇಹಕ್ಕೆ ಎದುರಾಗಿ, ಕಲ್ಲಿನ ಕೆಳಬಾಗಕ್ಕೆ, ಮತ್ತೊಂದು ದೇಹ, ಅದು ತಲೆಯನ್ನು ಕಲ್ಲಿನ ಮೇಲೆ ಇಟ್ಟು ಮಲಗಿದ್ದಂತೆ ಇದ್ದು, ಅದು ಸಹ ಇದೇ ದೇಹದ ಪರಿಸ್ಥಿತಿಯಲ್ಲಿಯೇ ಇತ್ತು. ಇಬ್ಬರು ಗಂಡಸರ ಶವ!

ಕಲ್ಲಿನ ಬಲಭಾಗದಲ್ಲಿ ಗಮನಿಸಿದರೆ, ಕಬ್ಬಿಣದ ಊರುಗೋಲಿನಂತ ಕೋಲು, ನೋಡುವಾಗಲೆ ಹೊಳೆಯಿತು, ಅದು ಪರ್ವತಾರೋಹಿಗಳು ಬಳಸಬಹುದಾದಂತ ಸ್ಟಿಕ್. ಅಲ್ಲಿಗೆ ಇವರು ಯಾರೊ ಪರ್ವತಾರೋಹಿಗಳು, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿಯೊ ಏನೋ, ಇಲ್ಲಿ ಬಂದು ಸೇರಿದ್ದಾರೆ, ಅತೀವ ಹಿಮಪಾತವೊ, ಮತ್ತೇನೊ ಇವರು ಇಲ್ಲಿ ಹೊರಗೆ ಹೋಗದಂತೆ ಸಿಕ್ಕಿಬಿದ್ದು, ಮರಣಹೊಂದಿರಬಹುದು ಅನ್ನಿಸಿತು, ನನ್ನದು ಸಹ ಈಗ ಅದೇ ಪರಿಸ್ಥಿತಿ ಹೆಚ್ಚು ಕಡಿಮೆ ಎಂದು ನೆನದೊಡನೆ ಎದೆಯಲ್ಲಿ ಎಂಥದೊ ಕಂಪನ ಹುಟ್ಟಿತು. ನನ್ನ ಪರಿಸ್ಥಿತಿಯು ಇದೇ ಆಗಬಹುದೆ, ಇವರ ಪಕ್ಕದಲ್ಲಿ ನಾನು ಮೂರನೆ ದೇಹವಾಗಿ ಮಲಗುವೆನೇ ಅನ್ನಿಸಿದಾಗ ದೇಹವನ್ನೆಲ್ಲ ಭಯ ಆವರಿಸಿತು. 

ಹಾಗೆ ಎಚ್ಚರದಿಂದ ಗಮನಿಸಿದೆ, ಮೇಲೆ ಕುಳಿತ ವ್ಯಕ್ತಿಯ ಶವದ ಎದುರಿಗೆ, ನೆಲದ ಮೇಲೆ ಸಣ್ಣದೊಂದು ಕಂದುಬಣ್ಣದ ಕವರ್ ಇದ್ದ, ಡೈರಿಯಂತದ್ದು ಕಾಣಿಸಿತು. ಅದನ್ನು ತೆಗೆಯುವುದೋ ಬೇಡವೋ, ಅದು ಶವಕ್ಕೆ ಸೇರಿದ ವಸ್ತುವಲ್ಲವೆ ಹಾಗಾಗಿ ದ್ವಂದ್ವ,ಒಂದೆರಡು ಕ್ಷಣ ಯೋಚಿಸಿದೆ, ಅದನ್ನು ತೆಗೆದು ಓದುವುದೆ ಸರಿ, ಆಗ ಈ ಗುಹೆಯ ಪರಿಸ್ಥಿತಿ ನನಗೆ ಅರಿವಾಗುವುದು, ಸಹಾಯವು ಆಗಬಹುದು ಅನ್ನಿಸಿತು. ಮುಂದೆ ಬಗ್ಗಿ ಅದನ್ನು ತೆಗೆದುಕೊಳ್ಳುವಾಗ, ಮೈಯಲ್ಲಿ ಎಂಥದೊ ನಡುಕ, ಕಣ್ಣುಗಳು ಆ ಮೂಳೆ ಚರ್ಮದ ದೇಹದ ಮೇಲೆ ನೆಟ್ಟಿತ್ತು. ಆಂಗ್ಲ ಸಿನಿಮಾ ಮಮ್ಮಿಯ ನೆನಪು ಬೇಡ ಬೇಡವೆಂದರು ಮನಸು ತುಂಬುತ್ತಿತ್ತು. ಶಬ್ದವಾಗದಂತೆ ನಿಧಾನವಾಗಿ ಹೊರಬಂದೆ.

ಗುಹೆಯಿಂದ ಸ್ವಲ್ಪ ದೂರದಲ್ಲಿದ್ದ ಸಣ್ಣ ಬಂಡೆಯತ್ತ ನಡೆದು ಅದರ ಮೇಲೆ ಕುಳಿತೆ, ವಾತವರಣ ಹಿತಕರವಾಗಿತ್ತು. ಮೊದಲು ಡೈರಿಯನ್ನು ತೆರೆದು ಓದುವುದೆ ಸರಿ ಅನ್ನಿಸಿತು. ಮೊದಲ ಪುಟ ತೆರೆದು ಹೆಸರು ವಿವರಗಳತ್ತ ಕಣ್ಣಾಡಿಸಿದೆ.  ಹೆಸರು ವಿಲಿಯಂ, ಟಾಕ್ಸಾಸ್ ನಗರದವ , ಅಂದರೆ ಅಮೇರಿಕಕ್ಕೆ ಸೇರಿದವನೆ ಇವನು! . ಡೈರಿ ಎಲ್ಲವು ಆಂಗ್ಲಬಾಷೆಯಲ್ಲಿತ್ತು. ಆದರೆ ತಾರೀಖು, ಅದು ಪ್ರಾರಂಬವಾಗಿದ್ದೆ, ಮೇ ತಿಂಗಳ, 1956 ರ ಇಸವಿಯಲ್ಲಿ, ಮೈಗಾಡ್ ಅಂದರೆ ಈ ಡೈರಿ ಬರೆದಿರುವುದು, ಇವರು ಸತ್ತಿರುವುದು ನಾನು ಹುಟ್ಟುವ ಕಾಲಕ್ಕಿಂತ ಮೊದಲು !! . ಒಂದೆರಡು ಪುಟ ಕಣ್ಣಾಡಿಸಿದೆ, ಏಪ್ರಿಲ್ ತಿಂಗಳ ಕಡೆಯಲ್ಲಿ ದೆಹಲಿಯಿಂದ ಗಂಗೋತ್ರಿಗೆ ಬಂದವನು ಇವನು. ದೂರದ ಟಾಕ್ಸಾಸ್‍ನಿಂದ ಭಾರತದ ಹಿಮಾಲಯ ಹತ್ತುವ ಹುಚ್ಚಿನೊಡನೆ ಗಂಗೋತ್ರಿಗೆ ಬಂದಿಳಿದ ಇವನ ಜೀವ ಹಿಮಾಲಯದ ಗುಹೆಯಲ್ಲಿ ಕೊನೆ ಆಯಿತೇಕೆ? ಇವನ ಜೊತೆ ಇರುವ ಮತ್ತೊಬ್ಬ ಯಾರಿರಬಹುದು ಸಹ ಯಾತ್ರಿಯೇ ಎಂದು ಯೋಚಿಸುತ್ತ ಅವನ ಡೈರಿಯ ಮೇಲೆ ಕಣ್ಣಾಡಿಸುತ್ತ ಹೋದೆ, ಅಲ್ಲಲ್ಲಿ ಒಂದೆರಡು ಸಾಲಿನಂತೆ ಬರೆದಿದ್ದ, ಒಂದೇ ಸಮ ಡೈರಿ ಬರೆಯುವ ಅಭ್ಯಾಸವಿಲ್ಲದವನು, ಮನಸು ಬಂದಾಗ ಒಂದೆರಡು ಸಾಲು ಗೀಚಿದ್ದಾನೆ, ಹಾಗೆ ಕಡೆಗೆ ಬರುತ್ತಿರುವಂತೆ, ಸತತವಾಗಿ ಹಲವಾರು ಪುಟ ತುಂಬಿಸಿರುವುದು ಕಂಡು ಕುತೂಹಲದಿಂದ ಓದಲು ಪ್ರಾರಂಭಿಸಿದೆ.

