ಕತೆ : ಸುಳ್ಳಾದ‌ ಭವಿಷ್ಯ

Submitted by partha1059 on Sun, 11/25/2012 - 22:20

‘ಹಿರಿಯರು ಹೇಳಿರುವ ಮಾತು ಎಂದ ಮಾತ್ರಕ್ಕೆ ಅದನ್ನು ವಿಮರ್ಷಿಸಿದೆ ಸ್ವೀಕರಿಸಬೇಕೆ ಗುರುಗಳೆ?”

ನೀರವ ಮೌನ. ಎಲ್ಲ ವಿಧ್ಯಾರ್ಥಿಗಳು  ಗುರುಗಳನ್ನು ಭಯ ಕುತೂಹಲದಿಂದ ನೋಡುತ್ತಿದ್ದರು. ತೀರ ಮುಜುಗರದ ಸನ್ನಿವೇಶ. ಮಾತನಾಡಿದವನು ರಾಜಕುಮಾರ ಅಲ್ಲದಿದ್ದರೆ ಗುರುಗಳಾದ  ವಾಮನಾ ಆಚಾರ್ಯರ  ಪ್ರತಿಕ್ರಿಯೆ ಹೇಗಿರುತ್ತಿತ್ತೊ, ಆದರೆ ಈಗ ಮುಖದಲ್ಲಿ ಒಂದು ಮುಗುಳ್ನಗೆ ಮೂಡಿತು.. ನಿದಾನವಾಗಿ ಹೇಳಿದರು.

“ಹಿರಿಯರ ಮಾತುಗಳನ್ನು ಕಿರಿಯರು ಗೌರವಿಸಬೇಕು , ಪಾಲಿಸಬೇಕು ಅನ್ನುವುದು ಸಂಪ್ರದಾಯ ಅಲ್ಲವೆ ರಾಜಕುಮಾರ?”

“ಒಂದು ವೇಳೆ ಹಿರಿಯರು ತಮ್ಮ ಅಭಿಪ್ರಾಯದಲ್ಲಿ ತಪ್ಪಿದ್ದರೆ, ಅವರು ನಿರ್ಣಯದಲ್ಲಿ ಎಡವಿದ್ದಾರೆ ಎಂದು ನಮಗನ್ನಿಸಿದಾಗಲು ವಿಮರ್ಷಿಸಬಾರದೆ ಪೂಜ್ಯರೆ?”

ರಾಜಕುಮಾರ ಜಯಶೀಲನ ದ್ವನಿ ವಿನಯಪೂರಿತವಾಗಿದ್ದರು ಮಾತು ಕತ್ತಿಯ ಅಲುಗಿನಂತೆ. ಗುರುಗಳು ಮೌನ ತಾಳಿದರು. ಗುರುಗಳು ಅಂದುಕೊಂಡರು “ಸಧ್ಯಕ್ಕೆ ಇವನು ಯುವರಾಜನಾಗಿಲ್ಲ, ಮಹಾರಾಜನಿಗೆ ಎರಡನೆ ಮಗ. ಇವನು ಪಟ್ಟವೇರುವಂತಿದ್ದರೆ ನಮ್ಮೆಲ್ಲರ ಸ್ಥಿಥಿ ಏನೊ?”
….
..
2
ಜಯಶೀಲ ಅರಮನೆ ಪ್ರವೇಶಿಸುತ್ತಿರುವಂತೆ   ಎದುರಿಗೆ ಬಂದ ಅಣ್ಣನತ್ತ ನೋಡಿ ನಕ್ಕ ಜಯಶೀಲ. ಆದರೆ ಅದೇಕೊ  ಅಣ್ಣ ಸತ್ಯಶೀಲ ತೀರ ಗಂಭೀರ ಮುಖಭಾವದೊಂದಿದೆ ಇವನನ್ನು ನೋಡುತ್ತ ಸರಿದುಹೋದ. ಜಯಶೀಲನಿಗೆ ಕೊಂಚ ಅಚ್ಚರಿ ಎನಿಸಿತು. ಹಾಗೆ ಒಳಗೆ ಓಲಗ ಶಾಲೆಯಲ್ಲಿ ಕಣ್ಣಾಡಿಸಿದ. ತಂದೆಯವರಾದ ಮಹಾರಾಜ  ರಾಜಶೇಕರರು ಮತ್ತು ಜೊತೆಯಲ್ಲಿ ಪುರೋಹಿತರಾದ  ವರದಾಚಾರ್ಯರು  ಕುಳಿತಿದ್ದರು. ಪುರೋಹಿತರ ಮುಖ ಕಲ್ಲಿನ ವಿಗ್ರಹದಂತೆ ನಿರ್ಭಾವದಿಂದಿತ್ತು. ಮಹಾರಾಜನ ಮುಖವು ಗಂಭೀರ. ಇಬ್ಬರಿಗು ವಂದಿಸಿ ಒಳನಡೆದ.

ಬೋಜನ ಶಾಲೆಯಲ್ಲಿ ತಾಯಿ ,ಮಹಾರಾಣಿ ಶಾಲಿನಿದೇವಿ ಕುಳಿತಿದ್ದಳು. ಇವನನ್ನು ನೋಡುವಾಗಲೆ ನಗುತ್ತ
“ಊಟ ಮಾಡು ಬಾ ಮಗು” ಎಂದು ಕರೆದರು. ಕುಳಿತುಕೊಳ್ಳುತ್ತ ಕೇಳಿದ
“ಇದೇನು ಅಮ್ಮ ಇನ್ನು ಇಲ್ಲಿಯೆ ಇದ್ದೀರಿ, ವಿಶ್ರಾಂತಿಗೆ ಹೋಗಲಿಲ್ಲವೆ” . ತಾಯಿ ಜೊತೆ ಮಾತನಾಡುವಾಗ ಸಾಮಾನ್ಯವಾಗಿಯೆ ಜಯಶೀಲ ಅರಮನೆಯ ಬಾಷೆ ಉಪಯೋಗಿಸುವದಿಲ್ಲ. ಅದೇಕೊ ಆಕೆಯ ಮುಖವು ಸಪ್ಪೆ ಸಪ್ಪೆ . ನಿಂತಿದ್ದ ದಾಸಿಗೆ ಊಟ ಬಡಸುವಂತೆ ಸನ್ನೆ ಮಾಡಿದ ಜಯಶೀಲನೆಂದ
“ಮಾತೆಯವರೆ ಅದೇನು ಅರಮನೆಯಲ್ಲಿ ಏನೊ ಬದಲಾವಣೆ. ಎಲ್ಲರು ಗಂಭೀರವಾಗಿರುವಂತಿದೆ ಏನು ಪ್ರಮಾದ, ಯಾರಾದರು ಶತ್ರು ರಾಜರು ದಂಡೆತ್ತಿ ಬರುತ್ತಿರುವರೊ, ಅಥವ ನಿಮ್ಮ ಕುಲಪುರೋಹಿತರು ಏನಾದರು ದುಂಬಿಯನ್ನು ನಿಮ್ಮೆಲ್ಲರ ಕಿವಿಯಲ್ಲಿ ಬಿಟ್ಟರುವರೊ?”
ಜಯಶೀಲ ನಗುತ್ತ ಕೇಳಿದಾಗ ತಾಯಿ  ಅಂದುಕೊಂಡಳು  ‘ನನ್ನ ಮಗ ಎಂದಿಗೂ ಬದಲಾಗನು’ . ಮತ್ತೆ ಅಂದಳು
“ಏನು ಇಲ್ಲ ನೀನು ನೆಮ್ಮದಿಯಾಗಿ ಊಟಮಾಡು”
“ಅಮ್ಮ ನನಗೆ ಎಂದೂ ನೆಮ್ಮದಿಯೆ,  ಊಟಕ್ಕಂತು ನಾನು ಮೋಸ ಮಾಡೆನು. ಏನಿದ್ದರು ನನ್ನ ಕಾರಣಕ್ಕೆ ನಿಮ್ಮೆಲ್ಲರ ನೆಮ್ಮದಿ ಹಾಳಾಗುತ್ತ ಇರುತ್ತೆ ಅಷ್ಟೆ. ಏನು ಮಾಡಲಿ ನನಗೆ ಮನದ ಮಾತುಗಳನ್ನು ಮುಚ್ಚಿಟ್ಟು ಅಭ್ಯಾಸವಾಗಲಿಲ್ಲ”

ಜಯಶೀಲನಿಗೆ ಅರಿವಾಗಿತ್ತು , ತಾಯಿ ಏನೊ ಮಾತನಾಡಲು ಕಾಯುತ್ತಿರುವಳು, ದಾಸಿ ಎದುರಿಗಿದ್ದಾಳೆ ಎಂದು ಸುಮ್ಮನಿದ್ದಾಳೆ. ಕೈ ತೊಳೆಯುತ್ತ ಎದ್ದು ಅಮ್ಮನ ಹಿಂದೆ ನಡೆದ.

“ಅಮ್ಮ ನಿಮ್ಮ ಮನಸನ್ನು ಏನೊ ಸಮಸ್ಯೆ ಕಾಡುತ್ತಿರುವಂತಿದೆ, ಸುಮ್ಮನಾದರು ನೀವು ಅಪ್ಪಾಜಿ ತಲೆಬಿಸಿಮಾಡಿಕೊಳ್ಳುವಿರಿ, ಈಗ  ಸಮಸ್ಯೆ ಆದರು ಏನು ಬಂದಿದೆ ಹೇಳಿ” ಎಂದ.

ಹದಿನಾರರ ಹುಡುಗನ ಮಾತಿನಲ್ಲಿ ಎಂತದೋ ವಿಶ್ವಾಸ.

