ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 1
(ಈ ಕಥೆಯಲ್ಲಿ ಬರುವ ಎಲ್ಲ ಪಾತ್ರ ಹಾಗೂ ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿ ಹಾಗೂ ಘಟನೆಗೆ ಸಂಬಂಧಿಸಿದ್ದಲ್ಲ)
ಸೆಪ್ಟೆಂಬರ್ ೧೮...
ಕ್ಯಾಲೆಂಡರ್ ನಲ್ಲಿ ಈ ದಿನಾಂಕ ಬಂತೆಂದರೆ ಸಾಕು ನನಗೆ ಏನೇನೋ ಆಗುತ್ತದೆ
ಒಂದು ಕಡೆ ಕರಾಳ ನೆನಪುಗಳು ಕಾಡಿದರೆ ಮತ್ತೊಂದು ಕಡೆ ಒಳ್ಳೆಯ ನೆನಪುಗಳು ಕಾಡುತ್ತದೆ
ಎರಡಕ್ಕೂ ಕಾರಣ ಅವಳೇ...ಅವಳೇ...ಅವಳೇ...ಪಾವನಿ
------------------------------
ಐದು ವರ್ಷದ ಹಿಂದೆ..
ಅಂದು ನಾನು ಕುಟುಂಬ ಸಮೇತವಾಗಿ ಧರ್ಮಸ್ಥಳಕ್ಕೆ ಮಂಜುನಾಥನ ದರ್ಶನಕ್ಕೆ ಹೋಗಿದ್ದೆವು. ಮನೆಯವರೆಲ್ಲ ದರ್ಶನ ಮುಗಿಸಿ ರೂಮಿನಲ್ಲಿದ್ದರೆ ನಾನು ಮಾತ್ರ ನದಿಯ ಬಳಿ ಬಂದು ನಿಂತಿದ್ದೆ. ಅಷ್ಟರಲ್ಲಿ ಅಲ್ಲೊಂದು ನಾಗರ ಹಾವು ಬಂದಿತು. ನದಿಯ ಬಳಿ ಇದ್ದ ಜನರೆಲ್ಲಾ ಅದನ್ನು ಕುತೂಹಲದಿಂದ ನೋಡುತ್ತಾ ನಿಂತಿದ್ದರೆ ನಾನು ನನ್ನ ಪಕ್ಕದಲ್ಲಿದ್ದ ವ್ಯಕ್ತಿಗೆ ಅದೇನು ಸಾರ್ ಎಂದೂ ಹಾವನ್ನೇ ಕಂಡಿಲ್ಲ ಎಂಬಂತೆ ಹಾಗೆ ನೋಡುತ್ತಿದ್ದಾರೆ ಜನ ಎಂದೆ. ಅಷ್ಟರಲ್ಲಿ ಹಿಂದಿನಿಂದ ಮಧುರವಾದ ಧ್ವನಿಯೊಂದು ಕಟುವಾಗಿ ಅದು ಮಾಮೂಲಿ ಹಾವಲ್ಲ ಅದು ದೇವರ ಹಾವು ಹಾಗೆಲ್ಲ ಹಗುರವಾಗಿ ಮಾತಾಡಬೇಡಿ ಎಂದಿತು. ನಾನು ಹಿಂದೆ ತಿರುಗಿದೆ. ಅಲ್ಲೊಬ್ಬಳು ಸುಂದರವಾದ ಹುಡುಗಿ ನನ್ನೆಡೆಗೆ ಕೋಪವಾಗಿ ನೋಡುತ್ತಿದ್ದಳು. ನನಗೆ ಆ ಕ್ಷಣಕ್ಕೆ ಎಲ್ಲರೆದುರು ಹಾಗೆ ಎಂದದ್ದು ಅದೂ ಒಂದು ಹುಡುಗಿ ಅಂದಿದ್ದಕ್ಕೆ ಬಹಳ ಅವಮಾನವಾದಂತಾಗಿ ಅಲ್ಲಿಂದ ಹೊರಟು ರೂಮಿನ ಬಳಿ ಬಂದು ಅದ್ಯಾಕೆ ಆ ಹುಡುಗಿ ಎಲ್ಲರ ಮುಂದೆ ಹಾಗೆ ಅಂದಳು ಎಂದು ಯೋಚಿಸುತ್ತ ನಿಂತಿದ್ದೆ.