"ನಾವು ಭಾಗೀರಥಿ ಹತ್ತಲು ಪ್ರಾರಂಭಿಸಿದ ಸಮಯದಿಂದ ಪ್ರಕೃತಿ ಏಕೋ ನಮಗೆ ವಿರುದ್ದವಾಗಿಯೆ ಇತ್ತು, ನಂದನವನ್ ದಾಟಿದ ನಂತರ ಪ್ರಕೃತಿ ಸಂಪೂರ್ಣ ಮುನಿದಿತ್ತು, ನಾನು ನನ್ನ ಪರ್ವತ ಹತ್ತುವ ಕೆಲಸ ನಿಲ್ಲಿಸಿ ಹಿಂದಿರುಗಿದ್ದರೆ ಉತ್ತಮ ನಿರ್ಧಾರವಾಗುತ್ತಿತ್ತು, ಆದರೆ ಒಂದು ದಿನ ನೋಡಿ ನಂತರ ನಿರ್ಧಾರತೆಗೆದುಕೊಳ್ಳೋಣ ಅಂತ ಕ್ಯಾಂಪ್ ಹಾಕಿ ಉಳಿದೆ, ಅದೇ ತಪ್ಪಾದುದ್ದು, ರಾತ್ರಿ ಭೀಕರ ಬಿರುಗಾಳಿ, ಹಿಮದ ಪ್ರವಾಹ, ಕುಸಿದ ಕಣಿವೆ ಎಲ್ಲವೂ ಭೀಕರ ಅನುಭವವಾಗಿತ್ತು, ಕ್ಯಾಂಪಿನಲ್ಲಿದ್ದ ಐವರಲ್ಲಿ ಮೂವರು ಎಲ್ಲಿ ಹೋದರೋ ನನಗೆ ತಿಳಿಯುತ್ತಿಲ್ಲ, ನನ್ನ ಗೈಡ್ ಹಾಗು ಸಹವರ್ತಿಗಳು ಬಾಗೀರಥಿಯ ಕತ್ತಲಲ್ಲಿ ಕರಗಿಹೋದರು. 

ನಾನು ಇಲ್ಲಿ ದಾರಿ ತಪ್ಪಿ ಅಲೆಯುವಾಗ ಜೊತೆಗೆ ಉಳಿದವನು ನಮ್ಮ ಶೇರ್ಪಾ ಚಾಮ್ ಬಾ ಮಾತ್ರ. ಅವನ ಜೊತೆ ಅನಾಥನಂತೆ ಹಿಮಾಲಯದ ಈ ಭಾಗದಲ್ಲಿ ಎರಡು ದಿನ ಅಲೆದೆ, ಆದರೆ ಇಲ್ಲಿಂದ ಹೊರಹೋಗುವ ಎಲ್ಲ ಮಾರ್ಗಗಳು ಮುಚ್ಚಿಹೋಗಿದ್ದವು. ಭೀಕರ ಹಿಮಪಾತ ಶುರುವಾಗಿತ್ತು, ಒಂದೆರಡು ದಿನದಲ್ಲಿ ನಿಲ್ಲಬಹುದು ಅಂದುಕೊಂಡದ್ದು, ಮುಂದುವರೆದೆ ಇತ್ತು, ನಾವು ಹೇಗೊ ಈ ಬಂಡೆಯ ಕೆಳಗಿನ ಗುಹೆಯಂತ ಜಾಗ ಹಿಡಿದೆವು, ರಾತ್ರಿ ಇರಲು ಜಾಗವೇನೊ ಸಿಕ್ಕಿತು, ಇಬ್ಬರನ್ನು ಭೀಕರ ಹಸಿವು ಕಾಡುತ್ತಿತ್ತು. ನಮ್ಮ ಹತ್ತಿರ ತಿನ್ನಲು ಏನೂ ಇರಲಿಲ್ಲ. ಕಡೆಗೆ ಎದುರಿಗೆ ಸಿಗುವ ಯಾವುದೇ ಪ್ರಾಣಿಯನ್ನಾದರೂ ಹಿಡಿದು ತಿನ್ನುವ ಎಂದರೆ ಯಾವ ಪ್ರಾಣಿಯು ಕಾಣಿಸಲೇ ಇಲ್ಲ, ನಮ್ಮ ಶಕ್ತಿ ಪೂರ್ಣ ಕುಂದಿಹೋಗಿತ್ತು, ಈ ಗುಹೆ ಸೇರಿ ಎಷ್ಟು ದಿನವಾಯಿತು ಅನ್ನುವ ಲೆಕ್ಕವು ತಪ್ಪಿಹೋಯಿತು, ಹಗಲು ಯಾವುದೊ ರಾತ್ರಿ ಯಾವಾಗ ಬರುವುದೊ ಗಮನಿಸುವ ಶಕ್ತಿ ಇಲ್ಲ, ಹಿಮಪಾತ ನಿಂತ ನಂತರ ಇಲ್ಲಿಂದ ಹೊರಡೋಣ ಅನ್ನುವ ನಮ್ಮ ನಿರ್ಧಾರ ಕೈಗೂಡಲೆ ಇಲ್ಲ, ಅಲ್ಲದೆ ಜೊತೆಗಿದ್ದ ಚಾಮ್ ಬಾ ಗೆ ಕಾಲಿಗೆ ಏಟುಬಿದ್ದು ಅವನು ನಡೆಯದಂತಾದ, ಅವನಿಗೆ ಶುಗರ್ ಇತ್ತೋ ಏನೋ ಏನೂ ಗೊತ್ತಿಲ್ಲ, ಮೂರನೆಯ ದಿನ ಅವನು ನನ್ನ ಕಣ್ಣೆದುರೆ ಸತ್ತು ಹೋದ. ಸಾಯುವಾಗಲು ಅವನ ಬಾಯಲ್ಲಿ ಬರುತ್ತಿದ್ದ ಪದ ಒಂದೆ 

"ಹಸಿವು ಹಸಿವು, ಸುಸ್ತು... ಏನಾದರು ತಿನ್ನಲು ಕೊಡಿ" ಎಂದು. 