“ಮಗು ನಿನ್ನ ಬಗ್ಗೆಯೆ ಎಲ್ಲರು ಚಿಂತಿಸುತ್ತ ಇರುವುದು, ಸ್ವಲ್ಪ ಭಯಕೂಡ”

ತಾಯಿಯ ಮಾತಿಗೆ ಜಯಶೀಲನಿಗೆ ಆಶ್ಚರ್ಯವೆನಿಸಿತು

“ನನ್ನ ಬಗ್ಗೆ ಭಯವೆ ಅದೇಕಮ್ಮ, ಒಗಟು ಬೇಡ ನೇರವಾಗಿ ಹೇಳಿಬಿಡು” ಎಂದ . ರಾಜಮಾತೆ ನಿದಾನವಾಗಿ ಹೇಳಿದರು

“ಈ ದಿನ ರಾಜಪುರೋಹಿತರು ಬಂದಿದ್ದರು, ನಿನ್ನ ಅಣ್ಣ ಸತ್ಯಶೀಲನಿಗೆ ಯುವರಾಜ ಪಟ್ಟಾಭಿಷೇಕದ ಮಹೂರ್ತ ನೋಡಲು ಎಂದು, ತಂದೆಯವರು ಅವನ ಜಾತಕ ಮತ್ತು ಸಾಂದರ್ಬಿಕವಾಗಿ ನಿನ್ನ ಜಾತಕ ಎರಡನ್ನು ತೋರಿಸಿದರು”

ಜಯಶೀಲನಿಗೆ ಖುಷಿ ಎನಿಸಿತು

“ಏನು ಸತ್ಯನಿಗೆ ಯುವರಾಜ ಪಟ್ಟಾಭಿಷೇಕವೆ, ಮತ್ತೇನು ಶುಭ ಸುದ್ದಿಯೆ ಆಯಿತಲ್ಲ. ಮತ್ತೇಕೆ ಅವನು ಮುಖ ಗಂಭೀರ ಮಾಡುತ್ತ ಹೋದ. ಓಹೊರಾಜನಾಗುವ ಗಂಭೀರ್ಯವೊ. ನನ್ನತ್ತ ಮಾತನಾಡಲು ಇಲ್ಲ, ಜಂಬ ಬಂದುಬಿಟ್ಟಿತೊ, ಇರಲಿ ಬಿಡಮ್ಮ ಆದರೆ ಈಗ ಆತಂಕಪಡುವ ವಿಶಯವಾದರು ಏನಿದೆ, ಸತ್ಯನಿಗೆ ಯುವರಾಜ ಪಟ್ಟಾಭಿಷೇಕ,  ನನಗಂತು ಸಡಗರವೆ” ಎಂದ ಸಂತೋಷಪಡುತ್ತ.

“ಅದು ಹಾಗಲ್ಲ ಮಗು, ಅಪ್ಪಾಜಿ  ಸತ್ಯನಿಗೆ ಯುವರಾಜಪಟ್ಟ ಕಟ್ಟುವ ಆಸೆಯಲ್ಲಿರುವುದು ನಿಜ ಆದರೆ ಪುರೋಹಿತರು ಬೇರೆಯೆ ಹೇಳಿದರು” ಎಂದರು ಚಿಂತಿತರಂತೆ

ಜಯಶೀಲನು, ನನ್ನ ಊಹೆ ನಿಜವಾಯಿತು, ಪುರೋಹಿತರು ಎಂತದೋ ಹುಳುವನ್ನು ಇವರ ತಲೆಯಲ್ಲಿ ಬಿಟ್ಟಿದ್ದಾರೆ ಅಂದುಕೊಳ್ಳುತ್ತ ನುಡಿದ

“ಬೇರೆಯೆ ಅಂದರೆ ಏನಮ್ಮ, ಸರಿ ಬಿಡಿ,  ಎಂತದೋ ಹವನ ಹೋಮ, ದಾನ ಅಂತ ಹೇಳಿ ತನ್ನ ಸುಖಕ್ಕೆ ಒಂದಿಷ್ಟು ದಾರಿ ಮಾಡಿಕೊಂಡಿರುತ್ತಾರೆ  ನಿಮ್ಮ ಪುರೋಹಿತರು ಅದಕ್ಕೇಕೆ ಚಿಂತೆ” ಎಂದ ಹಗುರವಾಗಿ.
ತಾಯಿ ಸಪ್ಪೆಯಾಗಿ ಹೇಳಿದರು
“ಹಾಗಲ್ಲ ಜಯಶೀಲ, ಈ ಯುವರಾಜ ಪಟ್ಟಾಭಿಷೇಕ ನಡೆಯದು ಅನ್ನಿಸುತ್ತೆ, ಪುರೋಹಿತ  ವರದಾಚಾರ್ಯರು ಬೇರೆಯದೆ ಭವಿಷ್ಯ ನುಡಿದರು. ಅವರ ಮಾತು ನಿಜವಾಗುವದೆಂದೆ ಎಲ್ಲರು ಎಣಿಸುತ್ತಾರೆ, ಹಾಗಾಗಿ ಎಲ್ಲರಿಗು ಆತಂಕವಪ್ಪ” ಎಂದರು
ಜಯಶೀಲನಿಗೆ ಬೇಸರವೆನಿಸಿತು
“ಅಮ್ಮ ನಾನು ಹೇಳಲಿಲ್ಲವೆ, ಸುಮ್ಮನೆ ಪ್ರಸಂಗ ಎಳೆಯದಿರಿ ನನಗೆ ಸಹನೆಯಿಲ್ಲ, ಪುರೋಹಿತರು ಏನು ಹೇಳಿದರು ಮೊದಲು ಅದನ್ನು ತಿಳಿಸಿ” ಎಂದ ಅಸಹನೆಯಿಂದ
“ಇನ್ನೇನಿಲ್ಲ ಮಗು,  ಅವರು ಸತ್ಯನ ಹಾಗು ನಿನ್ನ  ಜಾತಕಗಳನ್ನು ಪರೀಶೀಲಿಸಿ,  ಇಬ್ಬರಿಗು ರಾಜ್ಯಾಧಿಕಾರದ ಬಲವಿರುವದಾದರು, ನಿನ್ನ ಜಾತಕ ಹೆಚ್ಚು ಬಲಶಾಲಿ ಹಾಗು ಅಕ್ರಮಣಕಾರಿಯಾಗಿರುವದರಿಂದ ನೀನೆ ರಾಜ್ಯವಾಳುವೆ,  ಅಣ್ಣನಾದ ಸತ್ಯನು ಎಂದಿಗೂ ರಾಜನಾಗನು,  ಅವನಿಗೆ  ಅ ಯೋಗವಿಲ್ಲ , ಎಂದರಂತೆ, ಹಾಗಾಗಿ ನಿನ್ನ ತಂದೆ ಆತಂಕದಲ್ಲಿರುವರು” ಎಂದರು ಆಕೆ
ಜಯಶೀಲನು ಸ್ವಲ್ಪ ಕಾಲ ಸುಮ್ಮನೆ ಕುಳಿತು ಬಿಟ್ಟ. ಅವನಿಗೆ ಅರಮನೆಯ ಪುರೋಹಿತರ ಬಗ್ಗೆ ಕೋಪ ಉಕ್ಕಿ ಬರುತ್ತಿತ್ತು. ಸುಮ್ಮನೆ ಇಲ್ಲದ ಕಲ್ಪನೆಗಳನ್ನೆಲ್ಲ ಭವಿಷ್ಯ ಎನ್ನುವಂತೆ ಹೇಳಿ ತಂದೆಯವರ ಬುದ್ದಿಕೆಡಿಸುತ್ತಾರಲ್ಲ ಅನ್ನಿಸಿತು. ಬಹಳ ಕಾಲದ  ಮೌನದ ನಂತರ ಪ್ರಶ್ನಿಸಿದ
“ಸರಿಯಮ್ಮ, ಅಪ್ಪಾಜಿಯವರ ಮನದ ಯೋಚನೆ ಬಿಡಿ, ಅಣ್ಣನ  ಹಾಗು ಅರಮನೆಯವರ ಮಾತು ಬಿಡಿ, ನೀವು ಏನು ಭಾವಿಸಿದಿರಿ ತಿಳಿಸಿ, ನಿಮಗೂ ಸಹ ನನ್ನ ಬಗ್ಗೆ ಆತಂಕವೆ “ ಅವನು ಕಕ್ಕುಲತೆಯಿಂದ ಪ್ರಶ್ನಿಸಿದ.

“ನನಗೆ ನಿನ್ನ  ಹೃದಯ ಗೊತ್ತು ಮಗು. ಇನ್ನು ಚಿಕ್ಕಮಗು. ಆದರೆ ಇದು ರಾಜ್ಯದ ವಿಷಯ ನೋಡು. ರಾಜ್ಯದ ಪಟ್ಟದ ವಿಷಯ ಬಂದಾಗ ಯಾರ ಮನಸ್ಸು ಹೇಗೆ ವರ್ತಿಸುವುದೋ ಹೇಗೆ ತಿಳಿಯುವುದು ಅನ್ನಿಸಿತು. ಹಾಗು ಆತಂಕವಂತು ಆಯಿತು. ಒಮ್ಮೆ ಪುರೋಹಿತರ ಮಾತು ನಿಜವೆನ್ನುವದಾದರೆ ಅಣ್ಣ ತಮ್ಮಂದಿರ ನಡುವೆ ಒಡಕುಂಟಾಗಿ ಘರ್ಷಣೆಯಾದರೆ ಎಂಬ ಆತಂಕವಂತು ಕಾಡಿತು. ಹಾಗಾಗಿ ನಿನ್ನ ಜೊತೆ ಮಾತನಾಡೋಣ ಅನ್ನಿಸಿ ಕಾಯುತ್ತಿದ್ದೆ “ ಎಂದರು.

