ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 11

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 11

ಅಂತೂ ಇಂತೂ ಕಾವೇರಿ ಥಿಯೇಟರ್ ಬಳಿ ಬರುವಷ್ಟರಲ್ಲಿ ಸಮಯ ಹನ್ನೊಂದುವರೆ ಆಗಿತ್ತು. ಪಾಪ ಪಾವನಿ ಅಲ್ಲೇ ಒಂದು ಕಡೆ ನಿಂತಿದ್ದಳು. ನಾನು ಗಾಡಿ ನಿಲ್ಲಿಸಿ ತಕ್ಷಣ ಅವಳ ಬಳಿ ಓಡಿ ಮತ್ತೆ ಬಾಯಿಂದ ಸ್ವೀಟ್ ಹಾರ್ಟ್ ಎಂದು ಬರುವುದರಲ್ಲಿತ್ತು. ಬಲವಂತವಾಗಿ ಅದನ್ನು ಅದುಮಿಕೊಂಡು ಪಾವಿ i am really sorry ಕಣೋ ಎಂದೆ. ಆಗಲೇ ಅವಳ ಕಣ್ಣುಗಳು ಅತ್ತು ಕೆಂಪಾಗಿದ್ದವು. ಯಾಕೆ ಪಾವಿ ಅಳುತ್ತಿದ್ದೀಯ? ಮೊದಲು ಇಲ್ಲಿಂದ ಗಾಡಿ ತೆಗಿ  ಹೊರಡೋಣ ಎಂದಳು. ನಾನು ಗಾಡಿ ತೆಗೆದು ಅಲ್ಲಿಂದ ಹೊರಟೆ. ತಕ್ಷಣ ಪಾವನಿ ನನ್ನನ್ನು ತನ್ನ ಎರಡೂ ಕೈಗಳಿಂದ ಬಳಸಿ ನನ್ನ ಭುಜದ ಮೇಲೆ ತಲೆ ಇಟ್ಟು ಗಳ ಗಳ ಅಳಲು ಶುರು ಮಾಡಿದಳು. ನನಗೆ ದಿಕ್ಕೇ ತೋಚದಂತಾಯಿತು ಪಾವಿ ಪ್ಲೀಸ್ ಅಳಬೇಡ ನೀನು ಅತ್ತರೆ ನನ್ನ ಕೈಲಿ ತಡೆಯಲು ಆಗಲ್ಲ. ಪ್ಲೀಸ್ ಅಳಬೇಡ ಪಾವಿ ಎಂದೆ. ಮತ್ತೆ ಒಂದೈದು ನಿಮಿಷ ಸತತವಾಗಿ ಅತ್ತು ನಂತರ ಅಳು ನಿಲ್ಲಿಸಿದಳು. ಎಲ್ಲಾದರೂ ಖಾಲಿ ಇರುವ ಜಾಗಕ್ಕೆ ಕರೆದುಕೊಂಡು ಹೋಗು ನ್ನನ್ನು ಎಂದಳು. ಸೀದಾ ಲುಂಬಿನಿ ಗಾರ್ಡನ್ಸ್ ಗೆ ಬಂದು ಗಾಡಿ ನಿಲ್ಲಿಸಿ ಒಳಗೆ ಹೋಗಿ ಹೆಚ್ಚು ಜನ ಇಲ್ಲದ ಕಡೆ ಹೋಗಿ ಕೂತೆವು.

ನನಗೆ ಹೇಗೆ ಮಾತು ಶುರು ಮಾಡುವುದೆಂದು ಗೊತ್ತೇ ಆಗಲಿಲ್ಲ. ಪಾವನಿ ತನ್ನ ಕೈಯಲ್ಲಿದ್ದ ಕರ್ಚೀಫಿನಿಂದ ಕಣ್ಣನ್ನು ಒರೆಸಿಕೊಂಡು ನನ್ನತ್ತ ನೋಡಿದಳು. ಪಾವಿ ಏನಾಯಿತು? ಯಾಕೆ ಅಳುತ್ತಿದ್ದೀಯ? ನಾನು ಲೇಟ್ ಆಗಿ ಬಂದಿದ್ದಕ್ಕೆ ಕೋಪ ಮಾಡ್ಕೊಂಡು ಅಳ್ತಾ ಇದ್ದೀಯ? ಪ್ಲೀಸ್ ಏನಾಯ್ತು ಅಂತ ಹೇಳು ಪಾವಿ ನನಗೆ ತಡೆಯಕ್ಕೆ ಆಗ್ತಾ ಇಲ್ಲ ಎಂದೆ. ಅವಳು ಸ್ವಲ್ಪ ಹೊತ್ತು ಬಿಟ್ಟು ಮಾತಾಡಿದಳು. ಭಗತ್ ನೀನು ಲೇಟ್ ಆಗಿ ಬಂದಿದ್ದಕ್ಕೆ ಕೋಪನು ಇಲ್ಲ ಬೇಜಾರು ಇಲ್ಲ. ಯಾಕೆಂದರೆ ಬೆಂಗಳೂರಿನ ಟ್ರಾಫಿಕ್ ನನಗೆ ಅರ್ಥ ಆಗತ್ತೆ. ಆದರೆ ಅಲ್ಲಿ ನಿಂತಿದ್ದಷ್ಟು ಹೊತ್ತು ನನಗೆ ನರಕದಲ್ಲಿ ನಿಂತಂತೆ ಆಗಿತ್ತು. ಯಾರೋ ಒಂದು ಮೂವರು ಹುಡುಗರ ಗುಂಪೊಂದು ಸುಮಾರು ಹೊತ್ತು ಅಲ್ಲೇ ನಿಂತು ನನ್ನನ್ನು ನೋಡುತ್ತಿದ್ದರು. ಆಮೇಲೆ ಅವರಲ್ಲೊಬ್ಬ ಬಂದು ಎಂದು ಮತ್ತೆ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು. ನನಗೆ ಅವಳ ಮಾತು ಕೇಳಿ ರಕ್ತ ಕುದಿಯಲು ಶುರುವಾಯಿತು. ಪಾವಿ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು. ನನ್ನಿಂದಲೇ ಇದೆಲ್ಲ ಆಗಿದ್ದು ಎಂದು ಅವಳ ಕೈ ಮೇಲೆ ನನ್ನ ಕೈ ಒತ್ತಿದೆ. 