ನನ್ನ ಬಳಿ ಅವನಿಗೆ ತಿನ್ನಲು ಕೊಡಲು ಏನು ಇರಲಿಲ್ಲ. ಇದೇ ಗುಹೆಯಲ್ಲಿಯೇ ಅವನು ಸತ್ತು ಹೋದ. ಹೊರಗೆ ಅದೇ ವಾತಾವರಣ ಮುಂದುವರೆದಿತ್ತು, ಭೀಕರ ಹಿಮಗಾಳಿ, ಹಿಮಪಾತ, ಎಂದಿಗೂ ಕಾಣದ ಸೂರ್ಯ. ನಾನು ಏನೂ ಮಾಡುವಂತಿರಲಿಲ್ಲ, ಬೆಳಕು ಪೂರ ನಂದುತ್ತ ಬಂದಿತು ಆಗ ಸಂಜೆ ಇರಬಹುದೇನೊ, ನಾನು ದಾರಿ ತಪ್ಪಿ ಇಲ್ಲಿ ಬಂದು ಐದು ದಿನವಾಗಿರಬಹುದು, ಯಾವ ದಿಕ್ಕಿನಲ್ಲೂ ಹಿಮದ ಹೊರತು ಮತ್ತೇನೂ ಇಲ್ಲ ಮನುಷ್ಯ ಸಂಪರ್ಕವೇ ಇಲ್ಲ, ಒಂಟಿ ಗುಹೆ, ಒಳಗೆ ನನ್ನ ಎದುರಿಗೆ ಶೇರ್ಪಾನ ಹೆಣ. 

ರಾತ್ರಿ ಹಾಗೇ ಕಳೆಯುವುದು ಹೇಗೆ, ಕಷ್ಟ ಪಟ್ಟು ಅವನನ್ನು ಎಳೆಯುತ್ತ ಈಚೆ ತಂದು, ಗುಹೆಯಿಂದ ಹತ್ತು ಅಡಿ ದೂರದಲ್ಲಿ ನನ್ನ ಕೈಲಿ ಇದ್ದ ಸ್ಟಿಕ್ ನಿಂದಲೆ ಸ್ವಲ್ಪ ಹಳ್ಳ ಮಾಡಿ ಅವನನ್ನು ಮಲಗಿಸಿ ಮೇಲೆ ಹಿಮ ಮುಚ್ಚಿದೆ, ದುಃಖದಿಂದ ಒಳಬಂದೆ, ನನ್ನನ್ನು ಕಾಡುತ್ತಿದ್ದ ಹಸಿವು, ನೀರಡಿಕೆ, ಎಂದಿಗೂ ಮುಗಿಯದ ಭೀಕರ ಹಿಮಗಾಳಿ. ಕಣ್ಣುಮುಚ್ಚಿ ಮಲಗಿದೆ, ಅರ್ಧಎಚ್ಚರ ಅರ್ಧನಿದ್ರೆ. ಅದು ನಿದ್ರೆಯೋ ಜ್ಞಾನತಪ್ಪುತ್ತಿರುವ ಚಿನ್ಹೆಯೊ ಅರ್ಥವಾಗುತ್ತಿಲ್ಲ, ಮರುದಿನ ಎಚ್ಚರವಾಯಿತು, ಎಷ್ಟು ಹೊತ್ತಾಗಿತ್ತೋ ಗೊತ್ತಿಲ್ಲ, ಹೊರಗಿನ ಗುಹೆಯ ದ್ವಾರದಿಂದ ಸ್ವಲ್ಪ ಬೆಳಕು ಬೀಳುತ್ತಿತ್ತು, ಏತಕ್ಕೊ ಪಕ್ಕಕ್ಕೆ ತಿರುಗಿದೆ, ಹೆದರಿ ಹೋದೆ, ನಿನ್ನೆ ಸಂಜೆ ನಾನೆ ಹಿಮದಲ್ಲಿ ಸಮಾಧಿಮಾಡಿಬಂದಿದ್ದ ಶೇರ್ಪಾನ ಶವ ನನ್ನ ಎದುರಿಗೆ ಅವನು ಸತ್ತಾಗ ಹೇಗೆ ಇತ್ತೋ ಹಾಗೆ ಮಲಗಿತ್ತು, 

ನನ್ನ ಹೃದಯದಲ್ಲಿ ಅರ್ಥವಾಗದ ಭಯ ಇಲ್ಲಿ ಏನಾಗುತ್ತಿದೆ, ಅವನು ಸತ್ತಿದ್ದೇ ಸುಳ್ಳೆ? ನಾನು ಹೊರಗೆ ಅವನನ್ನು ಎಳೆದೋಯ್ದು ಹಿಮದಲ್ಲಿ ಸಮಾಧಿಮಾಡಿ ಬಂದಿದ್ದು ಸುಳ್ಳೇ? ಅಥವ ಹಸಿವು, ಒಂಟಿತನ, ಕೊನೆಯಿಲ್ಲದ ಹಿಮದ ಬಿಳುಪು ನನ್ನನ್ನು ಮಾನಸಿಕ ಅಸ್ವಸ್ಥನನ್ನಾಗಿಸಿದೆಯಾ? ನಿನ್ನೆ ಆಗಿದೆ ಅಂತ ನಾನು ಅಂದುಕೊಳ್ಳುತ್ತಿರುವುದು ಬರೀ ಕಲ್ಪನಯೋ? ಏನೂ ನಡದೇ ಇಲ್ಲವೇ? ಮತ್ತೊಮ್ಮೆ ಕಷ್ಟದಿಂದ ಎದ್ದು ಪರೀಕ್ಷಿಸಿದೆ, ಅವನು ಸತ್ತು ಹೋಗಿರುವುದು ನಿಜ. ನನಗೆ ಯೋಚನೆಗೆ ಇಟ್ಟುಕೊಂಡಿತು, ಹೀಗೇಕೆ ಆಯಿತು? ಈ ಬಾರಿ ನನ್ನ ಮನಸಿಗೆ ನಾನೇ ಮೋಸ ಮಾಡಿಕೊಳ್ಳಬಾರದು. 

ಹೊರಗೆ ಬಂದು ನೋಡಿದೆ, ಬಿರುಗಾಳಿ ನಿಂತಿತ್ತು, ಆದರೆ ಹಿಮಪಾತ ಮುಂದುವರೆದಿತ್ತು, ಬಹುಶಃ ಇಂದು ಸಂಜೆ ಪೂರ್ಣನಿಲ್ಲಬಹುದು, ಹಾಗೆ ಆದಲ್ಲಿ ನಾಳೆ ಏನೇ ಆಗಲಿ ನಡುವೆ ಬಿದ್ದು ಸತ್ತರೂ ಪರವಾಗಿಲ್ಲ, ಇಲ್ಲಿಂದ ಹೊರಟುಬಿಡುವೆ ಎಂದು ನಿರ್ಧರಿಸಿದೆ, ಮತ್ತೆ ಹೆಣವನ್ನು ಹೊರಗೆ ತಂದು, ಹತ್ತು ಅಡಿ ದೂರದಲ್ಲಿ, ಶವವನ್ನು ಮಲಗಿಸಿ, ಹಿಮದಿಂದ ಮುಚ್ಚಿ ಒಳಗೆ ಹೋದೆ, ಜೇಬಿನಲ್ಲಿ ಡೈರಿ ಮತ್ತು ಪೆನ್ನು ಹೇಗೋ ಉಳಿದಿತ್ತು, ಬರೆಯುವುದು ಕಷ್ಟ ಆದರೆ ನನ್ನ ಮನಸನ್ನು ನಂಬಿಸಲು, ನಡೆದಿರುವ ಪೂರ್ಣ ಘಟನೆಯನ್ನು ಹಾಗೆಯೆ ಬರೆದಿಟ್ಟೆ. ಸಂಜೆಯವರೆಗೂ ಹೇಗೆ ಕಳೆಯಿತೋ ಗೊತ್ತಿಲ್ಲ ಹಿಮಪಾತವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿತ್ತು. ಬೆಳಗ್ಗೆ ಎಲ್ಲವೂ ಸ್ವಷ್ಟವಾಗುತ್ತದೆ. ಪುನಃ ಅದೇ ಉಪವಾಸ. ದೇಹದ ಶಕ್ತಿ ಎಲ್ಲ ಮುಗಿದು  ಹೋಗಿದೆ.... ಇನ್ನು ಮಲಗುವುದು ಅಷ್ಟೆ"

ಅವನ  ಡೈರಿ ಅಲ್ಲಿಗೆ ನಿಂತು ಹೋಗಿತ್ತು. 