ಜಯಶೀಲನ ಮನಸು, ಹೃದಯ ಅತೀವ ನೋವಿನಿಂದ ನರಳಿತು. ತನ್ನನ್ನು ತನ್ನ ಹೆತ್ತ ತಾಯಿಯೆ ಅರ್ಥಮಾಡಿಕೊಳ್ಳಲು ಸೋತಳೆ. ಅಥವ ಈ ಅಧಿಕಾರ , ರಾಜ್ಯ,  ಯುವರಾಜ ಪಟ್ಟ ವೆಂದರೆ ,ರಾಜಕೀಯವೆಂದರೆ ಇಷ್ಟೇನೆ. ನಮ್ಮ ಮನಸುಗಳಿಗೆ ಸಂಬಂದಗಳಿಗೆ ಅರ್ಥವೆ ಇಲ್ಲವೆ. ಅವನ ಹೃದಯ ಅಳುತ್ತಿತ್ತು. ಹೆತ್ತ ತಾಯೆ ತನ್ನನ್ನು ಪರಕೀಯನಂತೆ ಭಾವಿಸಿದ್ದಕ್ಕೆ ಅವನಿಗೆ ಎಂತದೋ ಬೇಸರ. ಏನು ಮಾತನಾಡದೆ ಕುಳಿತವ, ಇದ್ದಕ್ಕಿದಂತೆ ಎದ್ದ
“ಸರಿ ಅಮ್ಮ ನೀವು ವಿಶ್ರಾಂತಿ ಪಡೆಯಿರಿ. ಎಲ್ಲ ಆತಂಕದಿಂದ ದೂರವಿರಿ” ಎಂದವನೆ , ತಲೆಬಗ್ಗಿಸಿ, ಹಿಂದೆ ನೋಡದೆ ತನ್ನ ಕೋಣೆಗೆ ನಡೆದು ಹೊರಟುಹೋದ.
.
..
.
3.
ರಾಜಕುಮಾರ ಜಯಶೀಲ ಹಾಗು ಅವನ ಸ್ನೇಹಿತ ಗಿರಿಧರ ಸಮುದ್ರದಡದಲ್ಲಿ  ಕುಳಿತಿದ್ದರು. ಸಂಜೆಯ ಸೂರ್ಯನ ಹೊಂಗಿರಣದಿಂದ ಚೇತನ ಪಡೆದ ಸಮುದ್ರದ ಅಲೆಗಳು , ನಲ್ಮೆಯಿಂದ ದಡಕ್ಕೆ ಅಪ್ಪಳಿಸುತ್ತಿದ್ದವು. ದೂರದಿಗಂತದತ್ತ ದೃಷ್ಟಿ ಇಟ್ಟು ಮೌನವಾಗಿ ಕುಳಿತ ರಾಜಕುಮಾರನತ್ತ ನೋಡಿದ ಗಿರಿಧರ. ಬಹಳ ಹೊತ್ತಿನಿಂದ ಏನನ್ನು ಮಾತನಾಡದೆ ಕುಳಿತಿರುವ ಅವನನ್ನು ಕಂಡು ಕಡೆಗೊಮ್ಮೆ  ನಿದಾನವಾಗಿ ನಗುತ್ತ  ಪ್ರಶ್ನಿಸಿದ
“ರಾಜಕುಮಾರ ಜಯಶೀಲರು ಅದೇಕೊ ಮೌನವಾಗಿದ್ದಾರೆ, ಮನವನ್ನು ಯಾವ ಚಿಂತೆ ಕಾಡುತ್ತಿದೆ ಎಂಬುದನ್ನು ತಮ್ಮ ಗೆಳೆಯನಾದ ನಾನು ತಿಳಿಯಬಹುದೆ”
ಗಿರಿಧರನ ಕಡೆಗೊಮ್ಮೆ ದೀರ್ಘ ದೃಷ್ಟಿ ಬೀರಿದ ರಾಜಕುಮಾರ ಮತ್ತೆ ಸಮುದ್ರದತ್ತ ದೃಷ್ಟಿ  ನೆಟ್ಟ.  ಏಕೊ ಅವನ ಮುಖದಲ್ಲಿಯ ಉತ್ಸಾಹ ಬತ್ತಿಹೋಗಿತ್ತು. ಕಳೆದ ಒಂದು ವಾರದಿಂದಲು ಹಾಗೆಯೆ ಸಪ್ಪಗೆ ಇರುವನು.
“ಏಕೆ ರಾಜಕೂಮಾರ ನನ್ನ ಜೊತೆ ಹಂಚಿಕೊಳ್ಳರಾರದ  ಚಿಂತೆಯೆ?. ಹೇಳು ನನ್ನ ಕೈಲಾಗುವ ಸಹಾಯ ಮಾಡಲು ಪ್ರಯತ್ನಿಸುವೆ?”
ಗಿರಿಧರ ರಾಜ್ಯದ ಸೈನಾಧಿಕಾರಿಯ ಮಗ. ಇಬ್ಬರು ಸಮವಯಸ್ಸಿನವರು. ಚಿಕ್ಕವಯಸ್ಸಿನಿಂದ ಒಟ್ಟಿಗೆ ಬೆಳೆದವರು.
“ಗಿರಿಧರ, ನಿನಗೆ ತಿಳಿಯದ್ದೇನಿದೆ. ಅಣ್ಣನಿಗೆ ಯುವರಾಜ  ಪಟ್ಟವನ್ನು ಕಟ್ಟಲು ಅಪ್ಪಾಜಿ ಹಾಗು ಅಮ್ಮ ಸಿದ್ದತೆ ನಡೆಸಿದ್ದರು, ಅದೀಗ ನೆನೆಗುದಿಗೆ ಬಿದ್ದಂತೆ ಆಗಿ  ಅರಮನೆಯಲ್ಲಿ ಎಲ್ಲರು ಚಿಂತಿತರಾಗಿದ್ದಾರೆ”
ಗಿರಿಧರ ಎಚ್ಚರಿಕೆಯಿಂದ ನುಡಿದ “ಹೌದು ರಾಜಕುಮಾರ, ಆದರೆ ಮತ್ತೆನೊ ಸುದ್ದಿ ಇದೆ, ಹಿರಿಯ ಅಣ್ಣ ಸತ್ಯಶೀಲರ ಬದಲಿಗೆ , ನೀವು ಯುವರಾಜರಾಗುವ ಸಾದ್ಯತೆಯ ಬಗ್ಗೆ ಎಲ್ಲಡೆ ಸುದ್ದಿ ಹಬ್ಬಿದೆ. ನಾನು ಕೇಳುವನಿದ್ದೆ, ಆದರೆ ರಾಜಕಾರಣದ ಮಾತು ಹೇಗೊ ಏನೊ ಎಂದು ಸುಮ್ಮನಿದ್ದೆ”
“ನೋಡಿದೆಯ, ಚಿಕ್ಕವಯಸ್ಸಿನಿಂದ ಜೊತೆ ಬೆಳೆದ ನೀನೆ ಈ ರೀತಿ, ಮೊದಲಿನಿಂದ ಹೆಸರು ಹಿಡಿದೆ ಕರೆಯುತ್ತಿದ್ದೆ, ಏಕವಚನದಲ್ಲಿಯೆ ಮಾತನಾಡುತ್ತಿದ್ದೆವು. ಈಗೆರಡು ದಿನಗಳಿಂದ, ನೀನು ಕಷ್ಟಪಟ್ಟು ಬಹುವಚನ ಬಳಸುತ್ತಿರುವದನ್ನು ಗಮನಿಸಿದ್ದೇನೆ”  ಜಯಶೀಲನ ದ್ವನಿಯಲ್ಲಿ ಎಂತದೊ ನೋವು.
“ನಿಜ ಜಯಶೀಲ, ಎಲ್ಲರಂತೆ ನನ್ನ ಗಮನಕ್ಕು ಈ ಸುದ್ದಿ ಬಂದು ಗಲಿಬಿಲಿಗೆ ಒಳಗಾದೆ,  ಭವಿಷ್ಯದಲ್ಲಿ ರಾಜನಾಗಬಹುದಾದ ನಿಮ್ಮನ್ನು ಏಕವಚನದಲ್ಲಿ ಕರೆಯುವದು ಹೇಗೆ ಎಂಬ ಸಂಕೋಚ ತುಂಬಿತು. ಹಾಗಾಗ ಬಹುವಚನ ಬಳಸಲು ಪ್ರಯತ್ನಿಸುತ್ತಿದ್ದೇನೆ ಅನ್ನಿಸುತ್ತೆ.  ಸುದ್ದಿಯು ನಿಜವೆ ರಾಜಕುಮಾರ”  ಗಿರಿಧರ ಕುತೂಹಲದಿಂದ ಕೇಳಿದ.
“ನೋಡು, ಗಿರಿ, ನಾನು ಎಂದಾದರು ನಿನ್ನಲ್ಲಿ , ಈ ರೀತಿಯ ಆಸೆಗಳನ್ನು ಹೇಳಿಕೊಂಡಿರುವೆನಾ?. ನಾನು ರಾಜನಾಗಬೇಕೆಂಬ ಹಂಬಲ ನನ್ನಲ್ಲಿರುವುದು ನಿನಗೆ ಎಂದಾದರು ಕಾಣಿಸಿದೆಯ . ನಿಜ ಹೇಳು?”
ಗಿರಿಧರನೆಂದ “ಇಲ್ಲ , ನಾನು ನಿನ್ನಲ್ಲಿ ಎಂದಿಗೂ  ಆ ಆಸೆ ಕಾಣಲಿಲ್ಲ, ಆದರೆ ಈಗ ಅರಮನೆಯ ಮೂಲದಿಂದಲೆ ಆ ರೀತಿಯ ಸುದ್ದಿಗಳು ಬಂದಾಗ, ನಂಬಲೆ ಬೇಕಾಗುತ್ತಲ್ಲವೆ. ನನಗು ಗೊಂದಲವೆ ಹಿರಿಯ ಕುಮಾರನಾದ ಸತ್ಯಶೀಲರು ಎಲ್ಲ ಅರ್ಹತೆಗಳೊಂದಿಗೆ ಇರುವಾಗ , ನೀವು  ಪಟ್ಟಕ್ಕೆ ಬರುವರೆಂಬ ಸುದ್ದಿ ನನಗು ಸ್ವಲ್ಪ ಆಶ್ಚರ್ಯವೆ ಅನ್ನಿಸಿತು”
“ನೋಡಿದೆಯ , ನನ್ನ ಸ್ವಭಾವ ಎಲ್ಲ ಗೊತ್ತಿದ್ದು, ಆತ್ಮೀಯನಾದ ನೀನೆ, ಯಾವುದೋ ಮೂಲವನ್ನು ನಂಬಿ, ನನ್ನಲ್ಲಿ ಅನುಮಾನ ಪಡುತ್ತಿದ್ದೀಯ. ನೀನೆ ಏನು ಬಿಡು. ನನ್ನ ತಂದೆಯೆ ನನ್ನ ಬಗ್ಗೆ ಅನುಮಾನದಿಂದ ವರ್ತಿಸುತ್ತ ಗಂಭೀರವಾಗಿರುವರು. ಹುಟ್ಟಿನಿಂದ ಜೊತೆಯಲ್ಲಿ ಬೆಳೆದು ಬಂದ ಅಣ್ಣ ಸತ್ಯಶೀಲನು ಸಹ ನನ್ನನ್ನು ಕಂಡರೆ   ಕುದಿಯುತ್ತಿರುವನು. ಕಡೆಗೆ ಸ್ವಯಂ ನನ್ನ ಹೆತ್ತ  ತಾಯಿ ನನ್ನನ್ನು ಅನುಮಾನಿಸುತ್ತ,  ನನ್ನ ಕಡೆ ನೋಡುತ್ತಿರುವಳು. ಈಗ ನನಗೆ ಅರ್ಥವಾಗುತ್ತಿದೆ ಬಿಡು . ನನ್ನ ಆತ್ಮಬಂದುವೆನ್ನುವರು ಯಾರು ಇಲ್ಲ”  ರಾಜಕುಮಾರ ಜಯಶೀಲನ ಕಣ್ಣಲ್ಲಿ , ತೆಳುವಾದ ಪೊರೆಯಂತ ನೀರು ತುಂಬಿತು.

ಸ್ವಲ್ಪ ಅಂತರದಲ್ಲಿ ಕುಳಿತಿದ್ದ ಗಿರಿಧರ, ಕಂದಿದ ಮುಖದಿಂದ ಹತ್ತಿರ ಬಂದ

“ನನ್ನನ್ನು ಕ್ಷಮಿಸು ಗೆಳೆಯ, ನಾನು ನೇರವಾಗಿ ನಿನ್ನ ಜೊತೆ ಕೇಳಿ ಅನುಮಾನ ಪರಿಹರಿಸಿಕೊಳ್ಳಬಹುದಿತ್ತು. ಆದರೆ ಈ ರಾಜಪೀಠ, ಸಿಂಹಾಸನ ಎನ್ನುವ ದೊಡ್ದಪದಗಳೆಲ್ಲ, ನನ್ನ ಹೃದಯವನ್ನು ಹೊಕ್ಕು ನಿನ್ನಿಂದ ದೂರ ನಿಲ್ಲಿಸಿದವು. ನಿನ್ನ ಹೃದಯವನ್ನು ಅರ್ಥಮಾಡಿಕೊಳ್ಳಲು ಸೋತು ನಿನಗೆ ನೋವು ಕೊಟ್ಟೆ. ಆದರೆ ಇದೆಲ್ಲ ಹೇಗೆ ಆಯಿತು ಜಯ?”

