ಕತೆ : ರಾಮಜ್ಜ

Submitted by partha1059 on Sun, 01/20/2013 - 08:48

'ಮಗು ಹುಸೇನ್ ಅಂಗಡಿಯ ಬೀಗ ತಗೋ ಹಾಕಿಬಿಡು ಸಮಯವಾಯಿತು ಹೊರಡೋಣ'

ರಾಮಜ್ಜನ ಮಾತಿಗೆ ಹುಸೇನ್ ಸ್ವಲ್ಪ ಚಕಿತನಾದ.   
'ಅಜ್ಜ ಇನ್ನು ಆರು ಗಂಟೆ ಅಷ್ಟೆ, ಬಾಗಿಲು ಹಾಕುವುದೆ?' ಎಂದ ಅನುಮಾನದಿಂದ
'ಹ್ಮ್ , ನಮ್ಮ ವ್ಯಾಪಾರ ಮುಗಿಯಿತು ' ಎನ್ನುತ್ತ ಎದ್ದು ನಿಂತು ಹುಸೇನ್ ನೋಡುತ್ತಿರುವಂತೆ ಬಾಗಿಲ ಹತ್ತಿರ ಬಂದ ರಾಮಜ್ಜ
'ನಾನು ಹೊರಡುವೆ ಒಂದು ಕೆಲಸ ಮಾಡು ಅಂಗಡಿಗೆ ಬೀಗ ಹಾಕಿ ಕೀ ನಿನ್ನ ಹತ್ತ್ರವೆ ಇಟ್ಟುಕೊ ಬೆಳಗ್ಗೆ ಹೇಗು ನೀನೆ ತಾನೆ ಮುಂಚೆ ಬರುವವನು' ಎನ್ನುತ್ತ ಹೊರಟ
ಹುಸೇನ್ ಏಕೊ ಗಲ್ಲದತ್ತ ನೋಡಿದ , ಕೂಗಿದ
'ಅಜ್ಜ ಗಲ್ಲದ ಪೆಟ್ಟಿಗೆಗು ಬೀಗ ಹಾಕಿಲ್ಲ ಹಾಗೆ ಹೊರಟು ಬಿಟ್ಟಿರಿ' , ಒಂದು ಕ್ಷಣ ನಿಂತ ರಾಮಜ್ಜ ಸ್ವಲ್ಪ ಅನ್ಯ ಮನಸ್ಕತೆಯಿಂದಲೆ ಹೇಳಿದ
'ಒಂದು ಕೆಲ್ಸ ಮಾಡು ಅದನ್ನು ಬೀಗ ಹಾಕಿ , ಕೀ ಎಸೆಳನ್ನು ನಿನ್ನ ಹತ್ತಿರವೆ ಇಟ್ಕೋ  ಬೆಳಗೆ ತಾ' ಎನ್ನುತ್ತ ಹೊರಟುಬಿಟ್ಟ.
ಹುಸೇನ್ ಆಸ್ಚರ್ಯದಿಂದ ನಿಂತ. ಇದೇನು ರಾಮಜ್ಜನ ವರ್ತನೆ ಎಂದು ಹೀಗೆ ಗಲ್ಲದ ಪೆಟ್ಟಿಗೆ ಕೀ ಬಿಟ್ಟು ಹೋದವನಲ್ಲ. ವಯಸ್ಸಾಗಿದೆ ಪಾಪ ಏನು ಅನಾರೋಗ್ಯವೊ ಏನೊ ಅಂದು ಕೊಂಡವನು ನೆನಪಿಸಿಕೊಂಡ. ಮದ್ಯಾಹ್ನ  ನಂಜೆಗೌಡರ ಮಗ ಕುಮಾರ ಬಂದು ಹೋದ ಲಗಾಯ್ತಿನಿಂದ ಅದೇನೊ ಸಪ್ಪಗೆ ಇದ್ದಾನೆ. ಏನು ಸಮಾಚಾರವೊ ಎಂದು ಗೊಣಗಿಕೊಂಡವನು, ಏನು ತೋರದೆ ಅಂಗಡಿಯನ್ನು ಬಾಗಿಲು ಎಳೆದು, ಬೀಗ ಹಾಕಿ, ರಾಮಜ್ಜ ಮಾಡುತ್ತಿದ್ದಂತೆ ಬೀಗವನ್ನು ಒಮ್ಮೆ ಕಣ್ಣಿಗೆ ಒತ್ತಿಕೊಂಡವನು ಹೊರಡಲು ಸೈಕಲ್ ಮೇಲೆ ಕೈ ಇಡುವಾಗಲೆ , ಭರ್ಜರಿ ಗುಡುಗೊಂದು ಕೇಳಿಸಿತು. ಆಕಾಶ ಮೋಡದಿಂದ ಪೂರ್ಣ ಕವಿದಿದ್ದು ಮೇಲೆ ನೋಡುತ್ತ ಅಂದುಕೊಂಡ. ಇಂದು ರಾತ್ರಿಯು ಮಳೆ ಗ್ಯಾರಂಟಿ.

ಕಲ್ಕಟ್ಟೆ ಎಂಬ ತಿಪಟೂರಿನ ಸಮೀಪದ ಆ ಹಳ್ಳಿಯಲ್ಲಿ ರಾಮಜ್ಜನದು ಚಿಕ್ಕದೊಂದು ದಿನಸಿ ಅಂಗಡಿ. ಅಲ್ಲಿ ಹಳ್ಳಿಯ ಜನರಿಗೆ ಅಗತ್ಯವಾದ ದಿನಸಿಗಳು, ಸೋಪ್, ಬೆಂಕಿಪಟ್ಣದಿಂದ ಎಲ್ಲವು ಸಿಗುತ್ತಿದ್ದವು. ರಾಮಜ್ಜನೇನು ಲಾಭದ ಆಸೆಗೆ ನಡೆಸುತ್ತಿದ್ದ ಅಂಗಡಿ ಅದಲ್ಲ. ಹಳ್ಳಿಯ ಜನ ಚಿಕ್ಕ ಚಿಕ್ಕ ವಸ್ತುವಿಗೂ ತಿಪಟೂರಿಗೆ ಹೋಗಬೇಕಾದ ಅನಿವಾರ್ಯತೆ ಇದ್ದು, ಹಳ್ಳಿಯ ಜನರಿಗೆ ಸಹಾಯವಾಗಲಿ ಎಂದು ಸುಮಾರು ಹತ್ತು ಹದಿನೈದು ವರ್ಷದ ಕೆಳಗೆ ಪ್ರಾರಂಬಿಸಿದ ಅಂಗಡಿ ಅದು. ಅವನ ಸಹಾಯಕ್ಕೆಂದು ಹುಸೇನ್ ಎಂಬ ಆ ಹುಡುಗ ಸುಮಾರು ಹತ್ತು ವರ್ಷಕ್ಕಿಂತ ಹೆಚ್ಚು ಕಾಲದಿಂದ ಅಲ್ಲೆ ಇರುವನು ಈಗ ಹುಸೇನನಿಗೆ ಇಪ್ಪತ್ತೆಂಟು ವರ್ಷವಾದರೆ ರಾಮಜ್ಜನಿಗೆ ತೊಂಬತ್ತರ ಹತ್ತಿರವೇನೊ.

ರಾಮಜ್ಜನಿಗೆ ಅವನ ಹತ್ತಿರದ ನೆಂಟರು ಎಂದು ಯಾರು ಇಲ್ಲ. ಒಂದು ಕಾಲಕ್ಕೆ   ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಅವನು ಮಹಾತ್ಮ ಗಾಂಧಿಯವರಿಂದ ತನ್ನ ಜೀವನಕ್ಕೆ ಸ್ಪೂರ್ತಿ ಪಡೆದವನು. ಜೀವನವನ್ನೆಲ್ಲ ಪರರ ಸೇವೆಗೆ ಎಂದು ಮೀಸಲಿಟ್ಟ ಅವನು ಕಲ್ಕಟ್ಟೆ ಎಂಬ ಆ ಹಳ್ಳಿಯ ಪ್ರತಿ ಬೆಳವಣಿಗೆಯ ಜೊತೆಗು ಸಂಭಂದ  ಹೊಂದಿರುವವನು. ಕಲ್ಕಟ್ಟೆ ಹಳ್ಳಿಯೇನು  ತೀರ ದೊಡ್ಡ ಗ್ರಾಮವಲ್ಲ. ನೂರೈವತ್ತು ಮನೆಗಳನ್ನು ದಾಟದ ಪುಟ್ಟಹಳ್ಳಿ ಅದು. ಬೆಳಗಿನ ಸಮಯ ಸುತ್ತ ಮುತ್ತಲ ಹಳ್ಳಿಯವರು ಗ್ರಾಮದಲ್ಲಿ ಬಂದು ಹೋಗುತ್ತಿದ್ದು  ರಾಮಜ್ಜನ ಅಂಗಡಿಗೆ ಸಾಕಷ್ಟು ಜನರ ಆಗಮನವಾಗುತ್ತಿತ್ತು.

ರಾಮಜ್ಜ ಸಾಕಷ್ಟು ಅನ್ಯಮನಸ್ಕತೆಯಿಂದಲೆ ನಡೆಯುತ್ತಿದ್ದ.  ಎದುರಿಗೆ ಹೋಗುವವರ ಮೇಲೆ ಅವನ ಗಮನವೇನಿರಲಿಲ್ಲ. ಅಂಗಡಿಯಿಂದ ಹತ್ತು ನಿಮಿಷ ನಡೆದರೆ ಆಯಿತು ಅವನ ಮನೆ. ಮನೆಯಲ್ಲಿ ಇರುವನಾದರು ಒಬ್ಬನೆ. ದೂರದ ಬೆಂಗಳೂರಿನಲ್ಲಿ ಅವನ ಒಬ್ಬನೆ ಮಗ ಆಧಿಲ್ ತನ್ನ ಡಿಗ್ರಿ ಓದನ್ನು ನಡೆಸಿದ್ದ. ಈ ವರ್ಷಕಳೆದರೆ ಅವನ ಓದು ಮುಗಿದಂತೆ. ರಾಮಜ್ಜನಿಗೆ ಅದೇಕೊ ಯಾರ ಜೊತೆಯು ಮಾತು ಬೇಕಿರಲಿಲ್ಲ ಮನೆ ಸೇರಿದರೆ ಸಾಕು ಅಂತ ನಡೆಯುವದರಲ್ಲಿ ಎದುರಿಗೆ ಗುಡಿಯ ಪುಜಾರಿ ಶೇಷಪ್ಪನವರು ಸಿಕ್ಕಿದರು.

'ರಾಮಜ್ಜ, ಎಲ್ಲಿ ಹೊರಟಿರಿ ನಾನು ನಿಮ್ಮ ಅಂಗಡಿ ಬಳಿಯೆ ಹೊರಟಿದ್ದೆ, ನಿಮ್ಮನ್ನೆ ಬೇಟಿ ಮಾಡುವದಿತ್ತು, ಇದೇನು ಅಂಗಡಿ ಇಷ್ಟು ಬೇಗ ಮುಚ್ಚಿದಿರ'
ಪ್ರಶ್ನಿಸಿದರು ಶೇಷಪ್ಪ.

'ಹ್ಮ ಹ್ಮ... ಹೌದು '  ಅಂದರು ರಾಮಪ್ಪ
ಶೇಷಪ್ಪನವರ  ಗಮನಕ್ಕೆ ಬರಲೆ ಇಲ್ಲ ರಾಮಜ್ಜನ ನಿರಾಸಕ್ತಿ.
'ರಾಮಜ್ಜ ಗೊತ್ತಾಯ್ತಲ್ಲ, ಈ ಸಾರಿಯು ಕೆರೆ ಕೋಡಿ ಬಿದ್ದಾಯ್ತು, ನಾನೆ ಸಂಜೆ ಹೋಗಿದ್ದೆ, ನಾಳೆ ಶುಕ್ರವಾರ ಬೆಳಗ್ಗೆ ಹತ್ತಕ್ಕೆ ಸಮಯ ಚೆನ್ನಾಗಿದೆ, ಎಂದಿನಂತೆ ಗಂಗಮ್ಮನ ಪೂಜೆ ಮಾಡಿಬಿಡೋಣ' ಎಂದರು ಉತ್ಸಾಹದಿಂದ.

