ಕತ್ತಲು ಕಾರ್ಯಾಚರಣೆ

ಕತ್ತಲು ಕಾರ್ಯಾಚರಣೆ

’ಸಜ್ಜನರ ಸಂಗವದು ಹೆಚ್ಚೇನು ಸವಿದಂತೆ’ ಎಂಬ ಮಾತೊಂದಿದೆ.  ಜೇನು  ಸವಿಯದವರೇ ಇರಲಿಕ್ಕಿಲ್ಲ.  ಜೇನಿನಲ್ಲಿ ಹಲವು ಪ್ರಬೇಧಗಳು ಇವೆ. ನೆಲದಡಿ ಮಟ್ಟದಿಂದ ಹಿಡಿದು ಅತ್ಯಂತ ಎತ್ತರದವರೆಗೂ ಜೇನು ಗೂಡುಗಳನ್ನು ನೋಡಬಹುದು.
ಮೊನ್ನೆ ಗುಡ್ಡದಕಲ್ಲು ಎಂಬಲ್ಲಿಗೆ ಹೋಗಿದ್ದೆ. ಅದು ಜನಸಂಚಾರ ಇರುವ ಪ್ರದೇಶ. ಅಲ್ಲಿ ಒಬ್ಬ ಹದಿಹರೆಯದ ಹುಡುಗ ಕಲ್ಲು ಎಸೆಯುತ್ತಿದ್ದ. ಅವನ ಗುರಿ ಕುಡಿಯುವ ನೀರಿನ ಸರಬರಾಜಿಗಾಗಿ ಕಟ್ಟಿದ ಎತ್ತರದ ನೀರಿನ ಟ್ಯಾಕ್‌ನ ತುದಿಯಲ್ಲಿ ಗೂಡು ಕಟ್ಟಿದ ಜೇನಿನ ಗೂಡಾಗಿತ್ತು. ತತಕ್ಷಣಕ್ಕೆ ನಾನೂ ಸೇರಿದಂತೆ ಹಲವರು ಜೋರಾಗಿ ಕೂಗಿಕೊಂಡೆವು.ಆತ ಕಲ್ಲು ಹೊಡೆಯುವುದನ್ನು ನಿಲ್ಲಿಸಿದ. ಆತನ ಗುರಿ ಸರಿಯಾಗಿದ್ದು ಅದು ಗೂಡಿಗೆ ತಟ್ಟಿದ್ದರೆ, ಹಲವರು ಆಸ್ಪತ್ರೆಯಲ್ಲಿ ಹಲವರು ಸ್ಮಶಾನದಲ್ಲಿ ಇರಬೇಕಾಗುತ್ತಿತ್ತು. ಇಂತಹ ಭಯಾನಕ ಸನ್ನಿವೇಶಗಳಲ್ಲು ಪರಿಣಿತರು ಜೇನು ಗೂಡೆಗೇ ಕೈಹಾಕುತ್ತಾರೆ. ಅದೂ ರಾತ್ರೆ ಕಾರ್‍ಯಾಚರಣೆಯಲ್ಲಿ
 ಈ ಮರವನ್ನು ನೋಡಿ.  ಇದು ಸಿರಸಿ ಎಲ್ಲಾಪುರಗಳ ನಡುವೆ ಇದೆ. ಈ ಗಿಡವು ನಿಮಗೆ ಕಾಣುವುದಕ್ಕಿಂತ ಮೂರು ಪಟ್ಟು ಎತ್ತರವಾಗಿದೆ. ಅಡವಿಯಲ್ಲಿ ಇದಕ್ಕೂ ಎತ್ತರವಾದ ಮರಗಳಿದ್ದು, ಸಾಮಾನ್ಯವಾಗೆ ಆಲ್ಲೆಲ್ಲಾ ನೂರಾರು  ಜೇನುಗೂಡುಗಳು ಜೋತುಬಿದ್ದಿರುತ್ತವೆ  ಅತಿ ಎತ್ತರವೆಂದು ಪ್ರಖ್ಯಾತವಾದ ಮರದ ವಿವರ ಹೀಗಿದೆ,  ಹೆಸರು;- ಅಡವಿಬೆಂಡೆ. ವಯಸ್ಸು;-ಅಂದಾಜು ೨೦೦ ವರ್ಷಗಳು. ಎತ್ತರ;- ೫೨ ಮೀಟರುಗಳು. ಬುಡದಲ್ಲಿಯ ಸುತ್ತಳತೆ ;-೨೧ ಮೀಟರ. ಸ್ಥಳ;- ಸಿರಸಿಯಿಂದ ೯ ಕಿಲೋಮೀಟರ (ಸೋಂದಾ ಮಠಕ್ಕೆ ಹೂಗುವ ಮುಖ್ಯ ರಸ್ಥೆಯ ಪಕ್ಕದಲ್ಲಿಯೇ ಇದೆ.)