ಜಯಶೀಲ ನಿದಾನವಾಗಿ ನುಡಿದ “ ಎಲ್ಲವು ಆ ರಾಜಪುರೋಹಿತರಿಂದ. ಅವರು ತಮ್ಮನ್ನು ಕರೆಸಿದ್ದ  ಕರ್ತವ್ಯ ಮರೆತು, ನನ್ನ ತಂದೆಯವರ ಮನ ಕೆಡೆಸಿದರು. ಅಷ್ಟು ಸಾಲದೆ ತಾಯಿ, ಹಾಗು ಅಣ್ಣನಲ್ಲಿ ಆತಂಕ ಹುಟ್ಟಿಸಿದರು. ರಾಜ್ಯದಲ್ಲೆಲ್ಲ ನನ್ನ ಬಗ್ಗೆ ಅನುಮಾನ, ಹಾಗೆ ಅಪಮಾನ ತುಂಬುವಂತ ವಾತಾವರಣ ನಿರ್ಮಿಸಿದರು.  ಸುಮ್ಮನೆ ಅಣ್ಣ ಸತ್ಯ ಶೀಲನ ಯುವರಾಜ ಪಟ್ಟಕ್ಕೆ ಮಹೂರ್ತ ಇಟ್ಟುಕೊಟ್ಟಿದ್ದರೆ  ಮುಗಿದಿತ್ತು. ಅದನ್ನು ಬಿಟ್ಟು ತಮ್ಮ ಪ್ರೌಡಿಮೆ , ಒಣಪ್ರತಿಷ್ಟೆ ಮೆರೆಸಲು ನನ್ನ ಪ್ರತಿಷ್ಟೆ ಮಣ್ಣುಗೂಡಿಸಿದರು. ಅನಗತ್ಯವಾಗಿ ನಾನೆ ರಾಜನಾಗುವೆನೆಂದು ಸಲ್ಲದ ಭವಿಷ್ಯವಾಣಿ ನುಡಿದು, ರಾಜ್ಯದಲ್ಲಿನ್ನ ಸಾಮರಸ್ಯವನ್ನು ಕೆಡಿಸಿದರು. ಇದೆಲ್ಲ  ರಾಜದ್ರೋಹವೆ ಅಲ್ಲವೆ ಗಿರಿಧರ”

ಗಿರಿಧರ ನುಡಿದ “ಆದರೆ ಜಯ, ರಾಜ್ಯದಲ್ಲೆಲ್ಲ ಪುರೋಹಿತ  ವರದಾಚಾರ್ಯರ ಭವಿಷ್ಯವಾಣಿ ಎಂದರೆ ತುಂಬುನಂಭಿಕೆ ಇದೆಯಲ್ಲ. ಅವರ ಭವಿಷ್ಯ ಎಂದಿಗು ಸುಳ್ಳಾಗುವದಿಲ್ಲ ಅನ್ನುತ್ತಾರೆ”

ಜಯಶೀಲ ತುಸು ಕೋಪದಲ್ಲಿ ನುಡಿದ “ ಈ ಬಾರಿ ಅವರ ಭವಿಷ್ಯವಾಣಿ ಸುಳ್ಳಾಗುತ್ತದೆ, ಗಿರಿ, ಅವರ ಪ್ರತಿಷ್ಟೆ ಮಣ್ಣುಗೂಡುತ್ತದೆ. ಇಂತ ಅನಿಷ್ಟ  ಮೂಡನಂಭಿಕೆಗಳನ್ನು ಯಾರು ನಂಬಬಾರದು ಎಂಬ ಪರಿಸ್ಥಿಥಿಯನ್ನು ನಾನು ನಿರ್ಮಿಸುತ್ತೇನೆ. ಸದಾ ಭವಿಷ್ಯವಾಣಿಗಳನ್ನು ನಂಭಿ ತಮ್ಮ ರಾಜಕೀಯ ನಿರ್ದಾರಗಳನ್ನು ತೆಗೆದು ಕೊಳ್ಳುವ ನಮ್ಮ ತಂದೆಯವರಾದರು ತಮ್ಮ ತಪ್ಪನ್ನು ಅರಿತರೆ, ರಾಜ್ಯದ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ?”

ಗಿರಿಧರನೆಂದ “ಹಾಗಾದರೆ ಜಯ , ಈ ಭವಿಷ್ಯ ಎನ್ನುವದೆಲ್ಲ ಸುಳ್ಳೆ, ಅದು ಬರಿ ಮೋಸವೆ?”

ಜಯಶೀಲನೆಂದ” ಗಿರಿಧರ, ಈಗ ನೀನು ನಾಣ್ಯವೊಂದನ್ನು ಹತ್ತು ಬಾರಿ ಮೇಲೆ ಚಿಮ್ಮಿದೆ ಅಂದುಕೊ,   ಎಷ್ಟು ಸಾರಿ ರಾಜ್ಯದ ಲಾಂಚನ ಮೇಲ್ಮುಕವಾಗಿ ಬೀಳಲು ಸಾದ್ಯವಿದೆ ಹೇಳು”

ಗಿರಿಧರನೆಂದ “ಹೇಗೆ ಹೇಳಲು ಸಾದ್ಯ,  ಹತ್ತರಲ್ಲಿ ಐದು ಸಾರಿ ಬೀಳಬಹುದು, ಅಥವ ಸ್ವಲ್ಪ ಹೆಚ್ಚು ಸಾರಿಯೆ ಬೀಳಬಹುದು”

ಜಯಶೀಲ “ ನೋಡು ಭವಿಷ್ಯವೆಂಬುದು ಹಾಗೆ ಅನ್ನಿಸುತ್ತೆ,  ಭವಿಷ್ಯಕಾರರು ತಮ್ಮ ಬುದ್ದಿ ಹಾಗು ತರ್ಕದಿಂದ ಭವಿಷ್ಯವನ್ನು ಹೇಳುವರು, ಅದು ಕೆಲವೊಮ್ಮೆ ಸತ್ಯವಾಗುತ್ತದೆ, ಅದೃಷ್ಟ ಎಂಬಂತೆ,   ಬಹಳ ಸಾರಿ ಅವರು ಹೇಳಿದ್ದೆ ನಡೆಯಬಹುದು ಅಂದ ಮಾತ್ರಕ್ಕೆ ಅದೆ   ಸತ್ಯವಲ್ಲ. ಸಾದ್ಯತೆಗಳ ಅವಕಾಶದಲ್ಲಿ ಅವರು ಹೇಳಿದ್ದು ಸುಳ್ಳು ಆಗಬಹುದು , ಆಗ ಮಾತ್ರ ನಮ್ಮ ಜೀವನದಲ್ಲಿ ನಷ್ಟ ಅನುಭವಿಸುವೆವು ಅಲ್ಲವೆ?”

ಗಿರಿಧರನೆಂದ “ಸರಿ ಅರ್ಥವಾಯಿತು ಬಿಡು ನೀನೀಗ ನಮ್ಮ ಪುರೋಹಿತ  ವರದಾಚಾರ್ಯರ  ಭವಿಷ್ಯದ ನಾಣ್ಯವನ್ನು ತಿರುವಿ ಹಾಕಲು ಹೊರಟಿರುವೆ,  ಆದರೆ ಜಯಶೀಲ  ನೀನೀಗ ರಾಜನಾಗುವದಿಲ್ಲವೆ, ನಿನಗೆ ಇಷ್ಟವಿಲ್ಲವೆ”

ಜಯಶೀಲ “ಖಂಡೀತ ಇಲ್ಲ ಗಿರಿ, ನನಗೆ ರಾಜ್ಯದ ಪಟ್ಟ ಇಷ್ಟವಿಲ್ಲ. ನಾನೆಂದು ಸ್ವತಂತ್ರ್ಯವಾಗಿರಲು ಬಯಸುವನು. ಯಾರಭವಿಷ್ಯವನ್ನೊ ನಂಬಿ ನಾನು ಪಟ್ಟವೇರಲಾರೆ”

ಗಿರಿಧರನೆಂದ ಖುಷಿಯಾಗಿ ನಗುತ್ತ “ಅಬ್ಬಯ್ಯ, ನನಗಂತು ಹಗುರವಾಯಿತು ಬಿಡು, ನೀನು ರಾಜನಾದರೆ, ನನಗಿದ್ದ ಒಬ್ಬನೆ ಉತ್ತಮ ಸ್ನೇಹಿತ ಕಳೆದುಹೋಗುತ್ತಿದ್ದ, ಮತ್ತೇನು ಈ ಸುದ್ದಿಯನ್ನು ಅರಮನೆಯಲ್ಲಿ ನಿಶ್ಚಿತವಾಗಿ ತಿಳಿಸಿಬಿಡು, ಅವರ ಆತಂಕಗಳು ದೂರವಾಗಲಿ.”

ಜಯಶೀಲ “ಆಗಲಿ ಗಿರಿ, ಅರಮನೆಯಲ್ಲಿ ತಿಳಿಸುವ ಮೊದಲು, ನಾನು ನೀನು ಒಮ್ಮೆ  ಪುರೋಹಿತರಾದ ವರದಾಚಾರ್ಯರನ್ನು. ನೋಡಬೇಕಲ್ಲ, ಅವರು ಎಲ್ಲಿರುತ್ತಾರೆ ನಿನಗೆ ತಿಳಿದಿದೆಯ”

ಗಿರಿಧರ ಆಶ್ಚರ್ಯದಿಂದ “   ಪುರೋಹಿತರನ್ನೆ,  ನಿನ್ನ ವರ್ತನೆ ಆಶ್ಚರ್ಯವಾಗಿದೆ. ಸಿಗದೆ ಎನು ಈಗವರು ತಮ್ಮ ಮನೆಯಲ್ಲಿಯೆ ಇರುವ ಹೊತ್ತು. ಆದರೆ ಅಲ್ಲಿ ಅವರಲ್ಲಿ ಮಾತನಾಡಲು ಏನಿದೆ ? “

ಜಯಶೀಲನೆಂದ “   ಮಾತನಾಡುವುದೆ?,  ಅವರಲ್ಲಿಯೆ, ಯಾವ ಮಾತು ಇಲ್ಲ ಸುಮ್ಮನೆ ಅವರನ್ನೊಮ್ಮೆ ನೋಡಿ ಹೋಗೋಣವೆಂದೆ ಅನ್ನಿಸಿತು ಅಷ್ಟೆ”