........

ನಾನು ತಲೆ ಎತ್ತಿ ಸುತ್ತಲು ದಿಟ್ಟಿಸಿದೆ, ಎಂತಹ ದೃಶ್ಯ. ಕಣ್ಣು ಹರಿಸುವವರೆಗೂ ಸುತ್ತಲೂ ಬಿಳಿಯ ಹಿಮದ ನೃತ್ಯ, ಆಗಿನ್ನು ಹುಟ್ಟಿ ಬೆಳಗುತ್ತಿರುವ ಸೂರ್ಯನ ಆಶಾಕಿರಣ. ಎದುರಿಗೆ ಗುಹೆ, ನಡುಮದ್ಯದಲ್ಲಿ ಅಪರಿಚಿತನ ಡೈರಿ ಹಿಡಿದು ಓದುತ್ತ ಕುಳಿತ ನಾನು. ಏನೂ ತೋಚಲಿಲ್ಲ. ಪುನಃ ಎದ್ದು ಗುಹೆಯ ಒಳಗೆ ಹೋದೆ. ಅವರಿಬ್ಬರ ದೇಹ ಅದೇ ಭಂಗಿಯಲ್ಲಿ ಇದ್ದಿತು. ನಾನು ಶಬ್ದವಾಗದಂತೆ ಡೈರಿಯನ್ನು ಅದೇ ಜಾಗದಲ್ಲಿಟ್ಟೆ. ಇವರನ್ನು ಹೊರಗೆ ತಂದು ಶವಸಂಸ್ಕಾರ ಮಾಡುವುದೇ ಅನ್ನುವ ಯೋಚನೆ ತಲೆಯಲ್ಲಿ ಬಂದಿತು, ಆದರೆ ತಕ್ಷಣ ಅದು ತಪ್ಪೆನಿಸಿತು, ಪ್ರಕೃತಿಯ ನಡುವೆ ಗುಹೆಯೇ ಅವರಿಬ್ಬರ ಸಮಾಧಿ ಮಾಡಿದೆ, ನಾನು ಪುನಃ ಅವರನ್ನು ಸಮಾಧಿಯಿಂದ ಹೊರಗೆ ತರುವುದು ಭೀಕರ ತಪ್ಪು ಅನ್ನಿಸಿತು. ಹಾಗೆ ನೋಡಿದರೆ ನಾನು ಅವರ ಸಮಾಧಿಯಲ್ಲಿ ರಾತ್ರಿಯೆಲ್ಲ ಮಲಗಿರುವೆ, ಅವರು ಹೊರಬರುವುದು ತಪ್ಪು. 

ನನ್ನಿಂದ ಇನ್ನೇನು ಮಾಡಲು ಸಾದ್ಯವಿರಲಿಲ್ಲ. ಒಂದು ಕ್ಷಣ ಅವರಿಬ್ಬರ ಶವಗಳ ಎದುರು ಕೈಮುಗಿದು ನಿಂತೆ. ಅವರಿಬ್ಬರ ಆತ್ಮಕ್ಕೂ ಶಾಂತಿ ಸಿಗಲಿ, ಸ್ವರ್ಗದಲ್ಲಿ ಅವರಿಬ್ಬರಿಗೂ ಹಸಿವು ನೀರಡಿಕೆ ನೀಗುವ ಅನುಕೂಲ ಸಿಗಲಿ ಎಂದು, ಅವರಿಬ್ಬರಿಗಾಗಿ ಒಂದು ಕ್ಷಣ ಮೌನ ಆಚರಿಸಿದೆ. ನನ್ನ ಕೈಲಿ ಆಗುವುದಿಷ್ಟೆ ಎನ್ನುತ್ತಾ ಅವನ ಪಕ್ಕದಲ್ಲಿದ್ದ ಸ್ಟಿಕ್ ಅನ್ನು ಕೈಲಿ ಹಿಡಿದು, ಗುಹೆಯಿಂದ ಹೊರಬಿದ್ದೆ. ಇನ್ನು ಅಲ್ಲಿರುವುದರಲ್ಲಿ ಯಾವುದೇ ಅರ್ಥವಿರಲಿಲ್ಲ. ಅಲ್ಲಿ ಇದ್ದವರ ಸ್ಥಿತಿ ಏನಾಗಿದೆ ಎನ್ನುವುದು ಕಣ್ಣೆದುರೇ ಇತ್ತು. ಮಾರ್ಗ ಮಧ್ಯದಲ್ಲಿ ಜೀವ ಹೋದರೂ ಸರಿ,ಅಲ್ಲಿಂದ ಹೊರಡುವುದು ಉತ್ತಮ ನಿರ್ಧಾರ ಎಂದು ಮನಸಿಗೆ ಅನ್ನಿಸಿತು. 

ಸೂರ್ಯನ ಎದುರು ನಿಂತೆ, ಈಗ ದಿಕ್ಕನ್ನು ನೆನೆದೆ ಸೂರ್ಯ ಹುಟ್ಟುವಾಗ ಎದುರು ನಿಂತರೆ ಅದೆ ಪೂರ್ವ, ಎಡಭಾಗ ಉತ್ತರ, ಬಲಭಾಗ ದಕ್ಷಿಣ, ಹಿಂಭಾಗ ಪಶ್ಚಿಮ. ನನ್ನ ಮನವು ಏಕೋ ನಾನು ಉತ್ತರಕ್ಕೆ ನಡೆಯಬೇಕೆಂದು ನಿರ್ಧರಿಸಿತು. ಮನಸಿಗೆ ತೋಚಿದಂತೆ ನಡೆಯುವುದು ಮುಂದಿನದು ಅದೃಷ್ಟ ಎನ್ನುತ್ತ, ಉತ್ತರಕ್ಕೆ, ಮೇಲ್ಬಾಗಕ್ಕೆ ನಡೆಯುತ್ತ ಹೊರಟೆ. 

