ಕಥಿ ಹೈಲ್ ಆಯ್ತಲ್ಲ ಮರಾಯ್ರೇ .. ೪
ಈಗ ನೀನೇ ಅನ್ಬವ್ಸ್! ನಂಗೇನ್!!!
ಒಂದು ಕಡೆಯಿಂದ ನೋಡುವಾಗ ಎಲ್ಲ ಹಳ್ಳಿಗಳೂ ಒಂದೇ ರೀತಿ ಅಲ್ಲಿನ ಜನ, ಜೀವನ, ಚಿಕ್ಕವರಿರುವಾಗಿನ ಅನುಭವ ಎಲ್ಲಾ ಸಮಾನಾಂತರವಾದವುಗಳೇ.
ಅದನ್ನ ನೆನಪಿಸಿಕೊಂಡರೆ ಈಗಲೂ ಮನಸ್ಸು ಅಲ್ಲಿಗೇ, ಆ ಕಾಲಕ್ಕೇ ಓಡಿಬಿಡುತ್ತೆ.
ಚಿಕ್ಕಮ್ಮ, ಚಿಕ್ಕಪ್ಪ, ಶೀನ, ಮುತ್ತ, ಮಂಜರು, ಪಿಣಿಯ, ಮುಂತಾದ ಪಾತ್ರಗಳು ಅವರ ಪಾತ್ರಗಳೆಲ್ಲವೂ ಇಂದಿಗೂ ಸ್ಮರಣೀಯ. ಇವರೆಲ್ಲರ ಒಂದೊಂದು ಘಟನೆಗಳೇ ಈ ಸರಣಿ.
ಇಂತದ್ದೇ ಒಂದು ಪಾತ್ರ ನಮ್ಮ ಶೀನ, ಒಮ್ಮೊಮ್ಮೆ ಬಹು ಬುದ್ಧಿವಂತನಾಗಿಯೂ, ಅದೇಕಾಲಕ್ಕೆ ಶತ ದಡ್ಡನಾಗಿಯೂ ಇರಬಲ್ಲ ಧೀರ.
ಮಳೆಗಾಲದಲ್ಲಿ ಮಾತ್ರ ಸಿಗಬಲ್ಲಂತಹ ಮರ ಕೆಸವನ್ನು ಹುಡುಕಿ ತರಬಲ್ಲಂತಹ ನಮ್ಮೆಲ್ಲರ ಅಭಿಮಾನೀ ಶ್ರಮ ಜೀವಿ. ಒಮ್ಮೆ ಹೀಗಾಯ್ತು...
ಪಾರಿಯಲ್ಲಿ ಕರಡ ( ಕಲ್ಲು ಗಳಎಡೆಯಲ್ಲಿ ಹುಟ್ಟುವ, ಒಂದು ಜಾತಿಯ ಕಾಡು ಹುಲ್ಲು) ಕಡಿಯುವ, ಬೇಸಗೆಯ ಸಮಯವದು, ಎಲ್ಲರೂ ಬೆಳಿಗ್ಗೆ ಎದ್ದು ಕತ್ತಿ ಫಳ ಫಳ ಮಸೆದು ಹೊರಟರು ಪಾರಿಗೆ....
ತಂದೆ ಸುಮಾರು ಎಂಟು ಘಂಟೆಯ ಹೊತ್ತಿಗೆ ಅದೇ ಪಾರಿಯಲ್ಲಿ ಶಾಲೆಗೆ ಹೋಗುತ್ತಿದ್ದರಂತೆ (ಓ ಹೇಳಲು ಮರೆತಿದ್ದೆ , ಅವರು ಶಿಕ್ಷಕರು.)
ಶೀನ ಒಂದು ಕಲ್ಲಿನ ಮೇಲೆ ಕುಳಿತಿದ್ದ, ಸುಮ್ಮನೆ...ಏನನ್ನೋ ಗುಣುಗುಣಿಸುತ್ತಾ...
ಹತ್ತಿರ ಹೋದಾಗ ಕೇಳಿಸಿತು ಅವನ ಮಾತು...
ಬೆಳಿಗ್ಗೆ ನಾನ್ ಕತ್ತಿ ಅಷ್ಟ್ ಜಾಸ್ತಿ ಮಸಿಬೇಡ!! ಮಸಿ ಬೇಡ! ಅಂದೆ, ಕೇಳ್ದ್ಯಾ ನನ್ನ್ ಮಾತ್!!....... ಈಗ ನೀನೆ... ಅನ್ಬವ್ಸ್ !!! ನಂಗೇನ್!!!
ಅಷ್ಟಕ್ಕೂ ಅವನದೇ ಕತ್ತಿ ಅವನ ಕಾಲಿನ ಕಿರುಬೆರಳನ್ನು ಕತ್ತರಿಸಿತ್ತು.