.
4
ಗಿರಿಧರ, ಜಯಶೀಲನೊಡನೆ ಪುರೋಹಿತರ ಮನೆಯ ಬಳಿ ಬಂದಾಗ ಅಲ್ಲೆಲ್ಲ ವಿಧ್ಯುತ್ ಸಂಚಾರವಾಗಿತ್ತು. ತುಸು ಆಶ್ಚರ್ಯ , ಗಡಿಬಿಡಿ ಇಂದಲೆ ಹೊರಬಂದ ,  ಪುರೋಹಿತರು ರಾಜಕುಮಾರ ಜಯಶೀಲನನ್ನು ಸ್ವಾಗತಿಸಿದರು
“ಬನ್ನಿ ಯುವರಾಜ, ಒಳಗೆ ಬನ್ನಿ , ಬಡವನ ಮನೆಗೆ ತಮ್ಮಂತವರು ಬಂದು ನನ್ನ ಮನೆ ಪಾವನವಾಯಿತು” ತಮ್ಮ ವಿನಯ ಪ್ರದರ್ಶಿಸಿದರು.
ಆದರೆ  ಜಯಶೀಲ ಒಳಗೆ ಹೋಗಲಿಲ್ಲ . ಒಂದೆರಡು ಕ್ಷಣಗಳ ಕಾಲ ಪುರೋಹಿತರ ಮುಖವನ್ನೆ ನೋಡುತ್ತ ನಿಂತ . ನಂತರ ಗಿರಿಧರನೊಡನೆ
“ನಡೆ ಗಿರಿ , ಇನ್ನು ನಾವು ಬಂದ ಕೆಲಸವಾಯಿತು” ಎನ್ನುತ್ತ ತಿರುಗಿ, ಹೊರಟುಬಿಟ್ಟ. ಪುರೋಹಿತರು ಕೂಗುತ್ತಿದ್ದರು ತನ್ನ ಕಿವಿಗೆ ಹಾಕಿಕೊಳ್ಳಲಿಲ್ಲ.
..
.
5.
ಗಿರಿಧರ ತುಸು ಆಶ್ಚರ್ಯದಿಂದಲೆ ಇದ್ದ
“ಇದೇನು ಜಯ, ಪುರೋಹಿತರ ಮನೆಗೆ ಕರೆತಂದೆ ಆದರೆ ಒಳಗೂ ಹೋಗದೆ ಅವರ ಮುಖ ನೋಡಿ ಬಂದುಬಿಟ್ಟೆ. ನನಗೆ ನಿನ್ನ ವರ್ತನೆ ಅರ್ಥವೆ ಆಗುತ್ತಿಲ್ಲ”

ಜಯಶೀಲ ನೆಂದೆ “ ಗಿರಿ, ಈ ಪುರೋಹಿತರು, ಪೂರ್ಣ ರಾಜ್ಯದಲ್ಲಿ ನನ್ನ ವ್ಯಕ್ತಿತ್ವಕ್ಕೆ ಕುಂದು ತಂದರು, ನನ್ನನ್ನು ಅಣ್ಣನ ಎದುರು ಸಿಂಹಾಸನಕ್ಕೆ ಜಗಳಕ್ಕೆ ನಿಂತವನಂತೆ, ದೇಶದ್ರೋಹಿಯಂತೆ, ವಾತವರಣ ನಿರ್ಮಿಸಿದರು. ಅದೆಲ್ಲ ಕೇವಲ , ತಾವು ಹೇಳುವ ಭವಿಷ್ಯವಾಣಿ ನಿಜವೆಂಬ ತಮ್ಮ ಪ್ರತಿಷ್ಟೆ ಹೆಚ್ಚಿಸಿಕೊಳ್ಳಲು ಆಯಿತು. ಆದರೆ ಅದರಿಂದ ದೇಶದ ಮೇಲೆ ಆಗುವ ಪರಿಣಾಮ ಮಾತ್ರ ಅವರು ಯೋಚಿಸಲಿಲ್ಲ. ಅಂತವರಿಗೆ ಏನಾದರು ಶಿಕ್ಷೆ ಆಗಬೇಡವೆ.”

ಗಿರಿಧರನೆಂದ “ನಿಜ ರಾಜಕುಮಾರ, ಇಂತವರಿಗೆ ಶಿಕ್ಷೆಯಾಗಬೇಕು, ಆದರೆ ಹೇಗೆ ? . ಆಸ್ಥಾನದಲ್ಲಿ ಅವರು ಪ್ರತಿಷ್ಟಿತರು. ಮಹಾರಾಜನು ಅವರನ್ನು ಗೌರವಿಸುತ್ತಾನೆ. ನೀನು ಹೇಗೆ ಶಿಕ್ಷೆ ವಿದಿಸಬಲ್ಲೆ”

ಜಯಶೀಕನೆಂದ “ಖಂಡೀತ ಸಾದ್ಯವಿದೆ ಗಿರಿ.  ಇಂತವರಿಗೆಲ್ಲ ಅವರ ಪ್ರತಿಷ್ಟೆಯೆ ಪ್ರಾಣ. ಅದನ್ನು ಭಂಗಗೊಳಿಸುವೆನು. ಒಮ್ಮೆ ರಾಜಪುರೋಹಿತರ ಭವಿಷ್ಯ ಸುಳ್ಳಾಯಿತು ಅಂದರೆ ಸಾಕು ಎಲ್ಲರಿಗು ಅವರ ಬಗ್ಗೆ ಇರುವ ನಂಭಿಕೆ , ಭಯ ಕರಗಿಹೋಗುವುದು. ತಂದೆಯವರು ಸಹ ತಮ್ಮ ಸ್ವಂತ ಚಿಂತನೆ ಉಪಯೋಗಿಸುವ ರೀತಿಯಲ್ಲಿ , ಈ ಭವಿಷ್ಯ ಹೇಳುತ್ತ , ಆತಂಕ ಹುಟ್ಟಿಸುತ್ತಿರುವ ಇವರನ್ನು ದೂರ ಇರಿಸುವಂತೆ ಮಾಡುವೆನು ನೋಡುತ್ತಿರು. ಈ ಪುರೋಹಿತರ ಪ್ರತಿಷ್ಟೆ ಮಣ್ಣು ಮುಕ್ಕಿದರೆ ಸಾಕು ಅದೆ ಅವರಿಗೆ ಸಾವಿಗೆ ಸಮನಾದ ಶಿಕ್ಷೆ  . ಅಷ್ಟಾದರೆ ಇವರಿಗೆ ಅದಕ್ಕಿಂತ ಘೋರ ಶಿಕ್ಷೆ ಏನು ಬೇಕು ಹೇಳು”
ಎಂದನು

ಗಿರಿಧರ “ನಿನ್ನ ಮಾತು ನಿಜ, ಜಯಶೀಲ, ಹಾಗೆ ಆದಲ್ಲಿ , ರಾಜ್ಯದ ಆಡಳಿತವು ಕೆಲಮಟ್ಟಿಗೆ ನೆಟ್ಟಗಾಗುವುದು ನಿಶ್ಚಿತ. ನೀನು ನಿನ್ನ ತಂದಯವರ ಬಳಿ ಏನು ಹೇಳೂವೆ”

ಜಯಶೀಲನೆಂದ “ಅದು ನಿನಗೆ ನಾಳೆ ತಾನಾಗೆ ತಿಳಿಯುವುದು ಗಿರಿ. ನನ್ನ ನಿರ್ದಾರ ನಿನಗು ಸ್ವಲ್ಪ ಆಶ್ಚರ್ಯ ತರಬಹುದು. ಆದರೆ ನಾನು ನನ್ನದೆ ಆದ ಸರಿದಾರಿ ತುಳಿಯುತ್ತಿರುವೆ, ನನ್ನ ನಿರ್ದಾರ ಸರಿ ಎಂಬ ನಂಭಿಕೆ ನನಗಿದೆ. ಈಗ ನಾನು ಹೊರಡುವೆ”

ಎನ್ನುತ್ತ ಹೊರಟುಹೋದ ಜಯಶೀಲನತ್ತ ಆಶ್ಚರ್ಯ , ಕುತೂಹಲದಿಂದ ನೋಡುತ್ತ ನಿಂತಿದ್ದ ಗಿರಿದರ.

.
.
.
6
’ಅಪ್ಪಾಜಿ ನಾನು ಸ್ವಲ್ಪ ನಿಮ್ಮ ಹತ್ತಿರ ಮಾತನಾಡಬೇಕು, ನಿಮಗೆ ಸಮಯಾವಕಾಶವಿದೆಯೆ”

ಅಪ್ಪ , ಅಮ್ಮ ಬೋಜನಶಾಲೆಯಲ್ಲಿದ್ದಾನೆ ನಿಂತು ಪ್ರಶ್ನಿಸಿದ. ಮಹಾರಾಜ ಸ್ವಲ್ಪ ಆತಂಕದಿಂದಲೆ ಜಯಶೀಲನತ್ತ ನೋಡಿದರು. ತಾಯಿ ಕುತೂಹಲದಿಂದ
“ಏನು ಮಾತು ಜಯಶೀಲ, ಅಂತಹ ಮುಖ್ಯವಾದುದ್ದು” ಎಂದರು.
“ಅಮ್ಮ ಇಲ್ಲಿ ಬೇಡ,  ಹೊರಗಿನ ವಿಶ್ರಾಂತಿ ಕೊಟಡಿಯಲ್ಲಿರುವೆ. ನೀವಿಬ್ಬರು ವಿರಾಮದಲ್ಲಿ ಬೋಜನ ಮುಗಿಸಿ ಬನ್ನಿ. ತಲೆ ತಗ್ಗಿಸಿ ನಡೆದ ಜಯಶೀಲನತ್ತ ಸ್ವಲ್ಪ ಆಶ್ಚರ್ಯದಿಂದಲೆ ದಿಟ್ಟಿಸಿದರು ರಾಜ ದಂಪತಿಗಳು.
.
ತಂದೆ ತಾಯಿ ಬಂದು ಆಸೀನರಾದನಂತರ ಜಯಶೀಲ ನಿದಾನವಾಗಿ ಮಾತನಾಡಿದ. ಜೊತೆಗೆ  ಜಯಶೀಲನ ಕೋರಿಕೆಯಂತೆ ಸತ್ಯಶೀಲನು ಬಂದು ಕುಳಿತಿದ್ದ.