ಎಷ್ಟು ಕಾಲ ನಡೆಯುತ್ತಿದ್ದೆ ಅರ್ಥವಾಗುತ್ತಿಲ್ಲ, ಆಗಲೇ ನಡು ಮಧ್ಯಾಹ್ನ ದಾಟಿರಬಹುದೇನೊ, ಸೂರ್ಯನ ಬಿಸಿಲಿನ ಝಳವನ್ನು ತಡೆಯಲು ಆಗುತ್ತಿಲ್ಲ, ಕಣ್ಣಿಗೆ ಕಪ್ಪು ಕನ್ನಡಕವಿಲ್ಲ ಹಾಗಾಗಿ ಹಿಮದ ಮೇಲೆ ಬಿದ್ದ ಬಿಸಿಲಿನಿಂದಾಗಿ ಕಣ್ಣು ಕೋರೈಸುತ್ತಿದೆ. ಎಷ್ಟು ಕಾಲ ನಡೆಯಬಲ್ಲೆ ದೇವರೇ, ಇನ್ನು ನನ್ನ ಕೈಲಿ ಆಗುವದಿಲ್ಲ. ಆಗ ಯೋಚನೆ ಬಂತು, ನಾನು ಸಹ ಅವರಿಬ್ಬರಂತೆ ಇಲ್ಲೆ ಬಿದ್ದು ಸಾಯುವೆನಾ., 

ಅವರಿಬ್ಬರಿಗೆ ನಾನು ಅರ್ಪಿಸಿದ ಒಂದು ನಿಮಿಷ ಮೌನದ ನೆನಪು ಬಂದಿತ್ತು. ಇದ್ದಕ್ಕಿದಂತೆ ಅನ್ನಿಸಿತು ಅಲ್ಲ ಎಂತಹ ಪೆದ್ದ ನಾನು, ಸುಮಾರು ಅರವತ್ತು ವರ್ಷಗಳಿಂದ ಅವರೆದುರು ಮೌನ ಅನ್ನುವುದು ಅಗಾಧವಾಗಿ ಬಿದ್ದುಕೊಂಡಿದೆ, ಪ್ರಕೃತಿಯೇ ಅವರಿಗೆ ಅದನ್ನು ಅರ್ಪಿಸಿದೆ, ಹಾಗಿರಲು ನಾನು ಪುನಃ ಅವರಿಬ್ಬರಿಗೆ ಒಂದು ನಿಮಿಷ ಮೌನವನ್ನೇ ಕಾಣಿಕೆಯನ್ನಾಗಿ ಅರ್ಪಿಸಿದ್ದೆ. ಎಂತಹ ಮೂರ್ಖ ನಾನು ಅನ್ನಿಸಿ ನಗು ಉಕ್ಕಿ ಬಂತು,ನನ್ನನ್ನು ನೋಡಲು ಯಾರೂ ಇರಲಿಲ್ಲ, ಜೋರಾಗಿ ನಕ್ಕೆ, ಹಾಗೆ ನಕ್ಕ ಕಾರಣಕ್ಕೇನೋ ದೇಹವೆಲ್ಲ ಸಡಿಲವಾಯಿತು. ಹಿಡಿದಿದ್ದ ಬೆನ್ನು ಸ್ವಲ್ಪ ಬಿಟ್ಟಿತು. 

ಮತ್ತೆ ನಡೆಯುತ್ತ ಇದ್ದೆ,ದೇಹದಲ್ಲಿದ್ದ ಶಕ್ತಿ ಎಲ್ಲ ತೀರಿ ಹೋಯಿತು, ಇನ್ನು ನಡೆಯುವ ಶಕ್ತಿ ಇರಲಿಲ್ಲ, ಎತ್ತಲೂ ಮನುಷ್ಯನ ಸುಳಿವೆ ಇರಲಿಲ್ಲ. ನಾನು ಎಷ್ಟು ನಡೆದೆನೊ ನನಗೆ ತಿಳಿಯುತ್ತಲೂ ಇಲ್ಲ. ಇನ್ನು ಆಗದು ಅನ್ನಿಸಿತು, ಕಣ್ಣು ಮುಚ್ಚಿ ಒಂದು ಕ್ಷಣ ನಿಂತೆ. ಕಿವಿಯಲ್ಲಿ ಎಂತದೊ 'ಗೂಯ್' ಎನ್ನುವ ಶಬ್ದ, ನಿಶ್ಯಕ್ತಿಗೆ ಇರಬಹುದು. ಮತ್ತೆ ಅದೇ ಶಬ್ದ, ಈಗ ಅನ್ನಿಸಿತು ಅದು ಹೊರಗಿನಿಂದ ಕೇಳುತ್ತಿರುವ ಶಬ್ದ. ಬಹುಶಃ ವಿಮಾನದ ಶಬ್ದವೇ? ತೋಚಲಿಲ್ಲ

ಒಂದೆರಡು ಕ್ಷಣ ಆಗಸದಲ್ಲಿ ಚುಕ್ಕೆಯೊಂದು ಗೋಚರಿಸಿದಂತೆ ಶಬ್ದ ಹತ್ತಿರವಾಯಿತು. ಗುರುತಿಸಿದೆ ಅದು ವಿಮಾನವಲ್ಲ ಯಾವುದೊ ಹೆಲಿಕಾಪ್ಟರ್!!. ನನ್ನಲ್ಲಿದ್ದ ಎಲ್ಲ ಶಕ್ತಿ ಯನ್ನು ಕ್ರೋಢೀಕರಿಸಿದೆ, ಕೈ ಮೇಲಿತ್ತಿ ಬೀಸಿದೆ, ಕೂಗಲು ಯಾವ ಶಕ್ತಿಯು ಇರಲಿಲ್ಲ, ಕೆಳಮಟ್ಟದಲ್ಲಿದ್ದ ಆ ಹೆಲಿಕಾಪ್ಟರ್ ನನ್ನನ್ನು ಗಮನಿಸಿತೊ ಇಲ್ಲವೊ ತಿಳಿಯಲಿಲ್ಲ. ಮುಂದೆ ಹೋಯಿತು. ಅಲ್ಲಿಗೆ ಮುಗಿಯಿತು ಅಂದುಕೊಂಡು ನಿರಾಶನಾದೆ, ಒಂದು ಕ್ಷಣ. ಹೆಲಿಕಾಪ್ಟರ್ ತಿರುವು ಪಡೆದು ಹಿಂದೆ ಬಂದು ಮತ್ತೆ ನನ್ನ ಮೇಲ್ಭಾಗಕ್ಕೆ ಬಂದಿತು, ಮತ್ತೆ ಕೈ ಆಡಿಸಿದೆ, ನನ್ನನ್ನು ಅವರು ಗಮನಿಸಿದಂತೆ ಅನ್ನಿಸಿತು, ಹೆಲಿಕಾಪ್ಟರ್ ಕೆಳಮಟ್ಟಕ್ಕೆ ಬಂದು ಅದರಿಂದ ಒಂದು ಹಗ್ಗದ ಏಣಿ ಹಾಗು ವ್ಯಕ್ತಿಯೊಬ್ಬ ಕೆಳಗೆ ಬರುತ್ತಿರುವುದು ಕಾಣಿಸಿತು. ನನ್ನಲ್ಲಿ ಎಂತದೊ ನಿಶ್ಯಕ್ತಿ ಆವರಿಸಿ ಕುಸಿದೆ.

