ಕತ್ತೆ ಕಲಿಸಿದ ಪಾಠ

ಕತ್ತೆ ಕಲಿಸಿದ ಪಾಠ

ಕತ್ತೆ ಎಂದ ಕೂಡಲೇ ಸೋಮಾರಿ, ಹೆಡ್ಡ, ಪೆದ್ದ ಎಂದೇ ನಮ್ಮ ಭಾವನೆ. ಯಾರಾದರೂ ಕರ್ಕಶವಾಗಿ ಹಾಡಿದರೆ ಆಹಾ, ಎಂಥ ಗಾರ್ದಭ ಸ್ವರ ಎಂದು ಗೇಲಿ. ಬಾಲ್ಯದ ನೆನಪು. ಐದನೇ ಕ್ಲಾಸಿನಲ್ಲಿ ಗಣಿತದಲ್ಲಿ ನಾನು ಹಿಂದೆ ಇದ್ದಿದ್ದರಿಂದ ಸುಶೀಲಮ್ಮ ಟೀಚರ್ ಬೆನ್ನಿಗೆ ಒಂದು ಏಟು ಹಾಕುತ್ತಾ ಹೇಳಿದ್ದು ‘ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು” ಅಂತ. ಇಷ್ಟಕ್ಕೇ ಸೀಮಿತ ಕತ್ತೆಯ ಬಗೆಗಿನ ನಮ್ಮ ಜ್ಞಾನ. ಕೆಳಗಿದೆ ನೋಡಿ ಕತ್ತೆ ನಮಗೆ ಕಲಿಸುವ ಬದುಕಿನ ಪಾಠ. ಯಶಸ್ವೀ ಬದುಕಿಗೆ ಬೇಕಾದ ಸೂತ್ರ ಕಲಿಸಲು ಸ್ಟೀಫನ್ ಕವೇ, ದೀಪಕ್ ಚೋಪ್ರ ಅಥವಾ “ಎಕ್ಹಾರ್ಟ್ ತೂಲೇ” ಯಂಥ ಮಾಡರ್ನ್ “ಗುರು” ಗಳೇ ಆಗಬೇಕೆಂದಿಲ್ಲ. ಕತ್ತೆಯೂ ಸಹ ಆಗಬಹುದು ಗುರುವರ್ಯ.


ಒಂದು ದಿನ ಓರ್ವ ರೈತನ ಕತ್ತೆ ಹಾಳು ಬಾವಿಯೊಳಕ್ಕೆ ಬಿದ್ದು ಬಿಡುತ್ತದೆ. ಕತ್ತೆಯ ಆಕ್ರಂದನ ಕೇಳಿ ರೈತ ಅಲ್ಲಿಗೆ ಧಾವಿಸಿ ಬಂದು ನೋಡುತ್ತಾನೆ. ಸ್ವಲ್ಪ ಹೊತ್ತು ಯೋಚಿಸಿ, ಏನು ಮಾಡಬೇಕೆಂದು ಹೊಳೆಯದೆ ಹೇಗೂ ಈ ಕತ್ತೆಗೆ ವಯಸ್ಸಾಗಿ ಬಿಟ್ಟಿದೆ, ಅಲ್ಲಿಗೇ ಮಣ್ಣು ಹಾಕಿ ಸಮಾಧಿ ಮಾಡಿದರಾಯಿತು ಎಂದು ತನ್ನ ಪರಿಚಿತರನ್ನು ಕರೆಯುತ್ತಾನೆ ಸಹಾಯಕ್ಕೆಂದು. ಎಲ್ಲರೂ ಸೇರಿ ಕತ್ತೆಯ ಮೇಲೆ ಮಣ್ಣನ್ನು ಅಗೆದು ಹಾಕಲು ಆರಂಭಿಸುತ್ತಾರೆ. ಮೊದಮೊದಲಿಗೆ ಸುಮ್ಮನಿದ್ದ ಕತ್ತೆಗೆ ಕೊನೆಗೆ ಹೊಳೆಯುತ್ತದೆ ಇವರು ನನ್ನನ್ನು ಉಳಿಸಲು ಅಲ್ಲ ಬಂದಿದ್ದು, ಬದಲಿಗೆ ಜೀವಂತ ಸಮಾಧಿ ಮಾಡಲು ಎಂದು ದೈನ್ಯತೆಯಿಂದ ಅಳಲು ಆರಂಭಿಸುತ್ತದೆ. ಕತ್ತೆಯ ಅಳು ಯಾರಿಗೂ ಕೇಳಿಸುವುದಿಲ್ಲ. ಸ್ವಲ್ಪ ಹೊತ್ತಿನ ನಂತರ ಕತ್ತೆ ತನ್ನ ಆಕ್ರಂದನ ನಿಲ್ಲಿಸಿ ತನ್ನ ಮೇಲೆ ಬೀಳುತ್ತಿದ್ದ ಮಣ್ಣನ್ನು ಕೊಡವಿ ಒಂದು ಹೆಜ್ಜೆ ಮೇಲೆ ಇಡುತ್ತದೆ. ಹೀಗೆ ಒಂದೇ ಸಮನೆ ತನ್ನ ಮೇಲೆ ಮಣ್ಣು ಬೀಳುತ್ತಿದ್ದರೂ ಕತ್ತೆ ಮಾತ್ರ ಸಾವಧಾನದಿಂದ ಮೈ ಕೊಡವುತ್ತಾ ಒಂದೊಂದೇ ಹೆಜ್ಜೆ ಗಳನ್ನು ಮೇಲಕ್ಕೆ ಇಡುತ್ತಾ ಹೋಗುತ್ತದೆ. ಇದನ್ನು ಗಮನಿಸಿದ ಜನರಿಗೆ ಆಶ್ಚರ್ಯ ಮತ್ತು ಸ್ವಲ್ಪ ಹೊತ್ತಿನಲ್ಲಿ ಕತ್ತೆ ಬಾವಿಯಿಂದ ಹೊರಕ್ಕೆ ಬಂದಿರುತ್ತದೆ. ಈ ವಿಸ್ಮಯದ ಬಗ್ಗೆ, ಕತ್ತೆಯ ಜಾಣ್ಮೆಯ ಬಗ್ಗ್ಗೆ ಜನ ತಮ್ಮ ತಮ್ಮಲ್ಲೇ ಮಾತನಾಡುತ್ತಿದ್ದರೆ ಕತ್ತೆ ಮಾತ್ರ ಅಳಿದುಳಿದ ಧೂಳನ್ನು ತನ್ನ ಮೈ ಮೇಲಿಂದ ಕೊಡವಿ ಗಾಂಭೀರ್ಯದಿಂದ ತನ್ನ ದಾರಿ ಹಿಡಿಯುತ್ತದೆ.


ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ರಾಶಿ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟಾಗ ಗುರಿಯ ಸಾಫಲ್ಯ.   ಈ ಕತೆ ಕಲಿಸುವ ನೀತಿ ಏನೆಂದರೆ, 


ಬದುಕು ನಿಮ್ಮ ಮೇಲೆ ಮಣ್ಣನ್ನು ಎರಚುತ್ತಿರುತ್ತದೆ. ಎಲ್ಲಾ ರೀತಿಯ ಮಣ್ಣನ್ನು.    


ಉಪಾಯವೇನೆಂದರೆ ಮೇಲೆ ಬಿದ್ದ ಮಣ್ಣನ್ನು ಕೊಡವಿ ಮೆಲಕ್ಕೆಳಲು ಶ್ರಮಿಸುವುದು.


ನಮ್ಮ ಪ್ರತೀ ಹೆಜ್ಜೆಯೂ ಉನ್ನತಿ ಕಡೆಗಿನ ಯಾತ್ರೆ.


ಎಷ್ಟೇ ಆಳವಾದ ಬಾವಿಯಿಂದಲಾದರೂ ಸರಿ ನಾವು ಹೊರಕ್ಕೆ ಬರಬಹುದು ತಾಳ್ಮೆ, ಛಲವೊಂದಿದ್ದರೆ.


ಕೊಡವಿ ಮತ್ತು ಎದ್ದೇಳಿ.


ಮೇಲಿನ ನೀತಿ ಪಾಠಕ್ಕೆ ಮತ್ತೈದು ಸೂತ್ರಗಳನ್ನು ಸೇರಿಸಿಕೊಳ್ಳಿ.  


ಹಗೆಯಿಂದ ದೂರವಿರಿ. ಕ್ಷಮಾಶೀಲರಾಗಿ. ಯಾರದೋ ತಾತ ಮುತ್ತಾತ ಮಾಡಿದ ಪಾಪಕ್ಕೆ ಅವರ ಮಕ್ಕಳ ಬದುಕು ಅಸಹನೀಯವಾಗಿಸಬೇಡಿ.


ಚಿಂತೆಯಿಂದ ದೂರವಿರಿ.  ನಾವು ಊಹಿಸಿಕೊಳ್ಳುವ ಬಹುತೇಕ ಚಿಂತೆಗಳು ಬಹುಮಟ್ಟಿಗೆ ಎದುರಾಗಲಾರವು.   


ಸರಳವಾಗಿ ಬದುಕಿ. ಇರುವುದರಲ್ಲೇ ತೃಪ್ತಿಯನ್ನು ಕಾಣಿರಿ.


ನಿಮ್ಮಲ್ಲಿ ಇರುವುದರಲ್ಲಿ ಸ್ವಲ್ಪ ಇಲ್ಲದವರಿಗೂ ಕೊಡಿ. ನಿಮ್ಮಿಂದ ಪಡೆದುಕೊಂಡವನ ಮುಖದ ಮೇಲೆ ನೀವು ಕಾಣುವ ಧನ್ಯತಾ ಭಾವ ಯಾವ ಸ್ವರ್ಗಕ್ಕೂ ಕಡಿಮೆಯಲ್ಲ. 


ಕೊನೆಯದಾಗಿ, ಜನರಿಂದ ಅತಿ ಕಡಿಮೆಯನ್ನೇ ಬಯಸಿರಿ. ಆದರೆ ನಮ್ಮೆಲ್ಲರನ್ನೂ ಸೃಷ್ಟಿಸಿದ ಭಗವಂತನಿಂದಮಾತ್ರ ಹೆಚ್ಚಿನದನ್ನು ನಿರೀಕ್ಷಿಸಿ. ಏಕೆಂದರೆ ಎಂದಿಗೂ ಬರಿದಾಗದ ಖಜಾನೆ ಅವನಲ್ಲಿದೆ.

Rating
No votes yet

Comments