ಕೆರೆ ಕಟ್ಟಿದಾಗಿನಿಂದ ಪ್ರತಿವರ್ಷ ಕೆರೆಕೋಡಿ ಬಿದ್ದ ತಕ್ಷಣ ಊರಜನರೆಲ್ಲ ಸೇರಿ ಗಂಗಮ್ಮನ ಪೂಜೆ ಮಾಡುವುದು ಕಲ್ಕಟ್ಟೆ ಹಳ್ಳಿಯ ಸಂಪ್ರದಾಯ. ರಾಮಜ್ಜನಿಗೆ ಅದೇನೊ ಪುಜಾರಿ ಶೇಷಪ್ಪನವರ ಮಾತು ಕಿವಿಗೆ ಬಿದ್ದಂತೆ ಇಲ್ಲ. ಸುಮ್ಮನೆ
'ಆಯ್ತು ಆಯ್ತು ಹಾಗೆ ಮಾಡೋಣ' ಎಂದವರೆ ಅಲ್ಲಿಂದ ತಲೆತಗ್ಗಿಸಿ ಮನೆಕಡೇ ಬೇಗ ಬೇಗ ಹೆಜ್ಜೆ ಹಾಕಲು ತೊಡಗಿದರು.

ಶೇಷಪ್ಪನವರಿಗೆ ಅಚ್ಚರಿಯಾಯಿತು, ಮುಖ ಸ್ವಲ್ಪ ಮಂಕಾಯಿತು, ಇದೇನು ರಾಮಜ್ಜ ಎಂದು ಇಲ್ಲದೆ ಹೀಗೆ ವರ್ತಿಸಿದರು, ಕೋಡಿಬಿತ್ತು ಎಂದ ತಕ್ಷಣ ಪೂಜೆಗೆ ಅವರೆ ಮುಂದೆ ಬಂದು ನಿಲ್ಲುತ್ತಿದ್ದರು. ಅವರ ಅಂಗಡಿಯಿಂದಲೆ ಹೆಸರುಬೇಳೆ, ಬೆಲ್ಲ ಮುಂತಾದ ಕೋಸಂಬರಿ ಪಾನಕಕ್ಕೆ ಬೇಕಾದ ವಸ್ತುಗಳೆಲ್ಲ ಕೊಡುತ್ತಿದ್ದರು. ಊರ ಪೂಜೆ ಅಂದರೆ ಅಷ್ಟು ಸಂಭ್ರಮ ಅವರಿಗೆ. ಶೇಷಪ್ಪನಿಗೆ ಏನು  ತೋಚಲಿಲ್ಲ. ಇರಲಿ ಪಾಪ, ರಾಮಪ್ಪ ಏನೊ ಬೇಸರದಲ್ಲಿದ್ದಾರೆ ಅನ್ನಿಸುತ್ತೆ ಎಂದುಕೊಳ್ಳುತ್ತ. ಹೇಗಾದರು ಸರಿ ನಂಜೇಗೌಡರಡರ ಹತ್ತಿರ ವಿಷಯ ತಿಳಿಸಿಬಿಡುವೆ, ಊರಮುಖಂಡರು ಏನಾದರು ಮಾಡಿಕೊಳ್ಳಲಿ ಎನ್ನುತ್ತ ಹೊರಟರು.

ಕಲ್ಕಟ್ಟೆಯಂತ ಹಳ್ಳಿಗೆ ಉತ್ತಮವಾದ ಹರವಿನ ಕೆರೆ ಬಂದಿದ್ದೆ  ಅದೃಷ್ಟ. ಅದರ  ಹಿಂದೆ ಪೂರ್ಣ ರಾಮಜ್ಜನ ಶ್ರಮವಿತ್ತು. ಪ್ರತಿ ಬೇಸಿಗೆಯಲ್ಲು ನೀರಿಗೆ ಪರದಾಟವೆ ಹಳ್ಳಿಯಲ್ಲಿ. ಊರಹೊರಗಿನ ಗುಡ್ಡಗಳ ನಡುವಿನ ಜಾಗ ನೀರು ಶೇಖರಣೆಗೆ ಪ್ರಶಸ್ತವಾದ ಜಾಗವಾಗಿತ್ತು. ಮೇಲಿನಿಂದ ಮಳೆಗಾಲದಲ್ಲಿ ಹರಿದು ವ್ಯರ್ಥವಾಗಿ ಹೋಗುತ್ತಿದ್ದ ನೀರನ್ನು ಅಲ್ಲಿ ತಡೆದು ನಿಲ್ಲಿಸಿ ಬೇಸಿಗೆಯ ಬೆಳೆಗೆ ನೀರಿನ ಸೌಕರ್ಯ ಒದಗಿಸಿದ್ದು ರಾಮಜ್ಜನ ಹೋರಾಟದಿಂದ.

ಸರ್ಕಾರದ ಮಟ್ಟದಲ್ಲಿ ಎಷ್ಟೋ ಹೋರಾಟ ನಡೆಸಿದರು ಕೆಲಸವಾಗದಿದ್ದಾಗ ರಾಮಜ್ಜ ತಾವೆ ಕೆಲಸಕ್ಕೆ ಇಳಿದರು.   ಪಟ್ಟಣದಿಂದ ಇಂಜಿನೀಯರ್ ಗಳನ್ನು ಕರೆಸಿ ಅದಕ್ಕೆ ತಕ್ಕ ಪ್ಲಾನ್ ತಯಾರಿಸಲಾಯಿತು. ಊರಜನರೆ ತಮ್ಮ ಕೈಲಾದ ಹಣಕಾಸಿನ್ನು ಒದಗಿಸಿದರು. ಊರ ಪ್ರತಿಮನೆಯಿಂದಲು ಆಳುಗಳು ಮುಂದೆ ನಿಂತು  ಕೆರೆಯ ಕೆಲಸ ವಹಿಸಿಕೊಂಡರು. ಸುಮಾರು ಆರುತಿಂಗಳು ಒಂದು ವರ್ಷ ರಾಮಜ್ಜ ಹೆಚ್ಚುಕಡಿಮೆ ಅಲ್ಲಿಯೆ ಉಳಿದುಬಿಟ್ಟರು. ಊರವರ ಒಗ್ಗಟ್ಟಿನ ಬಿಂಬ ಎನ್ನುವಂತೆ, ಮಳೆಗಾಲಕ್ಕೆ ಕೆರೆಯ ಕೋಡಿಯ ಕೆಲಸ ಪೂರ್ತಿಯಾಗಿ ಕೆರೆ ಸಿದ್ದವಾಗಿ ನಿಂತಿತು.

ಒಳ್ಳೆಯ ಕೆಲಸಕ್ಕೆ ದೇವರ ಆಶೀರ್ವಾದ ಸದಾ ಇರುತ್ತದೆ ಎನ್ನುವರು. ಪ್ರಕೃತಿ ವರ ನೀಡಿತು, ಮೊದಲ ವರ್ಷವೆ ಕೆರೆತುಂಬಿ ಕೋಡಿ ಹರಿದಾಗ ರಾಮಜ್ಜನ ಕಣ್ಣಲ್ಲಿ ನೀರು. ಊರವರಿಗೆಲ್ಲ ಸಂತಸ. ರಾಮಜ್ಜನೆ ಗಂಗಮನ ಪೂಜೆ ಮಾಡಿಸಿ ಊರವರ ಒಗ್ಗಟ್ಟು ನೆನೆದು ಕೆರೆಗೆ ’ಒಗ್ಗಟ್ಟಿನ ಕೆರೆ’ ಎಂದೆ ನಾಮಕರಣಮಾಡಿದರು. ಅದು ಹೇಗೊ ನಂತರ ಎಲ್ಲರ ಬಾಯಲ್ಲಿ ಒಗಟಿ ಕೆರೆಯಾಗಿಯೆ ಉಳಿದುಹೋಯಿತು. ಮೊದಲಬೇಳೆ ಬಂದಾಗ ಊರರೈತರೆಲ್ಲ ಬಂದು
'ನೀವು ನಮ್ಮೂರಿನ ವಿಶ್ವೇಶ್ವರಯ್ಯ' ಎಂದು ನಮಸ್ಕಾರ ಮಾಡಿದಾಗ, ರಾಮಜ್ಜ ನಮ್ರತೆಯಿಂದ  ನುಡಿದರು
' ಆ ಮಹಾನುಭಾವರೆಲ್ಲಿ ನಾನೆಲ್ಲಿ, ಇದು ಊರವರ ಒಗ್ಗಟಿನ ಕೆಲಸವಷ್ಟೆ'
ಅಂದಿನಿಂದ ಪ್ರತಿಭಾರಿ ಕೆರೆಕೋಡಿ ಬಿದ್ದಾಗ ಗಂಗಮ್ಮನ ಪೂಜೆ  ಹಳ್ಳಿಯ ಸಂಪ್ರದಾಯವಾಯಿತು. ಇದು ನಡೆದು ಆಗಲೆ ಇಪ್ಪತೈದು ವರ್ಷಗಳೆ ಆಯಿತೇನೊ.

ರಾಮಜ್ಜ ಮನೆ ತಲುಪುವ ಹೊತ್ತಿಗಾಗಲೆ ಮಳೆ ಪ್ರಾರಂಬವಾಗಿಯೆ ಬಿಟ್ಟಿತು. ತಲೆ ಮೇಲೆ ಟಪ ಟಪ ನೀರು ಒಂದು ಕ್ಷಣದಲ್ಲಿ ಮಳೆ ಜೋರೆ ಆಯಿತು. ನೆನೆಯುತ್ತ ಬಾಗಿಲ ಹತ್ತಿರ ತಲುಪಿದ ರಾಮಜ್ಜ  ಬೀಗ ತೆಗೆಯಲೆಂದು ಕೀಗಾಗಿ ಜೋಬಿಗೆ ಕೈಹಾಕಿದವರು ಪೆಚ್ಚಾಗಿ ನಿಂತರು. ಅಂಗಡಿಯ ಗಲ್ಲಾಪೆಟ್ಟಿಗೆಯ ಕೀ ಹಾಗು ಮನೆಯ ಕೀ ಒಂದೆ ಕೀಬಂಚಿನಲ್ಲಿದ್ದು ಅದನ್ನು  ಅಂಗಡಿಯಲ್ಲಿ ಬಿಟ್ಟು ಬಂದಿದ್ದರು. ಏನು ಮಾಡುವುದು ತೋಚದೆ ಸುಮ್ಮನೆ ಬಾಗಿಲ ಹತ್ತಿರ ನಿಂತರು. ಮನದಲ್ಲಿ   ಈದಿನ ಎಲ್ಲ ಕೆಲಸವು ಎಡವಟ್ಟು ಆಗುತ್ತಿದೆ,ಎದ್ದ ಗಳಿಗೆಯೆ ಸರಿ ಇಲ್ಲ ಎನ್ನುವ ಭಾವ ತುಂಬಿಕೊಂಡಿತು.