ರಾತ್ರೆ ಕಾರ್ಯಾಚರಣೆಗೆ ಸಾಧಾರಣವಾಗಿ ಅಮಾವಾಸೆಯ ಹಿಂದಿನ ಮುಂದಿನ ದಿನಗಳಲ್ಲಿ ನಡೆಯುತ್ತದೆ. ಐದಾರು ಜನರ ಪಂಗಡ ಇರುತ್ತದೆ. ಮೊದಲು ಹಗಲಿನಲ್ಲಿಯೇ ಕೂಲಂಕುಶ ಸ್ಥಳ ಪರೀಕ್ಷೆ ನಡೆಸಿ ಮುನ್ನೆಚ್ಚರಿಕೆ ಕೃಮಗಳಬಗ್ಗೆ ತಯಾರಿ ನಡೆಸಿರುತ್ತಾರೆ. ಹಗ್ಗಕ್ಕೆ ಸ್ವಲ್ಪ ಭಾರವಾದ ವಸ್ಥುವನ್ನು ಕಟ್ಟಿ ಅದನ್ನು ಮೇಲಕ್ಕೆ ಒಗೆಯುವುದರ ಮೂಲಕ ಅದು ಒಂದು ಕೊಂಬೆಗೆ ಸುತ್ತು ಹೊಡೆದು ಕೆಳಕ್ಕೆ ಬರುವಂತೆ ಮಾಡುತ್ತಾರೆ. ಹಗ್ಗವನ್ನು ಭದ್ರಪಡಿಸಿಕೊಳ್ಳುತ್ತಾರೆ. ಇಂತಹ ಮರಗಳಲ್ಲಿ ಮೊದಲನೆಯ ರೆಂಬೆಯೇ ಕನಿಷ್ಠ ೬೦-೭೦ ಆಡಿ ಎತ್ತರದಲ್ಲಿ ಇರುತ್ತವೆ.
ಹಗ್ಗವನ್ನು ಹಿಡಿದು ಒಬ್ಬಾತ ಮರವನ್ನು ಏರುತ್ತಾನೆ. ಹೀಗೆ ಮರ ಏರಲು ಸಾಧ್ಯವಾಗದಿದ್ದಲ್ಲಿ ಪಕ್ಕದ ಮರದ ಮೂಲಕವೂ ಏರಲು ಪ್ರಯತ್ನಿಸುತ್ತಾನೆ. ತನಗೆ ಬೇಕಾದ ರೆಂಬೆಯ ಮೇಲೆ ಕುಳಿತುಕೊಂಡು, ಸಾಮಾಗ್ರಿಗಳನ್ನು ಕಳುಹಿಸಿಕೊಡಲು ಸಂಕೇತ ಮಾಡುತ್ತಾನೆ. ಅವು ಬಂದ ಮೇಲೆ ಅದರಲ್ಲಿರುವ ಒಂದು ಕತ್ತದ ಹಗ್ಗಕ್ಕೆ (ತೆಂಗಿನನಾರಿನಿಂದ ತಯಾರಿಸಿದ್ದು) ಬೆಂಕಿಹಚ್ಚಿ ಅದರಿಂದ ಜೇನು ರಟ್ಟನ್ನು ಸುಡುತ್ತಾನೆ-- ಎಂಬುದು ತಪ್ಪು. ಆತನು ಪ್ರಾಣಿ ಹಿಂಸೆ ಮಾಡುವುದಿಲ್ಲ. ಹಗ್ಗವು ಕೆಂಪಗೆ ಕೆಂಡದ ಹಾಗೆ ಆಗುವಂತಾದ ಮೇಲೆ, ಆ ಬೆಂಕಿಯನ್ನು ಜೀನು ಗೂಡಿನ  ತಲೆಯ ಮೇಲೆ ಮೆಲ್ಲಗೆ ತಟ್ಟುತ್ತಾನೆ. ಆಗ ಊದುಬತ್ತಿಯ ತುದಿಯಲ್ಲಿರುವ ಕೆಂಪಗಿನ ಕಿಡಿಯಂತಹ ಕಿಡಿಗಳು ಉದುರ ತೊಡಗುತ್ತವೆ. ಹುಚ್ಚು ಜೇನು ಹುಳಗಳು