ನಂತರ ಅವಳು ಸಮಾಧಾನ ಮಾಡಿಕೊಂಡು ಹೋಗಲಿ ಬಿಡು ಭಗತ್ ತಲೆ ಕೆಡಿಸಿಕೊಳ್ಳಬೇಡ. ಮತ್ತೆ ಹೇಳು ಏನೋ ಸರ್ಪ್ರೈಸ್ ಕೊಡ್ತೀನಿ ಅಂತ ಇದ್ಯಲ್ಲ ಏನದು. ಏನಿಲ್ಲ ಬಿಡು ಪಾವಿ ನನ್ನ ಮೂಡ್ ಎಲ್ಲ ಹಾಳಾಗಿ ಹೋಯ್ತು ಇನ್ನೊಂದು ದಿವಸ ಹೇಳುತ್ತೇನೆ ಎಂದೆ. ಲೋ ಮೊದಲೇ ನನಗೆ ತಲೆ ಕೆಟ್ಟಿದೆ ನೀನಿನ್ನೂ ತಲೆ ಕೆಡಿಸಬೇಡ. ದಯವಿಟ್ಟು ನನ್ನನ್ನು ಆ ಮೂಡ್ ಇಂದ ಆಚೆ ಕರೆದು ಕೊಂಡು ಬರುವ ಜವಾಬ್ದಾರಿ ನಿನ್ನದು ಎಂದು ನಕ್ಕಳು. ಹೌದು ಏನು ಸಾಹೇಬರು ಬೆಳಿಗ್ಗೆ ಫುಲ್ ಮೂಡ್ ಅಲ್ಲಿ ಇದ್ದ ಹಾಗಿತ್ತು ಸ್ವೀಟ್ ಹಾರ್ಟ್ ಅಂತೆಲ್ಲ ಕರೀತಾ ಇದ್ರಿ ಏನು ವಿಷಯ? ಪಾವಿ ಒಂದು ನಿಮಿಷ ಬಂದೆ ಇರು ಎಂದು ಅಲ್ಲೇ ಇದ್ದ ಕ್ಯಾಂಟೀನ್ ಗೆ ಹೋಗಿ ಚಿಕ್ಕ ಕೇಕೊಂದನ್ನು ತಂದು ಅವಳ ಮುಂದಿಟ್ಟು ತಗೋ ಮೊದಲು ಕೇಕ್ ಕಟ್ ಮಾಡು ಆಮೇಲೆ ಹೇಳ್ತೀನಿ ಎಂದೆ. ಅವಳು ಕೇಕ್ ಕಟ್ ಮಾಡಿ ಒಂದು ಪೀಸ್ ಅನ್ನು ನನ್ನ ಬಾಯಲ್ಲಿ ಇಟ್ಟಳು. ನಾನು ಇನ್ನೊಂದು ಪೀಸ್ ಕಟ್ ಮಾಡಲು ಹೋದರೆ ಅವಳೇ ತಡೆದು ಅದರಲ್ಲೇ ತಿನ್ನಿಸು ಎಂದಳು. ನಾನು ಅದೇ ಪೀಸ್ ಅನ್ನು ಅವಳಿಗೆ ತಿನ್ನಿಸಿದೆ.