ಅಷ್ಟರಲ್ಲಿ ಅದೇ ಧ್ವನಿ ಮತ್ತೆ ಕೇಳಿತು. ದಯವಿಟ್ಟು ನನ್ನನ್ನು ಕ್ಷಮಿಸಿ ನಾನು ಹಾಗೆ ಮಾತಾಡಬಾರದಿತ್ತು ಎಂದಳು ಆ ಹುಡುಗಿ. ನಾನು ಥಟ್ಟನೆ ತಿರುಗಿ ನೀವು ಹಾಗೆ ಅಂದಿದ್ದಕ್ಕೆ ಬೇಸರವಿಲ್ಲ. ಆದರೆ ಎಲ್ಲ ಮುಂದೆ ಅಂದರಲ್ಲ ಅದಕ್ಕೆ ಬೇಸರವಾಯಿತು. ಇರಲಿ ಬಿಡಿ ಎಂದೆ. ಆ ಹುಡುಗಿ ನಕ್ಕು ನೀವು ಬೆಂಗಳೂರಿನವರ ಎಂದಳು. ನಾನು ಹೌದು ನಿಮ್ಮದು ಎಂದೆ. ಅದಕ್ಕೆ ಆ ಹುಡುಗಿಯೂ ಬೆಂಗಳೂರು ಎಂದಳು. ನಿಮ್ಮ ಹೆಸರು ಎಂದಳು. ನಾನು ಭಗತ್, ನಿಮ್ಮ ಹೆಸರು ಎಂದೆ. ಅದಕ್ಕವಳು ಪಾವನಿ ಎಂದಳು. ನಾನು ಇಲ್ಲೇ ಪಕ್ಕದ ರೂಮಿನಲ್ಲಿ ಇರುವುದು, ನಾವು ನಾಳೆ ಹೊರಡುವುದು ನೀವು ಎಂದಳು. ನಾವೂ ಸಹ ನಾಳೆ ಸಂಜೆ ಹೊರಡುವುದು ಎಂದೆ. ನಂತರ ಸ್ವಲ್ಪ ಹೊತ್ತಿನಲ್ಲೇ ನಾವು ಗೆಳೆಯರಾಗಿಬಿಟ್ಟೆವು. ಸುಮಾರು ಹೊತ್ತು ಮಾತನಾಡಿ ನಂತರ ಅವಳು ಹೊರಟು ಹೋದಳು. ನಾನೂ ನನ್ನ ರೂಮಿಗೆ ಹೋಗಿ ಮನೆಯವರೊಡನೆ ಮಾತಾಡುತ್ತ ಕುಳಿತಿದ್ದೆ. ನನ್ನ ತಂಗಿ ಯಾರಪ್ಪ ಅದು ಬಹಳ ಮಾತಾಡುತ್ತಿದ್ದೆ ಏನು ವಿಷಯ? ಇದು ಕ್ಷೇತ್ರ ಕಣೋ ನೆನಪಿರಲಿ ಎಂದು ಕಿಸಕ್ಕನೆ ನಕ್ಕಳು. ನಾನು ಅವಳ ತಲೆ ಮೇಲೆ ಸಣ್ಣದಾಗಿ ಮೊಟಕಿ ನಡೆದ ವಿಷಯವೆಲ್ಲ ತಿಳಿಸಿದೆ.