ಮಿಲಿಟರಿ ಸೈನಿಕರಂತೆ ಆ ಕಿಡಿಯ ಮೇಲೆ ದಾಳಿಮಾಡುತ್ತವೆ. ಆ ಕಿಡಿಗಳು ಕೆಳಕ್ಕೆ ಬೀಳುತ್ತ ಬೀಳುತ್ತ ಆರಿ ಹೋಗುತ್ತವೆ. ಅದನ್ನು ಬೆಂಬತ್ತಿಬಂದ ಹುಳುಗಳಿಗೆ ಮೇಲಕ್ಕೆ ಹೋಗಲು ಕತ್ತಲೆಯಲ್ಲಿ ಸಾಧ್ಯವಾಗುವುದಿಲ್ಲ. ಅಲ್ಲೇ ಎಲ್ಲಾದರೂ ಏನನ್ನಾದರೂ ಹಿಡಿದುಕೊಂಡು ಕಿಂಕರ್ತವ್ಯ ವಿಮೂಡರಾಗಿ ಕುಳಿತಿರುತ್ತವೆ.
ಗೂಡು ಖಾಲಿಯಾದದ್ದನ್ನು ಖಾತ್ರಿಪಡಿಸಿಕೊಂಡು ಮೊದಲು ಅದರ ಮೊಟ್ಟೆ/ಮರಿಗಳಿರುವ ಭಾಗವನ್ನು ಕತ್ತರಿಸಿ ತೆಗೆದು. ಮರಿ/ ಮೊಟ್ಟೇಗಳಿಗೆ ಜೀವದಾನ ಮಾಡಲಾಗುತ್ತದೆ.
ಅನಂತರ ಗೂಡನ್ನು ಕತ್ತರಿಸಿ ಬಕೆಟನಲ್ಲಿ ಇಟ್ಟು ಹಗ್ಗದ ಮೂಲಕ ಕೆಳಗೆ ಸಾಗಿಸಲಾಗುತ್ತದೆ. ಕೆಲವು ಸಾರೆ ಈ ಗೂಡುಗಳು ಎಷ್ಟು ದೊಡ್ಡದಿರುತ್ತದೆಂದರೆ, ಎರಡು ಮೂರು ಬಕೆಟ್‌ಗಳು ಬೇಕಾಗಬಹುದು. ಅನಂತರ ಮುಂದಿನಗೂಡಿಗೆ ಅದಾದಮೇಲೆ ಮೇಲಿನ ರೆಂಬೆಗೆ ಕತ್ತಲೆಯಲ್ಲೇ ಮುಂದುವರೆಕೆ.
ಕೆಲವು ಸಾರೆ ಜೇನು ಗೂಡುಗಳನ್ನು ಎತ್ತರದ ಗುಡ್ಡದ / ದೊಡ್ಡ ಬಂಡೆಯ ಓರೆಯಲ್ಲಿ ಕಟ್ಟಿದಾಗ್ಯೂ ಈ ಭೂಪರು ತಮ್ಮ ಸಾಹಸ ಬಿಡುವವರಲ್ಲ. ಹೇಗಾದರೂ ಮಾಡಿ ಆ ಜಾಗವನ್ನು ತಲುಪುತ್ತಾರೆ. ಕೆಲವು ಸಾರೆ ಹೀಗೆ ಮಾಡುತ್ತಾರೆ- ಭದ್ರವಾದ ಜಾಗದಲ್ಲಿ ಹಗ್ಗವನ್ನು ಭದ್ರಪಡಿಸಿ ಕೊಳ್ಳುತ್ತಾರೆ. ಜೋಕಾಲಿ ಆಡಿ ಜೀಇಇಇಇಇಕಿ ಅದರ ಹತ್ತರದ ಯಾವದಾದರೂ ಒಂದು ಆಯಕಟ್ಟಿನ ಜಾಗಕ್ಕೆ(ಜೋತು ಬಿದ್ದ ಬೇರು ಮರದ ಟೊಂಗೆ ಇತ್ಯಾದಿ) ಸೇರಿಕೊಂಡು ಜೋತುಬಿದ್ದು, ಜೇನನ್ನು ತೆಗೆಯುತ್ತಾರೆ! ಅದೂ ಕಾರ್ಗತ್ತಲಿನಲ್ಲಿ!!