ಎದುರು ಮನೆಯಲ್ಲಿನ ಬಾಗಿಲು ತೆರೆದುಕೊಂಡಿತು. ಕೊಡೆ ಹಿಡಿದು ಅಲ್ಲಿಂದ ಮುಸ್ಲಿಂ ಹುಡುಗಿಯೊಬ್ಬಳು ರಾಮಜ್ಜನ ಮನೆಯ ಕಡೆಗೆ ಓಡಿಬಂದಳು.
'ಅಜ್ಜಾ ಇದೇನು ಇಷ್ಟು ಬೇಗ ಬಂದೆ ಮಳೆ ಎಂದಾ, ಸರಿ ಬಾಗಿಲಲ್ಲಿ ಎಕೆ ನಿಂತೆ ಮಳೆಯಲ್ಲಿ ನೆನೆಯುತ್ತ, ಬೀಗ ತೆಗೆದು ಒಳಗೆ ಹೋಗಬಾರದ?' ಎಂದಳು. ರಾಮಜ್ಜ ಏನು ಹೇಳಲು ತೋಚದೆ
'ಮಗು, ಆಸ್ಮಾ ಕೀ ಅಂಗಡಿಯಲ್ಲಿಯೆ ಬಿಟ್ಟುಬಂದೆ ಅನ್ನಿಸುತ್ತೆ '
ತುಸು ಸಂಕೋಚದಿಂದು ನುಡಿದರು. ಅಕೆ ಕಿಲ ಕಿಲ ನಗುತ್ತ
'ಸರಿ ಹೋಯ್ತು ಅಜ್ಜ ಈಗ ನಿನಗೆ ಅರಳು ಮರಳು ಸುರು ಆಯ್ತು ಅನ್ನಿಸುತ್ತೆ, ಇರಲಿ ಬಿಡು ನಮ್ಮನೇಲಿ ಒಂದು ಕೀ ಇದೆಯಲ್ಲ ತರ್ತೀನಿ , ತಗೋ' ಎನ್ನುತ , ಕೊಡೆಯನ್ನು ಅವರ ಕೈಗೆ ಕೊಟ್ಟು, ಅವರು
'ನೀನೆಕೆ ಮಳೆಯಲ್ಲಿ ನೆನೆಯುತ್ತಿ ' ಎಂದು ಕೂಗುವ ಮೊದಲೆ ಅಲ್ಲಿಂದ ಓಡಿದಳು. ಒಂದೆರಡು ನಿಮಿಶ ಅದೇ ವೇಗದಲ್ಲಿ ಹಿಂದೆ ಬಂದು ಬೇಗ ಬೀಗ ತೆಗೆಯುತ್ತ
'ಬೇಗ ಬಾ ಅಜ್ಜ ಮಳೆಯಲ್ಲಿ ನೆನೆಯುತ್ತಿ ' ಎಂದು ಕೂಗಿದಳು.
ರಾಮಜ್ಜನಿಗೆ ನಗು ಬಂತು, ಮಳೆಯಲ್ಲಿ ನೆನೆಯುತ್ತಿರುವಳು ಅವಳು , ನೆನೆಯಬೇಡ ಎಂದು ಹೇಳುತ್ತಿರುವುದು ನನಗೆ ಅಂದುಕೊಳ್ಳುತ್ತ ಕೊಡೆ ಮಡಚುತ್ತ ಒಳ ಬಂದರು.
ಮನೆಯೆಲ್ಲ ಒಂದು ಸುತ್ತು ಬರುವದರಲ್ಲಿ ಅಲ್ಲಿಯ ನೋಟ ಗಾಭರಿ ಹುಟ್ಟಿಸುವಂತಿತ್ತು
'ಇದೇನು ಮಳೆ ಈಗ ಪ್ರಾರಂಬವಾಗುತ್ತಿದೆ, ಆಗಲೆ ನಿನ್ನ ಮನೆಯೆಲ್ಲ ನೀರು ತುಂಬಿದೆ, ಸ್ವಲ್ಪ ಹೆಂಚು ಸರಿಪಡಿಸಿಕೊಳ್ಳಬಾರದ, ಊರವರ ಕೆಲಸವೆಲ್ಲ ಮುತುವರ್ಜಿ ಮಾಡುತ್ತಿ, ' ಎನ್ನುತ್ತ  ನಸುಮುನಿಸಿನಿಂದ  ಆಸ್ಮಾ ಎಂಬ ಆ ಬಾಲೆ, ನೆಲ ಒರೆಸಿ ಸೋರುವ ಜಾಗಕ್ಕೆ  ಬಕೆಟ್ ಇಡಲು ಮುಂದಾದಳು. ರಾಮಜ್ಜ
'ಬೇಡ ಬಿಡು ನೀನು ಎಷ್ಟು ನೆಲ ಉಜ್ಜಿದರು ಅಷ್ಟೆ ,  ಇದು ನಿನ್ನೆಯ ನೀರು ಸೇರಿದೆ, ಹೇಗು ಮಲಗುವ ರೂಮಿನಲ್ಲಂತು ಸೋರಲ್ಲ, ಉಳಿದೆಲ್ಲ ನಾನೆ ನೋಡೋಣವಂತೆ, ನೀನೀಗ ನೀರಲ್ಲಿ ಆಡಬೇಡ' ಎಂದರು
'ಆಡಲು ನಾನೇನು ಎಳೆಯಮಗುವೆ ' ಎಂದು ಹುಸಿಮುನಿಸು ತೋರುತ್ತ
'ಸರಿ ನಿನಗೆ ಈಗ ಒಂದು ಕಾಫಿ ಮಾಡಿ ತರಲ ಚಳಿಗೆ ಬೆಚ್ಚಗಾಗುತ್ತೆ, ಇಷ್ಟು ಬೇಗ ಮನೆಗೆ ಬಂದೆ ಮತ್ತೆ ಊಟಕ್ಕೆ ಹೋದ ಹಾಗೆ , ರಾತ್ರಿ ನಮ್ಮ ಮನೆಯಿಂದಲೆ ಏನಾದರು ತರುವೆ ' ಎಂದಳು ಆಸ್ಮಾ.
'ರಾತ್ರಿ ಊಟ ಏನು ಬೇಡ ಬೇಟಿ, ಮದ್ಯಾಹ್ನದ ಊಟವೆ ಏಕೊ ಅರಗಲಿಲ್ಲ, ನೀನು ಬಿಡಲ್ಲ ಕಾಫಿ ಒಂದು ಮಾತ್ರ ತಾ ಸಾಕು' ಎಂದರು.

ಆಸ್ಮಾ ಎದುರು ಮನೆ ಮುಸ್ಲಿಂ ಕುಟುಂಬದ ಹುಡುಗಿ. ಅವರ ಅಪ್ಪ ಅಹಮದ್ ಸಿಟಿಯಲ್ಲಿ ಬಸ್ ಡ್ರೈವರ್. ಹಳ್ಳಿಗೆ ವಾರಕೊಮ್ಮೆ ಬಂದು ಹೋಗುವ. ಮನೆಯಲ್ಲಿ ಅವನ ಪತ್ನಿ ಅಭೀದಾ ಹಾಗು ಮಗಳು ಆಸ್ಮಾ ಇಬ್ಬರೆ. ಆಸ್ಮಾ ಚಿಕ್ಕವಯಸಿನ ಮಗುವಿನಿಂದಲು ರಾಮಜ್ಜನ ಮನೆಯಲ್ಲಿ ಓಡಾಡುತ್ತ ಬೆಳೆದವಳು. ಅವಳಿಗೆ ಅವನನ್ನು ಕಂಡರೆ ಎಂತದೋ ವ್ಯಾಮೋಹ , ರಾಮಜ್ಜನಿಗು ಅಷ್ಟೆ ಆಸ್ಮಾ ಎಂದರೆ ಮನ ಮೃದುವಾಗುವುದು. ಬೆಳಗ್ಗೆ ಬಂದು ಅವನ ಮನೆ ಗುಡಿಸಿ ಸ್ವಚ್ಚ ಮಾಡುವಳು ಅವನಿಗೆ ಸಹಾಯ ಮಾಡುವಳು. ಆಗೊಮ್ಮೆ ಈಗೊಮ್ಮೆ ತಿನ್ನಲು ಮನೆಯಿಂದ ಏನನ್ನಾದರು ತರುತ್ತೆಲೆ ಇರುವಳು.ರಾಮಜ್ಜನಿಗು ಅಷ್ಟೆ ಆಸ್ಮಾಳನ್ನು ಕಂಡಾಗಲೆಲ್ಲ ಒಂದೆ ಭಾವನೆ ಈ ಮಗುವಿನೆ ಒಂದು ಒಳ್ಳೆ ಹುಡುಗನ್ನ ಮದುವೆ ಮಾಡಿಸಿ ದಡ ಮುಟ್ಟಿಸ ಬೇಕು. ಅವನ ಮನದಲ್ಲಿ ಎಲ್ಲೊ ಒಂದು ದೂರದ ಆಸೆಯಿತ್ತು, ತನ್ನ ಸಾಕು ಮಗ ಆಧಿಲ್ ನನ್ನು ಒಪ್ಪಿಸಿ ಈ ಹುಡುಗಿಯನ್ನು ಅವನಿಗೆ ಮದುವೆ ಮಾಡಿಬಿಟ್ಟರೆ ಅಲ್ಲಿಗೆ ಎಲ್ಲವು ಸಮಾ. ಹೇಗು ಅವನು ಓದಿದವನು , ಈಕೆಯು ಜಾಣೆ ಇಬ್ಬರಿಗು ಸರಿಯಾದ ಈಡು ಜೋಡಿ ಎಂದು ಅವನ ಲೆಕ್ಕಾಚಾರ.

ಸ್ವಲ್ಪ ಹೊತ್ತಿನಲ್ಲೆ ಆಸ್ಮಾ ಕಾಫಿ ಹಿಡಿದು ತಂದಳು,  
'ಸರಿ ಮಗು, ಮತ್ತೆ ಊಟ ಅಂತ ಏನು ತರಲು ಹೋಗಬೇಡ, ನನಗೆ ಈ ರಾತ್ರಿ ಎನು ತಿನ್ನುವ ಹಾಗಿಲ್ಲ.   ಮಳೆ ತುಂಬಾ ಬರ್ತಾ ಇದೆ , ನೀನು ಮನೆಗೆ ಹೊರಡು' ಎಂದರು

ಸಾಮಾನ್ಯವಾಗಿ ಆಕೆಯ ಜೊತೆ ಹರಟೆ ಹೊಡೆಯುತ್ತ ಕುಳಿತುಕೊಳ್ಳುವರೆ  ರಾಮಜ್ಜ, ಇಂದೇಕೊ ಯಾರೊಡನೆಯು ಮಾತು ಬೇಕಿಲ್ಲ ಅನ್ನಿಸುತ್ತಿದೆ. ಅವಳನ್ನು ಕಳಿಸಿ ಮುಂದಿನ ಬಾಗಿಲು ಹಾಕಿ ಚಿಲಕ ಹಾಕಿ ಭದ್ರಪಡಿಸಿದರು.

ಹೊರಗಿನಿಂದ ಗಾಳಿ ರಬಸವಾಗಿ ಬೀಸುತ್ತಿದ್ದು ಮನೆಯೆಲ್ಲ ನೀರು ಎರಚುತ್ತಿತ್ತು. ನಿದಾನಕ್ಕೆ ಓಡಾಡುತ್ತ, ಕಿಟಕಿಯನ್ನೆಲ್ಲ ಬದ್ರಪಡಿಸಿದರು. ಈ ಮಳೆ ಗಾಳಿಗೆ ಒಂದು ಹೆಂಚು ಉಳಿಯುವುದು ಕಷ್ಟ ಅಂದುಕೊಳ್ಳುತ್ತಿರುವಂತೆ ಕರೆಂಟ್ ಹೋಗಿ ಮನೆಯನ್ನೆಲ್ಲ ಕತ್ತಲು ತುಂಬಿತು.  ಕತ್ತಲಿನಲ್ಲೆ  ಮೇಣದ ಬತ್ತಿ ಎಲ್ಲಿ ಇಟ್ಟೆ ಎಂದು ನೆನಪಿಸಿಕೊಳ್ಳುತ ಹುಡುಕಿದರು, ಎಲ್ಲಿಯೂ ಸಿಗಲಿಲ್ಲ. ಸರಿ ಎನ್ನುತ್ತ ಅಡಿಗೆ ಮನೆಗೆ ಹೋಗಿ ಒಲೆಯ ಪಕ್ಕದಲ್ಲಿದ್ದ ಸೀಮೆ ಎಣ್ಣೆಯ ಬುಡ್ಡಿಯನ್ನೆ ತೆಗೆದು ಹಚ್ಚಲು, ನೋಡಿದರು, ಬೆಂಕಿಪೊಟ್ಟಣವೆಲ್ಲ ಮಳೆಯ ನೀರಿನಲ್ಲಿ ನೆಂದಿತ್ತು , ಕಡ್ಡಿ ಗೀರಿ ಸೋತ ಅವರು ’ಥುತ್ ’ ಎಂದುಕೊಳ್ಳುತ್ತ , ಅಟ್ಟದಲ್ಲಿ ಕೈಹಾಕಿ ಚಿಕ್ಕ ಡಬ್ಬಿ ಒಂದರಲ್ಲಿ ಇಟ್ಟಿದ ಮತ್ತೊಂದು ಬೆಂಕಿಪೊಟ್ಟಣ ತೆಗೆದು ಹೇಗೊ ದೀಪ ಹಚ್ಚಿದರು , ಗಾಳಿಗೆ ಅದು ತೂಯ್ದಾಡಿ ಆರುವ ಮುನ್ನವೆ ಚಿಮಣಿ ಸಿಕ್ಕಿಸಿ, ರೂಮಿಗೆ ತಂದು ಟೇಬಲ್ ಮೇಲಿಟ್ಟು ,  ಅಸ್ಮಾ ತಂದಿಟ್ಟಿದ ಕಾಫಿ ಲೋಟ ಕೈಯಲ್ಲಿ ಹಿಡಿದು ಮಂಚದ ಮೇಲೆ ಕುಳಿತರೆ, ಕಾಫಿ ಎಲ್ಲ ಆರಿ ತಣ್ಣಗಾಗಿತ್ತು, ಸರಿ ಮತ್ತೆ ಯಾರೊ ಎದ್ದು ಬಿಸಿ ಮಾಡುವವರು ಎಂಬ ಬೇಸರದಲ್ಲಿ ಅರ್ದ ಕುಡಿದು ಕಾಫಿ ಲೋಟವನ್ನು ಹಾಗೆಯೆ ಮಂಚದ ಕೆಳಗೆ ಇರಿಸಿ ಸುಮ್ಮನಾದರು.

