ಕಥೆ: ಅವಸ್ಥೆ
ಆವತ್ತು ಯಾಕೋ ಜೋಯೀಸರು ಸಂಧ್ಯಾವಂದನೆಯನ್ನು ಅರ್ಧಕ್ಕೆ ನಿಲ್ಲಿಸಿ ದೇವರ ಕೊಣೆಯಿಂದ ಹೊರಬಂದರು. ಕನಿಷ್ಠ ನೂರಾಎಂಟು ಗಾಯತ್ರಿಯನ್ನಾದರೂ ಪ್ರತಿ ಸಂಜೆ ಮಾಡುತ್ತಿದ್ದ ಅವರು ಇವತ್ತು ಕನಿಷ್ಠ ಹತ್ತನೂ ಸರಿಯಾಗಿ ಪೂರ್ತಿಮಾಡಿರಲಿಲ್ಲ. “ಥೂತ್ ಇದರ, ಇತ್ತೀಚಿಗೆ ಯಾಕೊ ಏನೇನೋ ಹಾಳಾದ ವಿಚಾರಗಳು ತಲೆಯಲ್ಲಿ” ಎನ್ನುತ್ತ ಜೋಯೀಸರು ಮನೆಯ ಜಗುಲಿಯ ಮೇಲೆ ಕುಳಿತು ಎಲೆ ಅಡಿಕೆಯ ಬಟ್ಟಲಿಗೆ ಕೈಯನ್ನು ಹಾಕಿದರು.
ಆಗ ತಾನೆ ಸೂರ್ಯನು ಅಡಿಕೆ ತೋಟದ ಹಿಂಬದಿಯಿಂದ ಮರೆಯಾಗಿ ಬಹಳ ದೂರವೇನಲ್ಲದ ಅರಬ್ಬೀ ಸಮುದ್ರದಲ್ಲಿ ವಿಶ್ರಮಿಸಲು ಅಣಿಯಾಗುತ್ತಿದ್ದ. ಸಂಜೆಯ ತಂಪಾದ ಗಾಳಿಯು ಅಡಿಕೆ ತೆಂಗಿನ ಮರಗಳ ಮಧ್ಯದಿಂದ ನುಸುಳಿ ಅವನ್ನು ಅತ್ತಿಂದಿತ್ತ ನೂಕುತ್ತಿತ್ತು. ದಿನವಿಡೀ ಸೂರ್ಯನ ಬಿಸಿಲಿಗೆ ಮುದುಡಿ ಸುಸ್ತಾಗಿದ್ದ ಅಡಿಕೆ ತೆಂಗಿನ ಮರಗಳಿಗೆ ತಂಗಾಳಿಯ ಚೆಲ್ಲಾಟ, ಗಾಯದ ಮೇಲೆ ಬರೆ ಎಳೆದಂತಾಗುತ್ತಿತ್ತು. ಏನು ಮಾಡುವುದು ಎಲ್ಲಾ
ಪ್ರಕೃತಿ ನಿಯಮ ಎಂಬಂತೆ ಅವು ಸಮಾಧಾನ ಪಟ್ಟುಕೊಳ್ಳುವಂತೆ ತೋರುತ್ತಿತ್ತು.ಅತ್ತ ತಂಗಾಳಿ ಮರಗಳ ಮಧ್ಯದಲ್ಲಿ ನುಸುಳುತ್ತಿದ್ದರೆ, ಇತ್ತ ಜೋಯಿಸರ ಮನಸ್ಸನ್ನು ಏನೇನೋ ವಿಚಾರಗಳು ಎಲ್ಲೆಲ್ಲಿಗೋ ಎಳೆಯುತ್ತಿತ್ತು. “ಪಾರ್ವತಿ ಇದ್ದಿದ್ದರೆ ಇದೆಲ್ಲಾ ಸಮಸ್ಯೆ ಇತ್ತಾ ?, ಯಾರನ್ನೋ ಎಷ್ಟೆಷ್ಟೋ ವರ್ಷ ಬದುಕಿಸುವ ಆ ದೇವರು ಅವಳನ್ನ ಇನ್ನೊಂದಿಷ್ಟು ವರ್ಷ ಬದುಕಿಸ ಬಾರದಿತ್ತಾ?”. ಆರು ತಿಂಗಳ ಹಿಂದೆಯಷ್ಟೇ ತಮ್ಮ ಹೆಂಡತಿಯನ್ನು ಕಳೆದುಕೊಂಡಿದ್ದ ಜೋಯಿಸರು ಈಗ ಒಬ್ಬಂಟಿಯಾಗಿದ್ದರು. ಏಕಾಂಗಿತನ ಜೋಯೀಸರನ್ನು ಕಾಡುತ್ತಿತ್ತು. ಜೋಯೀಸರ ಜೀವನ ದಿಕ್ಕುತಪ್ಪಿತ್ತು. ಮುಂದೇನು ಮಾಡಬೇಕೆಂಬುದು ತೋಚುತ್ತಿರಲಿಲ್ಲ.