ಸೇಂದಿ ಇಳಿಸುವ ಜಾಗಕ್ಕೆ ಹೋದರೆ, ನೀವು ಸಾಕು ಎನ್ನುವರೆಗೂ ಸೇಂದಿಯನ್ನು ನಿಮ್ಮ ಬಾಯಿಗೆ ಸುರಿಯಲಾಗುತ್ತದಂತೆ.  ಜೇನು ಈಳಿಸುವ ಜಾಗದಲ್ಲಿ ಹಾಗೇನೂ ಇಲ್ಲ. ಆದರೆ ಒಂದೊಂದು ಚೂರು ಜೇನು ಗೂಡನ್ನು ತಿನ್ನಲು ಕೊಡುತ್ತಾರಂತೆ.  ಜೇನು ತುಪ್ಪವನ್ನು ಎಲ್ಲರೂ ಸವಿದಿರಬಹುದು ಆದರೆ ಜೇನು ಗೂಡು ತಿನ್ನುವ ಭಾಗ್ಯ ಎಲ್ಲರಿಗೂ ಲಭಿಸುವುದಿಲ್ಲ. ಹೀಗೆ ಜೇನನ್ನು ಇಳಿಸುವವರು  ಗುತ್ತಿಗೆಯಮೂಲಕ  ಸರಕಾರಕ್ಕೆ ಕಂದಾಯ ಕಟ್ಟುತ್ತಾರೆ.  ಬೇರೆಯವರು ಜೇನನ್ನು ಇಳಿಸಲು ಹೋದರೆ ಜೇನು ಕಡಿಯುತ್ತದೆಯೋ ಇಲ್ಲವೋ, ಗುತ್ತಿಗೆದಾರರಂತೂ ಬಡಿದೇ ಬಡಿಯುತ್ತಾರೆ.
ಮೇಲೆ ಉಲ್ಲೇಖಿಸಿದ ೨೦೦  ವರ್ಷಗಳಷ್ಟು ಹಳೆಯ ಮರಕ್ಕೆ ಸುತ್ತುಮುತ್ತಲಿನ ಗ್ರಾಮಸ್ಥರು, ಪಡೆಮರ ಎನ್ನುತ್ತಾರೆ. ಇದರ ಮೇಲೆ ಕನಿಷ್ಟ ನೂರಕ್ಕಿಂತಲೂ ಹೆಚ್ಚಿನ ಪಡೆಗಳು ಸದಾಕಾಲ ಇರುತ್ತಿದ್ದವು. ಜೇನು ಒಂದು ಸೈನ್ಯಪಡೆಯಂತೆ ಸಂಚರಿಸುತ್ತದೆ. ಆದ್ದರಿಂದ ಜೇನಿಗೆ ಪಡೆ ಎಂಬುದೇ ರೂಢಿಭಾಷೆ. ಜೇನಿನ ಪಡೆಯು ಸಂಚರಿಸುವಾಗ ಗುಞಿ ಎಂಬ ಶಬ್ಧ ಬಹಳ ದೂರದವರೆಗೂ ಕೇಳಿಸುತ್ತದೆ. ಬಹುಷಃ ಪಟ್ಟಣಿಗರು ಈ ಶಬ್ಧಾನುಭವದಿಂದ ವಂಚಿತರಾಗಿರುತ್ತಾರೆ
ಪಡೆಮರ ಭಣ ಭಣ ಎನ್ನುತ್ತಿದೆ. ಇದಕ್ಕೂ ಗ್ಲೋಬಲ್ ವಾರ್ಮಿಂಗಿಗೂ ಸಂಬಂಧವಿರಬಹುದೇ?

Rating
No votes yet