ಮಾರನೆಯ ದಿನ ನಾವು ಅಲ್ಲೆಲ್ಲ ಸುತ್ತಾಡಿ, ಬಾಹುಬಲಿಯನ್ನು ನೋಡಿಕೊಂಡು ವಾಪಸ್ ರೂಮಿಗೆ ಬಂದೆವು. ಊರಿಗೆ ಹೊರಡಲು ಅಮ್ಮ ಎಲ್ಲ ಸಿದ್ಧ ಮಾಡಿಕೊಳ್ಳುತ್ತಿದ್ದರು. ಅಪ್ಪ ಮತ್ತು ತಂಗಿ ಮಲಗಿದ್ದರು. ನಾನು ಪಾವನಿ ಏನಾದರೂ ಸಿಗುತ್ತಾಳೇನೋ ಎಂದು ಆಚೆ ಬಂದು ಅವರ ರೂಮಿನತ್ತ ನೋಡಿದೆ. ಅವರ ರೂಮು ಬಾಗಿಲು ಹಾಕಿತ್ತು. ಬಹುಶಃ ಎಲ್ಲೋ ಹೋಗಿರಬೇಕು ಎಂದು ಅಲ್ಲೇ ಅಡ್ದಾಡುತ್ತಿದ್ದೆ. ಅಷ್ಟರಲ್ಲಿ ಹಿಂದಿನಿಂದ ಬಂದ ನನ್ನ ತಂಗಿ ಏನಪ್ಪಾ ಹೀರೋ ಹೀರೋಯಿನ್ ಗೆ ಕಾಯ್ತಾ ಇದ್ಯಾ ಎಂದಳು. ನಾನು ಯಾರೇ ಹೀರೋಯಿನ್ ಎಂದೆ. ಅದೇ ಪಕ್ಕದ ರೂಮಿನ ಹುಡುಗಿ ಪಾವನಿ ಎಂದಳು. ನಾನು ಅವಳ ಕಡೆ ಹುಸಿ ಕೋಪದಿಂದ ನೋಡುತ್ತಾ ಲೇ ಒಂದೇ ದಿನಕ್ಕೆ ನಮ್ಮಿಬ್ಬರನ್ನು ಹೀರೋ ಹೀರೋಯಿನ್ ಮಾಡಿದ್ಯ ನೀನು ಎಂದು ಸುಮ್ಮನೆ ನಕ್ಕೆ ಅಷ್ಟರಲ್ಲಿ ಪಾವನಿ ಅವರ ಕುಟುಂಬದವರ ಜೊತೆ ಬಂದಳು. ನನ್ನ ತಂಗಿ ಕಣ್ಸನ್ನೆ ಯಲ್ಲೇ ನನ್ನನ್ನು ಛೇಡಿಸುತ್ತಿದ್ದಳು. ಸ್ವಲ್ಪ ಹೊತ್ತಿನ ನಂತರ ಪಾವನಿ ಆಚೆ ಬಂದು ನನ್ನ ಬಳಿ ಬಂದಳು. ನಾನು ನನ್ನ ತಂಗಿಯನ್ನು ಪರಿಚಯಿಸಿದೆ. ಅವರಿಬ್ಬರೂ ಸ್ವಲ್ಪ ಹೊತ್ತು ಮಾತಾಡಿದ ನಂತರ ನನ್ನ ತಂಗಿ ಹೊರಡುತ್ತೇನೆ ಎಂದು ಹೊರಟಳು. ನಾನು ಪಾವನಿಯ ಜೊತೆ ಮಾತಾಡುತ್ತ ಇನ್ನೇನು ಇವತ್ತು ರಾತ್ರಿ ಹೊರಡುತ್ತೀವಿ ಎಂದು ಇಬ್ಬರೂ ನಕ್ಕೆವು. ಆದರೆ ಇಬ್ಬರ ಮನಸಲ್ಲೂ ಏನನ್ನೋ ಬಿಟ್ಟು ಹೋಗುತ್ತಿದ್ದೇವೆ ಎಂಬ ಭಾವನೆ ಮೂಡಿತ್ತು. ನಾನು