ರೂಮಿನ ಕಿಟಕಿಯಿಂದ ಗಾಳಿ ಒಳಗೆ ಸುಯ್ಯನೆ ಬೀಸುವಾಗ ರೂಮಿನಲ್ಲಿ  ಗಳುವಿಗೆ ನೇತುಹಾಕಿದ್ದ ಅವರ ಖಾದಿಬಟ್ಟೆಗಳೆಲ್ಲ ತೂಯ್ದಾಡುತ್ತಿದ್ದವು. ಇದೊಂದು ಕಿಟಕಿ ಮುಚ್ಚಲು ಮರೆತೆ ಎಂದುಕೊಂಡ ರಾಮಜ್ಜ , ಹೋಗಲಿ ಬಿಡು ಮತ್ತೆ ಯಾರು ಮೇಲೆ ಏಳುವರು ಎಂದು ಮಂಚದ ಮೇಲೆ ಹಾಗೆಯು ಉರಳಿಕೊಂಡರು. ಕಿಟಕಿಯ ಮೇಲೆ ಹಾಕಿದ್ದ ಕಟ್ಟು ಹಾಕಿಸಿದ್ದ ಸಾಲು ಫೋಟೊಗಳು ಟೇಬಲಿನ ಮೇಲಿಟ್ಟ ಸೀಮೆ ಎಣ್ಣೆ ದೀಪದಲ್ಲಿ ವಿಚಿತ್ರ ಕಾಂತಿಯಿಂದ ಹೊಳೆಯುತ್ತಿದ್ದವು,  ಮಧ್ಯದಲ್ಲಿ ಮಹಾತ್ಮಗಾಂಧಿ,  ಎರಡು ಬದಿಯಲ್ಲಿ ನೆಹರು, ಮೌಲಾನ, ಪಟೇಲ್, ಎಲ್ಲ ದೇಶಭಕ್ತರ ಸ್ವಾತಂತ್ರಹೋರಾಟಗಾರ ಚಿತ್ರಗಳು.

ಮನದಲ್ಲಿಯೆ ಅಂದು ಕೊಂಡರು
'ಬಾಪು ನೀನು ಏತಕ್ಕಾಗಿ ಹೋರಾಡಿದೆ, ಯಾರಿಗಾಗಿ ಈ ಸ್ವಾತಂತ್ರ್ಯ ತಂದುಕೊಟ್ಟೆ, ಇಲ್ಲಿರುವ ಯಾರು ಆ ಸ್ವಾತಂತ್ರ್ಯವನ್ನು ಅನುಭವಿಸಲು ಯೋಗ್ಯರಲ್ಲ' .

ಅವರ ಮನ ಮುದುಡಿತು.  ಕಣ್ಣು ಮುಚ್ಚಿದರು ಅವರ ಮನ ಅವರ ಬಾಲ್ಯಕ್ಕೆ ಹೋಗಿತ್ತು. ಕೋಲಾರದಲ್ಲಿ ಮುಸ್ಲಿಂ ಕುಟುಂಬ ಒಂದರಲ್ಲಿ ಜನಿಸಿದ ಅವರ ಬಾಲ್ಯದ ಹೆಸರು ರೆಹಮಾನ್ , ಇಂದಿಗು ಹೊಸಪೀಳಿಗೆಯ ಬಹಳ ಮಂದಿಗೆ ಅವರು ಮುಸ್ಲಿಂ ಎಂದು ತಿಳಿದಿಲ್ಲ. ರೆಹಮಾನ್ ಎಂಬ ಹುಡುಗ ರಾಮಣ್ಣ ನಾಗಿದ್ದು ದೊಡ್ಡದೊಂದು ಕತೆ. ಅನಾಥ ಬಾಲಕ ರೆಹೆಮಾನ್, ಬೆಂಗಳೂರಿಗೆ ಬಂದ ಗೆಳೆಯರ ಜೊತೆ, ಇಲ್ಲಿ ಸ್ವಲ್ಪ ಕಾಲವಿದ್ದು ನಂತರ, ರೈಲು ಹತ್ತಿ ಮುಂಬಯಿ ಎಂಬ ಮಹಾನಗರಕ್ಕೆ ಓಡಿ ಹೋದವ ಅಲ್ಲಿ ಹೊಟೆಲ್ ಕೆಲಸ ಹಿಡಿದು ಬದುಕಿಗೆ ಒಂದು ನೆಲೆ ಕಂಡುಕೊಂಡ. ಆಗೆಲ್ಲ ಸ್ವಾತಂತ್ರಹೋರಾಟದ ಕಾಲ. ಎಲ್ಲೆಲ್ಲು ಬ್ರೀಟಿಷರ ವಿರುದ್ದದ ಕೂಗು ಮೊಳಗುತ್ತಿತ್ತು. ಮಹಾತ್ಮ ಗಾಂಧಿ ನೆಹರು ಇವರ ಹೆಸರುಗಳು ಭಾರತದ ಪ್ರತಿ ಮನೆಯಲ್ಲು ಬಾಯ ತುದಿಯಲ್ಲಿತ್ತು. ಪ್ರತಿ ಬಾರಿ ಅವರು ಉಪವಾಸ ಮಾಡಿದಾಗ ಜೈಲು ಸೇರಿದಾಗ ದೇಶವೆ ಅವರುಗಳಿಗಾಗಿ ಕೊರಗಿ ಕಣ್ಣಿರು ಇಡುತ್ತಿದ್ದ ಕಾಲವದು, ಸಹಜವಾಗಿ ರೆಹೆಮಾನ್ ಎಂಬ ಮುಗ್ದ ಬಾಲಕ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದ.

ಆಗೆಲ್ಲ ಬ್ರೀಟಿಷರೆ ಭಾರತ ಬಿಟ್ಟು ತೊಲಗಿ ಎಂದು ಗಾಂಧೀಜಿ ಗರ್ಜಿಸುತ್ತಿದ್ದ ಕಾಲ, ಮುಂಬಯಿಯ ಗೋವಾಲಿಯ ಪಾರ್ಕ್ ಎಂಬ ಆಟದ ಮೈದಾನದಲ್ಲಿ ಗಾಂಧೀಜಿಯವರ ಬಾಷಣ ಏರ್ಪಾಡಾಗಿತ್ತು. ಅವರನ್ನು ನೋಡುವ ಕುತೂಹಲ ಎಲ್ಲರನ್ನು ತುಂಬಿತ್ತು. ಚಿಕ್ಕ ಹುಡುಗ ರೆಹಮಾನ್ ಅದಕ್ಕೆ ಹೊರತಲ್ಲ. ಹೋಟೆಲಿನ ಇತರೆ ಮಾಣಿಗಳ ಜೊತೆ ಅದು ಹೇಗೊ ಅಲ್ಲಿ ಸೇರಿದ. ಗಾಂಧೀಜಿ ಬಾಷಣಕ್ಕೆಂದು ನಡೆದು ಬರುತ್ತಿದ್ದ ಸಮಯು ಸಂದಿಯಲ್ಲಿ ನುಗ್ಗಿ ಗಾಂಧೀಜಿಗೆ ಎರಗಿದ ಹುಡುಗ ರೆಹೆಮಾನ. ಗಾಂಧೀಜಿ ನಗುತ್ತ ಈ ಬಾಲಕನನ್ನು ಕಂಡು
'ಏನು ಮಗು ನೀನು ಸಹ ಭಾರತಮಾತೆಯ ಬಂದನವನ್ನು ಬಿಡಿಸಲು ಬಂದೆಯ ನಿನ್ನ ಹೆಸರು ಏನು ' ಎಂದು ಪ್ರಶ್ನಿಸಿದರು.
'ನನ್ನ ಹೆಸರು ರೆಹಮಾನ್' ಹುಡುಗ ನುಡಿದ.  
'ಮಗು ರೆಹಮಾನ್ , ನಮಗೆ ನಮ್ಮ ರಾಮನೆ ಈ ರೆಹಮಾನನ ರೂಪದಲ್ಲಿ ಬಂದ ಹಾಗಿದೆ ' ಎಂದರು ನಗುತ್ತ
ಅದಕ್ಕೆ ಬಾಲಕನಾದ ರೆಹಮಾನ್ ಮುಗ್ದನಾಗಿ ಕೇಳಿದ
'ಅಂದರೆ ಬಾಪು ಇಂದಿನಿಂದ ನನ್ನ ಹೆಸರು ರಾಮ ಎಂದೆ ಅಲ್ಲವೆ'
ಗಾಂಧೀಜಿಯ ಕಣ್ಣುಗಳಿಂದ ನೀರು
ಅಂದಿನಿಂದ ಎಲ್ಲರಿಗು ಅವನು ರಾಮಣ್ಣನಾದ, ನಂತರ ದೊಡ್ಡವನಾದಂತೆ ಬೆಂಗಳೂರಿಗೆ ಬಂದು ನೆಲಸಿದ ಅವನು ಕ್ರಮೇಣ ತಿಪಟೂರಿನ ಹತ್ತಿರದ ಗ್ರಾಮ ಕಲ್ಕಟ್ಟೆಗೆ ಬಂದು ನೆಲೆಸಿ ರಾಮಣ್ಣನಾಗಿದ್ದು , ವಯಸಾದಂತೆ ರಾಮಜ್ಜನಾದ.
ಪ್ರತಿದಿನ ಮಲಗುವಾಗ ರಾಮಜ್ಜ ಈ ಘಟನೆಯನ್ನು ಒಮ್ಮೆಯಾದರು ನೆನೆಯುತ್ತಾನೆ, ಗಾಂಧೀಜಿಯ ಚಿತ್ರನೋಡುವಾಗಲೆಲ್ಲ ಅವನಲ್ಲಿ  ಸ್ಪೂರ್ತಿ ತುಂಬಿ ಹರಿಯುತ್ತದೆ, ದೇಶಭಕ್ತಿ ಉಕ್ಕುತ್ತದೆ.

ಅದೇನೊ ಈ ದಿನ ಗಾಂಧೀಜಿಯ ಚಿತ್ರವನ್ನು ಸೀಮೆ ಎಣ್ಣೆಯ ಸಣ್ಣ ದೀಪದಲ್ಲಿ ನೋಡುವಾಗ ರಾಮಜ್ಜನಿಗೆ ನಾಚಿಕೆ ಮನದಲ್ಲಿ ದುಃಖ ಆವರಿಸಿತು.
'ಬಾಪೂಜಿ ನನ್ನಲ್ಲಿನ ಅಹಂಕಾರವನ್ನು ನೀನು ಮುರಿದೆ, ನೀನು ಮಾಡಿದ ಕೆಲಸವನ್ನೆ ನಾನು ಮಾಡಲು ಹೋಗಿ ವಿಫಲನಾದೆ.  ಹೆಸರು ಇಡುವಲ್ಲಿ  ಜ್ಯಾತ್ಯಾತೀತತೆಯನ್ನು ನೀನು ಮಾಡಿದೆ. ಮುಸ್ಲಿಂ ಆಗಿ ಹುಟ್ಟಿದ ನನಗೆ ರಾಮನೆಂದೆ ಹೆಸರಿಟ್ಟು ಸಫಲನಾದೆ ಆದರೆ ನಾನೊ ಒಬ್ಬ ಹಿಂದು ಹುಡುಗನಿಗೆ ಮುಸ್ಲಿಂ ಹೆಸರಿಟ್ಟು ನಿನ್ನಂತೆ ಆಗಲು ಹೋಗಿ ಮುಗ್ಗರಿಸಿದೆ' ಎಂದು ಮನದಲ್ಲಿ ಗೋಳಾಡಿದರು.