-----------------------------------------------------------------------------------------

 ಗಂಗೋತ್ರಿಯಿಂದ ದೆಹಲಿಗೆ ಹೊರಟಿದ್ದೇವೆ. ಹಿಮಾಲಯದಲ್ಲಿ ದಾರಿ ತಪ್ಪಿ ಎರಡು ದಿನ ಕಳೆದ ನಾನು ಪುನಃ ನನ್ನ ಗುಂಪನ್ನು ಕೂಡಿಕೊಂಡಿದ್ದೆ. ಹಿಮಪಾತದಿಂದ ಚದುರಿಹೋದ ಗುಂಪನ್ನು ಹುಡುಕಲು, 'ದ ಗ್ರೇಟ್ ಹಿಮಾಲಯನ್ ಟ್ರಕ್ಕಿಂಗ್ ಅಸೋಸಿಯೇಷನ್‍ನವರು ಹೆಲಿಕಾಪ್ಟರ್ ಸೇವೆ ಬಳಸಿದ್ದರು, ನಾನು ಜೀವನದಲ್ಲಿ ಮೊದಲಸಾರಿ ಹೆಲಿಕಾಪ್ಟರ್ ಹತ್ತಿದ್ದರೂ,ನನಗೆ ಆಗ ಅರಿವಿಲ್ಲದ ಕಾರಣ ಅದರ ಅನುಭವವಾಗಲೇ ಇಲ್ಲ. ಗಂಗೋತ್ರಿಯ ಹಾಸ್ಪೆಟಲ್‍ನಲ್ಲಿ ನಾನು ವಾರ ಕಳೆದಿದ್ದೆ.  ಗಂಗೋತ್ರಿಯ ನಮ್ಮ ಕ್ಯಾಂಪ್ ನಿಂದ ನಾನು ಅಷ್ಟು ದೂರದಲ್ಲಿ ಸಿಕ್ಕಿದ್ದು ಅವರಿಗೆ ಅಚ್ಚರಿಯಾಗಿತ್ತು, ನಾನು ಹೇಗೆ ಅಲ್ಲಿ ಸೇರಿದೆ ಎಂದು. 

ಹಿಮಪಾತದಲ್ಲಿ ಬೀಳುವಾಗ ತಲೆಯ ಹಿಂಬದಿಗೆ ಏಟು ಬಿದ್ದ ಕಾರಣ, ಪರೀಕ್ಷಿಸಲು ಅಲ್ಲಿ ಇಟ್ಟುಕೊಂಡಿದ್ದರು. ಎಡಗೈನ ಮುಂಗೈ ಬಳಿ ಮೂಳೆಗೆ ಏಟು ಬಿದ್ದ ಕಾರಣ ಬ್ಯಾಂಡೇಜ್ ಹಾಕಿದ್ದರು. ಆದರೆ ಡಾಕ್ಟರ್ ತಿಳಿಸಿದಂತೆ ಹದಿನೈದು ದಿನದಲ್ಲಿ ಎಲ್ಲವೂ ನಾರ್ಮಲ್ ಆಗುವುದೆಂದು ಯಾವುದೇ ಅಪಾಯವಿಲ್ಲೆಂದು ತಿಳಿಸಿದ್ದರು. ದುಃಖದ ಸಮಾಚಾರವೆಂದರೆ ನಮ್ಮ ಹದಿನಾರು ಜನರ ಗುಂಪಿನಲ್ಲಿ ಇಬ್ಬರು ಶಾಶ್ವತ ಕಣ್ಮರೆಯಾಗಿದ್ದರು, ಅವರು ಸಿಗುವ ಸಾಧ್ಯತೆ ಕಡಿಮೆ ಎಂದರು ನಮ್ಮ ಗೈಡ್ ಹಾಗೂ ಇತರರು. 

ನಮ್ಮ ಗೈಡ್ ಆಗಿದ್ದ ರಾಜಾಸಿಂಗ್ ಹೇಳಿದ "ಭಾಗೀರಥಿಯಲ್ಲಿ ಇಂಥದ್ದು ನಡೆಯುವುದು ತುಂಬಾನೆ ಅಪರೂಪ, ನಮ್ಮ ಅದೃಷ್ಟ ಕೆಟ್ಟದಾಗಿತ್ತು ಅಷ್ಟೆ, ಗಿರೀಶ್ ನೀವು ಚಿಂತಿಸಬೇಡಿ, ಮುಂದಿನ ವರ್ಷ ಬನ್ನಿ ನಿಮ್ಮನ್ನು,ಸುಬ್ರಮಣ್ಯರನ್ನು ಭಾಗೀರಥಿಯ ಶಿಖರ ತಲುಪಿಸುವುದು ನನ್ನ ಜವಾಬ್ದಾರಿ. ಈಗ ಆಗಿರುವದಕ್ಕೆ ಬೇಸರಪಡಬೇಡಿ" 

ನಾನು ಹೇಳಿದೆ "ಹೌದು ರಾಜಾಸಿಂಗ್, ಇದು ಕೆಟ್ಟ ಅನುಭವವಾಗಿರಬಹುದು, ಆದರೆ ಇದು  ಹಿಮಾಲಯದ ಒಂದು ಮುಖ, ನನಗೆ ಯಾವ ಬೇಸರವು ಇಲ್ಲ, ಏನಾದರೂ ಸರಿ ಭಾಗೀರಥಿಯನ್ನು ಹತ್ತಲೇಬೇಕೆಂಬ ಛಲ ಇದೆ, ಮುಂದಿನ ವರ್ಷ ಖಂಡಿತ ಬರುವೆ, ನಿಮ್ಮ ಜೊತೆ ಭಾಗೀರಥಿಯನ್ನು ಹತ್ತುವೆ" 

ದೆಹಲಿ ಸೇರಿ, ಬೆಂಗಳೂರಿಗೆ ಟ್ರೈನ್ ಹತ್ತಿ ಪಯಣಿಸುವಾಗ, ನನಗೆ ಹಿಮಾಲಯದ ಆ ಬಂಡೆಯ ಗುಹೆಯಲ್ಲಿದ್ದ ಇಬ್ಬರದೇ ನೆನಪು, ನನಗೆ ಅರ್ಥವಾಗದಿದ್ದ ವಿಷಯವೆಂದರೆ, ಮೊದಲ ದಿನ ವಿಲಿಯಂ, ಚಾಮ್ ಬಾ ಶೇರ್ಪಾನ ಶವವನ್ನು ಹೊರಗೆ ತಂದು ಸಮಾಧಿ ಮಾಡಿದ್ದನ್ನು ಭ್ರಮೆ ಎಂದು ಭಾವಿಸಿದರೂ ಸಹ, ಎರಡನೆ ದಿನ ಬರವಣೆಗೆಯಲ್ಲಿ ನಮೂದಿಸಿ, ಶವ ಸಂಸ್ಕಾರ ಮಾಡಿದ್ದ, ಅದು ಭ್ರಮೆಯಾಗಿರಲು ಸಾದ್ಯವಿಲ್ಲ, ಆದರೆ ಆ ಶವ ಪುನಃ ಒಳಗೆ ಹೇಗೆ ಬಂದಿತು. ನಾನು ನೋಡುವಾಗಲೂ ಎರಡನೆ ಶವ ಅವನು ಹೇಳಿದ ಭಂಗಿಯಲ್ಲೆ, ಅವನ ಮುಂದೆ ಇತ್ತು, ಅದನ್ನು ಕಂಡು ಬಹುಶಃ ಹೆದರಿ, ಹೃದಯಘಾತವಾಗಿ ಅವನು ಸತ್ತನಾ ಅಥವ ಹಸಿವು ಚಳಿ ಗಾಳಿಗೆ ಅವನು ಬಲಿಯಾದನಾ ಅನ್ನುವ ಯೋಚನೆ ನನ್ನ ಮನಸ್ಸನ್ನು ತಿನ್ನುತ್ತಿತ್ತು. 