ಕೇಳಲೋ ಬೇಡವೋ ಎಂದು ಹಿಂಜರಿಕೆಯಿಂದಲೇ ಪಾವನಿ ಬೆಂಗಳೂರಿನಲ್ಲಿ ನೀವು ಎಲ್ಲಿರುವುದು ಎಂದೆ. ಅದಕ್ಕವಳು ಮಲ್ಲೇಶ್ವರಂ ಎಂದಳು. ನಿಮ್ಮದು? ನಾನು ಚಾಮರಾಜಪೇಟೆ ಎಂದೆ. ನಂತರ ಅವಳು ನಿಮ್ಮ ಫೋನ್ ನಂಬರ್ ಎಂದು ಬೇರೆಡೆ ನೋಡುತ್ತಾ ಕೇಳಿದಳು. ನಾನು ಮನದಲ್ಲೇ ಸಧ್ಯ ನಾನೇ ಕೇಳೋಣ ಎಂದುಕೊಂಡಿದ್ದೆ ಆದರೆ ನೀನೆ ಕೇಳಿದ್ಯಲ್ಲೇ ಹುಡುಗಿ ಎಂದುಕೊಂಡು ನನ್ನ ನಂಬರ್ ಕೊಟ್ಟು ಅವಳ ನಂಬರ್ ತೆಗೆದುಕೊಂಡೆ. ಅಷ್ಟರಲ್ಲಿ ಅವರ ಅಮ್ಮ ಪಾವನಿ ಎಂದು ಕೂಗಿದರು. ಸರಿ ಹೊರಡುತ್ತೇನೆ ಬೆಂಗಳೂರಿನಲ್ಲೇ ಭೇಟಿ ಮಾಡೋಣ ಎಂದು ಹೊರಟು ಹೋದಳು. ನಾನೂ ರೂಮಿಗೆ ಹೋಗಿ ಅಮ್ಮ ಬೆಂಗಳೂರಿಂದ ತಂದಿದ್ದ ಚೂಡಾ ಅವಲಕ್ಕಿ ತಿಂದು ನಾವೂ ಬೆಂಗಳೂರಿಗೆ ಹೊರಟೆವು.
ಕಾರಿನಲ್ಲಿ ಬರಬೇಕಾದರೆ ನಿದ್ದೆಯೇ ಹತ್ತಲಿಲ್ಲ. ತಲೆ ತುಂಬಾ ಪಾವನಿಯೇ ತುಂಬಿಕೊಂಡಿದ್ದಳು. ಅವಳ ಚೆಲುವು ಅಂಥದ್ದು. ಆದರೂ ನನಗೆ ಆಶ್ಚರ್ಯ ಏನೆಂದರೆ ಅದು ಹೇಗೆ ಒಂದೇ ದಿನದಲ್ಲಿ ನನಗೆ ಪ್ರೀತಿ ಹುಟ್ಟಿತು. ಇದುವರೆಗೂ ಬಹಳಷ್ಟು ಜನ ಹುಡುಗಿಯರನ್ನು ನೋಡಿದ್ದರೂ ಯಾವತ್ತು ಈ ರೀತಿ ಆಗಿರಲಿಲ್ಲ. ಬಹುಶಃ ಇದೆ ಇರಬಹುದೇನೋ ಮೊದಲ ನೋಟದಲ್ಲಿ ಪ್ರೀತಿ. ಆದರೆ ನಮ್ಮದು ಮೊದಲ ನೋಟದಲ್ಲಿ ಜಗಳವಾಗಿದ್ದಲ್ಲವೇ? ಜಗಳವೇ ಪ್ರೀತಿಗೆ ಸೋಪಾನವೇ? ಹೀಗೆ ಏನೇನೋ ಆಲೋಚನೆಗಳು ಓಡಾಡುತ್ತಿದ್ದವು. ಎಂದೂ ಅಪ್ಪಿ ತಪ್ಪಿ ನಿದ್ದೆ ಕೆಡದ ನಾನು ಅಂದು ಮೊದಲ ಬಾರಿಗೆ ನಿದ್ದೆ ಕೆಟ್ಟಿದ್ದೆ.