ಅವರ ಮನ ಚಿಂತಿಸುತ್ತಿತ್ತು, ಅದು ಹೇಗೆ ಈ ರೀತಿ ಆಯಿತು, ಮೊದಲಿನಿಂದಲು ಬಸವಣ್ಣನವರ ವಚನಗಳಾಗಲಿ ಅವರ ದ್ಯೇಯವಾಗಲಿ ರಾಮಜ್ಜನಿಗೆ ಪ್ರಿಯ, ಸಮಾಜದಲ್ಲಿ ಜ್ಯಾತಾತೀಯತೆ ಏನೆಂದು ಮೊದಲ ಪ್ರಯೋಗಮಾಡಲು ಹೊರಟವರು ಬಸವಣ್ಣನವರು ಎಂದು ರಾಮಜ್ಜನ ನಂಭಿಕೆ.  ರಾಮಜ್ಜ ಎಂದು ಜಾತಿ ಮತಗಳನ್ನು ನಂಬಿದವರಲ್ಲ. ಅವರ ನಂಬಿದ ದೇವರೆಂದರೆ ಭಾರತಮಾತೆ. ಅವರ ಆದರ್ಶವೆಂದರೆ ಮಹಾತ್ಮಗಾಂಧೀಜಿ. ತಾವು ಚಿಕ್ಕವಯಸಿನಿಂದಲು ಸಾಕಿದ ಬಾಲಕನಿಗೆ ಹೆಸರಿಡುವಾಗ ರಾಮಜ್ಜ ಬೇಕೆಂದೆ ಆದಿಲ್ ಎಂದು ಹೆಸರಿಟ್ಟರು. ಆಧಿಲ್ ಎಂದರೆ ನ್ಯಾಯ ಎಂದು ಅರ್ಥವಂತೆ. ಬಾಲಕನಿಗೆ ಇಟ್ಟ ಹೆಸರು ಸಾಮಾಜಿಕ ನ್ಯಾಯದ ಸಂಕೇತವಾಗಿ ಅವರಿಗೆ ತೋಚಿತ್ತು. ಆದುದ್ದಾದರು ಏನು ?

ಮದ್ಯಾಹ್ನ ನಂಜೆಗೌಡರ ಮಗ ಕುಮಾರ ಗುಟ್ಟಾಗಿ ಹೇಳಿಹೋದ ಸಮಾಚಾರ ಅವರನ್ನು ನಡುಗಿಸಿತ್ತು. ಕಳೆದ ತಿಂಗಳು ಪೂನದಲ್ಲಿ ಆದ ಬಾಂಬ್ ಸ್ಪೋಟದಲ್ಲಿ ಹದಿನೈದು ಜನಕ್ಕಿಂತ ಹೆಚ್ಚು ಮೃತಪಟ್ಟಿದ್ದರು. ನೂರಾರು ಜನ ಗಾಯಗೊಂಡಿದ್ದರು.ಪೂನದ ಪೋಲಿಸರು ಆ ಬಾಂಬ್ ಸ್ಪೋಟ ನಡೆಸಿದವರ ಹೆಜ್ಜೆಯನ್ನು ಹಿಡಿದು ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ  ವಿಧ್ಯಾರ್ಥಿಗಳಲ್ಲಿ ಕೆಲವರನ್ನು ಪೋಲಿಸರ ವಶಕ್ಕೆ ತೆಗೆದುಕೊಂಡಿದ್ದರು. ಅದರಲ್ಲಿ ಒಬ್ಬ ಪ್ರಮುಖ ಎಂದರೆ ಆಧಿಲ್ , ರಾಮಜ್ಜನ ಸಾಕು ಮಗ. ಪೋಲಿಸರ ವಿಚಾರಣೆಯಲ್ಲಿ ಅವನು ಯಾವ ಅಳುಕು ಇಲ್ಲದೆ ತಾನು ಅಪರಾದದಲ್ಲಿ ಭಾಗಿ ಎಂದು ಒಪ್ಪಿಕೊಂಡಿದ್ದ. ಅಷ್ಟೆ ಅಲ್ಲ ಇನ್ನು ಸಹ ಇದೆ ರೀತಿಯ ಸ್ಪೋಟಗಳನ್ನು ನಡೆಸಲು ತಾನು ಉತ್ಸುಕ ತನಗೆ ಯಾರ ಬಲವಂತವು ಇಲ್ಲ ತಾನೆ ಸ್ವಯಂ ಅದರಲ್ಲಿ ಭಾಗವಹಿಸಿದ್ದಾಗಿ, ಅದಕ್ಕಾಗಿ ತಾನು ತರಬೇತಿ ಸಹ ಪಡೆದುಬಂದಿರುವದಾಗಿ ಒಪ್ಪಿಕೊಂಡಿದ್ದ. ಪೋಲಿಸರು ತೀರ ಚಕಿತರಾಗಿದ್ದು ಅವನು ಸ್ವಾತಂತ್ರ್ಯಹೋರಾಟಗಾರ ರಾಮಜ್ಜನ ಸಾಕು ಮಗ ಎಂದು ತಿಳಿದಾಗ ಮಾತ್ರ. ವಿಚಾರಣೆಗಾಗಿ ಅವನನ್ನು ರಾಮಜ್ಜ ಇರುವ ಕಲ್ಕಟ್ಟೆಗೆ ಕರೆದುಕೊಂಡು ಹೋಗಲು ಅವರು ನಿರ್ದರಿಸಿದ್ದರು.

ಬೆಂಗಳೂರಿನ ಪೋಲಿಸ ಕ್ರೈಮ್ ವಿಭಾಗದಲ್ಲಿ ಕೆಲಸಮಾಡುವ ತಿಪಟೂರಿನ ಚಂದ್ರೆಗೌಡ ಕಲ್ಲಟ್ಟೆಯಲ್ಲಿನ ನಂಜೆಗೌಡರ ಚಿಕ್ಕಪ್ಪನ ಮೊಮ್ಮಗ. ಅವನಿಗೆ ಕಲ್ಕಟ್ಟೆಯ ರಾಮಜ್ಜನ ವಿಷಯವೆಲ್ಲ ಮೊದಲಿನಿಂದ ಗೊತ್ತಿದ್ದು ಅಂತವನ ಮಗ ಆಧಿಲ್ ಈ ರೀತಿ ದೇಶದ್ರೋಹಿಯಾಗಿ ಸಿಕ್ಕಿಬಿದ್ದಿರುವುದು ನೋವಾಗಿತ್ತು. ಮರುದಿನ ಅಪರಾದಿಯ ಸಮೇತ ಕಲ್ಕಟ್ಟೆಗೆ ಪೋಲಿಸರು ಬರುವದನ್ನು ನಂಜೆಗೌಡರಿಗೆ ಗುಟ್ಟಾಗಿ ಫೋನಿನಲ್ಲಿ ತಿಳಿಸಿ. ರಾಮಜ್ಜನಿಗೆ ವಿಷಯ ತಿಳಿಸಬೇಕೆಂದು, ಗಾಭರಿಪಡಬೇಡವೆಂದು , ಅವರಿಗೆ ಯಾವುದೆ ತೊಂದರೆಯಾಗದಂತೆ ತಾನು ನೋಡಿಕೊಳ್ಳುವದಾಗಿ ತಿಳಿಸಿದ್ದ. ನಂಜೆಗೌಡರು ತಮ್ಮ ಮಗ ಕುಮಾರನ ಮೂಲಕ ರಾಮಜ್ಜನಿಗೆ ವಿಷಯ ತಿಳಿಸಿದ್ದರು. ಹಾಗಾಗಿ ಮರುದಿನ ಪೋಲಿಸರು ಬರುತ್ತಿರುವುದು ರಾಮಜ್ಜನಿಗೆ ಗೊತ್ತಿತ್ತು. ಆದರೆ ಕಲ್ಕಟ್ಟೆ ಎಂಬ ಹಳ್ಳಿಯಲ್ಲಿ ಬೇರೆ ಒಂದು ನರಪಿಳ್ಳೆಗು ಈ ವಿಷಯ ತಿಳಿಯದಂತೆ ನಂಜೆಗೌಡರು ನೋಡಿಕೊಂಡಿದ್ದರು.


ರಾಮಜ್ಜನ ಮನಸಿನ ನೋವು ಬೇರೆಯೆ ಇತ್ತು. ಅವರಿಗೆ ಪೋಲಿಸರು ಬಂದು ತಮ್ಮನ್ನು ಪ್ರಶ್ನಿಸುವುದು ಅಥವ ತಮ್ಮನ್ನು ಅರೆಷ್ಟ್ ಮಾಡಬಹುದೆಂಬ  ಭಯವೇನಿರಲಿಲ್ಲ. ಸ್ವತಂತ್ರ್ಯ ಹೋರಾಟದಲ್ಲಿ ಬ್ರೀಟೀಷರ ಬೂಟಿನ ಏಟು ತಿಂದು ಗಟ್ಟಿಯಾದ ಮೈ ಅದು. ಅವರಿಗೆ ಜೈಲಿನ ಭಯ ಕಾಡಲಿಲ್ಲ.  ಅಲ್ಲದೆ ಸುದ್ದಿ ತಿಳಿದರೆ ಪೇಪರಿನಲ್ಲಿ ಬಂದು  ತಮ್ಮ ಮರ್ಯಾದೆ ಹೋಗುವದೆಂಬ ಭೀತಿಯು ಅವರಿಗಿರಲಿಲ್ಲ. ಮಾನ ಅಪಮಾನಕ್ಕೆ ಅಂಜುವದನ್ನು ಅವರು ಎಂದೊ ಬಿಟ್ಟಿದ್ದರು. ಸತ್ಯ ಮಾರ್ಗದಲ್ಲಿ ನಡೆಯುವರು ಅವರು. ಸತ್ಯದ ಹಾದಿಯಲ್ಲಿ ಇಂತವೆಲ್ಲ ಇರುತ್ತದೆ ಎಂದು ಬಲ್ಲವರು ಅವರು. ಅವರ ನೋವು ಬೇರೆಯದೆ ಆಗಿತ್ತು. ಜೀವನ ಪೂರ್ತಿ ದೇಶಭಕ್ತನಾಗಿ ಬಾಳಿದ ತಮ್ಮ ಪಾಲಿಗೆ ಇಂತ ಪರೀಕ್ಷೆ ಏಕೆ ಬಂದಿತು ಎನ್ನುವ ನೋವು ಅವರದು.

ಬೆಳೆಸುವಾಗಲೆ ಅವರು ಆಧಿಲ್ ನಲ್ಲಿ ದೇಷಭಕ್ತಿಯನ್ನು ತುಂಬಿದ್ದರು. ಪ್ರೈಮರಿ ಮುಗಿಸುವ ತನಕ ಕಲ್ಕಟ್ಟೆಯಲ್ಲೆ ಓದಿದ ಆಧಿಲ್ ನಂತರ ಎಸ್ ಎಸ್ ಎಲ್ ಸಿ ಗೆ ತಿಪಟೂರಿಗೆ ಹೋದ. ನಂತರ ಬೆಂಗಳೂರು ಸೇರಿದ .  ಅವನು ಕಾಲೇಜಿನಲ್ಲಿ ಮಾಸ್ಟರ್ ಆಗಲಿ ಎಂದು ಅವರ ಮನಸ್ಸು. ಆದರೆ ಅವನ ಆಸಕ್ತಿಗೆ ಅಡ್ಡಿ ಬರಲು ಅವರು ಬಯಸಲಿಲ್ಲ.

ಆದರೆ ಒಮ್ಮೆ ಅವನು ಬಂದಾಗ ತಿಳಿದಿತ್ತು. ಅವರು ಮಾಡಿಕೊಟ್ಟ ರೂಮಿನಲ್ಲಿ ಅವನು ಇರದೆ, ಮುಸ್ಲಿಂ ಹಾಸ್ಟೆಲ್ ನಲ್ಲಿ ಅವನು ಸೇರಿಕೊಂಡಿದ್ದ. ಅವರ ಮನಸಿಗೆ ನೋವಾಗಿತ್ತು. ಆದರೆ ಅವರು ಮುಸ್ಲಿಂ ವಿರೋದಿ ಎಂದೇನು ಅಲ್ಲ. ಸರಿ ಆವನಿಗೆ ಹಿತವೆನಿಸುವಂತೆ ಇರಲಿ ಎಂದು ಸುಮ್ಮನಾಗಿದ್ದರು. ಆದರೆ  ಆಧಿಲ್ ನ ಮನಸು ಈ ರೀತಿಯಾಗಿದೆಯೆಂದು ಅವನು ಒಬ್ಬ ಭಯೋತ್ಪಾದಕನಾದನೆಂದು ಅವರು ಕನಸುಮನಸಿನಲ್ಲಿಯು ಎಣಿಸಿರಲಿಲ್ಲ.