“ಇಷ್ಟು ದೊಡ್ಡ ಮನೆ ಇದೆ, ತೋಟ ಇದೆ, ವೇದ ಶಾಸ್ತ್ರ ಗಳಲ್ಲಿ ಪರಿಣಿತಿ ಇದೆ ಆದ್ರೆ ಏನ್ ಪ್ರಯೋಜನ ? ಒಬ್ಬನ್ನೇ ಈ ಮೆನೆಲಿ ಏನ್ ಮಾಡ್ಲಿ? ಎಷ್ಟ್ ದಿನ ಅಂತ ಮಾಡಿದ್ದೇ ಅಡಿಗೆ ಮಾಡುದು ? ಎಲ್ಲಾದ್ರು ಊರಲ್ಲಿ ಪುರೋಹಿತ್ಯ ಮಾಡೋಣ ಅಂದ್ರೆ ಅದೂ ಈ ವಯಸ್ಸಲ್ಲಿ ಸ್ವಲ್ಪ ಕಷ್ಟನೇ.ಅದೂ ಪ್ರತಿ ದಿನ ಮಾಡ್ಲಿಕ್ಕೆ ಆಗುತ್ತೆಯೇ? ಈ ಒಂಟಿ ಮನೇಲಿ ನಾಳೆ ನಾನು ಸತ್ತು ಹೋದ್ರೂ ಹೇಳೋರಿಲ್ಲ ಕೇಳೋರಿಲ್ಲ”.
“ಮಗ ಇದ್ದಾನೆ ನಿಜ. ಅವ್ನು ಬೆಂಗಳೂರು ಬಿಟ್ಟು ಇಲ್ಲೆಲ್ಲೂ ಇರ್ಲಿಕ್ಕೆ ತಯಾರಿಲ್ಲ. ಅವನೂ ಒಂದು ಲೆಕ್ಕದಲ್ಲಿ ಸರಿಯೇ. ಇಲ್ಲಿ ಮನೆಯಿದೆ, ತೋಟ ಇದೆ ಯಾವುದಕ್ಕೂ ಕೊರತೆ ಇಲ್ಲ ನಿಜ, ಆದ್ರೆ ಇಂಜಿನಿಯರ್ ಓದಿ ಇಲ್ಲಿ ಅಡಿಕೆ ಹೆಕ್ಕಲಿಕ್ಕಾಗುತ್ತೆಯೇ? ಅವನ ಹೆಂಡತಿಯೂ ಅಷ್ಟೆ. ಏನ್ ಮಾಡೋದು ಹಣೆಬರಹ”.