ಈಗ ಹೇಳು ಭಗತ್ ಅದೇನು ಸರ್ಪ್ರೈಸ್ ಅಂತ. ಪಾವಿ ನನಗೆ ಹೇಗೆ ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಅದಕ್ಕವಳು ಬಾಯಿಂದ ಹೇಳು ಪರವಾಗಿಲ್ಲ ಎಂದು ನಕ್ಕಳು. ನಾನು ಚೇರ್ ಇಂದ ಎದ್ದು ಕೆಳಗೆ ಮಂಡಿಯ ಮೇಲೆ  ಕುಳಿತು ಪಾವಿ ನಾನು ನಿನ್ನನ್ನು ಧರ್ಮಸ್ಥಳದಲ್ಲಿ ಮೊದಲ ಬಾರಿ ನೋಡಿದಾಗಲೇ ನಿನ್ನ ಮೇಲೆ ಮನಸಾಯಿತು. ಅದುವರೆಗೂ ಎಷ್ಟೋ ಜನ ಹುಡುಗಿಯರನ್ನು ನೋಡಿದ್ದರೂ ಯಾರನ್ನು ಪ್ರೀತಿಸಿರಲಿಲ್ಲ. ಆದರೆ ನಿನ್ನನ್ನು ನೋಡಿದ ಕ್ಷಣದಿಂದಲೇ ಪ್ರೀತಿ ಶುರುವಾಯಿತು. ಮೊದಮೊದಲು ನನಗೆ ಇದು ಬರೀ ಆಕರ್ಷಣೆ ಎನಿಸಿದರೂ ನಂತರ ಯಾವಾಗ ನಿನ್ನನ್ನು ಬಿಟ್ಟಿರಲಾರೆನೋ ಎನಿಸಿತೋ ಆಗ ದೃಢವಾಯಿತು. ಪಾವಿ ನನ್ನ ಜೀವಿತಾಂತ ನಿನ್ನ ಜೊತೆ ಬಾಳಲು ಅವಕಾಶ ಕೊಡುತ್ತೀಯ ಎಂದು ಜೇಬಿನಿಂದ ಉಂಗುರದ ಡಬ್ಬಿಯನ್ನು ತೆಗೆದು ಅವಳ ಮುಂದೆ ಇಟ್ಟೆ.

ಪಾವನಿ ಮುಖದಲ್ಲಿ ನಗು ಕಂಡಿತು. ನನಗೆ ಒಳಗೊಳಗೇ ಬಹುಷಃ ಅವಳಿಗೂ ಇಷ್ಟವೇನೋ ಒಪ್ಪುತ್ತಾಳೆನೋ ಅನಿಸುತ್ತಿತ್ತು. ಭಗತ್ ಮೊದಲು ಮೇಲೆ ಏಳು ಎಂದಳು ಮೇಲೆ ಎದ್ದ ಮೇಲೆ ನಡಿ ಹಾಗೆ ವಾಕ್ ಮಾಡುತ್ತಾ ಮಾತಾಡೋಣ ಎಂದು ಇಬ್ಬರೂ ನಡೆಯಲು ಶುರು ಮಾಡಿದೆವು. ಸ್ವಲ್ಪ ದೂರ ಮೌನವಾಗಿ ನಡೆದ ನಂತರ ಅವಳೇ ಶುರು ಮಾಡಿದಳು. ಭಗತ್ ನೀನೆಂದರೆ ನನಗೂ ತುಂಬಾ ಇಷ್ಟ, ನೀನು ನನ್ನ ಮೇಲೆ ತೋರಿಸುವ ಪ್ರೀತಿ ಬಹುಷಃ ನಮ್ಮಪ್ಪ ಅಮ್ಮ ಕೂಡ ತೋರಿಸಿಲ್ಲವೇನೋ ಅಷ್ಟು ಪ್ರೀತಿ ತೋರಿಸುತ್ತೀಯ ನೀನು. ಆದರೆ ನೀನು ತೋರಿಸುವ ಪ್ರೀತಿಯನ್ನು ಪಡೆಯುವ ಯೋಗ್ಯತೆಯಾಗಲೀ ಅರ್ಹತೆಯಾಗಲೀ ನನಗಿಲ್ಲ ಭಗತ್ ಎಂದಳು. ಪಾವನಿ ಏನು ಮಾತನಾಡುತ್ತಿದ್ದೀಯ ನೀನು? ಯಾಕೆ ಏನೇನೋ ಮಾತನಾಡುತ್ತಿದ್ದೀಯ? ಹೌದು ಭಗತ್ ನನ್ನ ಮಾತು ನಿಜ. ನಾನು ನಿನ್ನ ಬಳಿ ಒಂದು ವಿಷಯ ಮುಚ್ಚಿಟ್ಟಿದ್ದೀನಿ ಕಣೋ ಎಂದಳು. ನನಗೆ ಏನಪ್ಪಾ ಅದು ಎಂಬ ಗೊಂದಲ ಶುರುವಾಯಿತು. ಏನು ಪಾವಿ ಎಂದೆ.

ಭಗತ್ ನನಗೆ ಆಗಲೇ ಮದುವೆಯಾಗಿದೆ ಎಂದಳು..


Rating
No votes yet