ಮಂಚದಲ್ಲಿ ಮಲಗಿದ್ದ ರಾಮಜ್ಜ ನಿದಾನಕ್ಕೆ ಎದ್ದು ಬಂದು ಕಿಟಕಿ ಹತ್ತಿರ ನಿಂತು ಹೊರಗೆ ದೃಷ್ಟಿಸಿದರು. ಮಳೆ ಇನ್ನು ಜೋರಾಗಿ ಸುರಿಯುತ್ತಲೆ ಇತ್ತು.  ಅಗಾಗ್ಯೆ ಮಿಂಚುತ್ತಿದ್ದು ಕಿಟಕಿಯಲ್ಲಿ ನಿಂತ ಅವರ ಮುಖದ ಮೇಲೆ ಬೆಳಕು ಬೀಳುತ್ತಿದ್ದು , ಯಾರಾದರು ನೋಡಿದರು , ದುಃಖ ವಿಷಾದದಿಂದ ತುಂಬಿದ ಅವರ ಮುಖ ಕಾಣುತ್ತಿತ್ತು.

ರಾಮಜ್ಜನ ಮನ ಯೋಚಿಸುತ್ತಿತ್ತು. ಒಬ್ಬ ಭಯೋತ್ಪಾದಕನಾಗಲು ಅವನ ಜಾತಿಯಲ್ಲಿ ಹುಟ್ಟಿರಬೇಕೆ ಅಥವ ತಾನು ಆ ಜಾತಿಯವನೆಂದು ತಿಳಿದರೆ ಸಾಕ. ಆಧಿಲ್ ಗೆ ತಾನು ಹುಟ್ಟಿನಿಂದ ಯಾವ ಜಾತಿ ಎಂದು ಗೊತ್ತಿಲ್ಲ. ಆದರೆ ತಾನು ಆಧಿಲ್ ಎಂದು ಹೆಸರನ್ನು ಇಟ್ಟಿದು ಅವನಿಗೆ ತಾನು ಮುಸ್ಲಿಂ ಎಂಬ ಭಾವನೆ ಬರಲು ಕಾರಣವಾಯಿತೆ.  ಒಬ್ಬನಿಗೆ ಭಯೋತ್ಪಾದಕನಾಗಲು ತಾನು ಆ ಜಾತಿಯವನೆಂಬ ಭಾವನೆ ಮಾತ್ರ ಸಾಕೆ. ಅಥವ ಒಬ್ಬ ಭಯೋತ್ಲಾದಕ ಮನಸಿನವನು ಯಾವುದೆ ಜಾತಿಯಲ್ಲಿ ಹುಟ್ಟಿದರು ಆ ಜಾತಿಯ ಭಯೋತ್ಪಾದಕನಾಗುವನೆ, ಅವರ ಮನ ಏನೇನೊ ಯೋಚಿಸುತ್ತಿತ್ತು. ತಾನು ಒಂದು ವೇಳೆ ಆಧಿಲ್ ಎಂದು ಹೆಸರಿಡುವ ಬದಲಿಗೆ, ಲಕ್ಷ್ಮಣನೆಂದೊ ಇನ್ನೆನೊ ಇಟ್ಟಿದ್ದರೆ ಅವನು ಹಿಂದೂ ಭಯೋತ್ಪಾದಕನಾಗುತ್ತಿದ್ದನೆ. ಚಿಂತಿಸಿ  ಚಿಂತಿಸಿ     ರಾಮಜ್ಜನ ಮನ ಹುಚ್ಚೆದ್ದು ಹೋಗಿತ್ತು.

ಹೊರಗೆ ಯಾರೊ ಬಾಗಿಲು ತಟ್ಟಿದರು. ರಾಮಜ್ಜ ಯಾರು ಈ ಸಮಯದಲ್ಲಿ ಎನ್ನುತ್ತ ನಿದಾನಕ್ಕೆ ಬಂದು ಬಾಗಿಲು ತೆರೆದು ಹೊರಬಂದರು
ಊರ ಪಟೇಲರು ನಂಜೆಗೌಡರು, ಅವರ ಮಗ ಕುಮಾರ ,ಮೇಷ್ಟ್ರು ಸದಾಶಿವಯ್ಯನವರು, ಶೇಷಪ್ಪ ಹೀಗೆ ಐದಾರು ಜನ ಗುಂಪಿನಲ್ಲಿದ್ದರು.  ಹೊರಬಂದ ರಾಮಜ್ಜನಿಗೆ ನೆನಪಿಗೆ ಬಂದಿತು , ಸಂಜೆ ಶೇಷಪ್ಪ ಕೆರೆಕೋಡಿ ಬಿದ್ದ ವಿಷಯ ತಿಳಿಸಿದ್ದರು. ತಾವು ಏನೊ ಆತಂಕದಲ್ಲಿ ಬಂದಿದ್ದು ನೆನಪಾಯಿತು. ಬಹುಷಃ ನಾಳಿನ ಪೂಜೆಯ ಮಾತಿಗಾಗಿ ಬಂದರೋ ಏನೊ ,ಆದರೆ ತನಗೆ ಅದೇನೊ ಏಕೊ ಆಸಕ್ತಿಯೆ ಇಲ್ಲ.   
'ರಾಮಜ್ಜ ವಿಷಯ ತಿಳಿಯಿತ' ಸಪ್ಪೆಯಾಗಿ ನುಡಿದರು ಶೇಷಪ್ಪ.
'ಈಗ ಮಳೆ ಮತ್ತೆ ಜೋರಾಯ್ತಲ್ಲ,  ನೀರಿನ ರಬಸ ಜಾಸ್ತಿಯಾಯ್ತು ಅನ್ನಿಸುತೆ, ಅಲ್ಲದೆ ಮೇಲೆ ಮೂರ್ನಾಲ್ಕು ಹಳ್ಳಿಗಳಲ್ಲಿ ಬಾರಿ ಮಳೆ ನಿನ್ನೆಯಿಂದಲೆ, ಹಾಗಾಗಿ ನಮ್ಮೂರ ಕೆರೆ ಏರಿ ಒಡೆದು ಹೋಗಿದೆ, ಆ ರಬಸಕ್ಕೆ ಕೆರೆಯ ಕೂಡಿ ಸಹ ಕಿತ್ತು ಕೊಚ್ಚಿ ಹೋಗಿದೆ. ಕೆರೆ ಕೆಳಗಿನ ಬೆಳೆಯೆಲ್ಲ ಈ ಬಾರಿ ಹೋದಂತೆಯೆ ಏನು ಕೈಗೆ ಹತ್ತಲ್ಲ. ತಗ್ಗಿನಲ್ಲಿ ಇತ್ತಲ್ಲ ನಮ್ಮ ಶಾಲೆ ಅದು ನೀರಿನಿಂದ ತುಂಬಿ ಮುಕ್ಕಾಲು ಮುಳುಗಿದೆ'
'ಆ,,,'  ರಾಮಜ್ಜನ ಕೊರಳಿನಿಂದ ದುಃಖದ ಅಘಾತದ ದ್ವನಿ ಹೊರಟಿತು. ದ್ವನಿ ಕಟ್ಟಿದಾಂತಾಗಿ ಎನು ಮಾತಾನಾಡಲಿಲ್ಲ.
ಎಡಎದೆಯ ಪಕ್ಕದಲ್ಲೆಲ್ಲೊ ಒಂದು  ಹಿಂಡಿದ ನೋವಿನ ಅನುಭವವಾಯ್ತು.
'ಸೈ ಈಗ ಮತ್ತೇನು ಮಾಡುವಂತಿಲ್ಲ, ಈ ಕತ್ತಲಿನಲ್ಲಿ, ಕರೆಂಟ್ ಬೇರೆ ಇಲ್ಲ, ಏನಿದ್ದರು ಬೆಳಗ್ಗೆ ಹೋಗಿ ನೋಡಿಕೊಳ್ಳಬೇಕಷ್ಟೆ ' ಎಂದರು ನಂಜೇಗೌಡರು. ಎಲ್ಲರು ಸಪ್ಪಗೆ ಹೊರಟರು. ರಾಮಜ್ಜ ಏನು ಮಾತನಾಡಲಿಲ್ಲ. ಅವರ ಜೀವಮಾನದ ಕನಸೆಲ್ಲ ಒಂದೆ ದಿನದಲ್ಲಿ ಕೊಚ್ಚಿಹೋಗಿತ್ತು. ಎಲ್ಲರು ಹೊರಟ ನಂತರವು ಯಾರೊ ಇರುವದನ್ನು ಗಮನಿಸಿ ಪಕ್ಕಕ್ಕೆ ನೋಡಿದರು. ಆಸ್ಮಾ ಒಬ್ಬಳೆ ಅವರ ಪಕ್ಕ ನಿಂತಿದ್ದಳು.
'ಅಜ್ಜ ಇದೇಕೆ ಹೀಗೆ ಆಯ್ತು,  ಇದು ಏಕೊ ಅಶುಭ ಅನ್ನಿಸುತ್ತಿದೆ ಅಲ್ವ'  ದುಃಖದ ದ್ವನಿಯಲ್ಲಿ ಕೇಳಿದಳು.
'ಮಗು ಈ ಮಳೆಯಲ್ಲಿ ಈ ಕತ್ತಲೆಯಲ್ಲಿ ನೀನೊಬ್ಬಳೆ ಏಕಮ್ಮ ಎದ್ದು ಬಂದೆ, ಹೋಗಿ ಮಲಗು ಹೋಗು ಕಂದ, ಶುಭವೊ ಅಶುಭವೊ ಬೆಳಗ್ಗೆ ನೋಡೋಣಾ' ಎನ್ನುತ ಅವಳ ತಲೆ ಸವರಿದರು.  ಮಳೆಯಲ್ಲಿ ಕೊಡೆ ಹಿಡಿದ ಆಸ್ಮಾ ನಿದಾನವಾಗಿ ಹೊರಟಂತೆ ರಾಮಜ್ಜನ ಮನ ಚಿಂತಿಸಿತು.  ಈ ಮಗುವನ್ನು ನನ್ನ ಸಾಕು ಮಗ ಆಧಿಲ್ ಗೆ ಮದುವೆ ಮಾಡಿಸಬೇಕು ಅಂತ ಇತ್ತು ,  ಆ ಅಸೆಯು ಈ ದಿನ ಮಳೆಯಲ್ಲಿ ಕೊಚ್ಚಿ ಹೋಗುತ್ತಿರುವಂತೆ ಕಾಣಿಸುತ್ತಿದೆ ಅಂದುಕೊಂಡರು.  ಬಾಗಿಲು ಹಾಕಿ ಚಿಲುಕ ಸರಿ ಪಡಿಸಿ ರೂಮಿನೊಳಗೆ ಬಂದಂತೆ ಅದೇನೊ ಸೀಮೆ ಎಣ್ಣೆ ದೀಪದಲ್ಲಿದ್ದ ಎಣ್ಣೆ ತೀರಿಹೋಗಿ ಆರಿಹೋಯಿತು , ಅದರ ವಾಸನೆ ರೂಮನ್ನೆಲ್ಲ ತುಂಬಿಕೊಂಡಿತು.

ಕಿಟಕಿಯ ಕಂಬಿ ಹಿಡಿದು ನಿಂತರು ರಾಮಜ್ಜ. ಇದೆಂತ ದಿನವಾಯ್ತು ತನಗೆ. ಅವರು ಚಿಂತಿಸಿದರು. ತನ್ನ ಜೀವಮಾನದ ಹೋರಾಟವೆಲ್ಲ ಒಂದು ದಿನದಲ್ಲಿ ಕೊಚ್ಚಿಹೋಯಿತು. ತನ್ನ ಆದರ್ಶವೆಲ್ಲ  ಅಧಿಲ್ ನ ಕ್ರಿಯೆಯೊಡನೆ ಕರಗಿ ಹೋಗಿತ್ತು. ತನ್ನ ದೇಶಭಕ್ತಿಯೆಲ್ಲ  ಆಧಿಲ್ ನ ದೇಶದ್ರೋಹವೆಂಬ ಮಳೆಯಲ್ಲಿ ಕೊಚ್ಚಿ ಹೋಗಿತ್ತು. ತಾನ ಜ್ಯಾತ್ಯಾತೀತತೆಯೆಲ್ಲ ಬುಡಕಳಚಿದ ಮರದಂತೆ ನೆಲಕ್ಕೆ ಒರಗಿತ್ತು. ಅಧಿಲ್ ಹಾಗು ಆಸ್ಮಾ ಮದುವೆಮಾಡಿಸಿ ಸಂತಸ ಪಡಬೇಕೆಂದಿದ್ದ ಕನಸು ಕರಗಿ ಹೋಯ್ತು. ತನ್ನ ಹಳ್ಳಿಯ ಜನರ ಜೀವನಾದಾರವಾಗಿದ್ದ ತಾನು ಕಟ್ಟಿಸಿದ ಕನಸಿನ ಒಗಟಿ ಕೆರೆ ಒಂದು ದೊಡ್ಡ ಮಳೆಗೆ ಒಡೆದು, ತಾನು ಹೋರಾಡಿ ಪ್ರಾರಂಬಿಸಿದ ಪ್ರೈಮರಿ ಶಾಲೆಯನ್ನು ಮುಳುಗಿಸಿತ್ತು. ತನಗೆ ಇನ್ನೇನು ಉಳಿದಿಲ್ಲ. ನಾಳೆ ಎಂಬುದು ತನಗೆ ಇಲ್ಲ. ಮತ್ತೊಮ್ಮೆ ಎದೆಯಲ್ಲಿ ಎಂತದೋ ಹಿಂಡಿದಂತ ನೋವು  

ಮಳೆ ಮತ್ತೆ ಜೋರಾಗುವಂತೆ ಕಾಣಿಸಿತು. ದೊಡ್ಡದಾದ ಮಿಂಚೊಂದು ಅಕಾಶವನ್ನೆಲ್ಲ ತುಂಬಿತು. ಹಿಂದೆಯೆ ಆರ್ಭಟಿಸಿದ ಗುಡುಗು ಅವರ ಎದೆಯನ್ನು ನಡುಗಿಸಿತು. ಖಂಡೀತ ಇದು ಸಿಡಿಲು ಎಲ್ಲಿಗೊ ಹೊಡೆದಿದೆ ಅನ್ನಿಸಿತು. ಕತ್ತಲಿನಲ್ಲಿ ಸುರಿಯುತ್ತಿರುವ ಮಳೆಯನ್ನೆ ನೋಡುತ್ತಿರುವಾಗ ಆಕಾಶದಲ್ಲಿ ಹೆಣ್ಣೊಬ್ಬಳ ಮುಖ ಕಾಣಿಸಿದಂತೆ ಆಗಿ ಆಕೆ ರಾಮಜ್ಜನನ್ನು ಕೇಳುತ್ತಿದ್ದಳು.