 

Rating
No votes yet

Comments

partha1059

Mon, 05/27/2013 - 14:44

ಹಿನ್ನುಡಿ : ಸುಮಾರು ೧೯೮೨-೮೭ ರ ಕಾಲದಲ್ಲಿ ಕನಕಪುರದಲ್ಲಿ ಇದ್ದೆ, ಆಗೆಲ್ಲ ಸ್ನೇಹಿತರೊಡನೆ ಸುತ್ತಮುತ್ತ ಸುತ್ತುವುದು ಒಂದು ಚಟ. ಒಮ್ಮೆ ಹೀಗೆ ನಡೆಯುತ್ತ ದೊಡ್ಡಗುಡ್ಡ (ಬೆಟ್ಟ) ಹತ್ತಿದೆವು, ಆಗಲೆ ಸೂರ್ಯಮುಳುಗುವ ಹೊತ್ತಾಗುತ್ತಿತ್ತು, ಮೇಲ್ಬಾಗದಲ್ಲಿ ಕಲ್ಲಿನ ಬುಡದಲ್ಲಿ ಗುಹೆಯಂತ ರಚನೆ ಇತ್ತು, ಒಳಗೆ ಹೋದಾಗ ಕಲ್ಲಿನ ಮೇಲೆ, ಮನುಷ್ಯದೇಹವೊಂದನ್ನು ಕೂಡಿಸಿದ್ದರು, ಅದು ಬೀಳದಂತೆ, ಕವೆಗೋಲೊಂದು ಆದಾರವಾಗಿತ್ತು, ಮತ್ತು ಅದು ಅಲ್ಲಿ ಕುಳಿತು ಎಷ್ಟೋ ವರ್ಷಗಳಾಗಿರಬಹುದು, ಮೊದಲು ಕವಿದ ಭಾವ ಭಯ. ಹೊರಗೆ ಬಂದುಬಿಟ್ಟೆವು, ನಂತರ ರಾತ್ರಿ ನಾನು ಬಾಡಿಗೆಗಿದ್ದ ರೂಮಿನ ಯಜಮಾನ , ಅದೆ ಊರಿನವರು, ಅವರ ಬಳಿ ವಿಷ್ಯ ತಿಳಿಸಿದೆ, ಅವರು, ಹೇಳಿದ ಪ್ರಕಾರ, ಕೆಲವು ಪಂಗಡಗಳಲ್ಲಿ ಒಂದು ಪದ್ದತಿ ಇತ್ತಂತೆ, ಗರ್ಭಿಣಿ ಹೆಣ್ಣು ಆಕಸ್ಮಿಕವಾಗಿ ಸತ್ತರೆ, ಅವಳನ್ನು ಮಣ್ಣು ಮಾಡದೆ, ಹಾಗೆ ಕಲ್ಲಿನ ಪೊಟರೆಯಲ್ಲಿ ಕೂಡಿಸಿ ಬರುತ್ತಿದ್ದರಂತೆ , ನನಗು ನಿಜವಿರಬಹುದು ಅನ್ನಿಸಿತು,
ಆ ನೆನಪಿನ ಆದಾರದಲ್ಲಿ ಈ ಕತೆ ಬರೆದಿರುವೆ. ಈಗ ಆ ಬೆಟ್ಟ ಇದೆಯೊ ಅಥವ ಕಲ್ಲಿನ ಆಸೆಗೆ ಬೆಟ್ಟವನ್ನೆ ಕರಗಿಸಿದ್ದಾರೊ ತಿಳಿಯದು,

ಗುರುಗಳೇ ಪಂಜು ನಲ್ಲಿ ಪ್ರಕಟಿಸಲು ಹೊಸ ಕಥೆಯೇ ಆಗಿರಬೇಕು -ಹೀಗಾಗಿ ನೀವ್ ಇಲ್ಲಿ ಹೊಸ ಕಥೆ ಹೊಸೆದಿರುವಿರಿ -ಇನ್ತ್ರೆಸ್ತಿಂಗ್ ಆಗಿದೆ ಎಲ್ಲ ಸರಿ , ಆದ್ರೆ ಈ ತರಹದ ನಿಮ್ಮ ಹೊಸ ಬರಹಗಳನ್ನು ನಾವ್ ಸಂಪದದಲ್ಲಿ ಮಿಸ್ ಮಾಡಿಕೊಳ್ತೀವಲ್ಲ -ಅದ್ಕೇನು ಪರಿಹಾರ ? ನೀವ್ ಇಲ್ಲಿಯ ಬರಹಗಳನ್ನು ಅಲ್ಲೂ ಸೇರ್ಸ್ತೀರ (ಇಲ್ಲಿ ಪ್ರಕಟ ಆದ )ಮೇಲೆ ..... ಆಮೇಲೆ ನಿಮ್ಮ ಆ ಬೆಟ್ಟದ ಗುಹೆಯ ದೇಹದ ಬಗ್ಗೆ ಈ ಹಿಂದೆಯೇ ಸಂಪದದಲ್ಲಿ ಮತ್ತು ನಿಮ್ಮ ಬ್ಲಾಗ್ನಲ್ಲಿ ಬರೆದ ಹಾಗೆ ನೆನಪು .... ಶುಭವಾಗಲಿ... >>>> ಹೀಗೆಂದು ಪ್ರತಿಕ್ರಿಯಿಸಿದ್ದೆ ಈಗ ನೋಡಿದರೆ ಇಲ್ಲಿ ಆ ಕತೆ ಪ್ರತ್ಯಕ್ಷ ... ಹಿಮಾಲಯ ಆರೋಹಣ ಅವರೋಹಣದ ಬಗೆಗಿನ ಚಲನ ಚಿತ್ರಗಳನ್ನು (ವರ್ಚಿಕಲ್ ಲಿಮಿಟ್ - ಕೆ ೨ , ಕ್ಲಿಫ್ಫ್ ಹ್ಯಾಂಗರ್ ಇತ್ಯಾದಿ ) ನೋಡಿದ್ದೇ .. ನಿಮ್ಮ ಕಥೆ ಪಾತ್ರ ಮತ್ತು ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟಿಸಿತು ...ಹಿಮಾಲಯ ಇನ್ನಿತರ ಎತ್ತರದ ಬೆಟ್ಟಗಳ ಹತ್ತಿ ನಿಂತು ಅವೀಗ ನನ್ನ ಕಾಲ ಬುಡದಲ್ಲಿವೆ ಎನ್ನೋ ಹಾಗಿಲ್ಲ..... !!
ಕೊನೆಯಲ್ಲಿ ನೀವ್ ಹೇಳಿದ ವಿಷ್ಯ (ಕಲ್ಲು ಪೊಟರೆಯಲ್ಲಿ ಕೂತಿದ್ದ ಸ್ತಿತಿಯ ದೇಹ) ಈ ಮೊದಲೇ ನೀವ್ ಒಮ್ಮೆ ಹೇಳಿದ ಹಾಗಿದೆ ಹಳೆಯ ಬರಹದಲ್ಲಿ .....
ಕೂತಲ್ಲೇ ಹಿಮಾಲಯ ಹತ್ತಿಸಿ ಇಳಿಸಿ ಕೊನೆಯಲ್ಲಿ ಭಯ ಬೀ.......... !!