“ಅಪ್ಪಾಜಿ, ಕಳೆದ ಒಂದು ವಾರದಿಂದ ಅರಮನೆಯಲ್ಲಿ ಸ್ವಲ್ಪ ಗಂಭೀರವಾದ ವಾತವರಣೆವೆ ಇದೆ.  ನನ್ನ ವಿಷಯವಾಗಿ ನೀವೆಲ್ಲರು ಅನಗತ್ಯವಾಗಿ ಆತಂಕಗೊಂಡಿದ್ದೀರಿ,   ನಿಮಗೆ ನೇರವಾಗಿಯೆ ತಿಳಿಸುತ್ತಿದ್ದೇನೆ. ನೀವು ಆ ರೀತಿ ಆತಂಕವನ್ನೆಲ್ಲ ಬಿಟ್ಟುಬಿಡಿ. ನನಗೆ ಯಾವಕಾಲಕ್ಕು ಈ ರಾಜ್ಯ ಬೇಕೆಂಬ ಆಸೆಯಾಗಲಿ. ನಾನು ರಾಜನಾಗಬೇಕೆಂಬ ಅಭಿಲಾಷೆಯಾಗಲಿ ಇರಲಿಲ್ಲ. ಈಗಲು ಇಲ್ಲ. ಅಣ್ಣ ಸತ್ಯಶೀಲ ರಾಜನಾದಲ್ಲಿ ಸಂತೋಷಪಡುವನು ನಾನು. ನೀವು ಯಾವುದೊ ಮಾತುಗಳನ್ನು ನಂಬಿ ನನ್ನ ಬಗ್ಗೆ ಇಲ್ಲದ ಕಲ್ಪನೆ ಇಟ್ಟುಕೊಳ್ಳುವುದು ಬೇಕಿಲ್ಲ. ನೀವು ನಾಳೆಯೆ ಒಬ್ಬ ಪುರೋಹಿತರನ್ನು ಕರೆಸಿ. ಅಣ್ಣನಿಗೆ ಯುವರಾಜ ಪಟ್ಟಾಭಿಷೇಕದ ಮಹೂರ್ತ ನಿಗದಿಪಡಿಸಿ. ಅದು ಆದಷ್ಟು ಹತ್ತಿರದ ದಿನವೆ ಆದಲ್ಲಿ ಮತ್ತು ಚೆನ್ನ”

ಸತ್ಯಶೀಲನು , ತಮ್ಮನನ್ನು ಆಶ್ಚರ್ಯದಿಂದ ಎಂಬಂತೆ ನೋಡುತ್ತಿದ್ದ. ಜಯಶೀಲ ಮುಂದುವರೆಸಿದ

“ನನಗೆ ಈ ರಾಜ್ಯಾಧಿಕಾರವಾಗಲಿ, ಅಥವ ಈ ಅರಮನೆಯಾಗಲಿ ಯಾವುದೆ ಆಸಕ್ತಿ ಇಲ್ಲ. ನನ್ನ ಕೆಲವು ವೈಚಾರಿಕ ಮಾತುಗಳು, ಸಂಪ್ರದಾಯ ವಿರೋದಿಯಾಗಿ ಕಾಣಿಸಿದಾಗ ಸಹಜವಾಗಿಯೆ ನನ್ನನ್ನು ಸ್ವಲ್ಪ ಆಕ್ರಮಣಕಾರಿಯಂತೆ ನೀವು ಕಲ್ಪಿಸಿಕೊಂಡಿದ್ದಲ್ಲಿ ಆಶ್ಚರ್ಯವೇನಿಲ್ಲ. ಅದರಿಂದ ನನಗೆ ಬೇಸರವು ಇಲ್ಲ. ನಾನು ಎಂದೊ ನಿರ್ದರಿಸಿದ್ದೇನೆ. ನನ್ನ ಜೀವನದ ಮಾರ್ಗ ಇದಲ್ಲ. ನಾನು ಸತ್ಯದ ಹಿಂದೆ ಹೋಗಬೇಕಿದೆ. ನಾನು ಈ ವಿಶಾಲ ಪ್ರಪಂಚದಲ್ಲಿ ನನ್ನ ಮಾರ್ಗ ಕಂಡುಕೊಳ್ಳಬೇಕಿದೆ. ಸಾವಿರಾರು ವರ್ಷಗಳಿಂದ ಎಲ್ಲರು ಒಪ್ಪುತ್ತ , ಆಚರಿಸುತ್ತ ಬರುತ್ತಿರುವ ಹತ್ತು ಹಲವು ವಿಷಯಗಳು ನನಗೆ ಮೂಡನಂಭಿಕೆಯಾಗಿಯೆ ಕಾಣುತ್ತದೆ, ನಾನು ಇವುಗಳ ಹಿಂದೆ ಇರುವ ಸತ್ಯವನ್ನು ಅರಿಸುತ್ತ ಹೊರಡಬೇಕಿದೆ. ಚಿಕ್ಕವಯಸಿನಿಂದಲು ನನ್ನ ಮನದಲ್ಲಿಯೆ ಹುದುಗಿದ ಅಭಿಲಾಷೆ ಒಂದಿದೆ ಅದನ್ನು ನಾನು ಯಾರಲ್ಲಿಯು ಹೇಳಿರಲಿಲ್ಲ, ಹೇಳುವ ಸಂದರ್ಭವು ಬಂದಿರಲಿಲ್ಲ.  ನಾನು ಈ ಜೀವನವನ್ನು ತೊರೆದು ಸನ್ಯಾಸಿಯಾಗಬೇಕೆಂದು ನಿರ್ದರಿಸಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಒಪ್ಪಿಗೆ ಬೇಕಿದೆ. ನನ್ನನ್ನು ತಡೆಯಲು ಪ್ರಯತ್ನಪಡಬೇಡಿ. ನನ್ನ ಮನ ಆ ಮಾರ್ಗದಲ್ಲಿ ಬಹಳ ದೂರ ಸಾಗಿದೆ. ಯಾವುದೆ ಆತಂಕವಿಲ್ಲದೆ ಒಪ್ಪಿಗೆ ಕೊಡಿ’

ಮೂವರು ಸಹ ಜಯಶೀಲನ ಈ ನಿರ್ದಾರದಿಂದ ಅಘಾತಗೊಂಡಿದ್ದರು. ಮಹಾರಾಜನಿಗೆ ಅಯೋಮಯವೆನಿಸಿತ್ತು. ಅಣ್ಣತಮ್ಮಂದಿರ ನಡುವೆ ರಾಜ್ಯಕ್ಕೆ ಹೋರಾಟ ನಡೆದೀತು ಎಂದೆ ಭಾವಿಸಿ, ಆತಂಕಗೊಂಡಿದ್ದ ಅವನಿಗೆ , ಜಯಶೀಲನ ನಿರ್ದಾರಕ್ಕೆ ಹೇಗೆ ಪ್ರತಿಕ್ರಿಯಿಸುವುದು ಎನ್ನುವುದು ತಿಳಿಯಲಿಲ್ಲ. ತಾಯಿಯು ಹಾಗೆ ನಿಂತಿದ್ದಳು.

ಸತ್ಯಶೀಲನೆಂದ

“ಜಯ, ಪುರೋಹಿತರ ಭವಿಷ್ಯದ ಮಾತುಗಳಿಂದ ನಾವೆಲ್ಲರು ಆತಂಕಪಟ್ಟಿದ್ದು, ನಿನ್ನ ಬಗ್ಗೆ ಅನುಮಾನಪಟ್ಟಿದ್ದು ನಿಜ. ನಾನು ಸಹ ನಿನ್ನ ಜೊತೆ ಅನಗತ್ಯವಾಗಿ  ಅಸಹನೆಯಿಂದ ವರ್ತಿಸಿದೆ. ಅದಕ್ಕೆ ನನಗೀಗ ಪ್ರಶ್ಚಾತಾಪವು ಆಗುತ್ತಿದೆ. ಆದರೆ ನೀವು ಸನ್ಯಾಸಿಯಾಗಿ ಹೋಗುವಂತ ಪ್ರಸಂಗವೇನು ಈಗ ಉದ್ಬವಿಸಿಲ್ಲ. ನಾನು ರಾಜನಾದರು ರಾಜ್ಯಾದಿಕಾರ ನಮ್ಮಿಬ್ಬರಿಗು ಸೇರಿದ್ದು ಅಲ್ಲವೆ. ನನಗೆ ಜೊತೆಯಾಗಿ ಇರು ಎಲ್ಲಿಯು ಹೋಗಬೇಡ” ಎಂದನು

ಜಯಶೀಲನೆಂದ

“ಅಣ್ಣ ನನಗೆ ನಿನ್ನ ಬಗ್ಗೆ ಯಾವ ಅಸಮಾದಾನವು ಇಲ್ಲ. ನಿನ್ನ ವರ್ತನೆ ಮನುಷ್ಯ ಸಹಜವಾಗಿತ್ತು. ಆದರೆ ನಮ್ಮೆಲ್ಲರ ಆತಂಕಕ್ಕೆ ಕಾರಣವಾಗಿದ್ದು ಯಾರು ಯೋಚಿಸು. ಪುರೋಹಿತ  ವರದಾಚಾರ್ಯರ   ಭವಿಷ್ಯವಾಣಿ ಅಲ್ಲವೆ. ಅದಕ್ಕಾಗಿಯೆ ನಾನು ಹೇಳುವುದು ಈ ರೀತಿಯ ಮೂಡನಂಬಿಕೆಗಳಿಗೆ ಬಲಿಯಾಗಿ ನಾವು ನಮ್ಮ ಜೀವನದ ಆನಂದವನ್ನು ಕಳೆದುಕೊಳ್ಳಬಾರದು. ನೀನಾದರು ಮುಂದೆ ರಾಜನಾಗುವನು, ಆ ಕಾರಣಕ್ಕೆ ಹೇಳುತ್ತಿರುವೆ. ತಿಳಿದುಕೊ. ನಮ್ಮ ಯಾವುದೆ ನಿರ್ದಾರಗಳನ್ನು ನಮ್ಮ ಚಿಂತನೆಯ ಫಲವಾಗಬೇಕು. ತರ್ಕಬದ್ದವಾಗಿರಬೇಕು, ಮತ್ತು ಅಂತಹ ನಿರ್ದಾರಗಳಿಂದ ನಮ್ಮ ಆಡಳಿತ ಸುಗಮವಾಗಿ ಸಾಗುವಂತಾಗಿ ಜನರೆಲ್ಲ ಸುಖವಾಗಿರಬೇಕು ಅಲ್ಲವೆ. ಬದಲಾಗಿ  ಯಾವುದೊ ಮೂಡನಂಬಿಕೆಗಳ ಭವಿಷ್ಯವಾಣಿಗಳ ಮೇಲೆ ನಮ್ಮ ಜೀವನದ ನಿರ್ದಾರಗಳು ಸಾಗಬೇಕೆ. ಅವನ್ನೆಲ್ಲ ನಿಜ ಎಂದು ನಂಬಬೇಕೆ”