'ನನ್ನ ಮಗನ ಭವಿಷ್ಯವನ್ನು ಉಜ್ವಲ ಮಾಡುವೆನೆಂದು ಹೇಳಿ ನನ್ನ ಮಗನನ್ನು ಕರೆದೋಯ್ದೆಯಲ್ಲ ನನ್ನ ಮಗ ಎಲ್ಲಿ '  ರಾಮಜ್ಜ ಬೆಚ್ಚಿ ಬಿದ್ದರು. ಕತ್ತಲಿನಲ್ಲಿ ಆ ಅಮಾಯಕ ಗುಡ್ಡಗಾಡಿನ ಹೆಣ್ಣಿನ ಮುಖ ನೆನಪಿಗೆ ಬಂದಿತು.

‘ಹೌದಲ್ಲ ಈಗ ಅವಳಿಗೇನು ಹೇಳುವುದು. ಏನಂತ ಉತ್ತರ ಹೇಳುವುದು'

ರಾಮಜ್ಜನ ಮನ ನೆನೆಯಿತು. ಸುಮಾರು ಇಪ್ಪತು ವರ್ಷಗಳ ಮಾತಿರಬಹುದು. ಅವರೊಮ್ಮೆ ಸ್ನೇಹಿತ ಪಾಟೀಲರನ್ನು ನೋಡಲು ಉತ್ತರ ಕರ್ನಾಟಕ ಬೀಧರ್ ಜಿಲ್ಲೆಯ ಬಾಲ್ಕಿ ಸಮೀಪದ ಒಂದು ಹಳ್ಳಿಗೆ ಹೋಗಿದ್ದರು. ಅಲ್ಲಿಂದ ಹಿಂದಿರುವಾಗ ಬಾಲ್ಕಿ ಬಸ್ ನಿಲ್ದಾಣದ ಹತ್ತಿರ ಒಂದು ದೃಷ್ಯ ಒಂದು ಕಂಡರು.     ಹಳ್ಳಿಯಿಂದ ಬಂದಿದ್ದ ಗುಡ್ಡಗಾಡಿನ ಪ್ರದೇಶದ ಹಿಂದುಳಿದ ವರ್ಗಕ್ಕೆ ಸೇರಿದ ಒಂದು ಹೆಣ್ಣು ತನ್ನ ನಾಲಕ್ಕು ವರುಷದ ಮಗನನ್ನೆ ಮಾರಲು ಪ್ರಯತ್ನಿಸಿದ್ದಳು. ಸುತ್ತ ಮುತ್ತಲ ಜನರೆಲ್ಲ ಸೇರಿ ಅಕೆಯನ್ನು ಹಿಡಿದು ಪೋಲಿಸರಿಗೆ ಒಪ್ಪಿಸಲು ಪ್ರಯತ್ನಿಸುವಾಗಲೆ ರಾಮಜ್ಜ ಆಕೆಯನ್ನು ಕಂಡಿದ್ದರು. ಆಕೆಯ ಮುಖದಲ್ಲಿ ಎದ್ದು ಕಾಣುತ್ತಿದ್ದ ಬಡತನ, ಅಜ್ಞಾನ. ವಿದ್ಯೆ ಇಲ್ಲದ ಆವಳ ನಡಾವಳಿಕೆ ಎಲ್ಲ ಅವರ ಮನಸನ್ನು ಕಲಕಿತ್ತು. ಅವರು ಜನರೆನ್ನಲ್ಲ ಹೇಗೊ ಸಮಾದಾನ ಪಡಿಸಿ ಕಳಿಸಿ . ನಂತರ ಆಕೆಯನ್ನು ಮಗುವನ್ನು ಯಾವ ಕಾರಣಕ್ಕೆ ಮಾರುತ್ತಿದ್ದೀಯ ಎಂದು ಕೇಳಿದರು
ಆಕೆಯಾದರೊ ' ಬುದ್ದಿ ಮಗುವನ್ನು ಮಾರಿದರೆ, ನಮಗೆ ಒಂದು ವಾರಕ್ಕೆ ಆಗುವಷ್ಟು ಊಟ ಸಿಗಬಹುದು ಬುದ್ದಿ, ಆದರೆ ಅದು ಮುಖ್ಯವಲ್ಲ , ಆ ಮಗು ನನ್ನ ಹತ್ತಿರವೆ ಇದ್ದರೆ ಹಸಿವಿನಿಂದಲೆ ಸತ್ತು ಹೋಗುತ್ತೆ. ಅದರ ಬದಲಾಗಿ ಮಾರಿದರೆ ಕಷ್ಟವೊ ಸುಖವೊ ಎಲ್ಲೊ ಮಗುವಾದರು ಬದುಕು ಕಂಡು ಕೊಳ್ಳುತದೆ, ಕಡೆಗೆ ಕೊಂಡವರ ಮನೆಯ ಆಳಾಗಿದ್ದರು ಪರವಾಗಿಲ್ಲ ಆ ಮಗುವಿನ ಹಸಿವು ನೀಗುತ್ತದೆ' ಎಂದು ಗೋಳಾಡಿದಳು.

ಅವರ ಮನ ಏನನ್ನೊ ಚಿಂತಿಸುತ್ತಿತ್ತು. ಈ  ಎಲ್ಲ ಬಡ ಜನರ   ಜೀವನ ಸುಖಮಯ ಮಾಡುವಷ್ಟು ಶಕ್ತಿ ನನ್ನಲ್ಲಿಲ್ಲ. ಕಡೆಗೆ ಈ ಮಗುವನ್ನಾದರು ಏಕೆ ತಾನು ಕರೆದೋಯ್ದು ಸಾಕಬಾರದು ಎನ್ನುವ ಯೋಚನೆ ಅವರ ಮನವನ್ನು ಹೊಕ್ಕಿತ್ತು. ಆ ಮಹಿಳೆಯನ್ನು ಓಲೈಸಿದರು.  
'ನೋಡಮ್ಮ ನಿನ್ನ ಮಗುವನ್ನು ನಾನು ಜೀತಕ್ಕೆ ಕರೆದೊಯ್ಯುತ್ತಿಲ್ಲ ನನ್ನ ಮಗನನ್ನಾಗಿ ಸಾಕ್ತೀನಿ. ಮುಂದೆ ಸಾವಿರ ಜನರಿಗೆ ಆದರ್ಶವಾಗಿ ಬದುಕುವಂತೆ ನಿನ್ನ ಮಗನ ಬದುಕು ರೂಪಿಸುತ್ತೀನಿ, ನೀನು ನಿಶ್ಚಿಂತೆಯಾಗಿರು' ಎಂದರು. ಆಕೆ ಬೇಡವೆನ್ನುತ್ತಿದ್ದರು ಕೇಳದೆ ಆಕೆಗೆ ತಮ್ಮ ಕೈಲಿದ್ದ ಸಾವಿರ ರೂಗಳನ್ನು ಕೊಟ್ಟರು. ಅದು ಆಕೆಗು ಅನಿರೀಕ್ಷಿತ.
'ಬುದ್ದಿ ನಿಮ್ಮಂತವರ ಹತ್ತಿರವಿದ್ದರೆ ನನ್ನ ಮಗನ ಬದುಕು ಬಂಗಾರವಾಗುತ್ತೆ , ಕರೆದು ಹೋಗಿ ಬಿಡಿ' ಎನ್ನುತ್ತ ಮಗುವನ್ನು ಮುದ್ದಿಸಿ ಹೊರಟು ಹೋದಳು. ಲೋಕದ ಅರಿವೆ ಇಲ್ಲದ ಚಿಕ್ಕಮಗು. ತನ್ನ ತಾಯಿಯನ್ನು ಬಿಟ್ಟು ರಾಮಜ್ಜರ ಕೈ ಹಿದಿದು ಅವರ ಹಳ್ಳಿಗೆ ಬಂದಿತ್ತು.

ಹಳ್ಳಿಯ ಜನರಿಗೆ ಆಶ್ಚರ್ಯ. ಎಲ್ಲಿಂದಲೊ ಮಗುವನ್ನು ಕರೆತಂದ ರಾಮಜ್ಜನನ್ನು ಅವರು ಕಂಡು ಚಕಿತರಾದರು. ಕೆಲವರಾದರು ಹಿಂದೆ ಆಡಿಕೊಂಡರು. ಮದುವೆ ಆಗಲ್ಲ ಎನ್ನುತ್ತಲೆ ಎಲ್ಲೊ ಏನೊ ವ್ಯವಹಾರ ನಡೆಸಿದ್ದಾರೆ ಅದು ಅವರದೆ ಮಗು ಎಂದು ಅಪಹಾಸ್ಯವು ಮಾಡಿದರು. ರಾಮಜ್ಜ ಅದಕ್ಕೆಲ್ಲ ತಲೆಕೆಡಸಿಕೊಳ್ಳಲೆ ಇಲ್ಲ.  ಮಗುವಿನ ಊಟ ಆಟ ಲಾಲನೆಪಾಲನೆ ಎಲ್ಲವನ್ನು ಅವರೆ ನಡೆಸಿದರು. ಶಾಲೆಗೆ ಸೇರಿಸುವ ಸಮಯ ಬಂದಾಗ , ತಮ್ಮ ಜೀವನದ ಆದರ್ಶವನ್ನು ನೆನೆ  ಹಿಂದು ಮಗುವಿಗೆ ಆಧಿಲ್ ಎಂಬ ಮುಸ್ಲಿಂ ಹೆಸರನ್ನು ಇಟ್ಟರು.  ಆ ಹೆಸರಿನ ಅರ್ಥವು ಅವರಿಗೆ ತಿಳಿದಿತ್ತು. ‘ನ್ಯಾಯ’ ಎಂಬ ಅರ್ಥ ಕೊಡುವ ಹೆಸರದು. ಆ ಮಗುವೆ ಬೆಳೆದು ಅವರ ನಿರೀಕ್ಷೆಯನ್ನೆಲ್ಲ ಬುಡಮೇಲು ಮಾಡಿ ಈಗ ಭಯೋತ್ಪಾದಕರ ಗುಂಪು ಸೇರಿದ್ದ.

ಅವರು ಚಿಂತಿಸುತ್ತಿದ್ದರು. ತಾನು ಎಲ್ಲಿ ತಪ್ಪಿದೆ ಎಂದು. ತನ್ನ ಆದರ್ಶದಲ್ಲಿ ಎಲ್ಲಿ ತಪ್ಪು ಆಯಿತು. ಎಂಬ ಕಸಿವಿಸಿ ಅವರಲ್ಲಿ ತುಂಬಿತ್ತು.