“ಅವನೇನೋ ಬೆಂಗಳೂರಿಗೆ ಬಂದು ಇರು ಅಂತಾನೆ ನಿಜ. ನಾನೇನು ಮಾಡ್ಲಿ ಬೆಂಗಳೂರಿನಲ್ಲಿ ? ಅಲ್ಲಿನ ಜೀವನ ಶೈಲಿ ಎಲ್ಲಾ ನನಗೆ ಒಗ್ಗುತ್ತದೆಯೇ? ಈ ಪೂರ್ವಿಕರು ಸಂಪಾದಿಸಿದ ಆಸ್ತಿ,ವಂಶದ ಗೌರವ,ಪರಂಪರೆ ಇದಕ್ಕೆಲ್ಲ ಹೊಣೆ ಯಾರು? ಇದನ್ನು ಮಾರಾಟಮಾಡಿ ಎಲ್ಲೋ ಇರಲು ನನ್ನಿಂದ ಸಾಧ್ಯವಿಲ್ಲ. ಈ ಊರಲ್ಲಿ ಗೌರವ ಸಿಕ್ಕಂತೆ ಅಲ್ಲೂ ಸಿಗಲು ಸಾಧ್ಯವೇ? ಇಲ್ಲಿ ವೇದಾಧ್ಯಯನ,ಸಂಧ್ಯಾವಂದನೆ ಮಾಡಿದಂತೆ ಅಲ್ಲಿ ಮಾಡಲು ಸಾಧ್ಯವೇ? ಅಲ್ಲದೆ ಬೆಂಗಳೂರಿನ ಮನೆ ಅಂದ್ರೆ ಎಷ್ಟು ದೊಡ್ದದಿರುತ್ತಪ್ಪ? ಅವರ ಜೊತೆ ನಾನೂ ಸೇರಿ ಇನ್ನೊಂದು ಹೊರೆಯಾಗಲೇ ? ಅದೆಲ್ಲಾ ಆಗದ ಮಾತು”.
“ಏನ್ ಮಾಡೋದು ಈಗ. ಎಲ್ಲರೂ ಇಂಜಿನಿಯರ್ ಓದಿಸ್ತಾರೆ ಅಂತ ನಾನೂ ಓದಿಸ್ದೆ. ವೇದ ಮಂತ್ರ ಓದಿಸಿದ್ರೆ ಇಲ್ಲಾದ್ರೂ ಇರ್ತಿದ್ದನೋ ಏನೋ. ಎಲ್ಲಾ ಓದುವಾಗ ಇವ್ನೂ ಓದಲಿ ಆಂತ ಓದಿಸ್ದೆ, ಅದು ತಪ್ಪಾ? ಈಗ ನೋಡಿದ್ರೆ ನಾನು ಸತ್ತ ಮೇಲೆ ಈ ಪೂರ್ವಜರ ಆಸ್ತಿ,ಪರಂಪರೆ ಇದಕ್ಕೆಲ್ಲ ದಿಕ್ಕು ಯಾರು? ಅವನಲ್ಲಿ ಹೇಳಿದ್ರೆ ಆಸ್ತಿ,ಪರಂಪರೆ ಬೇಕಾದ್ರೆ ಹಾಳಾಗ್ಲಿ ತನಗೆ ಬೆಂಗಳೂರಿನಲ್ಲಿ ಕೆಲ್ಸ ಮಾಡೋದೇ ಮುಖ್ಯ ಅಂತಾನೆ. ಈ ಕಾಲದ ಹುಡುಗರಿಗೆ ಅದಕ್ಕೆಲ್ಲ ಬೆಲೆಯೇ ಇಲ್ಲ. ಇಲ್ಲೇ ಇಂಜಿನಿಯರ್ ಕೆಲ್ಸ ಮಾಡು ಅಂದ್ರೆ ಬೆಂಗಳೂರೇ ಆಗ್ಬೇಕು ಅಂತಾನೆ. ಇಲ್ಲೆಲ್ಲಾ ಸರಿಯಾಗಿ ಕೆಲ್ಸ ಸಿಗೊಲ್ವಂತೆ. ಇಲ್ಲಿದ್ರೆ ಅವ್ನೂ ಸುಖವಾಗಿ ಇರ್ತಿದ್ದ. ಅಲ್ಲಿ ಕಷ್ಟ ಪಡೋದ ನೋಡಿದ್ರೆ ಯಾಕಪ್ಪ ಅವ್ನು ಅಷ್ಟೆಲ್ಲ ಒದ್ದಾಡಬೇಕು ಅನ್ಸುತ್ತೆ. ಏನ್ ಮಾಡೋದು ಬೆಂಗಳೂರಿನ ಹುಚ್ಚು. ಅವನಾದ್ರೂ ಏನ್ ಮಾಡ್ತಾನೆ? ಅವನ ಯೋಗ್ಯತೆಗೆ ಇಲ್ಲೆಲ್ಲಾ ಸರಿಯಾದ ಕೆಲ್ಸ ಸಿಗಲ್ಲ ಅಂದ್ರೆ”.