ಸತ್ಯಶೀಲ ಚಿಂತಿತನಾಗಿದ್ದ
“ಅಂದರೆ ನಿನ್ನ ಮಾತು ನಿಜ ಜಯಶೀಲ, ಈ ಸಂಪ್ರದಾಯ ಪದ್ದತಿ, ಇವೆಲ್ಲ ನಮ್ಮ ಹಾದಿ ತಪ್ಪಿಸುತ್ತವೆ ಅಲ್ಲವೆ?”
ಜಯಶೀಲನೆಂದ
“ಮತ್ತೆ ತಪ್ಪಬೇಡ ಅಣ್ಣ, ನಾನು ಪೂರ್ಣವಾಗಿ ಸಂಪ್ರದಾಯ, ಸಂಸ್ಕೃತಿ,  ಪದ್ದತಿಗಳ ವಿರೋದಿಯಲ್ಲ. ಅವೆಲ್ಲ ಜನಹಿತದ ದೃಷ್ಟಿಯಲ್ಲಿಯೆ ಇರುವುದು. ಈಗ ನೋಡು ಹಿರಿಯ ಮಗ ರಾಜ್ಯವಾಳಬೇಕೆಂಬುದು ನಮ್ಮ ರಾಜ್ಯದ ಸಂಪ್ರದಾಯ, ಹಾಗು ಪದ್ದತಿ. ಅದರಲ್ಲಿ. ಉತ್ತಮವಾದ ವಿಚಾರವೆ ಇದೆ.  ಹೀಗೆ ಒಂದು ನಿಯಮವಿಲ್ಲದಿದ್ದರೆ, ರಾಜ್ಯದಲ್ಲಿ ಅರಾಜಕತೆ ತಲೆದೋರುತ್ತದೆ. ಯಾರು ರಾಜ್ಯ್ವವಾಳಬೇಕೆಂದು ಯಾವಾಗಲು ಹೋರಾಟವೆ ಇರುತ್ತದೆ. ಹಾಗಾಗಿ ಯಾವಾಗಲು ಆಡಳಿತ ಆತಂಕದಲ್ಲಿಯೆ ಇದ್ದು ಪ್ರಜೆಗಳಿಗೆ ನ್ಯಾಯ ದೊರೆಯುವದಿಲ್ಲ. ಬದಲಾಗಿ ಹಿರಿಯಪುತ್ರ ರಾಜನೆಂಬ ನಿಯಮ ಪಾಲಿಸಿದರೆ ಎಲ್ಲವು ಸರಾಗ. ಹಿರಿಯನು ರಾಜನಾಗಲು ಅನರ್ಹನಾದಾಗ ಬೇರೆಯ ವಿಚಾರ. ಈಗೇನು ಅಂತಹ ಸಂದರ್ಬವಿಲ್ಲ ಅಲ್ಲವೆ. ನಾನು ಹೇಳುವುದು ಬೇರೆ. ಸಂಪ್ರದಾಯಗಳ ಹೆಸರಲ್ಲಿ ಕೆಲವು ಮೂಡನಂಬಿಕೆಗಳು ಬೇರು ಬಿಟ್ಟಿವೆ. ನಾನು ಹೇಳಲಿಲ್ಲವೆ, ನಮ್ಮ ತರ್ಕ, ಬುದ್ದಿಶಕ್ತಿಯಿಂದ ತೆಗೆದುಕೊಳ್ಳಬೇಕಾದ ನಿರ್ಧಾರಗಳಿಗೆ,  ರಾಜ್ಯದ ಆಡಳಿತ ವರ್ಗ ನಿರ್ದರಿಸಬೇಕಾದ ವಿಷಯಗಳಿಗೆ ಭವಿಷ್ಯವಾಣಿಗಳಂತ ಮೂಡನಂಬಿಕೆಗಳಿಗೆ ಶರಣುಹೋಗಬಾರದು ಎಂಬುದು ನನ್ನ ಅಭಿಪ್ರಾಯ” ಎಂದು ಮಾತು ನಿಲ್ಲಿಸಿದ.

ಮಹಾರಾಜನ ಮುಖ ಗಂಭೀರವಾಗಿತ್ತು.

ಸತ್ಯಶೀಲ , ತಮ್ಮನನ್ನು ಅನುನಯಿಸಲು ಎಷ್ಟೋ ಪ್ರಯತ್ನಿಸಿದ. ತಮ್ಮನದು ಒಂದೆ ಉತ್ತರ

“ಇದು ಯಾರ ಒತ್ತಯವು ಅಲ್ಲ, ನನ್ನ ಅಭಿಲಾಷೆ. ನೀನು ನಿರಾಂತಕವಾಗಿ ರಾಜ್ಯವಾಳು. ನಾನು ಹಿಡಿಯುತ್ತಿರುವ ದಾರಿಯೆ ಬೇರೆ”
ಮಹಾರಾಜನು   ನಿಸ್ಸಹಾಯಕನಾಗಿ ಎದ್ದುಬಂದು, ಕಿರಿಯಪುತ್ರನ ಬುಜ ಅದುಮಿದ.


ಜಯಶೀಲನ ನಿರ್ದಾರ ಅಚಲವಾಗಿತ್ತು. ಅವನ ತಂದೆ ತಾಯಿ ಅಥವ ಅಣ್ಣನಾಗಲಿ ಅವನ ನಿರ್ದಾರ ಬದಲಿಸಲು ಸೋತರು. ಅವನು ಸತ್ಯದ ಅನ್ವೇಷಣೆಯ ಮಾರ್ಗ ಹಿಡಿದು ಹೊರಟಿದ್ದ. ಸನ್ಯಾಸಿಯಾಗುವುದು ಅವನ ನಿರ್ದಾರವಾಗಿತ್ತು. ಪುರೋಹಿತರ ಭವಿಷ್ಯವಾಣಿ , ಜಯಶೀಲ ರಾಜನಾಗುವನು, ಸತ್ಯಶೀಲನು ಎಂದಿಗೂ ರಾಜನಾಗುವದಿಲ್ಲ ಎನ್ನುವದನ್ನು ಅವನು ಸುಳ್ಳುಮಾಡಿ ಹೊರಟುಹೋಗಿದ್ದ.


 ಮುಗಿಯಿತು.
 

Rating
No votes yet

Comments

partha1059

Sun, 11/25/2012 - 22:22

ಹಿನ್ನುಡಿ : ಕೆಲವು ದಿನದ ಹಿಂದೆ ಬೆಳಗ್ಗೆ ಬೆಳಗ್ಗೆ ಏನನ್ನೊ ಓದುವಾಗ , ರಾಜಕುಮಾರನೊಬ್ಬ ತನ್ನ ಪುರೋಹಿತರ ಭವಿಷ್ಯ ಸುಳ್ಳು ಎಂದು ನಿರೂಪಿಸುವದಕ್ಕಾಗಿ ಸನ್ಯಾಸ ಸ್ವೀಕರಿಸಿ ಹೊರಟುಹೋದ ಎನ್ನುವ ಸಾಲೊಂದನ್ನು ಓದಿದೆ. ಅದೇಕೊ ಅದೆ ಅದೆ ಸಾಲುಗಳೆ ನನ್ನ ಮನಸಿನಲ್ಲಿ ಪುನಃ ಪುನಃ ಬರುತ್ತಿತ್ತು. ಸಂಜೆಯ ವೇಳೆಗೆ ಮನದಲ್ಲಿ ಒಂದು ಕತೆ ರೂಪಗೊಳ್ಳುತ್ತಿತ್ತು. ಸಂಜೆ ಮನೆಗೆ ಬಂದು ಪುನಃ ಅದನ್ನು ಎಲ್ಲಿ ಎಂದು ಹುಡುಕಲು ಪ್ರಯತ್ನಿಸಿದೆ. ಆದರೆ ಆ ಸಾಲುಗಳು ಪುನಃ ಸಿಗಲೆ ಇಲ್ಲ. ಅದನ್ನು ಎಲ್ಲಿ ಓದಿದೆ ಎನ್ನುವದನ್ನು ತಿಳಿಯಲಾಗಲಿಲ್ಲ. ಅದೇಕೊ ಗೂಗಲ್ ಸಹ ಆ ರೀತಿಯ ಕತೆಯನ್ನು ನನಗೆ ಒದಗಿಸುವಲ್ಲಿ ವಿಫಲವಾಯಿತು. ಸರಿ ಎನ್ನುತ್ತ ನನ್ನದೆ ಕಲ್ಪನೆಯಲ್ಲಿ ಕತೆ ಒಂದನು ಬರೆದೆ. ಅದೇನೊ ಜಯಶೀಲ ಎನ್ನುವ ಹೆಸರೊಂದು ನೆನಪಿತ್ತು.
ನಮ್ಮ ನಿರ್ದಾರಗಳು ನಮ್ಮ ತರ್ಕ ಹಾಗು ಅನುಭವದಿಂದ ಆಗಬೇಕೆ ಹೊರತು, ಭವಿಷ್ಯದ ನುಡಿಗಳಿಂದ ಅಲ್ಲ ಅನ್ನುವುದು ಕತೆಯ ಸಾರಂಶ ಅದರಲ್ಲು ಆಳುವವರು ಆ ರೀತಿ ಆದರೆ ಪ್ರಜೆಯಗಳಿಗೆ ಮತ್ತಷ್ಟು ಮಾರಕ. ಇರಲಿ ಬಿಡಿ ಕತೆ ಹೇಗಿದೆ ತಿಳಿಸಿ
ಈ ಬಾರಿ ಸಣ್ಣ ಕತೆ ಎಂದು ಶೀರ್ಷಿಕೆಯಲ್ಲಿ ಹಾಕದೆ ಕತೆ ಎಂದೆ ಹಾಕಿದ್ದೇನೆ :)))

ಪಾರ್ಥರೆ , ಕತೆಯನ್ನು ಚೆನ್ನಾಗಿ ಬರೆದಿದ್ದೀರಿ. ನನಗೆ ಸೇರಿತು.

ಚಾಣಕ್ಯ ಚಿಕ್ಕವನಿದ್ದಾಗ ಅವನ ಅಂಗೈ ನೋಡಿ ಅವನಿಗೆ ರಾಜಯೋಗ ಇದೆ ಅಂತ ಜ್ಯೋತಿಷಿಗಳು ಹೇಳಿದರು. ರಾಜನಾಗಿ ತನ್ನನ್ನು ಮರೆಯುತ್ತಾನೆ ಎಂದೋ ಮತ್ತೇತಕೋ ಅವನ ತಾಯಿಗೆ ಚಿಂತೆ ಆಯಿತು. ಆಗ ಚಾಣಕ್ಯನು ತಾಯಿಯ ಚಿಂತೆ ದೂರ ಮಾಡಲು , ತನ್ನ ರಾಜಯೋಗದ ಅಂಗೈಯ ರೇಖೆಯನ್ನು ಅಳಿಸಿಕೊಳ್ಳಲು ಆಯುಧದಿಂದ ಗಾಯ ಮಾಡಿಕೊಳ್ಳುತ್ತಾನೆ ಅಂತ ಓದಿದ ನೆನಪು.