ರಾಮಜ್ಜ ತಮ್ಮ ಜೀವಮಾನದಲ್ಲಿ ಎಂದಿಗು ಯಾರಮೇಲು ಕೋಪಮಾಡಿಕೊಂಡವರೆ ಅಲ್ಲ. ಅವರಿಗೆ ಇದ್ದಕ್ಕಿದಂತೆ ಹೊರಗೆ ಸುರಿಯುತ್ತಿರುವ ಮಳೆಯ ಮೇಲೆ ಕೋಪ ಉಕ್ಕಿತು. ಈ ಮಳೆಯೆ ತಮ್ಮ ಜೀವನವನ್ನು ಕೊಚ್ಚಿ ನಾಶಪಡಿಸಿತು ಎಂಬ ಭಾವ. ಕಿಟಕಿಯನ್ನು ಪಟ್ ಎಂದು ಮುಚ್ಚಿಬಿಟ್ಟರು. ರೂಮಿನ ಒಳಗೆ ಕಗ್ಗಲ್ಲತೆ. ಕತ್ತಲೆಯಲ್ಲಿಗೆ ಹೆಜ್ಜೆ ಇಡುತ್ತ ಮಂಚದ ಬಳಿ ಹೋಗಿ, ಮಂಚವನ್ನು ಕೈಯಲ್ಲಿ ಮುಟ್ಟುತ್ತ ಹಾಗೆ ಉರಳಿಕೊಂಡರು. ಮಳೆಯಲ್ಲಿ ನೆನೆದಿದ್ದು ಅವರನ್ನು ಚಳಿಯಿಂದ ನಡುಗಿಸುತ್ತಿತ್ತು. ಕಣ್ಣು ಮುಚ್ಚಿಕೊಂಡರು. ಅದೇಕೊ  ಮಳೆಯಲ್ಲಿ ಕೊಚ್ಚಿಹೋದ ಕೆರೆಯ ನೀರೆಲ್ಲ  ಅವರ ರೂಮಿನಲ್ಲಿ ತುಂಬಿ ಅವರು   ನೀರಿನಲ್ಲಿ ಮುಳುಗುತ್ತಿರುವಂತೆ ಭ್ರಮೆ ಅವರನ್ನು ತುಂಬಿಕೊಂಡಿತು. ಎರಡು ಕೈಗಳನ್ನು ಎದೆಯ ಮೇಲೆ ತಂದು ಒತ್ತಿಕೊಂಡರು.  

ರಾಮಜ್ಜನ ಮನಸಿಗೆ ಮರುದಿನದ ಬೆಳಗಿನ ನೆನಪು ಬಂದಿತು, ಬೆಳಗ್ಗೆ ಏಳುವಾಗಲೆ ಬೆಂಗಳೂರಿನಿಂದ ಪೋಲಿಸರು ಅಧಿಲ್ ನ ಜೊತೆಗೆ ಪರಿಶೀಲನಗೆ,  ವಿಚಾರಿಸಲು ಬರುತ್ತಾರೆ.  ಅಳು ಉಕ್ಕಿ ಬಂದಿತು.  
'ಬರಿ ಪೋಲಿಸರೆ ಬಂದು ಕುಂಡಿಯ ಮೇಲೆ ಒದ್ದು ಎಲ್ಲರೆದುರು ಜೈಲಿಗೆ ಎಳೆದೋಯ್ದರು ದುಃಖವಾಗುತ್ತಿರಲಿಲ್ಲ.  ಚಿಕ್ಕ ವಯಸಿನಿಂದ ಬೆಳೆಸಿದ ಸಾಕು ಮಗ ದೇಶದ್ರೋಹಿಯಾಗಿ ಭಯೋತ್ಪಾದಕನಾಗಿ ಬಂದು   ಎದುರಿನಲ್ಲಿ ನಿಲ್ಲಲ್ಲಿದ್ದ.  ಅಂತವನ ಮುಖವನ್ನು ಹೇಗೆ ನೋಡುವುದು.'

ಜೀವನ ಪೂರ್ತಿಯ ದೇಶಪ್ರೇಮ ಸಾತ್ವಿಕತೆ ಶ್ರದ್ದೆ ಎಲ್ಲವು ಅವರನ್ನು ಹೆದರಿಸುತ್ತಿದ್ದವು. ಮನಸಿನಲ್ಲಿಯೆ ಬೇಡಿಕೊಂಡರು.
'ಹೇಗಾದರು ಸರಿಯೆ ನಾಳೆ ಆ ದೇಶದ್ರೋಹಿಯ ಮುಖ ನೋಡುವದು ತಪ್ಪಲಿ'  
ಹೊರಗೆ ಮಳೆ ನಿಂತುಹೋಗಿ ಅಲ್ಲಲ್ಲಿ ನೀರು ತೊಟ್ಟಿಡುವ ಶಬ್ದ ಮಾತ್ರ ಕೇಳುತ್ತಿತ್ತು
…..................................................................................

ಬೆಳಗ್ಗೆ ಏಳುವಾಗಲೆ ಆಸ್ಮಾ ಅಂದುಕೊಂಡಳು 'ಪಾಪ ರಾಮಜ್ಜ ರಾತ್ರಿ ಸಹ ಊಟಮಾಡಲಿಲ್ಲ. ಒಂದು ಕಾಫಿಯನ್ನಾದರು ಕೊಡೋಣ' . ಕಾಫಿಯ ಲೋಟವನ್ನು ಹಿಡಿದು ಅಜ್ಜನ ಮನೆಗೆ ಬಂದಳು. ಏಕೊ ಬಾಗಿಲೆ ತೆರೆದಿಲ್ಲ. ಕಿಟಕಿಗಳು ಎಲ್ಲವು ಮುಚ್ಚಿವೆ.
'ರಾಮಜ್ಜ ರಾಮಜ್ಜ' ಹಲವು ಸಾರಿ ಕೂಗಿದಳು. ಒಳಗಿನಿಂದ ಯಾವ ಪ್ರತಿಕ್ರಿಯೆಯು ಎಲ್ಲ.

ರಾತ್ರಿ ಮಳೆ ಬಿದ್ದಿದ್ದೆ ಸುಳ್ಳೇನೊ ಎನ್ನುವಂತೆ ಬೆಳಗಿನ ಸೂರ್ಯ ಪ್ರಜ್ವಲಿಸುತ್ತಿದ್ದ. ರಸ್ತೆಯಲ್ಲಿ ನೀರಿನ ಜೊತೆ ಹರಿದ ಸಮಸ್ತ ಕೊಳಕು ಅಲ್ಲಲ್ಲಿ ನಿಂತಿತ್ತು. ರಾಮಜ್ಜನ ಮನೆ ಮುಂದೆ ಊರಿನ ಜನರೆಲ್ಲ ನೆರೆದಿದ್ದರು. ಏನು ಕೂಗಿದರು ಬಾಗಿಲು ತೆರೆಯದಿದ್ದಾಗ ನಂಜೆಗೌಡರು ಕಡೆಗೆ ಅಂಗಡಿ ಹುಡುಗ ಹುಸೇನನಿಗೆ ಹೇಳಿದರು
'ಮನೆ ಮೇಲೆ ಹತ್ತಿ, ಹೆಂಚುತೆಗೆದು, ಹಗ್ಗ ಕಟ್ಟಿ ಒಳಗೆ ಇಳಿ, ಒಳಗಿನಿಂದ ಬಂದು ಮುಂಬಾಗಿಲು ತೆಗಿ' ಎಂದು

ಹುಸೇನ್ ಅದೆ ರೀತಿ ಒಳಹೋಗಿ ಬಾಗಿಲು ತೆರೆದಾಗ ನಂಜೆಗೌಡರು ಶೇಷಪ್ಪ ಮುಂತಾದ ಊರ ಪ್ರಮುಖರೆಲ್ಲ ಮನೆಯ ಒಳಹೋದರು.   ಹಜಾರದಲ್ಲಿ ನೀರು ನಿಂತಿತ್ತು ರಾತ್ರಿ ಮಳೆಯದು. ರೂಮಿಗೆ  ಹೋದರು. ರಾಮಜ್ಜ ಎರಡು ಕೈಗಳನ್ನು ಎದೆಯ ಮೇಲೆ ಮಡಚಿ ಮಲಗಿದ್ದರು.
ಹತ್ತಿರ ಹೋಗಿ ಗೌಡರು ಕೂಗಿದರು
'ರಾಮಜ್ಜ ರಾಮಜ್ಜ ' ಯಾವ ಪ್ರತಿಕ್ರಿಯೆಯು ಇಲ್ಲ. ಕೈ ಮುಟ್ಟಿದರು. ತಣ್ಣಗಿತ್ತು. ಅನುಮಾನದಿಂದ ಕೈಯನ್ನು ಮುಖದ ಹತ್ತಿರ ಹಿಡಿದರು ಗೌಡರು, ರಾಮಜ್ಜ ಉಸಿರಾಡುತ್ತಿರಲಿಲ್ಲ, ಸತ್ತು ಹೋಗಿದ್ದರು.
ಮಿಂಚಿನಂತೆ ಎಲ್ಲಡೆ ಸುದ್ದಿ ಹಬ್ಬಿತ್ತು. ರಾತ್ರಿ  ರಾಮಜ್ಜ ಸತ್ತುಹೋಗಿದ್ದಾರೆ. ರಾಮಜ್ಜ ಬಂದು ಬಳಗವಾಗಲಿ ಯಾರು ಇರಲಿಲ್ಲ. ಬೆಂಗಳೂರಿನಲ್ಲಿರುವ ಅವರ ಸಾಕು ಮಗನಿಗೆ ಸುದ್ದಿ ಕಳಿಸಬೇಕೆಂದು ಕೆಲವರು ಅಂದುಕೊಂಡರು.

ನಂಜೆಗೌಡರಿಗೆ ಮನಸಿನಲ್ಲೆ ಎಂತದೊ ಅನುಮಾನ ಕಾಡಿತ್ತು. ರಾಮಜ್ಜನದು ವಯಸ್ಸು ನೋಡಿದರೆ ಸಹಜ ಸಾವಿನಂತೆ ಕಾಣುತ್ತಿದೆ ಆದರೆ ಇದು ನಿಜಕ್ಕು ಸಹಜ ಸಾವೆ ಅಥವ ತಮ್ಮ ಸಾದನೆಯೆಲ್ಲ ಮಣ್ಣುಪಾಲದ ದುಃಖದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡರೆ ಎಂಬ ಭಾವ ಅವರನ್ನು ಕಾಡುತ್ತಿತ್ತು. ಊರಿನ ಜನರೆಲ್ಲ ನೆರೆದು ದುಃಖ ಪಡುತ್ತಿರುವಂತೆ. ರಾಮಜ್ಜನ ಮನೆಯ ಮುಂದೆ ಬೆಂಗಳೂರಿನಿಂದ ಬಂದ ಪೋಲಿಸರ ತಂಡ  ಆಧೀಲ್ ಎಂಬ ಭಯೋತ್ಪಾದಕನ ಜೊತೆ ವ್ಯಾನಿನಲ್ಲಿ ಬಂದು ಇಳಿಯಿತು.

-ಮುಗಿಯಿತು

Rating
No votes yet

Comments

partha1059

Sun, 01/20/2013 - 08:51

ಇದೊ0ದು ಸಣಕತೆ :) , ದೇಶಭಕ್ತಿ ದೇಶದ್ರೋಹದ‌ ಹಿನ್ನಲೆ , ಕತೆಯ‌ ಹ0ದರ‌ ಕೊಟ್ಟು ಬರೆಯಲು ಹೇಳಿದವರು ರಘು ಎಸ್ ಪಿ ಸ0ಪದಿಗರು ಬರೆದವನು ಮಾತ್ರ ನಾನು. ಹಿ0ದೆ ಬರೆದಿದ್ದು ಕಾರಣಗಳಿ0ದ ಪ್ರಕಟಿಸಿರಲಿಲ್ಲ

ಆಶ್ಚರ್ಯವೇನಿಲ್ಲ. ಒಂದು ಅನಾಥ ಮಗು ಹಿಂದೂ ಮನೆಯಲ್ಲಿ ಬೆಳೆದರೆ ಹಿಂದೂ, ಮುಸ್ಲಿಮ್ ಮನೆಯಲ್ಲಿ ಬೆಳೆದರೆ ಮುಸ್ಲಿಮ್ ಆಗುತ್ತದೆ. ರಾಮಜ್ಜ ಹೆಸರಿನಲ್ಲಿ ಹಿಂದೂ ಆದರೂ ಮುಸ್ಲಿಮ್ ಆಗಿದ್ದರಿಂದ ಹೀಗಾಯಿತೇ? . . . .ವಿಚಾರಕ್ಕೆ ಹಚ್ಚುವ ಕಥೆ. ಧನ್ಯವಾದ.