ಶುಭವಾಗಲಿ...

\।

ಪ್ರಶ್ನೆ ಹಾಗು ಉತ್ತರ ಎರಡು ನೀವೆ ಕೊಟ್ಟಿರುವಿರಿ !
ವಂದನೆಗಳು !
ನಿಮ್ಮ ...........ಓಡಾಟ ಎಲ್ಲಿಯವರೆಗು ಬಂದಿತು. ಹಾಗೆ ಪರೀಕ್ಷೆ ಹೇಗೆ ಮಾಡಿದಿರಿ?

nageshamysore

Mon, 05/27/2013 - 17:47

ಪಾರ್ಥ ಸಾರ್ ನಮಸ್ಕಾರ, ಯಾವುದೊ ಗುಡ್ಡದಲ್ಲಿ ನೋಡಿದ್ದನ್ನ ಹಿಮಾಲಯದ ವಾತಾವರಣಕ್ಕೆ ಸಮೀಕರಿಸಿ ಕುತೂಹಲಕರವಾಗಿರುವಂತೆ ಕಥೆ ಹೆಣೆದಿದ್ದಿರ. ಜತೆಗೆ ಸಸ್ಪೆನ್ಸ್ ಎಲಿಮೆಂಟು ಸೇರಿ ಕೌತುಕತೆಯನ್ನು ಹೆಚ್ಚಿಸುತ್ತದೆ, ಧನ್ಯವಾದಗಳು - ನಾಗೇಶ ಮೈಸೂರು, ಸಿಂಗಪೂರದಿಂದ

ಪಾರ್ಥ ಸರ್,
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಿಮ್ಮ ಕಥೆ ಆದ್ಯಂತರಹಿತವಾಗಿ ಕುತೂಹಲಭರಿತವಾಗಿದೆ. ಸಾಯಂಕಾಲ ನೋಡಿದಾಗ ಈ ಕಥೆ ಬಹಳ ಉದ್ದವೆನಿಸಿತು; ಆದ್ದರಿಂದ ಈಗ ನಿಧಾನವಾಗಿ ಕುಳಿತು ಓದಿದೆ; ಓದಿದ್ದಕ್ಕೂ ಒಂದು ರಸಾನುಭೂತಿ ಉಂಟಾಯಿತು. ಉತ್ತಮ ಕಥೆಗೆ ಅಭಿನಂದನೆಗಳು, ನಿಮ್ಮ ಎಲ್ಲಾ ಕಥೆಗಳು ಸ್ವಂತಿಕೆಯಿಂದ ಮತ್ತು ವಿಶಿಷ್ಠ ವಿಷಯಗಳಿಂದ ಕೂಡಿರುತ್ತವೆ ಎನ್ನುವುದೊಂದು ನಿಮ್ಮ ಕಥೆಗಳಲ್ಲಿನ ಫ್ಲಸ್ ಪಾಯಿಂಟ್.
ಶುಭರಾತ್ರಿ, ವಂದನೆಗಳೊಂದಿಗೆ ಶ್ರೀಧರ್ ಬಂಡ್ರಿ

ಪ್ರತಿಕ್ರಿಯೆಗೆ ವಂದನೆಗಳು,
ಅಂದರೆ ನೀವು ಓದಿದ ಪುಸ್ತಕ(ಕತೆ) ಯಾವ ರೀತಿ ಈ ಕತೆಗೆ ಹೋಲುತ್ತಿದೆ . ಅಂದರೆ ಪರ್ವತಾರೋಹಣದ ವಿಷಯವೊ ಅಥವ ಗುಹೆಯಲ್ಲಿನ ನಿಗೂಡತೆಗೊ ? ತಿಳಿಯಲಿಲ್ಲ. ನಾನು ನೀವು ತಿಳಿಸಿರುವ ಪುಸ್ತಕ ಓದಿಲ್ಲ

ಬೇಸಿಗೆಗೆ ತಂಪನ್ನೆರದ ಕಥೆ ಪಾರ್ಥರೇ ! ಕಥೆ ನೋಡಲು ಉದ್ದವಾಗಿದ್ದರೂ, ಬಾಹುಕನೋಡಿಸಿದ ಋತುಪರ್ಣನ ರಥದಂತೆ ಭರ್ಜರಿಯಾಗೇ ಸಾಗಿತು ...

ನಮಸ್ಕಾರ,
ಹಿಮಾಲಯ, ಟ್ರೆಕ್ಕಿಂಗ್, ಹಿಮಾಲಯ, ಅಸಂಖ್ಯಾತ ನಕ್ಷತ್ರಗಳು, ಶುಭ್ರ ಆಕಾಶ, ಕುತೂಹಲಕಾರಿ ಕಥೆ...ವಾಹ್,
ಮೊದಲಿಗೆ ಕಥೆ ಉದ್ದವೆನಿಸಿದರೂ, ಸುಲಲಿತವಾಗಿ ಓದಿಸಿಕೊಂಡು ಹೋಯಿತು.
ವಿಶ್ವಾಸದಿಂದ
ವಾಣಿ.

ಗಣೇಶ

Sat, 06/08/2013 - 23:48

ಪಾರ್ಥರೆ, ಹಿಮಾಲಯದ ಅನುಭವವನ್ನು ಇಲ್ಲಿ ಕೂತೇ ಬರೆದಿದ್ದೀರಲ್ಲಾ! ಆಶ್ಚರ್ಯ.ಕೊನೆ ಹೃದಯಾಘಾತವಾಗಿ ಆದದ್ದಾ, ಹಸಿವಿನಿಂದ ಆದದ್ದಾ ...ಏನಾದರಾಗಲಿ, ಕತೆ ಸಾಗಿದ ರೀತಿ ಸೂಪರ್. ನನಗೆ ಹಿಂದೆಂದೋ ಓದಿದ, ಉರುಗ್ವೆ ವಿಮಾನ ಅಪಘಾತದಲ್ಲಿ ಬದುಕುಳಿದ Nando parrado ಕತೆ ನೆನಪಾಯಿತು. ಅದು ನಿಜ ಘಟನೆ. ( http://en.wikipedia.org/wiki/Nando_Parrado )

ಗಣೇಶರೆ ಹಿಮಾಲಯದ ಚಾರಣ ಮಾಡದಿದ್ದರು , ಉತ್ತರಭಾರತದ ಪ್ರವಾಸದಲ್ಲಿ ಹಿಮಾಲಯದ ಬುಡಕ್ಕೆ ಹೋಗಿಬಂದಿಲ್ಲವೆ ಅದರ ಅನುಭವ. ಅಲ್ಲದೆ ಹಿಮಾಲಯದ ಬಗ್ಗೆ ಹಿಂದೊಮ್ಮೆ ಓದಿದ 'ಹಿಮಾಲಯದ ಮಹಾಮಹಿಮರು' ರೀತಿಯ ಪುಸ್ತಕಗಳು. ಸ್ವಂತ ಕಲ್ಪನೆ ಎಲ್ಲವು ಸೇರಿ ಕತೆಯಾಗಿದೆ. ನಿಮ್ಮ ಮೆಚ್ಚುಗೆ ಬೆಳಗ್ಗೆ ಬೆಳಗ್ಗೆಯೆ ಖುಷಿ ತಂದಿದೆ. ವಂದನೆಗಳು
-ಪಾರ್ಥಸಾರಥಿ ಎನ್