ವ0ದನೆಗಳು ಮಿಶ್ರಕೋಟಿಯವರೆ
ಹಲವು ಪುಸ್ತಕಗಳನ್ನು ಓದುತ್ತಲೆ ಇರುವ‌ ಪುಸ್ತಕ‌ ಪ್ರೇಮಿಯಾದ‌ ನಿಮಗೆ ನನ್ನ ಕಥೆ ಮೆಚ್ಚುಗೆ ಆಗಿದ್ದು ನನಗೆ ಖುಷಿ ತ0ದಿದೆ
ನೀವು ಹೇಳಿದ‌ ಚಾಣಕ್ಯನ‌ ಕತೆಯ‌ ಘಟನೆಯನ್ನು ನಾನು ಎಲ್ಲಿಯೋ ಓದಿರುವೆ / ಕೇಳಿರುವೆ

H A Patil

Mon, 11/26/2012 - 20:19

ಪಾರ್ಥ ಸಾರಥಿ ಯವರಿಗೆ ವಂದನೆಗಳು
ತಮ್ಮ ವಿರಚಿತ ಕಥೆ " ಸುಳ್ಳಾದ ಭವಿಷ್ಯ " ಉತ್ತಮವಾದ ನೀತಿ ಬೋಧಕ ಕಥೆ. ಓದಿದ ಒಂದು ವಾಕ್ಯದ ಆಧಾರದ ಮೇಲೆ ಅದ್ಭುತವಾಧ ಕಥೆ ಹೆಣೆದಿದ್ದೀರಿ. ಸೊಗಸಾಗಿ ಓದಿಸಿಕೊಂಡು ಹೋಗುವ ಕಥಾನಕ. ಧನ್ಯವಾದಗಳು.

raghumuliya

Tue, 11/27/2012 - 15:56

ಪಾರ್ಥ‌,
ಸೊಗಸಾದ‌ ನಿರೂಪಣೆ.ಸನ್ಯಾಸಿಯಾಗುವ‌ ಮೂಲಕ‌ ಜಯಶೀಲ‌ ಲೌಕಿಕವನ್ನು ಜಯಿಸಿದ‌ ರಾಜನಾದ‌ !

ರಘು ವ0ದನೆ ಹಾಗು ಸ0ಪದಕ್ಕೆ ಪುನಹ ಸ್ವಾಗತ‌. ನೀವು ಹೇಳಿದ0ತೆ ಕಾಗುಣಿತ‌ ತಿದ್ದಿಕೊಳ್ಳುವ‌ ಅವಶ್ಯಕತೆ ಇದೆ. ಈಗ‌ ಒಮ್ಮೆ ಹಾಕಿದ‌ ನ0ತರ‌ ತಿದ್ದುವ‌ ಅವಕಾಶವಿಲ್ಲ ಹಾಗಾಗಿ ಮು0ದೆ ಬರಹವನ್ನು ಏರಿಸುವದಕ್ಕಿ0ತ ಸಾಕಷ್ಟು ಮು0ಚೆಯೆ ಎಚ್ಚರವಹಿಸುವೆ :‍)

ಗಣೇಶ

Tue, 11/27/2012 - 23:42

ಭವಿಷ್ಯ ಸುಳ್ಳಾಗುವುದು ಸಾಧ್ಯವೇ ಇಲ್ಲ! ನಮ್ಮಂತಹ ಸಾಧು-ಸಂತರು ಬದಲಾಯಿಸಬಲ್ಲೆವು. ಈ ಕತೆಯಲ್ಲಿಯೂ ನೋಡಿ ಉಂಡಾಡಿ ಗುಂಡ(ಜಯಶೀಲ)ನನ್ನ ಹೀರೋ ಮಾಡಲು ಹೊರಟಿದ್ದಾರೆ ನಮ್ಮ ಪಾರ್ಥರು. ಪ್ರಚಂಡ ವಿದ್ವಾನ್ ಆಸ್ಥಾನ ಜ್ಯೋತಿಷಿಗಳನ್ನು ಅವಮಾನಿಸುತ್ತಿದ್ದಾರೆ. ಆದರೆ ಅಲ್ಲಿ ನಡೆದದ್ದೇ ಬೇರೆ----> >>>ಆದರೆ ಜಯಶೀಲ ಒಳಗೆ ಹೋಗಲಿಲ್ಲ . ಒಂದೆರಡು ಕ್ಷಣಗಳ ಕಾಲ ಪುರೋಹಿತರ ಮುಖವನ್ನೆ ನೋಡುತ್ತ ನಿಂತ . ನಂತರ ಗಿರಿಧರನೊಡನೆ“ನಡೆ ಗಿರಿ , ಇನ್ನು ನಾವು ಬಂದ ಕೆಲಸವಾಯಿತು” ಎನ್ನುತ್ತ ತಿರುಗಿ, ಹೊರಟುಬಿಟ್ಟ.------------ಇಲ್ಲಿ ನಡೆದದ್ದೇನು ಎಂದರೆ- ರಾಜ ಪುರೋಹಿತರು ಆತನನ್ನು ತಮ್ಮ ತಪೋಬಲದಿಂದ+ಮಂತ್ರಶಕ್ತಿಯಿಂದ ಸನ್ಯಾಸಿಯಾಗುವಂತೆ ಮಾಡಿದರು. :)-----------------"ಡಿಸೆಂಬರ್‌ನಲ್ಲಿ ಪ್ರಳಯ" ಆಗದಿದ್ದರೆ,ಭವಿಷ್ಯ ಸುಳ್ಳು ಅನ್ನಬೇಡಿ. ಅದಕ್ಕೆ ಕಾರಣ- ಪ್ರಳಯವನ್ನೇ ನಮ್ಮ ತಪಃಶಕ್ತಿಯಿಂದ ಮುಂದೂಡಲಿದ್ದೇವೆ.:)
--ಪ್ರಳಯ ಸ್ಸಾರಿ ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ.

ಪುರೋಹಿತರ ಮನೆಗೆ ಬಂದ ರಾಜಕುಮಾರನಿಗೆ ಸತ್ಯಾ0ಶ ತಿಳಿಯಿತು ... ದಿನವು ದಿವ್ಯ ದಿರಿಸಿನಲ್ಲಿ ಶ್ರೀಮದ್ ಗಾ0ಭೀರ್ಯದಲ್ಲಿರುತ್ತಿದ್ದ ಪುರೋಹಿತರು ಮನೆಯಲ್ಲಿ ಸಾಧಾರಣ ಉಡುಪಿನಲ್ಲಿದ್ದರು... ವಿನಯ 'ಪ್ರದರ್ಶಿಸಿದರು' ... ತಮ್ಮ ಬಡತನ ನೀಗಿಸಿಕೊಳ್ಳಲು, ತಮ್ಮ ಬೆಲೆ ಹೆಚ್ಚಿಸಿಕೊಳ್ಳಲು ಹೀಗಾಡಿದರೆ0ದು ಅರಿತ ರಾಜಕುಮಾರನಿಗೆ ಜೀವನದ ಬಗ್ಗೆ ವಿರಕ್ತಿ ಮೂಡಿತು / ಹೆಚ್ಚಿತು ಎಂದು ತರ್ಕೆಶ್ವರ'ರ ಅಭಿಪ್ರಾಯ

ಗುರುಗಳೇ-
ಸತ್ಯಶೀಲ-ಜಯ ಶೀಲ ಹೆಸರು ಬಳಕೆ. ಈಚಿನ ದಿನಗಳಲಿ ಓದಿದ ವಿಭಿನ್ನ ವಿಶೇಷ ಕಥಾ ಆಯ್ಕೆ, ಸರಳ ನಿರೂಪಣೆ ಹಿಡಿಸಿತು.
ಜಯಶೀಲನ ಹಾದಿ-ದಾರಿ-ಗುರಿ ನಿರ್ಧಾರ ಆಚಲವೂ ಸ್ಪುಸ್ತವೂ ಆಗಿತ್ತು..
ಗೂಗಲ್ ಬಗ್ಗೆ ನೀವು ಹೇಳಿದ್ದು 50:50 ತರಹ...
ನನಗಂತೂ ಬಹುಪಾಲು ಸಂದರ್ಭಗಳಲ್ಲಿ ಗೂಗಳ ಗಾಗಲ್ ಹಾಕಿಕೊಂಡು ಸರಿಯಾದ ಮಾಹಿತಿ ಹುಡುಕಿ ಕೊಟ್ಟಿದೆ.
ಶುಭವಾಗಲಿ.

\|

ಪಾರ್ಥ ಸರ್,
ಪುರೋಹಿತರ ಭವಿಷ್ಯವಾಣಿ ನಿಜಕ್ಕೂ ಸುಳ್ಳಾಗಲಿಲ್ಲ ಆದರೆ ಅವರು ಅದನ್ನು ವಿಶ್ಲೇಷಿಸಿದ್ದು ಸರಿಯಾಗಿರಲಿಲ್ಲವಷ್ಟೇ! ಏಕೆಂದರೆ ರಾಜಕೀಯವಾಗಿ ಹಿರಿಯ ಅಣ್ಣನಾದ ಸತ್ಯಶೀಲನೇ ರಾಜನಾದರೂ ಸಹ ಚಿಕ್ಕವನಾದ ಜಯಶೀಲ ತನ್ನ ತ್ಯಾಗ ಬುದ್ಧಿಯಿಂದ ಜನಮಾನಸದ ರಾಜನಾಗಲಿಲ್ಲವೇ? :))
ಇರಲಿ ಬಿಡಿ, ಭವಿಷ್ಯದ ಕುರಿತಾಗಿ ಪ್ರಸಿದ್ಧ ಹೇಳಿಕೆಯೇ ಇದೆ, ಅದೆಂದರೆ "ಪಂಚ ಭವತಿ, ಪಂಚ ನ ಭವತಿ" ಇದನ್ನೇ ಬೇರೊಂದು ರೀತಿಯಲ್ಲಿ ನೀವು ಪುನರುಚ್ಛರಿಸಿದ್ದೀರಿ. ಭವಿಷ್ಯ ಎನ್ನುವ ವಿಜ್ಞಾನ ಸುಳ್ಳಲ್ಲ ಆದರೆ ಅದರ ದುರ್ಬಳಕೆ ಖಂಡಿತಾ ಸಲ್ಲದು ಮತ್ತದು ಅಧಮರ ಕೈಯೊಳಗೆ ಸಿಕ್ಕಿ ಮೂಢ ನಂಬಿಕೆಯಾಗಿದೆಯಷ್ಟೇ! ಡೋಂಗಿ ವೈದ್ಯನನ್ನು ನೋಡಿ ವೈದ್ಯಕೀಯವೇ ಬೂಟಾಟಿಕೆ ಎಂದ ಹಾಗಿದೆ ಕೆಲವು ಢೋಂಗಿ ಜೋತಿಷಿಗಳನ್ನು ನೋಡಿ; ಈಗಿನ ಕಾಲದಲ್ಲೂ ನಿಜವಾದ ಜ್ಞಾನಿಗಳಿದ್ದಾರೆ ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟಿದೆಯಷ್ಟೇ. ಅದೇನೇ ಇರಲಿ ಒಂದು ಒಳ್ಳೆಯ ಕಥೆಯನ್ನು ಕೊಟ್ಟಿರುವುದಕ್ಕೆ ತಮಗೆ ಧನ್ಯವಾದಗಳು.