“ಅವನ ಕಥೆ ಹಾಳಾಗ್ಲಿ ನಾನ್ ಏನ್ ಮಾಡ್ಲಿ ಈಗ? ಅತ್ತಲಾಗಿ ಅಲ್ಲೂ ಹೋಗುವಹಾಗಿಲ್ಲ. ಇಲ್ಲೂ ಇರ್ಲಿಕ್ಕೆ ಆಗ್ತಿಲ್ಲ. ಒಟ್ನಲ್ಲಿ ತ್ರಿಶಂಕು ಪರಿಸ್ತಿತಿ” ಅಂದುಕೊಳ್ಳುತ್ತಾ ಜೋಯಿಸರು ಬಾಯೊಳಗೆ ಜಗಿದು ನೀರಾಗಿದ್ದ ಎಲೆ ಅಡಿಕೆಯನ್ನು ಅಂಗಳದ ಪಕ್ಕಕ್ಕೆ ಇರುವ ಅಡಿಕೆ ಮರದ ಬುಡದಲ್ಲಿ ಉಗಿದು ಬಂದರು. ಆಗ ತಾನೆ ಸೂರ್ಯನು ವಿಶ್ರಮಿಸಿ ಕತ್ತಲೆ ತನ್ನ ಕೆಲಸ ಆರಂಭಿಸಿ ಆಗಿತ್ತು. ಅಡಿಕೆ ತೆಂಗಿನ ಮರಗಳೂ ಸುಸ್ತಾಗಿ ನಿದ್ರೆ ಮಾಡುತ್ತಿರುವಂತೆ ಕಾಣುತ್ತಿತ್ತು. ಜೋಯಿಸರ ಮನೆಯ ಅಂಗಳದಲ್ಲಿ ಹಾಕಿದ್ದ ವಿದ್ಯುತ್ ಬಲ್ಬಿನ ಬೆಳಕು ಅಡಿಕೆ ತೋಟದಲ್ಲೆಲ್ಲ ನುಸುಳಿ ಬಗೆ ಬಗೆಯ ಬಿಂಬ ಪ್ರತಿಬಿಂಬಗಳನ್ನು ಸೃಷ್ಟಿಸುತ್ತಿತ್ತು. ಆ ಬಿಂಬ ಪ್ರತಿಬಿಂಬಗಳು ಕೆಲವೊಮ್ಮೆ ಜೋಯಿಸರ ಮನಸ್ಸಿನ ಗೊಂದಲಗಳ ಚಿತ್ರಣವೇ ಎಂಬಂತೆ ಭಾಸವಾಗುತ್ತಿತ್ತು.
“ನನಗಂತೂ ದಿಕ್ಕು ತೋಚದಂತಾಗಿದೆ ಮುಂದೇನು ಮಾಡ್ಬೇಕೋ ಆ ಭಗವಂತನೇ ದಾರಿ ಕಾಣಿಸಬೇಕಷ್ಟೇ. ಥೂ ಹಾಳಾದ ಹಸಿವು, ಸ್ವಲ್ಪ ಅನ್ನನಾದ್ರೂ ಬೆಯಿಸಬೇಕು. ಈ ನನ್ನ ಅವಸ್ಥೆ ಯಾರಿಗೂ ಬರಬಾರ್ದಪ್ಪ. ಈ ಅವಸ್ಥೆಗೆ ಪರಿಹಾರವಾಗಿ ಏನಾದ್ರೂ ಮಂತ್ರ ತಂತ್ರ ಗಳಿದ್ದರೆ ಅದನ್ನಾದರೂ ಮಾಡಬಹುದಿತ್ತು. ಅಷ್ಟೊಂದು ವೇದ ಶಾಸ್ತ್ರ ಬರೆದ ಋಷಿ ಮುನಿಗಳು ಇದನ್ನೆಲ್ಲಾ ಯೋಚಿಸಿಯೇ ಇಲ್ಲವೇ?” ಎನ್ನುತ್ತ ಜೂಯೀಸರು ಅಡುಗೆ ಮನೆಯತ್ತ ಧಾವಿಸಿದರು.
Comments
ಉ: ಕಥೆ: ಅವಸ್ಥೆ
In reply to ಉ: ಕಥೆ: ಅವಸ್ಥೆ by kamath_kumble
ಉ: ಕಥೆ: ಅವಸ್ಥೆ